Satwadhara News

Author: satwawriter

  • ಕುಮಟಾದಲ್ಲಿ ಉಚಿತ ಡಿ.ಟಿ.ಪಿ ತರಬೇತಿ.

    ಆತ್ಮೀಯರೇ

    ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಸಿಂಡ್ ಗ್ರಾಮೀಣಾಭಿವೃದ್ದಿ ಸ್ವಉದ್ಯೋಗ ತರಬೇತಿ ಸಂಸ್ಥೆಯಲ್ಲಿ 2017 ರ ಜುಲೈ 24ರಿಂದ 45 ದಿನಗಳ ಉಚಿತ ಕಂಪ್ಯೂಟರ್ ಡಿ.ಟಿ.ಪಿ ತರಬೇತಿ ಪ್ರಾರಂಭವಾಗುತ್ತದೆ*

    ತರಬೇತಿಯು ಊಟ ಮತ್ತು ವಸತಿಯೊಂದಿಗೆ ಸಂಪೂರ್ಣವಾಗಿ ಉಚಿತವಾಗಿರುತ್ತದೆ.

    ವಯೋಮಿತಿ:- 18 ರಿಂದ 45 ವರ್ಷ

    ಈ ತರಬೇತಿಗೆ ನಿಮ್ಮ ಊರಿನ ಆಸಕ್ತ ಅಭ್ಯರ್ಥಿಗಳಿಗೆ ತಿಳಿಸಿ, ಅವರನ್ನು ತರಬೇತಿಗೆ ಕಳುಹಿಸಿ.

     

    ಆಸಕ್ತರು ಕೂಡಲೇ ಸಂಪರ್ಕಿಸಿ:-

    Director,
    SyndRSETI,
    Near Industrial Estate,
    Hegde Road, Kumta,
    Uttara Kannada District. Phone:08386-220530, 9449860007

  • ಶ್ರಾವಣ ಬಂತು ಶ್ರಾವಣ…

    ವಿಷ್ಣುವಿನ ನಕ್ಷತ್ರವಾದ ಶ್ರವಣನಕ್ಷತ್ರವು ಹುಣ್ಣಿಮೆಯಂದು ಬರುವುದರಿಂದ ಇದಕ್ಕೆ ಶ್ರಾವಣಮಾಸ ಎಂದು ಹೆಸರು. ಈ ಪವಿತ್ರಮಾಸದುದ್ದಕ್ಕೂ ವ್ರತಾಚರಣೆ ಮಾಡುತ್ತ ಕೇವಲಫಲಾಹಾರ, ಕಡಲೆ ಹಾಗೂ ಹಾಲುಗಳ ಸೇವನೆ ಹಾಗೂ ಮಾಂಸ-ಕುಡಿತಗಳ ತ್ಯಾಗ ಮಾಡುವ ಪದ್ಧತಿ ಎಲ್ಲ ಕುಲಗಳಲ್ಲೂ ಉಂಟು. ದೇವಾಸುರರು ಸಮುದ್ರಮಂಥನಮಾಡಿದ್ದು ಈ ಮಾಸದಲ್ಲೇ ಎನ್ನುವ ನಂಬಿಕೆ ಇದೆ. ಲಕ್ಷ್ಮಿಯೂ ಸೇರಿದಂತೆ ಚತುರ್ದಶರತ್ನಗಳು ಉದ್ಭವಿಸಿ  ಲೋಕಗಳನ್ನು ಸಮೃದ್ಧಗೊಳಿಸಿದರಿಂದ ಈ ಮಾಸದಲ್ಲಿ ಮಾಡುವ ಎಲ್ಲ ನೇಮಗಳೂ ಸಮೃದ್ಧಿಕಾರಕ ಎನ್ನಲಾಗುತ್ತದೆ.

    ಶ್ರಾವಣಸೋಮವಾರಗಳು ಶಿವನಿಗೂ, ಶ್ರಾವಣಮಂಗಳವಾರಗಳು ಗೌರೀಗೂ ಹಾಗೂ ಶ್ರಾವಣಶನಿವಾರಗಳು ವಿಷ್ಣುವಿಗೂ ವಿಶೇಷವೆನಿಸುತ್ತವೆ. ನಾಗಪಂಚಮಿ, ಕೃಷ್ಣಾಷ್ಟಮೀ, ವರಮಹಾಲಕ್ಷ್ಮೀ, ಉಪಾಕರ್ಮ/ರಕ್ಷಾಬಂಧನ, ಕಲ್ಕಿಜಯಂತಿ, ಕಜ್ಜಲೀತೃತೀಯ, ಪುತ್ರೈಕಾದಶೀ, ಬುಡೀತೇಜ್,ಋಷಿಪಂಚಮೀ, ಹಿಂಡೋಲೋತ್ಸವ, ಪಿಠೋರಿ, ಫೋಲಾ, ಗೋವತ್ಸಪೂಜೆ ಮುಂತಾದವು ಶ್ರಾವಣದ ಜನಪ್ರಿಯ ಹಬ್ಬಗಳು.

    ಸನಾತನ ಧರ್ಮದಲ್ಲಿನ ವ್ರತ ಹಾಗೂ ಉತ್ಸವಗಳು ಋತು, ಪ್ರಕೃತಿ, ಕುಲ, ವೃತ್ತಿ ಹಾಗೂ ಪ್ರಾದೇಶಿಕ ಪ್ರಭಾವಗಳನ್ನು ಮೈದಾಳಿ ಬರುವಂತಹವು. ವರ್ಷಾಋತುವಿನಲ್ಲಿ ಬರುವುದರಿಂದ ಶ್ರಾವಣದ ಹಬ್ಬಗಳಲ್ಲಿ ಉಪವಾಸ, ಪೂಜೆ, ಜಪ, ದಾನ, ಧ್ಯಾನ ಮುಂತಾದ ವ್ರತಾಂಶಗಳೇ ಹೆಚ್ಚು. ಬಯಲಾಟ, ಬೇಟೆ, ಕೋಲಾಟ, ಕ್ರೀಡೆಗಳು, ಉದ್ಯಾನಗಮನ ಮುಂತಾದ ಕಲಾಪಗಳು ಶರದೃತು ಹಾಗೂ ವಸಂತರ್ತುಗಳಷ್ಟು ಹೆಚ್ಚಾಗಿ ಇಲ್ಲ. ಆದರೆ ಹಾಡು, ಹಸೆ, ಭೋಜನಾದಿ ಉತ್ಸವಾಂಶಗಳು ಹೇರಳವಾಗಿ ಕಾಣುತ್ತವೆ.

    ಮಳೆಯ ಕಾರಣದಿಂದಾಗಿ ಪ್ರವಾಸ ಕಡಿಮೆಯಿದ್ದು ಮನೆಮಂದಿಯೆಲ್ಲ ಒಂದೆಡೆ ಇರಲು ಅನುಕೂಲಿಸುವುದರಿಂದ ಈ ಮಾಸದಲ್ಲಿ ಕೂಡಿ ಮಾಡುವ ವ್ರತೋತ್ಸವಗಳು ಹೆಚ್ಚು. ಸಂನ್ಯಾಸಿಗಳೂ ಚಾತುರ್ಮಾಸ್ಯ ವ್ರತವನ್ನು ಹಿಡಿದು ಒಂದೆಡೆ ವಾಸಿಸುವುದರಿಂದ ಜನರಿಗೆ ಗುರುಗಳಿಂದ ಧಾರ್ಮಿಕ ಪ್ರವಚನ, ಚರ್ಚೆ ಉಪದೇಶಾದಿಗಳು ಲಭ್ಯವಾಗುತ್ತವೆ.

    ಬ್ರಾಹ್ಮೀಮುಹೂರ್ತದಲ್ಲಿ ಎದ್ದು ಸ್ನಾನಾದಿಗಳನ್ನು ಮುಗಿಸಿ, ಮನೆಯನ್ನು ತಳಿರು-ತೋರಣ-ರಂಗವಲ್ಲಿಗಳಿಂದ ಸಿಂಗರಿಸಿ, ಪೂಜಾಮಂಟಪವನ್ನು ಅಲಂಕರಿಸಿ, ಉಪವಾಸ, ಪೂಜೆ, ದಾನಧರ್ಮಗಳಲ್ಲಿ ತೊಡಗುವುದು, ಸಾಯಂಕಾಲ ಹಾಡು, ಕಥಾಶ್ರವಣ ಹಾಗೂ ತಾಂಬೂಲ ವಿನಿಮಯ ಮಾಡಿಕೊಳ್ಳುವುದು ಸಾಮಾನ್ಯವಾದ ವ್ರತಾಂಶಗಳು.
    ಸೋಮವಾರದ ವ್ರತ, ಮಂಗಳಗೌರೀವ್ರತ ಹಾಗೂ ಶ್ರಾವಣಶನಿವಾರಗಳು ಶ್ರಾವಣದ ಪ್ರಮುಖವ್ರತಗಳು.

    ಶ್ರಾವಣಸೋಮರಗಳಂದು ಉಪವಾಸ, ರುದ್ರಾಭಿಷೇಕ, ಬಿಲ್ವಾರ್ಚನೆ, ಪಂಚಾಕ್ಷರೀ-ಜಪ, ದಾನಧರ್ಮಾದಿಗಳು ನಡೆಯುತ್ತವೆ. ಕಾವಡಿಯನ್ನು ಹೊರುವ ಪದ್ಧತಿಯೂ ಉಂಟು. ಹದಿನಾರುಸೋಮವಾರಗಳ ವ್ರತವನ್ನು ಶ್ರಾವಣದಲ್ಲೇ ಪ್ರಾರಂಭಿಸಲಾಗುತ್ತದೆ. ಮದುವೆಯಾದ ಮೊದಲ ಐದುವರ್ಷಗಳಂದು ಸುಮಂಗಲಿಯರು ಶಿವಮುಷ್ಟಿವ್ರತವನ್ನು ಆಚರಿಸುವುದುಂಟು. ಮುಷ್ಟಿಯಷ್ಟು ಅಕ್ಕಿ, ಬಿಳಿ ಎಳ್ಳು, ತೊಗರಿ, ಗೋದಿ ಹಾಗೂ ಅರಳುಗಳನ್ನು ಒಂದೊಂದಾಗಿ ಒಂದೊಂದು ಸೋಮವಾರ ಶಿವನಿಗೆ ಅರ್ಪಿಸುತ್ತ ಬರುತ್ತಾರೆ. ಈ ಮಾಸವಿಡೀ ರುದ್ರಾಕ್ಷಿಮಾಲೆ ಧರಿಸುವವರುಂಟು.

  • ಗೋವಧೆಜನ್ಯ ವಸ್ತು ತಿರಸ್ಕರಿಸಲು ರಾಘವೇಶ್ವರ ಶ್ರೀ ಕರೆ

    ಬೆಂಗಳೂರು: ಗೋವಧೆಜನ್ಯ ವಸ್ತುಗಳನ್ನು ತಿರಸ್ಕರಿಸುವ ಮೂಲಕ ಗೋಹತ್ಯೆಯ ದಂಧೆಯನ್ನು ಸೋಲಿಸುವ ಬೃಹತ್ ಆಂದೋಲನಕ್ಕೆ ದೇಶ ಸಜ್ಜಾಗಬೇಕು ಎಂದು ಶ್ರೀರಾಮಚಂದ್ರಾಪುರ ಮಠದ ಶ್ರೀಶ್ರೀರಾಘವೇಶ್ವರಭಾರತೀಸ್ವಾಮೀಜಿ ನುಡಿದರು.

    ಬಸವನಗುಡಿ ಬಳಿಯ ಕೆಂಪೇಗೌಡ ಆಟದ ಮೈದಾನದಲ್ಲಿ ಹಮ್ಮಿಕೊಂಡಿದ್ದ ಅಭಯಾಕ್ಷರ- ಹಾಲುಹಬ್ಬ ಉತ್ಸವದಲ್ಲಿ ಅವರು ಆಶೀರ್ವಚನ ನೀಡಿದರು. ಮನೆಯಲ್ಲಿ ಗೋಪಾಲನೆ, ಅದು ಸಾಧ್ಯವಾಗದಿದ್ದರೆ ಗೋಪಾಲನೆಗೆ ನೆರವು ನೀಡುವುದು ಅಥವಾ ಗೋಧನದ ಹುಂಡಿ ಇಡುವುದು, ಗವ್ಯೋತ್ಪನ್ನ ಬಳಕೆ, ಗೋವಧೆಯಿಂದ ಬರುವ ಉತ್ಪನ್ನಗಳನ್ನು ತಿರಸ್ಕರಿಸುವ, ಗೋಕಿಂಕರರಾಗಿ ಸೇವೆ ಸಲ್ಲಿಸುವ ಮೂಲಕ ಅಥವಾ ಅಭಯಾಕ್ಷರಕ್ಕೆ ಸಹಿ ಮಾಡುವ ಸಪ್ತಸೂತ್ರಗಳ ಮೂಲಕ ಗೋರಕ್ಷಣೆಗೆ ಮುಂದಾಗಬೇಕು ಎಂದು ಕರೆ ನೀಡಿದರು.

    ಎಲ್ಲ ದಿವ್ಯಗಳು ಇರುವುದು ಗೋವಿನ ದೇಹದಲ್ಲಿ; ಶುಭ, ಒಳಿತು ಎಲ್ಲವೂ ಇರುವ ಜೀವ ಗೋಮಾತೆ. ಗೋಮಾತೆ ಇಂದು ಅಪಾಯದಲ್ಲಿದ್ದಾಳೆ. ಗೋವಿನ ಬಗ್ಗೆ, ಸಾತ್ವಿಕತೆ ಬಗ್ಗೆ, ಭಾರತೀಯತೆ ಬಗ್ಗೆ ಇಡೀ ಸಮಾಜಕ್ಕೆ ಚಿಂತೆ ಇದೆ. ಈ ಚಿಂತೆ ದೂರವಾಗಬೇಕು ಎಂದು ಅಭಿಪ್ರಾಯಪಟ್ಟರು.

    ಗೋಜನ್ಯ ವಸ್ತುಗಳ ಬಳಕೆ ಮನುಷ್ಯನ ಮೈ, ಮನಕ್ಕೆ ಅಮೃತದ ಆಹ್ವಾನ. ಗವ್ಯೋತ್ಪನ್ನ ಬಳಕೆಯಿಂದ ಬರುವ ಆದಾಯದ ಪ್ರತಿ ರೂಪಾಯಿಯೂ ಗೋಸೇವೆಗೆ ಮೀಸಲು ಎಂದರು. ಗೋಪಾಲನೆಯ ಸಪ್ತಸೂತ್ರಗಳನ್ನು ಅನುಸರಿಸಿದಲ್ಲಿ ಭಾರತದ ಭವಿಷ್ಯ ಭವ್ಯವಾಗಲಿದೆ. ಗೋವಿನ ಜತೆಗೆ ಹಾಸುಹೊಕ್ಕಾದ ಬದುಕು ಶ್ರೇಷ್ಠ. ಗೋವಿನ ದಿವ್ಯತೆಯ ಪ್ರಭೆಯಲ್ಲಿ ಬದುಕುವುದು ಅದೃಷ್ಟ ಎಂದು ಬಣ್ಣಿಸಿದರು,

    ಅಭಯಾಕ್ಷರ ಆಂದೋಲನದ ಮೂಲಕ ದೇಶದ ಪ್ರತಿಯೊಬ್ಬ ನಾಗರಿಕ ತನ್ನ ಹಕ್ಕೊತ್ತಾಯ ಮಂಡಿಸಬೇಕು. ಇದಕ್ಕೆ ರಾಜ್ಯದ ಉತ್ತಮ ರಾಜಕಾರಣಿಗಳು, ಅಧಿಕಾರಿಗಳು ಕೈಜೋಡಿಸಬೇಕು. ಏಳು ದಶಕಗಳ ಕಾಲ ಸರ್ಕಾರಗಳಿಂದ ಸಾಧ್ಯವಾಗದ್ದನ್ನು ಮಾಡಿತೋರಿಸೋಣ ಎಂದರು.

    ಉಡುಪಿ ಫಲಿಮಾರು ಮಠದ ವಿದ್ಯಾಧೀಶ ಶ್ರೀಪಾದಂಗಳವರು ಆಶೀರ್ವಚನ ನೀಡಿ, “ಗೋವಿನ ಮೇಲೆ ಕ್ರೌರ್ಯ ಎಸಗುವವರು ಮುಂದಿನ ಜನ್ಮದಲ್ಲಿ ತಾವು ಹಸುವಾದರೆ ಏನಾಗಬಹುದು ಎಂಬ ಪ್ರಶ್ನೆ ಹಾಕಿಕೊಳ್ಳಲಿ. ಇದಕ್ಕೆ ರಾಜಕೀಯದಲ್ಲಿ ಉತ್ತರವಿಲ್ಲ” ಎಂದು ಹೇಳಿದರು, ತಾಯಿಗೆ ವಯಸ್ಸಾಯಿತು ಎಂದು ವಧಾಲಯಕ್ಕೆ ಕಳುಹಿಸುತ್ತೇವೆಯೇ? ಅಂತೆಯೇ ಗೋಮಾತೆಯನ್ನು ಕಳುಹಿಸುವುದೂ ಅಪರಾಧ ಎಂದು ವಿಶ್ಲೇಷಿಸಿದರು.

    ಗೋವನ್ನು ವಧಾಲಯಕ್ಕೆ ಕಳುಹಿಸುವವರು ಖಂಡಿತಾ ಮನುಷ್ಯರಲ್ಲ ಎಂದರು. ಆದರೆ ಗೋಮೂತ್ರ, ಗೋಮಯದಲ್ಲಿರುವ ಔಷಧ ಗುಣಗಳನ್ನು ಪ್ರಚುರಪಡಿಸಿದವರಲ್ಲಿ ಶ್ರೀರಾಮಚಂದ್ರಾಪುರ ಮಠ ಮುಂಚೂಣಿಯಲ್ಲಿದೆ ಎಂದು ಬಣ್ಣಿಸಿದರು.

    ದೊಡ್ಡರಂಗೇಗೌಡ ಮಾತನಾಡಿ, “ವಿಚಾರವಾದಿಗಳು, ಬುದ್ಧಿಜೀವಿಗಳು ಪ್ರಚಾರಕ್ಕಾಗಿ ಗೋಹತ್ಯೆ ಬೆಂಬಲಿಸುವ ಮೂಲಕ ದಾಷ್ಟ್ರ್ಯ ಮೆರೆದಿದಿದ್ದಾರೆ. ಇವರು ವಿಚಾರವಾದಿಗಳೋ ಬುದ್ಧಿಹೀನರೋ ಎಂದು ನೀವೇ ನಿರ್ಧರಿಸಿ. ಇಂಥವರು ಹೇಗೆ ತಮ್ಮ ಪ್ರಶಸ್ತಿಗಳನ್ನು ಪಡೆದರು ಎನ್ನುವುದು ಎಲ್ಲರಿಗೂ ಗೊತ್ತು” ಎಂದು ಚುಚ್ಚಿದರು. ಸಾಹಿತಿ, ಶಿಲ್ಪಿಗಳು, ಪ್ರಾಜ್ಞರಿಗೆ ಸಮಾಜ ಉತ್ತಮ ಸ್ಥಾನ ನೀಡುತ್ತಿದೆ. ಆದರೆ ಬುದ್ಧಿಜೀವಿಗಳ ಹೆಸರಿನಲ್ಲಿ ವಿಕೃತಿ ಮೆರೆಯುತ್ತಿದ್ದಾರೆ. ಸಮಾಜಕ್ಕೆ ಇತ್ಯಾತ್ಮಕ ಸಂದೇಶ ಸಾರುವ ಒಳ್ಳೆಯ ಬುದ್ಧಿ ಇನ್ನಾದರೂ ಇವರಿಗೆ ಬರಲಿ. ಗೋಹತ್ಯೆ ವಿಕೃತಿಯ ಕ್ರೌರ್ಯ. ಗೋಮಾಂಸ ಭಕ್ಷಣೆ ಅನಾಗರಿಕ ಲಕ್ಷಣ. ಸನಾತನ ಪರಂಪರೆ ಉಳಿಸುವ ನಿಟ್ಟಿನಲ್ಲಿ ಹಾಲುಹಬ್ಬದಂಥ ಕಾರ್ಯಕ್ರಮಗಳು ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೆ ಮುನ್ನಡೆಯಲಿ ಎನ್ನುವುದು ಎಲ್ಲ ಸಹೃದಯರ ಆಶಯ ಎಂದು ಬಣ್ಣಿಸಿದರು. ಗೋವಿನ ಕುರಿತ ಸ್ವ-ರಚಿತ ಕವನವನ್ನು ದೊಡ್ಡರಂಗೇಗೌಡ ವಾಚಿಸಿದರು.

    “ಗೋರಕ್ಷಣೆ ಮತ್ತು ಗೋಭಕ್ಷಣೆ ನಡುವಿನ ಹೋರಾಟ ನಡೆಯುತ್ತಲೇ ಇದೆ. ಗೋಪ್ರೇಮ ಮನಸ್ಸಲ್ಲೇ ಹುಟ್ಟಿ ಬರುವಂತೆ ಮಾಡುವ ವಿಶಿಷ್ಟ ಕಾರ್ಯಕ್ರಮ ಹಾಲುಹಬ್ಬ, ಗೋಜನ್ಯ ಉತ್ಪನ್ನದಿಂದ ಜೀವನ ಮಾಡಬಹುದು. ಗೋಹತ್ಯೆ ಮಾಡಿದರೆ ಅದು ಚಿನ್ನದ ಮೊಟ್ಟೆ ಇಡುವ ಕೋಳಿಯ ಕಥೆಯಂತಾಗುತ್ತದೆ” ಎಂದು ಖ್ಯಾತ ಸಂಗೀತ ನಿರ್ದೇಶಕ ವಿ.ಮನೋಹರ್ ನುಡಿದರು.

    ಗೋವಿನ ಮನಸ್ಸು ಅರ್ಥ ಮಾಡಿಕೊಳ್ಳುವ ಸಹೃದಯತೆ ನಮ್ಮಲ್ಲಿ ಬೆಳೆಯಬೇಕು. ಅಂಥ ಅಮಾಯಕ ಮನಸ್ಸನ್ನು ಕೊಲ್ಲುವ ಮನಸ್ಸು ವಿಕೃತ ಮನಸ್ಸು. ಅಂಥವರು ದೇಶಕ್ಕೆ ಬೇಕಿಲ್ಲ. ಗೋಪ್ರೇಮಿಗಳು ಹೆಚ್ಚಬೇಕು. ಮಕ್ಕಳಿಗೆ ಗೋವಿನ ಪ್ರೀತಿ, ಮಹತ್ವವನ್ನು ಹೇಳುವ ಪ್ರತಿಜ್ಞೆಯನ್ನು ಎಲ್ಲ ಪೋಷಕರು ಸ್ವೀಕರಿಸಿಬೇಕು. ಶ್ರೀಗಳ ಗೋಕೈಂಕರ್ಯಕ್ಕೆ ಇಡೀ ಸಮಾಜ ಬೆಂಬಲ ನೀಡಬೆಕು ಎಂದು ಮನವಿ ಮಾಡಿದರು.

    ಶಾಸಕ ರವಿ ಸುಬ್ರಹ್ಮಣ್ಯ ಮಾತನಾಡಿ, “ಗೋವಿನ ರಕ್ಷಣೆ ನಮ್ಮೆಲ್ಲರ ಕರ್ತವ್ಯ. ಕೆಲ ಸ್ವಯಂಘೋಷಿತ ಬುದ್ಧಿಜೀವಿಗಳು ನಮ್ಮ ಸನಾತನ ಸಂಸ್ಕøತಿಯನ್ನು ನಿಂದಿಸಿ ಪ್ರಚಾರ ಪಡೆಯುತ್ತಿದ್ದಾರೆ. ಗೋಸಂತತಿ ಉಳಿವಿಗೆ ನಡೆಯುವ ಅಭಿಯಾನದ ವಿರುದ್ಧವಾಗಿ ಮಾತನಾಡುವುದು ವಿಪರ್ಯಾಸ” ಎಂದರು.

    ಗೋಮಾತೆಯ ರಕ್ಷಣೆಗೆ ಯಾವ ತ್ಯಾಗಕ್ಕೂ ಸಿದ್ಧ ಎಂಬ ಸಂದೇಶವನ್ನು ಆಳುವವರಿಗೆ ತಲುಪಿಸುವ ಬೃಹದಾಂದೋಲನ ಇದಾಗಿದೆ. ಇದು ದೇಶದ ಮೂಲೆಮೂಲೆಗೂ ಪಸರಿಸಬೇಕು ಎಂದು ಸಲಹೆ ಮಾಡಿದರು.

    ಬಿಬಿಎಂಪಿಸದಸ್ಯ ವೆಂಕಟೇಶ್, ಶ್ಯಾಮಲಾ ಸಾಯಿಕುಮಾರ್, ಎ.ವಿ.ನಂದಿನಿ, ಜೆ.ಎಂ.ಸವಿತಾ ಮಾಯಣ್ಣ, ಕೆಂಪೇಗೌಡ, ಸಮಾಜಸೇವಕರಾದ ಇ..ಮಂಜುನಾಥ ರಾವ್, ಸಾಯಿಕುಮಾರ್, ಪಿಳ್ಳಪ್ಪ, ಉದ್ಯಮಿ ರುಕ್ಮಾಂಗದ ನಾಯ್ಡು ಮತ್ತಿತರರು ಉಪಸ್ಥಿತರಿದ್ದರು. ಕರ್ನಾಟಕ ರಕ್ಷಣಾ ವೇದಿಕೆಯ ಬೆಂಗಳೂರು ಘಟಕದ ಅಧ್ಯಕ್ಷ ಟಿ,ಎನ್.ಶಿವಾನಂದ ಶೆಟ್ಟಿ ಸಭಾಪೂಜೆ ನೆರವೇರಿಸಿದರು. ಅಭಯಾಕ್ಷರದಿಂದ ಪ್ರೇರಣೆ ಪಡೆದ ಮಹಿಳೆ ಝಾನ್ಸಿರಾಣಿ ಹಾಗೂ ಮಗ ರಾಣಾ ಪ್ರತಾಪ್ 200 ಹಸುಗಳನ್ನು ಸಾಕುವ ಕೈಂಕರ್ಯಕ್ಕೆ ಮುಂದಾದರು.

  • ಖ್ಯಾತ ಬಾಹ್ಯಾಕಾಶ ವಿಜ್ಞಾನಿ, ಇಸ್ರೋದ ಮಾಜಿ ಮುಖ್ಯಸ್ಥ ಪ್ರೊ. ಯು.ಆರ್.ರಾವ್ ಇನ್ನಿಲ್ಲ

    ಬೆಂಗಳೂರು. ಜು.24 : ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ ಖ್ಯಾತ ಬಾಹ್ಯಾಕಾಶ ವಿಜ್ಞಾನಿ, ಇಸ್ರೋದ ಮಾಜಿ ಮುಖ್ಯಸ್ಥ ಪ್ರೊ. ಯು.ಆರ್.ರಾವ್ (85) ಇಂದು ಬೆಳಗಿನ ಜಾವ 3.00 ಗಂಟೆ ಸುಮಾರಿಗೆ ನಿಧನರಾಗಿದ್ದಾರೆ.

    ಉಡುಪಿ ರಾಮಚಂದ್ರರಾವ್ ರವರು ಉಡುಪಿ ಸಮೀಪದ ‘ಮಾರ್ಪಳ್ಳಿ’ಯಲ್ಲಿ ಮಾರ್ಚ್ 10, 1932 ರಂದು ಜನಿಸಿದರು. ಇವರ ತಾಯಿ, ಕೃಷ್ಣವೇಣೀಯಮ್ಮ; ತಂದೆ, ಲಕ್ಷ್ಮೀನಾರಾಯಣರಾವ್. ಇವರದು ಕೃಷಿಕ ಕುಟುಂಬ. ರಾಮಚಂದ್ರರಾಯರು ಉಡುಪಿ, ಅನಂತಪುರ, ಮದ್ರಾಸ, ಬನಾರಸ್ ಮೊದಲಾದ ಸ್ಥಳಗಳಲ್ಲಿ ಅಧ್ಯಯನ ಮಾಡಿದರು. ವಿಕ್ರಮ್ ಸಾರಾಭಾಯಿಯವರ ಮಾರ್ಗದರ್ಶನದಲ್ಲಿ ವಿಶ್ವಕಿರಣಗಳ ಬಗೆಗೆ ಅಧ್ಯಯನ ಮಾಡಿ ಗುಜರಾತ್ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದರು. ಬಳಿಕ ಅಮೆರಿಕದ ಮೆಸಾಚುಸೆಟ್ಸ್ನಲ್ಲಿ ಉನ್ನತ ವ್ಯಾಸಂಗ ಮಾಡಿದರು. ಟೆಕ್ಸಾಸ ವಿಶ್ವವಿದ್ಯಾಲಯದಲ್ಲಿ ಸಂಶೋಧಕರಾಗಿ, ಉಪನ್ಯಾಸಕರಾಗಿ ದುಡಿದು,1966ರಲ್ಲಿ ಭಾರತಕ್ಕೆ ಮರಳಿದ್ದರು

  • ಚಿತ್ರಿಗಿ ಪ್ರೌಢಶಾಲೆಯಲ್ಲಿ ಸ್ವಾಸ್ಥ್ಯ ಸಂಕಲ್ಪ

    ಕುಮಟಾ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಪ್ರಗತಿ ಬಂಧು ಸ್ವಸಹಾಯ ಸಂಘ ಕುಮಟಾ ವಲಯದ ಸಂಯುಕ್ತ ಆಶ್ರಯದಲ್ಲಿ ಇಲ್ಲಿಯ ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯಲ್ಲಿ ಸ್ವಾಸ್ಥ್ಯ ಸಂಕಲ್ಪ ಎಂಬ ಆರೋಗ್ಯ ಸಂಬಂಧೀ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಇತ್ತೀಚಿನ ದಿನಗಳಲ್ಲಿ ಶಾಲಾ ವಿದ್ಯಾರ್ಥಿಗಳನ್ನೇ ಗುರಿಯಾಗಿಸಿಕೊಂಡು ದುಷ್ಕರ್ಮಿಗಳು ಸ್ಟಿಕರ್ ರೂಪದಲ್ಲಿ ಮಾದಕ ವಸ್ತುಗಳನ್ನು ಮಾರಾಟಮಾಡುವ ಆತಂಕಕಾರಿ ಸಂಗತಿಗಳು ಬೆಳಕಿಗೆ ಬರುತ್ತಿದ್ದು ಪಾಲಕರೆಲ್ಲ ಈ ಪರ್ವಕಾಲದಲ್ಲಿ ಜಾಗೃತರಾಗಿರಬೇಕಾದ ಸಂದರ್ಭ ಒದಗಿ ಬಂದಿದೆ ಎಂದು ಕಾರ್ಯಕ್ರಮವನ್ನು ಉದ್ಘಾಟಿಸಿ ಮುಖ್ಯಾಧ್ಯಾಪಕ ಎನ್.ಆರ್.ಗಜು ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ನೆರೆಯ ಕಾಸರಗೋಡಿನಲ್ಲಿ ಪ್ರಚಲಿತ ವಿದ್ಯಮಾನವನ್ನು ಉದಾಹರಿಸಿ ಮಾತನಾಡಿದರು. ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ನ್ಯಾಯವಾದಿ ಮತ್ತು ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯೆ ಮಮತಾ ನಾಯ್ಕ ಉತ್ತಮ ಸಮಾಜ ನಿರ್ಮಾಣಕ್ಕೆ ವ್ಯಸನಮುಕ್ತ ಪರಿಸರ ನಿರ್ಮಿಸುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ ಎಂದರು. ಆ ನಿಟ್ಟಿನಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ ಕೈಗೊಂಡ ಚಟುವಟಿಕೆಗಳನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು. ಪ್ರಾರಂಭದಲ್ಲಿ ಕುಮಾರಿ ಅಕ್ಷತಾ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಶಿಕ್ಷಕ ಅನಿಲ್ ರೊಡ್ರಗೀಸ್ ಸ್ವಾಗತಿಸಿದರು. ಸಂಘದ ಮೇಲ್ವಿಚಾರಕ ರಾಘವೇಂದ್ರ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕ ವಿ.ಎನ್..ಭಟ್ಟ ನಿರೂಪಿಸಿದರು. ಸಂಘದ ಸಂಚಾಲಕಿ ರೂಪಾ ನಾಯರ್ ವಂದಿಸಿದರು. ಒಕ್ಕೂಟದ ವಲಯ ಅಧ್ಯಕ್ಷೆ ಪುಷ್ಪಾ ಕೋಮಾರಪಂತ ಉಪಸ್ಥಿತರಿದ್ದರು.

  • ಮಧ್ಯದಂಗಡಿಗೆ ಪರವಾನಿಗೆ ನೀಡದಂತೆ ಮನವಿ.

    ಹೊನ್ನಾವರ : ತಾಲೂಕಿನ ಹಳದೀಪುರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಕರಿಮೂಲೆಯಲ್ಲಿ ಮದ್ಯದಂಗಡಿ ಹಾಗೂ ದಾಸ್ತಾನು ಮಾಡುವ ವಿಷಯ ತಿಳಿದ ಅಲ್ಲಿನ ನಿವಾಸಿಗಳು ತಮ್ಮ ಭಾಗದಲ್ಲಿ ಮದ್ಯದಂಗಡಿಗೆ ಪರವಾನಿಗೆ ನೀಡಬಾರದೆಂದು ತಾಲೂಕಾ ದಂಡಾಧಿಕಾರಿಗಳಿಗೆ ಹಾಗೂ ಅಭಕಾರಿ ಅಧಿಕಾರಿಗಗಳಿಗೆ ಮನವಿ ನೀಡಿದರು.
    ಕರಿಮೂಲೆ ಹಾಗೂ ಬಗ್ರಾಣಿಗೆ ಹೋಗುವ ರಸ್ತೆಯ ಪಕ್ಕದಲ್ಲಿ ಮದ್ಯದಂಗಡಿ ಮಾಡಲು ಕಟ್ಟಡ ನಿರ್ಮಿಸಲಾಗಿದೆ. ಒಂದು ವೇಳೆ ಮದ್ಯದಂಗಡಿಗೆ ಇಲ್ಲಿ ಪರವಾನಿಗೆ ನೀಡಿದರೆ ಇಲ್ಲಿ ಓಡಾಡುವ ಪ್ರಾಥಮಿಕ ಶಾಲಾ ಮಕ್ಕಳಿಗೆ ಮಹಿಳೆಯರಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗುವ ಸಾಧ್ಯತೆಗಳಿವೆ. ಊರಿನ ಮದ್ಯಭಾಗದಲ್ಲಿ ಮದ್ದಯದಂಗಡಿ ನಿರ್ಮಾಣವಾದರೆ ಕೆಲವು ಕಿಡಿಗೇಡಿಗಳಿಂದ ಹೆಣ್ಣುಮ,ಕ್ಕಳಿಗೆ ಮಾನಹಾನಿ ಯಾಗುವ ಸಾಧ್ಯತೆಗಳಿವೆ. ಈ ಹಿಂದೇ ಕೂಡ ಸಾಕಷ್ಟುಬಾರಿ ಈ ತರಹದ ಘಟನೆಗಳು ನಡೆದಿದೆ. ಈ ಪ್ರದೇಶದಲ್ಲಿ ಹಿಂದೂ ಮುಸ್ಲಿಂ ಹಲವು ವರ್ಷಗಳಿಂದ ಏಕತೆಯಿಂದ ಒಬ್ಬರಿಗ್ಗೊಬ್ಬರು ನೆರವಾಗಿ ಅನ್ಯೋನತೆಯಿಂದ ಬದುಕುತ್ತಿದ್ದು ಮದ್ಯದಂಗಡಿ ಆದರೆ ಕೆಲವರಿಂದ ಜಗಳ ಉಂಟಾಗಿ ಕೋಮು ಗಲಭೆಗೂ ತಿರುಗುವ ಸಾಧ್ಯತೆಗಳೂ ಇವೆ.
    ಈ ಸಂಧರ್ಭದಲ್ಲಿ ಖಾರ್ವಿ ಸಮಾಜದ ಅಧ್ಯಕ್ಷರಾದ ಸುರೇಶ ಮೇಸ್ತ, ರಮೇಶ ಮೇಸ್ತ, ಗ್ರಾ.ಪಂ. ಸದಸ್ಯರಾದ ವಿನಾಕ ಶೇಟ್, ನಾಗವೇಣಿ ಗೌಡ, ಮಂಜುನಾಥ ಗೌಡ ನೌಶೀರ್ ಮುಂತಾದವರು ಇದ್ದರು

  • ದೀವಗಿಯಲ್ಲಿ ಭಜನಾ ಸಪ್ತಾಹ

    ಕುಮಟಾ ತಾಲೂಕಿನ ದೀವಗಿಯಲ್ಲಿರುವ ಶ್ರೀ ರಾಮಾನಂದ ಸ್ವಾಮೀಜಿ ಮಠದಲ್ಲಿ ಇಂದು ದಿನಾಂಕ ೨೪ ರಿಂದ ಶ್ರೀ ರಾಮತಾರಕ ನಾಮ ಭಜನಾ ಸಪ್ತಾಹ ಆರಂಭವಾಗಿದ್ದು ದಿನಾಂಕ ೩೧ರ ಮಧ್ಯಾಹ್ನದ ಪರ್ಯಂತ ಅಖಂಡವಾಗಿ ಶ್ರೀ ರಾಮತಾರಕನಾಮ ಭಜನೆ ನಡೆಯಲಿದೆ.
    ವೈಶಿಷ್ಠಪೂರ್ಣವಾದ ಈ ಕಾರ್ಯಕ್ರಮ ಕಳೆದ ಸುಮಾರು ೨೦ವರ್ಷಗಳಿಂದ ನಡೆದುಬರುತ್ತಿದೆ.
    ಕ್ಷೇತ್ರದೇವನಾದ ಶ್ರೀಆಂಜನೇಯನ ಎದುರಲ್ಲಿ ನಂದಾದೀಪ ಬೆಳಗಿ ಅದರ ಸುತ್ತಲೂ ಭಕ್ತವೃಂದ ಸುತ್ತಿರುಗುತ್ತಾ ರಾಮಭಜನಾ ನಿರತರಾಗುತ್ತಾರೆ.ಪ್ರತಿದಿನ ಸತ್ಯನಾರಾಯಣ ವೃತ, ಗುರುಭಿಕ್ಷ, ಪಾದಪೂಜೆ ಇತ್ಯಾದಿ ಕಾರ್ಯಕ್ರಮಗಳು ಭಕ್ತರಿಂದ ನಡೆಯಲ್ಪಡುತ್ತವೆ.
    ಪ್ರತಿದಿನ ಸಂಜೆ ದೀಪೋತ್ಸವವನ್ನು ಮಾಡುತ್ತಾರೆ.
    ಮೂರೂರು , ಕೋಣಾರೆ ಭಾಗದ ಭಕ್ತರಿಂದ ಸಾಯಂಕಾಲ ವಿಶೇಷ ಭಜನಾ ಕುಣಿತ ನೋಡಲು ಕಣ್ಣಿಗೆ ಹಬ್ಬವೇ ಸರಿ. ಕುಮಟಾ,ಹೊನ್ನಾವರ, ಸಿರ್ಸಿ, ಸಿದ್ಧಾಪುರ,ಯಲ್ಲಾಪುರ, ಈ ಎಲ್ಲಾ ತಾಲೂಕಿನ ವಿವಿಧೆಡೆಯಿಂದ ಭಕ್ತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪುನೀತರಾಗುತ್ತಾರೆ.ವರ್ಷದಿಂದ ವರ್ಷ ಭಕ್ತರು ಅಧಿಕ ಸಂಕ್ಯೆಯಲ್ಲಿ ಪಾಲ್ಗೊಂಡು ಶ್ರೀರಾಮಾಂಜನೇಯ ಹಾಗೂ ಸದ್ಗುರು ಶೀರಾಮಾನಂದರ ಕೃಪಾಪಾತ್ರರಾಗುತ್ತಿದ್ದಾರೆ. “ಶ್ರೀ ರಾಮ ಜಯ ರಾಮ ಜಯ ಜಯ ರಾಮ” ಎಂದು ಭಜಿಸಿ ರಾಮನ, ಒಲಿಸಿ ಹನುಮನ, ನಲಿಸಿ ಗುರುವನು, ಭಕ್ತರು ಕೃತಾರ್ಥರಾಗುತ್ತಿದ್ದಾರೆ.

  • 1.5 ಲಕ್ಷದ ಸಾಗವಾನಿ ಕಟ್ಟಿಗೆ ವಶ

    • ಉತ್ತರ ಕನ್ನಡ ಜಿಲ್ಲೆಯ, ಕುಮಟಾ ತಾಲೂಕಿನಲ್ಲಿ ಅರಣ್ಯ ಇಲಾಖೆಯವರು, ರವಿವಾರ ತಡರಾತ್ರಿ 2 ಗಂಟೆಯ ಸುಮಾರಿಗೆ, ಭರ್ಜರಿ ಕಾರ್ಯಾಚರಣೆ ನಡೆಸಿ, ಸುಮಾರು 1.50 ಲಕ್ಷ ಮೌಲ್ಯದ ಸಾಗವಾನಿ ಕಟ್ಟಿಗೆ ವಶಪಡಿಸಿಕೊಂಡಿದ್ದಾರೆ. ಬಡಾಳದಿಂದ ಕಾರ್ಗಲ್‍ಗೆ, ಲಗೇಜ್ ರಿಕ್ಷಾದಲ್ಲಿ 1.50 ಲಕ್ಷ ಬೆಲೆ ಬಾಳುವ, 14 ಸಾಗವಾನಿ ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದರು. ಈ ವೇಳೆ ಖಚಿತ ಮಾಹಿತಿಯೊಂದಿಗೆ ಕಾದು ಕುಳಿತ, ಕುಮಟಾ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂಧಿಗಳು, ಆರೋಪಿತರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳನ್ನು ಕಾರ್ಗಲ್ ಮೂಲದ ಪಾರ್ಶ್ವನಾಥ ಮತ್ತು ಸಿದ್ಧರಾಜ ಎನ್ನಲಾಗಿದೆ. ಮತ್ತು ರಮೇಶ ಎನ್ನುವ ಆರೋಪಿ ತಪ್ಪಿಸಿಕೊಂಡಿದ್ದು, ಆತನಿಗಾಗಿ ಬಲೆಬೀಸಿದ್ದಾರೆ. ಈ ಕಟ್ಟಿಗೆಗಳನ್ನು ಕಾರ್ಗಲ್‍ನ ರಮೇಶ ಬೆಣ್ಣೆ ಎಂಬುವವರಿಗೆ ಸಾಗಿಸಲಾಗುತ್ತಿತ್ತು ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ. ಈ ಮರ ಕಳ್ಳ ಸಾಗಾಣಿಕೆಯಲ್ಲಿ ಸ್ಥಳೀಯರ ಕೈವಾಡ ಇದೆಯೆನ್ನುವ ಅನುಮಾನ ಹುಟ್ಟಿಕೊಂಡಿದ್ದು, ತನಿಖೆಯಿಂದ ಮಾತ್ರ ತಿಳಿದುಬರಬೇಕಿದೆ.
  • ಕುಮಟಾ ದೀವಗಿ ಬಳಿ ಭೀಕರ ಅಪಘಾತ.

    ಕುಮಟಾ : ಬಸ್ಸ್ ಹಾಗೂ ಕಾರು ಮುಖಾಮುಖಿ ಡಿಕ್ಕಿ ಹೊಡೆದ ಪರುಣಾಮ ಕಾರಿನ ಚಾಲಕ ಸೇರಿದಂತೆ ಇರ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ಕುಮಟಾದ ದಿವಗಿ ಬಳಿ ನಡೆದಿದೆ.

    ಅಪಘಾತದಲ್ಲಿ ಮೂರುವರ್ಷದ ಮಗು ಸೇರಿದಂತೆ ಮೂವರಿಗೆ ಗಂಭೀರ ಗಾಯವಾಗಿದ್ದು ಹೆಚ್ಚಿನ ಚಿಕಿತ್ಸಗಾಗಿ ಮಣಿಪಾಲ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.
    ಕಾರಿನ ಚಾಲಕ ಪ್ರಸನ್ನ ಮತ್ತು ಶಶಿಕಲಾ (೫೨) ಮೃತ ದುರ್ದೈವಿಗಳಾಗಿದ್ದು, ನಂದಿನಿ , ಸೌಮ್ಯಾ , ಶಶಾಂಕ , ಶ್ವಾವತ್ , ಹಾಗೂ ಸಚೀನ ಎಂಬುವವರಿಗೆ ಗಂಭೀರ ಗಾಯವಾಗಿದೆ.ಇವರು ಮಂಗಳೂರು ಮೂಲದವರೆಂದು ತಿಳಿದುಬಂದಿದೆ.

    ಕುಮಟಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಪತ್ರಕರ್ತನ ಲೇಖನ ಹರಿತವಾಗಿರಬೇಕು.

    ಯಲ್ಲಾಪುರ: ಪತ್ರಕರ್ತನ ಲೇಖನ ಹರಿತವಾಗಿರಬೇಕು. ಆದರೆ ಮತ್ತೊಬ್ಬನ ತೆಜೋವಧೆ ಮಾಡುವಂತಹ ಲೇಖನವಾಗಿರಬಾರದು. ಕಷ್ಟದಲ್ಲಿರುವವರ ಜೀವನಕ್ಕೆ ಮಾಧ್ಯಮ ಉಪಯೋಗವಾಗಬೇಕು ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.
    ಅವರು ತಾಲೂಕಿನ ಬಿಸಗೋಡ ಪ್ರೌಢ ಶಾಲೆಯ ಸ್ವಾಮಿ ವಿವೇಕಾನಂದ ಸಭಾಭವನದಲ್ಲಿ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಸರಕಾರಿ ಪ್ರೌಢ ಶಾಲೆ  ಬಿಸಗೋಡ ಇವರ ಸಹಯೋಗದಲ್ಲಿ ಪತ್ರಿಕಾ ದಿನಾಚರಣೆ: ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
    ನಾವು ಇಂದು ಎಚ್ಚರಿಕೆ ಹೆಜ್ಜೆಯಿಂದ ಕಾಲಿಡಬೇಕಾಗಿದೆ. ಮಾಧ್ಯಮದವರು ವಾಸ್ತವಿಕ ಸ್ಥಿತಿಯನ್ನು ಬಿಂಬಿಸಿದರೆ ಮಾತ್ರ ಸಮಾಜದಲ್ಲಿ ನೈಜ ಬದುಕಿನ ಅನಾವರಣ ಸಾಧ್ಯವಾಗುತ್ತದೆ. ರಾಜಕಾರಣಿಗಳು ಮಾಡುವ ತಪ್ಪನ್ನು ಎತ್ತಿ ತೋರಿಸುವುದು ಮಾಧ್ಯಮದ ಜವಾಬ್ದಾರಿಯಾಗಿದ್ದು, ಕೇವಲ ಪೆನ್ನು-ಪಟ್ಟಿಗಳನ್ನೇ ಬಂಡವಾಳವನ್ನಾಗಿಸದೇ ಮಾಧ್ಯಮ ಪ್ರತಿನಿಧಿಗಳು ವಿಶಾಲ ಮನೋಭಾವ, ಅಧ್ಯಯನಶೀಲತೆ ಮೂಲಕ ತಮ್ಮ ಹರಿತ ಬರವಣಿಗೆ ಮೂಲಕ ಯಾರದೇ ಬದುಕಿಗೆ ಪ್ರೇರಣೆಯಾಗಬೇಕು. ಕಠಿಣ ಪರಿಶ್ರಮವಿರದೆ ಯಾರೂ ಸಾಧಕರಾಗಲು ಸಾಧ್ಯವಿಲ ಎಂದರು.
    ಪಠಿಣ ಪರಿಶ್ರಮ ಇಲ್ಲದೇ ಗೆಲವು ಸಾಧಿಸಲು ಸಾಧ್ಯವಿಲ್ಲ. ಗೆಲುವು ಸಾಧಿಸಿದ ನಂತರ ಎಲ್ಲರೂ ನಮ್ಮ ಹತ್ತಿರ ಬರುತ್ತಾರೆ. ಸೋತಾಗ ಮಾತ್ರ ನಮ್ಮ ಹತ್ತಿರ ಇದ್ದವರೆಲ್ಲರೂ ದೂರ ಸರಿಯುತ್ತಾರೆ. ಕೊನೆಯಲ್ಲಿ ನಮ್ಮ ಜೊತೆ ನಮ್ಮ ಹೆಂಡತಿಯರು ಮಾತ್ರ. ವಾಸ್ತವಿಕತೆ ನಮಗೆ ಬದಕನ್ನು ಕಲಿಸುತ್ತದೆ ಎಂದರು.
    ಸಂಕಲ್ಪ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ, ಸಮಾಜದ ಕಟ್ಟಕಡೆಯ ವ್ಯಕ್ತಿಯ ಸಮಸ್ಯೆಯನ್ನು ರಾಷ್ಟ್ರಪತಿಯವರೆಗೂ ತಿಳಿಸಲು ಮಾಧ್ಯಮ ಇಂದಿನ ದಿನಗಳಲ್ಲಿ ಬಹಳ ಉಪಯೋಗಕಾರಿಯಾಗಿದೆ. ಮುಂದೆ ನಡೆಯುವ ಅನಾಹುತಗಳನ್ನು ಮಾಧ್ಯಮಗಳು ಸದಾ ಕಾಲ ಎಚ್ಚರಿಸುವ ಮೂಲಕ ಸಮಾಜವನ್ನು ಬಡಿದೆಬ್ಬಿಸುವ ಕಾರ್ಯವನ್ನು ಮಾಡುತ್ತಿರುವುದು ಅಭಿನಂದಾರ್ಹ ಎಂದರು.
    ಹಿರಿಯ ಪತ್ರಕರ್ತ ಹಾಗೂ ಯ.ತಾ.ಕಾ.ನಿ. ಸಂಸ್ಥಾಪಕ ಅಧ್ಯಕ್ಷ ಬೀರಣ್ಣ ನಾಯಕ ಉಪನ್ಯಾಸ ನೀಡಿ, ಫೇಸ್‍ಬುಕ್, ವಾಟ್ಸ್‍ಪ್ ಹಾಗೂ ಟ್ವಿಟರ್‍ನಂತಹ ಸಾಮಾಜಿಕ ಜಾಲತಾಣಗಳಿಂದ ನಮಗೆ ಅಭಿಪ್ರಾಯ ಹಂಚಿಕೊಳ್ಳಲು ಮುಕ್ತ ಅವಕಾಶವಿದೆ. ಮೂರು ಮಾಧ್ಯಮಗಳಲ್ಲಿ ಶ್ರವಣ ಮಾಧ್ಯಮವು ಪ್ರಥಮ ಸ್ಥಾನದಲ್ಲಿದೆ. ರೇಡಿಯೋ ಇಂದಿನ ಮುಂದುವರೆದ ಯುಗದಲ್ಲಿಯೂ ತನ್ನದೇ ಆದ ಕೆಲವಷ್ಟು ನಿಯಮ ಹಾಗೂ ಪತ್ರಿಕೋಧ್ಯಮದ ಆಯಾಮವನ್ನು ಹೊಂದಿದೆ. ಪತ್ರಿಕೆಗಳು ತಮ್ಮ ಸ್ವಾಭಿಮಾನವನ್ನು ಬಿಡಬಾರದು. ಸ್ವಾಭಿಮಾನ ಕಡಿಮೆಯಾದರೆ ಭ್ರಷ್ಟಾಚಾರಕ್ಕೆ ದಾರಿಯಾಗುತ್ತದೆ. ಪತ್ರಿಕೆಯಲ್ಲಿ ಪ್ರಕಟಿಸುವ ವರದಿ ಸತ್ಯ ಮತ್ತು ನಿಖರ ಅಂಕಿ ಅಂಶಗಳನ್ನು ಒಳಗೊಂಡಿರಬೇಕು. ಇಲ್ಲದಿದ್ದರೆ ಓದುಗನಿಗೆ ಗೊಂದಲ ಸೃಷ್ಟಿಯಾಗುತ್ತದೆ. ಯಾವುದೇ ಗೊಂದಲಕ್ಕೆ ಅವಕಾಶ ನಿಡದಂತಹ ವರದಿಗಳನ್ನು ಪತ್ರಿಕೆಯಲ್ಲಿ ಹೆಚ್ಚು ಪ್ರಕಟಿಸಬೇಕು ಎಂದರು.
    ಸತೀಶ ಯಲ್ಲಾಪುರ ಅವರ ಯಕ್ಷ ರೇಖಾ ಚಿತ್ರವನ್ನು ಉದ್ಘಾಟಿಸಿ ವಿಜಯವಾಣಿ ಸ್ಥಾನಿಕ ಸಂಪಾದಕ ಮೋಹನ ಹೆಗಡೆ ಮಾತನಾಡಿ, ಮುಂದುವರಿಯುತ್ತಿರುವ ವಿಶ್ವದಲ್ಲಿ ಮಾಧ್ಯಮ ಪ್ರಪಂಚದಲ್ಲಿ ಕಾರ್ಯನಿರ್ವಹಿಸುವವರ ನಡುವೆ ಕೋಮು-ಪಂಥಗಳು ಹಲವಿದ್ದರೂ, ನೈತಿಕ ವಿಷಯ ಎದುರಾದಾಗ ಸಂಘಟನೆ ಒಂದೇ ಆಗಿದೆ. ಓದುಗರಿಗೆ ಇಷ್ಟವೆನಿಸುವ ಮತ್ತು ಉಪಯುಕ್ತ ವಿಚಾರಗಳನ್ನು ಬಿತ್ತರಗೊಳಿಸುವುದೇ ಪತ್ರಿಕೆಗಳ ಪ್ರಧಾನ ಧರ್ಮವಾಗಿದ್ದರೂ ಈ ನಡುವೆ ಎಲ್ಲ ಕ್ಷೇತ್ರಗಳಂತೆ ನೈತಿಕತೆ, ಪ್ರಾಮಾಣಿಕತೆ ಕೊರತೆಯಾಗಿದೆ ಎಂದರು.
    ಯಲ್ಲಾಪುರ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ನಾಗರಾಜ ಮದ್ಗುಣಿ ಅಧ್ಯಕ್ಷತೆವಹಿಸಿದ್ದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸುಬ್ರಾಯ ಭಟ್ಟ ಬಕ್ಕಳ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರಭಾಕರ ಭಟ್ಟ ಉಪಸ್ಥಿತರಿದ್ದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ನರಸಿಂಹ ಸಾತೋಡ್ಡಿ ಸ್ವಾಗತಿಸಿದರು. ಯಲ್ಲಾಪುರ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಸುಬ್ರಾಯ ಬಿದ್ರೆಮನೆ ಹಾಗೂ ಡಾ. ರವಿ ಭಟ್ಟ ಬರಗದ್ದೆ ನಿರೂಪಿಸಿದರು. ಈ ಸಂದರ್ಭದಲ್ಲಿ ಕಳೆದ ಬಾರಿ ಎಸ್.ಎಸ್.ಎಲ್.ಸಿ ಯಲ್ಲಿ ಉತ್ತಮ ಅಂಕಗಳಿಸಿದ ವಿದ್ಯಾರ್ಥಿ ದರ್ಶನ ಗಣಪೂಮನೆಯನ್ನು ಗೌರವಿಸಲಾಯಿತು. ವಿದ್ಯಾರ್ಥಿಗಳಾದ ಗಿರೀಶ, ಸಂಕೇತರ ಪ್ರಾರ್ಥನೆ ಹಾಗೂ ವಿದ್ಯಾರ್ಥಿನಿಯರ ಸ್ವಾಗತ ಗೀತೆ ಹಾಡಿದರು. ಸಂಘದ ಕಾರ್ಯದರ್ಶಿ ಶ್ರೀಧರ ಅಣಲಗಾರ ಸನ್ಮಾನ ಪತ್ರ ವಾಚಿಸಿದರು. ಪ್ರೌಢಶಾಲಾ ಪ್ರಭಾರಿ ಮುಖ್ಯಾಧ್ಯಾಪಕಿ ಶಾಲಿನಿ ನಾಯಕ ವಂದಿಸಿದರು