Satwadhara News

Author: satwawriter

  • ಬಾಡದ ಕಾಂಚಿಕಾಂಬೆಗೆ ಉಘೇ ಎಂದ ಭಕ್ತಗಣ

    ಬಾಡದ ಕಾಂಚಿಕಾಂಬೆಗೆ ಉಘೇ ಎಂದ ಭಕ್ತಗಣ

    ಕುಮಟಾ : ಜಿಲ್ಲೆಯ ಪ್ರಸಿದ್ದ ಜಾತ್ರೆಗಳಲ್ಲಿ ಒಂದಾದ ಕುಮಟಾ ತಾಲೂಕಿನ ಶ್ರೀ ಕಾಂಚಿಕಾ ಪರಮೇಶ್ವರಿ ದೇವರ ಜಾತ್ರಾ ಮಹೋತ್ಸವವು ಅತ್ಯಂತ ಅದ್ದೂರಿಯಾಗಿ ನಡೆಯಿತು. ತಾಲೂಕಿನ ಸುತ್ತಮುತ್ತಲಿನಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸಿ ಶ್ರೀ ದೇವರ ದರ್ಶನ ಪಡೆದು, ರಥ ಎಳೆದು ಪುನೀತರಾದರು. ಸರ್ವಾಭರಣ ಭೂಷಿತೆಯಾದ ತಾಯಿ ಕಾಂಚಿಕಾ ಪರಮೇಶ್ವರಿ ಭಕ್ತರಿಂದ ಪೂಜೆ ಸ್ವೀಕರಿಸಿದಳು.

    ಪುರಾಣ ಪ್ರಸಿದ್ಧ ಬಾಡದ ಶ್ರೀ ಕಾಂಚಿಕಾ ಪರಮೇಶ್ವರಿ ದೇವಾಲಯವು ಅತ್ಯಂತ ಶಕ್ತಿಯುತ, ಭಕ್ತರ ಇಷ್ಟಾರ್ಥ ಸಿದ್ಧಿಕ್ಷೇತ್ರವಾಗಿದ್ದು, ಪ್ರತೀ ವರ್ಷವೂ ಇಲ್ಲಿ ಜಾತ್ರಾ ಮಹೋತ್ಸವ ನಡೆಯುತ್ತದೆ. ಅಂತೆಯೇ ಶನಿವಾರ ನಡೆದ ಶ್ರೀ ದೇವರ ಜಾತ್ರಾ ಮಹೋತ್ಸವವು ಅತ್ಯಂತ ವಿಜ್ರಂಭಣೆಯಿಯಿಂದ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆಯಿತು. ಸಾವಿರಾರು ಭಕ್ತರ ಒಗ್ಗೂಡುವಿಕೆಯಲ್ಲಿ ತಾಯಿ ಶ್ರೀ ಕಾಂಚಿಕಾoಬ ಪರಮೇಶ್ವರಿ ದೇವರ ಮಹಾ ರಥೋತ್ಸವು ಸಂಪನ್ನಗೊಂಡಿತು.

    ಇನ್ನು ಸಾರ್ವಜನಿಕರು ಇಷ್ಠಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿ ಶ್ರೀ ದೇವರಿಗೆ ಉಡಿ ಸೇವೆ, ಉರುಳು ಸೇವೆ, ತುಲಾಬಾರ ಸೇವೆ ಸೇರಿದಂತೆ ವಿವಿಧ ಸೇವೆಗಳನ್ನು ಸಲ್ಲಿಸುವುದು ಇಲ್ಲಿನ ವಿಶೇಷವಾಗಿದ್ದು, ಅದೇ ರೀತಿ ವಿವಿದೆಡೆಯಿಂದ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ ಭಕ್ತರು ತಾಯಿಗೆ ತಮ್ಮ ಕೈಲಾದ ಸೇವೆ ಸಲ್ಲಿಸಿದರು. ಸಾಯಂಕಾಲದ ವೇಳೆ ನಡೆದ ಮಹಾ ರಥದಲ್ಲಿ ಆಸಿನಳಾದ ಕಾಂಚಿಕಾಂಬೆಯನ್ನು ಕಣ್ತುಂಬಿಕೊಂಡು, ಸಂಪ್ರದಾಯದಂತೆ ರಥಕ್ಕೆ ಬಾಳೆ ಹಣ್ಣು ಎಸೆದು ಭಕ್ತರು ಕೃತಾರ್ಥರಾದರು.

  • ಕೃಷಿ ಹಾಗೂ ಗೋಪಾಲನೆ ಆರೋಗ್ಯಕರ ಜೀವನದ ಅಗತ್ಯತೆಗಳು : ಡಾ. ಸೌಮ್ಯಶ್ರೀ ಶರ್ಮಾ

    ಕೃಷಿ ಹಾಗೂ ಗೋಪಾಲನೆ ಆರೋಗ್ಯಕರ ಜೀವನದ ಅಗತ್ಯತೆಗಳು : ಡಾ. ಸೌಮ್ಯಶ್ರೀ ಶರ್ಮಾ

    ಸಿದ್ದಾಪುರ : ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ಕುಟುಂಬವು ಆಧುನಿಕತೆಗೆ ತೆರೆದುಕೊಳ್ಳುವ ಭರದಲ್ಲಿ ಕೃಷಿಯಿಂದ ಹಾಗೂ ಗೋ ಸಾಕಾಣಿಕೆಯಿಂದ ವಿಮುಖವಾಗುತ್ತಿರುವುದು ವಿಷಾದನೀಯ ಸಂಗತಿಯಾಗಿದೆ, ಪ್ರತಿಯೊಬ್ಬರ ಆರೋಗ್ಯ ಪೂರ್ಣ ಜೀವನದಲ್ಲಿ ಇವು ಒಂದು ಭಾಗವಾಗಬೇಕಾಗಿದೆ ಎಂದು ಗೋಕರ್ಣದ ಸಸ್ಯ ಸಂಜೀವಿನಿ ಪಂಚಕರ್ಮ ಕೇಂದ್ರದ ಡಾ. ಸೌಮ್ಯಶ್ರೀ ಶರ್ಮಾ ಅವರು ಅಭಿಪ್ರಾಯ ಪಟ್ಟರು.

    ಸಿದ್ದಾಪುರ ತಾಲೂಕಿನ ಹಳ್ಳಿಬೈಲ್ ಗ್ರಾಮದ ಹುತ್ಗಾರ ಶಾಲೆ ಆವಾರದಲ್ಲಿ ಸ್ಪಂದನ ಟ್ರಸ್ಟ್ (ರಿ.) ಹಳ್ಳಿಬೈಲ್ ಆಯೋಜನೆಯ ಹನ್ನೊಂದನೇ ವರ್ಷದ ಹಳ್ಳಿಹಬ್ಬ – 2025 ರ ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ. ಸೌಮ್ಯಶ್ರೀ ಶರ್ಮಾ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

    “ಗ್ರಾಮದಿಂದ ಅನ್ಯೋನ್ಯ ಕಾರಣಗಳಿಗಾಗಿ ಷಹರ ಸೇರಿರುವ ಊರವರನ್ನು ಒಂದು ದಿನ ತಮ್ಮ ಹುಟ್ಟುರಿಗೆ ಕರೆಸಿ ಎಲ್ಲರೂ ಜೊತೆಯಾಗಿ ಹಳ್ಳಿಹಬ್ಬವನ್ನು ಆಚರಿಸುತ್ತಿರುವುದು ಇಂದಿನ ವಿದ್ಯಮಾನದಲ್ಲಿ ಸ್ಪಂದನ ಟ್ರಸ್ಟ್ ನ ಕಾರ್ಯ ಶ್ಲಾಘನೀಯವಾಗಿದೆ, ಹಾಗೆಯೇ ಹುತ್ಗಾರ ಶಾಲೆಯಲ್ಲಿ ಕಲಿಸಿದ ನಿವೃತ್ತ ಶಿಕ್ಷಕರನ್ನು ಗೌರವಿಸಿ ಅವರಿಂದ ಆಶೀರ್ವಾದ ಪಡೆಯುವ ಗುರುವಂದನೆ, ಹೃದಯಸ್ಪರ್ಶಿ ಕ್ಷಣಗಳು. ಅದರಲ್ಲೂ ಅಂಗನವಾಡಿ ಕೇಂದ್ರದಲ್ಲಿ ಕೆಲಸ ನಿರ್ವಹಿಸಿ ಸೇವಾ ನಿವೃತ್ತಿ ಹೊಂದಿದ ಶಿಕ್ಷಕರು ಹಾಗೂ ಸಹಾಯಕಿ ಇಬ್ಬರನ್ನೂ ಗೌರವಿಸುತ್ತಿರುವುದು ನಿಮ್ಮ ಊರು ಅವರ ಮೇಲಿಟ್ಟ ಪ್ರೀತಿಗೆ ಸಾಕ್ಷಿಯಾಗಿದೆ.

    ಒಂದು ಗ್ರಾಮದ ಅಥವಾ ಸಂಸ್ಥೆಯ ಒಗ್ಗಟ್ಟು ಕಷ್ಟದ ಸಮಯದಲ್ಲಿ ತಿಳಿಯುತ್ತದೆ, ಇಂದು ಮಳೆಯಿಂದ ಅನೇಕ ಸಮಸ್ಯೆಗಳು ಉದ್ಭವವಾಗಿ ಕಾರ್ಯಕ್ರಮ ತಡವಾಗಿ ಪ್ರಾರಂಭವಾದರು ಊರಿನ ಪ್ರತಿಯೊಬ್ಬರು ಒಬ್ಬರಿಗೊಬ್ಬರಿಗೆ ಸಹಕರಿಸುತ್ತಾ ಬಂದದ್ದು ನೋಡಿದರೆ ನಿಮ್ಮ ಊರಿನ ಸಹಬಾಳ್ವೆ ಉಳಿದವರಿಗೆ ಮಾದರಿಯಾಗಿದೆ ಎನ್ನುತ್ತಾ ತಮ್ಮ ಬಾಲ್ಯ ಜೀವನವನ್ನು ಮೆಲುಕು ಹಾಕಿ ಸಂತಸದ ನುಡಿಗಳನ್ನು ಹಂಚಿಕೊಂಡರು. ಡಾಕ್ಟರ್ ಆಗಿದ್ದರು ಸಹ, ಊರವರ ಜೊತೆಗೆ ಊರಿನವರಾಗೆ ಕಾಣಿಸಿಕೊಂಡದ್ದು ವಿಶೇಷವಾಗಿತ್ತು.

    ಈ ಸಂದರ್ಭದಲ್ಲಿ ಹುತ್ಗಾರ ಅಂಗನವಾಡಿ ಕೇಂದ್ರದ ನಿವೃತ್ತ ಶಿಕ್ಷಕಿ ಹೇಮಾವತಿ ಹೆಗಡೆ ಹಾಗೂ ಸಹಾಯಕಿ ಕಮಲಾ ಗೌಡ ಇವರನ್ನು ಟ್ರಸ್ಟ್ ನ ವತಿಯಿಂದ ಗೌರವಿಸಲಾಯಿತು. ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಪೂರ್ಣ ಏಳು ವರ್ಷಗಳ ಕಾಲ ಅಧ್ಯಯನ ಮಾಡಿ ಕಳೆದ ಸಾಲಿನಲ್ಲಿ ಎಸ್.ಎಸ್. ಎಲ್. ಸಿ. ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ಕು‌. ಮಧುರಾ ಭಟ್ಟ ಹಾಗೂ ಕು. ವಿಜೇತಾ ಹೆಗಡೆ ಇವರಿಗೆ ಟ್ರಸ್ಟ್ ನ ವತಿಯಿಂದ ಪ್ರತಿಭಾ ಪುರಸ್ಕಾರವನ್ನು ನೀಡಲಾಯಿತು.

    ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹುತ್ಗಾರನ ಎಸ್.ಡಿ.ಎಮ್.ಸಿ ಅಧ್ಯಕ್ಷರು ಹಾಗೂ ಸ್ಪಂದನ ಟ್ರಸ್ಟ್ ನ ಕಾರ್ಯದರ್ಶಿಗಳಾದ ಗಣೇಶ ಹೆಗಡೆ ಬಿಳೇಕಲ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ನಿಲ್ಕುಂದ ಗ್ರಾಮ ಪಂಚಾಯತಿಯ ಅಧ್ಯಕ್ಷರು ಹಾಗೂ ಟ್ರಸ್ಟಿನ ಸದಸ್ಯರಾದ ರಾಜಾರಾಮ ಹೆಗಡೆ ಬಿಳೇಕಲ್ ತಮ್ಮ ಅನುಭವದ ಮಾತುಗಳನ್ನು ಹಂಚಿಕೊಂಡರು. ಟ್ರಸ್ಟಿನ ಅಧ್ಯಕ್ಷರಾದ ಪ್ರಸನ್ನ ಹೆಗಡೆ ಸೂರನಜಡ್ಡಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಅಧ್ಯಕ್ಷೀಯ ನುಡಿಗಳನ್ನಾಡಿದರು.
    ಭೂಮಿಕಾ ಭಟ್ಟ ಹಾಗೂ ಲತಾ ಹೆಗಡೆ ಅನಿಸಿಕೆಗಳನ್ನು ಹಂಚಿಕೊಂಡರು. ನಿತೀಶ್ ಹೆಗಡೆ ಹಾಗೂ ಸುಬ್ರಹ್ಮಣ್ಯ ಹೆಗಡೆ ಅತಿಥಿಗಳ ಹಾಗೂ ಗುರುಗಳ ಪರಿಚಯ ಮಾಡಿಕೊಟ್ಟರು.

    ಪನ್ನಗ ಹೆಗಡೆ ಸ್ವಾಗತಿಸಿದರು ಮತ್ತು ನರೇಂದ್ರ ಹೆಗಡೆ ವಂದಿಸಿದರು. ಕಿರಣ ಭಟ್ಟ ಹುತ್ಗಾರ ಕಾರ್ಯಕ್ರಮ ನಿರೂಪಿಸಿದರು. ಟ್ರಸ್ಟಿಗಳಾದ ಬಾಲಚಂದ್ರ ಹೆಗಡೆ, ದಿನೇಶ ಹೆಗಡೆ, ಪ್ರಸನ್ನ ಹೆಗಡೆ ಹಳ್ಳಿಬೈಲ್ ಸಹಕರಿಸಿದರು.

    ಸಭಾಕಾರ್ಯಕ್ರಮದ ನಂತರ ಅಂಗನವಾಡಿ ಹಾಗೂ ಹಿರಿಯ ಪ್ರಾರ್ಥಮಿಕ ಶಾಲಾ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು ಮತ್ತು ಊರಿನ ಹಿರಿ-ಕಿರಿಯ ಉದಯೋನ್ಮುಖ ಕಲಾವಿದರಗಳು ಜಾನಪದ ಸಂಗೀತ, ನೃತ್ಯ, ನಾಟಕ, ಬಿಂಗಿ ಕುಣಿತ, ಕೋಲಾಟ ಹೀಗೆ ಹಲವಾರು ಮನೋರಂಜನಾ ಕಾರ್ಯಕ್ರಮವನ್ನು ನೀಡಿದರು.

    ಗಜಾನನ ಹೆಗಡೆ ಸೂರನಜಡ್ಡಿ ಹಾಗೂ ಸಂಗಡಿಗರು ರುಚಿ-ಶುಚಿಯಾದ ಊಟವನ್ನು ನೆರೆದ 300ಕೂ ಹೆಚ್ಚು ಜನರಿಗೆ ಉಣಬಡಿಸಿದರು. ಉಮೇಶ ಹೆಗಡೆ ಕಲ್ಲಾರೆಮನೆ ಹಾಗೂ ಸಂಗಡಿಗರು ಲೈಟಿಂಗ್ ವ್ಯವಸ್ಥೆಯಲ್ಲಿ ಹಾಗೂ ಶ್ರೀ ಸೌಂಡ್ಸ್ ಹೆಗ್ಗರಣಿ ಇವರು ಧ್ವನಿವರ್ಧಕ ವ್ಯವಸ್ಥೆಯಲ್ಲಿ ಸಹಕರಿಸಿದರು.

  • AITM ಕೋಡ್‌ಫೆಸ್ಟ್ – ರಾಷ್ಟ್ರೀಯ ಮಟ್ಟದ ಹ್ಯಾಕಥಾನ್ AITM ಭಟ್ಕಳದಲ್ಲಿ ಉದ್ಘಾಟನೆ

    AITM ಕೋಡ್‌ಫೆಸ್ಟ್ – ರಾಷ್ಟ್ರೀಯ ಮಟ್ಟದ ಹ್ಯಾಕಥಾನ್ AITM ಭಟ್ಕಳದಲ್ಲಿ ಉದ್ಘಾಟನೆ

    AITM ಕೋಡ್‌ಫೆಸ್ಟ್ – ರಾಷ್ಟ್ರೀಯ ಮಟ್ಟದ ಹ್ಯಾಕಥಾನ್ ಇಂದು ಭಟ್ಕಳದ ಅಂಜುಮನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್‌ಮೆಂಟ್ (AITM) ನಲ್ಲಿ ಉದ್ಘಾಟನೆಗೊಂಡಿತು. ಮುಖ್ಯ ಅತಿಥಿಯಾಗಿ, AITM ನ ಹಳೆಯ ವಿದ್ಯಾರ್ಥಿ ಮತ್ತು ವಿನ್‌ಟೀಮ್ ಗ್ಲೋಬಲ್‌ನ ಸಂಸ್ಥಾಪಕ ಮತ್ತು ನಿರ್ದೇಶಕರಾದ ವಸೀಮ್ ಅಹ್ಮದ್, ಕ್ಯಾಂಪಸ್‌ನಿಂದ ಉದ್ಯಮಶೀಲತೆಯತ್ತ ತಮ್ಮ ಪ್ರಯಾಣದಿಂದ ಭಾಗವಹಿಸುವವರಿಗೆ ಸ್ಫೂರ್ತಿ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು AITM ನ ಕಾರ್ಯದರ್ಶಿ ಮೊಹಿದ್ದೀನ್ ರುಕ್ನುದ್ದೀನ್ ಅವರು ವಹಿಸಿದ್ದರು. ಪ್ರಾಂಶುಪಾಲ ಡಾ. ಕೆ. ಫಜ್ಲುರ್ ರೆಹಮಾನ್, ರಿಜಿಸ್ಟ್ರಾರ್ ಪ್ರೊ. ಜಾಹಿದ್ ಖರುರಿ, CSE ಮುಖ್ಯಸ್ಥ ಡಾ. ಅನ್ವರ್ ಶತಿಕ್ ಮತ್ತು ಸಂಯೋಜಕರಾದ ಪ್ರೊ. ಸಯೀದ್ ನೂರೈನ್ ಮತ್ತು ಪ್ರೊ. ಶ್ರೀಶೈಲ್ ಭಟ್ ಸಹ ಉಪಸ್ಥಿತರಿದ್ದರು, ನಾವೀನ್ಯತೆ ಮತ್ತು ಸಹಯೋಗದ ಮನೋಭಾವವನ್ನು ಪ್ರೋತ್ಸಾಹಿಸಿದರು.

    ದೇಶಾದ್ಯಂತ ಒಟ್ಟು 30 ತಂಡಗಳು ಈ 24 ಗಂಟೆಗಳ ಕೋಡಿಂಗ್ ಮ್ಯಾರಥಾನ್‌ನಲ್ಲಿ ಭಾಗವಹಿಸುತ್ತಿದ್ದು, ಅಲ್ಲಿ ಯುವ ಮನಸ್ಸುಗಳು ತಂತ್ರಜ್ಞಾನ-ಚಾಲಿತ ಪರಿಹಾರಗಳೊಂದಿಗೆ ನೈಜ-ಪ್ರಪಂಚದ ಸವಾಲುಗಳನ್ನು ಎದುರಿಸುತ್ತವೆ.

    ಈ ಕಾರ್ಯಕ್ರಮದ ಶೀರ್ಷಿಕೆ ಪಾಲುದಾರರಾಗಿ ನೀವಿಯಸ್ ಸೊಲ್ಯೂಷನ್ಸ್ ವಹಿಸಿತ್ತು. ಸಂಘಟನಾ ಪಾಲುದಾರರಾಗಿ ಡಿಜಿಸ್ಕ್ರಿಪ್ಟ್ ಟೆಕ್ನಾಲಜೀಸ್, ಸಹ ಪಾಲುದಾರರಾಗಿ ಮೊಹ್ತಿಶಮ್ ಬಿಲ್ಡರ್ಸ್, ಸ್ಪ್ರೌಟ್‌ಎಕ್ಸ್‌ಪಿ, ಐಟೆಕ್ಸ್ ಸೊಲ್ಯೂಷನ್ಸ್, ಎಮರ್ಟೆಕ್ಸ್ ಟೆಕ್ನಾಲಜೀಸ್, ತಹೂರ ಮತ್ತು ವಿಂಟೀಮ್ ಗ್ಲೋಬಲ್ ಇವರು ಸಹಕರಿಸಿದರು.

    ಒಟ್ಟು ಬಹುಮಾನ ಮೊತ್ತ ₹2 ಲಕ್ಷ ಆಗಿದ್ದು, ಮೊದಲ ಬಹುಮಾನ ₹60,000, ಎರಡನೇ ಬಹುಮಾನ ₹30,000 ಮತ್ತು ಮೂರನೇ ಬಹುಮಾನ ₹15,000. ನಾಳೆ ಸಂಜೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ವಿಜೇತರನ್ನು ಘೋಷಿಸಲಾಗುತ್ತದೆ ಮತ್ತು ಬಹುಮಾನ ನೀಡಲಾಗುತ್ತದೆ.

  • ಖ್ಯಾತ ವೈದ್ಯ ಡಾ. ಡಿ.ಪಿ ರಮೇಶ ಅವರಿಂದ ‘ವಿಶೇಷ ಪಂಚಗವ್ಯ ಚಿಕಿತ್ಸಾ ಶಿಬಿರ’.

    ಖ್ಯಾತ ವೈದ್ಯ ಡಾ. ಡಿ.ಪಿ ರಮೇಶ ಅವರಿಂದ ‘ವಿಶೇಷ ಪಂಚಗವ್ಯ ಚಿಕಿತ್ಸಾ ಶಿಬಿರ’.

    ಹೊಸಾಡದ ಅಮೃತಧಾರಾ ಗೋ ಶಾಲೆಯಲ್ಲಿ ಆಯೋಜನೆ : ಸಾರ್ವಜನಿಕರು ಇದರ ಸದುಪಯೋಗ ಪಡೆಯಲು ಕರೆ.

    ಕುಮಟಾ : ವೈಜ್ಞಾನಿಕ ಯುಗದಲ್ಲಿಯೂ ಜನರನ್ನು ಕಿತ್ತು ತಿನ್ನುವ ಮಾರಕ ಖಾಯಿಲೆಗಳಿಂದ ಮುಕ್ತಿ ಪಡೆಯಲು ಹರ ಸಾಹಸವನ್ನೇ ಮಾಡಬೇಕು. ಜೀವನದಲ್ಲಿ ಗಳಿಸಿದ್ದನ್ನೆಲ್ಲವನ್ನೂ ಆಸ್ಪತ್ರೆಗೆ ಸುರಿದರೂ, ರೋಗದಿಂದ ಮುಕ್ತಿ ಸಿಕ್ಕೀತು ಎಂಬ ನಂಬುಗೆಯಿಲ್ಲ. ಆದರೆ ಇಂತಹ ಕಾಲಘಟ್ಟದಲ್ಲಿಯೂ ‘ಪಂಚಗವ್ಯ ಚಿಕಿತ್ಸೆ’ ಬಹು ರೋಗಗಳಿಗೆ ಸಂಜೀವಿನಿಯಾಗಿದೆ. ಅದರಲ್ಲಿಯೂ ಡಾ. ಡಿ.ಪಿ ರಮೇಶ ಅವರು ಹಲವಾರು ವಿಧದಲ್ಲಿ ಸಂಶೋಧನೆಗಳನ್ನು ನಡೆಸಿದ್ದು, ಕ್ಯಾನ್ಸರ್ ನಂತಹ ಮಾರಕ ಖಾಯಿಲೆಗಳನ್ನು ಪಂಚಗವ್ಯ ಚಿಕತ್ಸೆಯ ಮೂಲಕವೇ ಹತೋಟಿಗೆ ತಂದಿರುವುದು ವಿಶೇಷ.

    ವೇದಲೋಕ ಗೋವಿನಲ್ಲಿ ಬದುಕು ಕಟ್ಟಿಕೊಂಡವರ ಬದುಕು ಹಸನು ಎಂದಿರುವುದೂ ಅದೇ ಕಾರಣಕ್ಕೆ. ಅಂತಹ ಗೋವಿನ ಉತ್ಪನ್ನಗಳಿಂದ ನಡೆಸುವ ಚಿಕಿತ್ಸೆ ಮಾ. ೨ ರಂದು ತಾಲೂಕಿನ ಮೂರೂರಿನ ಹೊಸಾಡದ ಅಮೃತಧಾರಾ ಗೋ ಶಾಲೆಯಲ್ಲಿ ನಡೆಯಲಿದೆ. ಡಾ. ಡಿ.ಪಿ. ರಮೇಶ ಈ ಶಿಬಿರದಲ್ಲಿ ಹಾಜರಿದ್ದು, ಮಾರ್ಗದರ್ಶನ ಮಾಡಲಿದ್ದಾರೆ.

    ಡಾ. ಡಿ.ಪಿ ರಮೇಶ ಪರಿಚಯ ಇಲ್ಲಿದೆ.

    ಹಲವರಿಗೆ ಬದುಕು ನೀಡಿದ ಭಗವಂತ ಎಂದೇ ಬಿಂಬಿತರಾಗಿದ್ದಾರೆ ಡಾ. ಡಿ.ಪಿ ರಮೇಶ. ಪ್ರಾಚೀನ ವೈದ್ಯಕೀಯ ವಿಜ್ಞಾನವಾದ ಆಯುರ್ವೇದದಲ್ಲಿ ಅಪಾರ ಆಸಕ್ತಿ ಹೊಂದಿದ್ದವರು, 1992 ರಲ್ಲಿ ಆಯುರ್ವೇದ ಕಾಲೇಜಿಗೆ ಸೇರಿದರು. ಆಯುರ್ವೇದ ವೈದ್ಯಕೀಯದಲ್ಲಿ ಅನೇಕ ಔಷಧಿಗಳಲ್ಲಿ ಹಾಲಿನ ಪ್ರಮುಖ ಪಾತ್ರವನ್ನು ಅವರು ಗಮನಿಸಿದರು. ಪ್ರಾಯೋಗಿಕ ಆಯುರ್ವೇದದ ಕುರಿತು ಪ್ರಾಧ್ಯಾಪಕಿ ಡಾ. ಅಹಲ್ಯ ಅವರ ಉಪನ್ಯಾಸಗಳನ್ನು ಕೇಳಿದ ನಂತರ, ಆಯುರ್ವೇದದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುವಲ್ಲಿ ಹೆಚ್ಚು ತೊಡಗಿಸಿಕೊಂಡರು. ನಂತರ ಅವರ ತೀವ್ರ ಸಂಶೋಧನೆಯ ಸಮಯದಲ್ಲಿ ಪಂಚಗವ್ಯದ (ಹಾಲು, ಮೊಸರು, ತುಪ್ಪ, ಗೋಮೂತ್ರ ಮತ್ತು ಹಸುವಿನ ಸಗಣಿ) ಮಹತ್ವದ ಬಗ್ಗೆ ಕಂಡುಕೊಂಡರು. ಅಂದಿನಿಂದ ಆಯುರ್ವೇದದ ಒಂದು ಶಾಖೆಯಾದ ಪಂಚಗವ್ಯದಲ್ಲಿ ಹೆಚ್ಚಿನ ಆಸಕ್ತಿ ಹೊಂದಿದರು ಮತ್ತು ಸ್ಥಳೀಯ ಮತ್ತು ವಿದೇಶಿ ವಂಶವಾಹಿಗಳ ಬಗ್ಗೆ ಸಂಶೋಧನೆಯನ್ನು ಮುಂದುವರೆಸಿದರು.

    ನಂತರ ಮುಂದುವರೆದು ಜ್ಞಾನಗಂಗಾ ಗೋಮೂತ್ರ ವಿತರಣಾ ಕೇಂದ್ರದಲ್ಲಿ 3 ವರ್ಷ ಕೆಲಸ ಮಾಡಿದ್ದಾರೆ. ನಂತರ ಡಾ. ಜೈನ್ ಅವರ ಹಸು ಮೂತ್ರ ಚಿಕಿತ್ಸಾ ಆರೋಗ್ಯ ಚಿಕಿತ್ಸಾಲಯದಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದರು. ಸುಮಾರು 1000 ವಿವಿಧ ಖಾಯಿಲೆಗಳಿಗೆ ಚಿಕಿತ್ಸೆ ನೀಡಿದರು. ಅದರಲ್ಲಿ ಬಹು ಉಲ್ಲೇಖನೀಯವಾದುದ್ದೆಂದರೆ, ಕ್ಯಾನ್ಸರ್ ನಿಂದ ಬಳಲುತ್ತಿದ್ದ ಹಾಗೂ ಆಸ್ಪತ್ರೆಯಲ್ಲಿ ಅವನ್ನು ಉಳಿಸಲು ಸಾಧ್ಯವಿಲ್ಲವೆಂದು ಹೇಳಿದ್ದ ನಂತರದಲ್ಲಿಯೂ, ಡಾ. ಡಿ.ಪಿ ರಮೇಶ ಅವರ ಪಂಚಗವ್ಯ ಚಿಕಿತ್ಸೆಯಿಂದ ಅವನು 6 ತಿಂಗಳಲ್ಲಿ ಚೇತರಿಸಿಕೊಂಡನು. ಈಗ ಅವನು ಸಾಮಾನ್ಯ ಜೀವನವನ್ನು ನಡೆಸುತ್ತಿದ್ದಾನೆ.

    ಡಾ. ಡಿ.ಪಿ ರಮೇಶ ಅಮೆರಿಕ, ಫ್ರಾನ್ಸ್ ಮತ್ತು ಇಟಲಿಯಂತಹ 40 ಕ್ಕೂ ಹೆಚ್ಚು ದೇಶಗಳ ರೋಗಿಗಳಿಗೆ ಚಿಕಿತ್ಸೆ ನೀಡಿದ್ದಾರೆ. 800 ಕ್ಕೂ ಹೆಚ್ಚು ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ನೀಡಿದ್ದು, 150 ಕ್ಕೂ ಹೆಚ್ಚು ಮೂತ್ರಪಿಂಡದ ಕಾಯಿಲೆಗಳು, 400 ಕ್ಕೂ ಹೆಚ್ಚು ಚರ್ಮ ರೋಗಗಳು, 1000ಕ್ಕೂ ಹೆಚ್ಚು ಆಸ್ತಮಾ ರೋಗಿಗಳು, 2000ಕ್ಕೂ ಅಧಿಕ ಹೊಟ್ಟೆ ಸಂಬಂಧಿತ ಸಮಸ್ಯೆಗಳು ಮತ್ತು 15 ಎಚದ.ಐ.ವಿ ರೋಗಿಗಳಿಗೆ ಚಿಕಿತ್ಸೆ ನೀಡಿದ್ದಾರೆ.

    ಡಾ. ಡಿ.ಪಿ ರಮೇಶ ಅವರ ಸಂಶೋಧನೆಗಳು.

    ಪಂಚಗವ್ಯ ಆಧಾರಿತ ದೈನಂದಿನ ಉತ್ಪನ್ನಗಳಾದ ಸ್ನಾನದ ಸೋಪ್, ಶಾಂಪೂ, ಫೇಸ್ ಪೌಡರ್, ಫೇಸ್ ಕ್ರೀಮ್ ಇತ್ಯಾದಿಗಳ ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇವರು ತಯಾರಿಸಿದ ಸ್ನಾನದ ಸೋಪ್ ಈಗಾಗಲೇ ಮಾರುಕಟ್ಟೆಯಲ್ಲಿದೆ.

    ಇವರು ೨೦೦೫ರಲ್ಲಿ “ಗೋವೇದ” ಎಂಬ ಪುಸ್ತಕ ಪ್ರಕಟಿಸಿದ್ದಾರೆ. “ಆಯುಷ್ ಹೆಲ್ತ್ ಇನ್ಫೋ” ಎಂಬ ಇಂಗ್ಲಿಷ್ ನಿಯತಕಾಲಿಕೆಯ ಸಂಪಾದಕರಾಗಿದ್ದು, “ಆಯುರ್ವರ್ಧಕ ಗೋವೇದ” ಕನ್ನಡ ಮಾಸಪತ್ರಿಕೆಯ ಮುಖ್ಯ ಸಂಪಾದಕರಾಗಿದ್ದರು. ಕನ್ನಡಪ್ರಭ, ಪ್ರಜಾವಾಣಿ, ಸಂಯುಕ್ತ ಕರ್ನಾಟಕ, ಹೊಸದಿಗಂತ, ವೈದ್ಯಲೋಕ ಮುಂತಾದ ಪ್ರಮುಖ ಪತ್ರಿಕೆಗಳಲ್ಲಿ ಲೇಖನಗಳನ್ನು ಪ್ರಕಟಿಸಿದ್ದಾರೆ. ಗೋಮೂತ್ರ ಚಿಕಿತ್ಸೆಯ ಕುರಿತು ಟಿವಿ9, ಸುವರ್ಣ, ಉದಯ ಟಿವಿ, ಕಸ್ತೂರಿ ಮತ್ತು ಸ್ಥಳೀಯ ಕೇಬಲ್ ಟಿವಿ ಚಾನೆಲ್‌ಗಳಲ್ಲಿ ಹಲವು ಟಿವಿ ಕಾರ್ಯಕ್ರಮಗಳನ್ನು ನೀಡಿದ್ದಾರೆ.

    ಇವರ ಸಾಮಾಜಿಕ ಚಟುವಟಿಕೆಗಳು.

    ಇವರು ಸರ್ಕಾರಿ ಆಯುರ್ವೇದ ವಿದ್ಯಾರ್ಥಿಗಳ ಸಂಘವು ಆಯುರ್ವೇದ ಜಾಗೃತಿಗಾಗಿ ಬೆಂಗಳೂರಿನಿಂದ ಮೈಸೂರಿನವರೆಗೆ ನಡೆಸಿದ ಸೈಕಲ್ ಯಾತ್ರೆಯಲ್ಲಿ ಭಾಗವಹಿಸಿದರು. ಈ ಸೈಕಲ್ ಯಾತ್ರೆಯು ಸುಮಾರು ೨೦ ಹಳ್ಳಿಗಳಲ್ಲಿ ಉಚಿತ ಶಿಬಿರಗಳು ಮತ್ತು ಉಚಿತ ಆಯುರ್ವೇದ ಔಷಧಿ ವಿತರಣೆಯನ್ನು ಒಳಗೊಂಡಿತ್ತು. ಇವರು ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾದರು. ಒರಿಸ್ಸಾ ಚಂಡಮಾರುತದ ಸಮಯದಲ್ಲಿ, 10 ವೈದ್ಯರ ತಂಡದೊಂದಿಗೆ 15 ದಿನಗಳ ಶಿಬಿರದಲ್ಲಿ ಭಾಗವಹಿಸಿದರು.
    ಸುನಾಮಿಯ ಸಮಯದಲ್ಲಿ ವೈದ್ಯಕೀಯ ಪರಿಹಾರ ಶಿಬಿರದಲ್ಲಿ 10 ದಿನಗಳ ಕಾಲ ಸೇವೆ ಸಲ್ಲಿಸಿದರು. 600ಕ್ಕೂ ಅಧಿಕ ಉಚಿತ ಶಿಬಿರಗಳನ್ನು ನಡೆಸಿದ್ದಾರೆ, ಟಿವಿ ಸಂದರ್ಶನಗಳನ್ನು ನೀಡಿದ್ದಾರೆ, ಕರ್ನಾಟಕದ ಪ್ರಮುಖ ಪತ್ರಿಕೆಗಳಲ್ಲಿ ಲೇಖನಗಳನ್ನು ಪ್ರಕಟಿಸಿದ್ದಾರೆ.

    3000 ಕ್ಕೂ ಅಧಿಕ ಔಷಧೀಯ ಸಸ್ಯಗಳನ್ನು ನೆಟ್ಟು ಆರೋಗ್ಯ ರಕ್ಷಣೆಯ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿದವರು ಇವರು. ಬೆಂಗಳೂರು, ಹುಬ್ಬಳ್ಳಿ ಮತ್ತು ಶಿವಮೊಗ್ಗ ಸೇರಿದಂತೆ ಕರ್ನಾಟಕದ ಸುಮಾರು 25 ಜಿಲ್ಲೆಗಳಲ್ಲಿ ಉಚಿತ ಶಿಬಿರಗಳನ್ನು ನಡೆಸಿ 1000 ಕ್ಕೂ ಹೆಚ್ಚು ರೋಗಿಗಳ ಪಾಲಿಗೆ ಆಪದ್ಬಾಂಧವ ಎನಿಸಿಕೊಂಡಿದ್ದಾರೆ.

    ಇವರ ಮಾರ್ಗದರ್ಶನದಲ್ಲಿ ನಡೆಯುವ ‘ವಿಶೇಷ ಪಂಚಗವ್ಯ ಚಿಕಿತ್ಸಾ ಶಿಬಿರ’ದಲ್ಲಿ‌ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಅದರ ಪ್ರಯೋಜನ ಪಡೆಯುವಂತೆ ಅಮೃತಧಾರಾ ಗೋ ಶಾಲಾ ಸಮಿತಿ ಸಾರ್ವಜನಿಕರಲ್ಲಿ ವಿನಂತಿಸಿದೆ.p

  • ಟೆಂಪೋಗೆ ಹಿಂದಿನಿಂದ ಬಂದು ಗುದ್ದಿದ ಲಾರಿ – ಓರ್ವನಿಗೆ ಪೆಟ್ಟು

    ಟೆಂಪೋಗೆ ಹಿಂದಿನಿಂದ ಬಂದು ಗುದ್ದಿದ ಲಾರಿ – ಓರ್ವನಿಗೆ ಪೆಟ್ಟು

    ಭಟ್ಕಳ : ಭಟ್ಕಳದಿಂದ ಹೊನ್ನಾವರ ಕಡೆ ಚಲಿಸುತ್ತಿದ್ದ ಟೆಂಪೋಗೆ ಹಿಂದಿನಿoದ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಟೆಂಪೊದಲ್ಲಿದ್ದ ಪ್ರಯಾಣಿಕನೋರ್ವ ಗಾಯಗೊಂಡಿರುವ ಘಟನೆ ಬೈಲೂರು ಕ್ರಾಸಿನ ಬಳಿ ನಡೆದಿದೆ.

    ಹೊನ್ನಾವರ ಮಂಕಿಯ ಸಿಂಗಾಣಿ ಹಿತ್ಲುವಿನ ಅಣ್ಣಪ್ಪ ನಾಯ್ಕ ಅವರು ಫೆ ೨೫ರಂದು ತಮ್ಮ ಟೆಂಪೋ ಓಡಿಸುತ್ತಿದ್ದರು. ಭಟ್ಕಳದಿಂದ ಹೊನ್ನಾವರ ಕಡೆ ಬರುತ್ತಿದ್ದ ಟೆಂಪೋ ಬೈಲೂರು ಕ್ರಾಸಿನ ಬಳಿ ನಿಂತಿತು. ಅಲ್ಲಿ ಇಳಿಯಬೇಕಾದ ಪ್ರಯಾಣಿಕರು ಇಳಿದಿದ್ದರು. ಟೆಂಪೋ ಹತ್ತುವ ಪ್ರಯಾಣಿಕರು ಕಾಯುತ್ತಿದ್ದರು.

    ಈ ವೇಳೆ ಕೇರಳದ ಲಾರಿ ರಸ್ತೆ ಅಂಚಿನಲ್ಲಿ ನಿಂತಿದ್ದ ಟೆಂಪೋಗೆ ಹಿಂದಿನಿಂದ ಡಿಕ್ಕಿ ಹೊಡೆದರು. ಪರಿಣಾಮ ಟೆಂಪೊದಲ್ಲಿದ್ದ ಹೊನ್ನಾವರ ಮಂಕಿಯ ನರೇಂದ್ರ ಗೌಡ ಗಾಯಗೊಂಡಿದ್ದು, ಈ ಬಗ್ಗೆ ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

  • ಉತ್ತರಕನ್ನಡದ ಜನರೇ ಎಚ್ಚರ..!

    ಉತ್ತರಕನ್ನಡದ ಜನರೇ ಎಚ್ಚರ..!

    ಕಾರವಾರ : ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ನಾಳೆ, ನಾಡಿದ್ದು ಎರಡು ದಿನ ಗರಿಷ್ಠ ತಾಪಮಾನ ದಾಖಲಾಗಲಿದ್ದು ಎಚ್ಚರಿಕೆ ವಹಿಸುವಂತೆ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸೂಚನೆ ನೀಡಿದೆ.

    ಉತ್ತರ ಕನ್ನಡ ಜಿಲ್ಲೆಯನ್ನು ಒಳಗೊಂಡು ಕರಾವಳಿ ಜಿಲ್ಲೆ ಮತ್ತು ರಾಜ್ಯದ ಇತರ ಭಾಗಗಳಲ್ಲಿ ಫೆಬ್ರವರಿ 27 ರಂದು ಬಿಸಿಲಿನ ಗಾಳಿ ಬೀಸಲಿದೆ. ಸಾರ್ವಜನಿಕರು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕೆಂದು ಸೂಚಿಸಲಾಗಿದೆ.

    ಈ ನಡುವೆ, ಜಿಲ್ಲೆಯಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಕಳೆದ ಎರಡು ದಿನಗಳಿಂದ ಜಿಲ್ಲೆಗಳಲ್ಲಿ ತಾಪಮಾನ ಹೆಚ್ಚಾಗಿದೆ. ಇದಲ್ಲದೆ, ಬಿಸಿಗಾಳಿ ಎಚ್ಚರಿಕೆ ಕೂಡಾ ನೀಡಲಾಗಿದೆ.

    ಉತ್ತರ ಕನ್ನಡ ಜಿಲ್ಲೆಯಲ್ಲಿ ಮುಂದಿನ ಎರಡು ದಿನಗಳ ಕಾಲ ಬಿಸಿಗಾಳಿಯ ಪರಿಸ್ಥಿತಿಗಳು ಉಂಟಾಗುವ ಸಾಧ್ಯತೆಗಳಿವೆ ಈ ಹಿನ್ನೆಲೆಯಲ್ಲಿ, ಉತ್ತರ ಕನ್ನಡ ಜಿಲ್ಲೆಯ ನಾಗರಿಕರಿಗೆ ಈ ಕೆಳಗೆ ಸೂಚಿಸಲಾಗಿರುವ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ತಿಳಿಸಲಾಗಿದೆ.

    ಯಾವೇಲ್ಲಾ ಕ್ರಮ ತೆಗೆದುಕೊಳ್ಳಬೇಕು.

    ಮಧ್ಯಾಹ್ನ 12.00 ರಿಂದ 3.00 ರವರೆಗೆ ಬಿಸಿಲಿನಲ್ಲಿ ಹೋಗುವುದನ್ನು ತಪ್ಪಿಸಬೇಕಿದೆ.. ಹೆಚ್ಚಾಗಿ ಬಾಯಾರಿಕೆ ಇಲ್ಲದಿದ್ದರೂ ಸಹ ಸಾಕಷ್ಟು ನೀರು ಕುಡಿಯಬೇಕು. ಸಾಧ್ಯವಾದಷ್ಟು ಹಗುರವಾದ. ತಿಳಿ ಬಣ್ಣದ, ಸಡಿಲವಾದ ಮತ್ತು ರಂಧ್ರವಿರುವ ಹತ್ತಿ ಬಟ್ಟೆಗಳನ್ನ ಉಪಯೋಗಿಸಬೇಕಿದೆ.

    ಬಿಸಿಲಿನಲ್ಲಿ ಹೋಗುವಾಗ ರಕ್ಷಣಾತ್ಮಕ ಕನ್ನಡಕಗಳು, ಛತ್ರಿ/ಟೋಪಿ, ಬೂಟುಗಳು ಅಥವಾ ಚಪ್ಪಲ್ ಗಳನ್ನು ಬಳಸುವುದು ಉತ್ತಮ. ಹೊರಗಿನ ತಾಪಮಾನ ಹೆಚ್ಚಿರುವಾಗ ಶ್ರಮದಾಯಕ ಚಟುವಟಿಕೆಗಳನ್ನು ತಪ್ಪಿಸಬೇಕು. ಹೊರಗೆ ಕೆಲಸ ಮಾಡುತ್ತಿದ್ದರೆ, ಟೋಪಿ ಅಥವಾ ಛತ್ರಿ ಬಳಸಬೇಕು. ಮತ್ತು ತಲೆ, ಕುತ್ತಿಗೆ, ಮುಖ ಮತ್ತು ಕೈಕಾಲುಗಳ ಮೇಲೆ ಒದ್ದೆಯಾದ ಬಟ್ಟೆಯನ್ನು ಇಟ್ಟುಕೊಳ್ಳಬೇಕು. ನಿಲ್ಲಿಸಿದ ವಾಹನಗಳಲ್ಲಿ ಮಕ್ಕಳನ್ನು ಅಥವಾ ಸಾಕುಪ್ರಾಣಿಗಳನ್ನು ಬಿಡದಂತೆ ನೋಡಿಕೊಳ್ಳಬೇಕು. ಮೂರ್ಛೆ ಅಥವಾ ಅನಾರೋಗ್ಯ ಅನಿಸಿದರೆ, ತಕ್ಷಣ ವೈದ್ಯರನ್ನು ಭೇಟಿ ಮಾಡುವುದು ಒಳ್ಳೆಯದು‌. ORS. ಮನೆಯಲ್ಲಿ ತಯಾರಿಸಿದ ಪಾನೀಯಗಳಾದ ಲಸ್ಸಿ. ನಿಂಬೆ ನೀರು, ಮಜ್ಜಿಗೆ ಇತ್ಯಾದಿಗಳನ್ನು ಬಳಸಿ ದೇಹವನ್ನು ಮರು-ಬಲೀಕರಣ ಮಾಡಲು ಸಹಾಯ ಮಾಡುತ್ತದೆ.

    ಪ್ರಾಣಿಗಳನ್ನು ನೆರಳಿನಲ್ಲಿ ಇರಿಸಿ ಮತ್ತು ಅವುಗಳಿಗೆ ಕುಡಿಯಲು ಸಾಕಷ್ಟು ನೀರು ನೀಡಬೇಕು. ಮನೆಯನ್ನು ತಂಪಾಗಿ ಇಟ್ಟುಕೊಳ್ಳಬೇಕು. ಪರದೆಗಳು, ಶಟರ್‌ಗಳು ಅಥವಾ ಸನ್‌ಶೇಡ್‌ಗಳನ್ನು ಬಳಸಿ ಮತ್ತು ರಾತ್ರಿಯಲ್ಲಿ ಕಿಟಕಿಗಳನ್ನು ತೆರದಿಟ್ಟುಕೊಳ್ಳಬೇಕು.

  • ಕಿರಣ ಭಟ್ ಅವರ ಹೌಸ್ ಫುಲ್ ಕೃತಿ ಬಿಡುಗಡೆ

    ಕಿರಣ ಭಟ್ ಅವರ ಹೌಸ್ ಫುಲ್ ಕೃತಿ ಬಿಡುಗಡೆ

    ಹೊನ್ನಾವರ: ಸದ್ದಿಲ್ಲದೆ ಸಂವಿಧಾನವನ್ನು ಬದಲಿಸಲು ಪ್ರಯತ್ನಿಸುತ್ತಿರುವ ಹಿನ್ನೆಲೆಯಲ್ಲಿ ವಿಚಾರವಂತಿಕೆಯನ್ನು ರಕ್ಷಿಸಿಕೊಳ್ಳಬೇಕಾದ ಅವಶ್ಯಕತೆ ಇದೆ ಎಂದು ಹಿರಿಯ ಪತ್ರಕರ್ತರಾದ ಜಿ ಯು ಭಟ್ ಅವರು ಅಭಿಪ್ರಾಯಪಟ್ಟರು.

    ಚಿಂತನ ಉತ್ತರಕನ್ನಡ, ಚಿಂತನ ರಂಗ ಅಧ್ಯಯನ ಕೇಂದ್ರ ಹಾಗೂ ಪ್ರೀತಿಪದ ಹೊನ್ನಾವರದಲ್ಲಿ ಇಂದು ಹಮ್ಮಿಕೊಂಡಿದ್ದ, ಬಹುರೂಪಿಯ ಪ್ರಕಟಣೆ, ರಂಗಕರ್ಮಿ ಕಿರಣ ಭಟ್ ಅವರ ಹೌಸ್ ಫುಲ್ ರಂಗಕೃತಿ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ರಂಗಭೂಮಿ ಸದಾ ಜೀವಂತವಾದದ್ದು. ಚಲನಶೀಲತೆಯನ್ನು ಉಳ್ಳದ್ದು. ಈ ರಂಗಭೂಮಿ ಜನರ ಮನಸ್ಸಿನ ಕನ್ನಡಿ. ಹಾಗಾಗಿಯೇ ರಂಗಭೂಮಿ ಬದಲಾವಣೆಯನ್ನು ಪ್ರೇರೇಪಿಸುತ್ತದೆ.

    ಕಿರಣ್ ಭಟ್ ಅವರ ಹೌಸ್ ಫುಲ್ ಕೃತಿ ಬಿ ವಿ ಕಾರಂತರ ನಂತರ ನಡೆಯುತ್ತಿರುವ ಹವ್ಯಾಸಿ ರಂಗಭೂಮಿಯ ಚಟುವಟಿಕೆಗಳನ್ನು ಹಿಡಿದಿಟ್ಟಿದೆ. ರಂಗ ಕೈರಳಿ ಕೃತಿಯ ಮೂಲಕ ಓದುಗರ ಮನ ಗೆದ್ದ ಕಿರಣ್ ಈಗ ರಂಗ ವಿಮರ್ಶೆಯ ಮೂಲಕ ರಂಗ ಚರಿತ್ರೆಯನ್ನು ದಾಖಲಿಸಿದ್ದಾರೆ ಎಂದರು.

    ಪತ್ರಕರ್ತ, ಬಹುರೂಪಿಯ ಜಿ ಎನ್ ಮೋಹನ್ ಅವರು ಮಾತನಾಡಿ ಪ್ರಶ್ನೆ ಕೇಳುವುದನ್ನು ಸಾಹಿತ್ಯವಾಗಲೀ, ರಂಗಭೂಮಿಯಾಗಲೀ ಪ್ರೇರೇಪಿಸುತ್ತದೆ. ಈ ಕಾರಣಕ್ಕಾಗಿಯೇ ವ್ಯವಸ್ಥೆ ಈ ಎರಡೂ ಲೋಕವನ್ನು ಅಸ್ಥಿರಗೊಳಿಸುವ ಪ್ರಯತ್ನ ನಡೆಸುತ್ತಿದೆ ಎಂದರು.

    ರಂಗಭೂಮಿ ಈ ಮೊದಲಿನಿಂದಲೂ ಬದಲಾವಣೆಯ ಅಸ್ತ್ರ. ಹೀಗಾಗಿ ರಂಗಭೂಮಿ ಜಡತ್ವವನ್ನು, ಪ್ರಗತಿ ವಿರೋಧಿ ಮನಸ್ಸುಗಳನ್ನು ಪ್ರಶ್ನಿಸುತ್ತದೆ ಎಂದರು.

    ಕೃತಿ ಬಿಡುಗಡೆ ಮಾಡಿದ ದೀಪಾ ಹಿರೇಗುತ್ತಿ ಅವರು ಓದುವ ಸಂಸ್ಕೃತಿಯನ್ನು ಇನ್ನಷ್ಟು ವ್ಯಾಪಕವಾಗಿ ಬೆಳಸಬೇಕಾದ ಅಗತ್ಯವಿದೆ. ಓದುವ ಮನಸ್ಸುಗಳು ಎಂದಿಗೂ ಸಕಾರಾತ್ಮಕವಾಗಿ ಕಟ್ಟುವ ಕೆಲಸವನ್ನು ಮಾಡುತ್ತದೆ. ಓದು ವ್ಯಾಪಕವಾಗಲು ಚಿಂತನ ನಡೆಸಿದ ಪ್ರಯೋಗಗಳು ಇಡೀ ರಾಜ್ಯಕ್ಕೆ ಮಾದರಿ ಎಂದರು

    ಕೃತಿ ಕುರಿತು ಸಮಾಜ ವಿಜ್ಞಾನಿ ಡಾ. ಪ್ರಕಾಶ್ ಭಟ್ ಮಾತನಾಡಿದರು. ಕೃತಿಕಾರ ಕಿರಣ್ ಭಟ್ ಅವರು ತಾವು ರಂಗಭೂಮಿಯಲ್ಲಿ ಸಾಗಿ ಬಂದ ಹಿನ್ನೆಲೆಯನ್ನು ವಿವರಿಸಿದರು. ಪ್ರೀತಿಪದದ ಯಮುನಾ ಗಾಂವ್ಕರ್ ಕಾರ್ಯಕ್ರಮ ನಿರ್ವಹಿಸಿದರು. ಮಾಸ್ತಿಗೌಡ ವಂದಿಸಿದರು.ಮಾಧವಿ ಭಂಡಾರಿ ರಂಗಗೀತೆ ಹಾಡಿದರು.

  • ತಪ್ಪು ಸಂದೇಶ ರವಾನಿಸಿದರೆ ಬೀಳಲಿದೆ ಕೇಸ್ : ಸಾಮಾಜಿಕ ಸ್ವಾಸ್ಥ್ಯ ಕೆಡಿಸದಿರಿ – ಎಸ್.ಪಿ ಎಚ್ಚರಿಕೆ.

    ತಪ್ಪು ಸಂದೇಶ ರವಾನಿಸಿದರೆ ಬೀಳಲಿದೆ ಕೇಸ್ : ಸಾಮಾಜಿಕ ಸ್ವಾಸ್ಥ್ಯ ಕೆಡಿಸದಿರಿ – ಎಸ್.ಪಿ ಎಚ್ಚರಿಕೆ.

    ಹೊನ್ನಾವರ : ಜಿಲ್ಲೆಯ ಅಂಕೋಲಾದ ಕೇಣಿ ಬಂದರು ಹಾಗೂ ಹೊನ್ನಾವರ ಟೊಂಕಾ ಕಾಮಗಾರಿಯ ಬಗ್ಗೆ ಸ್ಥಳೀಯ ಮೀನುಗಾರರು ಪ್ರತಿಭಟನೆ ನಡೆಸುತ್ತಿದ್ದು, ನಿಷೇಧಾಜ್ಞೆಯನ್ನೂ ಜಾರಿಮಾಡಲಾಗಿದೆ. ಆದರೆ ಮೀನುಗಾರರಿಗೆ ಕೆಲವರು ತಪ್ಪು ಸಂದೇಶ ರವಾನಿಸುತ್ತಿದ್ದಾರೆ. ಜನರ ದಿಕ್ಕು ತಪ್ಪಿಸುವ ಪ್ರಯತ್ನವನ್ನು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಮಾಡುತ್ತಿದ್ದು, ಅಂತವರ ಮೇಲೆ ಪೊಲೀಸ್ ಇಲಾಖೆ ಹದ್ದಿನ ಕಣ್ಣಿಟ್ಟಿದೆ. ಜೊತೆಗೆ ಅಂತವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಪೊಲೀಸ್ ವರಿಷ್ಠಾಧಿಕಾರಿ ಎಂ. ನಾರಾಯಣ್ ಖಡಕ್ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

    ಬಂದರು ಕಾಮಗಾರಿಯಿಂದ ಅಷ್ಟು ಮನೆ ಹೋಗಲಿದೆ, ಇಷ್ಟು ಭೂಮಿ ಕಸಿದುಕೊಳ್ಳಲಿದ್ದಾರೆ, ಪರಿಹಾರ ಸಿಗುವುದಿಲ್ಲ ಹೀಗೆ ಇನ್ನಿತರ ಸುಳ್ಳು ಸುದ್ದಿಗಳನ್ನು ಶೋಷಿಯಲ್ ಮೀಡಿಯಾ, ವಾಟ್ಸಾಪ್ ಗ್ರೂಪ್ ಗಳಲ್ಲಿ ಹರಿಬಿಡಲಾಗುತ್ತಿದೆ ಎನ್ನಲಾಗಿದ್ದು, ಈ ಬಗ್ಗೆ ಇಲಾಖೆ ಕ್ರಮಕ್ಕೆ ಮುಂದಾಗುವ ಸೂಚನೆಯನ್ನು ಅವರು ನೀಡಿದ್ದಾರೆ.

    ಪ್ರತಿಭಟನಾ ನಿರತರಿಗೆ ತಪ್ಪು ಸಂದೇಶ ನೀಡುತ್ತಿರುವುದು ಕಂಡುಬಂದಿದೆ,ಸಾಮಾಜಿಕ ಮಾಧ್ಯಮದಲ್ಲಿ ತಪ್ಪು ಸಂದೇಶ ಬಿತ್ತರಿಸಯವ, ಸಾಮಾಜಿಕ ಸ್ವಾಸ್ಥ್ಯ ಹಾಳು ಮಾಡುವವರಿಗೆ ಎಸ್ಪಿ ಎಂ ನಾರಾಯಣ್ ಖಡಕ್ ವಾರ್ನಿಂಗ್ ನೀಡಿದ್ದು, ಶೋಷಿಯಲ್ ಮೀಡಿಯಾ ಹಾಗೂ ಇನ್ನಿತರ ಮಾರ್ಗವಾಗಿ ತಪ್ಪು ಸಂದೇಶ ರವಾನಿಸುತ್ತಿರುವವರ ವಿರುದ್ಧ ತಕ್ಷಣ ಎಫ್ ಐ ಆರ್ ದಾಖಲಿಸುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

    ಹಾಗೆಯೇ ಸುಳ್ಳು ಮಾಹಿತಿ ನೀಡಿ ಪ್ರತಿಭಟನೆಗೆ ಪ್ರಚೋದನೆ ನೀಡುತ್ತಿರುವ 150 ಕ್ಕೂ ಅಧಿಕ ಮಂದಿಯನ್ನು ಗುರುತಿಸಲಾಗಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಲಿದ್ದಾರೆ ಎನ್ನಲಾಗಿದೆ.

  • ನಾಳೆಯಿಂದ ಹೊಸಾಡದಲ್ಲಿ ಆಲೆಮನೆ ಹಬ್ಬ ಪ್ರಾರಂಭ : ಮಾ. ೧ ರಂದು ಗೋ ಸಂಧ್ಯಾ.

    ನಾಳೆಯಿಂದ ಹೊಸಾಡದಲ್ಲಿ ಆಲೆಮನೆ ಹಬ್ಬ ಪ್ರಾರಂಭ : ಮಾ. ೧ ರಂದು ಗೋ ಸಂಧ್ಯಾ.

    ಕುಮಟಾ : ತಾಲೂಕಿನ ಮೂರೂರಿನ ಹೊಸಾಡಿನಲ್ಲಿರುವ ಅಮೃತಧಾರಾ ಗೋ ಶಾಲೆಯ ಆವಾರದಲ್ಲಿ ಫೇ. ೨೭ ರಿಂದ ಮಾ.೨ ರವರೆಗೆ “ಆಲೆಮನೆ ಹಬ್ಬ” ಹಮ್ಮಿಕೊಳ್ಳಲಾಗಿದೆ ಎಂದು ಗೋಶಾಲೆ ಸಮಿತಿ ಹಾಗೂ ಗೋ ಸಂಧ್ಯಾ ಸಮಿತಿಯವರು ಜಂಟಿ ಪ್ರಕಟಣೆ ನೀಡಿದ್ದಾರೆ.

    ಈ ದಿನಗಳಲ್ಲಿ ಸಾಂಪ್ರದಾಯಿಕ ಆಲೆಮನೆ ಹಬ್ಬ, ಕಬ್ಬಿನ ಹಾಲಿನ ವಿವಿಧೋತ್ಪನ್ನ ಮಾರಾಟ ಗೋಗ್ರಾಸ ಸೇವೆ, ಗವ್ಯೋತ್ಪನ್ನ ಮಾರಾಟ, ಗೋ ಸಂತರ್ಪಣೆ, ವಾರ್ಷಿಕ ಸಭೆ, ಗೋಸಂಧ್ಯಾ, ಗೋಪಾಲ ಗೌರವ, ದೇಶೀ ಗೋತಳಿ ವೈಭವ, ಗೋ ಪೂಜೆ, ಗೋ ದಾನ, ಪ್ರತೀ ದಿನ ಕಾಮಧೇನು ಯಾಗ, ವಿಶೇಷವಾಗಿ ಈ ವರ್ಷ ಗೋಆರತಿ ಎಂಬ ವಿಶಿಷ್ಟ ಕಾರ್ಯಕ್ರಮ. ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.

    ಫೇ. ೨೭ ರಂದು ಗೋ ಪ್ರೇಮಿ ಮಾತೆಯರ ದಿನ, 28 ರಂದು ಗೋ ಪ್ರೇಮಿ ಮಕ್ಕಳ ದಿನ, ಮಾ. 01 ರಂದು ಭಾರತೀಯ ಗೋ ಬ್ಯಾಂಕ್ ವಾಟ್ಸಾಪ್ ಬಳಗದ ದಿನ, 02 ರಂದು ಗೋ ಪ್ರೇಮಿ ಹಿರಿಯ ನಾಗರಿಕರ ದಿನ ನಡೆಯಲಿದ್ದು ಡಾ. ಡಿ.ಪಿ. ರಮೇಶ್ ಅವರ ಉಪಸ್ಥಿತಿಯಲ್ಲಿ ‘ವಿಶೇಷ ಪಂಚಗವ್ಯ ಚಿಕಿತ್ಸಾ ಶಿಬಿರ’ಮತ್ತು ಅವರಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ.

    ಗೋ ಸಂಧ್ಯಾ ಕಾರ್ಯಕ್ರಮ

    ಮಾ.೧ ರ ಶನಿವಾರ “ಗೋ ಸಂಧ್ಯಾ” ಕಾರ್ಯಕ್ರಮ ಆಯೋಜಿಸಲಾಗಿದೆ. ಕುಮಟಾ- ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ ದಿನಕರ ಕೆ. ಶೆಟ್ಟಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಮ್. ನಾರಾಯಣ, ಹೊನ್ನಾವರ ಉಪ ಅರಣ್ಯ ಸಂರಕ್ಷಣಾಧಿಕಾರಿ ಯೋಗೀಶ್ ಸಿ.ಕೆ., ಮೈಸೂರು ಡೆವಲಪ್‌ಮೆಂಟ್ ಸೆಂಟರ್ ನ ಪ್ರಮುಖ ವಿನಾಯಕ ಪಿ. ಹೆಗಡೆ, ನಿವೃತ್ತ ವಿಜ್ಞಾನಿ ಪ್ರಭಾಕರ ಜೆ. ಭಟ್ಟ, ಜಿ.ಪಂ ಮಾಜಿ ಸದಸ್ಯ ಪ್ರದೀಪ ನಾಯಕ ಉಪಸ್ಥಿತಿಯಲ್ಲಿ ಸಭಾ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ, ಕಾಮಧೇನು ಪ್ರಸಾದ ಭೋಜನ ನಡೆಯಲಿದೆ.

    ಗೋವಿನ ಉಳಿವಿನ ಹೊಸ ಪರಿಕಲ್ಪನೆಯೊಂದಿಗೆ ಈ ಕಾರ್ಯಕ್ರಮ‌ ಸಂಯೋಜನೆಗೊಂಡಿದ್ದು ನಾಲ್ಕು ದಿನಗಳ ಕಾಲ ಈ ಆಲೆಮನೆ ಹಬ್ಬ ನಡೆಯಲಿದೆ. ಪ್ರತಿದಿನ ಮಧ್ಯಾಹ್ನ 4 ಗಂಟೆಯಿಂದ ಆಲೆಮನೆ ಹಬ್ಬ ಪ್ರಾರಂಭವಾಗುತ್ತಿದ್ದು ಸಂಜೆ 5:30 ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.

    ಒಂದೇ ವೇದಿಕೆಯಲ್ಲಿ ಎರಡು ಕಬ್ಬಿನಗಾಣದ ಮಧ್ಯೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಇದರೊಂದಿಗೆ ಕೃಷಿ ಸಹಾಯಕ ಉಪಕರಣಗಳು ಮಾರಾಟ, ಗವ್ಯೋತ್ಪನ್ನಗಳ ಮಾರಾಟ, ಕರಕುಶಲ ಉತ್ಪನ್ನಗಳ ಮಾರಾಟ, ಕಬ್ಬಿನ ಹಾಲಿನ ಮಾರಾಟ, ಬಹು ಜನರ ಬೇಡಿಕೆಯ ತೊಡಾದೇವು, ಬೆಲ್ಲದ ಬಾಳೆದಿಂಡು, ಪಪ್ಪಾಯಿ ಬಾಳೆದಿಂಡು, ಬೆಲ್ಲ , ಕಬ್ಬಿನ ಹಾಲಿನ ಉತ್ಪನ್ನಗಳ ಮಾರಾಟ ನಡೆಯಲಿದೆ.

    ಯಾವುದೇ ನಿರ್ದಿಷ್ಟ ಆದಾಯವಿಲ್ಲದೇ ಅಂದಾಜು 300 ಗೋವುಗಳನ್ನು ಸಂರಕ್ಷಿಸುತ್ತಿರುವ ಅಮೃತಧಾರ ಗೋಶಾಲೆ ಹೊಸಾಡು ಅನಾಥ, ಅಪಘಾತಕ್ಕೀಡಾದ, ಕಸಾಯಿಖಾನೆಯಿಂದ ರಕ್ಷಿಸಲ್ಪಟ್ಟ, ವಯಸ್ಸಾದ ಗೋವುಗಳ ಪಾಲನೆ ಜೊತೆಯಲ್ಲಿ ಭಾರತೀಯ ಗೋ ತಳಿ ಸಂರಕ್ಷಣೆಯನ್ನು ಮಾಡುತ್ತಿದ್ದು ಆಲೆಮನೆ ಹಬ್ಬದ ಸಂಪೂರ್ಣ ಆದಾಯವನ್ನು ಗೋವಿನ ನಿರ್ವಹಣೆಗೆ ವಿನಿಯೋಗಿಸುವ ವಿನೂತನ ಯೋಜನೆ ಇದಾಗಿದೆ. ಇದರ ಜೊತೆಯಲ್ಲಿ ಆಧುನಿಕ ಭರಾಟೆಗೆ ಪಾರಂಪರಿಕ ಸಂಸ್ಕೃತಿ ನಶಿಸುತ್ತಿದ್ದು ಎಲ್ಲಾ ಗೋಪ್ರೇಮಿಗಳನ್ನು ಒಂದೆಡೆ ಸೇರಿಸಿ ಮುಂದಿನ ಪೀಳಿಗೆಗೆ ಗೋ ಸಂರಕ್ಷಣೆಯ ಜಾಗೃತಿ ಪಡಿಸುವ, ಪ್ರಾಚೀನ ಪರಂಪರೆಯನ್ನು ನೆನಪಿಸುವ, ಗೋವಿಗೆ ಸಂತರ್ಪಣೆಗೈಯುವ ಸದಾವಕಾಶ ಕಲ್ಪಿಸುವುದು ಇದರ ಉದ್ದೇಶವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • ಬಲೆ ಬೀಸಲು ಹೋದ ಯುವಕ ನೀರುಪಾಲು

    ಬಲೆ ಬೀಸಲು ಹೋದ ಯುವಕ ನೀರುಪಾಲು

    ಕೋಟೇಶ್ವರ : ಹಳೆಅಳಿವೆ ಬಳಿ ಯುವಕನೊರ್ವ ಸಮುದ್ರದಲ್ಲಿ ಮರಣಬಲೆ ಬಿಡಲು ಹೋಗಿ ಸಮುದ್ರದ ಅಲೆಗೆ ಸಿಲುಕಿ ಮೃತಪಟ್ಟ ಘಟನೆ ಫೆ. 25 ರಂದು ಮಂಗಳವಾರ ಬೆಳಿಗ್ಗೆ ಸಂಭವಿಸಿದೆ. ಮೃತಯುವಕ ಬೀಜಾಡಿ ಪೆಟ್ನಿ ಮನೆ ಕುಮಾರ್ ಅವರ ಪುತ್ರ ಮೇಘರಾಜ್ (24) ಎಂದು ಗುರುತಿಸಲಾಗಿದೆ.

    ಮೇಘರಾಜ್ ಅವರು ಬೆಳಿಗ್ಗೆ ಹಳಿಅಳಿವೆ ಬಳಿ ಸಮುದ್ರದಲ್ಲಿ ಮರಣಬಲೆ ಬಿಡಲೆಂದು ಹೋದ ಸಂದರ್ಭ ಸಮುದ್ರದ ಅಲೆಗೆ ಸಿಲುಕಿ ನೀರುಪಾಲಗಿದ್ದು ಸಂಜೆ ವೇಳೆ ಬೀಜಾಡಿ ಸಮೀಪ ಕಡಲ ಎಡಭಾಗದಲ್ಲಿ ಮೃತದೇಹ ದಡ ಸೇರಿರುತ್ತದೆ.

    ತಕ್ಷಣ ಸ್ಥಳಕ್ಕಾಗಮಿಸಿದ ಕರಾವಳಿ ಕಾವಲು ಪಡೆ ಸಿಬ್ಬಂದಿಗಳು ಮೃತದೇಹವನ್ನು ಪರಿಶೀಲಿಸಿ ಮರಣೋತ್ತರ ಪರೀಕ್ಷೆಗೆ ಕಳಿಸಿದರು.