Satwadhara News

Category: HONNAVAR

ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನಲ್ಲಿ ನಡೆದ ಕಾರ್ಯಕ್ರಮಗಳ ವರದಿ ಮತ್ತು ಇನ್ನಿತರ ಘಟನಾವಳಿಗಳ ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ.

  • ವಜ್ರನಾಮ ಜಿತ್ತದತ್ತ ಗೌಡ ನಿಧನ

    ವಜ್ರನಾಮ ಜಿತ್ತದತ್ತ ಗೌಡ ನಿಧನ

    ಹೊನ್ನಾವರ : ಈ ಹಿಂದೆ ಮಂಕಿ ಗ್ರಾ.ಪಂ. ಹಾಗೂ ವ್ಯವಸಾಯ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ, ತಾಲೂಕಿನ ಮಂಕಿ ಚಿತ್ತಾರದ ಸಾಮಾಜಿಕ ಕಾರ್ಯಕರ್ತರಾಗಿದ್ದ ವಜ್ರನಾಮ ಜಿತ್ತದತ್ತ ಗೌಡ (71) ವಯಸ್ಸಿನಲ್ಲಿ ನಿಧನರಾದರು.

    ಇವರು ತಾಲೂಕಿನ ಪ್ರತಿಷ್ಠಿತ ಪಿ.ಎಲ್.ಡಿ ಬ್ಯಾಂಕ್ ನಿರ್ದೆಶಕರಾಗಿ ಸೇವೆ ಸಲ್ಲಿಸಿದ್ದರು. ಇವರು ಮಹಾರಾಷ್ಟ್ರ ಸಾಂಗ್ಲಿಯ ಸಂಬಂಧಿಕರ ಮನೆಯಲ್ಲಿ ಶನಿವಾರ ಮುಂಜಾನೆ ನಿಧನರಾದ್ದಾರೆ.

    ಮೃತರು ಪತ್ನಿ, ಓರ್ವ ಪುತ್ರ, ಪುತ್ರಿ, ಸಹೋದರ ಚಂದ್ರ ಗೌಡ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಇವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ರಾಜ್ಯಸಭಾ ಸದಸ್ಯರು ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ಡಿ.ವಿರೇಂದ್ರ ಹೆಗ್ಗಡೆ ಕುಟುಂಬದವರಿಗೆ ಕರೆ ಮಾಡಿ ಸಂತಾಪ ವ್ಯಕ್ತಪಡಿಸಿದ್ದಾರೆ.

  • ಪ್ರವಾಸಕ್ಕೆ ಬಂದಿದ್ದ ಬಸ್ ಪಲ್ಟಿ : ಹಲವರಿಗೆ ಪೆಟ್ಟು

    ಪ್ರವಾಸಕ್ಕೆ ಬಂದಿದ್ದ ಬಸ್ ಪಲ್ಟಿ : ಹಲವರಿಗೆ ಪೆಟ್ಟು

    ಹೊನ್ನಾವರ : ಮಹಾರಾಷ್ಟ್ರ ಮೂಲದ ಪ್ರವಾಸಿಗರು ಮೈಸೂರಿನಿಂದ ಮುರುಡೇಶ್ವರ ಪ್ರವಾಸಕ್ಕೆ ಬಸ್ ಬರುತ್ತಿದ್ದ ಖಾಸಗಿ ಬಸ್ ಪಲ್ಟಿಯಾಗಿ 15ಕ್ಕೂ ಹೆಚ್ಚು ಪ್ರವಾಸಿಗರು ಗಾಯಗೊಂಡ ಘಟನೆ ಗೇರುಸೊಪ್ಪದ ಬಳಿ ನಡೆದಿದೆ.

    ಮೈಸೂರು ಪ್ರವಾಸಕ್ಕೆ ಹೋಗಿದ್ದ ಮಹಾರಾಷ್ಟ್ರ ಮೂಲದ ,51 ಮಂದಿ ಪ್ರವಾಸಿಗರು ಮೈಸೂರು ಪ್ರವಾಸ ಮುಗಿಸಿ ಗೆರಸೊಪ್ಪ ಮಾರ್ಗವಾಗಿ ಮಹಾರಾಷ್ಟ್ರ ಮೂಲದ ಚಾಲಕ ಅಶೋಕ ಚಲಿಸುತ್ತಿದ್ದ ಬಸ್ ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಪಕ್ಕದಲ್ಲಿ ಪಲ್ಟಿಯಾಗಿದೆ.

    ಇದರಿಂದಾಗಿ 51ಜನ ಪ್ರವಾಸಿಗರ ಪೈಕಿ 14ರಿಂದ 17ಜನರಿಗೆ ಸಣ್ಣಪುಟ್ಟ ಗಾಯವಾಗಿದ್ದು, 13ಜನ ಗಾಯಾಳುಗಳಿಗೆ ಹೊನ್ನಾವರ 108 ವಾಹನದ ಹೊನ್ನಾವರ ಸರಕಾರಿ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಈ ಬಗ್ಗೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕಿರಣ ಭಟ್ ಅವರ ಹೌಸ್ ಫುಲ್ ಕೃತಿ ಬಿಡುಗಡೆ

    ಕಿರಣ ಭಟ್ ಅವರ ಹೌಸ್ ಫುಲ್ ಕೃತಿ ಬಿಡುಗಡೆ

    ಹೊನ್ನಾವರ: ಸದ್ದಿಲ್ಲದೆ ಸಂವಿಧಾನವನ್ನು ಬದಲಿಸಲು ಪ್ರಯತ್ನಿಸುತ್ತಿರುವ ಹಿನ್ನೆಲೆಯಲ್ಲಿ ವಿಚಾರವಂತಿಕೆಯನ್ನು ರಕ್ಷಿಸಿಕೊಳ್ಳಬೇಕಾದ ಅವಶ್ಯಕತೆ ಇದೆ ಎಂದು ಹಿರಿಯ ಪತ್ರಕರ್ತರಾದ ಜಿ ಯು ಭಟ್ ಅವರು ಅಭಿಪ್ರಾಯಪಟ್ಟರು.

    ಚಿಂತನ ಉತ್ತರಕನ್ನಡ, ಚಿಂತನ ರಂಗ ಅಧ್ಯಯನ ಕೇಂದ್ರ ಹಾಗೂ ಪ್ರೀತಿಪದ ಹೊನ್ನಾವರದಲ್ಲಿ ಇಂದು ಹಮ್ಮಿಕೊಂಡಿದ್ದ, ಬಹುರೂಪಿಯ ಪ್ರಕಟಣೆ, ರಂಗಕರ್ಮಿ ಕಿರಣ ಭಟ್ ಅವರ ಹೌಸ್ ಫುಲ್ ರಂಗಕೃತಿ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ರಂಗಭೂಮಿ ಸದಾ ಜೀವಂತವಾದದ್ದು. ಚಲನಶೀಲತೆಯನ್ನು ಉಳ್ಳದ್ದು. ಈ ರಂಗಭೂಮಿ ಜನರ ಮನಸ್ಸಿನ ಕನ್ನಡಿ. ಹಾಗಾಗಿಯೇ ರಂಗಭೂಮಿ ಬದಲಾವಣೆಯನ್ನು ಪ್ರೇರೇಪಿಸುತ್ತದೆ.

    ಕಿರಣ್ ಭಟ್ ಅವರ ಹೌಸ್ ಫುಲ್ ಕೃತಿ ಬಿ ವಿ ಕಾರಂತರ ನಂತರ ನಡೆಯುತ್ತಿರುವ ಹವ್ಯಾಸಿ ರಂಗಭೂಮಿಯ ಚಟುವಟಿಕೆಗಳನ್ನು ಹಿಡಿದಿಟ್ಟಿದೆ. ರಂಗ ಕೈರಳಿ ಕೃತಿಯ ಮೂಲಕ ಓದುಗರ ಮನ ಗೆದ್ದ ಕಿರಣ್ ಈಗ ರಂಗ ವಿಮರ್ಶೆಯ ಮೂಲಕ ರಂಗ ಚರಿತ್ರೆಯನ್ನು ದಾಖಲಿಸಿದ್ದಾರೆ ಎಂದರು.

    ಪತ್ರಕರ್ತ, ಬಹುರೂಪಿಯ ಜಿ ಎನ್ ಮೋಹನ್ ಅವರು ಮಾತನಾಡಿ ಪ್ರಶ್ನೆ ಕೇಳುವುದನ್ನು ಸಾಹಿತ್ಯವಾಗಲೀ, ರಂಗಭೂಮಿಯಾಗಲೀ ಪ್ರೇರೇಪಿಸುತ್ತದೆ. ಈ ಕಾರಣಕ್ಕಾಗಿಯೇ ವ್ಯವಸ್ಥೆ ಈ ಎರಡೂ ಲೋಕವನ್ನು ಅಸ್ಥಿರಗೊಳಿಸುವ ಪ್ರಯತ್ನ ನಡೆಸುತ್ತಿದೆ ಎಂದರು.

    ರಂಗಭೂಮಿ ಈ ಮೊದಲಿನಿಂದಲೂ ಬದಲಾವಣೆಯ ಅಸ್ತ್ರ. ಹೀಗಾಗಿ ರಂಗಭೂಮಿ ಜಡತ್ವವನ್ನು, ಪ್ರಗತಿ ವಿರೋಧಿ ಮನಸ್ಸುಗಳನ್ನು ಪ್ರಶ್ನಿಸುತ್ತದೆ ಎಂದರು.

    ಕೃತಿ ಬಿಡುಗಡೆ ಮಾಡಿದ ದೀಪಾ ಹಿರೇಗುತ್ತಿ ಅವರು ಓದುವ ಸಂಸ್ಕೃತಿಯನ್ನು ಇನ್ನಷ್ಟು ವ್ಯಾಪಕವಾಗಿ ಬೆಳಸಬೇಕಾದ ಅಗತ್ಯವಿದೆ. ಓದುವ ಮನಸ್ಸುಗಳು ಎಂದಿಗೂ ಸಕಾರಾತ್ಮಕವಾಗಿ ಕಟ್ಟುವ ಕೆಲಸವನ್ನು ಮಾಡುತ್ತದೆ. ಓದು ವ್ಯಾಪಕವಾಗಲು ಚಿಂತನ ನಡೆಸಿದ ಪ್ರಯೋಗಗಳು ಇಡೀ ರಾಜ್ಯಕ್ಕೆ ಮಾದರಿ ಎಂದರು

    ಕೃತಿ ಕುರಿತು ಸಮಾಜ ವಿಜ್ಞಾನಿ ಡಾ. ಪ್ರಕಾಶ್ ಭಟ್ ಮಾತನಾಡಿದರು. ಕೃತಿಕಾರ ಕಿರಣ್ ಭಟ್ ಅವರು ತಾವು ರಂಗಭೂಮಿಯಲ್ಲಿ ಸಾಗಿ ಬಂದ ಹಿನ್ನೆಲೆಯನ್ನು ವಿವರಿಸಿದರು. ಪ್ರೀತಿಪದದ ಯಮುನಾ ಗಾಂವ್ಕರ್ ಕಾರ್ಯಕ್ರಮ ನಿರ್ವಹಿಸಿದರು. ಮಾಸ್ತಿಗೌಡ ವಂದಿಸಿದರು.ಮಾಧವಿ ಭಂಡಾರಿ ರಂಗಗೀತೆ ಹಾಡಿದರು.

  • ತಪ್ಪು ಸಂದೇಶ ರವಾನಿಸಿದರೆ ಬೀಳಲಿದೆ ಕೇಸ್ : ಸಾಮಾಜಿಕ ಸ್ವಾಸ್ಥ್ಯ ಕೆಡಿಸದಿರಿ – ಎಸ್.ಪಿ ಎಚ್ಚರಿಕೆ.

    ತಪ್ಪು ಸಂದೇಶ ರವಾನಿಸಿದರೆ ಬೀಳಲಿದೆ ಕೇಸ್ : ಸಾಮಾಜಿಕ ಸ್ವಾಸ್ಥ್ಯ ಕೆಡಿಸದಿರಿ – ಎಸ್.ಪಿ ಎಚ್ಚರಿಕೆ.

    ಹೊನ್ನಾವರ : ಜಿಲ್ಲೆಯ ಅಂಕೋಲಾದ ಕೇಣಿ ಬಂದರು ಹಾಗೂ ಹೊನ್ನಾವರ ಟೊಂಕಾ ಕಾಮಗಾರಿಯ ಬಗ್ಗೆ ಸ್ಥಳೀಯ ಮೀನುಗಾರರು ಪ್ರತಿಭಟನೆ ನಡೆಸುತ್ತಿದ್ದು, ನಿಷೇಧಾಜ್ಞೆಯನ್ನೂ ಜಾರಿಮಾಡಲಾಗಿದೆ. ಆದರೆ ಮೀನುಗಾರರಿಗೆ ಕೆಲವರು ತಪ್ಪು ಸಂದೇಶ ರವಾನಿಸುತ್ತಿದ್ದಾರೆ. ಜನರ ದಿಕ್ಕು ತಪ್ಪಿಸುವ ಪ್ರಯತ್ನವನ್ನು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಮಾಡುತ್ತಿದ್ದು, ಅಂತವರ ಮೇಲೆ ಪೊಲೀಸ್ ಇಲಾಖೆ ಹದ್ದಿನ ಕಣ್ಣಿಟ್ಟಿದೆ. ಜೊತೆಗೆ ಅಂತವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಪೊಲೀಸ್ ವರಿಷ್ಠಾಧಿಕಾರಿ ಎಂ. ನಾರಾಯಣ್ ಖಡಕ್ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

    ಬಂದರು ಕಾಮಗಾರಿಯಿಂದ ಅಷ್ಟು ಮನೆ ಹೋಗಲಿದೆ, ಇಷ್ಟು ಭೂಮಿ ಕಸಿದುಕೊಳ್ಳಲಿದ್ದಾರೆ, ಪರಿಹಾರ ಸಿಗುವುದಿಲ್ಲ ಹೀಗೆ ಇನ್ನಿತರ ಸುಳ್ಳು ಸುದ್ದಿಗಳನ್ನು ಶೋಷಿಯಲ್ ಮೀಡಿಯಾ, ವಾಟ್ಸಾಪ್ ಗ್ರೂಪ್ ಗಳಲ್ಲಿ ಹರಿಬಿಡಲಾಗುತ್ತಿದೆ ಎನ್ನಲಾಗಿದ್ದು, ಈ ಬಗ್ಗೆ ಇಲಾಖೆ ಕ್ರಮಕ್ಕೆ ಮುಂದಾಗುವ ಸೂಚನೆಯನ್ನು ಅವರು ನೀಡಿದ್ದಾರೆ.

    ಪ್ರತಿಭಟನಾ ನಿರತರಿಗೆ ತಪ್ಪು ಸಂದೇಶ ನೀಡುತ್ತಿರುವುದು ಕಂಡುಬಂದಿದೆ,ಸಾಮಾಜಿಕ ಮಾಧ್ಯಮದಲ್ಲಿ ತಪ್ಪು ಸಂದೇಶ ಬಿತ್ತರಿಸಯವ, ಸಾಮಾಜಿಕ ಸ್ವಾಸ್ಥ್ಯ ಹಾಳು ಮಾಡುವವರಿಗೆ ಎಸ್ಪಿ ಎಂ ನಾರಾಯಣ್ ಖಡಕ್ ವಾರ್ನಿಂಗ್ ನೀಡಿದ್ದು, ಶೋಷಿಯಲ್ ಮೀಡಿಯಾ ಹಾಗೂ ಇನ್ನಿತರ ಮಾರ್ಗವಾಗಿ ತಪ್ಪು ಸಂದೇಶ ರವಾನಿಸುತ್ತಿರುವವರ ವಿರುದ್ಧ ತಕ್ಷಣ ಎಫ್ ಐ ಆರ್ ದಾಖಲಿಸುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

    ಹಾಗೆಯೇ ಸುಳ್ಳು ಮಾಹಿತಿ ನೀಡಿ ಪ್ರತಿಭಟನೆಗೆ ಪ್ರಚೋದನೆ ನೀಡುತ್ತಿರುವ 150 ಕ್ಕೂ ಅಧಿಕ ಮಂದಿಯನ್ನು ಗುರುತಿಸಲಾಗಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಲಿದ್ದಾರೆ ಎನ್ನಲಾಗಿದೆ.

  • ಕಡಲಿಗೆ ಇಳಿದು ಪ್ರತಿಭಟನೆ ನಡೆಸಿದ ಮೀನುಗಾರರು

    ಕಡಲಿಗೆ ಇಳಿದು ಪ್ರತಿಭಟನೆ ನಡೆಸಿದ ಮೀನುಗಾರರು

    ಹೊನ್ನಾವರ : ನಿನ್ನೆ ಅಂಕೋಲಾ ತಾಲೂಕಿನ ಕೇಣಿ ಗ್ರಾಮದಲ್ಲಿ ಬಂದರು ನಿರ್ಮಾಣ ವಿರೋಧಿಸಿ ಮೀನುಗಾರರ ತೀವ್ರ ಹೋರಾಟ ನಡೆಸಿದ್ದು, ಇಂದು ಹೊನ್ನಾವರ ತಾಲೂಕಿನ ಕಾಸರಕೋಡಿನಲ್ಲಿ ಬಂದರು ನಿರ್ಮಾಣದ ಸರ್ವೆ ಕಾರ್ಯ ವಿರೋಧಿಸಿ ಮೀನುಗಾರರು ಕಡಲಿಗೆ ಇಳಿದು ಪ್ರತಿಭಟನೆ ನಡೆಸಿದರು. ಇದರಿಂದಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ ನಿರ್ಮಾಣದ ವಿರುದ್ದ ಮೀನುಗಾರರ ಆಕ್ರೋಶ ಹೆಚ್ಚಾಗಿದೆ.

    ಬಂದರು ನಿರ್ಮಾಣದ ಮೂಲಕ ವ್ಯಾಪಾರ ವ್ಯವಹಾರ ವೃದ್ದಿ ಮಾಡಬೇಕು ಎನ್ನುವುದು ಸರ್ಕಾರದ ಚಿಂತನೆಯಾದರೆ ಇನ್ನೊಂದೆಡೆ ತಮ್ಮ ತುತ್ತ ಅನ್ನ ಸಂಪಾದನೆಯ ದುಡಿಮೆಯ ಸ್ಥಳ ಬಂದರಿಗೆ ಬಲಿಯಾಗಲಿದೆ ಎನ್ನುವ ಆತಂಕ ಮೀನುಗಾರಲ್ಲಿ ಉಂಟಾಗಿದೆ. ಮುಂದಿನ ದಿನದಲ್ಲಿ ಈ ಹೋರಾಟ ಯಾವ ಹಾದಿ ಹಿಡಿಯಲಿದೆ ಎನ್ನುವುದು ತಿಳಿಯದಾಗಿದೆ.

    ಹೊನ್ನಾವರ ಪೋರ್ಟ್ ಪ್ರೈವೇಟ್ ಲಿಮಿಟೆಡ್ ಕಂಪನಿ ವತಿಯಿಂದ ಸುಮಾರು 600ಕೋಟಿ ವೆಚ್ಚದಲ್ಲಿ ಬಂದರು ನಿರ್ಮಾಣಕ್ಕೆ ಮುಂದಾಗಿದ್ದು, ಇಂದು ಬಂದರು ರಸ್ತೆ ನಿರ್ಮಾಣ ಸಂಬಂಧ ಸರ್ವೆಗೆ ಜಿಲ್ಲಾಡಳಿತ ಮುಂದಾಗಿತ್ತು. ಮೀನುಗಾರರು ಪ್ರತಿಭಟನೆ ನಡೆಸದಂತೆ ಮುಂಚಿತವಾಗಿ ನಿಷೇದಾಜ್ಞೆ ಹೇರಿದ್ದು ನಿಷೇದಾಜ್ಞೆಗೂ ಲೆಕ್ಕಿಸದ ಮೀನುಗಾರರು ಶಾಲಾ ಮಕ್ಕಳನ್ನ ಕರೆದುಕೊಂಡು ಬಂದು ಪ್ರತಿಭಟನೆಗೆ ಮುಂದಾಗಿದ್ದರು.

    ಮೀನಗಾರರ ಪ್ರತಿಭಟನೆ ಹಿನ್ನಲೆಯಲ್ಲಿ ಸುಮಾರು 50ಕ್ಕೂ ಅಧಿಕ ಮೀನುಗಾರರನ್ನ ಪೊಲೀಸರು ವಶಕ್ಕೆ ಪಡೆದಿದ್ದು, ವಶಕ್ಕೆ ಪಡೆದ ಮೀನುಗಾರರ ಬಿಡುಗಡೆ ಮಾಡುವಂತೆ ಉಳಿದವರು ಪ್ರತಿಭಟನೆ ಮುಂದುವರೆಸಿದ್ದರು.

    ಹೊನ್ನಾವರ ಬಂದರು ನಿರ್ಮಾಣ ಸಂಬಂಧ ಕಳೆದ ಮೂರ್ನಾಲ್ಕು ವರ್ಷದಿಂದ ಹೋರಾಟ ನಡೆಯುತ್ತಲೇ ಇದೆ. ಇಂದು ಬಂದರು ನಿರ್ಮಾಣ ಸಂಬಂಧ ಸರ್ವೆ ಕಾರ್ಯ ಮಾಡಲು ಮುಂದಾದ ವೇಳೆಯಲ್ಲಿ ಮೀನುಗಾರರು ದೊಡ್ಡ ಮಟ್ಟದಲ್ಲಿಯೇ ಪ್ರತಿಭಟನೆಗೆ ಮುಂದಾಗಿದ್ದರು. ಇನ್ನು ಕಡಲಿಗೆ ಇಳಿದು ಮೀನುಗಾರರು ಪ್ರತಿಭಟಿಸಿದ್ದು ಸುಮಾರು ನಾಲ್ವರು ಅಸ್ಥಸ್ಥಗೊಂಡು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

    ಬಂಧಿತರನ್ನು ಬಿಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವ ಬಗ್ಗೆ ಎಚ್ಚರಿಕೆ ನೀಡಿದ ಬಾಲಕಿ ಅಪೇಕ್ಷಾ

    ಕಾಸರಕೋಡ ಬಂದರು ನಲ್ಲಿ ವಾಣಿಜ್ಯ ಬಂದರು ನಿರ್ಮಾಣ ಸರ್ವೆ ನಡೆಯುತ್ತಿದ್ದು, ಅಲ್ಲಿನ ಮೀನುಗಾರರಿಗೆ ರಕ್ಣಣೆ ನೀಡ ಬೇಕು, ನಮ್ಮ ಸ್ಥಳದಲ್ಲಿ ಯಾವುದೇ ವಾಣಿಜ್ಯ ಬಂದರು ಮಾಡುವಂತಿಲ್ಲಾ ಎಂದು ಮೀನುಗಾರರು ಹೋರಾಟ ಮಾಡುತ್ತಿದ್ದರು. ಈ ಸಂದರ್ಭದಲ್ಲಿ 144 ಸೆಕ್ಷನ್ ಜಾರಿಯಲ್ಲಿದ್ದರೂ ಅಲ್ಲಿ ಮಿನುಗಾರರು ಸರ್ವೆ ಮಾಡಲು ಅಡ್ಡಿ ಪಡಿಸಿದ್ದಕ್ಕೆ ಅವರನ್ನು ಬಂದಿಸಲಾಗಿದೆ. ಆಗ ಕೆಲವು ಮೀನುಗಾರರು ಅತ್ಮ ಹತ್ಯೆಗೆ ಪ್ರಯತ್ನಿಸಿದ್ದು ಅವರ ಜೀವ ರಕ್ಷಣೆ ಮಾಡಲಾಗಿದೆ.

    ಬಂಧಿತ ಮೀನುಗಾರರನ್ನು 4 ಗಂಟೆ ಒಳಗೆ ಬಿಡದಿದ್ದರೆ ಅಪೇಕ್ಷಾ ಎಂಬ ಬಾಲಕಿ ಅತ್ಮಹತ್ಯೆ ಮಾಡಿಕೊಳ್ಳುವದಾಗಿ ತಿಳಿಸಿದ್ದಾರೆ. ನಮಗೆ ನ್ಯಾಯ ಬೇಕು, ಮೀನುಗಾರ ಸಚಿವರಾದ ಮಂಕಾಳ ವೈದ್ಯರು ನಮಗೆ ನಾಯ್ಯ ಕೊಡಿಸಬೇಕು. ಅವರು ಸಚಿವರಾಗುವ ಮೊದಲು ನಮಗೆ ಹೆಳಿದ್ದರು ಯಾವುದೆ ವಾಣಿಜ್ಯ ಬಂದರು ಅಗಲು ಬಿಡುವುದಿಲ್ಲಾ, ನಾನು ನಿಮ್ಮ ಜೊತೆ ಇರುತ್ತೇನೆ ಎಂದವರು ಇವತ್ತು ಇಷ್ಟೊಂದು ಅನ್ಯಾಯ ವಾಗುತ್ತಿದ್ದರೂ ಸಚಿವರು ಸ್ಥಳಕ್ಕೆ ಬರಲಿಲ್ಲಾ ನನ್ನ ಅತ್ಮ ಹತ್ಯೆಗೆ ವಾಣಿಜ್ಯ ಬಂದರು , ಜಿಲ್ಲಾಧಿಕಾರಿಗಳು. ಸಚಿವರಾದ ಮಂಕಾಳ ಎಸ್ ವೈದ್ಯರವರೇ ಕಾರಣ ಎಂದು ಅತ್ಮ ಹತ್ಯೆ ಮಾಡಿ‌ಕೊಳ್ಳುತ್ತೇವೆ ಎಂದು ಅಪೇಕ್ಷಾರವರು ಹೇಳಿದ್ದಾರೆ.

  • ಶಿಕ್ಷಕ ಪಿ.ಆ‌ರ್. ನಾಯ್ಕರಿಗೆ ಶಿಶು ಸಂಗಮೇಶ ದತ್ತಿ ಪ್ರಶಸ್ತಿ

    ಶಿಕ್ಷಕ ಪಿ.ಆ‌ರ್. ನಾಯ್ಕರಿಗೆ ಶಿಶು ಸಂಗಮೇಶ ದತ್ತಿ ಪ್ರಶಸ್ತಿ

    ಹೊನ್ನಾವರ: ಶಿಶು ಸಾಹಿತ್ಯ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡಿದ ಶಿಶು ಸಂಗಮೇಶ ದತ್ತಿ ಪ್ರಶಸ್ತಿಯು ಶಿಕ್ಷಕ ಪಿ.ಆರ್.ನಾಯ್ಕರವರ ಮಕ್ಕಳ ಕೃತಿ ಪಾಟಿಚೀಲ ಕವನ ಸಂಕಲನಕ್ಕೆ ಸಂದಿವೆ.

    ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ 2023ನೇ ಸಾಲಿನ ದತ್ತಿ ಪ್ರಶಸ್ತಿಗಾಗಿ ಕೃತಿಗಳನ್ನು ಆಹ್ವಾನಿಸಲಾಗಿತ್ತು. ರಾಜ್ಯ, ದೇಶ ಮತ್ತು ವಿದೇಶಗಳಿಂದಲೂ ನಾಲ್ಕು ಸಾವಿರ ಕೃತಿಗಳು ಬಂದಿದ್ದು ಅವುಗಳಲ್ಲಿ 12 ಜನ ಪರಿಣಿತರ ಸಮಿತಿಯು ದತ್ತಿ ಪ್ರಶಸ್ತಿಯನ್ನು ಆಯ್ಕೆ ಮಾಡಿದೆ. ಕಳೆದ ಮೂರು ದಶಕಗಳ ಕಾಲ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಾ ಕ್ಷೇತ್ರ ಸಂಪನ್ಮೂಲ ವ್ಯಕ್ತಿಯಾಗಿ, ಸಮೂಹ ಸಂಪನ್ಮೂಲ ವ್ಯಕ್ತಿಯಾಗಿ, ಯುವಜನ ಸೇವಾ ಕ್ರೀಡಾಧಿಕಾರಿಯಾಗಿ, ಸಾಕ್ಷರತಾ ಸಮನ್ವಾಧಿಕಾರಿಯಾಗಿ ವಿಶಿಷ್ಟ ಸೇವೆ ಸಲ್ಲಿಸಿರುತ್ತಾರೆ. ಸಾಹಿತ್ಯದ ಬಗ್ಗೆ ವಿಶೇಷ ಆಸಕ್ತಿ ಹೊಂದಿದ ಪಿ.ಆ‌ರ್.ನಾಯ್ಕ ಅವರು ಭಟ್ಕಳ ತಾಲೂಕಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿರುತ್ತಾರೆ.

    ತಿಮ್ಮು, ಗುಲಗುಂಜಿ, ತಣ್ಣೀರು, ಡಾಕ್ಟರ್ ಮಾಮ, ನಮ್ಮವರು ನಮ್ಮ ಜನಾಂಗ, ಅಕ್ಷರ ಸಂಗಾತಿ, ಸಂಪನ್ನ, ಭಾವಾಭಿನಂದನೆ ಮುಂತಾದ 25 ಕ್ಕೂ ಹೆಚ್ಚು ದೇವಗಿರಿ, ಪಾಟಿ ಚೀಲ, ಪ್ರತಿಭಾ ಕೃತಿಗಳನ್ನು ಪ್ರಕಟಿಸಿದ್ದಾರೆ.

    ಕರೋನಾ ಸಂದರ್ಭದಲ್ಲಿ ಮಕ್ಕಳ ಕಲಿಕೆಗೆ ವಿಶೇಷ ಉತ್ತೇಜನ ನೀಡುರುವುದರಿಂದ ಮಕ್ಕಳ ಹಕ್ಕು ಆಯೋಗದಿಂದ ಪ್ರಶಂಸನ ಪತ್ರ ನೀಡಿ ಅಭಿನಂದಿಸಿರುತ್ತಾರೆ. ಕರ್ನಾಟಕ ಜಾನಪದ ವಿಶ್ವವಿದ್ಯಾಲಯವು ಕಾರವಾರ, ಜೋಯಿಡಾ, ಸಿದ್ದಾಪುರ ತಾಲೂಕಿನ ಗ್ರಾಮ ಚರಿತ್ರಾ ಕೋಶದ ಕ್ಷೇತ್ರ ತಜ್ಞರಾಗಿ ನೇಮಕ ಮಾಡಿ ಪುಸ್ತಕ ಪ್ರಕಟಿಸಿರುತ್ತಾರೆ. ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

    ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದರ್ಶಿಯಾಗಿ, ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ, ಕಾರ್ಯದರ್ಶಿಯಾಗಿ, ಸಾಹಿತಿ ಜಮೀರುಲ್ಲಾ ಸಾಹಿತ್ಯ ಪ್ರತಿಷ್ಠಾನದ ಅಧ್ಯಕ್ಷರಾಗಿ, ಹಳೆಯ ಪೈಕ ನಾಮಧಾರಿ ಜನಪದ ಸಾಹಿತ್ಯ ಪ್ರಕಟನಾ ಸಮಿತಿ ಸಂಪಾದಕರಾಗಿ, ಸಂಘಟಕರಾಗಿ ಸೇವೆ ಸಲ್ಲಿಸಿ ಅಪಾರ ಅನುಭವ ಪಡೆದಿದ್ದಾರೆ. ರಾಜ್ಯಮಟ್ಟದ ಗುರುಶ್ರೀ, ವಿಜ್ಞಾನ ಮಿತ್ರ ಪ್ರಶಸ್ತಿ, ಉತ್ತಮ ನಾಟಕ ನಿರ್ದೇಶಕ ಪ್ರಶಸ್ತಿ, ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಪಿ.ಆರ್.ನಾಯ್ಕರ ಮಕ್ಕಳ ಕವನ ಸಂಕಲನಕ್ಕೆ ದತ್ತಿ ಪ್ರಶಸ್ತಿ ಬಂದಿರುವುದು ಶಿಕ್ಷಕರ ಸಮುದಾಯಕ್ಕೆ ಸಂದ ಗೌರವವಾಗಿದೆ. ಅಪಾರ ಶಿಕ್ಷಕ ವೃಂದ, ಹಿತೈಷಿಗಳು ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.

  • ಫೇ. 20 ರಿಂದ ಹೊನ್ನಾವರ ಉತ್ಸವ

    ಫೇ. 20 ರಿಂದ ಹೊನ್ನಾವರ ಉತ್ಸವ

    ಹೊನ್ನಾವರ: ಫೆಬ್ರವರಿ ೨೦ ರಿಂದ ೨೩ರವರೆಗೆ ಪಟ್ಟಣದ ಸೇಂಟ್ ಅಂತೋನಿ ಮೈದಾನದಲ್ಲಿ ಸಿಂಚನ ಕಲೆ ಮತ್ತು ಗ್ರಾಮೀಣ ಅಭಿವೃದ್ದಿ ಟ್ರಸ್ಟ್ ಹಾಗೂ ಹೊನ್ನಾವರ ಉತ್ಸವ ಸಮಿತಿಯ ಆಶ್ರಯದಲ್ಲಿ ಹೊನ್ನಾವರ ಉತ್ಸವ – ೨೦೨೫ ನಡೆಯಲಿದೆ ಎಂದು ಉತ್ಸವ ಸಮಿತಿಯ ಅಧ್ಯಕ್ಷ ಕೃಷ್ಣಾನಂದ ಭಟ್ ತಿಳಿಸಿದರು.
    ಪಟ್ಟಣದ ಖಾಸಗಿ ಹೊಟೆಲನಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಕಳೆದ ಹಲವು ವರ್ಷದಿಂದ ಸಾಂಸ್ಕ್ರತಿಕ ಕಾರ್ಯಕ್ರಮದ ಜೊತೆ ಹಲವು ಕಲಾವಿದರನ್ನು ಪೊತ್ಸಾಹಿಸುತ್ತಾ ಬಂದಿರುವ ಸಂಘಟನೆಯು ಈ ಬಾರಿ ಹೊನ್ನಾವರದ ಸ್ಥಳಿಯ ಪ್ರತಿಭೆಗಳಿಗೆ ಪೊತ್ಸಾಹ ನೀಡುವ ಜೊತೆ ನಾಡಿನ ಪ್ರಸಿದ್ದ ಕಲಾವಿದರನ್ನು ಕರೆ ತಂದು ಸಾಂಸ್ಕೃತಿಕ ಹಬ್ಬ ಆಚರಿಸಲು ಸಜ್ಜಾಗಿದೆ. ಲಿಟಲ್ ಕರಾವಳಿ ಫ್ಯಾಶನ್ ಶೋ, ಮಿಸ್ ಕರಾವಳಿ ಸ್ಪರ್ಧೆ, ರಾಜ್ಯ
    ಮಟ್ಟದ ನೃತ್ಯ ಸ್ಪರ್ಧೆ, ಗಾಯನ ಹಾಗೂ ನೃತ್ಯ, ಕಾಮಿಡಿ ಶೋ ಮುಂತಾದವು ನಡೆಯಲಿದ್ದು ಸಿನಿಮಾ ಹಾಗೂ ಧಾರವಾಹಿ ನಟ- ನಟಿಯರು, ಸ್ಥಳೀಯ ಕಲಾವಿದರು ಭಾಗವಹಿಸುವರು ಎಂದು ತಿಳಿಸಿದರು.ವಿವಿಧ ಸಂಘ-ಸಂಸ್ಥೆಗಳ ಸಹಕಾರದ ಮೆರೆಗೆ ನಡೆಯುವ ಕಾರ್ಯಕ್ರಮಕ್ಕೆ ಸಚಿವ ಮಂಕಾಳ ವೈದ್ಯ, ಅವರ
    ಪುತ್ರಿ ಬೀನಾ ವೈದ್ಯ, ಮಾಜಿ ಶಾಸಕಿ ಶಾರದಾ ಶೆಟ್ಟಿ, ಮಾಸಪ್ಪ ನಾಯ್ಕ, ಕಾಂಗ್ರೇಸ್ ಮುಖಂಡ ರವಿ
    ಶೆಟ್ಟಿ ಕವಲಕ್ಕಿ, ಪ್ರೊ ರಾಜು ಮಾಳಗಿಮನೆ ಮುಂತಾದವರ ಸಹಕಾರದಲ್ಲಿ ಸಂಘಟಿಸಲಾಗಿದೆ ಎಂದು ತಿಳಿಸಿದರು.
    ರಿಯಾಲಿಟಿ ಶೊ ಖ್ಯಾತಿಯ ಶ್ರೀರಾಮ ಜಾದೂಗಾರ ಮಾತನಾಡಿ ಫೆಬ್ರವರಿ ೨೦ರಂದು ೬-೧೪ ವರ್ಷದ ಮಕ್ಕಳಿಗೆ ಲಿಟಲ್ ಕರಾವಳಿ, ೧೪ವರ್ಷ ಮೇಲ್ಪಟ್ಟವರಿಗೆ ಮಿಸ್ ಕರಾವಳಿ ಫೆಶನ್ ಶೋ ಆಯೋಜಿಸಲಾಗಿದೆ. ನಿರ್ಣಾಯಕರಾಗಿ ಬಿಗ್ ಬಾಸ್ ಖ್ಯಾತಿಯ ಹಂಸ, ನಟಿ ಕಾವ್ಯಾ ಗೌಡ, ಮಾಡೆಲಿಂಗ್ ಹರ್ಷಿತಾ ರಾಠೋಡ, ಧಾರಾವಾಹಿ ನಟಿ ಸ್ವಾತಿ ಪಾಲ್ಗೊಳ್ಳುವರು. ವಿಶೇಷ ಆಹ್ವಾನಿತರಾಗಿ ವಾಗ್ಮಿ ಚೈತ್ರಾ ಕುಂದಾಪುರ ಭಾಗವಹಿಸುವರು. ಮಂಗಳೂರಿನ ಸಮದ್
    ಗಡಿಯಾರ್, ದೀಪ್ತಿ ದಿಲ್ ಸೆ, ರಾಕೇಶ ದಿಲ್ ಸೆ, ಸಾದಿಕ್ ಬಿಂದಾಸ್ ಅವರಿಂದ ಮ್ಯೂಸಿಕಲ್ ನೈಟ್ ಕಾರ್ಯಕ್ರಮ ನಡೆಯಲಿದೆ ಎಂದರು.
    ನೃತ್ಯ ಕಾರ್ಯಕ್ರಮದ ಸಂಘಟಕ ನಾಗರಾಜ ಮಾತನಾಡಿ ಫೆಬ್ರವರಿ ೨೧ರಂದು ರಾಜ್ಯ ಮಟ್ಟದ ಆಯ್ದ ತಂಡ ಹಾಗೂ ಜಿಲ್ಲೆಯ ವಿವಿಧ ತಂಡಗಳ ನೃತ್ಯ ಸ್ಪರ್ಧೆ ನಡೆಯಲಿದ್ದು ನಿರ್ಣಾಯಕರಾಗಿ ಕೋರಿಯಾಗ್ರಾಫರ್ ಮುರುಗಾ ಮಾಸ್ಟರ್, ಡಿ.ಕೆ.ಡಿ. ವಿನ್ನರ್ ಬೃಂದಾ ಭಾಗವಹಿಸುವರು. ಸತೀಶ ಹೆಮ್ಮಾಡಿಯವರಿಂದ ಜಾದೂ ಪ್ರದರ್ಶನವಿದೆ ಎಂದು ತಿಳಿಸಿದರು.
    ಫೆಬ್ರವರಿ ೨೨ರಂದು ದ್ವಾಪರ ಹಾಡಿನ ಖ್ಯಾತಿಯ ಜಸ್ಕರನ ಸಿಂಗ್, ದಿವ್ಯಾ ರಾಮಚಂದ್ರ, ಅಶ್ವಿನ್ ಶರ್ಮಾ, ಸಂದೇಶ ನೀರ್ಮಾರ್ಗ ಹಾಗೂ ಶಿವಾನಿ ತಂಡದವರಿಂದ ಮ್ಯೂಸಿಕಲ್ ನೈಟ್ ಹಾಗೂ ಡಾನ್ಸ್ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
    ಕರುನಾಡ ವಿಜಯ ಸೇನೆಯ ಜಿಲ್ಲಾಧ್ಯಕ್ಷ ವಿನಾಯಕ ಆಚಾರಿ ಮಾತನಾಡಿ ಫೆಬ್ರವರಿ ೨೩ರಂದು ಸಮಾರೋಪ ಸಮಾರಂಭ ನಡೆಯಲಿದ್ದು ರಾತ್ರಿ ೧೦ ಗಂಟೆಗೆ ಶ್ರೀ ಹರ್ಷ, ಸುಪ್ರೀತ ಪಾಲ್ಗುಣ, ನಾದಿರಾ ಬಾನು, ವಾಸುಶ್ರೀ, ದಿಯಾ ಹೆಗಡೆ ತಂಡದವರಿಂದ ಗಾಯನ,
    ಮಿಮಿಕ್ರಿ ಕಿಂಗ್ ಗೋಪಿ, ಮಜಾಭಾರತದ ರಾಘವೇಂದ್ರ, ಸುಶ್ಮಿತಾ, ಹೇಮಾ ತಂಡದವರಿಂದ ಕಾಮಿಡಿ ಶೋ ನಡೆಯಲಿದೆ ಎಂದರು.
    ಉತ್ಸವ ಸಮಿತಿಯ ಗೌರವಾಧ್ಯಕ್ಷ ಮಂಜುನಾಥ ನಾಯ್ಕ ಮಾತನಾಡಿ ತಾಲೂಕಿನಲ್ಲಿ ಮನೊರಂಜನಾ ಕಾರ್ಯಕ್ರಮದ ಜೊತೆ ರಾಜ್ಯ ಮಟ್ಟದ ಕಲಾವಿದರನ್ನು ಆಹ್ವಾನಿಸುವುದರ ಮೂಲಕ ಸ್ಥಳೀಯ ಪ್ರತಿಭೆಗಳಿಗೆ ಉತ್ತೇಜನ ನೀಡಲಾಗುತ್ತಿದೆ ಎಂದರು.
    ಸಮಿತಿಯ ಗೌರವಾಧ್ಯಕ್ಷ ಶಿವಾನಂದ ಹೆಗಡೆ ಕಡತೋಕಾ
    ಮಾತನಾಡಿ ವಿವಿಧ ಸಂಘಟನೆಯ ಸಹಕಾರದ ಮೇರೆಗೆ ಸ್ಥಳಿಯ ಕಲೆ ಹಾಗು ಕಲಾವಿದರಿಗೆ ಪೊತ್ಸಾಹ ನೀಡುವ ನಿಟ್ಟಿನಲ್ಲಿ ಅದ್ದೂರಿಯಾಗಿ ಕಾರ್ಯಕ್ರಮ ಸಂಘಟಿಸಲಾಗಿದೆ ಎಂದರು.
    ಸಂಘಟನೆಯ ಗೌರವ ಸಲಹೆಗಾರರಾದ ಶಿವರಾಜ ಮೇಸ್ತ, ಉಮೇಶ ಮೇಸ್ತ, ಜಯ ಕರ್ನಾಟಕ ಸಂಘಟನೆಯ ಆರ್.ಕೆ.ಮೇಸ್ತ, ಮೀನುಗಾರ ಸಂಘದ ನಿರ್ದೆಶಕರಾದ ರವಿ ಮೊಗೇರ, ಸಂಘಟಕರಾದ ವಿನಾಯಕ ಶೆಟ್ಟಿ ಸಾಲ್ಕೋಡ, ಮೋಹನ ಅಚಾರ್ಯ, ಮಣಿಕಂಠ ಶೆಟ್ಟಿ, ಶ್ರೀನಿವಾಸ ನಾಯ್ಕ, ಮತ್ತಿತರರು ಇದ್ದರು.
    Show quoted text

  • ಹಿರಿಯ ಪತ್ರಕರ್ತ ಕೆಕ್ಕಾರ ನಾಗರಾಜ ಭಟ್ಟರಿಗೆ ಹವ್ಯಕ ಸಾಧಕ ರತ್ನ ಪ್ರಶಸ್ತಿ

    ಹಿರಿಯ ಪತ್ರಕರ್ತ ಕೆಕ್ಕಾರ ನಾಗರಾಜ ಭಟ್ಟರಿಗೆ ಹವ್ಯಕ ಸಾಧಕ ರತ್ನ ಪ್ರಶಸ್ತಿ

    ಸಿದ್ದಾಪುರ: ತಾಲೂಕಿನ ಹಿರಿಯ ಪತ್ರಕರ್ತ ಕೆಕ್ಕಾರ ನಾಗರಾಜ ಭಟ್ಟರಿಗೆ ಬೆಂಗಳೂರಿನಲ್ಲಿ ಡಿ.27 ರಿಂದ ಜರುಗುತ್ತಿರುವ ತೃತೀಯ ವಿಶ್ವ ಹವ್ಯಕ ಸಮ್ಮೇಳನದಲ್ಲಿ ಹವ್ಯಕ ಸಾಧಕ ರತ್ನ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತಿದೆ. ಸಿದ್ದಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ, ಉ.ಕ.ಜಿಲ್ಲಾ 14ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಂಚಾಲಕರಾಗಿ ಸೇವೆ ಸಲ್ಲಿಸಿರುವ ಭಟ್ಟರು ಪ್ರಸ್ತುತ ಭಾರತಸೇವಾದಳದ ಸಿದ್ದಾಪುರ ತಾಲೂಕು ಘಟಕದ ಅಧ್ಯಕ್ಷರಾಗಿ, ಉ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

    ನಾಡಿನ ಅನೇಕ ದಿನಪತ್ರಿಕೆಗಳಲ್ಲಿ, ಸಾಪ್ತಾಹಿಕಗಳಲ್ಲಿ ಇವರ ಸಾವಿರಾರು ಲೇಖನಗಳು ಪ್ರಕಟಗೊಂಡಿವೆ. ಸಂಯುಕ್ತ ಕರ್ನಾಟಕ, ವಿಶ್ವವಾಣಿ, ಜನಮಾಧ್ಯಮ, ಹೊಸದಿಗಂತ ದಿನಪತ್ರಿಕೆಗಳ ಸಿದ್ದಾಪುರ ತಾಲೂಕಾ ವರದಿಗಾರನಾಗಿ ಸೇವೆ ಸಲ್ಲಿಸಿರುವ ಇವರು ಲೋಕಧ್ವನಿ ಪತ್ರಿಕೆಯ ನಲಿವುಗರಿಯಲ್ಲಿ ಸಿದ್ದಾಪುರ ತಾಲೂಕಿನಲ್ಲಿ ನಡೆದ ಸ್ವಾತಂತ್ರ್ಯ ಹೋರಾಟ, ಸ್ಥಳ ವಿಶೇಷ, ವಿವಿಧ ಕ್ಷೇತ್ರಗಳ ಸಾಧಕರ ಕುರಿತು ನಿರಂತರವಾಗಿ ಸರಣಿ ಲೇಖನಗಳನ್ನು ಪ್ರಕಟಿಸುತ್ತಿದ್ದಾರೆ.

    ಶ್ರೀ ಅಖಿಲಹವ್ಯಕ ಮಹಾಸಭಾ ಬೆಂಗಳೂರು ಅವರಿಂದ ಪತ್ರಿಕೋದ್ಯಮ ಹಾಗೂ ಸಾಮಾಜಿಕ ಕ್ಷೇತ್ರ ದಲ್ಲಿನ ಅನುಪಮ ಸೇವೆಗಾಗಿ ವಿದ್ವತ್ ಸಂಮಾನ, ಉತ್ತರ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಜಿ.ಎಸ್.ಹೆಗಡೆ ಅಜ್ಜಿಬಳ ದತ್ತಿನಿಧಿ ಪ್ರಶಸ್ತಿ, ಲಯನ್ಸ್ ಸಂಸ್ಥೆಯಿಂದ ಬಹುಮುಖಿ ಸೇವೆಗಾಗಿ ಸನ್ಮಾನ, ಶ್ರೀಆಂಜನೇಯ ಕೃಪಾ ಯಕ್ಷವೃಂದ ಕೇಡಲಸರ ಇವರಿಂದ ಯಕ್ಷಗಾನ ಕಲಾವಿದರು ಹಾಗೂ ಯಕ್ಷಗಾನ ಪ್ರದರ್ಶನ ಕುರಿತ ವಿಮರ್ಶಾತ್ಮಕ ಬರವಣಿಗೆಗಾಗಿ ಯಕ್ಷರಾಜ ಪ್ರಶಸ್ತಿ, ಬೆಂಗಳೂರಿನ ಸಾಂಸ್ಕೃತಿಕ, ಸಾಮಾಜಿಕ ಸಂಘಟನೆ ಆಭಾರಿಯಿಂದ ಗೌರವ ಸಂಮಾನ, ಕನ್ನಡ ಸೇನೆ ಸಂಘಟನೆಯಿಂದ ಕದಂಬ ರತ್ನ ಪ್ರಶಸ್ತಿ, ಕರ್ನಾಟಕ ಕ್ಷತ್ರಿಯ ಮರಾಠ ಮಹಾ ಒಕ್ಕೂಟದಿಂದ ಕನ್ನಡ ಭೂಷಣ ಪ್ರಶಸ್ತಿ, ಉತ್ತರ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಕೆ.ಶ್ಯಾಮರಾವ್ ಪ್ರಶಸ್ತಿ, ರಂಗ ಸೌಗಂಧ ಸಂಘಟನೆಯಿಂದ ರಂಗಭೂಮಿ ಹಾಗೂ ರಂಗ ಪ್ರದರ್ಶನಗಳ ಕುರಿತ ವಿಮರ್ಶಾತ್ಮಕ ಲೇಖನಗಳಿಗಾಗಿ ರಂಗ ಗೌರವ ಪ್ರಶಸ್ತಿ, ತಾಲೂಕು ಆಡಳಿತ ಸಿದ್ದಾಪುರ, ತಾಲೂಕು ಪಂಚಾಯತ, ಪಟ್ಟಣ ಪಂಚಾಯಿತಿ ಹಾಗೂ ತಾಲೂಕಿನ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಸ್ವಾತಂತ್ರೋತ್ಸವ ದಿನಾಚರಣೆಯಂದು ತಾಲೂಕಿನ ಸಮಸ್ತ ಜನತೆಯ ಪರವಾಗಿ ಗೌರವ ಸಂಮಾನ, ವಿಶ್ವದರ್ಶನ ಸಂಘಟನೆಯಿಂದ ಹಂಪಿಯ ಕಮಲಾಪುರದಲ್ಲಿ ಏರ್ಪಡಿಸಿದ್ದ ನಾಲ್ಕನೇ ಭಾವೈಕ್ಯ ಸಮ್ಮೇಳನದಲ್ಲಿ ಮಾಧ್ಯಮ ಕ್ಷೇತ್ರದಲ್ಲಿನ ಸಾಧನೆಗಾಗಿ ವಿಶ್ವ ಕನ್ನಡ ಮಾಧ್ಯಮ ಭೂಷಣ ರಾಷ್ಟ್ರೀಯ ಪ್ರಶಸ್ತಿ, ಹಾವೇರಿಯ ಅಖಿಲ ಕರ್ನಾಟಕ ಸ್ವಾತಂತ್ರ್ಯಯೋಧರ ಉತ್ತರಾಧಿಕಾರಿಗಳ ಸಂಘ (ರಿ) ಇವರ ವತಿಯಿಂದ ಏರ್ಪಡಿಸಿದ್ದ ಸ್ವಾತಂತ್ರ್ಯ ಯೋಧರ ಉತ್ತರಾಧಿಕಾರಿಗಳ ದ್ವಿತೀಯ ಸಮ್ಮೇಳನ ಮತ್ತು ಸ್ವಾತಂತ್ರ್ಯ ಹೋರಾಟಗಾರರ ಸ್ಮರಣೋತ್ಸವ-2024 ಕಾರ್ಯಕ್ರಮದಲ್ಲಿ ವಿಧಾನಸಭೆಯ ಉಪಸಭಾಪತಿ ರುದ್ರಪ್ಪ ಲಮಾಣಿ ಹಾಗೂ ಸಂಘಟನೆಯ ಅಧ್ಯಕ್ಷ ಮೃತ್ಯುಂಜಯ ಕುಲಕರ್ಣಿ ಅವರಿಂದ ನಾಗರಾಜ ಭಟ್ಟರಿಗೆ ಗೌರವ ಸಂದಿದೆ.

    ಇವರು ಸಿದ್ದಾಪುರದಲ್ಲಿ ನಡೆದ ಅಪ್ರತಿಮ ಸ್ವಾತಂತ್ರ್ಯ ಸಂಗ್ರಾಮ ಕುರಿತ ದಕ್ಷಿಣದ ಬಾರ್ಡೋಲಿ ಸಿದ್ದಾಪುರದ ಗಂಡುಗಲಿಗಳು ಕೃತಿಯನ್ನು ಹೊರತಂದಿದ್ದು ಸದರಿ ಕೃತಿಯನ್ನು ಅವಲೋಕಿಸಿದ ದೇಶದ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರು ಕೃತಿಯ ಕುರಿತು ಮೆಚ್ಚುಗೆ ಪತ್ರ ಕಳಿಸಿದ್ದಾರೆ.

  • ಹವ್ಯಕ ಎನ್ನುವುದೇ ಒಂದು ಆತ್ಮೀಯತೆ : ಶಿವಾನಂದ ಹೆಗಡೆ ಕಡತೋಕಾ.

    ಹವ್ಯಕ ಎನ್ನುವುದೇ ಒಂದು ಆತ್ಮೀಯತೆ : ಶಿವಾನಂದ ಹೆಗಡೆ ಕಡತೋಕಾ.

    ಹೊನ್ನಾವರ : ಹವ್ಯಕ ಎಂಬುದೇ ಒಂದು ಆತ್ಮೀಯತೆ. ಹವ್ಯಕ ಎಂಬುದು ಸ್ವಾಭಿಮಾನ. ಹವ್ಯಕ ಎಂಬುದು ಒಂದು ಒಂದು ಶಕ್ತಿ. ನಾವು ಹವ್ಯಕರು ಎಂಬುದೇ ನಮ್ಮ ಹೆಮ್ಮೆ ಎಂದು ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಹಾಗೂ ಸಾಮಾಜಿಕ ಕಾರ್ಯಕರ್ತ ಶಿವಾನಂದ ಹೆಗಡೆ ಕಡತೋಕಾ ಹೇಳಿದರು. ಅವರು ಶ್ರೀ ಅಖಿಲ ಹವ್ಯಕ ಮಹಾಸಭಾದಿಂದ ತಾಲೂಕಿನ ಎಸ್.ಡಿ.ಎಂ ಕಾಲೇಜಿನಲ್ಲಿ ರವಿವಾರ ನಡೆದ ಪ್ರತಿಬಿಂಬ ಕಾರ್ಯಕ್ರಮದ ಆತಿಥ್ಯ ವಹಿಸಿ, ಸಾಧಕರನ್ನು ಸನ್ಮಾನಿಸಿ ಮಾತನಾಡಿದರು.

    ಹವ್ಯಕರಿಗೆ ಅವರದ್ದೇ ಆದ ಸಂಸ್ಕಾರವಿದೆ. ಸಮಾಜಕ್ಕೆ ಒಳಿತು ಮಾಡುವ ನಿಟ್ಟಿನಲ್ಲಿ ಅವರು ಸದಾ ಕಾರ್ಯ ಪ್ರವೃತ್ತರಾಗಿರುತ್ತಾರೆ. ದೇಶ ವಿದೇಶದಲ್ಲಿ ಇದ್ದರೂ ತಮ್ಮದೇ ಆದ ಸಂಸ್ಕಾರವನ್ನು ಉಳಿಸಿಕೊಂಡು ಬಂದಿರುವ ಪರಂಪರೆ ಹವ್ಯಕರದ್ದು. ಹವ್ಯಕರ ಭಾಷೆಗೆ ಅತ್ಯಂತ ಮಹತ್ವವಿದ್ದು ನಾವು ಯಾವುದೇ ಕಡೆಗಳಲ್ಲಿ ಇದ್ದರೂ ಹವ್ಯಕ ಭಾಷೆಯನ್ನು ಕೇಳಿದರೆ ನಮಗೆ ಸಂತಸವೆನಿಸುತ್ತದೆ. ಹವ್ಯಕ ಸಮಾಜ ಎಲ್ಲ ಸಮಾಜಕ್ಕೆ ಒಳಿತು ಮಾಡುವ ಕಾರ್ಯವನ್ನು ಮಾಡುತ್ತಿದ್ದರೂ ನಿರಂತರವಾಗಿ ಸಮಾಜದ ಮೇಲೆ ಆಕ್ರಮಣ ನಡೆದುದ್ದನ್ನು ನಾವು ಕಾಣಬಹುದು. ಹೀಗಾಗಿ ಹವ್ಯಕ ಸಂಘಟನೆಗಳನ್ನು ಬಲಗೊಳಿಸುವ ನಿಟ್ಟಿನಲ್ಲಿ ನಾವು ಪ್ರಯತ್ನಿಸಬೇಕು.

    ಹವ್ಯಕ ಸಮಾಜ ರಾಜಕೀಯವಾಗಿ ಇನ್ನು ಸಬಲವಾಗಬೇಕು. ನಮ್ಮ ಗಟ್ಟಿತನವನ್ನು ನಾವು ತೋರಿಸಬೇಕು ಎಂದರೆ ಹವ್ಯಕ ಸಮಾಜದ ಸಂಖ್ಯೆ ಹೆಚ್ಚಾಗಬೇಕು. ಇಂದಿನ ಯುವ ಪೀಳಿಗೆ ಈ ನಿಟ್ಟಿನಲ್ಲಿ ಚಿಂತನೆ ನಡೆಸಬೇಕು. ಹಿಂದೂ ಸಮಾಜ ಸಬಲವಾಗಬೇಕೆಂದರೆ ಹಿಂದುಗಳ ಸಂಖ್ಯೆ ಹೆಚ್ಚಾಗಬೇಕೆಂಬ ದನಿ ಕೇಳಿ ಬಂದಂತೆ, ಹವ್ಯಕ ಸಮಾಜದಲ್ಲಿ ಸಂಖ್ಯೆ ಹೆಚ್ಚಾಗಬೇಕು. ಆಗ ನಾವು ಇನ್ನು ಗಟ್ಟಿಗರಾಗುತ್ತೇವೆ. ಹವ್ಯಕ ಸಮಾಜವನ್ನು ಒಟ್ಟುಗೂಡಿಸಿ ಅಖಿಲ ಹವ್ಯಕ ಮಹಾಸಭಾ ಮಾಡುತ್ತಿರುವ ಕಾರ್ಯ ನಿಜವಾಗಿಯೂ ಶ್ಲಾಘನೀಯ. ಸಂಘಟನೆ ಜೊತೆಗೆ ನಾವು ಇದ್ದು ಸಂಘಟನೆಯನ್ನು ಬಲಗೊಡಿಸುವ ಕಾರ್ಯ ಮಾಡೋಣ ಎಂದರು.

    ಭಟ್ಕಳ ತಾಲೂಕ ಸಾಹಿತ್ಯ ಪರಿಷತ್ ಅಧ್ಯಕ್ಷ ಶಂಭು ಹೆಗಡೆ ಮಾತನಾಡಿ, ಹವ್ಯಕರು ಎಂದರೆ ಹತ್ತಾರು ಪ್ರತಿಭೆಗಳನ್ನು ಹೊಂದಿದವರು. ಆದರೆ ಅವರ ಪ್ರತಿಭೆಗಳನ್ನು ಅವರು ಗುರುತಿಸಿಕೊಳ್ಳುವಲ್ಲಿ ಹಿಂದಿದ್ದಾರೆ. ಅದೆಷ್ಟೋ ದೊಡ್ಡ ದೊಡ್ಡ ಸಾಧನೆಗಳನ್ನು ಮಾಡಿದವರು ಸಹ ತಮ್ಮನ್ನು ತಾವು ಎಲ್ಲಿಯೂ ತೋರ್ಪಡಿಸಿಕೊಳ್ಳದೆ, ತಮ್ಮ ಕಾರ್ಯವನ್ನು ಮಾಡಿದವರು. ನಮ್ಮ ತಂದೆಯವರು ಸಹ ಸುಮಾರು 125ಕ್ಕೂ ಅಧಿಕ ಪುಸ್ತಕವನ್ನು ಬರೆದಿದ್ದರೂ, ಅವುಗಳನ್ನು ಪರಿಚಯಿಸಿಕೊಳ್ಳುವ ಕಾರ್ಯ ಮಾಡಿಲ್ಲ ಎಂದ ಅವರು, ಹವ್ಯಕರು ತಮ್ಮನ್ನು ತಾವು ಗುರುತಿಸಿಕೊಂಡು ಹೆಮ್ಮೆಯಿಂದ ಸೇರುವಂಥ ಆಗಬೇಕು ಎಂದರು.

    ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರುಗಳಾದ ಶಿವಮೂರ್ತಿ ಭಟ್ ಅಳವಳ್ಳಿ (ಶಿಲ್ಪಕಲೆ) ತಿಮ್ಮಣ್ಣ ಜಿ. ಹೆಗಡೆ ಮಾಗೋಡು (ಕ್ರೀಡೆ) ಶಾಂತಾ ವಸಂತ್ ಭಟ್ ಕರ್ಕಿ.( ಗೋಪಾಲನೆ) ಶ್ರೀಧರ್ ಹೆಬ್ಬಾರ್ ಮಾರುಕೇರಿ (ಕೃಷಿ) ರಾಧಾಕೃಷ್ಣ ಭಟ್ ಭಟ್ಕಳ ( ಪತ್ರಿಕೋದ್ಯಮ) ಸುಬ್ರಾಯ ರಾಮಕೃಷ್ಣ ಭಟ್ ಬೆಕ್ಕುತ್ತೆ (ಅಡುಗೆ) ಎಸ್ ಎಂ ಪಂಡಿತ್ ವಕೀಲರು ಕಾರವಾರ (ಕಾನೂನು) ಶ್ರೀರಾಮಚಂದ್ರ ಭಟ್ ಅಚವೆ (ವೈದಿಕ) ಎಂ. ಎಂ. ಹೆಗಡೆ ಅಳವಳ್ಳಿ (ಪಾಕ ವಿದ್ಯೆ) ಇವರನ್ನು ಸನ್ಮಾನಿಸಲಾಯಿತು. ವಿವಿಧ ವಿಭಾಗದಲ್ಲಿ ನಡೆದ ೧೫ ಕ್ಕೂ ಹೆಚ್ಚು ಸ್ಪರ್ಧೆಗಳಲ್ಲಿ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ಪಡೆದವರಿಗೆ ಬಹುಮಾನ ನೀಡಲಾಯಿತು.

    ಶ್ರೀ ಅಖಿಲ‌ ಹವ್ಯಕ ಮಹಾಸಭಾದ ಉಪಾಧ್ಯಕ್ಷ ಶ್ರೀಧರ ಭಟ್ಟ ಕೆಕ್ಕಾರು ಮಾತನಾಡಿ, ಹವ್ಯಕರೆಲ್ಲರೂ ಒಗ್ಗಟ್ಟಾಗಿ ಮುನ್ನಡೆಯಬೇಕು. ತೃತೀಯ ಹವ್ಯಕ ಸಮ್ಮೇಳನ ಹವ್ಯಕರ ದೊಡ್ಡ ಹಬ್ಬವಾಗಿದ್ದು, ನಮ್ಮ ಒಗಟನ್ನು ತೋರ್ಪಡಿಸಲು ಒಂದು ವೇದಿಕೆ ಆಗಲಿದೆ. ಹತ್ತಾರು ವಿಶೇಷತೆಗಳನ್ನು ಹೊಂದಿರುವ ಹವ್ಯಕ ಸಮಾಜವು ಇತರ ಸಮಾಜದ ಜೊತೆಗೆ ಬದುಕುವ ಜೊತೆಗೆ ನಮ್ಮ ವಿಶೇಷತೆಯನ್ನು ತೋರ್ಪಡಿಸುವ ನಿಟ್ಟಿನಲ್ಲಿ ನಿರಂತರವಾಗಿ ಕಾರ್ಯಗಳನ್ನು ಮಾಡುತ್ತಿರೋಣ ಎಂದರು.

    ಶ್ರೀ ಅಖಿಲ‌ ಹವ್ಯಕ ಮಹಾಸಭಾದ ಪ್ರಾಂತ ಪ್ರತಿನಿಧಿ ಅರುಣ ಹೆಗಡೆ ಪ್ರಾಸ್ತಾವಿಕ ಮಾತನಾಡಿ, ಪತಿಬಿಂಬದ ಆಶಯವನ್ನು ವಿವರಿಸಿದರು. ಅಖಿಲ ಹವ್ಯಕ ಮಹಾಸಭಾ ಸ್ವಾತಂತ್ರ್ಯ ಪೂರ್ವದಲ್ಲಿ ಹುಟ್ಟಿಕೊಂಡ ಸಂಘಟನೆಯಾಗಿದ್ದು, ಇಂದು ಮೂವತ್ತು ಸಾವಿರಕ್ಕೂ ಅಧಿಕ ಸದಸ್ಯರನ್ನು ಹೊಂದಿದೆ. ಸದಸ್ಯತ್ವವನ್ನು ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದು ಅವರು ವಿವರಿಸಿದರು. ಡಿಸೆಂಬರ್ ೨೭ ರಿಂದ ೨೯ ರವರೆಗೆ ಮೂರುದಿನಗಳ ಕಾಲ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅಖಿಲ ಹವ್ಯಕ ಮಹಾಸಭೆಯಿಂದ “ತೃತೀಯ ವಿಶ್ವ ಹವ್ಯಕ ಸಮ್ಮೇಳನ” ವನ್ನು ಹಮ್ಮಿಕೊಳ್ಳಲಾಗಿದೆ. ವಿಶೇಷ ಕಾರ್ಯಕ್ರಮಗಳು, ಸಾಧಕ ಸಮ್ಮಾನ, ಹವ್ಯಕರ ಸಂಸ್ಕೃತಿ ಬಿಂಬಿಸುವ ಕಾರ್ಯಗಳು ಸಂಯೋಜನೆಗೊಳ್ಳುತ್ತಿದ್ದು ಸಿದ್ಧತೆ ಪ್ರಾರಂಭವಾಗಿದೆ. ಎಲ್ಲಾ ಹವ್ಯಕರೂ ಹಾಗೂ ಇತರ ಸಮಾಜದ ಹವ್ಯಕ ಅಭಿಮಾನಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಿಸುವಂತೆ ಅವರು ವಿನಂತಿಸಿದರು.

    ಮುಂಜಾನೆ ನಡೆದ ಉದ್ಗಾಟನಾ ಸಮಾರಂಭದಲ್ಲಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯ ನಾರಾಯಣ ಯಾಜಿ ಸಾಲೆಬೈಲ್ ದೀಪ ಬೆಳಗಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹವ್ಯಕರೆಂದರೆ ಪ್ರತಿಭೆಗಳ ಪುಂಜ. ಹವ್ಯಕರ ಪ್ರತಿಬಿಂಬ ಇದು. ಹವ್ಯಕತನದ ಬಿಂಬ ಪ್ರತಿಫಲಿಸಬೇಕು ಎಂದರು. ಅಖಿಲ ಹವ್ಯಕ ಮಹಾಸಭಾದ ಉಪಾಧ್ಯಕ್ಷ ಶ್ರೀಧರ ಭಟ್ಟ ಕೆಕ್ಕಾರು ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದರು. ಎಂ.ಪಿ ಇ. ಸೊಸೈಟಿಯ ಅಧ್ಯಕ್ಷ ಕೃಷ್ಣಮೂರ್ತಿ ಭಟ್ಟ ಶಿವಾನಿ ಹಾಗೂ ಎಸ್.ಡಿ.ಎಂ. ಕಾಲೇಜಿನ ಪ್ರಾಚಾರ್ಯ ಡಿ.ಎಲ್. ಹೆಬ್ಬಾರ್ ಉಪಸ್ಥಿತರಿದ್ದರು.

    ಪ್ರಾಂತ ಸಂಚಾಲಕ ಆರ್. ಜಿ. ಹೆಗಡೆ, ಪ್ರತಿಬಿಂಬದ ಸಂಚಾಲಕರುಗಳಾದ ಸತೀಶ ಭಟ್ಟ, ಎಂ.ವಿ ಹೆಗಡೆ ಸಹಕರಿಸಿದರು. ಈಶ್ವರ ಭಟ್ಟ ನಿರೂಪಿಸಿದರು. ಎಸ್.ವಿ ಹೆಗಡೆ ವಂದಿಸಿದರು. ಕೇಶವ ಕಿರಣ, ವಿನು ಮಧ್ಯಸ್ಥ ಸಹಕರಿಸಿದರು.

  • ಯಕ್ಷಗಾನವು ಸಂಸ್ಕಾರ ನೀಡುವ ಕಲೆ : ಕಾಗೇರಿ

    ಯಕ್ಷಗಾನವು ಸಂಸ್ಕಾರ ನೀಡುವ ಕಲೆ : ಕಾಗೇರಿ

    ಹೊನ್ನಾವರ : ನಮ್ಮ ಶ್ರೀಮಂತಿಕೆಯನ್ನು ಹಣದಿಂದ ಅಳೆಯಬಾರದು. ಸಾಂಸ್ಕೃತಿಕ ವಾತಾವರಣ ನಿರ್ಮಾಣ ಮಾಡುವುದರಿಂದ ವ್ಯಕ್ತಿತ್ವ ಶ್ರೀಮಂತಗೊಳ್ಳುವುದು. ಯಕ್ಷಗಾನದಂತಹ ಕಲೆಯು ಮನರಂಜನೆಯ ಜೊತೆಗೆ ನಮ್ಮ ಸಂಸ್ಕೃತಿಯನ್ನು ಪರಿಚಯಿಸಿ ನಮಗೆ ಸಂಸ್ಕಾರವನ್ನು ನೀಡುತ್ತದೆ’ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

    ತಾಲೂಕಿನ ಕಡತೋಕದಲ್ಲಿ ಯಕ್ಷರಂಗ ಹಾಗೂ ಯಕ್ಷಲೋಕ ಸಂಘಟನೆಯಲ್ಲಿ ಆಯೋಜಿಸಿದ ಕಡತೋಕ ಮಂಜುನಾಥ ಭಾಗವತ ಸಂಸ್ಮರಣೆಯಕಡತೋಕ ಕೃತಿ-ಸ್ಮೃತಿ ಯಕ್ಷರಂಗೋತ್ಸವ’ ವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು. ಯಕ್ಷಗಾನವು ಸಮ್ರದ್ಧವಾದ ಕಲೆ. ನಮ್ಮ ಸಾಮಾಜಿಕ ಜನಜೀವನದಲ್ಲಿ ಯಕ್ಷಗಾನ ಪ್ರಮುಖ ಪಾತ್ರ ವಹಿಸುತ್ತದೆ. ಯಕ್ಷಗಾನವನ್ನು ವಿದ್ಯಾರ್ಥಿಗಳಿಗೆ ಕಲಿಸುವ ಮೂಲಕ ಈ ಕಲೆಯನ್ನು ಬೆಳೆಸುವ ಕೆಲಸ ನಡೆಯುತ್ತಿದೆ. ಆರ್ಥಿಕ ಲಾಭದ ಲೆಕ್ಕಾಚಾರಕ್ಕಿಂತ ಬೌದ್ಧಿಕ ಲಾಭದ ಕುರಿತು ಆಲೋಚಿಸಬೇಕು. ಇದರಿಂದ ವ್ಯಕ್ತಿತ್ವ ವಿಕಸನವಾಗುವುದು ಎಂದರು.

    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ದಿನಕರ ಶೆಟ್ಟಿ ಮಾತನಾಡಿ, ಯಕ್ಷಗಾನವು ನಮ್ಮ ನೆಲದ ಗಂಡುಮೆಟ್ಟಿನ ಕಲೆ. ಗೋಪಾಲಕೃಷ್ಣ ಭಾಗವತ ಅವರು ಉತ್ತಮ ಸಂಘಟನೆಯ ಮೂಲಕ ಯಕ್ಷಗಾನದ ಬೆಳವಣಿಗೆಗೆ ಕೊಡುಗೆ ನೀಡುತ್ತಿದ್ದಾರೆ ಎಂದರು.

    ಸಾಮಾಜಿಕ ಕಾರ್ಯಕಕರ್ತ ಅನಂತಮೂರ್ತಿ ಹೆಗಡೆ ಮಾತನಾಡಿ, ಯಕ್ಷಗಾನವು ಸಂಘಟಕರ ಪರಿಶ್ರಮದಿಂದ ಉಳಿದು ಬೆಳೆಯುತ್ತಿದೆ. ಯಕ್ಷಗಾನದ ಉಳಿವಿಗೆ ಎಲ್ಲರೂ ಕಾಳಜಿ ವಹಿಸಬೇಕು ಎಂದರು.
    ಯಕ್ಷಗಾನ ಸಂಘಟಕ, ಪತ್ರಕರ್ತ ಗಣಪತಿ ಶಿರಳಗಿ, ಯಕ್ಷಗಾನ ಪ್ರಸಾದನ ಸಾಧಕ ಲಕ್ಷ್ಮಣ ನಾಯ್ಕ ಮಂಕಿ, ಹಿರಿಯ ಯಕ್ಷಗಾನ ಕಲಾವಿದ ಪ್ರಭಾಕರ ಹೆಗಡೆ ಚಿಟ್ಟಾಣಿ ಅವರನ್ನು ಸನ್ಮಾನಿಸಲಾಯಿತು. ಎಂ.ಕೆ.ಭಟ್ ಜೋಗಿಮನೆ, ಪ್ರತಿಭಾ ಭಾಗವತ, ನಿರೋಷಾ ಭಾಗವತ ಸನ್ಮಾನ ಪತ್ರ ವಾಚಿಸಿದರು.
    ಸಂಗೀತ ವಿದ್ಯಾಂಸ ಪ್ರೊ. ಎಸ್. ಶಂಭು ಭಟ್, ಯಕ್ಷಗಾನ ಸಂಶೋಧಕಿ ಡಾ. ವಿಜಯನಳಿನಿ ರಮೇಶ, ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಶಿವಾನಂದ ಹೆಗಡೆ ಕಡತೋಕ, ಇಡಗುಂಜಿ ಮೇಳದ ನಿರ್ದೇಶಕ ಕೆರೆಮನೆ ಶಿವಾನಂದ ಹೆಗಡೆ, ಗ್ರಾ.ಪಂ.ಅಧ್ಯಕ್ಷ ಗೋವಿಂದ ಗೌಡ, ಬಿಜೆಪಿ ಅಧ್ಯಕ್ಷ ಮಂಜುನಾಥ ನಾಯ್ಕ, ಪ್ರಾಂಶುಪಾಲೆ ದುರ್ಗಮ್ಮ ಪಿ.ಎಚ್. ಇತರರಿದ್ದರು.

    ವಕೀಲ ಸತೀಶ ಭಟ್ ಉಳಗೆರೆ ಸ್ವಾಗತಿಸಿದರು. ಸಂಘಟಕ ಗೋಪಾಲಕೃಷ್ಣ ಭಾಗವತ ವಂದಿಸಿದರು. ಈಶ್ವರ ಭಟ್ ನಿರ್ವಹಿಸಿದರು. ನಂತರ ‘ಕಾರ್ತವೀರ್ಯಾರ್ಜುನ’ ಯಕ್ಷಗಾನ ಪ್ರದರ್ಶನ ನಡೆಯಿತು.