Satwadhara News

Category: ANKOLA

ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನಲ್ಲಿ ನಡೆದ ಕಾರ್ಯಕ್ರಮಗಳ ವರದಿ ಮತ್ತು ಇನ್ನಿತರ ಘಟನಾವಳಿಗಳ ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ.

  • ತಪ್ಪು ಸಂದೇಶ ರವಾನಿಸಿದರೆ ಬೀಳಲಿದೆ ಕೇಸ್ : ಸಾಮಾಜಿಕ ಸ್ವಾಸ್ಥ್ಯ ಕೆಡಿಸದಿರಿ – ಎಸ್.ಪಿ ಎಚ್ಚರಿಕೆ.

    ತಪ್ಪು ಸಂದೇಶ ರವಾನಿಸಿದರೆ ಬೀಳಲಿದೆ ಕೇಸ್ : ಸಾಮಾಜಿಕ ಸ್ವಾಸ್ಥ್ಯ ಕೆಡಿಸದಿರಿ – ಎಸ್.ಪಿ ಎಚ್ಚರಿಕೆ.

    ಹೊನ್ನಾವರ : ಜಿಲ್ಲೆಯ ಅಂಕೋಲಾದ ಕೇಣಿ ಬಂದರು ಹಾಗೂ ಹೊನ್ನಾವರ ಟೊಂಕಾ ಕಾಮಗಾರಿಯ ಬಗ್ಗೆ ಸ್ಥಳೀಯ ಮೀನುಗಾರರು ಪ್ರತಿಭಟನೆ ನಡೆಸುತ್ತಿದ್ದು, ನಿಷೇಧಾಜ್ಞೆಯನ್ನೂ ಜಾರಿಮಾಡಲಾಗಿದೆ. ಆದರೆ ಮೀನುಗಾರರಿಗೆ ಕೆಲವರು ತಪ್ಪು ಸಂದೇಶ ರವಾನಿಸುತ್ತಿದ್ದಾರೆ. ಜನರ ದಿಕ್ಕು ತಪ್ಪಿಸುವ ಪ್ರಯತ್ನವನ್ನು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಮಾಡುತ್ತಿದ್ದು, ಅಂತವರ ಮೇಲೆ ಪೊಲೀಸ್ ಇಲಾಖೆ ಹದ್ದಿನ ಕಣ್ಣಿಟ್ಟಿದೆ. ಜೊತೆಗೆ ಅಂತವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಪೊಲೀಸ್ ವರಿಷ್ಠಾಧಿಕಾರಿ ಎಂ. ನಾರಾಯಣ್ ಖಡಕ್ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

    ಬಂದರು ಕಾಮಗಾರಿಯಿಂದ ಅಷ್ಟು ಮನೆ ಹೋಗಲಿದೆ, ಇಷ್ಟು ಭೂಮಿ ಕಸಿದುಕೊಳ್ಳಲಿದ್ದಾರೆ, ಪರಿಹಾರ ಸಿಗುವುದಿಲ್ಲ ಹೀಗೆ ಇನ್ನಿತರ ಸುಳ್ಳು ಸುದ್ದಿಗಳನ್ನು ಶೋಷಿಯಲ್ ಮೀಡಿಯಾ, ವಾಟ್ಸಾಪ್ ಗ್ರೂಪ್ ಗಳಲ್ಲಿ ಹರಿಬಿಡಲಾಗುತ್ತಿದೆ ಎನ್ನಲಾಗಿದ್ದು, ಈ ಬಗ್ಗೆ ಇಲಾಖೆ ಕ್ರಮಕ್ಕೆ ಮುಂದಾಗುವ ಸೂಚನೆಯನ್ನು ಅವರು ನೀಡಿದ್ದಾರೆ.

    ಪ್ರತಿಭಟನಾ ನಿರತರಿಗೆ ತಪ್ಪು ಸಂದೇಶ ನೀಡುತ್ತಿರುವುದು ಕಂಡುಬಂದಿದೆ,ಸಾಮಾಜಿಕ ಮಾಧ್ಯಮದಲ್ಲಿ ತಪ್ಪು ಸಂದೇಶ ಬಿತ್ತರಿಸಯವ, ಸಾಮಾಜಿಕ ಸ್ವಾಸ್ಥ್ಯ ಹಾಳು ಮಾಡುವವರಿಗೆ ಎಸ್ಪಿ ಎಂ ನಾರಾಯಣ್ ಖಡಕ್ ವಾರ್ನಿಂಗ್ ನೀಡಿದ್ದು, ಶೋಷಿಯಲ್ ಮೀಡಿಯಾ ಹಾಗೂ ಇನ್ನಿತರ ಮಾರ್ಗವಾಗಿ ತಪ್ಪು ಸಂದೇಶ ರವಾನಿಸುತ್ತಿರುವವರ ವಿರುದ್ಧ ತಕ್ಷಣ ಎಫ್ ಐ ಆರ್ ದಾಖಲಿಸುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

    ಹಾಗೆಯೇ ಸುಳ್ಳು ಮಾಹಿತಿ ನೀಡಿ ಪ್ರತಿಭಟನೆಗೆ ಪ್ರಚೋದನೆ ನೀಡುತ್ತಿರುವ 150 ಕ್ಕೂ ಅಧಿಕ ಮಂದಿಯನ್ನು ಗುರುತಿಸಲಾಗಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಲಿದ್ದಾರೆ ಎನ್ನಲಾಗಿದೆ.

  • ಪದ್ಮಶ್ರೀ ಪುರಸ್ಕೃತ ಸುಕ್ರಿ ಬೊಮ್ಮು ಗೌಡ ಇನ್ನಿಲ್ಲ : ಶಾಶ್ವತವಾಗಿ ಹಾಡು ನಿಲ್ಲಿಸಿದ ಸುಕ್ರಜ್ಜಿ.

    ಪದ್ಮಶ್ರೀ ಪುರಸ್ಕೃತ ಸುಕ್ರಿ ಬೊಮ್ಮು ಗೌಡ ಇನ್ನಿಲ್ಲ : ಶಾಶ್ವತವಾಗಿ ಹಾಡು ನಿಲ್ಲಿಸಿದ ಸುಕ್ರಜ್ಜಿ.

    ಅಂಕೋಲಾ : ಜಾನಪದ ಕೋಗಿಲೆ, ಪದ್ಮಶ್ರೀ‌ ಪುರಸ್ಕೃತರಾದ 88 ವರ್ಷದ ಸುಕ್ರಿ ಬೊಮ್ಮ ಗೌಡ ಅವರು ಗುರುವಾರ (ಫೆಬ್ರವರಿ 13) ಮುಂಜಾನೆ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಸುಕ್ರಿ ಬೊಮ್ಮ ಗೌಡ ಇಂದು, ಗುರುವಾರ ಮುಂಜಾನೆ 3:30ಕ್ಕೆ ಇಹಲೋಕ ತ್ಯಜಿಸಿದ್ದಾರೆ. ಸುಕ್ರಜ್ಜಿ ಎಂದೇ ಖ್ಯಾತಿ ಪಡೆದಿದ್ದ ಅವರು, ಕೆಲವು ತಿಂಗಳುಗಳಿಂದ ವಯೋಸಹಜ ಅನಾರೋಗ್ಯಕ್ಕೆ ಒಳಗಾಗಿದ್ದರು.

    ಮೂಲತಃ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ‌ ತಾಲೂಕಿನ ಬಡಿಗೇರಿ ಗ್ರಾಮದಲ್ಲಿ ಹಾಲಕ್ಕಿ ಬುಡಕಟ್ಟು ಜನಾಂಗದಲ್ಲಿ ಜನಿಸಿದ್ದ ಸುಕ್ರಿ ಬೊಮ್ಮ ಗೌಡ ಅವರು ಸಾರಾಯಿ ವಿರೋಧ ಆಂದೋಲನದಲ್ಲಿ ಮುಂಚೂಣಿಯಲ್ಲಿದ್ದರು.
    ಸುಕ್ರಿ ಬೊಮ್ಮಗೌಡ ಬಾಲ್ಯದಲ್ಲಿದ್ದಾಗ ತಮ್ಮ ತಾಯಿ ಮೂಲಕ ಜಾನಪದ ಹಾಡುಗಳನ್ನು ಕಲಿತಿದ್ದರು. ಜಾನಪದ ಹಾಡು, ಹಾಲಕ್ಕಿ ಒಕ್ಕಲಿಗ ಬುಡಕಟ್ಟಿನ ಸಾಂಪ್ರದಾಯಿಕ ಸಂಗೀತ ಹಾಡುಗಳನ್ನು ಸಂರಕ್ಷಿಸಿಕೊಂಡು ಹೋಗುವಲ್ಲಿ ಶ್ರಮಿಸಿದ್ದರು. ವಿವಿಧ ಸಾಮಾಜಿಕ ಹೋರಾಟಗಳಲ್ಲಿಯೂ ಪಾಲ್ಗೊಂಡಿದ್ದರು.ಭಾರತ ಸರ್ಕಾರ, 2017ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು. ಪದ್ಮಶ್ರೀ ಮಾತ್ರವಲ್ಲದೇ, ಸ್ಥಳೀಯ ಬುಡಕಟ್ಟು ಜನಾಂಗದ ಸಂಸ್ಕೃತಿಯನ್ನು ಸಂರಕ್ಷಿಸಿದ್ದಕ್ಕಾಗಿ 1988ರಲ್ಲಿ ಕರ್ನಾಟಕ ಸರ್ಕಾರದಿಂದ ಪ್ರಶಸ್ತಿ, 1999ರಲ್ಲಿ ‘ಜಾನಪದ ಶ್ರೀ’ ಪ್ರಶಸ್ತಿ 2006ರಲ್ಲಿ ಕನ್ನಡ ವಿಶ್ವವಿದ್ಯಾಲಯದಿಂದ ನೀಡಲಾಗುವ ‘ನಾಡೋಜ’ ಗೌರವ ಹಾಗೂ 2009ರಲ್ಲಿ ಸಂದೇಶ ಕಲಾ ಪ್ರಶಸ್ತಿ, ಆಳ್ವಾಸ್ ನುಡಿಸಿ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳಿಗೆ ಅವರು ಭಾಜನರಾಗಿದ್ದರು. ಬುಡಕಟ್ಟು ಜನಾಂಗವಾದ ಹಾಲಕ್ಕಿ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸದಿದ್ದರೆ ತಮಗೆ ನೀಡಿದ್ದ ಪದ್ಮಶ್ರೀ ಪ್ರಶಸ್ತಿಯನ್ನು ವಾಪಸ್ ನೀಡಲು ಮುಂದಾಗಿದ್ದರು.

    ಜಿಲ್ಲಾ ಉಸ್ತುವಾರಿ ಸಚಿವರ ಸಂತಾಪ :

    ಪದ್ಮಶ್ರೀ ಪುರಸ್ಕೃತೆ’ ಸುಕ್ರಿ ಬೊಮ್ಮ ಗೌಡ ಅವರು ನಮ್ಮನ್ನೆಲ್ಲ ಅಗಲಿರುವ ಸುದ್ದಿ ತಿಳಿದು ಮನಸ್ಸಿಗೆ ದುಃಖ ಉಂಟಾಗಿದೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನಲ್ಲಿ ಜನಿಸಿ, ತಮ್ಮ ಜಾನಪದ ಗಾಯನದ ಮೂಲಕ ಜಾನಪದ ಕ್ಷೇತ್ರದಲ್ಲಿ ಮೈಲುಗಲ್ಲು ಸೃಷ್ಟಿಸಿದ ಸುಕ್ರಿ ಗೌಡರನ್ನು ಕಳೆದುಕೊಂಡಿರುವುದು ಜಾನಪದ ಕ್ಷೇತ್ರಕ್ಕೆ ಹಾಗೂ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮoಕಾಳ ವೈದ್ಯ ಸಂತಾಪ ಸೂಚಿಸಿದ್ದಾರೆ.

    ಸಂಸದ ಕಾಗೇರಿ ಸಂತಾಪ :

    ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಜಾನಪದ ಗಾಯಕಿ ಹೋರಾಟಗಾರ್ತಿ ಸುಕ್ರಿ ಬೊಮ್ಮ ಗೌಡ ಅವರು ನಿಧನರಾದ ಸುದ್ದಿ ಕೇಳಿ ಅಘಾತವಾಯಿತು. ಸುಕ್ರಜ್ಜಿ ಎಂದೇ ಖ್ಯಾತರಾಗಿದ್ದ ಅವರು ಹಾಲಕ್ಕಿ ಜನಪದ ಹಾಡುಗಳನ್ನು ಹಾಡುವ ಮೂಲಕ ಚಿರಪರಿಚಿತರಾಗಿದ್ದರು ಮತ್ತು ಮಧ್ಯ ಮಾರಾಟ ಹಾವಳಿ ಹೆಚ್ಚಿದ್ದರಿಂದ ಅದನ್ನು ತಡೆಯಲು ಹಲವು ದಶಕಗಳ ಹಿಂದೆ ಸಾರಾಯಿ ವಿರೋಧಿ ಜನಾಂದೋಲನ ಸಹ ನಡೆಸಿದ್ದರು. ಭಾರತ ಸರ್ಕಾರದಿಂದ ಕೊಡಮಾಡುವ “ಪದ್ಮಶ್ರೀ” ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು. ಸುಕ್ರಿ ಗೌಡ ಅವರ ಅಗಲುವಿಕೆಯಿಂದ ಜನಪದ ಸಂಸ್ಕೃತಿ ಸಂರಕ್ಷಕಿಯಾಗಿದ್ದ, ಅದಮ್ಯ ಚೇತನವನ್ನು ನಾಡು ಕಳೆದುಕೊಂಡಂತಾಗಿದೆ ಎಂದು ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಸಂತಾಪ ಸೂಚಿಸಿದ್ದಾರೆ.

  • ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಪರಿಸರ ಪ್ರೇಮಿ ತುಳಸಿ ಗೌಡ ಇನ್ನಿಲ್ಲ.

    ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಪರಿಸರ ಪ್ರೇಮಿ ತುಳಸಿ ಗೌಡ ಇನ್ನಿಲ್ಲ.

    ಅಂಕೋಲಾ : ವಯೋ ಸಹಜ ಖಾಯಿಲೆಯಿಂದ ಬಳಲುತ್ತಿದ್ದಂತ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಪರಿಸರ ಪ್ರೇಮಿ ತುಳಸಿ ಗೌಡ(86) ಅವರು ಇಂದು ನಿಧನರಾಗಿದ್ದಾರೆ.

    ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹೊನ್ನಳ್ಳಿ ಗ್ರಾಮದ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಇವರು ತಮ್ಮ ಜೀವಿತಾವಧಿಯಲ್ಲಿ ವರ್ಷಕ್ಕೆ 30 ಸಾವಿರಕ್ಕೂ ಹೆಚ್ಚು ಗಿಡಗಳನ್ನು ನೆಟ್ಟು ಬೆಳಸಿ ಪರಿಸರ ಪ್ರೇಮಿ ಎಂದೇ ಖ್ಯಾತವಾಗಿದ್ದರು.

    ಕಳೆದ 14 ವರ್ಷಕ್ಕೂ ಹೆಚ್ಚು ಕಾಲ ಗಿಡ ನೆಟ್ಟು ಬೆಳೆಸುವ ಕಾಯಕದಲ್ಲಿ ತೊಡಗಿದ್ದರು. ಮನೆಯಲ್ಲಿ ತೀರಾ ಬಡತನವಿದ್ದೂ ಕುಟುಂಬಕ್ಕಾಗಿ ಕೂಲಿ ಕೆಲಸವನ್ನು ಮಾಡುತ್ತಲೇ ಹಸಿರು ಕ್ರಾಂತಿ ಮಾಡಿದ್ದ ಪರಿಸರ ಪ್ರೇಮಿ ತುಳಸಿಗೌಡ ಅವರ ಪರಿಸರ ಪ್ರೇಮವನ್ನು ಮೆಚ್ಚಿ ಭಾರತ ಸರ್ಕಾದರದಿಂದ ಕೊಡಮಾಡುವ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು. ಹಿಂದಿನ ರಾಷ್ಟ್ರಪತಿ ರಾಮನಾಥ ಕೋವಿಂದ ಅವರಿಂದ ಪದ್ಮಶ್ರೀ ಪ್ರಶಸ್ತಿ ಸ್ವಿಕರಿಸಿದ್ದರು.

    ಸುಬ್ರಾಯ ಮತ್ತು ಸೋನಿ ಎಂಬ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

  • ಬಹುಬಗೆಯ ಆರಾಧನೆಯೊಂದಿಗೆ ದೊಡ್ಡಬ್ಬ ಸಂಪನ್ನ.

    ಬಹುಬಗೆಯ ಆರಾಧನೆಯೊಂದಿಗೆ ದೊಡ್ಡಬ್ಬ ಸಂಪನ್ನ.

    ಕುಮಟಾ : ಬೆಳಕಿನ ಹಬ್ಬ ದೀಪಾವಳಿ ಹಲವು ವೈಶಿಷ್ಟ್ಯಗಳನ್ನು ಕಟ್ಟಿಕೊಡುತ್ತದೆ. ಮೂರು ದಿನಗಳ ಕಾಲ ಅತ್ಯಂತ ವಿಜ್ರಂಬಣೆಯಿಂದ ನಡೆದ ದೀಪಾವಳಿ ಹಬ್ಬವು ಸಂಪನ್ನವಾಗಿದ್ದು, ಬಲಿಂದ್ರನನ್ನು ಕಳುಹಿಸಿ ಕೊಡುವುದರ ಮೂಲಕ ಹಬ್ಬಕ್ಕೆ ಮಂಗಲ ಹಾಡಲಾಯಿತು.

    ಇನ್ನು ಭಾರತೀಯ ಸಂಸ್ಕೃತಿಯಲ್ಲಿ ಗೋವಿಗೆ ತುಂಬಾ ಮಹತ್ವವಿದ್ದು. ಹಬ್ಬದಲ್ಲಿ ಮರೆಯದೇ ಗೋವನ್ನು ಪೂಜಿಸುವ ಸಂಪ್ರದಾಯವಿದೆ. ಅಂತೆಯೇ ಹಬ್ಬದ ಪಾಡ್ಯದ ದಿನದಂದು ಬಹು ವಿಶೇಷವಾಗಿ ಗೋ ಪೂಜೆ ಸಂಪನ್ನಗೊಂಡಿತು. ಗೋವುಗಳಿಗೆ ವಿಶೇಷ ಅಲಂಕಾರ ಮಾಡಿ, ಪೂಜಿಸಿ, ದನಗಳನ್ನು ಬೆಚ್ಚಿಸುವ ಪಾರಂಪರಿಕ ಆಚರಣೆಗಳೂ ಬಹು ವಿಶೇಷವಾಗಿ ನಡೆದವು.

    ಸಾಂಪ್ರದಾಯಿಕ ಪೂಜೆ ಪುನಸ್ಕಾರಗಳ ಜೊತೆಯಲ್ಲಿ ಹಬ್ಬದ ಅಡುಗೆ ಮಾಡಿ ಸಂಭ್ರಮಿಸುವ ಜೊತೆಗೆ, ಯುವಕರು ಹಾಗೂ ಹುಡುಗರು ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸಿದರು.

    ಒಟ್ಟಿನಲ್ಲಿ ದೀಪಾವಳಿಯ ಹಬ್ಬವು ಬಹು ವಿಶೇಷವಾಗಿ ನಡೆದಿದ್ದು, ತಾಲೂಕಿನಲ್ಲಿ ಅತ್ಯಂತ ವಿಜ್ರಂಭಣೆಯಿಂದ ಮೂರು ದಿನಗಳ ಕಾಲ ಹಬ್ಬ ಆಚರಿಸಲ್ಪಟ್ಟಿತು. ಊರಿನ ಹಾಗೂ ಪರ ಊರಿನ ಅನೇಕರು ವಿವಿಧ ಸಂಪ್ರದಾಯಗಳು, ಪೂಜೆ ಪುನಸ್ಕಾರದಲ್ಲಿ ಭಾಗವಹಿಸಿ ಹಬ್ಬದೂಟವನ್ನು ಸವಿದು ಸಂತಸ ಪಟ್ಟರು.

  • ಕುಸಿದು ಬಿತ್ತು ಸೇತುವೆ : ಮುಳುಗಿದೆ ವಾಹನ..? ಮಳೆಯ ಅವಾಂತರಕ್ಕೆ ಹೆದ್ದಾರಿ ಬಂದ್..!

    ಕುಸಿದು ಬಿತ್ತು ಸೇತುವೆ : ಮುಳುಗಿದೆ ವಾಹನ..? ಮಳೆಯ ಅವಾಂತರಕ್ಕೆ ಹೆದ್ದಾರಿ ಬಂದ್..!

    ಕಾರವಾರ : ಇಲ್ಲಿನ ಸದಾಶಿವಘಡ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸುಮಾರು 45 ವರ್ಷಗಳ ಹಿಂದೆ ನಿರ್ಮಿತವಾದ ಕಾಳಿ ಸೇತುವೆ ಕುಸಿದು ಬಿದ್ದು, ಲಾರಿ ಮುಳುಗಡೆಯಾಗಿರುವ ಘಟನೆ ನಡೆದಿದೆ.

    ಗೋವಾದಿಂದ ಮಂಗಳೂರು ಕಡೆ ಚಲಿಸುತ್ತಿದ್ದ ಲಾರಿ ಕಾಳಿ ನದಿಯಲ್ಲಿ ಮುಳುಗಡೆಯಾಗಿದ್ದು, ಲಾರಿ ಚಾಲಕನ ರಕ್ಷಣೆ ಮಾಡಲಾಗಿದೆ. ಚಾಲಕ‌ನ ಸ್ಥಿತಿ ಗಂಭೀರವಾಗಿದೆ. ಸದ್ಯ ಆತನಿಗೆ ಕಾರವಾರ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಕಾರವಾರದ ಮೂಲಕ ಹರಿಯುವ ಕಾಳಿ ನದಿಗೆ.1983ರಲ್ಲಿ ಈ ನದಿಯ ಮೇಲೆ ನಿರ್ಮಿಸಲಾದ ಸೇತುವೆಯು ಕರ್ನಾಟಕವನ್ನು ಗೋವಾದೊಂದಿಗೆ ಸಂಪರ್ಕಿಸುವ ಸೇತುಗೆ ಇದಾಗಿತ್ತು. ನದಿ ಮತ್ತು ಸಮುದ್ರದ ಸಂಗಮ ಸ್ಥಳದ ಮೇಲೆ ಸೇತುವೆಯನ್ನು ನಿರ್ಮಿಸಿರುವುದರಿಂದ ಇದು ಪ್ರವಾಸಿಗರ ಅಚ್ಚುಮೆಚ್ಚಿನ ಸ್ಥಳ ಸಹ ಆಗಿತ್ತು.‌ಈ ಸೇತುವೆಯ ಮೇಲೆ ಅನೇಕ ಕನ್ನಡ ಹಾಗೂ ಹಿಂದಿ ಸಿನಿಮಾಗಳು ಸಹ ಚಿತ್ರೀಕರಣ ಮಾಡಲಾಗಿತ್ತು. ನದಿಯು ಸಮುದ್ರವನ್ನು ಸೇರುವ ಸ್ಥಳವು ಸ್ಪಷ್ಟವಾಗಿ ಗೋಚರಿಸುವ ಕೆಲವು ಸ್ಥಳಗಳಲ್ಲಿ ಇದು ಒಂದಾಗಿದೆ.

    ಇನ್ನು ಜಿಲ್ಲೆಯ ಕಾರವಾರ ನಗರದ ರಾಷ್ಟ್ರೀಯ ಹೆದ್ದಾರಿ 66 ರ ಗೋವಾ- ಕಾರವಾರ ಹೆದ್ದಾರಿ ಸಂಚಾರವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾರವರು ಆದೇಶಿಸಿದ್ದಾರೆ.

    ಇದಲ್ಲದೇ ಈ ಆದೇಶ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ IRB ಕಂಪನಿ ಕಾಳಿ ನದಿ ಸೇತುವೆ ಭದ್ರತೆ ಕುರಿತು ವರದಿ ನೀಡುವ ವರೆಗೆ ಸಂಪೂರ್ಣ ಬಂದ್ ಇರಲಿದೆ.

    ಉತ್ತರ ಕನ್ನಡ ಜಿಲ್ಲೆಯಲ್ಲಿ ಐ.ಆರ್.ಬಿ ಕಂಪನಿ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಹೆದ್ದಾರಿಯಲ್ಲಿ ದುರಂತ ನಡೆಯುತ್ತಿದೆ. ಇದಲ್ಲದೇ ಹೊಸ ಸೇತುವೆ ನಿರ್ಮಿಸುವ ಬದಲು ಒಂದುಭಾಗದಲ್ಲಿ ಮಾತ್ರ ಹೊಸ ಸೇತುವೆ ನಿರ್ಮಿಸಿ ಇನ್ನೊಂದು ಭಾಗದಲ್ಲಿ 41 ವರ್ಷದ ಹಿಂದೆ ನಿರ್ಮಿಸಿರುವ ಸೇತುವೆಯಲ್ಲಿ ಸಂಚಾರಕ್ಕೆ ವ್ಯವಸ್ಥೆ ಮಾಡಿದ್ದು ಸೇತುವೆ ಭದ್ರವಾಗಿರದಿದ್ದರೂ ಇನ್ನೊಂದು ಸೇತುವೆ ನಿರ್ಮಿಸದೇ ನಿರ್ಲಕ್ಷ ವಹಿಸಿ ಇಂದಿನ ದುರಂತಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಕಾರವಾರ ನಗರ ಠಾಣೆಯಲ್ಲಿ BNS ಕಲಂ 110, 125 ,285 ನಡಿ ಪ್ರಕರಣ ದಾಖಲು ಮಾಡಲಾಗಿದೆ.

  • ಅಂಗಡಿಯ ಮೇಲೆ ಕುಸಿದ ಗುಡ್ಡ : ಐವರು ಮಣ್ಣಿನಡಿಗೆ? ರಸ್ತೆ ಸಂಚಾರ ಬಂದ್..!

    ಅಂಗಡಿಯ ಮೇಲೆ ಕುಸಿದ ಗುಡ್ಡ : ಐವರು ಮಣ್ಣಿನಡಿಗೆ? ರಸ್ತೆ ಸಂಚಾರ ಬಂದ್..!

    ಅಂಕೋಲಾ : ಜಿಲ್ಲೆಯಲ್ಲಿ ರಣಭೀಕರ ಮಳೆಯಾಗುತ್ತಿದ್ದು, ರಾಷ್ಟ್ರೀಯ ಹೆದ್ದಾರಿ ೬೬ರ ಶಿರೂರು ಬಳಿ ಭಾರೀ ಗುಡ್ಡಕುಸಿತ ಸಂಭವಿಸಿದೆ. ಅಂಗಡಿಯೊಂದರ ಮೇಲೆ ಗುಡ್ಡ ಕುಸಿದು ಬಿದ್ದು, ಟೀ ಸ್ಟಾಲ್ ಸೇರಿ ಹಲವು ಅಂಗಡಿಗಳಿಗೆ ಹಾನಿಯಾಗಿವೆ. ಐದಕ್ಕೂ ಹೆಚ್ಚು ಮಂದಿ ಗುಡ್ಡದ ಮಣ್ಣಿನಡಿ ಸಿಲುಕಿರುವ ಶಂಕೆ ಇದೆ. ಒಂದೇ ಕುಟಂಬದ ಐವರು ಮಣ್ಣಿನಡಿ ಸಿಲುಕಿದ್ದಾರೆ ಎನ್ನಲಾಗಿದೆ. ಲಕ್ಷ್ಮಣ ನಾಯ್ಕ(47), ಶಾಂತಿ ನಾಯ್ಕ(36), ರೋಶನ(11), ಅವಂತಿಕಾ(6), ಜಗನ್ನಾಥ(55) ಎಂಬುವವರು ಮಣ್ಣಿನಡಿ ಸಿಲುಕಿದ್ದಾರೆ ಎನ್ನಲಾಗಿದೆ.

    ಐವರು ಸದಸ್ಯರ ಕುಟುಂಬ ವಾಸವಿದ್ದ ಅಂಗಡಿ ಮೇಲೆ ಗುಡ್ಡ ಕುಸಿದಿದೆ. ಗ್ರಾಹಕರು ಸೇರಿ ಮನೆಯವರು ಮಣ್ಣಿನಡಿ ಸಿಲುಕಿರುವ ಶಂಕೆ ಇದೆ. ಧಾರಾಕಾರ ಮಳೆಯಿಂದಾಗಿ ಹೆದ್ದಾರಿ ಪಕ್ಕದ ಗುಡ್ಡ ಸಡಿಲಗೊಂಡಿತ್ತು. ಗಂಗಾವಳಿ ನದಿಗೆ ಹೊಂದಿಕೊಂಡಿರುವ ಶಿರೂರು ಪ್ರದೇಶ ಇದಾಗಿದೆ. ರಾಷ್ಟ್ರೀಯ ಹೆದ್ದಾರಿ ೬೬ರ ಅಂಕೋಲಾ-ಕುಮಟಾ ನಡುವೆ ಸಂಚಾರ ಸಂಪೂರ್ಣ ಬಂದ್ ಆಗಿದೆ.

    ಐಆರ್‌ಬಿ ಕಂಪೆನಿಯಿಂದ ಮಣ್ಣು ತೆರವು ಕಾರ್ಯಾಚರಣೆ ನಡೆಯುತ್ತಿದೆ. ಸ್ಥಳಕ್ಕೆ ಅಂಕೋಲಾ ಪೊಲೀಸ್, ಅಗ್ನಿಶಾಮಕ ಸಿಬ್ಬಂದಿ, ಎನ್‌ಹೆಚ್‌ಎಐ ಆಂಬ್ಯುಲೆನ್ಸ್ ದೌಡಾಯಿಸಿದೆ.

  • ನಾಯಿ ಅಡ್ಡಬಂದು ಬೈಕ್ ನಿಂದ ಬಿದ್ದ ಯುವಕ ಸಾವು.

    ನಾಯಿ ಅಡ್ಡಬಂದು ಬೈಕ್ ನಿಂದ ಬಿದ್ದ ಯುವಕ ಸಾವು.

    ಅಂಕೋಲಾ : ರಸ್ತೆಗೆ ಅಡ್ಡ ಬಂದ ನಾಯಿ ತಪ್ಪಿಸಲು ಹೋಗಿ ರಸ್ತೆಯಲ್ಲಿ ಬಿದ್ದು ಗಂಭೀರ ಗಾಯಗೊಂಡು, ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬೈಕ್ ಸವಾರ ಚಿಕಿತ್ಸೆಗೆ ಸ್ಪಂದಿಸದೇ ಗುರುವಾರ ಮೃತಪಟ್ಟಿದ್ದಾನೆ. ಪಟ್ಟಣದ ಹೊನ್ನಕೇರಿಯ ಯುವಕ ನವೀನ ಆನಂದ ನಾಯ್ಕ(33) ಮೃತ ದುರ್ದೈವಿ.

    ಈತನು ಮೇ 8ರ ರಾತ್ರಿ 11.35ರ ಸುಮಾರಿಗೆ ಬೈಕ್ ಮೇಲೆ ಕಾರವಾರ ಕಡೆಯಿಂದ ಅಂಕೋಲಾ ಕಡೆಗೆ ಬರುತ್ತಿದ್ದ ವೇಳೆ ಇಲ್ಲಿನ ಅಜ್ಜಿಕಟ್ಟಾ ಕ್ರಿಸ್ತಮಿತ್ರ ಆಶ್ರಮದ ಎದುರು ರಸ್ತೆಗೆ ಅಡ್ಡ ಬಂದ ನಾಯಿಯನ್ನು ತಪ್ಪಿಸಲು ಹೋಗಿ, ಬೈಕ್ ಮೇಲಿನ ನಿಯಂತ್ರಣ ಕಳೆದುಕೊಂಡು ರಸ್ತೆ ಮೇಲೆ ಬಿದ್ದು ಗಂಭೀರ ಗಾಯಗೊಂಡಿದ್ದ. ಗಾಯಗೊಂಡ ನವೀನ ನಾಯ್ಕಗೆ ಇಲ್ಲಿಯ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಅಲ್ಲಿಂದ ಕಾರವಾರ ಸಿವಿಲ್ ಆಸ್ಪತ್ರೆಗೆ ಸಾಗಿಸಲಾಗಿತ್ತು.

    ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿ ಸಲಾಗಿತ್ತು. ಈತನು ವೆಂಕಟರಮಣ ದೇವಸ್ಥಾನ ರಥಬೀದಿಯಲ್ಲಿ ಬೈಕ್ (ರಿಪೇರಿ) ಗ್ಯಾರೇಜ್ ನಡೆಸುತ್ತಿದ್ದ. ಬೈಕ್ ಅಪಘಾತದ ಕುರಿತು ಅಂಕೋಲಾ ಪಿಎಸ್‌ಐ ಸುಹಾಸ್ ಆ‌ರ್. ಪ್ರಕರಣವನ್ನು ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಂಡಿದ್ದಾರೆ.

  • ಇಂಜಿನ್ ಸ್ಥಗಿತಗೊಂಡು ಸಮುದ್ರದಲ್ಲಿ ಮುಳುಗಿದ ಬೋಟ್.

    ಇಂಜಿನ್ ಸ್ಥಗಿತಗೊಂಡು ಸಮುದ್ರದಲ್ಲಿ ಮುಳುಗಿದ ಬೋಟ್.

    ಅಂಕೋಲಾ : ಮೀನುಗಾರಿಕೆ ಬೋಟೊಂದು ಇಂಜಿನ್ ಸ್ಥಗಿತಗೊಂಡು ಸಮುದ್ರದಲ್ಲಿ ಮುಳುಗಿ ಕೋಟ್ಯಾಂತರ ರೂಪಾಯಿ ಹಾನಿಯಾದ ಘಟನೆ ತಾಲೂಕಿನ ಹಾರವಾಡ ಸಮೀಪದ ಸಮುದ್ರ ವ್ಯಾಪ್ತಿಯಲ್ಲಿ ನಡೆದಿದೆ.

    ಮುದಗಾದ ಮೀನುಗಾರಿಕೆ ಜೆಟ್ಟಿಯಿಂದ ಆಳ ಸಮುದ್ರ ಮೀನುಗಾರಿಕೆಗೆ ಹೊರಟಿದ್ದ ಇಂದು ಚಂದ್ರ ತಾಂಡೇಲ್ ಮಾಲಿಕತ್ವದ ಇಂಡ್ ಕೆ.ಎ07 ಎಂ.ಎಂ 1587 ನೋಂದಣಿ ಸಂಖ್ಯೆಯ ಓಂ ನಮೋ ಶಿವಾಯ ಹೆಸರಿನ ಬೋಟ್ ಕುಕ್ಕಡೇಶ್ವರ ಗುಡ್ಡದ ಬಳಿ ಬಲೆ ಬೀಸಿ ಎಳೆಯುತ್ತಿದ್ದ ಸಂದರ್ಭದಲ್ಲಿ ತಾಂತ್ರಿಕ ದೊಷದಿಂದ ಬೋಟಿನ ಇಂಜಿನ್ ಸ್ಥಗಿತಗೊಂಡಿದ್ದು ಗಾಳಿಯ ರಭಸಕ್ಕೆ ಸಿಲುಕಿದ ಬೋಟು ಸಮುದ್ರದಲ್ಲಿ ಮುಳುಗಿದೆ.

    ಬೋಟಿನಲ್ಲಿ ಇದ್ದ 17 ಜನ ಮೀನುಗಾರರನ್ನು ಬೇರೆ ಬೋಟಿನ ಮೂಲಕ ರಕ್ಷಣೆ ಮಾಡಲಾಗಿದ್ದು ಸುಮಾರು 1.19 ಕೋಟಿ ರೂಪಾಯಿ ಹಾನಿ ಸಂಭವಿಸಿರುವುದಾಗಿ ಅಂದಾಜಿಸಲಾಗಿದೆ. ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

  • ಲೋಕಾಯುಕ್ತದಲ್ಲಿ ದಾಖಲಾದ ಪ್ರಕರಣದ ತನಿಖೆ.

    ಲೋಕಾಯುಕ್ತದಲ್ಲಿ ದಾಖಲಾದ ಪ್ರಕರಣದ ತನಿಖೆ.

    ಕಾರವಾರ: ನಗರದ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಸೋಮವಾರ ಕರ್ನಾಟಕ ರಾಜ್ಯ ಉಪ ಲೋಕಾಯುಕ್ತರಾದ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಅವರು ಉತ್ತರಕನ್ನಡ ಜಿಲ್ಲೆಗ ಸಂಬಂಧಪಟ್ಟಂತೆ ಲೋಕಾಯುಕ್ತ ಸಂಸ್ಥೆಯಲ್ಲಿ ದಾಖಲಾಗಿರುವ (ಗೌರವಾನ್ವಿತ ಉಪಲೋಕಾಯುಕ್ತರ ಕಾರ್ಯವ್ಯಾಪ್ತಿಗೆ ಒಳಪಡುವ ಪ್ರಕರಣಗಳಲ್ಲಿ) ತನಿಖೆ ಅಥವಾ ವಿಚಾರಣೆಗೆ ಬಾಕಿಯಿರುವ ಪ್ರಕರಣಗಳಿಗ ಸಂಬಂಧಿಸಿದ ದೂರುದಾರರು ಹಾಗೂ ಎದುರುದಾರರ ಸಮ್ಮುಖದಲ್ಲಿ ಕಾನೂನು ರೀತಿಯಲ್ಲಿ ವಿಚಾರಣೆ ನಡೆಸಿದರು.

    ಈ ಸಂದರ್ಭದಲ್ಲಿ ಕರ್ನಾಟಕ ಲೋಕಾಯುಕ್ತ ಹೆಚ್ಚುವರಿ ನಿಬಂಧಕರು ಉಪನಿಬಂಧಕರು, ಜಿಲ್ಲಾ ಪಂಚಾಯತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಅಪರ ಜಿಲ್ಲಾಧಿಕಾರಿಗಳು, ಪೋಲಿಸ್ ಅಧೀಕ್ಷಕರು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.

  • ತೋಟದ ಮನೆಯಲ್ಲಿ  ನೇಣಿಗೆ ಶರಣಾದ ಕ್ಲಾಸ್ ೧ ಗುತ್ತಿಗೆದಾರ.

    ತೋಟದ ಮನೆಯಲ್ಲಿ ನೇಣಿಗೆ ಶರಣಾದ ಕ್ಲಾಸ್ ೧ ಗುತ್ತಿಗೆದಾರ.

    ಅಂಕೋಲಾ : ಪ್ರಥಮ ದರ್ಜೆಯ ಗುತ್ತಿಗೆದಾರನೋರ್ವ ಮನೆಯ ಹಿಂಬದಿಯಲ್ಲಿರುವ ತೋಟದ ಮನೆಯಲ್ಲಿ ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅಗಸೂರು ಗ್ರಾಮದಲ್ಲಿ ನಡೆದಿದೆ.

    ಬಾಲಚಂದ್ರ ನಾಯಕ (55)ಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆದಾರರಾಗಿದ್ದಾರೆ. ಮೂಲತಃ ಶೆಟಗೇರಿಯವರಾದ ಇವರು ಸದ್ಯ ಆಗಸೂರನಲ್ಲಿ ವಾಸವಾಗಿದ್ದರು. ಕ್ರೀಯಾಶೀಲ ವ್ಯಕ್ತಿತ್ವದ ಬಾಲಚಂದ್ರ ನಾಯಕ ಅವರು ಎಲ್ಲರೊಂದಿಗೂ ಚೆನ್ನಾಗಿದ್ದು ಆತ್ಮೀಯ ವ್ಯಕ್ತಿತ್ವಕ್ಕೆ ಹೆಸರಾಗಿದ್ದ. ಪ್ರಥಮ ದರ್ಜೆಯ ಗುತ್ತಿಗೆದಾರನಾಗಿ ತನ್ನ ವೃತ್ತಿಯನ್ನು ಕಂಡು ಕೊಂಡ ಬಾಲಚಂದ್ರ ನಾಯಕ ಕ್ಯಾಂಟೀನ ಬಾಬು ಎಂದೆ ಪ್ರಖ್ಯಾತಿಯಾಗಿದ್ದರು.

    ಅಗಸೂರು ಗ್ರಾಮ ಪಂಚಾಯತ್ ಅಧ್ಯಕ್ಷನಾಗಿ, ಅಗಸೂರಿನ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷನಾಗಿ ಪ್ರಸ್ತುತವಾಗಿ ಸೇವೆ ಸಲ್ಲಿಸುತ್ತ ಜನಪ್ರೀಯನಾಗಿದ್ದ. ಅಗಸೂರು ಅಧ್ಯಕ್ಷನಾಗಿಯೂ ಗ್ರಾ.ಪಂ ಸಮರ್ಥವಾಗಿ ಕಾರ್ಯನಿರ್ವಹಿಸಿ ಮಾದರಿ ಆಡಳಿತ ನೀಡಿದ ಕೀರ್ತಿಯು ಬಾಲಚಂದ್ರ ನಾಯಕ ಅವರದ್ದಾಗಿದೆ.