Satwadhara News

Category: Business

  • ಗೂಗಲ್ ಪೇಗೂ ಬಂದಿದೆ ಯುಪಿಐ ಲೈಟ್ (UPI Lite) ಫೀಚರ್ : ಗೂಗಲ್ ಪೇನಲ್ಲಿ ಯುಪಿಐ ಲೈಟ್ ಆ್ಯಕ್ಟಿವೇಟ್​ಗೊಳಿಸುವುದು ಹೇಗೆ?

    ಗೂಗಲ್ ಪೇಗೂ ಬಂದಿದೆ ಯುಪಿಐ ಲೈಟ್ (UPI Lite) ಫೀಚರ್ : ಗೂಗಲ್ ಪೇನಲ್ಲಿ ಯುಪಿಐ ಲೈಟ್ ಆ್ಯಕ್ಟಿವೇಟ್​ಗೊಳಿಸುವುದು ಹೇಗೆ?

    ಕೇಂದ್ರ ಸರ್ಕಾರದ ಎನ್​ಪಿಸಿಐ ರೂಪಿಸಿರುವ ಯುಪಿಐ ಲೈಟ್ (UPI Lite) ಫೀಚರ್ ಪೇಟಿಎಂ, ಫೋನ್ ಪೇ ಬಳಿಕ ಇದೀಗ ಗೂಗಲ್ ಪೇಗೂ ಬಂದಿದೆ. ಯುಪಿಐ ಪಿನ್ ನಮೂದಿಸುವ ಅವಶ್ಯಕತೆ ಇಲ್ಲದೆ ಸುಲಭವಾಗಿ ಸಣ್ಣ ಹಣದ ವಹಿವಾಟು ನಡೆಸಲು ಯುಪಿಐ ಲೈಟ್ ಅನುಕೂಲವಾಗಿದೆ. ಬ್ಯಾಂಕ್ ಸರ್ವರ್ ಕೆಲಸ ಮಾಡುತ್ತಿಲ್ಲ ಎಂದು ಚಿಂತೆ ಪಡುವ ಅವಶ್ಯಕತೆ ಇಲ್ಲದೇ 200 ರೂ ಒಳಗಿನ ವಹಿವಾಟನ್ನು ಯುಪಿಐ ಲೈಟ್ ಮೂಲಕ ಮಾಡಬಹುದಾಗಿದೆ.

    ಯುಪಿಐ ಲೈಟ್​ನಲ್ಲಿ ಸಣ್ಣ ಮೊತ್ತದ ಹಣದ ವಹಿವಾಟು ಮಾತ್ರ ಸಾಧ್ಯ. ನೀವು 200 ರೂವರೆಗಿನ ವಹಿವಾಟು ಮಾಡಬಹುದು. ಗೂಗಲ್ ಪೇನಲ್ಲಿ ನೀವು 200 ರೂ ಒಳಗಿನ ಹಣದ ಪಾವತಿ ಮಾಡುವಾಗ ಡೀಫಾಲ್ಟ್ ಆಗಿ ಯುಪಿಐ ಲೈಟ್ ಆಯ್ಕೆ ಆಗಿರುತ್ತದೆ.

    ಯುಪಿಐ ಲೈಟ್ ಒಂದು ರೀತಿಯಲ್ಲಿ ವ್ಯಾಲಟ್​ನಂತೆ ಕೆಲಸ ಮಾಡುತ್ತದೆ. ಪೇಟಿಎಂ ಮತ್ತು ಫೋನ್ ಪೇನಲ್ಲಿ ವ್ಯಾಲಟ್​ಗಳಿದ್ದು ಅಲ್ಲಿಗೆ ನೀವು ಎಷ್ಟು ಬೇಕಾದರೂ ಹಣ ತುಂಬಿಸಬಹುದು. ಯುಪಿಐ ಸ್ಕ್ಯಾನ್ ಮಾಡಿದಾಗ ಹಣದ ಪಾವತಿಗೆ ಇದೇ ವ್ಯಾಲಟ್ ಅನ್ನು ಬಳಸಬಹುದು. ಬ್ಯಾಂಕ್ ಸರ್ವರ್​ಗೆ ಹೋಗಬೇಕಿಲ್ಲ, ಪಿನ್ ನಮೂದಿಸಬೇಕಿಲ್ಲ. ಯುಪಿಐ ಲೈಟ್ ಕೂಡ ಅದೇ ರೀತಿ ಕೆಲಸ ಮಾಡುತ್ತದೆ.

    ವ್ಯಾಲಟ್​ಗಳಲ್ಲಿ ನೀವು ಎಷ್ಟು ಬೇಕಾದರೂ ಹಣ ತುಂಬಿಸಬಹುದು. ಆದರೆ, ಯುಪಿಐ ಲೈಟ್​ನ ಅಕೌಂಟ್​ನಲ್ಲಿ 2,000 ರೂಗಿಂತ ಹೆಚ್ಚು ಹಣ ಇಡುವುದಕ್ಕೆ ಅವಕಾಶ ಇಲ್ಲ. ಬಹಳ ಸಣ್ಣ ಮೊತ್ತದ ಹಣದ ವಹಿವಾಟಿಗೆಂದು ಲೈಟ್ ಅನ್ನು ರೂಪಿಸಲಾಗಿದೆ.

    ಗೂಗಲ್ ಪೇನಲ್ಲಿ ಯುಪಿಐ ಲೈಟ್ ಆ್ಯಕ್ಟಿವೇಟ್​ಗೊಳಿಸುವುದು ಹೇಗೆ?

    • ಗೂಗಲ್ ಪೇ ಆ್ಯಪ್ ಇದ್ದರೆ ಅದನ್ನು ಅಪ್​ಡೇಟ್ ಮಾಡಿ, ಬಳಿಕ ಆ್ಯಪ್ ಓಪನ್ ಮಾಡಿ.
    • ಮೇಲ್ಗಡೆ ಇರುವ ಪ್ರೊಫೈಲ್ ಚಿತ್ರ ಒತ್ತಿರಿ
    • ಸೆಟಪ್ ಪೇಮೆಂಟ್ ಮೆಥಡ್ಸ್ ಮೇಲೆ ಕ್ಲಿಕ್ ಮಾಡಿ.
    • ಆ್ಯಕ್ಟಿವೇಟ್ ಯುಪಿಐ ಲೈಟ್ ಅನ್ನು ಒತ್ತಿರಿ
    • ಕಂಟಿನ್ಯೂ ಮೇಲೆ ಒತ್ತಿರಿ.

    ಯುಪಿಐ ಲೈಟ್​ನ ಖಾತೆಯಲ್ಲಿ ಗರಿಷ್ಠ 2,000 ರೂವರೆಗೆ ಮಾತ್ರ ಹಣ ಜಮೆ ಮಾಡಲು ಸಾಧ್ಯ. ದಿನಕ್ಕೆ ಎರಡು ಬಾರಿ 2,000 ರೂ ಹಣವನ್ನು ತುಂಬಿಸಬಹುದಾದರೂ ಏಕಸಮಯದಲ್ಲಿ ಯುಪಿಐ ಲೈಟ್ ಖಾತೆಯಲ್ಲಿ 2,000 ರೂಗಿಂತ ಹೆಚ್ಚು ಹಣ ಇರುವಂತಿಲ್ಲ. ಒಟ್ಟಾರೆ ದಿನಕ್ಕೆ ಯುಪಿಐ ಲೈಟ್ ಮೂಲಕ ಗರಿಷ್ಠ 4,000 ರೂವರೆಗೆ ಹಣ ವಹಿವಾಟು ನಡೆಸಬಹುದು. ಒಂದು ವಹಿವಾಟಿನಲ್ಲಿ 200 ರೂಗಿಂತ ಹೆಚ್ಚಿನ ಹಣದ ವರ್ಗಾವಣೆ ಸಾಧ್ಯವಿಲ್ಲ.

  • ‘ಗೃಹ ಜ್ಯೋತಿ’ ಯೋಜನೆ ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಘೋಷಣೆ

    ‘ಗೃಹ ಜ್ಯೋತಿ’ ಯೋಜನೆ ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಘೋಷಣೆ

    ಬೆಂಗಳೂರುಸರ್ಕಾರದ ಮಹತ್ವಾಂಕ್ಷಿ ಗ್ಯಾರಂಟಿ ಯೋಜನೆಗಳಲ್ಲೊಂದಾದ ಗೃಹ ಜ್ಯೋತಿ ಯೋಜನೆಗೆ ರಾಜ್ಯ ಸರ್ಕಾರ ಡೆಡ್ ಲೈನ್ ವಿಧಿಸಿದೆ. ಗೃಹ ಜ್ಯೋತಿ ಕುರಿತಂತೆ ವಿಧಾನಸಭೆಯಲ್ಲಿ ನಡೆದ ಚರ್ಚೆಯ ವೇಳೆ ಖುದ್ದು ಇಂಧನ ಸಚಿವರೇ ಈ ಬಗ್ಗೆ ಉತ್ತರ ಕೊಟ್ಟಿದ್ದಾರೆ. ವಿಧಾನಸಭೆಯಲ್ಲಿ ನಡೆದ ಚರ್ಚೆಯ ಸಂದರ್ಭದಲ್ಲಿ ವಿರೋಧ ಪಕ್ಷದವರು ಗೃಹ ಜ್ಯೋತಿ ಯೋಜನೆ ಜಾರಿಯಲ್ಲಿ ಆಗಿರುವ ಗೊಂದಲಗಳ ಬಗ್ಗೆ ಮಾತನಾಡಿದರು. ಈ ಸಂದರ್ಭದಲ್ಲಿ ಉತ್ತರ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್, ಗೃಹ ಜ್ಯೋತಿಗೆ ಅರ್ಜಿ ಸಲ್ಲಿಸಲು ಈ ಮೊದಲು ಕಡೆಯ ದಿನಾಂಕವನ್ನು ನಿಗದಿಪಡಿಸಿರಲಿಲ್ಲ. ಈಗ, ಕಡೆಯ ದಿನಾಂಕವನ್ನು ನಿಗದಿಪಡಿಸಲು ನಿರ್ಧರಿಸಿದ್ದೇವೆ. ಅದರಂತೆ, ಜು. 27 ಗೃಹ ಜ್ಯೋತಿ ಅರ್ಜಿ ಸಲ್ಲಿಕೆಗೆ ಕಡೆಯ ದಿನವಾಗಿರುತ್ತದೆ ಎಂದು ಜಾರ್ಜ್ ತಿಳಿಸಿದ್ದಾರೆ.

    ಪ್ರತಿ ಜಿಲ್ಲೆ, ತಾಲೂಕುಗಳಲ್ಲಿ ವಿದ್ಯುತ್ ಅದಾಲತ್

    ಜೂ. 27ರಂದು ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಲು ಕಡೆಯ ದಿನಾಂಕವಾಗಿರುತ್ತದೆ. ಆನಂತರ 2 ತಿಂಗಳವರೆಗೆ ವಿದ್ಯುತ್ ಅದಾಲತ್ ನಡೆಸುತ್ತೇವೆ. ಪ್ರತಿ ಜಿಲ್ಲೆ, ತಾಲೂಕುಗಳಲ್ಲಿನ ಆಯಾ ಪ್ರಾಂತ್ಯದ ವಿದ್ಯುತ್ ಕಚೇರಿಗಳಲ್ಲಿ ವಿದ್ಯುತ್ ಅದಾಲತ್ ನಡೆಸುತ್ತೇವೆ. ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸದವರಿಗಾಗಿ ಆ ಅದಾಲತ್ ನಡೆಯುತ್ತದೆ. ಅಲ್ಲಿ ಅರ್ಜಿ ಸಲ್ಲಿಕೆಗೆ ಆಗಿರುವ ತೊಂದರೆಗಳನ್ನು ಗಮನಿಸಿ, ಅರ್ಹರ ಅರ್ಜಿಗಳನ್ನು ಸ್ವೀಕರಿಸಿ ಅವರನ್ನು ಯೋಜನೆಯ ವ್ಯಾಪ್ತಿಯೊಳಗೆ ತರುತ್ತೇವೆ ಎಂದು ಅವರು ಹೇಳಿದ್ದಾರೆ.

    ಆಗಸ್ಟ್ ನಲ್ಲಿ ಬಿಲ್ ಕಟ್ಟೋಹಾಗಿಲ್ಲ!

    ನಂತರ ತಮ್ಮ ಮಾತು ಮುಂದುವರಿಸಿದ ಅವರು, “200 ಯೂನಿಟ್ ಗಿಂತ ಕಡಿಮೆ ವಿದ್ಯುತ್ ಬಳಸುತ್ತಿರುವ ಎಲ್ಲರಿಗೂ ನಾವು ಉಚಿತ ವಿದ್ಯುತ್ ನೀಡುತ್ತೇವೆ. ಇದರಲ್ಲಿ ಮಾತು ತಪ್ಪುವ ಪ್ರಮೇಯವೇ ಇಲ್ಲ. ಜುಲೈನಲ್ಲಿ ಬಳಸಲಾಗಿರುವ ವಿದ್ಯುತ್ ಬಿಲ್ ಆಗಸ್ಟ್ ನಲ್ಲಿ ಬರುತ್ತದೆ. 200 ಯೂನಿಟ್ ಗಿಂತ ಕೆಳಗೆ ವಿದ್ಯುತ್ ಬಳಸಿರುವವರು ವಿದ್ಯುತ್ ಕಟ್ಟುವ ಹಾಗಿಲ್ಲ ಎಂದು ಅವರು ತಿಳಿಸಿದ್ದಾರೆ.

  • ಟಿಗೋರ್ ಇವಿಯನ್ನು ಬಿಡುಗಡೆ ಮಾಡಿದೆ ಟಾಟಾ ಮೋಟಾರ್ಸ್ ಎಲೆಟ್ರಿಕ್ ವಾಹನಗಳ ವಿಭಾಗ

    ಟಿಗೋರ್ ಇವಿಯನ್ನು ಬಿಡುಗಡೆ ಮಾಡಿದೆ ಟಾಟಾ ಮೋಟಾರ್ಸ್ ಎಲೆಟ್ರಿಕ್ ವಾಹನಗಳ ವಿಭಾಗ

    ಭಾರತದಲ್ಲಿ ಟಾಟಾ ಮೋಟಾರ್ಸ್ ಎಲೆಟ್ರಿಕ್ ವಾಹನಗಳ ವಿಭಾಗದಲ್ಲಿ ಅಸ್ತಿತ್ವವನ್ನು ವಿಸ್ತರಿಸಿದ್ದು, ಟಿಗೋರ್ ಇವಿಯನ್ನು ಬಿಡುಗಡೆ ಮಾಡಿದೆ. ಬ್ಯಾಟರಿ ಚಾಲಿತ ಕಾಂಪಾಕ್ಟ್ ಸೆಡಾನ್ ಕಾರಿನ ಬೆಲೆ 11.99 ಲಕ್ಷದಿಂದ 13.14 ಲಕ್ಷದ ವರೆಗೆ ನಿಗದಿಯಾಗಿದ್ದು, ವೈಯಕ್ತಿಕ ವಿಭಾಗಗಳಿಗೆ ಮಂಗಳವಾರದಿಂದಲೇ ಡೆಲಿವರಿ ನೀಡುವುದು ಪ್ರಾರಂಭವಾಗಲಿದೆ.

    ಸಂಸ್ಥೆಯ ಪ್ರಯಾಣಿಕ ವಾಹನ ಉದ್ಯಮ ವಿಭಾಗದ ಅಧ್ಯಕ್ಷರಾದ ಶೈಲೇಶ್ ಚಂದ್ರ ಈ ಬಗ್ಗೆ ಮಾತನಾಡಿದ್ದು, ಬ್ಯಾಟರಿ ಅಳವಡಿಕೆ ವಿಧಾನಗಳಲ್ಲಿನ ಸವಾಲುಗಳು ಕಡಿಮೆಯಾಗಿದ್ದು, ಪ್ರಯಾಣಿಕ ಸ್ನೇಹಿಯಾಗುತ್ತಿರುವ ಹಿನ್ನೆಲೆಯಲ್ಲಿ ವಿದ್ಯುತ್ ಚಾಲಿತ ವಾಹನಗಳು ಹೆಚ್ಚು ಜನಪ್ರಿಯತೆ ಗಳಿಸುತ್ತಿವೆ.  ಪ್ರಯಾಣಿಕ ಸ್ನೇಹಿ ಸೌಲಭ್ಯಗಳು ನಮ್ಮದೇ ಸಂಸ್ಥೆಯ ನೆಕ್ಸಾನ್ ಇವಿಯಿಂದ ಮೊದಲುಗೊಂಡಿದ್ದು ಭಾರತೀಯ ಮಾರುಕಟ್ಟೆಯಲ್ಲಿ ಇಂದು ಅತ್ಯಂತ ಜನಪ್ರಿಯ ಇವಿ ವಾಹನ ಅದಾಗಿದೆ” ಎಂದು ತಿಳಿಸಿದ್ದಾರೆ.

    “ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ವಿದ್ಯುತ್ ಚಾಲಿತ ವಾಹನಗಳಿಗೆ ಬೆಂಬಲ ಹೆಚ್ಚುತ್ತಿದ್ದು, ಸಬ್ಸಿಡಿಗಳನ್ನು ನೀಡುತ್ತಿರುವುದು ವಿದ್ಯುತ್ ಚಾಲಿತ ವಾಹನಗಳ ಕ್ಷೇತ್ರದ ಬೆಳವಣಿಗೆಗೆ ಉತ್ತೇಜನಕಾರಿಯಾಗಿದೆ. ಇದರಿಂದ ನಾವು ವಿದ್ಯುತ್ ಚಾಲಿತ ವಾಹನಗಳನ್ನು ಹೆಚ್ಚು ಜನರಿಗೆ ತಲುಪಿಸಬಹುದು ಎಂದು ಶೈಲೇಶ್ ಚಂದ್ರ ತಿಳಿಸಿದ್ದಾರೆ.

    “ನಾವು ಇಂದು ಟಾಟ ಟಿಗೋರ್ ಇವಿ ಲೋಕಾರ್ಪಣೆಗೊಳಿಸಲು ಉತ್ಸುಕರಾಗಿದ್ದೇವೆ. ಈ ವಾಹನ ಜಿಪ್ಟ್ರೋನ್ ಚಾಲಿತ ತಂತ್ರಜ್ಞಾನವನ್ನು ಹೊಂದಿದ್ದು, ತಂತ್ರಜ್ಞಾನದಲ್ಲಿ ಅತ್ಯಾಧುನಿಕ ಸೆಡಾನ್ ನ್ನು ಖರೀದಿಸಲು ಯತ್ನಿಸುತ್ತಿರುವವರಿಗೆ ಇದು ಪರಿಪೂರ್ಣ ಆಯ್ಕೆಯಾಗಿದೆ” ಎಂದು ಹೇಳಿದ್ದಾರೆ.

    ಪ್ರಮಾಣಿತ ಪರೀಕ್ಷಾ ಪರಿಸ್ಥಿತಿಗಳಲ್ಲಿ ಟಾಟ ಟಿಗೋರ್ ಇವಿ ಎಆರ್ ಎಐ ಪ್ರಮಾಣಿತ 306 ಕಿ.ಮೀ ನ ವ್ಯಾಪ್ತಿಯನ್ನು ಹೊಂದಿದೆ. ಗರಿಷ್ಠ 55 ಕೆ ಡಬ್ಲ್ಯು ಔಟ್ ಪುಟ್ ಹಾಗೂ ಗರಿಷ್ಠ 170 ಎನ್ಎಂ ಟಾರ್ಕ್ ಇರುವ ಟಾಟಾ ಟಿಗೋರ್ 26-ಕೆಡಬ್ಲ್ಯುಹೆಚ್ ಲಿಕ್ವಿಡ್-ಕೂಲ್ಡ್ ಹೆಚ್ಚಿನ ಶಕ್ತಿ ಸಾಂದ್ರತೆಯ ಬ್ಯಾಟರಿ ಪ್ಯಾಕ್, ಐಪಿ 67 ರೇಟ್ ಮಾಡಲಾದ ಬ್ಯಾಟರಿ ಪ್ಯಾಕ್ ಗಳನ್ನು ಹೊಂದಿದೆ.

    ಟಾಟಾ ಟಿಗೋರ್ ಮೂರು ಆವೃತ್ತಿಗಳಲ್ಲಿ-XE, XM, XZ+ (XZ+ ಡ್ಯುಯಲ್ ಟೋನ್ ಆಯ್ಕೆ ಲಭ್ಯ) ಬರಲಿದ್ದು 8 ವರ್ಷಗಳು ಹಾಗೂ 160,000 ಕಿ.ಮೀ ಬ್ಯಾಟರಿ ಹಾಗೂ ಮೋಟರ್ ವಾರೆಂಟಿ ನೀಡಲಾಗುತ್ತದೆ.

    ಟಾಟಾ ಸಂಸ್ಥೆಯ ಪ್ರಕಾರ ಟಿಗೋರ್ ಇವಿಯ ಪರಿಣಾಮ ನಿರೋಧಕ ಬ್ಯಾಟರಿಯ ಕವಚ ಎಐಎಸ್-048 ಗುಣಮಟ್ಟದ ಅನುಸಾರವಾಗಿದೆ. 15ಎ ಪ್ಲಗ್ ಪಾಯಿಂಟ್ ನಿಂದ ವೇಗ ಅಥವಾ ನಿಧಾನಗತಿಯ ಚಾರ್ಜಿಂಗ್ ಆಯ್ಕೆ ಲಭ್ಯವಿದೆ. ವೇಗಗತಿಯ ಚಾರ್ಜಿಂಗ್ ನ್ನು ಆಯ್ಕೆ ಮಾಡಿಕೊಂಡಲ್ಲಿ ಒಂದು ಗಂಟೆಯಲ್ಲಿ ಶೇ.80 ರಷ್ಟು ಬ್ಯಾಟರಿ ಚಾರ್ಜ್ ಮಾಡಬಹುದಾಗಿದೆ. ಮನೆಯ ಸಾಕೆಟ್ ನಿಂದಲೇ ಚಾರ್ಜ್ ಮಾಡಿದಲ್ಲಿ 8 ಗಂಟೆಗಳ ಕಾಲ ಚಾರ್ಜ್ ಮಾಡಬೇಕಾಗುತ್ತದೆ.

  • ಕೃತಕ ಬುದ್ದಿಮತೆ (ಎಐ) ತಂತ್ರಜ್ಞಾನ ಅಳವಡಿಕೆ: ಶೇ. 90 ರಷ್ಟು ಸಿಬ್ಬಂದಿ ವಜಾ

    ಕೃತಕ ಬುದ್ದಿಮತೆ (ಎಐ) ತಂತ್ರಜ್ಞಾನ ಅಳವಡಿಕೆ: ಶೇ. 90 ರಷ್ಟು ಸಿಬ್ಬಂದಿ ವಜಾ

    ಬೆಂಗಳೂರುಬೆಂಗಳೂರು ಮೂಲದ ಸ್ಟಾರ್ಟ್‌ಅಪ್ ಡುಕಾನ್ ತನ್ನ ಶೇ. 90 ರಷ್ಟು ಗ್ರಾಹಕ ಬೆಂಬಲ ವಿಭಾಗದ ತಂಡವನ್ನು ಕೆಲಸದಿಂದ ತೆಗೆದುಹಾಕಿದ್ದು, ಅವರ ಜಾಗಕ್ಕೆ ಕೃತಕ ಬುದ್ದಿಮತೆ (ಎಐ) ತಂತ್ರಜ್ಞಾನವನ್ನು ಅಳವಡಿಸಿಕೊಂಡಿದ ನಂತರ ವಿವಾದದ ಕೇಂದ್ರಬಿಂದುವಾಗಿದೆ. ಕೃತಕ ಬುದ್ದಿಮತೆ (ಎಐ) ತಂತ್ರಜ್ಞಾನ ಅಳವಡಿಕೆ ನಂತರ ಗ್ರಾಹಕ ಬೆಂಬಲಕ್ಕೆ ಸಂಬಂಧಿಸಿದ ವೆಚ್ಚವು ಶೇಕಡ 85 ರಷ್ಟು ಕಡಿಮೆಯಾಗಿದೆ. ಅಲ್ಲದೇ ರೆಸಲ್ಯೂಷನ್ ಸಮಯ ಎರಡು ಗಂಟೆಗಳಿಂದ ಮೂರು ನಿಮಿಷಗಳಿಗೆ ಕಡಿಮೆಯಾಗಿದೆ ಎಂದು ದುಕಾನ್ ಸಂಸ್ಥಾಪಕ ಸುಮಿತ್ ಶಾ  ಟ್ವೀಟ್ ಮಾಡಿದ್ದಾರೆ.

    ಸುಮಿತ್ ಶಾ ಅವರ ಟ್ವೀಟ್ ಗೆ ಅನೇಕ ಟ್ವೀಟಿಗರು ಕಿಡಿಕಾರಿದ್ದು. ಈ “ಹೃದಯಹೀನ” ನಿರ್ಧಾರದಿಂದ ತಮ್ಮ ಸಿಬ್ಬಂದಿಯ ಜೀವನಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಎಐ ಚಾಟ್‌ಬಾಟ್‌ನಿಂದಾಗಿ  ಶೇ. 90 ರಷ್ಟು ಸಿಬ್ಬಂದಿಯನ್ನು ವಜಾಗೊಳಿಸಿದ್ದೇವೆ. ಕಠಿಣ?ನಿಜ , ಆದರೆ ಅಗತ್ಯವಾಗಿತ್ತು. ಇದರಿಂದಾಗಿ ಗ್ರಾಹಕ ಸಪೋರ್ಟ್ ಗೆ ಸಂಬಂಧಿಸಿದ ವೆಚ್ಚ ಶೇಕಡ 85 ರಷ್ಟು ಕಡಿಮೆಯಾಗಿದೆ. ಅಲ್ಲದೇ ರೆಸೆಲ್ಯೂಷನ್ ಸಮಯ ಎರಡು ಗಂಟೆಗಳಿಂದ ಮೂರು ನಿಮಿಷಗಳಿಗೆ ಕಡಿಮೆಯಾಗಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

    ಸುಮಿತ್ ಶಾ ಡುಕಾನ್ ನ ಸಹ-ಸಂಸ್ಥಾಪಕ ಮತ್ತು ಸಿಇಒಆಗಿದ್ದಾರೆ, ಇದು ಡಿಐವೈ ಪ್ಲಾಟ್‌ಫಾರ್ಮ್ ಆಗಿದ್ದು, ಇದು ಯಾವುದೇ ಅನುಭವ ಹೊಂದಿರದ ವ್ಯಾಪಾರಿಗಳು ಹಾಗೂ ಚಿಲ್ಲರೆ ವ್ಯಾಪಾರಿಗಳಿಗೂ ಇ- ಕಾರ್ಮಸ್ ಸ್ಟೋರ್ ತೆರೆಯಲು ನೆರವಾಗುತ್ತದೆ. ಸುಮಿತ್ ಶಾ ಅವರು 2020ರಲ್ಲಿ ಸುಭಾಷ್ ಚೌಧರಿ ಅವರ ಜೊತೆ ಸೇರಿ ಡುಕಾನ್ ಸ್ಥಾಪಿಸಿದ್ದಾರೆ. 

  • ಮೊಬೈಲ್ ಗೆ ಬರುವ ಲಿಂಕ್ ಒತ್ತಿದರೆ ನಿಮ್ಮ ಖಾತೆಗೆ ಕನ್ನ..! : ನಕಲಿ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಹೆಸರಿನಲ್ಲಿ ಮೋಸ :ಕುಮಟಾದಲ್ಲಿಯೂ ವಂಚನೆಗೊಳಗಾದ ಪ್ರಕರಣ.

    ಮೊಬೈಲ್ ಗೆ ಬರುವ ಲಿಂಕ್ ಒತ್ತಿದರೆ ನಿಮ್ಮ ಖಾತೆಗೆ ಕನ್ನ..! : ನಕಲಿ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಹೆಸರಿನಲ್ಲಿ ಮೋಸ :ಕುಮಟಾದಲ್ಲಿಯೂ ವಂಚನೆಗೊಳಗಾದ ಪ್ರಕರಣ.

    ಕುಮಟಾ : ತಂತ್ರಜ್ಞಾನ ಬೆಳೆಯುತ್ತಿದ್ದಂತೆ ಅವುಗಳ ದುರುಪಯೋಗ ಪಡಿಸಿಕೊಳ್ಳುತ್ತಿರುವ ದುರುಳರು, ಸಾರ್ವಜನಿಕರನ್ನು ಸುಲಿಕೆ ಮಾಡುತ್ತಿದ್ದಾರೆ. ನಕಲಿ ಫೇಸ್ಬುಕ್, ನಕಲಿ ಬ್ಯಾಂಕ್ ಖಾತೆ ಮೆಸೇಜ್, ನಕಲಿ ಫೋನ್ ಕಾಲ್ಗಳ ಮೂಲಕ ಹಣ ಎದುರಿಸುತ್ತಿದ್ದ ಹ್ಯಾಕರ್ ಗಳು ಇದೀಗ 170 ವರ್ಷಗಳ ಇತಿಹಾಸ ಹೊಂದಿರುವ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಹೆಸರಿನಲ್ಲಿಯೂ ವಂಚನೆಗಿಳಿದಿರುವುದು ಬೆಳಕಿಗೆ ಬಂದಿದೆ.

    ನಕಲಿ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಖಾತೆ ಹೆಸರಿನಲ್ಲಿ ಮೊಬೈಲ್‍ಗಳಿಗೆ ಬಂದ ಸಂದೇಶದಿಂದ ಇದೇ ಮೊದಲ ಬಾರಿಗೆ ಕುಮಟಾದ ಶಿಕ್ಷಕರೊಬ್ಬರಿಗೆ 2,600 ರೂ. ವಂಚನೆ ಮಾಡಲಾಗಿದೆ. ಅದಷ್ಟೇ ಅಲ್ಲದೇ ಉತ್ತರ ಕನ್ನಡ ಜಿಲ್ಲೆಯ ಅನೇಕ ಗ್ರಾಹಕರು ತಮ್ಮ ಬ್ಯಾಂಕ್ ಖಾತೆಯಿಂದ ಸಾವಿರಾರು ರೂಪಾಯಿ ಹಣ ಕಳೆದುಕೊಂಡಿರುವ ಆತಂಕಕಾರಿ ವಿಷಯವೂ ಇದೇ ಸಂದರ್ಭದಲ್ಲಿ ಬೆಳಕಿಗೆ ಬಂದಿದೆ.

    ರಾಷ್ಟ್ರ ವ್ಯಾಪಿ ಹೆಸರುವಾಸಿಯಾಗಿರುವ ಹಾಗೂ ಉತ್ತಮ ಸೇವೆಯಿಂದಲೇ ಜನಮನ್ನಣೆ ಪಡೆದಿರುವ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ನಿಂದ ಅಂತಹ ಸಂದೇಶ ಬರಲು ಸಾಧ್ಯವಿಲ್ಲ‌ ಎಂದು ಜನರು ನಂಬಿದ್ದರು, ಆದರೆ ಇದೀಗ ಕುಮಟಾ, ಕಾರವಾರ, ಸಿದ್ದಾಪುರ, ಸಿರ್ಸಿ ಭಾಗದಲ್ಲಿ ಗ್ರಾಹಕರ ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕಿರುವ ಬಗ್ಗೆ ಮಾಹಿತಿ ಸಿಕ್ಕಿದೆ.

    ಇತ್ತೀಚಿನ ದಿನಗಳಲ್ಲಿ ಇಂಡಿಯಾ ಪೋಸ್ಟ್ ಹೆಸರಿನಲ್ಲಿ ಮೊಬೈಲ್‍ಗಳಿಗೆ ವಿವಿಧ ವೆಬ್ಸೈಟ್ ಲಿಂಕ್ ಗಳು, ವಾಟ್ಸಪ್, ಟೆಲಿಗ್ರಾಮ್, ಇನ್ಸ್ಟ್ರಾಗ್ರಾಂ ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಸಣ್ಣ ಯು.ಆರ್.ಎಲ್‍ಗಳನ್ನು ಒಳಗೊಂಡಿರುವ ಇಮೇಲ್‍ಗಳು, ಎಸ್.ಎಂ.ಎಸ್ ಮೂಲಕ ಹರಿದಾಡುತ್ತಿವೆ. ಈ ಎಸ್.ಎಂ.ಎಸ್‍ನಲ್ಲಿ ಬಂದ ಸಂದೆಶದಲ್ಲಿ ತಮ್ಮ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಖಾತೆ ಶೀಘ್ರದಲ್ಲಿಯೇ ರದ್ದಾಗಲಿದ್ದು, ಕೂಡಲೇ ಪಿ.ಇ.ಎನ್, ಕೆ.ವೈ.ಸಿ ಅಪ್ಡೇಟ್ ಮಾಡಬೇಕು ಎಂಬ ಮಾಹಿತಿ ಇರುತ್ತದೆ.

    ಆ ಮೆಸೇಜ್ ನ ಕೆಳಗೆ ಲಿಂಕ್ ಅನ್ನು ಸಹ ಕೊಡಲಾಗುತ್ತದೆ. ಈ ಲಿಂಕ್‍ಗಳನ್ನು ಕ್ಲಿಕ್ ಮಾಡಿದ ಕೂಡಲೇ ನಕಲಿ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಖಾತೆ ತೆರೆಯುತ್ತವೆ. ಗ್ರಾಹಕರು ಹಂತಹಂತವಾಗಿ ತಮಗೆ ಬಂದ ಓ.ಟಿ.ಪಿ ನಮೂದಿಸುತ್ತಿದ್ದಂತೆ ತಾನಾಗಿಯೇ ಗ್ರಾಹಕರ ಬ್ಯಾಂಕ್ ಖಾತೆಯಲ್ಲಿರುವ ಹಣ ವರ್ಗಾವಣೆಯಾಗುತ್ತಿರುವುದು ಸಾಬೀತಾಗಿದೆ.

    ನಕಲಿ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಖಾತೆ ಹೆಸರಿನಲ್ಲಿ ಜಿಲ್ಲೆಯ ನಾಲ್ವರು ವಂಚನೆಗೊಳಗಾಗಿದ್ದಾರೆ. ಈ ಪೈಕಿ ಕಾರವಾರದಲ್ಲಿ ಖಾಸಗಿ ಕಾಲೇಜು ಒಂದರ ಉಪನ್ಯಾಸಕರಿಗೆ 25 ಸಾವಿರ ರೂ., ಕುಮಟಾದ ಶಿಕ್ಷಕರೊಬ್ಬರಿಗೆ 2,600 ರೂ., ಸಿರ್ಸಿಯಲ್ಲಿ 20 ಸಾವಿರ ರೂ. ಹಾಗೂ ಸಿದ್ಧಾಪುರದಲ್ಲಿ 20 ಸಾವಿರ ರೂ. ಹಣವನ್ನು ಗ್ರಾಹಕರು ತಮ್ಮ ಖಾತೆಯಿಂದ ಹಣ ಕಳೆದುಕೊಂಡು ವಂಚನೆಗೊಳಗಾಗಿದ್ದಾರೆ.

    ಈ ಬಗ್ಗೆ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಕುಮಟಾ ಪ್ರಧಾನ ಅಂಚೆ ಕಛೇರಿಗೆ ಆಗಮಿಸಿದ ಕಾರವಾರ ಅಂಚೆ ವಿಭಾಗದ ಅಧೀಕ್ಷಕರು, ಗ್ರಾಹಕರಿಗೆ ಅಗತ್ಯವಾದ ಮಾಹಿತಿ ನೀಡುವಂತೆ ಸಿಬ್ಬಂದಿಗೆ ಸೂಚಿಸಿದ್ದಾರೆ. ಜೊತೆಗೆ ಇಂತಹ ಕೃತ್ಯವನ್ನು ತಡೆಯಲು ಇಂಡಿಯಾ ಪೋಸ್ಟ್ ಅಗತ್ಯ ಕ್ರಮವನ್ನು ತೆಗೆದುಕೊಳ್ಳುತ್ತಿದೆ. ಗ್ರಾಹಕರು ಯಾವುದೇ ಕಾರಣಕ್ಕೂ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಮೇಲಿನ ವಿಶ್ವಾಸವನ್ನು ಕಳೆದುಕೊಳ್ಳಬಾರದು ಎಂದು ತಿಳಿಸಿದ್ದಾರೆ.

    ಒಂದು ಕ್ಲಿಕ್ ಮೂಲಕ ಗ್ರಾಹಕರು ತಮ್ಮ ಖಾತೆಯಲ್ಲಿನ ಹಣವನ್ನು ಹ್ಯಾಕರ್‍ಗಳ ಖಾತೆಗೆ ವರ್ಗಾಯಿಸುವಂತಾಗುತ್ತಿದ್ದು, ಮೊಬೈಲ್‍ಗಳಿಗೆ ಬಂದ ಲಿಂಕ್‍ಗಳನ್ನು ಒತ್ತುವ ಮುನ್ನ ಎಚ್ಚರಿಕೆ ವಹಿಸಬೇಕಾಗಿದೆ. ಮತ್ತು ಯಾವುದೇ ನಕಲಿ ಸಂದೇಶಗಳು, ಸಂವಹನಗಳು, ಲಿಂಕ್‍ಗಳನ್ನು ನಂಬಿ ಅದಕ್ಕೆ ಪ್ರತಿಕ್ರಿಯೆ ನೀಡಬಾರದು ಎಂಬುದನ್ನು ನೆನಪಿಡಿ.

    ಗ್ರಾಹಕರಿಗೆ ಖಾತೆ ಅಪ್ಡೇಟ್ ಮಾಡುವ ಯಾವುದೇ ಸಂದೇಶವನ್ನು ಕಳಿಸುವಲ್ಲಿ ಭಾರತ ಪೋಸ್ಟ್ ಭಾಗಿಯಾಗಿಲ್ಲ. ಸಾರ್ವಜನಿಕರು ಅಂತಹ ಅಧಿಸೂಚನೆಗಳು, ಸಂದೇಶಗಳು, ಇಮೇಲ್‍ಗಳನ್ನು ಸ್ವೀಕರಿಸಬಾರದು. ಯಾವುದೇ ಕಾರಣಕ್ಕೆ ಅಂತಹ ನಕಲಿ ಸಂದೇಶಗಳನ್ನು ನಂಬಬೇಡಿ, ಪ್ರತಿಕ್ರಿಯಿಸಬೇಡಿ. ಮೊಬೈಲ್ ಸಂಖ್ಯೆಗಳು, ಬ್ಯಾಂಕ್ ಖಾತೆ ವಿವರ, ಜನ್ಮ ಸ್ಥಳ, ಒಟಿಪಿ ಇತ್ಯಾದಿ ಯಾವುದೇ ವೈಯಕ್ತಿಕವಾಗಿ ಗುರುತಿಸಬಹುದಾದ ಮಾಹಿತಿಯನ್ನು ಹಂಚಿಕೊಳ್ಳಬೇಡಿ – ಧನಂಜಯ ಆಚಾರ, ಅಂಚೆ ಅಧೀಕ್ಷಕರು, ಕಾರವಾರ.

    ಇಂಡಿಯನ್ ಪೋಸ್ಟ್ ಹೆಸರಿನಲ್ಲಿಯೂ ಈ ರೀತಿಯಾಗಿ ಮೋಸ ಮಾಡುತ್ತಾರೆ ಎಂಬ ಬಗ್ಗೆ ನಮಗೆ ಕಲ್ಪನೆ ಇರಲಿಲ್ಲ, ವಿಷಯ ಕೇಳಿದ ಕ್ಷಣ ನಾವು ಒಮ್ಮೆ ದಂಗಾದೆವು. ಈ ಬಗ್ಗೆ ಪೋಸ್ಟ್ ಆಫೀಸ್ ನಲ್ಲಿ ಸೂಕ್ತ ಮಾಹಿತಿ ನೀಡುತ್ತಿರುವುದು ಸೂಕ್ತವಾಗಿದೆ. – ವಿವೇಕ ಹೆಗಡೆ, ಪೋಸ್ಟ್ ಬ್ಯಾಂಕಿಂಗ್ ಗ್ರಾಹಕ.

  • ಗಗನಕ್ಕೇರಿದ ಟೊಮ್ಯಾಟೋ ರೇಟ್.

    ಗಗನಕ್ಕೇರಿದ ಟೊಮ್ಯಾಟೋ ರೇಟ್.

    ಬೆಂಗಳೂರು: ವಾತಾವರಣದ ವೈಪರೀತ್ಯದಿಂದಾಗಿ ಆಹಾರ ತಯಾರಿಕೆಯಲ್ಲಿ ಬೇಕಾಗಿರುವ ಟೊಮೇಟೊ ಬೆಲೆ ಗಗನಕ್ಕೇರಿದೆ. ಅತಿವೃಷ್ಟಿ ಮತ್ತು ಅನಾವೃಷ್ಟಿ ಕಾರಣದಿಂದಾಗಿ ದಿನನಿತ್ಯ ಅಡುಗೆಗೆ ಬೇಕಾದ ಟೊಮೇಟೊ ಬೆಲೆ ಒಂದೇ ಸಮನೇ ಏರಿಕೆಯಾಗಿದ್ದು, ಬಡವರು, ಮದ್ಯಮ ವರ್ಗದವರಿಗೆ ಕೈಗೆಟುಕದಂತಾಗಿದೆ. ಒಂದು ಕೆಜಿ ಟೊಮೇಟೊ ಬೆಲೆ 80 ರಿಂದ 100 ರೂಪಾಯಿಗೆ ಮಾರಾಟವಾಗುತ್ತಿರುವುದು ಗ್ರಾಹಕರ ಬೇಸರ ತಂದಿದೆ.

    ಇದರಿಂದಾಗಿ ಜನರು ಟೊಮೇಟೊ ಬದಲಿಗೆ ಬೇರೆ ಹುಳಿ ಪದಾರ್ಥಗಳತ್ತ ಗಮನ ಹರಿಸಿದ್ದಾರೆ. ಚಿಲ್ಲರೆ ಅಂಗಡಿ, ಹೋಲ್‌ ಸೇಲ್‌ ಅಂಗಡಿಗಳಲ್ಲಿ ಟೊಮೇಟೊ ಬೆಲೆ ಕೇಳಿ ಗ್ರಾಹಕರು ಶಾಕ್ ಆಗಿದ್ದಾರೆ. ಮೇ ಮತ್ತು ಜೂನ್ ತಿಂಗಳ ಆರಂಭದಲ್ಲಿ ಟೊಮೇಟೊಗೆ ಬೆಲೆ ಇರಲಿಲ್ಲ. ಆಗ ಕೆಜಿ ಟೊಮೇಟೊ ಕೇವಲ 30 ರಿಂದ 40 ರೂ.ಗೆ ಮಾರಾಟವಾಗಿತ್ತು. ಆದರೆ, ಕಳೆದ ಮೂರು ದಿನಗಳಿಂದ ಬೆಲೆಯಲ್ಲಿ ಒಮ್ಮಿಂದೊಮ್ಮೆಲೆ ಏರಿಕೆಯಾಗಿದ್ದು, ದೇಶಾದ್ಯಂತ ಬೆಲೆಯಲ್ಲಿಎರಡು ಪಟ್ಟು ಹೆಚ್ಚಳವಾಗಿದೆ ಎನ್ನಲಾಗಿದೆ.

    ಉತ್ತರ ಭಾರತದ ಕಡೆಗಳಲ್ಲಿ ಭಾರೀ ಮಳೆಯಿಂದ ಟೊಮೋಟೊ ನೆಲ ಕಚ್ಚಿದ್ದರೆ, ಕರ್ನಾಟಕ ಸೇರಿದಂತೆ ಮತ್ತಿತರ ಕಡೆಗಳಲ್ಲಿ ಮಳೆ ವಿಳಂಬ, ಅತಿಯಾದ ಉಷ್ಣಾಂಶ ಬೆಳೆ ಇಳುವರಿ ಕುಸಿತಕ್ಕೆ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಟೊಮೇಟೊ ಬೆಲೆ ಇನ್ನಷ್ಟು ಮುಂದುವರಿಯುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

  • 340 ಕೋಟಿ ರೂಪಾಯಿಗಳಿಸಿದೆ “ಆದಿಪುರುಷ” ಚಿತ್ರ

    340 ಕೋಟಿ ರೂಪಾಯಿಗಳಿಸಿದೆ “ಆದಿಪುರುಷ” ಚಿತ್ರ

    ಬೆಂಗಳೂರುಬಾಹುಬಲಿ ಖ್ಯಾತಿಯ ನಟ ಪ್ರಭಾಸ್ ಅಭಿನಯದ ಹಾಗೂ ಓಂ ರಾವತ್ ನಿರ್ದೇಶನದ “ಆದಿಪುರುಷ” ಚಿತ್ರ ಮೂರು ದಿನಗಳಲ್ಲಿ ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ 340 ಕೋಟಿ ರೂಪಾಯಿ ಗಳಿಸಿದೆ ಎಂದು ಚಿತ್ರ ನಿರ್ಮಾಪಕರು ಸೋಮವಾರ ಹೇಳಿದ್ದಾರೆ.

    ಪ್ರೊಡಕ್ಷನ್ ಬ್ಯಾನರ್ ಟಿ-ಸೀರೀಸ್ ಹೇಳುವಂತೆ ಪ್ರಭಾಸ್ ಅವರ ಚಿತ್ರ ಬಿಡುಗಡೆಯಾದ ಮೂರನೇ ದಿನ ಜಾಗತಿಕವಾಗಿ 100 ಕೋಟಿ ರೂ. ಗಳಿಸಿದೆ. “ಆದಿಪುರುಷ ಎಲ್ಲಾ ವರ್ಗದ ಪ್ರೇಕ್ಷಕರನ್ನು ಆಕರ್ಷಿಸುವುದನ್ನು ಮುಂದುವರೆಸಿದ್ದು, ವಾರಾಂತ್ಯದ ಮೂರು ದಿನಗಳಲ್ಲಿ ಚಿತ್ರದ ಗಳಿಕೆ 340 ಕೋಟಿ ದಾಟಿದೆ! ಜೈ ಶ್ರೀ ರಾಮ್,” ಎಂದು ಟಿ-ಸೀರೀಸ್ ತನ್ನ ಅಧಿಕೃತ ಟ್ವಿಟರ್ ಪುಟದಲ್ಲಿ ಪೋಸ್ಟ್ ಮಾಡಿದೆ.

    ಚಿತ್ರದಲ್ಲಿ ರಾಘವ್ ಪಾತ್ರದಲ್ಲಿ ಪ್ರಭಾಸ್(ರಾಮ್), ಜಾನಕಿ ಪಾತ್ರದಲ್ಲಿ ಕೃತಿ ಸನೋನ್(ಸೀತಾ) ಮತ್ತು ಸೈಫ್ ಅಲಿ ಖಾನ್ ಅವರು ಲಂಕೇಶ್(ರಾವಣ) ಆಗಿ ಅಭಿನಯಿಸಿದ್ದಾರೆ. ಚಿತ್ರವನ್ನು ಟಿ-ಸೀರೀಸ್‌ನ ಭೂಷಣ್ ಕುಮಾರ್ ನಿರ್ಮಿಸಿದ್ದಾರೆ. 

    500 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಿಸಲಾದ ಆದಿಪುರುಷ ಶುಕ್ರವಾರ ಬಿಡುಗಡೆಯಾಗಿದ್ದು, ಮೊದಲ ದಿನವೇ 140 ಕೋಟಿ ರೂಪಾಯಿ ಸಂಗ್ರಹಿಸಿದೆ ಎಂದು ತಯಾರಕರು ಹೇಳಿದ್ದಾರೆ. ಆದರೆ ಚಿತ್ರದಲ್ಲಿನ ಸಂಭಾಷಣೆಗಳ ಕುರಿತು ಪ್ರೇಕ್ಷಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದೀಗ ಇದೇ ವಿಚಾರವಾಗಿ ಮಾಹಿತಿ ನೀಡಿರುವ ಚಿತ್ರತಂಡ ಚಿತ್ರದಲ್ಲಿನ ವಿವಾದಾತ್ಮಕ ಸಂಭಾಷಣೆಗಳನ್ನು ಬದಲಿಸುವುದಾಗಿ ಹೇಳಿದೆ.

    Source : Kannadaprabha

  • ನೋಕಿಯಾ ಸಿ 12 ಪ್ಲಸ್ (Nokia C12 Plus) ಫೋನ್ ಅನಾವರಣ.

    ನೋಕಿಯಾ ಸಿ 12 ಪ್ಲಸ್ (Nokia C12 Plus) ಫೋನ್ ಅನಾವರಣ.

    ನೋಕಿಯಾ ಆಗಾಗ ಆಕರ್ಷಕ ಸ್ಮಾರ್ಟ್​ಫೋನ್​ಗಳನ್ನು ಬಿಡುಗಡೆ ಮಾಡುತ್ತಿರುತ್ತದೆ. ಇದೀಗ ದೇಶದಲ್ಲಿ ಬಜೆಟ್ ಬೆಲೆಗೆ ನೋಕಿಯಾ ಕಂಪನಿ ಹೊಸ ನೋಕಿಯಾ ಸಿ 12 ಪ್ಲಸ್ (Nokia C12 Plus) ಫೋನನ್ನು ಅನಾವರಣ ಮಾಡಿದೆ. ನೋಕಿಯಾ (Nokia) ಕಂಪನಿಯ ಸ್ಮಾರ್ಟ್​ಫೋನ್​ಗಳಿಗೆ ಭಾರತದಲ್ಲಿ ಹಿಂದಿನ ರೀತಿ ದೊಡ್ಟ ಮಟ್ಟದ ಮಾರ್ಕೆಟ್ ಇಲ್ಲ.

    ಒಂದು ಕಾಲದಲ್ಲಿ ಭಾರತದ ಮೊಬೈಲ್ ಮಾರುಕಟ್ಟೆಯನ್ನು ಆಳುತ್ತಿದ್ದ ನೋಕಿಯಾ ಈಗ ಹೇಳಹೆಸರಿಲ್ಲದಂತಾಗಿದೆ. ಶವೋಮಿ (Xiaomi), ಸ್ಯಾಮ್​ಸಂಗ್, ರಿಯಲ್ ಮಿ, ವಿವೋ ಬ್ರ್ಯಾಂಡ್​ಗಳು ಬಂದ ಮೇಲೆ ನೋಕಿಯಾ ಮೊಬೈಲ್​ಗಳ ಬೇಡಿಕೆ ಕುಸಿಯುತ್ತಾ ಬಂತು. ಹೀಗಿದ್ದರೂ ನೋಕಿಯಾಆಗಾಗ ಆಕರ್ಷಕ ಸ್ಮಾರ್ಟ್​ಫೋನ್​ಗಳನ್ನು ಬಿಡುಗಡೆ ಮಾಡುತ್ತಿರುತ್ತದೆ. ಇದೀಗ ದೇಶದಲ್ಲಿ ಬಜೆಟ್ ಬೆಲೆಗೆ ನೋಕಿಯಾ ಕಂಪನಿ ಹೊಸ ನೋಕಿಯಾ ಸಿ 12 ಪ್ಲಸ್ (Nokia C12 Plus) ಫೋನನ್ನು ಅನಾವರಣ ಮಾಡಿದೆ. ಬೆಲೆಗೆ ತಕ್ಕಂತೆ ವಿಶೇಷತೆಗಳಿಂದ ಕೂಡಿರುವ ಈ ಸ್ಮಾರ್ಟ್​​ಫೋನಿನ ಬೆಲೆ, ಫೀಚರ್ಸ್ ಕುರಿತ ಮಾಹಿತಿ ಇಲ್ಲಿದೆ ನೋಡಿ.

    ಭಾರತದಲ್ಲಿ ಸದ್ಯಕ್ಕೆ ಒಂದು ಸ್ಟೋರೆಜ್ ಆಯ್ಕೆಯಲ್ಲಿ ನೋಕಿಯಾ C12 ಪ್ಲಸ್ ಸ್ಮಾರ್ಟ್​ಫೋನ್ ರಿಲೀಸ್ ಆಗಿದೆ. ಇದರ 2GB RAM ಮತ್ತು 32GB ಸ್ಟೋರೇಜ್ ರೂಪಾಂತರಕ್ಕೆ ಕೇವಲ 7,999 ರೂ. ನಿಗದಿ ಮಾಡಲಾಗಿದೆ. ಈ ಫೋನ್ ಯಾವಾಗಿನಿಂದ ಖರೀದಿಗೆ ಸಿಗಲಿದೆ ಎಂಬ ಬಗ್ಗೆ ಕಂಪನಿ ಇನ್ನೂ ಮಾಹಿತಿ ನೀಡಿಲ್ಲ.

    ನೋಕಿಯಾ C12 ಪ್ಲಸ್ ಸ್ಮಾರ್ಟ್‌ಫೋನ್‌ 720*1,520 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.3-ಇಂಚಿನ ಹೆಚ್‌ಡಿ+ ಡಿಸ್‌ಪ್ಲೇ ಹೊಂದಿದೆ. ಇದು ವಾಟರ್ ಡ್ರಾಪ್ ಶೈಲಿಯ ಡಿಸ್ ಪ್ಲೇ ಆಗಿದೆ. ಆಕ್ಟಾ-ಕೋರ್ ಯುನಿಸೋಕ್ SoC ಪ್ರೊಸೆಸರ್‌ ಅನ್ನು ಪಡದುಕೊಂಡಿದ್ದು, ಆಂಡ್ರಾಯ್ಡ್ 12 (ಗೋ ಎಡಿಷನ್) ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ.

    ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ, ಇದರಲ್ಲಿ 8 ಮೆಗಾಪಿಕ್ಸೆಲ್ ರಿಯಲ್ ಕ್ಯಾಮೆರಾ ಸೆನ್ಸಾರ್ ಇದೆ. ಇದು ಅಟೋಫೋಕಸ್ ಫೀಚರ್ ಹೊಂದಿದ್ದು ಮತ್ತು ಎಲ್​ಇಡಿ ಫ್ಲ್ಯಾಶ್ ಅಳವಡಿಸಲಾಗಿದೆ. ಇದರ ಜೊತೆಗೆ ಸೆಲ್ಫಿ ಮತ್ತು ವಿಡಿಯೋ ಕಾಲ್​​ಗಳಿಗಾಗಿ 5 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಸೆಟಪ್ ನೀಡಲಾಗಿದೆ.

    ವಿಶೇಷವಾಗಿ ಈ ಸ್ಮಾರ್ಟ್‌ಫೋನ್‌ 4000mAh ಬ್ಯಾಟರಿಯನ್ನು ಒಳಗೊಂಡಿದ್ದು 10W ಚಾರ್ಜಿಂಗ್ ಅನ್ನು ಬೆಂಬಲಿಸುವ ಸಾಧ್ಯತೆ ಇದೆ. ಕನೆಕ್ಟಿವಿಟ ಆಯ್ಕೆಗಳಲ್ಲಿ 4G LTE, ವೈಫೈ, ಬ್ಲೂಟೂತ್ v5.2, 3.5mm ಹೆಡ್​ಫೋನ್ ಜ್ಯಾಕ್, FM ರೇಡಿಯೋ ಸೇರಿದಂತೆ ಬೇಸಿಕ್ ಆಯ್ಕೆಗಳಿವೆ.

  • ಉಚಿತ ತಿಂಡಿಗಳು, ಪಾನೀಯಗಳು ಮತ್ತು ಸೆಲ್ಟ್ಜರ್ ನೀರು ನೀಡುವುದನ್ನು ನಿಲ್ಲಿಸಿದ ಗೂಗಲ್.

    ಉಚಿತ ತಿಂಡಿಗಳು, ಪಾನೀಯಗಳು ಮತ್ತು ಸೆಲ್ಟ್ಜರ್ ನೀರು ನೀಡುವುದನ್ನು ನಿಲ್ಲಿಸಿದ ಗೂಗಲ್.

    ವೆಚ್ಚವನ್ನು ಮತ್ತಷ್ಟು ಕಡಿಮೆ ಮಾಡುವ ಹಾಗೂ ಕೃತಕ ಬುದ್ಧಿಮತ್ತೆಗೆ ಆದ್ಯತೆ ನೀಡುವ ಪ್ರಯತ್ನದಲ್ಲಿ, ಗೂಗಲ್ ಹಲವಾರು ವೆಚ್ಚ ಕಡಿತದ ಉಪಕ್ರಮಗಳನ್ನು ಅನಾವರಣಗೊಳಿಸಿದೆ ಎಂದು ಬಿಸಿನೆಸ್ ಇನ್ಸೈಡರ್ ವರದಿ ಮಾಡಿದೆ. ಗೂಗಲ್ ಬಿಡುಗಡೆ ಮಾಡಿದ ಜ್ಞಾಪಕ ಪತ್ರದಲ್ಲಿ ಈ ಘೋಷಣೆ ಮಾಡಲಾಗಿದೆ ಎಂದು ವರದಿ ಹೇಳಿದೆ. ಸಿಬ್ಬಂದಿಗೆ ಕಳುಹಿಸಲಾದ ಜ್ಞಾಪಕ ಪತ್ರದ ಪ್ರಕಾರ, ಉಚಿತ ತಿಂಡಿಗಳು, ಪಾನೀಯಗಳು ಮತ್ತು ಸೆಲ್ಟ್ಜರ್ ನೀರು ನೀಡುವುದನ್ನು ನಿಲ್ಲಿಸುವುದು ಸಹ ಒಳಗೊಂಡಿದೆ. ಕಂಪನಿಯು ತನ್ನ ಹಲವಾರು ಉದ್ಯೋಗಿ ಸವಲತ್ತುಗಳನ್ನು ತೆಗೆದುಹಾಕುತ್ತದೆ, ಕೆಲವು ಕೆಲಸದ ಸ್ಥಳದ ಕೆಫೆಗಳ ಸಮಯವನ್ನು ಸಹ ಸೀಮಿತಗೊಳಿಸುತ್ತದೆ. ಈ ಬದಲಾವಣೆಗಳು “ಆಹಾರ ತ್ಯಾಜ್ಯ ಕಡಿಮೆ ಮಾಡುತ್ತದೆ ಮತ್ತು ಪರಿಸರಕ್ಕೆ ಉತ್ತಮ” ಎಂದು ಕಂಪನಿ ಹೇಳಿದೆ.

    ನಾವು ನಮ್ಮ ಕಚೇರಿ ಸೇವೆಗಳನ್ನು ಹೊಸ ಹೈಬ್ರಿಡ್ ಕೆಲಸದ ವಾರಕ್ಕೆ ಸರಿಹೊಂದಿಸುತ್ತಿದ್ದೇವೆ. ಕೆಫೆಗಳು, ಮೈಕ್ರೋ ಕಿಚನ್‌ಗಳು ಮತ್ತು ಇತರ ಸೌಲಭ್ಯಗಳನ್ನು ಹೇಗೆ ಮತ್ತು ಯಾವಾಗ ಬಳಸಲಾಗುತ್ತಿದೆ ಎಂಬುದನ್ನು ಉತ್ತಮವಾಗಿ ಹೊಂದಿಸುತ್ತಿದ್ದೇವೆ. ನಿರ್ಧಾರಗಳು ಡೇಟಾವನ್ನು ಆಧರಿಸಿರುತ್ತವೆ. ಉದಾಹರಣೆಗೆ, ಕೆಲವು ನಿರ್ದಿಷ್ಟ ದಿನಗಳಲ್ಲಿ ಕೆಫೆಯ ಬಳಕೆ ಗಣನೀಯವಾಗಿ ಕಡಿಮೆ ಪ್ರಮಾಣದಲ್ಲಿದ್ದರೆ ಆ ದಿನಗಳಲ್ಲಿ ನಾವು ಅದನ್ನು ಮುಚ್ಚುತ್ತೇವೆ ಮತ್ತು ಅದರ ಬದಲಿಗೆ ಜನಪ್ರಿಯ ಆಯ್ಕೆಗಳ ಮೇಲೆ ಹೆಚ್ಚು ಗಮನ ಹರಿಸುತ್ತೇವೆ ಎಂದು ಮೆಮೊ ಹೇಳಿದೆ.

    ದೀರ್ಘಕಾಲದವರೆಗೆ, ಗೂಗಲ್‌ (Google) ನೌಕರರು ಲಾಂಡ್ರಿ ಸೇವೆಗಳು, ಮಸಾಜ್‌ಗಳು, ಕಂಪನಿಯು ಒದಗಿಸುವ ಊಟಗಳು, ಫಿಟ್‌ನೆಸ್ ಸೌಕರ್ಯಗಳು, ಜೊತೆಗೆ ಉತ್ತಮ ಸಂಬಳಗಳಿಂದ ಆನಂದಿಸಿದ್ದಾರೆ. ಅದೇನೇ ಇದ್ದರೂ, ಈ ಸವಲತ್ತುಗಳು ಶೀಘ್ರದಲ್ಲೇ ಮುಕ್ತಾಯಗೊಳ್ಳಬಹುದು.

    ಗೂಗಲ್‌ನ ಸಿಇಒ ಸುಂದರ್ ಪಿಚೈ ಅವರು ಈ ವರ್ಷದ ಆರಂಭದಲ್ಲಿ ಕಂಪನಿಯು ತನ್ನ ಉದ್ಯೋಗಿಗಳನ್ನು ಸರಿಸುಮಾರು 6 ಪ್ರತಿಶತದಷ್ಟು ಕಡಿಮೆಗೊಳಿಸಲಿದೆ ಎಂದು ಬಹಿರಂಗಪಡಿಸಿದರು, ಇದು ಸುಮಾರು 12,000 ಉದ್ಯೋಗಿಗಳಿಗೆ ಸಮನಾಗಿರುತ್ತದೆ. ಕಂಪನಿಯು “12000 ಉದ್ಯೋಗಗಳನ್ನು ಕಡಿತಗೊಳಿಸುತ್ತದೆ” ಎಂದು ಗೂಗಲ್ ಘೋಷಿಸಿದ ತಿಂಗಳುಗಳ ನಂತರ ಇದು ಬರುತ್ತದೆ.

    ಕೃತಕ ಬುದ್ಧಿಮತ್ತೆ (AI)ಯನ್ನು ಅತ್ಯಂತ ಪರಿವರ್ತಕ ತಂತ್ರಜ್ಞಾನ ಎಂದು ಕರೆದಿರುವ ಪಿಚೈ, ಉದ್ಯೋಗಿಗಳನ್ನು ವಜಾ ಮಾಡುವ ಮೂಲಕ ಕಂಪನಿಯು “ನಮ್ಮ ಪ್ರತಿಭೆ ಮತ್ತು ಬಂಡವಾಳವನ್ನು ನಮ್ಮ ಉನ್ನತ ಆದ್ಯತೆಗಳಿಗೆ ನಿರ್ದೇಶಿಸಬಹುದು” ಎಂದು ಹೇಳಿದ್ದಾರೆ.

  • 7,000 ಉದ್ಯೋಗಿಗಳನ್ನು ವಜಾಗೊಳಿಸಲು ಯೋಜಿಸಿದ ಸಂಸ್ಥೆ.

    7,000 ಉದ್ಯೋಗಿಗಳನ್ನು ವಜಾಗೊಳಿಸಲು ಯೋಜಿಸಿದ ಸಂಸ್ಥೆ.

    ವೆಚ್ಚವನ್ನು ಕಡಿಮೆ ಮಾಡಲು 7,000 ಉದ್ಯೋಗಿಗಳನ್ನು ವಜಾಗೊಳಿಸಲು ಡಿಸ್ನಿ ಯೋಜಿಸುತ್ತಿದೆ. ಸಮೂಹ ಮಾಧ್ಯಮ ಮತ್ತು ಮನರಂಜನಾ ಸಮೂಹವು ತನ್ನ ಕೆಲಸದ ರಚನೆಯನ್ನು ಮರುಸಂಘಟಿಸಲು ಮತ್ತು ವೆಚ್ಚವನ್ನು ಕಡಿಮೆ ಮಾಡಲು ಉದ್ಯೋಗಗಳನ್ನು ಕಡಿತಗೊಳಿಸಲು ಯೋಜಿಸುತ್ತಿದೆ ಎಂದು ಬುಧವಾರ ಪ್ರಕಟಿಸಿದೆ.
    ಇತ್ತೀಚಿನ ತ್ರೈಮಾಸಿಕ ಗಳಿಕೆಗಳ ಕಂಪನಿಯ ಘೋಷಣೆಯ ನಂತರ ದೊಡ್ಡ ನಿರ್ಧಾರ ಪ್ರಕಟಿಸಲಾಗಿದೆ.ಅಮೆರಿಕ ಮತ್ತು ಪ್ರಪಂಚದಾದ್ಯಂತದ ಇತರ ಟೆಕ್ ಕಂಪನಿಗಳಲ್ಲಿನ ಪ್ರಕ್ಷುಬ್ಧತೆಯಂತೆಯೇ, ಡಿಸ್ನಿ ಕೂಡ “ಸವಾಲಿನ ಆರ್ಥಿಕ ಪರಿಸ್ಥಿತಿಯ” ನಡುವೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಕಳೆದ ನವೆಂಬರ್‌ನಲ್ಲಿ ಕಂಪನಿಯ ಸಿಇಒ (CEO) ರಾಬರ್ಟ್ ಇಗರ್ ಅವರು ಮಾಜಿ ಸಿಇಒ ಬಾಬ್ ಚಾಪೆಕ್‌ ಅವರಿಂದ ಅಧಿಕಾರ ವಹಿಸಿಕೊಂಡ ತಕ್ಷಣ ವೆಚ್ಚ ಕಡಿತ ಮತ್ತು ವಜಾಗೊಳಿಸುವ ಯೋಜನೆಯನ್ನು ಡಿಸ್ನಿ ಪ್ರಾರಂಭಿಸಿದೆ ಎಂದು ವರದಿಗಳು ಸೂಚಿಸುತ್ತವೆ. ಗಮನಾರ್ಹವಾಗಿ, ಇಗರ್‌ ಅವರು 2020 ರಲ್ಲಿ ತಮ್ಮ ಸ್ಥಾನದಿಂದ ಕೆಳಗಿಳಿಯುವ ಮೊದಲು 15 ವರ್ಷಗಳ ಕಾಲ ಕಂಪನಿಯ ಸಿಇಒ ಆಗಿ ಕಾರ್ಯನಿರ್ವಹಿಸಿದ್ದರು. ಆದಾಗ್ಯೂ, ಅವರು ಮರಳಿಬಂದ ನಂತರ, ಕಂಪನಿಯು ಈಗಾಗಲೇ ಉದ್ಯೋಗಿಗಳ ಸಂಖ್ಯೆಯನ್ನು ಕಡಿತಗೊಳಿಸುವ ನಿರ್ಧಾರವನ್ನು ಒಳಗೊಂಡಂತೆ ಕೆಲವು ಮಹತ್ವದ ಸಾಂಸ್ಥಿಕ ಬದಲಾವಣೆಗಳನ್ನು ಪ್ರಾರಂಭಿಸಿದೆ.