Satwadhara News

Category: HONNAVAR

ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನಲ್ಲಿ ನಡೆದ ಕಾರ್ಯಕ್ರಮಗಳ ವರದಿ ಮತ್ತು ಇನ್ನಿತರ ಘಟನಾವಳಿಗಳ ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ.

  • ಬಹುಬಗೆಯ ಆರಾಧನೆಯೊಂದಿಗೆ ದೊಡ್ಡಬ್ಬ ಸಂಪನ್ನ.

    ಬಹುಬಗೆಯ ಆರಾಧನೆಯೊಂದಿಗೆ ದೊಡ್ಡಬ್ಬ ಸಂಪನ್ನ.

    ಕುಮಟಾ : ಬೆಳಕಿನ ಹಬ್ಬ ದೀಪಾವಳಿ ಹಲವು ವೈಶಿಷ್ಟ್ಯಗಳನ್ನು ಕಟ್ಟಿಕೊಡುತ್ತದೆ. ಮೂರು ದಿನಗಳ ಕಾಲ ಅತ್ಯಂತ ವಿಜ್ರಂಬಣೆಯಿಂದ ನಡೆದ ದೀಪಾವಳಿ ಹಬ್ಬವು ಸಂಪನ್ನವಾಗಿದ್ದು, ಬಲಿಂದ್ರನನ್ನು ಕಳುಹಿಸಿ ಕೊಡುವುದರ ಮೂಲಕ ಹಬ್ಬಕ್ಕೆ ಮಂಗಲ ಹಾಡಲಾಯಿತು.

    ಇನ್ನು ಭಾರತೀಯ ಸಂಸ್ಕೃತಿಯಲ್ಲಿ ಗೋವಿಗೆ ತುಂಬಾ ಮಹತ್ವವಿದ್ದು. ಹಬ್ಬದಲ್ಲಿ ಮರೆಯದೇ ಗೋವನ್ನು ಪೂಜಿಸುವ ಸಂಪ್ರದಾಯವಿದೆ. ಅಂತೆಯೇ ಹಬ್ಬದ ಪಾಡ್ಯದ ದಿನದಂದು ಬಹು ವಿಶೇಷವಾಗಿ ಗೋ ಪೂಜೆ ಸಂಪನ್ನಗೊಂಡಿತು. ಗೋವುಗಳಿಗೆ ವಿಶೇಷ ಅಲಂಕಾರ ಮಾಡಿ, ಪೂಜಿಸಿ, ದನಗಳನ್ನು ಬೆಚ್ಚಿಸುವ ಪಾರಂಪರಿಕ ಆಚರಣೆಗಳೂ ಬಹು ವಿಶೇಷವಾಗಿ ನಡೆದವು.

    ಸಾಂಪ್ರದಾಯಿಕ ಪೂಜೆ ಪುನಸ್ಕಾರಗಳ ಜೊತೆಯಲ್ಲಿ ಹಬ್ಬದ ಅಡುಗೆ ಮಾಡಿ ಸಂಭ್ರಮಿಸುವ ಜೊತೆಗೆ, ಯುವಕರು ಹಾಗೂ ಹುಡುಗರು ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸಿದರು.

    ಒಟ್ಟಿನಲ್ಲಿ ದೀಪಾವಳಿಯ ಹಬ್ಬವು ಬಹು ವಿಶೇಷವಾಗಿ ನಡೆದಿದ್ದು, ತಾಲೂಕಿನಲ್ಲಿ ಅತ್ಯಂತ ವಿಜ್ರಂಭಣೆಯಿಂದ ಮೂರು ದಿನಗಳ ಕಾಲ ಹಬ್ಬ ಆಚರಿಸಲ್ಪಟ್ಟಿತು. ಊರಿನ ಹಾಗೂ ಪರ ಊರಿನ ಅನೇಕರು ವಿವಿಧ ಸಂಪ್ರದಾಯಗಳು, ಪೂಜೆ ಪುನಸ್ಕಾರದಲ್ಲಿ ಭಾಗವಹಿಸಿ ಹಬ್ಬದೂಟವನ್ನು ಸವಿದು ಸಂತಸ ಪಟ್ಟರು.

  • ಉಮೇಶ ಭಟ್ಟ ಬಾಡ ಅವರಿಗೆ ‘ಸಾರ್ಥಕ ಸಾಧಕ’ ಪ್ರಶಸ್ತಿ

    ಉಮೇಶ ಭಟ್ಟ ಬಾಡ ಅವರಿಗೆ ‘ಸಾರ್ಥಕ ಸಾಧಕ’ ಪ್ರಶಸ್ತಿ

    ಕುಮಟಾ : ಯಕ್ಷಸಿಂಚನ ಟ್ರಸ್ಟ್ ಬೆಂಗಳೂರು ಇವರು ಪ್ರತಿವರುಷ ಯಕ್ಷಗಾನದಲ್ಲಿ ಸೇವೆಯನ್ನು ಮಾಡಿದ ಮಹನೀಯರಿಗೆ ನೀಡುವ ‘ಸಾರ್ಥಕ ಸಾಧಕ’ ಪ್ರಶಸ್ತಿಯನ್ನು ಈ ಬಾರಿ ಯಕ್ಷಗಾನದಲ್ಲಿ ೪೦ ವರುಷಗಳ ಅನನ್ಯ ಸೇವೆಗಾಗಿ ಉಮೇಶ ಭಟ್ಟ ಬಾಡ ಅವರಿಗೆ ನೀಡಿ ಗೌರವಿಸಲು ನಿರ್ಧರಿಸಿದೆ. ನವೆಂಬರ್ ೧೭ರಂದು ಬೆಂಗಳೂರಿನ ಉದಯಭಾನು ಕಲಾಸಂಘದಲ್ಲಿ ನಡೆಯವ ಯಕ್ಷಸಿಂಚನದ ೧೫ನೇ ವರುಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಗಣ್ಯರ ಸಮ್ಮುಖದಲ್ಲಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವದು ಎಂದು ಟ್ರಸ್ಟಿನ ಪ್ರಕಟಣೆಯಲ್ಲಿ ತಿಳಿಸಲಾಗಿದೆ

    ಉಮೇಶ್ ಭಟ್: ಕಳೆದ ನಾಲ್ಕು ದಶಕಗಳಿಂದ ಯಕ್ಷಗಾನದಲ್ಲಿ ಭಾಗವತರಾಗಿ ಯಕ್ಷ ಗುರುಗಳಾಗಿ ಕಾಣಿಸಿಕೊಂಡಿದ್ದಾರೆ. ಯಕ್ಷಗಾನದ ಮಹಾನ್ ತಾರೆಗಳಾದ ಚಿಟ್ಟಾಣಿ ರಾಮಚಂದ್ರ ಹೆಗಡೆ, ಜಲವಳ್ಳಿ ವೆಂಕಟೇಶ್ ರಾವ್, ಕುಮಟಾ ಗೋವಿಂದ ನಾಯ್ಕ್ ಮುಂತಾದ ಅತಿರಥ ಕಲಾವಿದರನ್ನು ರಂಗದಲ್ಲಿ ಕುಣಿಸಿದ ಖ್ಯಾತಿ ಇವರದ್ದಾಗಿದೆ. ಜೊತೆಗೆ ಬೇರೆ ಬೇರೆ ವೃತ್ತಿ ಮೇಳಗಳಲ್ಲಿ ತಿರುಗಾಟವನ್ನು ಮಾಡಿದ್ದಾರೆ. ಪರಂಪರೆಯ ಭಾಗವತರಾಗಿ ರಂಗದಲ್ಲಿ ಕಾಣಿಸಿಕೊಂಡಿದ್ದಾರೆ.

  • ಕೆಕ್ಕಾರಿನ ರಘೂತ್ತಮ ಮಠದಲ್ಲಿ ನವರಾತ್ರಿಯ ವಿಶೇಷ ‘ಮಾತೃ ನಮಸ್ಯಾ’

    ಕೆಕ್ಕಾರಿನ ರಘೂತ್ತಮ ಮಠದಲ್ಲಿ ನವರಾತ್ರಿಯ ವಿಶೇಷ ‘ಮಾತೃ ನಮಸ್ಯಾ’

    ಕುಮಟಾ : ಶ್ರೀರಾಮಚಂದ್ರಾಪುರ ಮಠದ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ ತಾಲೂಕಿನ ಕೆಕ್ಕಾರಿನ ರಘೂತ್ತಮ ಮಠದಲ್ಲಿ ‘ನವರಾತ್ರ ಮಹೋತ್ಸವ’, ‘ಮಾತೃ ನಮಸ್ಯಾ’ ಕಾರ್ಯಕ್ರಮ ಸಂಯೋಜನೆಗೊಂಡಿದೆ. ಈ ದಿವ್ಯ ಸಂದರ್ಭದಲ್ಲಿ ‘ಬನ್ನಿ ಅಮ್ಮನ ಮಡಿಲಿಗೆ.. ನೆಮ್ಮದಿಯ ಕಡಲಿಗೆ’ ಎಂದು ರಘೂತ್ತಮ ಮಠ ಕೆಕ್ಕಾರಿನ ಸಮಿತಿ ಸದಸ್ಯರು ಸಮಸ್ತ ಭಕ್ತವೃಂದವರನ್ನು ಆಮಂತ್ರಿಸಿದ್ದಾರೆ.

    ಅ. 1 ರಿಂದ 14 ರ ವರೆಗೆ ವಿಶೇಷ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ. ಶಿಷ್ಯರ ಬೇಡಿಕೆಯಂತೆ ಪರಮಪೂಜ್ಯ ಶ್ರೀ ಸಂಸ್ಥಾನದವರು ಅತ್ಯಂತ ಸಂತೋಷದಿಂದ ಈ ಸಲದ ನವರಾತ್ರಿ ಉತ್ಸವವನ್ನು ಕೆಕ್ಕಾರಿನಲ್ಲಿಯೇ ಆಚರಿಸಲು ಒಪ್ಪಿರುವುದು ಶಿಷ್ಯರಲ್ಲಿ ಹೊಸ ಹುಮ್ಮಸ್ಸನ್ನ ಮೂಡಿಸಿದೆ ಎಂದು ಸಮಿತಿ ಅಧ್ಯಕ್ಷ ಸುಬ್ರಾಯ ಭಟ್ಟ ಕೋಣಾರೆ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.

    ಈ ಬಗ್ಗೆ ವಿವರ ನೀಡಿದ ಅವರು, ಈ ವರ್ಷ ಬಗೆ ಬಗೆಯ ಉತ್ತಮೋತ್ತಮ ಕಾರ್ಯಕ್ರಮಗಳು ನವರಾತ್ರಿ ಉತ್ಸವದೊಂದಿಗೆ ಸೇರಿಕೊಂಡು ಮಹಾ ಉತ್ಸವವಾಗಿ ಇದು ರೂಪ ಪಡೆಯುತ್ತಿದೆ. ಅ.೧ ರಂದು ಮಂಗಳವಾರ ಪರಮಪೂಜ್ಯರ ಅದ್ದೂರಿ ಸ್ವಾಗತದೊಂದಿಗೆ ಉತ್ಸವ ಕಾರ್ಯಕ್ರಮಗಳು ಆರಂಭಗೊಳ್ಳಲಿದೆ. ಬುಧವಾರ ಬಹು ವಿಶೇಷವಾದ ‘ವಿದ್ಯಾಭಿಕ್ಷಾ’ ನಡೆಯಲಿದೆ. ಅದೇ ದಿನ ಸಂಜೆ 6 ಗಂಟೆಗೆ ಬಹು ನಿರೀಕ್ಷಿತ “ವರದಯೋಗಿ ಶ್ರೀಧರ” ನಾಟಕ 11ನೇ ಪ್ರದರ್ಶನಕ್ಕೆ ಅಣಿಯಾಗುತ್ತಿದೆ.

    ಗುರುವಾರದಿಂದ ಮಾತೃ ನಮಸ್ಯಾ ನವರಾತ್ರಿ ಉತ್ಸವ ಆರಂಭವಾಗಲಿದ್ದು, ನವರಾತ್ರಿಯ ಪರ್ವಕಾಲದಲ್ಲಿ ಶ್ರೀರಾಮಚಂದ್ರಾಪುರ ಮಠದ ಪ್ರಧಾನ ದೇವತೆಗಳಲ್ಲೊಂದಾದ ಶ್ರೀರಾಜರಾಜೇಶ್ವರಿಯ ಮಹಾಸಮಾರಾಧನೆ. ಜೊತೆಗೆ ಸ್ವರ್ಣಮಂಟಪದಲ್ಲಿ ಶ್ರೀಕರಾರ್ಚಿತ ದೇವತೆಗಳ ಪೂಜೆ, ಸ್ವರ್ಣಪಾದುಕಾ ಪೂಜೆ, ಶ್ರೀಸಂಸ್ಥಾನದವರಿಂದ ಲಲಿತೋಪಾಖ್ಯಾನ ಪ್ರವಚನ ನಡೆಯಲಿದೆ.

    ಮೂರು ಪ್ರಮುಖ ದೇವ ಸನ್ನಿಧಿಗಳಲ್ಲಿ ನವದುರ್ಗಿಯರುಗಳ ಪಾರಾಯಣಗಳು , ಉಡಿಸೇವೆಗಳು, ಕುಂಕುಮಾರ್ಚನೆ, ವಿವಿಧ ಬಗೆಯ ಸೇವೆಗಳು ನಡೆಯಲಿದೆ.
    ನವರಾತ್ರಿಯ ಒಂಬತ್ತು ದಿನಗಳೂ ಪ್ರತಿದಿನ ಶ್ರೀ ಸಂಸ್ಥಾನದವರಿಂದ ದುರ್ಗಾ ದೇವಿಯರ ಕುರಿತು ಲಲಿತೋಪಾಖ್ಯಾನ ಪ್ರವಚನ ನಡೆಯಲಿದೆ. ವಿಜಯ ದಶಮಿಯಂದು ‘ಶಿಕ್ಷಕ ಸಂಗಮ’ “ವಿದ್ಯಾ ಭಿಕ್ಷಾ”, ಆಶೀರ್ವಚನ ಹಾಗೂ ಸಾರ್ವಜನಿಕ ಮಂತ್ರಾಕ್ಷತೆ ಇರಲಿದೆ. ಮಾರನೇದಿನ ಸೋಮವಾರ ಮಾತೃ ಸಂಗಮ ಆ ದಿನವೂ ಕೂಡಾ “ವಿದ್ಯಾ ಭಿಕ್ಷಾ” ನಡೆಯಲಿದೆ. ಈ ಸಂದರ್ಭದಲ್ಲಿ ಚಂಡಿಕಾ ಯಾಗ, ಆಂಜನೇಯ ಸ್ವಾಮಿಗೆ ಕಣಜ ಸೇವೆ ಹಾಗೂ ಇನ್ನೂ ಅನೇಕ ಸೇವಾವಕಾಶಗಳನ್ನು ಕಲ್ಪಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

    ಈ ಎಲ್ಲ ಕಾರ್ಯಕ್ರಮಗಳಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀದೇವರ ಹಾಗೂ ಶ್ರೀ ಗುರುಗಳ ಆಶೀರ್ವಾದ ಪಡೆದು ಸೇವೆಯಲ್ಲಿ ಪಾಲ್ಗೊಳ್ಳಬೇಕೆಂದು ಸಮಿತಿಯ ಸದಸ್ಯರು ವಿನಂತಿಸಿದ್ದಾರೆ.

  • ಮಂಜುನಾಥ ಭಟ್ಟ ಕಟ್ಟೆಯವರಿಗೆ ನಾಟಕ ಅಕಾಡೆಮಿ ಪ್ರಶಸ್ತಿ.

    ಮಂಜುನಾಥ ಭಟ್ಟ ಕಟ್ಟೆಯವರಿಗೆ ನಾಟಕ ಅಕಾಡೆಮಿ ಪ್ರಶಸ್ತಿ.

    ಕುಮಟಾ : ಕರ್ನಾಟಕ ಸರ್ಕಾರ ಮತ್ತು ನಾಟಕ ಅಕಾಡೆಮಿಯಿಂದ ರಂಗಭೂಮಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕಲಾವಿದರಿಗೆ ನೀಡುವ ವಾಷಿಕ ರಾಜ್ಯ ಪ್ರಶಸ್ತಿಗೆ ಮಂಜುನಾಥ ತಿಮ್ಮಣ್ಣ ಭಟ್ಟ ಕಟ್ಟೆ ಇವರು ಆಯ್ಕೆಯಾಗಿ, ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಿರುತ್ತಾರೆ.

    ಮಂಜುನಾಥ ತಿಮ್ಮಣ್ಣ ಭಟ್ಟರು ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕಟ್ಟೆ ಎನ್ನುವ ಪುಟ್ಟ ಗ್ರಾಮದವರು. ಉತ್ತರಕನ್ನಡ ಜಿಲ್ಲೆಯು ಸಂಗೀತ, ಸಾಹಿತ್ಯ, ರಂಗಭೂಮಿ, ಯಕ್ಷಗಾನ, ತಾಳಮದ್ದಲೆ, ನೃತ್ಯ ಮುಂತಾದ ಸಾಂಸ್ಕçತಿಕ ಕಲಾಲೋಕಕ್ಕೆ ಹೆಸರುವಾಸಿಯಾದ ಜಿಲ್ಲೆಯಾಗಿದೆ. ಅಂತಹ ಕಲಾಲೋಕದ ವಾತಾವರಣದಲ್ಲಿ ಬೆಳೆದ ಮಂಜುನಾಥ ತಿಮ್ಮಣ್ಣ ಭಟ್ಟ ಕಟ್ಟೆಯವರು ತಮ್ಮ ಶಾಲಾ ದಿನಗಳಿಂದಲೇ ರಂಗಭೂಮಿ ಹಾಗೂ ಯಕ್ಷಗಾನದ ಪ್ರಭಾವಕ್ಕೆ ಒಳಗಾದವರು. 

    ೫ನೇ ತರಗತಿಯಲ್ಲಿದ್ದಾಗ ಹೊನ್ನಾವರ ತಾಲೂಕಿನ  ನವಿಲಗೋಣ ಗ್ರಾಮದ ಪ್ರಸಿದ್ಧ ನಾಟಕಕಾರ ರಾಮಚಂದ್ರ ಗಣೇಶ ಭಟ್ಟರಮಕ್ಕಿ ಇವರ ಮಾರ್ಗದರ್ಶನದಲ್ಲಿ  ಏಕಾಂಕ ನಾಟಕಗಳನ್ನು ಮಾಡುವ ಮೂಲಕ ರಂಗಭೂಮಿಗೆ ಪ್ರವೇಶ ಮಾಡುತ್ತಾರೆ. ಶಾಲಾ ಅವಧಿಯಲ್ಲಿಯೇ ಸುಮಾರು ೨೦ ಏಕಾಂಕ ನಾಟಕಗಳಲ್ಲಿ ಅಭಿನಯ ಮಾಡಿದ್ದಾರೆ. ಮುಂದೆ ೧೯೬೨ ರಲ್ಲಿ ಎಸ್.ಎಸ್.ಎಲ್.ಸಿ ಮುಗಿಸಿದ ನಂತರ  ತಾವೇ ಸ್ವತಃ ಯುವಜನ ಮೇಳ, ಸ್ಥಳೀಯ ಮಿತ್ರ ಮಂಡಳಿಯನ್ನು ಪ್ರಾರಂಭಿಸಿ ಸಂಘಟನೆ ಮಾಡಿ ನಾಟಕ ಕಟ್ಟಿ ಆಡಿದ್ದಾರೆ.

    ಇವರು ಮುಂದೆ ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದುಕೊಂಡೇ ನೂರಾರು ನಾಟಕಗಳಲ್ಲಿ ಅಭಿನಯ, ನಿರ್ದೇಶನದಂತಹ ನಾಟಕಕ್ಕೆ ಸಂಭಂಧಿಸಿದ ಕೆಲಸವನ್ನು ಕಳೆದ ೫೫ ವರ್ಷದಿಂದ ನಿರಂತರವಾಗಿ ಮಾಡಿದ್ದಾರೆ.  ತಮ್ಮ ೨೫ನೇ ವಯಸ್ಸಿನಲ್ಲಿ ವೃತ್ತಿರಂಗಭೂಮಿಯಲ್ಲಿ ಹವ್ಯಾಸಿ ನಟರಾಗಿ ಕೆಲಸ ಮಾಡಿದ್ದಾರೆ. ಇವರು ವೃತ್ತಿನಾಟಕ ರಂಗಭೂಮಿಯಲ್ಲಿ ಐತಿಹಾಸಿಕ ನಾಟಕಗಳು, ಪೌರಾಣ ಕ ನಾಟಕಗಳು, ಸಾಮಾಜಿಕ ನಾಟಕಗಳನ್ನು ಮಾಡಿದರು. 

    ಅವರು ಅಭಿನಯಿಸಿದ ನಾಟಕಗಳೆಂದರೆ ದಸರಾ, ಬಸ್ ಕಂಡಕ್ಟರ್, ರಕ್ತ ದೀಪ, ಜೀವನ ಯಾತ್ರೆ ಹಾಗೂ ಇವರೇ ಬರೆದು  ನಿರ್ದೇಶನ ಮಾಡಿದ ನಾಟಕಗಳಾದ  ‘ಜೀವನ ಯಾತ್ರೆ, ‘ಕರ್ನಾಟಕ ರಮಾರಮಣ, ತ್ಯಾಗಿ, ಅಣ್ಣ ತಂಗಿ’, ‘ನಚಿಕೇತ’, ‘ಧ್ರುವ’. 

    ಇವರ ಕಲಾಸೇವೆಯನ್ನು ಗುರುತಿಸಿ ಸಂದ ಪ್ರಶಸ್ತಿ  “ಕಲಾವಿದ” ಪ್ರಶಸ್ತಿ ಮತ್ತು ವಿವಿಧ ಸಂಘಗಳಿಂದ ಸನ್ಮಾನಿತಗೊಂಡಿದ್ದಾರೆ.

    ಇವರು ಹವ್ಯಾಸಿ ರಂಗಭೂಮಿಯಲ್ಲಿನ ಹೊಸ ಅಲೆಯ ಹಲವು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಇದರಲ್ಲಿ  ಕೆಲವು ನಾಟಕಗಳು  ೩೦ಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡಿವೆ.  ಲಚ್ಚಿ, ಬೇಲಿ ಹಣ್ಣು, ಕರುನಾಡ ರಮಾರಮಣ, ಹುತ್ತ, ಸಾವಾದ ಕೊಲೆ ಮುಂತಾದವುಗಳಲ್ಲಿ ಇವರು ಬಣ್ಣ ಹಚ್ಚಿದವರು.

    ವೃತ್ತಿಯಲ್ಲಿ ಶಾಲಾ ಶಿಕ್ಷಕರಾಗಿದ್ದರಿಂದ ಶಾಲೆಯಲ್ಲಿ ಮಕ್ಕಳಿಗೂ ಕೂಡ ನಾಟಕದ ರುಚಿಯನ್ನು ಹಚ್ಚಿ ಹಲವಾರು ಜನ ಶಿಷ್ಯರನ್ನ ರಂಗಭೂಮಿಗೆ ತಯಾರು ಮಾಡಿದ್ದಾರೆ. ಅವರಿಗೆ ರಂಗಭೂಮಿಯ ಮಜಲುಗಳನ್ನ ಪರಿಚಯ ಮಾಡಿಕೊಟ್ಟಿದ್ದಾರೆ. ಹಲವು ನಾಟಕಗಳನ್ನು ಬರೆದು ನಿರ್ದೇಶನವನ್ನು ಮಾಡಿದ್ದಾರೆ.  ಮಾರ್ಕಂಡೇಯ, ಅಹಲ್ಯೋದ್ಧಾರ, ಇತ್ಯಾದಿ.  ಅದರ ಜತೆಗೆ ಕುವೆಂಪು ಅವರು ರಚಿಸಿದ ಮಕ್ಕಳ ನಾಟಕ ‘ನನ್ನ ಗೋಪಾಲ’ ಎಂಬ ನಾಟಕವನ್ನೂ ನಿರ್ದೇಶಿಸಿದ್ದಾರೆ.

    ‘ಬೇಲಿ ಹಣ್ಣು’ ನಾಟಕ ಬೆಂಗಳೂರಿನ ಟೌನ್ ಹಾಲ್ ನಲ್ಲಿ ಪ್ರದರ್ಶನಗೊಂಡು ಬಹಳ ಪ್ರಸಿದ್ಧಿಯನ್ನು ಪಡೆಯಿತು. ಈ ನಾಟಕದಲ್ಲಿ ಇವರ ಅಭಿನಯಕ್ಕೆ ಜನಮನ್ನಣೆ ದೊರೆತು ಜನರ ಮೆಚ್ಚುಗೆಗೆ ಕಾರಣವಾಗಿದ್ದಾರೆ. “ಹುಲಿ ಶೇಖರ” ವಿರಚಿತ “ಗುದುಮುರ್ಗಿ” ನಾಟಕವನ್ನು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶನ ಮಾಡಿದ್ದಾರೆ. ಹಾಗೆಯೇ ಬಿಜಾಪುರ, ಇಳಕಲ್ಲ ,ಕುಂದಾಪುರದ ಗಂಗೊಳ್ಳಿಯಲ್ಲಿ ಸಾವಾದ ಕೊಲೆ ನಾಟಕ ಮತ್ತು ಹುತ್ತ ನಾಟಕಗಳನ್ನು ಪ್ರದರ್ಶನ ನೀಡಿ ಜನರ ಮೆಚ್ಚುಗೆ ಗಳಿಸಿದ್ದಾರೆ.

    ರಂಗ ನಟ, ನಿರ್ದೇಶಕರಲ್ಲದೇ ಸ್ತ್ರೀ ವೇಷದಲ್ಲಿ ಕೂಡ ತಾಯಿ ಪಾತ್ರವನ್ನು ಹಲವಾರು ನಾಟಕಗಳಲ್ಲಿ ನಿರ್ವಹಿಸಿದ್ದಾರೆ. ಕಥಾನಾಯಕ, ಖಳನಾಯಕ, ಹಾಸ್ಯಪಾತ್ರ, ಪೋಷಕ ಪಾತ್ರ ಹೀಗೆ ಹಲವಾರು ವಿಭಿನ್ನ ಪಾತ್ರಗಳಲ್ಲಿ ಮತ್ತು ವಿಭಾಗಗಳಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ನಾಟಕ ಬರೆಯುವುದು, ನಿರ್ದೇಶನ ಮಾಡುವುದು ಹಾಗೂ ರಂಗಭೂಮಿಗೆ ಬೇಕಾದಂತಹ ಪ್ರತಿಯೊಂದು ಕೆಲಸದಲ್ಲೂ ಇವರು ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇವರ ಅಣ್ಣನಾದ ಶ್ರೀ ದತ್ತಾತ್ರೇಯ ತಿಮ್ಮಣ್ಣ ಭಟ್ಟ ಕಟ್ಟೆ ಯಕ್ಷಗಾನ ಕಲಾವಿದರು. ಇವರು ತಮ್ಮನಿಗೆ ಗುರುಗಳಾಗಿ ಬಡಗುತಿಟ್ಟು ಯಕ್ಷಗಾನವನ್ನು ಕಲಿಸಿದರು. ಆನಂತರ ಇವರು ಬಡಗುತಿಟ್ಟಿನ ಕಲಾವಿದರಾಗಿ ಸುಮಾರು ಯಕ್ಷಗಾನ ಪ್ರಸಂಗಗಳಲ್ಲಿ ಅಭಿನಯಿಸಿದ ಅನುಭವವನ್ನು ಹೊಂದಿದ್ದಾರೆ. ಮುಂದೆ ತಮ್ಮ ಶಿಷ್ಯವೃಂದದಲ್ಲಿ ಸಿದ್ದಾಪುರ (ತಾ) ಶಿವಳಮನೆ ಗ್ರಾಮದ ರಾಮಚಂದ್ರ ಜೋಶಿಯವರು ಇವರ ಮೆಚ್ಚಿನ ಶಿಷ್ಯರಾದರು.

    ಇವರು ಅಭಿನಯಿಸಿದ ಕೆಲವು ಪಾತ್ರಗಳು.

    ೧) ಕಿರಾತಾರ್ಜುನನೀಯ ಪ್ರಸಂಗದಲ್ಲಿ ‘ಶಬರ’ನಾಗಿ ಅಭಿನಯ

    ೨) ಭೂಕೈಲಾಸದಲ್ಲಿ-‘ ಮಾಯಾ ಸುಧಾ’ನಾಗಿ ಅಭಿನಯ

    ೩) ಶರಸೇತು ಬಂಧನದಲ್ಲಿ ‘ಹನುಮಂತ ಮತ್ತು ಅರ್ಜುನ’ನಾಗಿ ಅಭಿನಯ

    ೪) ‘ಗಧಾಪರ್ವ’ದಲ್ಲಿ ‘ಭೀಮ’ನಾಗಿ ಅಭಿನಯ ಹೀಗೆ ಹಲವು ವೇದಿಕೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. 

    ಕಲಾ ಕುಟುಂಬದ ಇವರಿಗೆ ಪ್ರಸಕ್ತ ೮೦ ವರ್ಷ ಮುಗಿದಿದೆ ಹಾಗೂ ಅವರು ಬರೆದು ನಿರ್ದೇಶಸಿದ ನಾಟಕಗಳು ಇಂದಿಗೂ ಕೂಡ ರಂಗದ ಮೇಲೆ ರಾರಾಜಿಸುತ್ತಿವೆ. ಇತಂಹ ಕಲಾವಿದನನ್ನು ಕರ್ನಾಟಕ ಸರ್ಕಾರ ಮತ್ತು ನಾಟಕ ಅಕಾಡೆಮಿ ಗುರುತಿಸಿ ಪ್ರಶಸ್ತಿ ನೀಡಿರುವದು ಮಂಜುನಾಥ ತಿಮ್ಮಣ್ಣ ಭಟ್ಟರು ಕಲಾ ಕ್ಷೇತ್ರಕ್ಕೆ ಸೇವೆಗೆ ಸಂದ ಪ್ರಶಸ್ತಿ ಎಂದೇ ಬಣ್ಣಿಸಲಾಗುತ್ತಿದೆ.

  • ನಾವು ನಮ್ಮಿಷ್ಟದ ಮೂಲಕ ಜನರ ಮನ ಗೆದ್ದ ಸೂರಣ್ಣ ಇನ್ನಿಲ್ಲ.

    ನಾವು ನಮ್ಮಿಷ್ಟದ ಮೂಲಕ ಜನರ ಮನ ಗೆದ್ದ ಸೂರಣ್ಣ ಇನ್ನಿಲ್ಲ.

    ಕುಮಟಾ : ನಾವು ನಮ್ಮಿಷ್ಟ ಸಾಮಾಜಿಕ ಜಾಲತಾಣ ಬಳಗವನ್ನು ಕಟ್ಟಿ 5 ಸಾವಿರಕ್ಕೂ ಹೆಚ್ಚು ಜನರಿಗೆ ಎಡ್ಮಿನ್ ಆಗಿ ಅವರ ದಿನನಿತ್ಯದ ಬದುಕು ಸುಂದರವಾಗುವಂತೆ ಕಾರ್ಯಕ್ರಮವನ್ನು ಕೊಡುತ್ತಿದ್ದ ಕಡತೋಕಾದ ಸೂರ್ಯನಾರಾಯಣ ಹೆಗಡೆ, ಸೂರಣ್ಣ ಎಂದು ಎಲ್ಲೆಯಲ್ಲಿ ಪ್ರಸಿದ್ದರು. ಕಡತೋಕಾ ಹೆಗಡೆಮನೆ ಕುಟುಂಬದ ಇವರು ಪೇಸ್ ಬುಕ್ ಬಳಗದ ಸಮ್ಮೇಳನಗಳನ್ನು ನಡೆಸಿ ಸಮಾಜದಲ್ಲಿ ಸಂತೋಷ, ಸೌಹಾರ್ದ, ಗೆಳೆತನವನ್ನು ಬಿತ್ತಿ ಬೆಳೆದಿದ್ದ ಸೂರಣ್ಣ ಕಳೆದ ಹಲವು ದಿನಗಳಿಂದ ಅನಾರೋಗ್ಯದಿಂದಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹೊನ್ನಾವರ ತಾಲೂಕಿನ ಕಡತೋಕಾದ ಸೂರ್ಯನಾರಾಯಣ ಹೆಗಡೆ ಚಿಕಿತ್ಸೆಗೆ ಸ್ಪಂದಿಸದೆ ಸೋಮವಾರ ನಿಧನರಾಗಿದ್ದಾರೆ.

    ಅತ್ಯಂತ ಕ್ರೀಯಾಶೀಲ ವ್ಯಕ್ತಿತ್ವದಿಂದ ಕಾರ್ಯಕ್ರಮದ ಸಂಘಟನೆ, ಸoಯೋಜನೆಯಲ್ಲೂ ಸೈ ಎನಿಸಿಕೊಂಡಿದ್ದ ಸೂರ್ಯನಾರಾಯಣ ಹೆಗಡೆ ತಮ್ಮ ಆಪ್ತ ವಲಯದಲ್ಲಿ ಸೂರಣ್ಣ ಎಂದೇ ಖ್ಯಾತಿ ಪಡೆದಿದ್ದರು.

    ಅವರ ಅಗಲುವಿಕೆಗೆ ಅವರ ಸಹೋದರ ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಶಿವಾನಂದ ಹೆಗಡೆ ಕಡತೋಕಾ ಸೇರಿದಂತೆ ಗಣ್ಯರು ಹಾಗೂ ಕುಟುಂಬದವರು ಕಂಬನಿ ಮಿಡಿದಿದ್ದಾರೆ.

  • ಮಳೆಗೆ ಕುಸಿದ ಶಾಲಾ ಕಂಪೌಂಡ್ ಗೋಡೆ

    ಮಳೆಗೆ ಕುಸಿದ ಶಾಲಾ ಕಂಪೌಂಡ್ ಗೋಡೆ

    ಹೊನ್ನಾವರ : ತಾಲೂಕಿನಲ್ಲಿ ನಿನ್ನೆಯಿಂದ ಭಾರಿ ಮಳೆ ಬೀಳುತ್ತಿದ್ದು ಹೊನ್ನಾವರ ತಾಲ್ಲೂಕಿನ ಮಾಗೋಡು ಪಂಚಾಯತ ವ್ಯಾಪ್ತಿಯ ಬಾಳೆಮೆಟ್ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕಾಂಪೌಂಡ್ ಗೋಡೆ ಕುಸಿದು ಬಿದ್ದಿದೆ. ಶಾಲೆಗೆ ಆಗಿರುವ ಅನಾಹುತವನ್ನು ಸಂಬಂಧ ಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಇದೆ ರೀತಿ ಮಳೆ ಮುಂದುವರಿದರೆ ಶಾಲೆ ನಡೆಸಲು ತೊಂದರೆಯಾಗುತ್ತದೆ. ಈ ಬಗ್ಗೆ ಪಂಚಾಯತ್ ಅಧ್ಯಕ್ಷ ಶಿವರಾಮ ಹೆಗಡೆ ಸಂಬಂಧ ಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆಂದು ವರದಿಯಾಗಿದೆ.

  • ಕರ್ನಲ್ ಹಿಲ್ ಗುಡ್ಡ ಕುಸಿದು ಸಂಚಾರಕ್ಕೆ ಅಡ್ಡಿ.

    ಕರ್ನಲ್ ಹಿಲ್ ಗುಡ್ಡ ಕುಸಿದು ಸಂಚಾರಕ್ಕೆ ಅಡ್ಡಿ.

    ಹೊನ್ನಾವರ : ಸಮೀಪದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ, ಕರ್ನಲ್ ಹಿಲ್ ಗುಡ್ಡ ಕುಸಿದಿದ್ದು ರಸ್ತೆಯ ಮೇಲೆ ಮಣ್ಣು ಬಿದ್ದು ರಸ್ತೆ ಸಂಚಾರಕ್ಕೆ ಅಡಚಣೆಯಾಗಿದೆ. ಹೀಗಾಗಿ, ಒಂದು ಕಡೆಯಿಂದ ಮಾತ್ರ ಸಂಚಾರ ವ್ಯವಸ್ಥೆ ಮಾಡಲಾಗಿರುತ್ತದೆ. ಐ.ಆರ್‌.ಬಿ ಸಿಬ್ಬಂದಿಗಳು ಕೆಲಸ ನಿರ್ವಹಿಸುತ್ತಿದ್ದು ಇನ್ನೊಂದು ಗಂಟೆಯಲ್ಲಿ ರಸ್ತೆ ಸಂಚಾರ ಸುಗಮವಾಗಲಿದೆ.

  • ಶ್ರೀರಾಮ ಚರಿತೆ ನವ ತಾಳಮದ್ದಲೆಗೆ ಚಾಲನೆ.

    ಶ್ರೀರಾಮ ಚರಿತೆ ನವ ತಾಳಮದ್ದಲೆಗೆ ಚಾಲನೆ.

    ಕುಮಟಾ : ಒಂಬತ್ತು ದಿನ ಶ್ರೀರಾಮನ ಕುರಿತು ತಾಳಮದ್ದಲೆ ನಡೆಯುತ್ತದೆ ಎಂದರೆ ಇದೊಂದು  ಯಜ್ಞ ಎಂದು ಹಿರಿಯ ಯಕ್ಷಗಾನ ಕಲಾವಿದ ಕೃಷ್ಣ ಯಾಜಿ‌ ಬಳಕೂರು ಬಣ್ಣಿಸಿದರು. ಶನಿವಾರ ಅಗ್ರಹಾರದ ಗಣಪತಿ ದೇವಸ್ಥಾನದಲ್ಲಿ ಇಲ್ಲಿನ ನಾಟ್ಯಶ್ರೀ ಯಕ್ಷಕಲಾ ಪ್ರತಿಷ್ಠಾನದ ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ಒಂಬತ್ತು‌ ದಿನ ಶ್ರೀರಾಮಾಯಣ  ಕುರಿತಾದ ತಾಳಮದ್ದಳೆ ಪ್ರಸಂಗ ಸರಣಿ ಭಾವ ಭಾಷಾ ವಿಲಾಸಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

    ತಾಳಮದ್ದಲೆಯಲ್ಲಿ ಆಳವಾದ ಅರ್ಥಗಾರಿಕೆ ಇರುತ್ತದೆ. ತಾಳಮದ್ದಲೆ ಅರ್ಥದಾರಿ ಯಕ್ಷಗಾನ ವೇಷಧಾರಿಯಾದರೆ  ಹೆಚ್ಚು ಪ್ರಭಾವಿ ಆಗುತ್ತಾರೆ. ಈ ಸರಣಿ ಈ ವರ್ಷ ಒಂಬತ್ತು ದಿನ ಇರುವುದು, ಮುಂದಿನ ಬಾರಿ ಒಂದು‌ ಪಕ್ಷವಾಗಲಿ ಎಂದು ಹಾರೈಸಿದರು.

    ಸ್ಪಂದನೀಯ ಗುಣ ಇರುವ ಮೋಹನ ಹೆಗಡೆ‌ ಅವರು ಕರೋನಾ ಕಾಲಘಟ್ಟದಲ್ಲಿ ಕಷ್ಟದಲ್ಲಿದ್ದ ನೂರಾರು ಕಲಾವಿದರಿಗೆ ನೆರವಾಗಿದ್ದಾರೆ. ಅವರು ರಾಮನಾಗಿ ಒಂಬತ್ತು ದಿನ ಕಾಣಿಸಲಿದ್ದಾರೆ. ಶ್ರೀರಾಮನ ಚರಿತೆ ಕೇಳುವದೇ ಒಂದು ಪುಣ್ಯದ ಕಾರ್ಯ ಎಂದರು.

    ಇಡಗುಂಜಿ ದೇವಸ್ಥಾನದ ಧರ್ಮದರ್ಶಿಗಳಾದ ಡಾ. ಜಿ.ಜಿ.ಸಭಾಹಿತರು, ಬಹಳ ಯಕ್ಷಗಾನ ಕಲಾವಿದರ ಆಶ್ರಯ ತಾಣವಾದ ಅಗ್ರಹಾರದಲ್ಲಿ ತಾಳಮದ್ದಲೆ ಸರಣಿ ಆರಂಭವಾಗುತ್ತಿರುವದು ಸಂತಸವಾಗಿದೆ‌ ಎಂದರು. ಪ್ರತಿಷ್ಠಾನದ ಗೌರವ ಅಧ್ಯಕ್ಷ ಎಸ್.ಶಂಭು‌ ಭಟ್ಟ ಮಾತನಾಡಿ, ಇಂಥ ತಾಳಮದ್ದಲೆ ಸರಣಿಗೆ ಜನ ಬಂದು ಕೇಳಿ ಪುನೀತರಾಗಲಿ ಎಂದರು.

    ಪ್ರತಿಷ್ಠಾನದ ಅಧ್ಯಕ್ಷ ಎಸ್.ಜಿ.ಭಟ್ಟ ಕಬ್ಬಿನಗದ್ದೆ‌ ಮಾತನಾಡಿ, ನಾಟ್ಯಶ್ರೀ‌ ಸಂಸ್ಥೆಯು ಪದ್ಮಶ್ರೀ ‌ಪುರಸ್ಕೃತರಾಗಿದ್ದ ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರ ಷಷ್ಠ್ಯಬ್ಧಿ ಸಮಾರಂಭದಲ್ಲಿ ಆರಂಭವಾಗಿದೆ. ಇದು ಬೆಳ್ಳಿ ಹಬ್ಬದ ಸಂಭ್ರಮದಲ್ಲಿದೆ. ಇಂದು‌ ರಾಮಚಂದ್ರ ಪ್ರಭುವಿನ ಕಥಾನಕದ ನವ ತಾಳಮದ್ದಲೆ ಹಮ್ಮಿಕೊಂಡಿದೆ ಎಂದರು.

    ಈ ವೇಳೆ ನಾಟ್ಯ ವಿನಾಯಕ ದೇವಸ್ಥಾನದ ಪ್ರಧಾನ ವಿಶ್ವಸ್ಥ ವಿನಾಯಕ ಹೆಗಡೆ ಕಲಗದ್ದೆ, ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾಗಿದ್ದ ಜಿ.ಎಲ್.ಹೆಗಡೆ ಕುಮಟಾ, ಮಾತೋಶ್ರೀ ಪಾರ್ವತಿ ಭಾಸ್ಕರ ಹೆಗಡೆ ಹೆರವಟ್ಟ, ಅಶೋಕೆ ಮುಖ್ಯ ಸಮಿತಿಯ ಎಂ.ಜಿ.ಭಟ್ಟ ಸುವರ್ಣಗದ್ದೆ, ಹವ್ಯಕ ಮಹಾ ಮಂಡಳಿ ಕಾರ್ಯದರ್ಶಿ ಉದಯ ಶಂಕರ‌ಮಿತ್ತೂರು, ಪ್ರಮುಖರಾದ ಜನಾರ್ಧನ ಹಂದೆ, ಆರ್.ಜಿ.ಹೆಗಡೆ ಹೊಸಾಕುಳಿ,  ಚಂದ್ರಶೇಖರ ಉಪಾಧ್ಯ ಇತರರು ಇದ್ದರು.

    ಅಗ್ರಹಾರದಲ್ಲಿ ಮಿಥಿಲೆ!

    ಚರಿತ್ರೆ ಬರೆದ ಶ್ರೀರಾಮನ ಕಥೆ ಮಿಥಿಲೆಯಿಂದ ಸುರುಳಿ ಬಿಚ್ಚಿಕೊಳ್ಳತೊಡಗಿತು.  ಶ್ರೀರಾಮ ಪಾತ್ರದಲ್ಲಿ ಪ್ರಸಿದ್ಧ ಅರ್ಥದಾರಿ, ಹವ್ಯಕ ಮಹಾ‌ ಮಂಡಲದ ಅಧ್ಯಕ್ಷ, ಸೆಲ್ಕೋ ಇಂಡಿಯಾದ ಸಿಇಓ ಮೋಹನ ಭಾಸ್ಕರ ಹೆಗಡೆ (ಕರ್ಕಿ) ಹೆರವಟ್ಟ ಅವರು ಮಿಥಿಲೆಯ ಕತೆಯಲ್ಲಿ ರಾಮನಾಗಿ ಗಮನ ಸೆಳೆದರು. 

    ಹಿಮ್ಮೇಳದಲ್ಲಿ ಸರ್ವೇಶ್ವರ‌ ಮುರೂರು, ಬೋಳ್ಗೆರೆ ಗಜಾನನ ಭಂಡಾರಿ, ಅರ್ಥದಾರಿಗಳಾಗಿ‌ ಡಾ. ಜಿ‌.ಎಲ್.ಹೆಗಡೆ ಕುಮಟಾ, ಜಂಬೆ ಬಾಲಕೃಷ್ಣ ಭಟ್ಟ, ಜಿ.ವಿ.ಹೆಗಡೆ, ಕೆ.ವಿ.ಹೆಗಡೆ, ಅಂಬಾ ಪ್ರಸಾದ ಪಾತಾಳ, ವಕೀಲ ಗೋವಿಂದ ಭಟ್ಟ ಭಾಗವಹಿಸಿ ಸಿದ್ದಾಶ್ರಮದ ದೃಶ್ಯ ಕಟ್ಟಿಕೊಟ್ಟರು.

    ನಾಳೆ ಕರ್ಕಿಯಲ್ಲಿ!

    ಎರಡನೇ‌ ದಿನ ಜು.೭ರಂದು‌ ಕರ್ಕಿ ದೈವಜ್ಞ ಮಠದ ಶ್ರೀಗಳ ಸಾನ್ನಿಧ್ಯದಲ್ಲಿ ಸಂಜೆ ೫ಕ್ಕೆ ಅಯೋಧ್ಯಾ ಪ್ರಸಂಗ ನಡೆಯಲಿದೆ. ಹಿಮ್ಮೇಳದಲ್ಲಿ ಶಂಕರ ಬ್ರಹ್ಮೂರು, ದತ್ತಾರಾಮ ಭಟ್ಟ, ಮಯೂರ ಹರಿಕೇರಿ, ಗಜಾನನ ಸಾಂತೂರು, ಅರ್ಥಧಾರಿಗಳಾಗಿ ವಿ.ಉಮಾಕಾಂತ ಭಟ್ಟ‌ ಕೆರೇಕೈ, ವಿ.ಗಣಪತಿ ಸಂಕದಗುಂಡಿ, ಲಕ್ಷ್ಮೀಕಾಂತ‌ ಕೊಂಡದಕುಳಿ, ಮಂಗಳಾ ಟಿ.ಎಸ್. ಬೆಂಗಳೂರು, ಸುಜಾತ ದಂಟಕಲ್ ಭಾಗವಹಿಸುವರು.

    ಯಕ್ಷಗಾನದ ಪ್ರಸಿದ್ಧ ಅರ್ಥಧಾರಿ, ಸೆಲ್ಕೋ ಇಂಡಿಯಾದ ಸಿಇಓ ಮೋಹನ ಭಾಸ್ಕರ ಹೆಗಡೆ ಹೆರವಟ್ಟಾ ಇವರಿಗೆ ಬೆಳ್ಳಿ ಹಬ್ಬದ ಸಂಭ್ರಮದಲ್ಲಿ‌ರುವ ಹೊನ್ನಾವರದ ನಾಟ್ಯಶ್ರೀ ಯಕ್ಷಕಲಾ ಸಂಸ್ಥೆಯು ‘ಜೀವನ ಭಾಸ್ಕರ’ ಎಂಬ ಬಿರುದು ನೀಡಿ ಅಭಿನಂದಿಸಲು ತೀರ್ಮಾನಿಸಿದೆ.

    ಈ ವಿಷಯ ತಿಳಿಸಿದ ಸಂಸ್ಥೆಯ ಅಧ್ಯಕ್ಷ ಎಸ್.ಜಿ.ಭಟ್ಟ ಕಬ್ಬಿನಗದ್ದೆ, ಶ್ರೀ ರಾಮಚಂದ್ರಾಪುರ ಮಠಾಧೀಶರಾದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ  ಶ್ರೀಶ್ರೀರಾಘವೇಶ್ವರಭಾರತೀ‌ ಮಹಾ ಸ್ವಾಮೀಜಿಗಳು ಮೋಹನ ಹೆಗಡೆ ಅವರಿಗೆ ಬಿರುದು ನೀಡಿ ಗೌರವಿಸಲಿದ್ದಾರೆ. ನಾಟ್ಯ ಶ್ರೀ ಸಂಸ್ಥೆ‌ ೯ ದಿನಗಳ‌ ಕಾಲ ಭಟ್ಕಳ, ಹೊನ್ನಾವರ, ಕುಮಟಾ ತಾಲೂಕಿ‌ನ ವಿವಿಧಡೆ ಹಮ್ಮಿಕೊಂಡ  ಭಾವಾ ಭಾಷಾ ವಿಲಾಸ ಸರಣಿ ಶ್ರೀರಾಮನ ಕುರಿತಾದ ತಾಳಮದ್ದಲೆ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ವಿವರಿಸಿದ್ದಾರೆ.

    ಇದರಲ್ಲಿ ಎಲ್ಲಾ ಪ್ರಸಂಗದಲ್ಲಿಯೂ ಶ್ರೀರಾಮನ ಪಾತ್ರ ಮಾಡಲಿರುವ ಮೋಹನ ಭಾಸ್ಕರ ಹೆಗಡೆ ಅವರನ್ನು ಗೌರವಿಸುತ್ತಿರುವದು ನಮಗೂ ಸಂತಸದ ಸಂಗತಿ‌ ಎಂದೂ ಹಾಗೂ ಪ್ರತೀ ತಾಳಮದ್ದಲೆಯಲ್ಲೂ ಆಯಾ ಭಾಗದ ಸಾಧಕರನ್ನು‌‌ ಕೂಡ ಸಂಸ್ಥೆ ಅಭಿನಂದಿಸುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • ನಾಲ್ಕು ದಶಕಗಳ ಪಕ್ಷ ನಿಷ್ಠೆಗೆ ಸಿಗದ ಮಾನ್ಯತೆಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷತೆಗೆ ಜಗದೀಪ್ ತೆಂಗೇರಿ ರಾಜೀನಾಮೆ

    ನಾಲ್ಕು ದಶಕಗಳ ಪಕ್ಷ ನಿಷ್ಠೆಗೆ ಸಿಗದ ಮಾನ್ಯತೆಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷತೆಗೆ ಜಗದೀಪ್ ತೆಂಗೇರಿ ರಾಜೀನಾಮೆ

    ಹೊನ್ನಾವರ : ಸುಮಾರು ನಾಲ್ಕು ದಶಕಗಳ ನನ್ನ ಜೀವಮಾನದ ಅಮೂಲ್ಯ ಸಮಯವನ್ನು ಕಾಂಗ್ರೆಸ್ ಪಕ್ಷದ ಸಂಘಟನೆಗಾಗಿ ಮೀಸಲಿಟ್ಟು,ಪಕ್ಷಕ್ಕಾಗಿ ಸರ್ವಸ್ವವನ್ನು ತ್ಯಾಗ ಮಾಡಿದ್ದರೂ, ಇದು ನಮ್ಮ ನಾಯಕರಿಗೆ ಗೋಚರಿಸದೇ ಇರುವ ನೋವು ನನ್ನನ್ನು ಕಾಡುತ್ತಿದೆ ಎಂದು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ್ ಎನ್.ತೆಂಗೇರಿ ನೋವಿನಿಂದ ನುಡಿದರು. ಅವರು ಇಂದು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಸಮಿತಿ ಪಕ್ಷದ ಕಾರ್ಯಾಲಯದಲ್ಲಿ ಏರ್ಪಡಿಸಿದ ಮಾಜಿ ಪ್ರಧಾನಿ ದಿ.ರಾಜೀವ್ ಗಾಂಧಿಯವರ ೩೩ನೇ ಪುಣ್ಯತಿಥಿ ಕಾರ್ಯಕ್ರಮದ ನಂತರ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಅಧಿಕಾರವಿಲ್ಲದ ಸಂದರ್ಭದಲ್ಲಿ ಹಗಲು-ರಾತ್ರಿ ಪಕ್ಷ ಸಂಘಟಿಸಿದ್ದ ನಮ್ಮಂತವರಿಗೆ, ಪಕ್ಷ ಅಧಿಕಾರಕ್ಕೆ ಬಂದಾಗ ಮೂಲೆ ಗುಂಪು ಮಾಡುತ್ತಿರುವ ಉದ್ದೇಶ ತಿಳಿಯದಾಗಿದೆ. ಆದರೂ ಕಾಂಗ್ರೆಸ್ ಪಕ್ಷದ ಮೇಲೆ ನನಗೆ ಯಾವುದೇ ನೋವು, ಹತಾಶೆ ಇಲ್ಲ. ಕಾಂಗ್ರೆಸ್ ಪಕ್ಷ ಹೆಮ್ಮರವಾಗಿ ಬೆಳೆದು ದೇಶದ ಆಡಳಿತ ಸೂತ್ರ ಹಿಡಿದು,ದೇಶದ ಎಲ್ಲಾ ಜಾತಿ,ಧರ್ಮದ ಜನ ನೆಮ್ಮದಿಯಿಂದ ಬದುಕುವಂತಾಗಬೇಕು. ಬರಿಗೈಯಿಂದ ಪಕ್ಷಕ್ಕೆ ಬಂದು, ಬರಿಗೈಯಿಂದ ವಾಪಸ್ಸಾಗುತ್ತಿದ್ದೇನೆ. ೧೯೮೪ರಲ್ಲಿ ಭವ್ಯ ಬಾರತದ ಕನಸು ಕಂಡ ರಾಜೀವ್ ಗಾಂಧಿಯವರ ಆಕರ್ಷಣೆಯಿಂದ ಸಕ್ರಿಯ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ ಹೆಮ್ಮೆ ನನ್ನದು. ಅವರ ೩೩ನೇ ಪುಣ್ಯ ದಿನದ ಈ ಸಂದರ್ಭದಲ್ಲಿ ಹೊನ್ನಾವರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಅರ್ಥಪೂರ್ಣ ರಕ್ತದಾನ ಕಾರ್ಯಕ್ರಮ ನಡೆಸಿ ನನ್ನ ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷತೆಯ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ನೊಂದು ನುಡಿದರು.
    ೨೦೧೭,ಡಿ.೬ರಂದು ಹೊನ್ನಾವರ ಪಟ್ಟಣದಲ್ಲಿ ಎರಡು ಗುಂಪುಗಳ ನಡುವೆ ನಡೆದ ಗಲಭೆಯಲ್ಲಿ ಪರೇಶ ಮೇಸ್ತ ಎಂಬ ಯುವಕ ನಾಪತ್ತೆಯಾಗಿ ಡಿಸೆಂಬರ್ ೮ರಂದು ಅವನ ಶವ ಪಟ್ಟಣದ ಶೆಟ್ಟಿಕೆರೆಯಲ್ಲಿ ಗೋಚರಿಸುತ್ತಿದ್ದಂತೆ ಹೊನ್ನಾವರ ಪಟ್ಟಣ ಅಕ್ಷರಶಃ ಬೆಂಕಿ ಉಂಡೆಯಾಗಿ ಕೋಮು ಗಲಭೆಗೆ ಮುನ್ನುಡಿ ಬರೆಯಿತು. ಇದರಿಂದ ಹೊನ್ನಾವರ ಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶಿತರ ಕೆಂಗಣ್ಣಿಗೆ ಗುರಿಯಾದರು. ಇದು ನನ್ನ ಪಾಲಿಗೆ ಪಕ್ಷ ಸಂಘಟಿಸುವುದು ಸವಾಲಾಗಿ ಪರಿಣಮಿಸಿತ್ತು. ತಿಂಗಳುಗಳ ಕಾಲ ನಡೆದ ಈ ಗಲಭೆಯಿಂದ ಕಾಂಗ್ರೆಸ್ ಕಾರ್ಯಕರ್ತರು ಮನೆಯಿಂದ ಹೊರಬೀಳಲು ಹೆದುರುತ್ತಿರುವ ಸಂದರ್ಭದಲ್ಲಿ ಸ್ಥಳಿಯ ಪಕ್ಷದ ಕಾರ್ಯಕರ್ತರಿಗೆ ಧೈರ್ಯ ತುಂಬಿ, ಪರೇಶ ಮೇಸ್ತನ ಕುಟುಂಬಕ್ಕೆ ನ್ಯಾಯ ನೀಡುವಂತೆ ಬೇಡಿಕೆ ಇಟ್ಟು, ವಿಳಂಬ ನೀತಿ ಅನುಸರಿಸುತ್ತಿರುವ ಸಿ.ಬಿ.ಐ. ತನಿಖೆಯನ್ನು ತೀವ್ರಗೊಳಿಸುವಂತೆ ಒತ್ತಾಯಿಸಿ, ನನ್ನ ನೇತ್ರತ್ವದಲ್ಲಿ ಉಪವಾಸ ಸತ್ಯಾಗ್ರಹ, ಧರಣಿ ಸತ್ಯಾಗ್ರಹ ಮತ್ತು ಅನೇಕ ಪ್ರತಿಭಟನೆ, ಹೋರಾಟ ನಡೆಸುವ ಮೂಲಕ ಪಕ್ಷದ ಕಾರ್ಯಕರ್ತರಲ್ಲಿ ಮಾನಸಿಕ ಧೈರ್ಯ ತುಂಬಿ, ಪಕ್ಷ ಸಂಘಟಿಸಿದ್ದು ಮಾತ್ರ ನನ್ನ ಪಾಲಿಗೆ ಎಂದು ಮರೆಯಲಾಗದ ರೋಚಕ ಕ್ಷಣ. ಆ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರಾದ ನಾವುಗಳೆಲ್ಲಾ ಬದುಕಿದ್ದೆ ಪವಾಡ.
    ಪರೇಶ ಮೇಸ್ತ ಸಾವಿನ ಘಟನೆಯ ಸಂದರ್ಭದಲ್ಲಿ ಮತ್ತು ಅದರ ಮುಂದಿನ ದಿನಗಳಲ್ಲಿ ಜೀವದ ಹಂಗು ತೊರೆದು ಪಕ್ಷ ಸಂಘಟಿಸಿದ್ದರು ೨೦೨೩ರ ವಿಧಾನಸಭಾ ಚುನಾವಣೆಗೆ ಮತ್ತು ಹಾಲಿ ೨೦೨೪ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ನನ್ನನ್ನು ಕೇವಲ ಹೊನ್ನಾವರ ಪಟ್ಟಣದ ೧೫ ಮತಗಟ್ಟೆಗಳಿಗಷ್ಟೇ ಸೀಮಿತಗೊಳಿಸಿರುವ ಕಾರಣ ಇನ್ನೂ ತಿಳಿದು ಬಂದಿಲ್ಲಾ. ಆದರೆ ೨೦೨೩ರ ವಿಧಾನಸಭಾ ಚುನಾವಣೆಯಲ್ಲಿ ಹೊನ್ನಾವರ ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯ ೯ಪಂಚಾಯತಗಳಲ್ಲಿ ಕಾಂಗ್ರೆಸ್ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟರೇ,ಪರೇಶ ಮೇಸ್ತ ಸಾವಿನ ಘಟಣೆ ನಡೆದ ಹೊನ್ನಾವರ ಪಟ್ಟಣದಲ್ಲಿ ಕಾಂಗ್ರೆಸ್ ಎರಡನೇ ಸ್ಥಾನದಲ್ಲಿರುವುದು ಹೊನ್ನಾವರ ಕಾಂಗ್ರೆಸ್ ಕಾರ್ಯಕರ್ತರ ಒಗ್ಗಟ್ಟಿನ ಪರಿಶ್ರಮಕ್ಕೆ ಸಾಕ್ಷಿ ಎಂದರು.


    ಆದರೆ ಕಾಂಗ್ರೆಸ್ ಪಕ್ಷ ಕಳೆದ ವರ್ಷ ರಾಜ್ಯದಲ್ಲಿ ಅಧಿಕಾರಕ್ಕೆರಿದ ನಂತರ ನಮ್ಮ ಭಾಗದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಮಾಧಾನದಿಂದ ಇಲ್ಲಾ ಅನ್ನುವುದು ನನ್ನ ಅಭಿಪ್ರಾಯ. ನಾವು ಪಕ್ಷದ ಸಂಘಟನೆಯನ್ನು ಪ್ರೀತಿಸುವವರು. ಅಧಿಕಾರ ಸ್ಥಾನ ಮಾನವನ್ನು ಎಂದು ಕೇಳಿದವರಲ್ಲ. ಕಳೆದ ನಲವತ್ತು ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಧ್ವಜವನ್ನು ಎತ್ತಿ ಹಿಡಿದವರು ನಾವು. ನಾವು ಸತ್ತ ಮೇಲೆ ಧ್ವಜ ನಮ್ಮ ಎದೆಯ ಮೇಲೆ ಬೀಳಬೇಕೇ ಹೊರತು ನಾವೆಂದೂ ಪಕ್ಷವನ್ನು ಬಿಟ್ಟು ಬದುಕುವವರಲ್ಲ. ಆದರೆ ಅದುವೇ ನಮ್ಮ ದೌರ್ಬಲ್ಯ ಎಂದು ನಮ್ಮ ಪಕ್ಷದ ನಾಯಕರು ತಿಳಿಯಬಾರದು. ನಾನು ಯುವ ಕಾಂಗ್ರೆಸ್‌ನಲ್ಲಿ ಕಾರ್ಯನಿರ್ವಹಿಸುವಾಗ ಚಿಕ್ಕಪುಟ್ಟ ಸ್ಥಾನಮಾನ ಕೇಳಿದಾಗ ನೀನಿನ್ನೂ ಚಿಕ್ಕವ, ಮುಂದೆ ತುಂಬಾ ಭವಿಷ್ಯ ಇದೆ ಅನ್ನುತ್ತಿದ್ದರು. ಈಗ ಬಹಳಷ್ಟು ಕಾಲ ಕಳೆದಿದೆ. ನೋಡ ನೋಡುತ್ತಾ ನಮ್ಮ ವಯಸ್ಸು ಕಳೆದು ಮುದುಕರಾಗುತ್ತಿದ್ದೇವೆ.ನಾವು ಪಕ್ಷದಲ್ಲಿ ಸೂಕ್ತ ಸ್ಥಾನ ಮಾನ ಅಪೇಕ್ಷಿಸಿದರೇ, ಪ್ರಭಲ ಜಾತಿಗಳಿಗೆ ಪ್ರಥಮ ಆದ್ಯತೆ ನೀಡುವುದರಿಂದ ಪಕ್ಷಕ್ಕೆ ಅನುಕೂಲವಾಗಲಿದ್ದೂ, ನಿಮ್ಮದು ಚಿಕ್ಕ ಸಮಾಜ ಅನ್ನುವ ಉಡಾಫೆ ಮಾತು ಕೆಲ ನಾಯಕರ ಬಾಯಿಂದ ಕೇಳಿ ಬರುತ್ತಿದೆ. ಅಂದರೆ ಕೆಲಸಕ್ಕೆ ನಾವು, ಅಧಿಕಾರಕ್ಕೆ ಇನ್ನೊಬ್ಬರು ಅನ್ನುವ ತತ್ವ ಇದರಲ್ಲಿ ಅಡಗಿದಂತಿದೆ. ಪಕ್ಷಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡಿ, ಜೀವನದುದ್ದಕ್ಕೂ ತನು-ಮನ-ಧನ ಸಮರ್ಪಿಸಿ,ಬ್ಲಾಕ್ ಕಾಂಗ್ರೆಸ್ ಕಾರ್ಯಾಲಯವನ್ನು ಸ್ವಂತ ಖರ್ಚಿನಲ್ಲಿ ನಿರ್ವಹಿಸಿ, ಬಾಡಿಗೆ ಮನೆಯಲ್ಲಿ ಬದುಕುವ ನಮ್ಮಂತವರಿಗೂ ಜಾತಿ ಮಾನದಂಡ ಮಾಡುವುದು ಸರಿಯೇ ? ನಿಜಾ ಹೇಳಬೇಕೆಂದರೆ ಹೊನ್ನಾವರ ಪಟ್ಟಣದಲ್ಲಿ ನನ್ನ ಸಮಾಜದ ಬೆರೆಳೆಣಿಕೆಯಷ್ಟು ಮನೆಯಿದ್ದರೂ, ಯಾರಿಗೂ ನನ್ನ ಜಾತಿ ಯಾವುದೆಂದು ಇದುವರೆಗೂ ತಿಳಿದಿಲ್ಲ. ನಮ್ಮ ಮಾನವೀಯ ಅಂತಃಕರಣದ ನೆರಳಲ್ಲಿ ಹೊನ್ನಾವರವೆಂಬ ನಗರದಲ್ಲಿ ಪಕ್ಷಾತೀತವಾಗಿ ನನ್ನನ್ನು ವೈಯಕ್ತಿಕವಾಗಿ ಪ್ರೀತಿಸುತ್ತಾರೆ. ಇದು ನನ್ನ ಮೇಲೆ ಜನ ಇಟ್ಟಿರುವ ವಿಶ್ವಾಸ ಎಂದು ಭಾವಿಸಿದ್ದೇನೆ. ಅದಕ್ಕೆ ನಾನು ಹೊನ್ನಾವರ ಜನತೆಗೆ ಚಿರಋಣಿಯಾಗಿದ್ದೇನೆ.
    ಕಳೆದ ಕೆಲವು ತಿಂಗಳ ಹಿಂದೆ ಯಾವುದಾದರೂ ಸರಕಾರಿ ನಾಮನಿರ್ದೆಶನಕ್ಕೆ ಅರ್ಜಿ ಸಲ್ಲಿಸುವಂತೆ ಪಕ್ಷ ನನಗೆ ಸೂಚಿಸಿತ್ತು.ಅದರಂತೆ ನಾನು ಪಕ್ಷದ ಹಿರಿಯ ಮುಖಂಡರೊಬ್ಬರ ಹೆಸರನ್ನು ರಾಜ್ಯ ಸಮಿತಿಗೆ ಮತ್ತು ನನ್ನ ಹೆಸರನ್ನು ಜಿಲ್ಲಾ ಕೆ.ಡಿ.ಪಿ. ಸದಸ್ಯತ್ವಕ್ಕೆ ವಿನಂತಿಸಿದ್ದೆ. ಯಾವುದೇ ವಿಶೇಷ ಸೌಲತ್ತು ಇರದ ಈ ಸಮಿತಿಯಲ್ಲಿ ಸೇರಿದರೇ, ಪಕ್ಷದ ಶಾಸಕರಿಲ್ಲದ ನಮ್ಮ ಭಾಗದಲ್ಲಿ ಕಾರ್ಯಕರ್ತರ ಸಮಸ್ಯೆಯನ್ನು ಮೂರು ತಿಂಗಳಿಗೊಮ್ಮೆ ನಡೆಯುವ ತ್ರೆöÊಮಾಸಿಕ ಸಭೆಯಲ್ಲಿ ಅಧಿಕಾರಸ್ಥರ ಗಮನ ಸೆಳೆಯಬಹುದು ಅನ್ನುವುದು ನನ್ನ ಉದ್ದೇಶವಾಗಿತ್ತು. ಆದರೆ ಪಕ್ಷಕ್ಕಾಗಿ ೪೦ವರ್ಷ ದುಡಿದ ನನ್ನ ಹೆಸರನ್ನು ಕೈ ಬಿಟ್ಟು, ನಮ್ಮ ಭಾಗದಲ್ಲಿ ಪಕ್ಷದ ಪ್ರಾಥಮಿಕ ಸದಸ್ಯರಲ್ಲದವರನ್ನು ಕೆ.ಡಿ.ಪಿ. ಸದಸ್ಯರನ್ನಾಗಿ ಮಾಡಿರುವುದು ಸರಿಯೇ ? ನನಗಿಂತ ಹಿರಿಯರಾದವರನ್ನು ನೇಮಿಸಿದ್ದರೇ ನನ್ನ ಯಾವ ಅಭ್ಯಂತರವು ಇರಲಿಲ್ಲ. ಪಕ್ಷದ ಬ್ಲಾಕ್ ಅಧ್ಯಕ್ಷನಾದ ನನ್ನ ಹೆಸರಿದ್ದು, ಇನ್ನೊಬ್ಬರ ನೇಮಕ ಮಾಡುವಾಗ ಕನಿಷ್ಠ ಸೌಜನ್ಯಕ್ಕೂ ನನ್ನ ಬಳಿ ಯಾರೂ ಚರ್ಚಿಸಿಲ್ಲ. ನಾನು ಹಲವಾರು ಬಾರಿ ಪಕ್ಷದ ವೇದಿಕೆಯಲ್ಲಿ ಸ್ಪಷ್ಟಪಡಿಸಿದ್ದೆ.ನನಗೆ ಯಾವುದೇ ಹುದ್ದೆಯ ಮೇಲೆ ಆಸೆ ಇಲ್ಲ. ಆದರೆ ನನ್ನ ಜೊತೆ ಪಕ್ಷ ಕಟ್ಟುವಲ್ಲಿ ಕೈ ಜೋಡಿಸಿದ ಕಾರ್ಯಕರ್ತರಿಗೆ
    ಅನ್ಯಾಯವಾಗಬಾರದು ಅಂತಾ ಹಲವಾರು ಬಾರಿ ಹೇಳಿದ್ದೆ. ಆದರೂ ಪಕ್ಷದ ಬ್ಲಾಕ್ ಅಧ್ಯಕ್ಷನಾದ ನನ್ನ ಗಮನಕ್ಕೆ ತಾರದೇ, ಚರ್ಚಿಸದೆ ಎಲ್ಲವನ್ನೂ ನಡೆಸಲಾಗುತ್ತಿದೆ. ಇದರಿಂದ ತುಂಬಾ ನೋವು ಅನುಭವಿಸಿದ ನಾನು ಇತ್ತೀಚೆಗೆ ನಡೆದ ಪಕ್ಷದ ಸಭೆಯಲ್ಲಿ, ಪಕ್ಷದ ಹಿರಿಯ ನಾಯಕರ ಸಮ್ಮುಖದಲ್ಲಿ ಈ ಎಲ್ಲಾ ಬೆಳವಣಿಗೆಯ ಕುರಿತಂತೆ ಸವಿಸ್ತಾರವಾಗಿ ವಿವರಿಸಿ, ಮುಂದಿನ ದಿನದಲ್ಲಿ ಸರಕಾರದ ಯಾವುದೇ ಲಾಭದಾಯಕ ಹುದ್ದೆ,ಸ್ಥಾನ,ಮಾನ, ನಾಮನಿರ್ದೆಶನ ಸ್ವೀಕರಿಸುವುದಿಲ್ಲ ಎಂದು ಪ್ರಮಾಣ ಮಾಡಿದ್ದೇನೆ. ಪಕ್ಷದ ಸಂಘಟನಾತ್ಮಕ ಹುದ್ದೆಯಲ್ಲಿ ಜೀವದ ಕೊನೆ ಉಸಿರಿರುವವರೆಗೂ ಪದಾಧಿಕಾರಿಯಾಗಿ ದುಡಿಯುವ ವಾಗ್ದಾನ ಮಾಡಿದ್ದೇನೆ ಎಂದರು. ಪಕ್ಷ ಸಂಘಟಿಸಲು ಸಹಕಾರ ನೀಡಿದ ಜಿಲ್ಲೆಯ ಮತ್ತು ನನ್ನ ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯ ಪ್ರತಿಯೊಬ್ಬ ಕಾರ್ಯಕರ್ತರಿಗೆ, ಪಕ್ಷದ ಅಭಿಮಾನಿಗಳಿಗೆ ತುಂಬು ಹೃದಯದ ಧನ್ಯವಾದಗಳನ್ನು ಸಲ್ಲಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಉಪಾಧ್ಯಕ್ಷ ದಾಮೋದರ ನಾಯ್ಕ,ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಬಾಲಚಂದ್ರ ನಾಯ್ಕ, ಬ್ಲಾಕ್ ಹಿಂದುಳಿದ ವರ್ಗ ವಿಭಾಗದ ಅಧ್ಯಕ್ಷ ಕುಪ್ಪು ಗೌಡ,ಬ್ಲಾಕ್ ಪರಿಶಿಷ್ಠ ಜಾತಿ ವಿಭಾಗದ ಅಧ್ಯಕ್ಷ ಕೃಷ್ಣ ಹರಿಜನ,ಬ್ಲಾಕ್ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಜಕ್ರಿಯ್ಯಾ ಶೇಖ,ಇಂಟೆಕ್ ಜಿಲ್ಲಾ ಕಾರ್ಯದರ್ಶಿ ಕೇಶವ ಮೇಸ್ತ,ಸಾಮಾಜಿಕ ಜಾಲತಾಣದ ಬ್ಲಾಕ್ ಅಧ್ಯಕ್ಷ ರಾಮಕೃಷ್ಣ ನಾಯ್ಕ, ನಗರ ಘಟಕದ ಅಧ್ಯಕ್ಷ ಚಂದ್ರಶೇಖರ ಚಾರೋಡಿ, ಬ್ಲಾಕ ಕಾರ್ಯದರ್ಶಿ ಶ್ರೀಕಾಂತ ಮೆಸ್ತ,ಮೀನುಗಾರ ಮುಖಂಡ ಸುರೇಶ ರುಕ್ಕು ಮೇಸ್ತ, ವಸಿಂ ಸಾಬ್,ಬಿಸಿಸಿ ಕಾರ್ಯದರ್ಶಿ ಜ್ಯೋತಿ ಮಹಾಲೆ,ಮಾಜಿ ಪಟ್ಟಣ ಪಂಚಾಯತ್ ಸದಸ್ಯೆ ಸುಧಾ ನಾಯ್ಕ,ಸಂತೋಷ ಮೇಸ್ತ,ಗಣೇಶ ಆಚಾರಿ, ಮಂಜು ಮುಕ್ರಿ,ಲರ‍್ಸನ್ ರೊಡ್ರಗಿಸ್, ವಾಸುದೇವ ಪುಲ್ಕರ್ ಇನ್ನೂ ಹಲವಾರು ಮುಖಂಡರು ಉಪಸ್ಥಿತರಿದ್ದರು.

  • ಇಡೇರುತ್ತಿದೆ ಬಹುದಿನದ ಕನಸು : ಅಳ್ಳಂಕಿಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಶಂಕುಸ್ಥಾಪನೆ

    ಇಡೇರುತ್ತಿದೆ ಬಹುದಿನದ ಕನಸು : ಅಳ್ಳಂಕಿಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಶಂಕುಸ್ಥಾಪನೆ

    ಹೊನ್ನಾವರ: ತಾಲೂಕಿನ ಅಳ್ಳಂಕಿಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಇಂದು ಮುಂಜಾನೆ ಶಂಕುಸ್ಥಾಪನೆ ಮಾಡಲಾಯಿತು. ಇಲ್ಲಿಯ ಶ್ರೀ ಕ್ಷೇತ್ರ ಬಂಗಾರಮಕ್ಕಿ ಹಾಗೂ ಬೆಂಗಳೂರಿನ ಸುಧೀಕ್ಷಾ ಹೆಲ್ತ್ ಕೇರ್ ನ ಸಂಸ್ಥೆಯ ಸಹಯೋಗದಲ್ಲಿ ಉತ್ತರ ಕನ್ನಡ ಜಿಲ್ಲೆಯ ಮಹಾತ್ವಾಕಾಂಕ್ಷೆಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಕಟ್ಟಡಕ್ಕೆ ಶಂಕುಸ್ಥಾಪನೆ ಮಾಡಲಾಯಿತು.

    ಈ ಸಂದರ್ಭದಲ್ಲಿ ಮಾಧ್ಯಮದೊಂದಿಗೆ ಮಾನಾಡಿದ ಶ್ರೀ ಕ್ಷೇತ್ರ ಬಂಗಾರಮಕ್ಕಿಯ ಧರ್ಮಾಧಿಕಾರಿ ಶ್ರೀ ಮಾರುತಿ ಗುರೂಜಿ ಸದ್ಯ ಇಲ್ಲಿ 150 ಹಾಸಿಗೆ ಆಸ್ಪತ್ರೆ ಮಾಡಿ ಕ್ರಮೇಣ ಹಂತ ಹಂತವಾಗಿ ಜಾಸ್ತಿ ಹಾಸಿಗೆಯ ಆಸ್ಪತ್ರೆ ವ್ಯವಸ್ಥೆ ಮಾಡಲಾಗುವುದು ಎಂದರು.

    ಸುಧೀಕ್ಷಾ ಹೆಲ್ತ್ ಕೇರ್ ನ ಸಿಎಂಡಿ ಡಾ. ಸುಬ್ರಹ್ಮಣ್ಯಂ ಶರ್ಮಾ ಗೌರವರಂ‌ ಅವರು ಮಾತನಾಡಿ, ಸುವ್ಯವಸ್ಥೆಯ, ಉನ್ನತ ದರ್ಜೆಯ ಆಸ್ಪತ್ರೆಯನ್ನು ಈ ಜಿಲ್ಲೆಗೆ ಕೊಡುಗೆಯಾಗಿ ನೀಡಲಾಗುವುದು. ಜರ್ಮನಿಯಲ್ಲಿ ತಯಾರಾದ ವೈದ್ಯಕೀಯ ಪರಿಕರಗಳನ್ನು, ಯಂತ್ರಗಳನ್ನು ಈ ಆಸ್ಪತ್ರೆಯಲ್ಲಿ ಬಳಸಲಾಗುವುದು ಎಂದರು‌.

    ಆಸ್ಪತ್ರೆಗೆ ಬೇಕಾಗುವ ತಜ್ಞ ವೈದ್ಯರನ್ನು ಹೇಗೆ ತರುತ್ತೀರಿ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸುಬ್ರಹ್ನಣ್ಯಂ ಈಗಾಗಲೇ ಸಾವಿರಾರು ವೈದ್ಯರು ಇಲ್ಲಿ ಸೇವೆ ನೀಡಲು ತಮ್ಮನ್ನು ಸಂಪರ್ಕಿಸುತ್ತಿದ್ದಾರೆ. ಉತ್ತರ ಕನ್ನಡ ಜಿಲ್ಲೆಯವರೇ ಆಗಿದ್ದು ಹೊರ ಪ್ರಾಂತ್ಯದಲ್ಲಿದ್ದ ತಜ್ಞ ವೈದ್ಯರು ಈ ಜಿಲ್ಲೆಯಲ್ಲಿ ಸೇವೆ ಸಲ್ಲಿಸಲು ಉತ್ಸಾಹದಲ್ಲಿದ್ದಾರೆ ಎಂದರು.

    ಈ ಸಂದರ್ಭದಲ್ಲಿ ಹಲವು ಗಣ್ಯರು ಪಾಲ್ಗೊಂಡರು. ಇನ್ನು ಕೆಲವೇ ಕ್ಷಣದಲ್ಲಿ ಶ್ರೀ ಕ್ಷೇತ್ರ ಬಂಗಾರಮಕ್ಕಿಯ ಶ್ರೀ ವೀರಾಂಜನೇಯ ಸಭಾಭವನದಲ್ಲಿ ಶಂಕುಸ್ಥಾಪನೆ ನಿಮಿತ್ತ ಸಾರ್ವಜ‌ನಿಕ ಸಮಾರಂಭ ನಡೆಯಲಿದೆ.