Satwadhara News

Author: satwawriter

  • ನಿಷೇದಾಜ್ಞೆ ಮುಂದುವರಿಸಿ ಜಿಲ್ಲಾಧಿಕಾರಿ ಆದೇಶ

    ನಿಷೇದಾಜ್ಞೆ ಮುಂದುವರಿಸಿ ಜಿಲ್ಲಾಧಿಕಾರಿ ಆದೇಶ

    ಕಾರವಾರ : ಅಂಕೋಲಾ ತಾಲೂಕಿನ ಕೇಣಿ ಮತ್ತು ಹೊನ್ನಾವರ ತಾಲೂಕಿನ ಕಾಸರಕೋಡು ಗ್ರಾಮದಲ್ಲಿ ನಿಷೇದಾಜ್ಞೆ ಮುಂದುವರಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

    ಭಾವಿಕೇರಿ ಗ್ರಾಮ ಪಂಚಾಯತ ವ್ಯಾಪ್ತಿಯ ಗ್ರಾಮಗಳು ಮತ್ತು ಪುರಸಭೆ ಅಂಕೋಲಾ ವ್ಯಾಪ್ತಿಗೊಳಪಟ್ಟ ಕೇಣಿ ಗ್ರಾಮದಲ್ಲಿ ಭಾರತೀಯ ನಾಗರೀಕ ಸುರಕ್ಷಾ ಸಂಹಿತೆ ಕಾಯ್ದೆ 2023 ಕಲಂ 163 ರನ್ವಯ ಹೊರಡಿಸಲಾದ ನಿಷೇದಾಜ್ಞೆಯನ್ನು ಫೆ. 25 ರ ಸಂಜೆ 6 ಗಂಟೆಯಿoದ ಫೆ. 28 ರ ಸಂಜೆ 6 ಗಂಟೆಯವರೆಗೆ ಮುಂದುವರೆಸಿ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯ ಆದೇಶಿಸಿದ್ದು, ಆದೇಶದಲ್ಲಿ ವಿಧಿಸಲಾದ ನಿಬಂಧನೆಗಳು ಊರ್ಜಿತದಲ್ಲಿರುತ್ತದೆ ಎಂದು ತಿಳಿಸಿದ್ದಾರೆ.

    ಹೊನ್ನಾವರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ-66 ಹತ್ತಿರದಲ್ಲಿರುವ ಹಿರೇಮಠ ಸ್ಮಶಾನದಿಂದ ಕಾಸರಕೋಡ ಗ್ರಾಮದಲ್ಲಿ ಸಮುದ್ರಗುಂಟ ಇರುವ ರಸ್ತೆಯನ್ನು ಅಭಿವೃದ್ಧಿಪಡಿಸಿ ಬಂದರು ಅಭಿವೃದ್ಧಿ ಯೋಜನಾ ಸ್ಥಳದವರೆಗೆ ಹೋಗುವ ರಸ್ತೆ ಕಾಮಗಾರಿಯ ಸರ್ವೆ ಸಂಬoಧ ಸುತ್ತಲಿನ ಪ್ರದೇಶದಲ್ಲಿ ಭಾರತೀಯ ನಾಗರೀಕ ಸುರಕ್ಷಾ ಸಂಹಿತೆ ಕಾಯ್ದೆ 2023 ಕಲಂ 163 ರನ್ವಯ ಹೊರಡಿಸಲಾದ ನಿಷೇದಾಜ್ಞೆಯನ್ನು ಫೆ.25 ರ ರಾತ್ರಿ 9 ಗಂಟೆಯಿoದ ಫೆ.26 ರ ರಾತ್ರಿ 10 ಗಂಟೆಯವರೆಗೆ ಮುಂದುವರೆಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

  • ಕಡಲಿಗೆ ಇಳಿದು ಪ್ರತಿಭಟನೆ ನಡೆಸಿದ ಮೀನುಗಾರರು

    ಕಡಲಿಗೆ ಇಳಿದು ಪ್ರತಿಭಟನೆ ನಡೆಸಿದ ಮೀನುಗಾರರು

    ಹೊನ್ನಾವರ : ನಿನ್ನೆ ಅಂಕೋಲಾ ತಾಲೂಕಿನ ಕೇಣಿ ಗ್ರಾಮದಲ್ಲಿ ಬಂದರು ನಿರ್ಮಾಣ ವಿರೋಧಿಸಿ ಮೀನುಗಾರರ ತೀವ್ರ ಹೋರಾಟ ನಡೆಸಿದ್ದು, ಇಂದು ಹೊನ್ನಾವರ ತಾಲೂಕಿನ ಕಾಸರಕೋಡಿನಲ್ಲಿ ಬಂದರು ನಿರ್ಮಾಣದ ಸರ್ವೆ ಕಾರ್ಯ ವಿರೋಧಿಸಿ ಮೀನುಗಾರರು ಕಡಲಿಗೆ ಇಳಿದು ಪ್ರತಿಭಟನೆ ನಡೆಸಿದರು. ಇದರಿಂದಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ ನಿರ್ಮಾಣದ ವಿರುದ್ದ ಮೀನುಗಾರರ ಆಕ್ರೋಶ ಹೆಚ್ಚಾಗಿದೆ.

    ಬಂದರು ನಿರ್ಮಾಣದ ಮೂಲಕ ವ್ಯಾಪಾರ ವ್ಯವಹಾರ ವೃದ್ದಿ ಮಾಡಬೇಕು ಎನ್ನುವುದು ಸರ್ಕಾರದ ಚಿಂತನೆಯಾದರೆ ಇನ್ನೊಂದೆಡೆ ತಮ್ಮ ತುತ್ತ ಅನ್ನ ಸಂಪಾದನೆಯ ದುಡಿಮೆಯ ಸ್ಥಳ ಬಂದರಿಗೆ ಬಲಿಯಾಗಲಿದೆ ಎನ್ನುವ ಆತಂಕ ಮೀನುಗಾರಲ್ಲಿ ಉಂಟಾಗಿದೆ. ಮುಂದಿನ ದಿನದಲ್ಲಿ ಈ ಹೋರಾಟ ಯಾವ ಹಾದಿ ಹಿಡಿಯಲಿದೆ ಎನ್ನುವುದು ತಿಳಿಯದಾಗಿದೆ.

    ಹೊನ್ನಾವರ ಪೋರ್ಟ್ ಪ್ರೈವೇಟ್ ಲಿಮಿಟೆಡ್ ಕಂಪನಿ ವತಿಯಿಂದ ಸುಮಾರು 600ಕೋಟಿ ವೆಚ್ಚದಲ್ಲಿ ಬಂದರು ನಿರ್ಮಾಣಕ್ಕೆ ಮುಂದಾಗಿದ್ದು, ಇಂದು ಬಂದರು ರಸ್ತೆ ನಿರ್ಮಾಣ ಸಂಬಂಧ ಸರ್ವೆಗೆ ಜಿಲ್ಲಾಡಳಿತ ಮುಂದಾಗಿತ್ತು. ಮೀನುಗಾರರು ಪ್ರತಿಭಟನೆ ನಡೆಸದಂತೆ ಮುಂಚಿತವಾಗಿ ನಿಷೇದಾಜ್ಞೆ ಹೇರಿದ್ದು ನಿಷೇದಾಜ್ಞೆಗೂ ಲೆಕ್ಕಿಸದ ಮೀನುಗಾರರು ಶಾಲಾ ಮಕ್ಕಳನ್ನ ಕರೆದುಕೊಂಡು ಬಂದು ಪ್ರತಿಭಟನೆಗೆ ಮುಂದಾಗಿದ್ದರು.

    ಮೀನಗಾರರ ಪ್ರತಿಭಟನೆ ಹಿನ್ನಲೆಯಲ್ಲಿ ಸುಮಾರು 50ಕ್ಕೂ ಅಧಿಕ ಮೀನುಗಾರರನ್ನ ಪೊಲೀಸರು ವಶಕ್ಕೆ ಪಡೆದಿದ್ದು, ವಶಕ್ಕೆ ಪಡೆದ ಮೀನುಗಾರರ ಬಿಡುಗಡೆ ಮಾಡುವಂತೆ ಉಳಿದವರು ಪ್ರತಿಭಟನೆ ಮುಂದುವರೆಸಿದ್ದರು.

    ಹೊನ್ನಾವರ ಬಂದರು ನಿರ್ಮಾಣ ಸಂಬಂಧ ಕಳೆದ ಮೂರ್ನಾಲ್ಕು ವರ್ಷದಿಂದ ಹೋರಾಟ ನಡೆಯುತ್ತಲೇ ಇದೆ. ಇಂದು ಬಂದರು ನಿರ್ಮಾಣ ಸಂಬಂಧ ಸರ್ವೆ ಕಾರ್ಯ ಮಾಡಲು ಮುಂದಾದ ವೇಳೆಯಲ್ಲಿ ಮೀನುಗಾರರು ದೊಡ್ಡ ಮಟ್ಟದಲ್ಲಿಯೇ ಪ್ರತಿಭಟನೆಗೆ ಮುಂದಾಗಿದ್ದರು. ಇನ್ನು ಕಡಲಿಗೆ ಇಳಿದು ಮೀನುಗಾರರು ಪ್ರತಿಭಟಿಸಿದ್ದು ಸುಮಾರು ನಾಲ್ವರು ಅಸ್ಥಸ್ಥಗೊಂಡು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

    ಬಂಧಿತರನ್ನು ಬಿಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವ ಬಗ್ಗೆ ಎಚ್ಚರಿಕೆ ನೀಡಿದ ಬಾಲಕಿ ಅಪೇಕ್ಷಾ

    ಕಾಸರಕೋಡ ಬಂದರು ನಲ್ಲಿ ವಾಣಿಜ್ಯ ಬಂದರು ನಿರ್ಮಾಣ ಸರ್ವೆ ನಡೆಯುತ್ತಿದ್ದು, ಅಲ್ಲಿನ ಮೀನುಗಾರರಿಗೆ ರಕ್ಣಣೆ ನೀಡ ಬೇಕು, ನಮ್ಮ ಸ್ಥಳದಲ್ಲಿ ಯಾವುದೇ ವಾಣಿಜ್ಯ ಬಂದರು ಮಾಡುವಂತಿಲ್ಲಾ ಎಂದು ಮೀನುಗಾರರು ಹೋರಾಟ ಮಾಡುತ್ತಿದ್ದರು. ಈ ಸಂದರ್ಭದಲ್ಲಿ 144 ಸೆಕ್ಷನ್ ಜಾರಿಯಲ್ಲಿದ್ದರೂ ಅಲ್ಲಿ ಮಿನುಗಾರರು ಸರ್ವೆ ಮಾಡಲು ಅಡ್ಡಿ ಪಡಿಸಿದ್ದಕ್ಕೆ ಅವರನ್ನು ಬಂದಿಸಲಾಗಿದೆ. ಆಗ ಕೆಲವು ಮೀನುಗಾರರು ಅತ್ಮ ಹತ್ಯೆಗೆ ಪ್ರಯತ್ನಿಸಿದ್ದು ಅವರ ಜೀವ ರಕ್ಷಣೆ ಮಾಡಲಾಗಿದೆ.

    ಬಂಧಿತ ಮೀನುಗಾರರನ್ನು 4 ಗಂಟೆ ಒಳಗೆ ಬಿಡದಿದ್ದರೆ ಅಪೇಕ್ಷಾ ಎಂಬ ಬಾಲಕಿ ಅತ್ಮಹತ್ಯೆ ಮಾಡಿಕೊಳ್ಳುವದಾಗಿ ತಿಳಿಸಿದ್ದಾರೆ. ನಮಗೆ ನ್ಯಾಯ ಬೇಕು, ಮೀನುಗಾರ ಸಚಿವರಾದ ಮಂಕಾಳ ವೈದ್ಯರು ನಮಗೆ ನಾಯ್ಯ ಕೊಡಿಸಬೇಕು. ಅವರು ಸಚಿವರಾಗುವ ಮೊದಲು ನಮಗೆ ಹೆಳಿದ್ದರು ಯಾವುದೆ ವಾಣಿಜ್ಯ ಬಂದರು ಅಗಲು ಬಿಡುವುದಿಲ್ಲಾ, ನಾನು ನಿಮ್ಮ ಜೊತೆ ಇರುತ್ತೇನೆ ಎಂದವರು ಇವತ್ತು ಇಷ್ಟೊಂದು ಅನ್ಯಾಯ ವಾಗುತ್ತಿದ್ದರೂ ಸಚಿವರು ಸ್ಥಳಕ್ಕೆ ಬರಲಿಲ್ಲಾ ನನ್ನ ಅತ್ಮ ಹತ್ಯೆಗೆ ವಾಣಿಜ್ಯ ಬಂದರು , ಜಿಲ್ಲಾಧಿಕಾರಿಗಳು. ಸಚಿವರಾದ ಮಂಕಾಳ ಎಸ್ ವೈದ್ಯರವರೇ ಕಾರಣ ಎಂದು ಅತ್ಮ ಹತ್ಯೆ ಮಾಡಿ‌ಕೊಳ್ಳುತ್ತೇವೆ ಎಂದು ಅಪೇಕ್ಷಾರವರು ಹೇಳಿದ್ದಾರೆ.

  • ಅಂತರಾಷ್ಟ್ರೀಯ ಮನ್ನಣೆಗಳಿಸಿದ ಡಾ. ಸುಮಂತ್ ಬಳಗಂಡಿ

    ಅಂತರಾಷ್ಟ್ರೀಯ ಮನ್ನಣೆಗಳಿಸಿದ ಡಾ. ಸುಮಂತ್ ಬಳಗಂಡಿ

    ಕುಮಟಾ :- ‘ಇಂಟರ್ ನ್ಯಾಶನಲ್ ಲೀಗ್ ಅಗೇನಸ್ಟ್ ಎಪಿಲೆಪ್ಸಿ’ ವತಿಯಿಂದ ನವದೆಹಲಿಯಲ್ಲಿ ಫೆಬ್ರುವರಿ 20 ರಿಂದ 23 ರವರೆಗೆ ನಡೆದ 15ನೇ ‘ಏಷಿಯನ್ ಆ್ಯಂಡ್ ಓಷಿಯನ್ ಎಪಿಲೆಪ್ಸಿ ಕಾಂಗ್ರೆಸ್’ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಭಾರತವನ್ನು ಪ್ರತಿನಿಧಿಸಿದ ಡಾ. ಸುಮಂತ್ ಬಳಗಂಡಿ, ತಮ್ಮ ವಿಶಿಷ್ಟ ಸಂಶೋಧನಾತ್ಮಕ ಪ್ರಬಂಧವನ್ನು ಮಂಡಿಸಿ, ಪ್ರಥಮ ಸ್ಥಾನ ಗಳಿಸಿದ್ದಾರೆ.

    “ಎಪಿಲೆಪ್ಸಿ (ಅಪಸ್ಮಾರ/ಮೂರ್ಛೆರೋಗ)
    ಹೊಂದಿರುವ ಪುರುಷರಲ್ಲಿ ಲೈಂಗಿಕ ಆರೋಗ್ಯ” ಎಂಬ ಮಹತ್ವದ ವಿಷಯದ ಕುರಿತು ಮಂಡಿಸಿದ ಅವರ ಪ್ರಬಂಧವು ಜಾಗತಿಕ ತಜ್ಞರ ಮೆಚ್ಚುಗೆ ಪಡೆಯುವಂತಾಗಿದ್ದು, ಜಪಾನ್ ಮತ್ತು ಆಸ್ಟ್ರೇಲಿಯಾ ಪ್ರತಿನಿಧಿಗಳು ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದಿದ್ದಾರೆ.

    ಶಿವಮೊಗ್ಗ ಜಿಲ್ಲೆಯ ಸಾಗರದ ‘ಭಾಗವತ್ ಆಸ್ಪತ್ರೆ’ಯಲ್ಲಿ ಮೆದುಳು ಮತ್ತು ನರರೋಗ ತಜ್ಞರಾಗಿ ಸೇವೆ ಸಲ್ಲಿಸುತ್ತಿರುವ ಡಾ. ಸುಮಂತ್ ಬಳಗಂಡಿ, ತಮ್ಮ ಈ ಮಹತ್ವದ ಸಾಧನೆಯ ಮೂಲಕ ದೇಶದ ಜತೆಗೆ ಕನ್ನಡಿಗರ ಹೆಮ್ಮೆ ಹೆಚ್ಚಿಸಿದ್ದಾರೆ.
    ಉತ್ತರ ಕನ್ನಡ ಜಿಲ್ಲೆಯ ಕುಮಟಾ ನಿವಾಸಿಗಳಾಗಿರುವ ಸ್ವಾತಿ ಮತ್ತು ಜಯದೇವ ಬಳಗಂಡಿ ದಂಪತಿಯ ಸುಪುತ್ರರಾಗಿರುವ ಇವರು, ತಮ್ಮ ನಿರಂತರ ಪರಿಶ್ರಮ ಹಾಗೂ ಕಠಿಣ ಅಧ್ಯಯನದ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟಿದ್ದಾರೆ.

    ‘ಇಂಟರ್ ನ್ಯಾಶನಲ್ ಲೀಗ್ ಅಗೇನಸ್ಟ್ ಎಪಿಲೆಪ್ಸಿ’ ಒಂದು ಜಾಗತಿಕ ಸಂಸ್ಥೆಯಾಗಿದ್ದು , ವಿಶ್ವ ಆರೋಗ್ಯ ಸಂಸ್ಥೆ (W.H.O.) ಜೊತೆಗೂಡಿ ಎಪಿಲೆಪ್ಸಿ ಕುರಿತು ಸಂಶೋಧನೆ,ಉತ್ತಮ ಚಿಕಿತ್ಸಾ ವಿಧಾನಗಳ ಅಭಿವೃದ್ಧಿ ಮತ್ತು ಜಾಗೃತಿಯನ್ನು ವೃದ್ಧಿಸುವ ಉದ್ದೇಶ ಹೊಂದಿದ್ದು,’ಏಷಿಯನ್ ಆ್ಯಂಡ್ ಓಷಿಯನ್ ಎಪಿಲೆಪ್ಸಿ ಕಾಂಗ್ರೆಸ್ ’ ಸಂಸ್ಥೆಯು ಏಷ್ಯಾ ಹಾಗೂ ಓಶಿಯಾನಿಯಾ ಪ್ರದೇಶಗಳ ದೇಶಗಳಾದ ಭಾರತ, ಚೀನಾ, ಜಪಾನ್, ಆಸ್ಟ್ರೇಲಿಯಾ, ಮಲೇಷಿಯಾ, ದಕ್ಷಿಣ ಕೊರಿಯಾ ಮುಂತಾದ ರಾಷ್ಟ್ರಗಳಲ್ಲಿ ಎಪಿಲೆಪ್ಸಿ ಕುರಿತ ಸಂಶೋಧನೆ, ತಜ್ಞರ ತರಬೇತಿ ಹಾಗೂ ಆರೋಗ್ಯ ಸೇವಾ ಸುಧಾರಣೆಗೆ ಮೀಸಲಾಗಿರುವ ಪ್ರಮುಖ ವೇದಿಕೆಯಾಗಿದೆ. ಈ ಮಹತ್ವದ ಸಮ್ಮೇಳನವು ಈ ಬಾರಿ ಭಾರತದಲ್ಲಿ ಜರುಗಿದ್ದು ಹಲವು ದೇಶಗಳ ಎಪಿಲೆಪ್ಸಿ ತಜ್ಞ ವೈದ್ಯರುಗಳು ಭಾಗವಹಿಸಿದ್ದರು.

    ಡಾ.ಸುಮಂತ್ ಬಳಗಂಡಿ ಅವರ ಈ ಸಂಶೋಧನಾತ್ಮಕ ಪ್ರಬಂಧವು ಭಾರತೀಯ ವೈದ್ಯಕೀಯ ಸಂಶೋಧನೆಗೆ ಮಹತ್ತರ ಕೊಡುಗೆ ನೀಡಿದಂತಾಗಿದೆ.

  • ಸ್ಪೆಷಾಲಿಟಿ ಆಸ್ಪತ್ರೆಯನ್ನು ಕೆಳದರ್ಜೆಗೆ ತಳ್ಳುವ ಪ್ರಯತ್ನ : ಜನತೆಯಲ್ಲಿ ಶಾಸಕ ಭೀಮಣ್ಣ ಕ್ಷಮೆ ಕೇಳಲು ಆಗ್ರಹ

    ಸ್ಪೆಷಾಲಿಟಿ ಆಸ್ಪತ್ರೆಯನ್ನು ಕೆಳದರ್ಜೆಗೆ ತಳ್ಳುವ ಪ್ರಯತ್ನ : ಜನತೆಯಲ್ಲಿ ಶಾಸಕ ಭೀಮಣ್ಣ ಕ್ಷಮೆ ಕೇಳಲು ಆಗ್ರಹ

    ಶಿರಸಿ: ಶಿರಸಿ ಪಂಡಿತ್ ಸಾರ್ವಜನಿಕ ಆಸ್ಫತ್ರೆ ವಿಚಾರವಾಗಿ ಸರ್ಕಾರ ವೈದ್ಯಕೀಯ ಸಲಕರಣೆಗಳಿಗೆ 30 ಕೋಟಿ ರೂಪಾಯಿ ಕೊಡುತ್ತಿಲ್ಲ ಎಂಬ ಕಾರಣಕ್ಕೆ ಸ್ಪೆಷಾಲಿಟಿ ಆಸ್ಪತ್ರೆಯನ್ನ ಕೆಳದರ್ಜೆಗೆ ತಳ್ಳುವ ಪ್ರಯತ್ನ ಮಾಡುತ್ತಿರುವ ಮಾನ್ಯ ಶಾಸಕರಾದ ಭೀಮಣ್ಣ ಅವರು ಜನತೆಯ ಕ್ಷಮೆ ಕೇಳಬೇಕು ಎಂದು ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆ ಆಗ್ರಹಿಸಿದ್ದಾರೆ.

    ಅವರು ಶಿರಸಿಯ ಪತ್ರಿಕಾಭವನದಲ್ಲಿ ಶುಕ್ರವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ಹಾಲಿ ಶಾಸಕರ ಆಪ್ತರು ಇತ್ತಿಚಿಗೆ ಸುದ್ದಿಗೋಷ್ಟಿಯಲ್ಲಿ ಮಾತನಾಡುವಾಗ ಶಿರಸಿಯದು ಸ್ಪೆಷಾಲಿಟಿ ಆಸ್ಪತ್ರೆಯಲ್ಲ, ಕೇವಲ ಮೇಲ್ದರ್ಜೆಗೇರಿಸಿದ ಆಸ್ಪತ್ರೆ ಎಂದು ಹೇಳಿಕೆ ನೀಡಿದ್ದಾರೆ. ಆದರೆ ಸ್ಪೆಷಾಲಿಟಿ ಆಸ್ಪತ್ರೆಗೆ ಅವಶ್ಯವಿರುವ ಎಲ್ಲ ಸೌಲಭ್ಯವನ್ನು ಮಾಜಿ ಸಭಾಧ್ಯಕ್ಷರಾದ ಕಾಗೇರಿಯವರು ಮಂಜೂರಿ ಮಾಡಿಸಿಕೊಂಡು ಬಂದಿದ್ದರು. ಅದಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಪಡೆದುಕೊಂಡು ಬಿಡುಗಡೆ ಮಾಡಲಾಗಿದೆ. ರಾಜ್ಯ ಸರ್ಕಾರ ವೈದ್ಯಕೀಯ ಉಪಕರಣಗಳ ಖರೀದಿಗಾಗಿ ಮೀಸಲಿರಿಸಿದ್ದ 30 ಕೋಟಿ ರೂಪಾಯಿ ಕೊಡುವುದಿಲ್ಲ ಎಂಬ ಕಾರಣಕ್ಕೆ ಆಸ್ಪತ್ರೆಯನ್ನು ಕೆಳದರ್ಜೆಗೆ ಇಳಿಸುವ ಶಾಸಕರ ಪ್ರಯತ್ನ ಜನತೆಗೆ ಮಾಡುವ ದ್ರೋಹವಾಗಿದೆ. ಸ್ಪೆಷಾಲಿಟಿ ಆಸ್ಪತ್ರೆಗಿರುವ ಸೌಲಭ್ಯವನ್ನು ನಿರಾಕರಿಸಿ ಕೆಳದರ್ಜೆಯ ಆಸ್ಪತ್ರೆಯನ್ನಾಗಿಸುವುದು ಎಂದಿಗೂ ಸರಿಯಲ್ಲ. ಹೊಸ ವೈದ್ಯಾಧಿಕಾರಿಗಳನ್ನ ನೇಮಿಸಿಕೊಂಡು ಸಲಕರಣೆಗಾಗಿ 30 ಕೋಟಿ ಬದಲಿಗೆ 5.20 ಕೋಟಿ ಪ್ರಸ್ತಾವನೆ ಕಳಿಸಿದ್ದೀರಿ. ನಂತರ ನಿಮ್ಮಲ್ಲಿ ನೇರವಾಗಿ ಕೇಳಿದಾಗ 18.5 ಕೋಟಿ ಸಲಕರಣೆ ಬಂದಿದೆ ಎಂಬುದಾಗಿ ಮಾಧ್ಯಮಕ್ಕೆ ಹೇಳಿದ್ದೀರಿ. ಇದನ್ನು ಪ್ರಶ್ನೆ ಮಾಡಿದರೆ ಅವರ ವಿರುದ್ಧ ಪ್ರತಿಭಟನೆ ನಡೆಸಲು ನಿಮ್ಮ ಆಪ್ತರಿಗೆ ಕರೆ ಕೊಡುತ್ತೀರಿ ಶಾಸಕ ಭೀಮಣ್ಣನವರಿಗೆ ಆಸ್ಪತ್ರೆಯನ್ನು ಮಾಡಬೇಕೆನ್ನುವ ಮನಸ್ಥಿತಿ ಇದ್ದಂತೆ ಕಾಣುವುದಿಲ್ಲ. ಅಭಿವೃದ್ಧಿಯ ವಿಚಾರ ಇರುವುದು ನಿಜವಾದರೆ, ಈ ರೀತಿ ಲೂಸ್ ಟಾಕ್ ಮಾಡುವ ಕೆಲಸ ಮಾಡುತ್ತಿರಲಿಲ್ಲ. ಪ್ರಶ್ನೆ ಮಾಡಿದವರ ಧ್ವನಿ ಹತ್ತಿಕ್ಕುವ ಅವರ ನಡೆಯನ್ನು ನಾವು ಖಂಡಿಸುತ್ತೇವೆ. ಸ್ಪೆಷಾಲಿಟಿ ಆಸ್ಪತ್ರೆಯನ್ನು ಕೆಳದರ್ಜೆಗೆ ಇಳಿಸುವ ಶಾಸಕರ ಪ್ರಯತ್ನ ಘೋರತಪ್ಪು.‌

    ಒಮ್ಮೆ ಕಾಮಗಾರಿಗೆ ಟೆಂಡರ್ ಆದಮೇಲೆ‌ ಗುತ್ತಿಗೆದಾರರಿಗೆ ಬಿಲ್ ಪ್ರಕಾರ ಹಣ ಸಂಬಂಧಪಟ್ಟ ಇಲಾಖೆಯಿಂದ ಬಿಡುಗಡೆ ಆಗುತ್ತದೆ. ಆಸ್ಪತ್ರೆಯ ಕೇವಲ ಕಟ್ಟಡ ಕಾಮಗಾರಿಗಾಗಿ ನೀವು ತಂದಿದ್ದೀರಿ ಎಂದಿರುವ 44 ಕೋಟಿ ರೂಪಾಯಿಗೆ ಮತ್ತು ಶಾಸಕರಿಗೆ ಯಾವುದೇ ಸಂಬಂಧ ಇರುವುದಿಲ್ಲ. ಯಾಕೆಂದರೆ ಅದು ಈಗಾಗಲೇ ಮಂಜೂರಾಗಿರುವ ಹಣವಾಗಿದೆ. ಯಾರೇ ಶಾಸಕರಿದ್ದರೂ, ರಾಷ್ಟ್ರಪತಿ ಆಡಳಿತ ಇದ್ದರೂ ಮಂಜೂರಾದ ಹಣ ಗುತ್ತಿಗೆದಾರರಿಗೆ ಬರುತ್ತದೆ. ಅದರಲ್ಲಿ ಶಾಸಕರ ವಿಶೇಷ ಪಾತ್ರ ಇರುವುದಿಲ್ಲ. ನಾನು ಮಾಧ್ಯಮಕ್ಕೆ ಬಿಡುಗಡೆಗೊಳಿಸಿದ ಎಲ್ಲ ದಾಖಲೆಗಳು ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಪಡೆದುಕೊಂಡಿದ್ದೇನೆ. ಇದ್ಯಾವುದೂ ನನ್ನ ಮನೆಯ ದಾಖಲೆಗಳಲ್ಲ. ಶಿರಸಿಯ ಆಸ್ಪತ್ರೆ ಸ್ಪೆಷಾಲಿಟಿ ಆಸ್ಪತ್ರೆಯೆಂದು ದಾಖಲೆಗಳೇ ಹೇಳುತ್ತಿವೆ. ಆಸ್ಪತ್ರೆ ಕುರಿತಾಗಿ ಶಾಸಕರು ಇದುವರೆಗೆ ತುಟಿ ಬಿಚ್ಚದೇ ಮೌನವಾಗಿರುವುದು ಸರಿಯಲ್ಲ. ಇದಕ್ಕೆ ತಕ್ಷಣ ಭೀಮಣ್ಣ ನಾಯ್ಕ ಉತ್ತರ ನೀಡಬೇಕೆಂದು ಅವರು ಹೇಳಿದರು.

    ಆಸ್ಪತ್ರೆ ಕುರಿತಾಗಿ ಪ್ರಶ್ನೆ ಮಾಡಿದವರ ಮೇಲೆ ನಾನ್ ಬೇಲೆಬಲ್ ಕೇಸ್ ದಾಖಲಿಸುತ್ತಾರೆ. ಬೆಂಬಲಿಗರಿಂದ ಪ್ರತಿಕೃತಿ ದಹನ ಮಾಡಿಸುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಅಸಂಬದ್ಧ ಕಮೆಂಟ್ ಮಾಡಿಸುತ್ತಾರೆ. ಜಾತಿ ರಾಜಕೀಯವನ್ನು ಹಬ್ಬಿಸುತ್ತಾರೆ. ಪೋಲೀಸ್ ಠಾಣೆಯಲ್ಲಿ ದೂರು ಕೊಡುವವರೇ ನನ್ನ ಮೇಲೆ ನಾನ್ ಬೇಲೆಬಲ್ ಪ್ರಕರಣ ದಾಖಲಿಸುವಂತೆ ಸೆಕ್ಷನ್ ಬರೆದುಕೊಡುತ್ತಾರೆ. ಅದರಂತೆ ನಡೆಯಲು ಪೋಲೀಸರಿಗೆ ಸೂಚನೆ ಕೊಡಲಾಗುತ್ತದೆ ಎಂದರೆ ನಾವು ಯಾವ ಪ್ರಜಾಪ್ರಭುತ್ವದಲ್ಲಿ ಇದ್ದೇವೆ ಎಂಬ ಪ್ರಶ್ನೆ ಮೂಡುತ್ತದೆ. ಇದೇನು, ರಿಪಬ್ಲಿಕ್ ಆಫ್ ಶಿರಸಿನಾ ? ಶಾಸಕರನ್ನು ಪ್ರಶ್ನಿಸುವುದು ಅಪರಾಧವಾಗುತ್ತದೆಯಾ ? ಇದು ಪ್ರಜಾಪ್ರಭುತ್ವಕ್ಕೆ ಮಾರಕ. ಜೊತೆಗೆ ಮಾನನಷ್ಟ ಮೊಕದ್ದಮೆ ದಾಖಲಿಸುವ ಕಾರಣ ಕೇಳಿ, ಲೀಗಲ್ ನೋಟೀಸ್ ಸಹ ನೀಡಿದ್ದೀರಿ. ದಯಮಾಡಿ ವಯಕ್ತಿಕ ದ್ವೇಷ ರಾಜಕಾರಣ ಮಾಡಬೇಡಿ. ನಮಗೂ ಕುಟುಂಬವಿದೆ. ಸಣ್ಣ ಮಕ್ಕಳು, ವಯಸ್ಸಾದ ತಂದೆ-ತಾಯಿಗಳಿದ್ದಾರೆ. ಆಸ್ಪತ್ರೆ ಹೋರಾಟ ಮಾಡುವ ಬದಲು ಕೋರ್ಟು, ವಕೀಲರ ಆಫೀಸು, ಪೋಲೀಸ್ ಸ್ಟೇಷನ್ ಗಳನ್ನು ಅಲೆಯಬೇಕೆಂಬುದು ನಿಮ್ಮ ಉದ್ದೇಶವಾದಂತೆ ಕಾಣುತ್ತದೆ ಎಂದರು.

    ಶಾಸಕರು ಮೊದಲಿಗೆ ಕ್ಷೇತ್ರದ ಅಭಿವೃದ್ಧಿ ಕುರಿತಾಗಿ ಗಮನ ನೀಡಬೇಕು. ಶಿರಸಿ ಬಸ್ ಸ್ಟಾಂಡ್ ತಕ್ಷಣ ಉದ್ಘಾಟನೆ ಆಗಬೇಕಿದೆ. ಇಂದಿರಾ ಕ್ಯಾಂಟೀನ್ ತಕ್ಷಣ ಉದ್ಘಾಟನೆ ಆಗಿ ಬಡವರಿಗೆ ಕಡಿಮೆ ದರದಲ್ಲಿ ಊಟ ದೊರೆಯಬೇಕು. ಆಯುಷ್ಮಾನ್ ರೆಫರೆಲ್ ಲೆಟರ್ ಶಿರಸಿಯಲ್ಲೇ ಸಿಗುವಂತಾಗಬೇಕು. ಈಗ ಇರುವ ಆಸ್ಪತ್ರೆಗೆ ಜನರಲ್ ಫಿಜಿಶಿಯನ್ ನೇಮಕ ಆಗಬೇಕು. ಈಗಾಗಲೆ 80% ಕೆಲಸ ಆಗಿರುವ ಆಸ್ಪತ್ರೆಗೆ ಸಲಕರಣೆಗೆ ಟೆಂಡರ್ ಕರೆದು, ವೈದ್ಯರ ನೇಮಕಾತಿ ಆಗಬೇಕು, ಶಿರಸಿ ಆಸ್ಪತ್ರೆಗೆ ಎಲ್ಲಾ ಸಾಮಗ್ರಿಗಳು ಬಂದು ಈ ಮೇಲಿನ ಎಲ್ಲಾ ಸೌಲಭ್ಯಗಳು ಬರಲೇಬೇಕು. ಇನ್ನೂ 15 ದಿನ ಕಾಯುತ್ತೇವರ. ಶಾಸಕರಿಂದ ಏನೂ ಪ್ರತಿಕ್ರಿಯೆ ಬಂದಿಲ್ಲ ಎಂದರೆ ಆಸ್ಪತ್ರೆ ಉಳಿಸಿ, ಎಂದು ಬೀದಿಯಲ್ಲಿ ಸಹಿ ಸಂಗ್ರಹಣೆ ಕಾರ್ಯಕ್ರಮ ಪ್ರಾರಂಭಿಸಲಾಗುವುದು ಎಂದು ಅವರು ಹೇಳಿದರು.

    ಮಾಜಿ ಜಿಪಂ ಸದಸ್ಯ ಹಾಲಪ್ಪ ಜಕ್ಕಣ್ಣನವರ್ ಮಾತನಾಡಿ, ಸಾರ್ವಜನಿಕ ವಿಚಾರವನ್ನು ಕೇಳುವುದು ಪ್ರತಿಯೊಬ್ಬನ ಹಕ್ಕು. ಶಾಸಕರು ಅವರ ಸಲಹೆಗಾರರನ್ನು ಮಾರ್ಪಡಿಸಿಕೊಳ್ಳುವ ಅವಶ್ಯಕತೆ ಇದ್ದಂತೆ ಕಾಣುತ್ತದೆ. ನಾವು ಯಾರೂ ಶಾಸಕರ ವಿರೋಧಿಗಳಲ್ಲ. ಅಭಿವೃದ್ಧಿ ಪರವಾಗಿ ಮಾತನಾಡುತ್ತಿದ್ದೇವೆ. ಪ್ರಶ್ನೆ ಮಾಡಿದವರ ಪ್ರತಿಕೃತಿ ದಹಿಸುವುದು ಸರಿಯಲ್ಲ. ಇದಕ್ಕೆ ಶಾಸಕರು ಪ್ರೋತ್ಸಾಹ ನೀಡಬಾರದು ಎಂದರು.

    ಸಿದ್ದಾಪುರ ಬಿಜೆಪಿ ತಾಲೂಕು ಅಧ್ಯಕ್ಷ ಎಂ.ಕೆ. ತಿಮ್ಮಪ್ಪ ಮಾತನಾಡಿ, ಈ ಹಿಂದಿನ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿಯವರ ಪ್ರಯತ್ನದಿಂದ ಶಿರಸಿಗೆ ಈ ಸ್ಪೆಷಾಲಿಟಿ ಆಸ್ಪತ್ರೆ ಬಂದಿದೆ. ಬಾಯಿ ತೆಗೆದರೆ ಸಂವಿಧಾನ ಎಂದು ಹೇಳುವ ಕಾಂಗ್ರೆಸಿಗರು, ಸಂವಿಧಾನದ ಅಡಿಯಲ್ಲಿಯೇ ಅನಂತಮೂರ್ತಿ ಹೆಗಡೆ ಅವರು ಆಸ್ಪತ್ರೆಗಾಗಿ ಹೋರಾಟ ಮಾಡಿದರೆ ಅವರ ಮೇಲೆ ಕೇಸ್ ಹಾಕುತ್ತಾರೆ. ಬಡವರ ಪರವಾಗಿ ಹೋರಾಟ ಮಾಡಿದರೆ ಅದನ್ನು ಹತ್ತಿಕ್ಕುವ ಕೆಲಸ ಮಾಡುವ ಕಾಂಗ್ರೆಸ್ ಸರಕಾರ ಮತ್ತು ಶಾಸಕರ ನಡೆ ಸರಿಯಲ್ಲ ಎಂದರು.

    ಸುದ್ದಿಗೋಷ್ಟಿಯಲ್ಲಿ ಬಿಜೆಪಿ ಶಿರಸಿ ತಾಲೂಕು ಅಧ್ಯಕ್ಷೆ ಉಷಾ ಹೆಗಡೆ, ರಂಗಪ್ಪ ದಾಸನಕೊಪ್ಪ ಇದ್ದರು.

    ಶಿರಸಿಯದು ಕೇವಲ ಮೇಲ್ದರ್ಜೆಗೇರಿಸಿದ ಆಸ್ಪತ್ರೆಯಲ್ಲ, ಬದಲಾಗಿ ಸ್ಪೆಷಾಲಿಟಿ ಆಸ್ಪತ್ರೆ ಆಗಿರುವ ಕಾರಣಕ್ಕೇ ಇದರಲ್ಲಿ ಹೃದಯ ಚಿಕಿತ್ಸೆಗೆ ಸಂಬಂಧಿಸಿ ಕ್ಯಾಥ್ ಲ್ಯಾಬ್, ಕಾರ್ಡಿಯಾಲಜಿ ಇದೆ. ನೆಫ್ರೊಲೊಜಿ, ಯುರೊಲೊಜಿ, ನ್ಯುರೋಲಜಿ, ಟ್ರಾಮಾ ಸೆಂಟರ್ ಮಾಡುವ ಆವಕಾಶ ಇದೆ, ಎಂಆರ್ಐ ಮಷಿನ್ ಮತ್ತು ಸಿಟಿ ಸ್ಕ್ಯಾನ್ ಮಷಿನ್ ಒಳಗೊಂಡು ಇನ್ನೂ ಹಲವಾರು ಸ್ಪೆಶಾಲಿಟಿ ಸೌಲಭ್ಯಗಳು ಇದೆ. ನಾರ್ಮಲ್ ಆಸ್ಪತ್ರೆಯಲ್ಲಿ ಇವೆಲ್ಲ ಇರತ್ತಾ? 250 ಬೆಡ್, 142 ಕೋಟಿ ಬಜೆಟ್ ಇರುತ್ತಿತ್ತಾ ಎಂದು ಅವರು ಪ್ರಶ್ನಿಸಿದ್ದಾರೆ. ಇಷ್ಟೆಲ್ಲ ಸೌಕರ್ಯಗಳನ್ನು ಒಳಗೊಂಡಿರುವ ಆಸ್ಪತ್ರೆ ಸ್ಪೆಷಾಲಿಟಿ ಆಸ್ಪತ್ರೆಯಲ್ಲವೆಂದು ಕೆಳದರ್ಜೆಗೆ ತಳ್ಳುವುದು ಸರಿಯಲ್ಲ. ಬಡವರ ಭಾಗ್ಯವನ್ನು ಶಾಸಕರು ಕಸಿಯಬಾರದು.

  • ಚೀನಾದಲ್ಲಿ ಪತ್ತೆಯಾಯ್ತಂತೆ ಕೊರೋನಾದಂತಹುದೇ ಇನ್ನೊಂದು ಹೊಸ ವೈರಸ್…!

    ಚೀನಾದಲ್ಲಿ ಪತ್ತೆಯಾಯ್ತಂತೆ ಕೊರೋನಾದಂತಹುದೇ ಇನ್ನೊಂದು ಹೊಸ ವೈರಸ್…!

    ಕೋವಿಡ್‌-19 (COVID-19) ವೈರಸ್‌ ಭೀಕರ ಸಾಂಕ್ರಾಮಿಕ ರೋಗಕ್ಕೆ ಕಾರಣವಾದಂತೆಯೇ ಪ್ರಾಣಿಯಿಂದ ಮನುಷ್ಯನಿಗೆ ಹರಡುವ ಅಪಾಯವನ್ನು ಹೊಂದಿರುವ ಹೊಸ ಬಾವಲಿ ಕೊರೊನಾ ವೈರಸ್ ಅನ್ನು ಚೀನಾದಲ್ಲಿ ಕಂಡುಹಿಡಿಯಲಾಗಿದೆ.

    ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ (SCMP) ಪ್ರಕಾರ, HKU5-CoV-2 ಎಂದು ಕರೆಯಲಾದ ಹೊಸ ವೈರಸ್ ಅನ್ನು ಪ್ರಸಿದ್ಧ ವಿಜ್ಞಾನಿ ಶಿ ಝೆಂಗ್ಲಿ ನೇತೃತ್ವದ ವೈರಾಲಜಿಸ್ಟ್‌ಗಳ ತಂಡವು ಪತ್ತೆ ಮಾಡಿದೆ. ಇದು ಬಾವಲಿಯಿಂದ ಮನುಷ್ಯನಿಗೆ ಹರಡುವ ಸಂಭಾವ್ಯ ಅಪಾಯವಿದೆ ಎಂಬುದು ಆತಂಕಕ್ಕೆ ಕಾರಣವಾಗಿದೆ.

    ಈ ಹೊಸ ವೈರಸ್ SARS CoV-2 ವೈರಸ್‌ ಹೋಲಿಕೆಯನ್ನು ಹೊಂದಿದೆ ಎಂದು ಚೀನಾದ ಸಂಶೋಧಕರು ಕಂಡುಕೊಂಡಿದ್ದಾರೆ. SARS CoV-2 ವೈರಸ್‌ ಕೋವಿಡ್ ಸಾಂಕ್ರಾಮಿಕಕ್ಕೆ ಕಾರಣವಾದ ವೈರಸ್ ಆಗಿದೆ. ಈಗ ಪತ್ತೆಯಾಗಿರುವ HKU5-CoV-2 ಎಂದು ಕರೆಯಲಾದ ಹೊಸ ವೈರಸ್ ಕೂಡ ಕೋವಿಡ್ ಮಾಡಿದ ರೀತಿಯಲ್ಲಿಯೇ ಎಸಿಇ2(ACE2) ಎಂಬ ಮಾನವ ಜೀವಕೋಶಗಳಿಗೆ ನುಸುಳಬಹುದು. ಇದು ಎಸಿಇ 2 ರಿಸೆಪ್ಟರ್ ಪ್ರೋಟೀನ್ ಮೂಲಕ ಜೀವಕೋಶಗಳನ್ನು ಪ್ರವೇಶಿಸುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ. ಕೋವಿಡ್ -19 ವೈರಸ್ ಬಳಸುವುದು ಅದೇ ಮಾರ್ಗವಾಗಿದೆ.

    HKU5-CoV-2 ಎಂದರೇನು?
    HKU5-CoV-2 ಎಂಬುದು ಮೆರ್ಬೆಕೊವೈರಸ್ ಉಪಕುಲಕ್ಕೆ ಸೇರಿದ ಕೊರೊನಾ ವೈರಸ್ ಆಗಿದೆ, ಇದು ಮಧ್ಯಪ್ರಾಚ್ಯದ ಉಸಿರಾಟದ ತೊಂದರೆ (MERS) ಗೆ ಕಾರಣವಾಗುವ ವೈರಸ್ ಅನ್ನು ಸಹ ಒಳಗೊಂಡಿದೆ. ಹೊಸ ವೈರಸ್ ಮಾನವನ ಇಸಿಇ2(ACE2) ಎಂಬ ಜೀವಕೋಶಗಳಿಗೆ ಪ್ರವೇಶಿಬಹುದು ಎಂದು ವಿಜ್ಞಾನಿಗಳು ಕಂಡುಕೊಂಡಿದ್ದಾರೆ, ಇದು SARS-CoV-2 ಮತ್ತು NL63 (ಸಾಮಾನ್ಯ ಶೀತ ವೈರಸ್) ಗೆ ಹೋಲುತ್ತದೆ. ಆದರೆ ಪ್ರತಿ ಕೊರೊನಾ ವೈರಸ್‌ ಮಾನವರಿಗೆ ಹರಡುವುದಿಲ್ಲ.

    ಜರ್ನಲ್ ಸೆಲ್‌ನಲ್ಲಿ ಪ್ರಕಟವಾದ ಅಧ್ಯಯನವು HKU5-CoV-2 ಪ್ರಯೋಗಾಲಯದ ವ್ಯವಸ್ಥೆಗಳಲ್ಲಿ ಮಾನವ ಜೀವಕೋಶಗಳಿಗೆ ಸೋಂಕು ತಗುಲಿರುವುದು ಕಂಡುಬಂದಿದೆ ಎಂದು ಹೈಲೈಟ್ ಮಾಡುತ್ತದೆ, ಪ್ರಯೋಗಾಲಯದ ಪರೀಕ್ಷೆಯ ಸಮಯದಲ್ಲಿ, ವಿಜ್ಞಾನಿಗಳು ಬಳಸಿದ ಮಿನಿ-ಹ್ಯೂಮನ್ ಆರ್ಗನ್ ಮಾದರಿಗಳಲ್ಲಿ ಮಾನವ ಜೀವಕೋಶಗಳಿಗೆ ಸೋಂಕು ತರಲು HKU5-CoV-2 ಗೆ ಸಾಧ್ಯವಾಗಿದೆ ಎಂದು ತಂಡವು ಕಂಡುಹಿಡಿದಿದೆ. ಕೊರೊನಾ ವೈರಸ್‌ ಸಾಮಾನ್ಯ ಶೀತದಿಂದ ತೀವ್ರವಾದ ಉಸಿರಾಟದ ಸಿಂಡ್ರೋಮ್ (SARS) ಮತ್ತು ಕೋವಿಡ್ -19ವರೆಗಿನ ರೋಗಗಳಿಗೆ ಕಾರಣವಾಗುವ ವೈರಸ್‌ ಇತರ ಪ್ರಣಿಗಳಿಗೆ ಜಿಗಿಯುವ ಸಾಮರ್ಥ್ಯದ ಬಗ್ಗೆ ಆತಂಕ ಉಂಟುಮಾಡುತ್ತದೆ. ಈ ಸಂಶೋಧನೆಯಲ್ಲಿ ಮಾನವರಲ್ಲಿ ಈ ವೈರಸ್‌ ರೋಗವನ್ನು ಉಂಟುಮಾಡುತ್ತದೆಯೇ ಎಂಬುದು ನಿಖರವಾಗಿ ಗೊತ್ತಾಗಿಲ್ಲ.

    ಆದಾಗ್ಯೂ, ಮಾನವ ಜೀವಕೋಶಗಳಿಗೆ ಸೋಂಕು ತಗುಲಿಸುವ ಅದರ ಪ್ರಸ್ತುತ ಸಾಮರ್ಥ್ಯ ಕೋವಿಡ್ -19 ವೈರಸ್‌ಗಿಂತ ಗಮನಾರ್ಹವಾಗಿ ಕಡಿಮೆ ಇದೆ ಎಂದು ಸಂಶೋಧಕರು ಹೇಳಿದ್ದಾರೆ. ಮಾನವ ಜೀವಕೋಶಗಳಿಗೆ ಸೋಂಕು ತಗುಲಿಸುವ ಸಾಮರ್ಥ್ಯದ ಹೊರತಾಗಿಯೂ, ಮಾನವ ಜನಸಂಖ್ಯೆಗೆ ಅದರ ತಕ್ಷಣದ ಅಪಾಯ ಬಗ್ಗೆ ವೈರಸ್‌ನ ಸಾಮರ್ಥ್ಯವು ಈ ಹಂತದಲ್ಲಿ ಊಹಾತ್ಮಕವಾಗಿಯೇ ಉಳಿದಿದೆ.
    ಈ ಹೊಸ ವೈರಸ್‌ನಿಂದ ಉಂಟಾಗುವ ಮತ್ತೊಂದು ಸಾಂಕ್ರಾಮಿಕದ ಬಗ್ಗೆ ಮಿನ್ನೇಸೋಟ ವಿಶ್ವವಿದ್ಯಾಲಯದ ಸಾಂಕ್ರಾಮಿಕ ರೋಗ ತಜ್ಞ ಡಾ ಮೈಕೆಲ್ ಓಸ್ಟರ್‌ಹೋಮ್ ಅವರು ಪ್ರತಿಕ್ರಿಯಿಸಿದ್ದು, ಸಂಶೋಧನೆಯ ವರದಿಯು ವೈರಸ್‌ ಬಗ್ಗೆ ಅತಿಯಾಗಿ ಉತ್ಪ್ರೇಕ್ಷಿಸಿದಂತಿದೆ ಎಂದು ಹೇಳಿದ್ದಾರೆ. ಕೋವಿಡ್‌-19 ವೈರಸ್‌ ಸಾಂಕ್ರಾಮಿಕ ಬಂದು ಹೋದ ನಂತರ ಈಗ ಜನರಲ್ಲಿ ರೋಗ ಪ್ರತಿಬಂಧಕ ಶಕ್ತಿ ಹೆಚ್ಚಿದೆ. ಹೀಗಾಗಿ ಅದು ಜನರಿಗೆ ಹಾನಿ ಮಾಡುವ ಸಾಧ್ಯತೆ ಇಲ್ಲ ಎಂದು ಹೇಳಿದ್ದಾರೆ.

  • ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿಗೆ ರಾಷ್ಟ್ರ ಮಟ್ಟದಲ್ಲಿ ಹೆಸರಾದ ಸಂಪನ್ಮೂಲ ವ್ಯಕ್ತಿಗಳು ವಿಧಾತ್ರಿಯ ಜೊತೆಗೆ : ಇನ್ನು ಕುಮಟಾದಲ್ಲಿ ನಿರಂತರವಾಗಿ ತರಬೇತಿ.

    ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿಗೆ ರಾಷ್ಟ್ರ ಮಟ್ಟದಲ್ಲಿ ಹೆಸರಾದ ಸಂಪನ್ಮೂಲ ವ್ಯಕ್ತಿಗಳು ವಿಧಾತ್ರಿಯ ಜೊತೆಗೆ : ಇನ್ನು ಕುಮಟಾದಲ್ಲಿ ನಿರಂತರವಾಗಿ ತರಬೇತಿ.

    ಈಗಾಗಲೇ ದೇಶದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿ ನೀಡಿ, ಸಂಸ್ಥೆಯ ಹೆಸರನ್ನು ಉತ್ತುಂಗಕ್ಕೆ ಏರಿಸಿರುವ, ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ವಿದ್ಯಾರ್ಥಿಗಳು ಗುರುತಿಸಿಕೊಳ್ಳುವಂತೆ ಮಾಡಿರುವ ಸಂಪನ್ಮೂಲ ವ್ಯಕ್ತಿಗಳು, ವಿಧಾತ್ರಿ ಅಕಾಡೆಮಿ ಜೊತೆಗೆ ಕೈಜೋಡಿಸಿದ್ದು, ವಿದ್ಯಾಗಿರಿಯಲ್ಲಿರುವ ಸರಸ್ವತಿ ಪಿ.ಯು ಕಾಲೇಜಿನಲ್ಲಿ ನಿರಂತರವಾಗಿ ಇನ್ನು ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ನೀಡಲಿದ್ದಾರೆ.

    ಉತ್ತರಕನ್ನಡದಲ್ಲಿ ಮಾದರಿ ಶಿಕ್ಷಣ ವ್ಯವಸ್ಥೆ ನೀಡುವ ಸಂಕಲ್ಪದೊಂದಿಗೆ ವಿಧಾತ್ರಿ ಅಕಾಡೆಮಿ ಮಂಗಳೂರು ಇವರು ಕುಮಟಾದ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ಜೊತೆಗೆ ಒಡಂಬಡಿಕೆ ಮಾಡಿಕೊಂಡು ಸರಸ್ವತಿ ಪದವಿಪೂರ್ವ ಕಾಲೇಜಿನಲ್ಲಿ ಕಳೆದ ನಾಲ್ಕು ವರ್ಷಗಳಿಂದ ವಿಜ್ಞಾನ ವಿಭಾಗವನ್ನು ಮುನ್ನಡೆಸಿಕೊಂಡು ಬಂದಿದ್ದು, ಅತ್ಯುತ್ತಮ ಫಲಿತಾಂಶ ನೀಡುವ ಮೂಲಕ ತಾಲೂಕು, ಜಿಲ್ಲೆ, ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿದೆ.

    ದ್ವಿತೀಯ ಪಿ.ಯು ಪರೀಕ್ಷೆಯಲ್ಲಿ ನಿರಂತರ 100% ಜೊತೆಗೆ, ಉತ್ತರಕನ್ನಡ ಜಿಲ್ಲೆಗೆ ಪ್ರಥಮ ಸ್ಥಾನವನ್ನೂ, ರಾಜ್ಯಕ್ಕೆ ಐದನೇ ಸ್ಥಾನವನ್ನೂ ದಾಖಲಿಸಿದ್ದು ಸಂಸ್ಥೆಯ ಹೆಮ್ಮೆ. ಇದರ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಯ ಮಹತ್ವವನ್ನು ಅರಿತ ವಿಧಾತ್ರಿ ಬಳಗದವರು ನಿರಂತರವಾಗಿ CET, JEE, NEET ನ ತರಬೇತಿ‌ಯನ್ನು ತಮ್ಮದೇ ನುರಿತ ಉಪನ್ಯಾಸಕರುಗಳಿಂದ ಇದುವರೆಗೂ ನೀಡುತ್ತಾ ಬಂದಿರುವುದು ಹಾಗೂ ಯಶದ ಹಾದಿಯಲ್ಲಿ ಮುನ್ನಡೆಯುತ್ತಿರುವುದು ಗಮನಾರ್ಹವಾದುದು.

    ಸರಸ್ವತಿ ಪಿ.ಯು ಕಾಲೇಜಿನಲ್ಲಿ ಕಲಿತು ತೇರ್ಗಡೆಯಾದ ವಿದ್ಯಾರ್ಥಿಗಳು ರಾಜ್ಯಮಟ್ಟದ ಉತ್ತಮ ಇಂಜಿನಿಯರಿಂಗ್ ಮತ್ತು ಮೆಡಿಕಲ್ ಕಾಲೇಜುಗಳಲ್ಲಿ ಪ್ರವೇಶ ಪಡೆದಿದ್ದಾರೆ. ಈಬಾರಿಯ JEE Mains ಪರೀಕ್ಷೆಯ ಫಲಿತಾಂಶದಲ್ಲಿಯೂ ಸಾಧನೆಯ ಯಶೋಗಾಥೆ ಮುಂದುವರೆದಿದೆ. ಈ ಎಲ್ಲಾ ಸಾಧನೆಯ ಜೊತೆ ಜೊತೆಗೇ ವಿಧಾತ್ರಿ ಅಕಾಡೆಮಿ ತನ್ನ ವಿದ್ಯಾರ್ಥಿಗಳು ರಾಷ್ಟ್ರೀಯ ಮಟ್ಟದ ಬಹುದೊಡ್ಡ ಸಾಧನೆಯ ಹಾದಿಗೆ ದಾರಿದೀಪವಾಗಲು ಬಯಸಿದೆ.

    ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಾಧನೆಯ ಶೃಂಗವನ್ನು ಏರುವ ಸಂಕಲ್ಪದೊಂದಿಗೆ ಸಂಸ್ಥೆಯು ಈಗಾಗಲೇ ರಾಷ್ಟ್ರದ ಬೇರೆ ಬೇರೆ ಕಡೆಗಳಲ್ಲಿ ಬಹುಬೇಡಿಕೆಯ ತರಬೇತುದಾರನ್ನು ಸಂಪರ್ಕಿಸಿ, ಸಂಸ್ಥೆಯ ಜೊತೆಗೆ ಹೊಂದಿಸಿಕೊಂಡಿದ್ದು, ಬರುವ ಶೈಕ್ಷಣಿಕ ವರ್ಷದ ಆರಂಭದಿಂದಲೇ ಈ ತರಬೇತುದಾರರು ಕುಮಟಾದ ಸರಸ್ವತಿ ಪಿ.ಯು ಕಾಲೇಜಿನಲ್ಲಿ ಮಾರ್ಗದರ್ಶನ ಮಾಡಲಿದ್ದಾರೆ.

    ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿರುವ ಹಿರಿಯ ಉಪನ್ಯಾಸಕರ ಸಹಯೋಗದೊಂದಿಗೆ, ರಾಷ್ಟ್ರೀಯಸ್ಥರದ ಸಂಪನ್ಮೂಲ ವ್ಯಕ್ತಿಗಳನ್ನೂ ಸಮನ್ವಯಗೊಳಿಸಿಕೊಂಡು ಉತ್ಕೃಷ್ಟ ತರಬೇತಿ ನೀಡಿ, ಶೈಕ್ಷಣಿಕ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳು ಸನ್ನಧರಾಗುವಂತೆ ಮಾಡಲಾಗುತ್ತದೆ. ವಿಧಾತ್ರಿ ಅಕಾಡೆಮಿಯ ಈ ನಿರ್ಣಯ ಜಿಲ್ಲೆಯ ವಿದ್ಯಾರ್ಥಿಗಳು ಜಿಲ್ಲೆಯಲ್ಲಿಯೇ ಉಳಿದು ಉತ್ತಮ ಶಿಕ್ಷಣ ಪಡೆಯುವ ನಿಟ್ಟಿನಲ್ಲಿ ವರದಾನವಾಗಲಿದೆ.

  • ಶ್ರೀದೇವಿ ಚೌಡೇಶ್ವರಿ ವಾರ್ಷಿಕ ಸಮಾರಾಧನೆ ಹಾಗೂ ಸನ್ಮಾನ

    ಶ್ರೀದೇವಿ ಚೌಡೇಶ್ವರಿ ವಾರ್ಷಿಕ ಸಮಾರಾಧನೆ ಹಾಗೂ ಸನ್ಮಾನ

    ಸಿದ್ದಾಪುರ : ಇತ್ತೀಚಿಗೆ ತಾಲೂಕಿನ ಕುಳ್ಳೆ ಗ್ರಾಮದಲ್ಲಿ ಶ್ರೀದೇವಿ ಚೌಡೇಶ್ವರಿ ವಾರ್ಷಿಕ ಸಮಾರಾಧನೆ ಹಾಗೂ ಸನ್ಮಾನ ಸಮಾರಂಭನಡೆಯಿತು. ಕಲಾವಿದ ಮತ್ತು ಸಮಾಜ ಸೇವಕ ಈಶ್ವರ ಗೌಡ, ನಾಟಿ ವೈದ್ಯ ಮಂಜುನಾಥ್ ಗೌಡ ಹಾಗೂ ಇನ್ನುಳಿದವರಿಗೆ ಸನ್ಮಾನಿಸಲಾಯಿತು.

    ನಂತರ ವಸುಂಧರಾ ಸಮೂಹ ಸೇವಾ ಸಂಸ್ಥೆ ಶಿರಸಿ ಇವರ ಸಂಯೋಜನೆಯಲ್ಲಿ ಕದಂಬ ಕೌಶಿಕೆ ಯಕ್ಷಗಾನ ತಾಳಮದ್ದಲೆ ನಡೆಯಿತು. ಹಿಮ್ಮೇಳದ ಭಾಗವತರು ಗಜಾನನ ಭಟ್ ತುಳಗೆರೆ ಮದ್ದಲೆವಾದನದಲ್ಲಿ ಗಜಾನನ ಹೆಗಡೆ ಕಂಚಿಕೈ, ಚಂಡೇ ವಾದನ ರಘುಪತಿ ಹೆಗಡೆ ಹುಡೆಹದ್ದ ರಂಜಿಸಿದರೆ, ಮುಮ್ಮೇಳದಲ್ಲಿ ಆರ್ ಟಿ ಭಟ್ಟ ಕಬ್ದಾಲ ಶುಂಭಾಸುರನಾಗಿ, ಎಮ್ ವಿ ಹೆಗಡೆ ಅಮ್ಮಿಮನೆ ರಕ್ತಬೀಜಾಸುರನಾಗಿ, ಮಾಬ್ಲೆಶ್ವರ್ ಭಟ್ ಇಟಗಿ ಶ್ರೀದೇವಿಯಾಗಿ, ಈಶ್ವರ ಗೌಡ ಕುಳ್ಳೆ ಸುಗ್ರೀವನಾಗಿ, ರಘುಪತಿ ನಾಯ್ಕ ಹೆಗ್ಗರಣಿ ಚಂಡಾಸುರನಾಗಿ ಅಭಿನಯಿಸಿ ಜನ ಮೆಚ್ಚುಗೆ ಗಳಿಸಿದರು.

    ಈ ಕಾರ್ಯಕ್ರಮಗಳು ಸೀತಾರಾಮ ಗೌಡ ಕುಳ್ಳ ಹುತ್ತಾರ ಹಾಗೂ ಅವರ ಕುಟುಂಬದವರ ಹಿರಿತನ ದಲ್ಲಿ ನೆರವೇರಿತು. ವೇ. ಮೂ. ವಿ ಕೆ ಜೋಶಿ ಶಿವಳಮನೆ, ಉಂಚಳ್ಳಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಮ್ ಎಲ್ ಭಟ್, ಎಸ್ ಕೆ ಭಾಗವತ್‌ ಶಿರಸಿಮಕ್ಕಿ, ಸಿ.ಎಂ. ನಾಯಕ್ ಹೆಗ್ಗರಣಿ, ಪದ್ಮಾವತಿ ಗೌಡ ಉಪಸ್ಥಿತರಿದ್ದರು.

  • ಉಚಿತ ತರಬೇತಿಗೆ ಅರ್ಜಿ ಆಹ್ವಾನ

    ಉಚಿತ ತರಬೇತಿಗೆ ಅರ್ಜಿ ಆಹ್ವಾನ

    ಕಾರವಾರ: ಕೆನರಾ ಬ್ಯಾಂಕ್ ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್‌ನ ಸಹಯೋಗದಲ್ಲಿ ನಡೆಸುತ್ತಿರುವ ರುಡ್ ಸೆಟ್ ಸಂಸ್ಥೆಯ ವತಿಯಿಂದ ಹಮ್ಮಿಕೊಂಡಿರುವ ಬ್ಯೂಟಿ ಪಾರ್ಲರ್ ಕುರಿತ 30 ದಿನಗಳ ಉಚಿತ ತರಬೇತಿಯು ಮಾ. 4 ರಿಂದ ಪ್ರಾರಂಭವಾಗಲಿದ್ದು, ಗ್ರಾಮೀಣ ಆಸಕ್ತ ನಿರುದ್ಯೋಗಿ ಯುವತಿಯರಿಂದ ಅರ್ಜಿ ಆಹ್ವಾನಿಸಲಾಗಿದೆ.

    ಆಸಕ್ತರು 18 ರಿಂದ 45 ವರ್ಷ ವಯೋಮಾನದವರಾಗಿದ್ದು, ಕನ್ನಡ ಭಾಷೆ ಓದಲು ಮತ್ತು ಬರೆಯಲು ಬಲ್ಲವರಾಗಿರಬೇಕು. ಬಿಪಿಎಲ್ ಕಾರ್ಡ್ ಅಥವಾ ಜಾಬ್ ಕಾರ್ಡ್ ಹಾಗೂ ಆಧಾರ್ ಕಾರ್ಡ್‌ನ್ನು ಕಡ್ಡಾಯವಾಗಿ ಹೊಂದಿರುವ ಗ್ರಾಮೀಣ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು. ತರಬೇತಿಯು ಕಡ್ಡಾಯವಾಗಿ ವಸತಿಯುತವಾಗಿದ್ದು, ತರಬೇತಿಯ ಅವಧಿಯಲ್ಲಿ ಉಚಿತವಾಗಿ ಊಟ ಮತ್ತು ವಸತಿ ನೀಡಲಾಗುವುದು ಹಾಗೂ ತರಬೇತಿ ಪೂರ್ಣಗೊಂಡ ನಂತರ ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯದಿಂದ ಪ್ರಮಾಣಪತ್ರವನ್ನು ವಿತರಿಸಲಾಗುವುದು. ಆಸಕ್ತರು ಅರ್ಜಿ ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ ರುಡ್‌ಸೆಟ್ ಸಂಸ್ಥೆ, ಅರಿಶಿನಕುಂಟೆ, ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ 9380162042, 9241482541, 9740982585, 9113880324 ಅನ್ನು ಸಂಪರ್ಕಿಸುವಂತೆ ರುಡ್‌ಸೆಟ್ ಸಂಸ್ಥೆಯ ಬೆಂಗಳೂರು ಶಾಖೆಯ ನಿರ್ದೇಶಕ ರವಿಕುಮಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • ಮತ್ತೊಂದು ಡಿಜಿಟಲ್ ಕಾರ್ಯಾಚರಣೆ : ಗೂಗಲ್ ಪ್ಲೇ ಸ್ಟೋರ್‌ನಿಂದ 119 ಅಪ್ಲಿಕೇಶನ್ ಡಿಲೀಟ್

    ಮತ್ತೊಂದು ಡಿಜಿಟಲ್ ಕಾರ್ಯಾಚರಣೆ : ಗೂಗಲ್ ಪ್ಲೇ ಸ್ಟೋರ್‌ನಿಂದ 119 ಅಪ್ಲಿಕೇಶನ್ ಡಿಲೀಟ್

    ನವದೆಹಲಿ : ಗೂಗಲ್ ಪ್ಲೇ ಸ್ಟೋರ್‌ನಿಂದ 119 ಚೀನೀ ಅಪ್ಲಿಕೇಶನ್‌ಗಳನ್ನು ತೆಗೆದುಹಾಕಲು ಸೂಚನೆ ನೀಡುವ ಮೂಲಕ ಸರ್ಕಾರವು ಮತ್ತೊಂದು ಡಿಜಿಟಲ್ ಕಾರ್ಯಾಚರಣೆ ಪ್ರಾರಂಭಿಸಿದೆ.

    ಈ ಅಪ್ಲಿಕೇಶನ್‌ಗಳು ಚೀನಾ ಮತ್ತು ಹಾಂಗ್ ಕಾಂಗ್‌ನ ಡೆವಲಪರ್‌ಗಳ ಜೊತೆ ಸಂಪರ್ಕ ಹೊಂದಿವೆ, ನಿರ್ಬಂಧಿಸಿದ ಅಪ್ಲಿಕೇಶನ್‌ಗಳಲ್ಲಿ ಹಲವು ವೀಡಿಯೊ ಮತ್ತು ಧ್ವನಿ ಚಾಟ್ ಪ್ಲಾಟ್‌ಫಾರ್ಮ್‌ಗಳು ಸೇರಿವೆ. ಈ ಎಲ್ಲಾ ಅಪ್ಲಿಕೇಶನ್‌ಗಳು ಭಾರತದ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದ್ದವು. ಈ ಅಪ್ಲಿಕೇಶನ್‌ಗಳು ಭಾರತದ ರಾಷ್ಟ್ರೀಯ ಭದ್ರತೆ ಮತ್ತು ಸಾರ್ವಭೌಮತೆಗೆ ಅಪಾಯವನ್ನುಂಟು ಮಾಡುತ್ತದೆ ಎಂಬ ಆತಂಕದ ನಂತರ ಈ ಕ್ರಮವು ಬಂದಿದೆ. ಈ ಮೊದಲು ಟಿಕ್‌ಟಾಕ್ ಮತ್ತು ಶೇರ್‌ ಇಟ್‌ನಂತಹ ಜನಪ್ರಿಯ ಅಪ್ಲಿಕೇಶನ್‌ಗಳನ್ನು ಒಳಗೊಂಡಂತೆ ನೂರಾರು ಚೀನೀ ಅಪ್ಲಿಕೇಶನ್‌ಗಳನ್ನು ನಿರ್ಬಂಧಿಸುವ ಮೂಲಕ ಭಾರತವು 2020 ರಲ್ಲಿ ಡಿಜಿಟಲ್ ನಿಷೇಧವನ್ನು ಪ್ರಾರಂಭಿಸಿತು.

    ಮನಿ ಕಂಟ್ರೋಲ್‌ನ ವರದಿ ಪ್ರಕಾರ, ಇಷ್ಟೊಂದು ದೊಡ್ಡ ಸಂಖ್ಯೆಯ ಮೊಬೈಲ್‌ ಆ್ಯಪ್​ಗಳನ್ನು ನಿಷೇಧಿಸುವ ನಿರ್ಧಾರ 2020 ರ ನಂತರ ಇದೇ ಮೊದಲ ಬಾರಿ ಆಗಿದೆ. 2020 ರಲ್ಲಿ ಸಹ, ಕೇಂದ್ರ ಸರ್ಕಾರವು ಚೀನಾದ ಅಪ್ಲಿಕೇಶನ್‌ಗಳ ಮೇಲೆ ನಿಷೇಧವನ್ನು ಪ್ರಕಟಿಸಿತ್ತು. ಈ ಬಾರಿಯೂ ರಾಷ್ಟ್ರೀಯ ಭದ್ರತಾ ಕಾಳಜಿಯನ್ನು ಉಲ್ಲೇಖಿಸಿ ಮೊಬೈಲ್ ಅಪ್ಲಿಕೇಶನ್‌ಗಳನ್ನು ನಿಷೇಧಿಸಲಾಗಿದೆ.

    ಚೀನೀ ಅಪ್ಲಿಕೇಶನ್‌ಗಳ ಮೇಲಿನ ಈ ನಿಷೇಧವನ್ನು ಜಾರಿಗೊಳಿಸಲು ಕೇಂದ್ರ ಸರ್ಕಾರವು ಐಟಿ ಕಾಯಿದೆ 69A ಅನ್ನು ಜಾರಿಗೊಳಿಸಿತು. ನಿಷೇಧಿತ ಪಟ್ಟಿಯಲ್ಲಿರುವ ಕೆಲವು ಅಪ್ಲಿಕೇಶನ್‌ಗಳನ್ನು ಸಿಂಗಾಪುರ, ಅಮೆರಿಕ, ಯುಕೆ ಮತ್ತು ಆಸ್ಟ್ರೇಲಿಯಾ ದೇಶದ ಕಂಪನಿಗಳು ಅಭಿವೃದ್ಧಿಪಡಿಸಿವೆ.

    ವರದಿಯ ಪ್ರಕಾರ, ಭಾರತ ಸರ್ಕಾರವು ಈ ಅಪ್ಲಿಕೇಶನ್‌ಗಳಿಗೆ ಸಾರ್ವಜನಿಕ ಪ್ರವೇಶವನ್ನು ಸ್ಥಗಿತಗೊಳಿಸಿದೆ ಮತ್ತು 119 ರಲ್ಲಿ 15 ಅನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ ತೆಗೆದುಹಾಕಲಾಗಿದೆ, ಇನ್ನೂ ಹಲವಾರು ಪ್ರವೇಶಿಸಬಹುದಾಗಿದೆ.

    ಭಾರತ ಸರ್ಕಾರ ನಿರ್ಬಂಧಿಸಿದ 119 ಅಪ್ಲಿಕೇಶನ್‌ಗಳಲ್ಲಿ, ಕೇವಲ ಮೂರು ಅಪ್ಲಿಕೇಶನ್‌ಗಳ ಹೆಸರು ಮಾತ್ರ ರಿವೀಲ್ ಆಗಿದೆ. ಇವುಗಳಲ್ಲಿ ಸಿಂಗಾಪುರ ಮೂಲದ ವಿಡಿಯೋ ಚಾಟ್ ಮತ್ತು ಗೇಮಿಂಗ್ ಪ್ಲಾಟ್‌ಫಾರ್ಮ್ ಚಿಲ್‌ಚಾಟ್, ಚೀನೀ ಡೆವಲಪರ್ ಚಾಂಗ್‌ ಆ್ಯಪ್ ಮತ್ತು ಆಸ್ಟ್ರೇಲಿಯಾದ ಅಪ್ಲಿಕೇಶನ್ ಹನಿಕಾಂಬ್ ಸೇರಿವೆ. ಭದ್ರತಾ ಕಾರಣಗಳಿಗಾಗಿ ನಿಷೇಧಿಸಲಾದ ಅಪ್ಲಿಕೇಶನ್‌ಗಳ ಪಟ್ಟಿಯನ್ನು ಸರ್ಕಾರ ಬಿಡುಗಡೆ ಮಾಡಿಲ್ಲ.

  • ಶಿರಸಿ ನಗರ ಠಾಣೆ ಮಾದರಿ ಪೊಲೀಸ್ ಸ್ಟೇಷನ್..!

    ಶಿರಸಿ ನಗರ ಠಾಣೆ ಮಾದರಿ ಪೊಲೀಸ್ ಸ್ಟೇಷನ್..!

    ಶಿರಸಿ: ಜಿಲ್ಲೆಯ 30 ಪೊಲೀಸ್ ಠಾಣೆಗಳಲ್ಲಿ ಶಿರಸಿ ನಗರ ಠಾಣೆಯನ್ನು ಮಾದರಿ ಪೊಲೀಸ್ ಠಾಣೆಯಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಮ್. ನಾರಾಯಣ ಆಯ್ಕೆ ಮಾಡಿದ್ದಾರೆ.

    ಠಾಣೆಯಲ್ಲಿನ ಕಡತಗಳು ಹಾಗೂ ದಸ್ತಾವೇಜುಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿಕೊಂಡು ಬರುವುದು ಹಾಗೂ ಠಾಣೆಯ ಒಳ ಆವರಣವನ್ನು ಹೈಟೆಕ್ ಆಗಿ ನಿರ್ವಹಿಸುವುದು ಬಂದಂತಹ ಸಾರ್ವಜನಿಕರಿಗೆ ಜನಸ್ನೇಹಿಯಾಗಿ ವ್ಯವಹರಿಸುವುದು ಸೇರಿದಂತೆ ಹಲವು ನಿಬಂಧನೆಗಳನ್ನು ಹೇರಿ ಉತ್ತರ ಕನ್ನಡ ಜಿಲ್ಲೆಯ ಮಾದರಿ ಪೊಲೀಸ್ ಠಾಣೆಯಾಗಿ ಶಿರಸಿ ನಗರ ಪೊಲೀಸ್ ಠಾಣೆಯನ್ನು ಆಯ್ಕೆ ಮಾಡಲಾಗಿದೆ.

    ಈಗಾಗಲೇ ನಗರ ಠಾಣೆಗೆ ಹೈಟೆಕ್ ಸ್ಪರ್ಶ ನೀಡಲಾಗುತ್ತಿದ್ದು, ಪಿಎಸ್‌ಐ ನಾಗಪ್ಪ ಬಿ. ಮುತುವರ್ಜಿ ವಹಿಸಿ ಠಾಣೆಯ ಸೌಂದರ್ಯವನ್ನು ಹಾಗೂ ಸೌಲಭ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸಾರ್ವಜನಿಕರಿಗೆ ನೀಡಲು ಕ್ರಮ ಕೈಗೊಂಡಿದ್ದಾರೆ. ಠಾಣೆಯ ಒಳ ಆವರಣದ ಪರಿವರ್ತನೆ ಕಾರ್ಯ ಭರದಿಂದ ಸಾಗಿದೆ.