Satwadhara News

Category: KUMTA

ಉತ್ತರಕನ್ನಡದ ಕುಮಟಾ ತಾಲೂಕಿನಲ್ಲಿ ನಡೆದ ಕಾರ್ಯಕ್ರಮಗಳ ವರದಿ ಮತ್ತು ಇನ್ನಿತರ ಘಟನಾವಳಿಗಳ ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ.

  • ಏ.೨೬ ರಂದು ಚುಟುಕು ಸಾಹಿತ್ಯ ಸಮ್ಮೇಳನ: ಸರ್ವಾಧ್ಯಕ್ಷರಾಗಿ ತಿಗಣೇಶ ಮಾಗೋಡ ಆಯ್ಕೆ.

    ಏ.೨೬ ರಂದು ಚುಟುಕು ಸಾಹಿತ್ಯ ಸಮ್ಮೇಳನ: ಸರ್ವಾಧ್ಯಕ್ಷರಾಗಿ ತಿಗಣೇಶ ಮಾಗೋಡ ಆಯ್ಕೆ.

    ಕುಮಟಾ : ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ಕುಮಟಾ ಘಟಕದ ಆಶ್ರಯದಲ್ಲಿ ಕುಮಟಾ ತಾಲೂಕಿನ ನಾಲ್ಕನೇ ವರ್ಷದ ಚುಟುಕು ಸಾಹಿತ್ಯ ಸಮ್ಮೇಳನವನ್ನು ಕುಮಟಾ ಪುರಭವನದಲ್ಲಿ ಏ.೨೬ ಶನಿವಾರದಂದು ಬೆಳಿಗ್ಗೆ 10 ಗಂಟೆಗೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಗಣಪತಿ ಅಡಿಗುಂಡಿ ಪ್ರಕಟಣೆಮೂಲಕ ತಿಳಿಸಿದ್ದಾರೆ.

    ಸಮ್ಮೇಳನದ ಸರ್ವಾಧ್ಯಕ್ಷತೆಗೆ ಹಿರಿಯ ಚುಟುಕು ಸಾಹಿತಿ ಕಲಾವಿದ ತಿಗಣೇಶ ಮಾಗೋಡ್ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಚುಟುಕು ಬ್ರಹ್ಮ ದಿನಕರ ದೇಸಾಯಿ ಅವರ ಜಿಲ್ಲೆಯಲ್ಲಿ ನಡೆಯುತ್ತಿರುವ ಈ ಸಮ್ಮೇಳನಕ್ಕೆ ಚುಟುಕು ಸಾಹಿತ್ಯಾಭಿಮಾನಿಗಳು ತಮ್ಮ ಸಹಕಾರ ನೀಡುವಂತೆ ಸಂಘಟಕರು ಕೋರಿದ್ದಾರೆ.

    ಜಿಲ್ಲಾಮಟ್ಟದ ಮುಕ್ತ ಚುಟುಕು ಬರಹ ಸ್ಪರ್ಧೆ

    ಸಮ್ಮೇಳನದ ಅಂಗವಾಗಿ ಜಿಲ್ಲಾಮಟ್ಟದ ಮುಕ್ತ ಚುಟುಕು ಸ್ಪರ್ಧೆಯನ್ನು ಆಯೋಜಿಸಲಾಗಿದ್ದು ಭಾಗವಹಿಸುವವರು,
    ಚುಟುಕುಗಳೊಂದಿಗೆ ತಮ್ಮ ಸ್ವ ವಿವರ ಮತ್ತು ಭಾವಚಿತ್ರವನ್ನು ಏ.೨೦ರ ಒಳಗೆ ಕಳುಹಿಸಲು ತಿಳಿಸಲಾಗಿದೆ. ನಂತರ ಬಂದ ಚುಟುಕುಗಳನ್ನು ಪರಿಗಣಿಸಲಾಗುವುದಿಲ್ಲ. ಇದು ಮುಕ್ತ ಸ್ಪರ್ಧೆಯಾಗಿದ್ದು, ವಯಸ್ಸಿನ ಯಾವುದೇ ನಿರ್ಬಂಧ ಇರುವುದಿಲ್ಲ. ಒಬ್ಬರು ನಾಲ್ಕು ಚಟುಕುಗಳನ್ನು ಮಾತ್ರ ಕಳುಹಿಸತಕ್ಕದ್ದು. ಇದರಲ್ಲಿ ಎರಡನ್ನು ಮಾತ್ರ ಆಯ್ಕೆ ಮಾಡಿಕೊಂಡು ಸಂಚಿಕೆಯಲ್ಲಿ ಪ್ರಕಟಿಸಲಾಗುವುದು. ಹಾಗೂ ಆಯ್ಕೆಯಾದ ಎರಡು ಚುಟುಕುಗಳನ್ನು ಸಮ್ಮೇಳನದಲ್ಲಿ ವಾಚಿಸಲು ಅವಕಾಶ ನೀಡಲಾಗುವುದು.

    ಕಳುಹಿಸುವ ಚುಟುಕಿನಲ್ಲಿ ಒಂದು ಆಶಯ ಹಾಗೂ ಸಮಾಜಕ್ಕೊಂದು ಸಂದೇಶವಿರಲಿ. ಆಯ್ಕೆಯಾದ ಉತ್ತಮ 3 ಚುಟುಕುಗಳಿಗೆ ಪ್ರಶಸ್ತಿ ಪತ್ರದೊಂದಿಗೆ ಬಹುಮಾನ ನೀಡಲಾಗುವುದು. ಹಾಗೂ ಭಾಗವಹಿಸಿದ ಎಲ್ಲಾ ಸ್ಪರ್ಧಾಳುಗಳಿಗೆ ಪ್ರಶಸ್ತಿ ಪತ್ರ ಮತ್ತು ಸ್ಮರಣ ಸಂಚಿಕೆಯನ್ನು ನೀಡಲಾಗುವುದು. ಎಂದು ಅವರು ತಿಳಿಸಿದ್ದು, ಚುಟುಕುಗಳನ್ನು ಉದಯ ಎಸ್. ಮಡಿವಾಳ ಪೋಸ್ಟ್ ಹೆಗಡೆ ತಾಲ್ಲೂಕು ಕುಮಟಾ 581330 ಇವರಿಗೆ ಅಂಚೆಯ ಮೂಲಕ ಅಥವಾ 9008810592 ಈ ನಂಬರ್ ಗೆ ವಾಟ್ಸಪ್ ಮಾಡಬಹುದಾಗಿದೆ.

  • ಕಲೆ ನಿಜಕ್ಕೂ ಜಗತ್ತಿಗೆ ಒಂದು ಕೊಡುಗೆ.

    ಕಲೆ ನಿಜಕ್ಕೂ ಜಗತ್ತಿಗೆ ಒಂದು ಕೊಡುಗೆ.

    ಕುಮಟಾ : ಕಲೆ ನಿಜಕ್ಕೂ ಜಗತ್ತಿಗೆ ಒಂದು ಕೊಡುಗೆ. ಮಾನವ ಅನುಭವದಲ್ಲಿ ನಾವು ಬಯಸುವುದು ಅದನ್ನೇ. ಕಲೆ ನಮ್ಮ ಜೀವನಕ್ಕೆ ಅರ್ಥವನ್ನು ನೀಡುತ್ತದೆ ಮತ್ತು ನಮ್ಮ ಜಗತ್ತನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದು ನಮ್ಮ ಸಂಸ್ಕೃತಿಯ ಅತ್ಯಗತ್ಯ ಭಾಗವಾಗಿದೆ ಎಂದು ರೋಟರಿ ಸರ್ವೀಸ್ ಸೊಸೈಟಿಯ ನಿಕಟಪೂರ್ವ ಅಧ್ಯಕ್ಷ ಅರುಣ ಉಭಯಕರ್ ಹೇಳಿದರು. ನಾದಶ್ರೀ ಕಲಾ ಕೇಂದ್ರದ ವಾರ್ಷಿಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

    ಕಲೆ ನಮ್ಮ ಭಾವನೆಗಳನ್ನು ಆಳವಾಗಿ ಅರ್ಥಮಾಡಿಕೊಳ್ಳಲು ಅನುವು ಮಾಡಿಕೊಡುತ್ತದೆ. ಇದು ನಮ್ಮ ಸ್ವಯಂ ಅರಿವನ್ನು ಹೆಚ್ಚಿಸುತ್ತದೆ ಮತ್ತು ಹೊಸ ಆಲೋಚನೆಗಳು ಮತ್ತು ಅನುಭವಗಳಿಗೆ ನಾವು ಮುಕ್ತರಾಗಲು ಅನುವು ಮಾಡಿಕೊಡುತ್ತದೆ. ಆದ್ದರಿಂದ ಕಲೆ ನಮ್ಮ ಮನಸ್ಸು ಮತ್ತು ಹೃದಯಗಳನ್ನು ತೆರೆಯುತ್ತಲೇ ಇರುತ್ತದೆ ಅಂತಹ ಕಲೆಯನ್ನು ನಿರಂತರವಾಗಿ ಕಲಿಸುವ ಕಾರ್ಯವನ್ನು ನಾದಶ್ರೀ ಸಂಸ್ಥೆ ಮಾಡುತ್ತಿದೆ ಎಂದರು.

    ರೋಟರಿ ಸರ್ವೀಸ್ ಸೊಸೈಟಿಯ ಅಧ್ಯಕ್ಷ ಸತೀಶ ನಾಯ್ಕ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಸ್ಥೆಯ ಕಾರ್ಯ ಚಟುವಟಿಕೆಗಳನ್ನು ವಿವರಿಸಿದರು. ಕಿರಣ ನಾಯಕ, ಜಿ.ಎಸ್ ಹೆಗಡೆ, ಎಂ.ಬಿ ಪೈ ವೇದಿಕೆಯಲ್ಲಿ ಇದ್ದರು. ವಿದುಷಿ ರೇಷ್ಮಾ ಭಟ್ಟ ಅತಿಥಿ ಕಲಾವಿದರಾಗಿ ಗಾಯನ ಪ್ರಸ್ತುತಪಡಿಸಿದರು. ನಾದಶ್ರೀ ವಿದ್ಯಾರ್ಥಿಗಳು ಗಾಯನ, ವಾದನ, ಭರತನಾಟ್ಯ ಕಾರ್ಯಕ್ರಮ ನೀಡಿದರು.

  • ಬಾಡದ ಕಾಂಚಿಕಾಂಬೆಗೆ ಉಘೇ ಎಂದ ಭಕ್ತಗಣ

    ಬಾಡದ ಕಾಂಚಿಕಾಂಬೆಗೆ ಉಘೇ ಎಂದ ಭಕ್ತಗಣ

    ಕುಮಟಾ : ಜಿಲ್ಲೆಯ ಪ್ರಸಿದ್ದ ಜಾತ್ರೆಗಳಲ್ಲಿ ಒಂದಾದ ಕುಮಟಾ ತಾಲೂಕಿನ ಶ್ರೀ ಕಾಂಚಿಕಾ ಪರಮೇಶ್ವರಿ ದೇವರ ಜಾತ್ರಾ ಮಹೋತ್ಸವವು ಅತ್ಯಂತ ಅದ್ದೂರಿಯಾಗಿ ನಡೆಯಿತು. ತಾಲೂಕಿನ ಸುತ್ತಮುತ್ತಲಿನಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸಿ ಶ್ರೀ ದೇವರ ದರ್ಶನ ಪಡೆದು, ರಥ ಎಳೆದು ಪುನೀತರಾದರು. ಸರ್ವಾಭರಣ ಭೂಷಿತೆಯಾದ ತಾಯಿ ಕಾಂಚಿಕಾ ಪರಮೇಶ್ವರಿ ಭಕ್ತರಿಂದ ಪೂಜೆ ಸ್ವೀಕರಿಸಿದಳು.

    ಪುರಾಣ ಪ್ರಸಿದ್ಧ ಬಾಡದ ಶ್ರೀ ಕಾಂಚಿಕಾ ಪರಮೇಶ್ವರಿ ದೇವಾಲಯವು ಅತ್ಯಂತ ಶಕ್ತಿಯುತ, ಭಕ್ತರ ಇಷ್ಟಾರ್ಥ ಸಿದ್ಧಿಕ್ಷೇತ್ರವಾಗಿದ್ದು, ಪ್ರತೀ ವರ್ಷವೂ ಇಲ್ಲಿ ಜಾತ್ರಾ ಮಹೋತ್ಸವ ನಡೆಯುತ್ತದೆ. ಅಂತೆಯೇ ಶನಿವಾರ ನಡೆದ ಶ್ರೀ ದೇವರ ಜಾತ್ರಾ ಮಹೋತ್ಸವವು ಅತ್ಯಂತ ವಿಜ್ರಂಭಣೆಯಿಯಿಂದ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆಯಿತು. ಸಾವಿರಾರು ಭಕ್ತರ ಒಗ್ಗೂಡುವಿಕೆಯಲ್ಲಿ ತಾಯಿ ಶ್ರೀ ಕಾಂಚಿಕಾoಬ ಪರಮೇಶ್ವರಿ ದೇವರ ಮಹಾ ರಥೋತ್ಸವು ಸಂಪನ್ನಗೊಂಡಿತು.

    ಇನ್ನು ಸಾರ್ವಜನಿಕರು ಇಷ್ಠಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿ ಶ್ರೀ ದೇವರಿಗೆ ಉಡಿ ಸೇವೆ, ಉರುಳು ಸೇವೆ, ತುಲಾಬಾರ ಸೇವೆ ಸೇರಿದಂತೆ ವಿವಿಧ ಸೇವೆಗಳನ್ನು ಸಲ್ಲಿಸುವುದು ಇಲ್ಲಿನ ವಿಶೇಷವಾಗಿದ್ದು, ಅದೇ ರೀತಿ ವಿವಿದೆಡೆಯಿಂದ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ ಭಕ್ತರು ತಾಯಿಗೆ ತಮ್ಮ ಕೈಲಾದ ಸೇವೆ ಸಲ್ಲಿಸಿದರು. ಸಾಯಂಕಾಲದ ವೇಳೆ ನಡೆದ ಮಹಾ ರಥದಲ್ಲಿ ಆಸಿನಳಾದ ಕಾಂಚಿಕಾಂಬೆಯನ್ನು ಕಣ್ತುಂಬಿಕೊಂಡು, ಸಂಪ್ರದಾಯದಂತೆ ರಥಕ್ಕೆ ಬಾಳೆ ಹಣ್ಣು ಎಸೆದು ಭಕ್ತರು ಕೃತಾರ್ಥರಾದರು.

  • ರಾಜ್ಯಕ್ಕೆ 6 ನೇ ರ್ಯಾಂಕ್ ಪಡೆದ ವಿಧಾತ್ರಿಯ ವಿದ್ಯಾರ್ಥಿನಿ : ನಿರಂತರ ಐದನೇ ವರ್ಷದ ಸಾಧನೆ.

    ರಾಜ್ಯಕ್ಕೆ 6 ನೇ ರ್ಯಾಂಕ್ ಪಡೆದ ವಿಧಾತ್ರಿಯ ವಿದ್ಯಾರ್ಥಿನಿ : ನಿರಂತರ ಐದನೇ ವರ್ಷದ ಸಾಧನೆ.

    ಕುಮಟಾ : ಮಂಗಳೂರಿನ ವಿಧಾತ್ರಿ ಅಕಾಡೆಮಿ, ಕುಮಟಾದ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ಜೊತೆಗೆ ಒಡಂಬಡಿಕೆ ಮಾಡಿಕೊಂಡು ನಡೆಸುತ್ತಿರುವ ತಾಲೂಕಿನ ವಿದ್ಯಾಗಿರಿಯ ಸರಸ್ವತಿ ಪಿ.ಯು ಕಾಲೇಜಿನ ವಿದ್ಯಾರ್ಥಿಗಳು ಈ ಹಿಂದಿನಂತೆ ರಾಜ್ಯಮಟ್ಟದ ಸಾಧನೆ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ೧ ರಲ್ಲಿ ಅತ್ಯುತ್ತಮ ಅಂಕಗಳಿಸಿ ರಾಜ್ಯ ಮಟ್ಟದಲ್ಲಿ 6 ನೇ ಸ್ಥಾನವನ್ನು ಪಡೆದು ಸಂಸ್ಥೆಯ ಹಿರಿಮೆಯನ್ನು ಹೆಚ್ಚಿಸಿದ್ದಾರೆ.

    ವಿಜ್ಞಾನ ವಿಭಾಗದಲ್ಲಿ ಅನನ್ಯಾ ಭಾಗ್ವತ್ ೬೦೦ ಕ್ಕೆ ೫೯೪ ಅಂಕ ಗಳಿಸಿ ರಾಜ್ಯ ಮಟ್ಟದಲ್ಲಿ 6ನೇ ಸ್ಥಾನ ಪಡೆದು ಕಾಲೇಜಿಗೆ ಪ್ರಥಮಳಾಗಿ ಹೊರಹೊಮ್ಮಿದ್ದಾಳೆ. ಜೊತೆಗೆ ಉತ್ತರ ಕನ್ನಡ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಸ್ವಾತಿ ಗಾಯತೊಂಡೆ ಹಾಗೂ ಸಾಗರ ನಾಯ್ಕ 588 ಅಂಕಗಳಿಸಿ ಕಾಲೇಜಿಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ. ಸುಮೇಧಾ ಭಟ್ 587 ಅಂಕಗಳಿಸಿ ಕಾಲೇಜಿಗೆ ತೃತೀಯ ಸ್ಥಾನ ಪಡೆದಿದ್ದಾರೆ. ಒಟ್ಟು 205 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಅದರಲ್ಲಿ115 ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿಯಲ್ಲಿ ಹಾಗೂ ಉಳಿದ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ.

    ವಿಧಾತ್ರಿ ಅಕಾಡೆಮಿಯ ಉಪನ್ಯಾಸಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಕಳೆದ ಐದು ವರ್ಷಗಳಿಂದಲೂ ರಾಜ್ಯಮಟ್ಟದಲ್ಲಿ ಸಾಧನೆ ಮಾಡುತ್ತಿರುವ ವಿದ್ಯಾರ್ಥಿಗಳು, ಈ ಸಾಲಿನಲ್ಲಿಯೂ ತಮ್ಮ ಸಾಧನೆ ಮುಂದುವರೆಸಿದ್ದಾರೆ.

    ಇನ್ನು ವಾಣಿಜ್ಯ ವಿಭಾಗದಲ್ಲಿ ಅನನ್ಯಾ ಭಟ್ಟ ೬೦೦ ಕ್ಕೆ 586 ಅಂಕಗಳಿಸಿ ಕಾಲೇಜಿಗೆ ಪ್ರಥಮಳಾಗಿ ಹೊರಹೊಮ್ಮಿದ್ದಾಳೆ. ಸಮರ್ಥ ಕಾಮತ್ 578 ಅಂಕಗಳಿಸಿ ಕಾಲೇಜಿಗೆ ದ್ವಿತೀಯ ಸ್ಥಾನ ಹಾಗೂ ಸಂಜವ ಡಿಸೋಜ 568 ಅಂಕಗಳಿಸಿ ಕಾಲೇಜಿಗೆ ತೃತೀಯ ಸ್ಥಾನ ಪಡೆದಿದ್ದಾರೆ. ಒಟ್ಟು 36 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅದರಲ್ಲಿ 20 ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿಯಲ್ಲಿ ಮತ್ತು ಉಳಿದ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ.

    ವಿದ್ಯಾರ್ಥಿಗಳ ಈ ಸಾಧನೆಗೆ ಕೊಂಕಣ ಎಜುಕೇಶನ್ ಟ್ರಸ್ಟ್ ನ ಪದಾಧಿಕಾರಿಗಳು, ವಿಧಾತ್ರಿ ಅಕಾಡೆಮಿಯ ಸಹಸಂಸ್ಥಾಪಕ ಗುರುರಾಜ ಶೆಟ್ಟಿ, ಪ್ರಾಂಶುಪಾಲ ಕಿರಣ ಭಟ್ಟ, ಉಪ ಪ್ರಾಂಶುಪಾಲೆ ಸುಜಾತಾ ಹೆಗಡೆ, ಉಪನ್ಯಾಸಕರು ಹಾಗೂ ಬೋಧಕೇತರ ಸಿಬ್ಬಂದಿಗಳು ಹರ್ಷವನ್ನು ವ್ಯಕ್ತಪಡಿಸಿದ್ದಾರೆ.

  • ನಾಳೆಯಿಂದ ಹೊಸಾಡದಲ್ಲಿ ಆಲೆಮನೆ ಹಬ್ಬ ಪ್ರಾರಂಭ : ಮಾ. ೧ ರಂದು ಗೋ ಸಂಧ್ಯಾ.

    ನಾಳೆಯಿಂದ ಹೊಸಾಡದಲ್ಲಿ ಆಲೆಮನೆ ಹಬ್ಬ ಪ್ರಾರಂಭ : ಮಾ. ೧ ರಂದು ಗೋ ಸಂಧ್ಯಾ.

    ಕುಮಟಾ : ತಾಲೂಕಿನ ಮೂರೂರಿನ ಹೊಸಾಡಿನಲ್ಲಿರುವ ಅಮೃತಧಾರಾ ಗೋ ಶಾಲೆಯ ಆವಾರದಲ್ಲಿ ಫೇ. ೨೭ ರಿಂದ ಮಾ.೨ ರವರೆಗೆ “ಆಲೆಮನೆ ಹಬ್ಬ” ಹಮ್ಮಿಕೊಳ್ಳಲಾಗಿದೆ ಎಂದು ಗೋಶಾಲೆ ಸಮಿತಿ ಹಾಗೂ ಗೋ ಸಂಧ್ಯಾ ಸಮಿತಿಯವರು ಜಂಟಿ ಪ್ರಕಟಣೆ ನೀಡಿದ್ದಾರೆ.

    ಈ ದಿನಗಳಲ್ಲಿ ಸಾಂಪ್ರದಾಯಿಕ ಆಲೆಮನೆ ಹಬ್ಬ, ಕಬ್ಬಿನ ಹಾಲಿನ ವಿವಿಧೋತ್ಪನ್ನ ಮಾರಾಟ ಗೋಗ್ರಾಸ ಸೇವೆ, ಗವ್ಯೋತ್ಪನ್ನ ಮಾರಾಟ, ಗೋ ಸಂತರ್ಪಣೆ, ವಾರ್ಷಿಕ ಸಭೆ, ಗೋಸಂಧ್ಯಾ, ಗೋಪಾಲ ಗೌರವ, ದೇಶೀ ಗೋತಳಿ ವೈಭವ, ಗೋ ಪೂಜೆ, ಗೋ ದಾನ, ಪ್ರತೀ ದಿನ ಕಾಮಧೇನು ಯಾಗ, ವಿಶೇಷವಾಗಿ ಈ ವರ್ಷ ಗೋಆರತಿ ಎಂಬ ವಿಶಿಷ್ಟ ಕಾರ್ಯಕ್ರಮ. ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.

    ಫೇ. ೨೭ ರಂದು ಗೋ ಪ್ರೇಮಿ ಮಾತೆಯರ ದಿನ, 28 ರಂದು ಗೋ ಪ್ರೇಮಿ ಮಕ್ಕಳ ದಿನ, ಮಾ. 01 ರಂದು ಭಾರತೀಯ ಗೋ ಬ್ಯಾಂಕ್ ವಾಟ್ಸಾಪ್ ಬಳಗದ ದಿನ, 02 ರಂದು ಗೋ ಪ್ರೇಮಿ ಹಿರಿಯ ನಾಗರಿಕರ ದಿನ ನಡೆಯಲಿದ್ದು ಡಾ. ಡಿ.ಪಿ. ರಮೇಶ್ ಅವರ ಉಪಸ್ಥಿತಿಯಲ್ಲಿ ‘ವಿಶೇಷ ಪಂಚಗವ್ಯ ಚಿಕಿತ್ಸಾ ಶಿಬಿರ’ಮತ್ತು ಅವರಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ.

    ಗೋ ಸಂಧ್ಯಾ ಕಾರ್ಯಕ್ರಮ

    ಮಾ.೧ ರ ಶನಿವಾರ “ಗೋ ಸಂಧ್ಯಾ” ಕಾರ್ಯಕ್ರಮ ಆಯೋಜಿಸಲಾಗಿದೆ. ಕುಮಟಾ- ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ ದಿನಕರ ಕೆ. ಶೆಟ್ಟಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಮ್. ನಾರಾಯಣ, ಹೊನ್ನಾವರ ಉಪ ಅರಣ್ಯ ಸಂರಕ್ಷಣಾಧಿಕಾರಿ ಯೋಗೀಶ್ ಸಿ.ಕೆ., ಮೈಸೂರು ಡೆವಲಪ್‌ಮೆಂಟ್ ಸೆಂಟರ್ ನ ಪ್ರಮುಖ ವಿನಾಯಕ ಪಿ. ಹೆಗಡೆ, ನಿವೃತ್ತ ವಿಜ್ಞಾನಿ ಪ್ರಭಾಕರ ಜೆ. ಭಟ್ಟ, ಜಿ.ಪಂ ಮಾಜಿ ಸದಸ್ಯ ಪ್ರದೀಪ ನಾಯಕ ಉಪಸ್ಥಿತಿಯಲ್ಲಿ ಸಭಾ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ, ಕಾಮಧೇನು ಪ್ರಸಾದ ಭೋಜನ ನಡೆಯಲಿದೆ.

    ಗೋವಿನ ಉಳಿವಿನ ಹೊಸ ಪರಿಕಲ್ಪನೆಯೊಂದಿಗೆ ಈ ಕಾರ್ಯಕ್ರಮ‌ ಸಂಯೋಜನೆಗೊಂಡಿದ್ದು ನಾಲ್ಕು ದಿನಗಳ ಕಾಲ ಈ ಆಲೆಮನೆ ಹಬ್ಬ ನಡೆಯಲಿದೆ. ಪ್ರತಿದಿನ ಮಧ್ಯಾಹ್ನ 4 ಗಂಟೆಯಿಂದ ಆಲೆಮನೆ ಹಬ್ಬ ಪ್ರಾರಂಭವಾಗುತ್ತಿದ್ದು ಸಂಜೆ 5:30 ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.

    ಒಂದೇ ವೇದಿಕೆಯಲ್ಲಿ ಎರಡು ಕಬ್ಬಿನಗಾಣದ ಮಧ್ಯೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಇದರೊಂದಿಗೆ ಕೃಷಿ ಸಹಾಯಕ ಉಪಕರಣಗಳು ಮಾರಾಟ, ಗವ್ಯೋತ್ಪನ್ನಗಳ ಮಾರಾಟ, ಕರಕುಶಲ ಉತ್ಪನ್ನಗಳ ಮಾರಾಟ, ಕಬ್ಬಿನ ಹಾಲಿನ ಮಾರಾಟ, ಬಹು ಜನರ ಬೇಡಿಕೆಯ ತೊಡಾದೇವು, ಬೆಲ್ಲದ ಬಾಳೆದಿಂಡು, ಪಪ್ಪಾಯಿ ಬಾಳೆದಿಂಡು, ಬೆಲ್ಲ , ಕಬ್ಬಿನ ಹಾಲಿನ ಉತ್ಪನ್ನಗಳ ಮಾರಾಟ ನಡೆಯಲಿದೆ.

    ಯಾವುದೇ ನಿರ್ದಿಷ್ಟ ಆದಾಯವಿಲ್ಲದೇ ಅಂದಾಜು 300 ಗೋವುಗಳನ್ನು ಸಂರಕ್ಷಿಸುತ್ತಿರುವ ಅಮೃತಧಾರ ಗೋಶಾಲೆ ಹೊಸಾಡು ಅನಾಥ, ಅಪಘಾತಕ್ಕೀಡಾದ, ಕಸಾಯಿಖಾನೆಯಿಂದ ರಕ್ಷಿಸಲ್ಪಟ್ಟ, ವಯಸ್ಸಾದ ಗೋವುಗಳ ಪಾಲನೆ ಜೊತೆಯಲ್ಲಿ ಭಾರತೀಯ ಗೋ ತಳಿ ಸಂರಕ್ಷಣೆಯನ್ನು ಮಾಡುತ್ತಿದ್ದು ಆಲೆಮನೆ ಹಬ್ಬದ ಸಂಪೂರ್ಣ ಆದಾಯವನ್ನು ಗೋವಿನ ನಿರ್ವಹಣೆಗೆ ವಿನಿಯೋಗಿಸುವ ವಿನೂತನ ಯೋಜನೆ ಇದಾಗಿದೆ. ಇದರ ಜೊತೆಯಲ್ಲಿ ಆಧುನಿಕ ಭರಾಟೆಗೆ ಪಾರಂಪರಿಕ ಸಂಸ್ಕೃತಿ ನಶಿಸುತ್ತಿದ್ದು ಎಲ್ಲಾ ಗೋಪ್ರೇಮಿಗಳನ್ನು ಒಂದೆಡೆ ಸೇರಿಸಿ ಮುಂದಿನ ಪೀಳಿಗೆಗೆ ಗೋ ಸಂರಕ್ಷಣೆಯ ಜಾಗೃತಿ ಪಡಿಸುವ, ಪ್ರಾಚೀನ ಪರಂಪರೆಯನ್ನು ನೆನಪಿಸುವ, ಗೋವಿಗೆ ಸಂತರ್ಪಣೆಗೈಯುವ ಸದಾವಕಾಶ ಕಲ್ಪಿಸುವುದು ಇದರ ಉದ್ದೇಶವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • ಅಂತರಾಷ್ಟ್ರೀಯ ಮನ್ನಣೆಗಳಿಸಿದ ಡಾ. ಸುಮಂತ್ ಬಳಗಂಡಿ

    ಅಂತರಾಷ್ಟ್ರೀಯ ಮನ್ನಣೆಗಳಿಸಿದ ಡಾ. ಸುಮಂತ್ ಬಳಗಂಡಿ

    ಕುಮಟಾ :- ‘ಇಂಟರ್ ನ್ಯಾಶನಲ್ ಲೀಗ್ ಅಗೇನಸ್ಟ್ ಎಪಿಲೆಪ್ಸಿ’ ವತಿಯಿಂದ ನವದೆಹಲಿಯಲ್ಲಿ ಫೆಬ್ರುವರಿ 20 ರಿಂದ 23 ರವರೆಗೆ ನಡೆದ 15ನೇ ‘ಏಷಿಯನ್ ಆ್ಯಂಡ್ ಓಷಿಯನ್ ಎಪಿಲೆಪ್ಸಿ ಕಾಂಗ್ರೆಸ್’ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಭಾರತವನ್ನು ಪ್ರತಿನಿಧಿಸಿದ ಡಾ. ಸುಮಂತ್ ಬಳಗಂಡಿ, ತಮ್ಮ ವಿಶಿಷ್ಟ ಸಂಶೋಧನಾತ್ಮಕ ಪ್ರಬಂಧವನ್ನು ಮಂಡಿಸಿ, ಪ್ರಥಮ ಸ್ಥಾನ ಗಳಿಸಿದ್ದಾರೆ.

    “ಎಪಿಲೆಪ್ಸಿ (ಅಪಸ್ಮಾರ/ಮೂರ್ಛೆರೋಗ)
    ಹೊಂದಿರುವ ಪುರುಷರಲ್ಲಿ ಲೈಂಗಿಕ ಆರೋಗ್ಯ” ಎಂಬ ಮಹತ್ವದ ವಿಷಯದ ಕುರಿತು ಮಂಡಿಸಿದ ಅವರ ಪ್ರಬಂಧವು ಜಾಗತಿಕ ತಜ್ಞರ ಮೆಚ್ಚುಗೆ ಪಡೆಯುವಂತಾಗಿದ್ದು, ಜಪಾನ್ ಮತ್ತು ಆಸ್ಟ್ರೇಲಿಯಾ ಪ್ರತಿನಿಧಿಗಳು ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದಿದ್ದಾರೆ.

    ಶಿವಮೊಗ್ಗ ಜಿಲ್ಲೆಯ ಸಾಗರದ ‘ಭಾಗವತ್ ಆಸ್ಪತ್ರೆ’ಯಲ್ಲಿ ಮೆದುಳು ಮತ್ತು ನರರೋಗ ತಜ್ಞರಾಗಿ ಸೇವೆ ಸಲ್ಲಿಸುತ್ತಿರುವ ಡಾ. ಸುಮಂತ್ ಬಳಗಂಡಿ, ತಮ್ಮ ಈ ಮಹತ್ವದ ಸಾಧನೆಯ ಮೂಲಕ ದೇಶದ ಜತೆಗೆ ಕನ್ನಡಿಗರ ಹೆಮ್ಮೆ ಹೆಚ್ಚಿಸಿದ್ದಾರೆ.
    ಉತ್ತರ ಕನ್ನಡ ಜಿಲ್ಲೆಯ ಕುಮಟಾ ನಿವಾಸಿಗಳಾಗಿರುವ ಸ್ವಾತಿ ಮತ್ತು ಜಯದೇವ ಬಳಗಂಡಿ ದಂಪತಿಯ ಸುಪುತ್ರರಾಗಿರುವ ಇವರು, ತಮ್ಮ ನಿರಂತರ ಪರಿಶ್ರಮ ಹಾಗೂ ಕಠಿಣ ಅಧ್ಯಯನದ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟಿದ್ದಾರೆ.

    ‘ಇಂಟರ್ ನ್ಯಾಶನಲ್ ಲೀಗ್ ಅಗೇನಸ್ಟ್ ಎಪಿಲೆಪ್ಸಿ’ ಒಂದು ಜಾಗತಿಕ ಸಂಸ್ಥೆಯಾಗಿದ್ದು , ವಿಶ್ವ ಆರೋಗ್ಯ ಸಂಸ್ಥೆ (W.H.O.) ಜೊತೆಗೂಡಿ ಎಪಿಲೆಪ್ಸಿ ಕುರಿತು ಸಂಶೋಧನೆ,ಉತ್ತಮ ಚಿಕಿತ್ಸಾ ವಿಧಾನಗಳ ಅಭಿವೃದ್ಧಿ ಮತ್ತು ಜಾಗೃತಿಯನ್ನು ವೃದ್ಧಿಸುವ ಉದ್ದೇಶ ಹೊಂದಿದ್ದು,’ಏಷಿಯನ್ ಆ್ಯಂಡ್ ಓಷಿಯನ್ ಎಪಿಲೆಪ್ಸಿ ಕಾಂಗ್ರೆಸ್ ’ ಸಂಸ್ಥೆಯು ಏಷ್ಯಾ ಹಾಗೂ ಓಶಿಯಾನಿಯಾ ಪ್ರದೇಶಗಳ ದೇಶಗಳಾದ ಭಾರತ, ಚೀನಾ, ಜಪಾನ್, ಆಸ್ಟ್ರೇಲಿಯಾ, ಮಲೇಷಿಯಾ, ದಕ್ಷಿಣ ಕೊರಿಯಾ ಮುಂತಾದ ರಾಷ್ಟ್ರಗಳಲ್ಲಿ ಎಪಿಲೆಪ್ಸಿ ಕುರಿತ ಸಂಶೋಧನೆ, ತಜ್ಞರ ತರಬೇತಿ ಹಾಗೂ ಆರೋಗ್ಯ ಸೇವಾ ಸುಧಾರಣೆಗೆ ಮೀಸಲಾಗಿರುವ ಪ್ರಮುಖ ವೇದಿಕೆಯಾಗಿದೆ. ಈ ಮಹತ್ವದ ಸಮ್ಮೇಳನವು ಈ ಬಾರಿ ಭಾರತದಲ್ಲಿ ಜರುಗಿದ್ದು ಹಲವು ದೇಶಗಳ ಎಪಿಲೆಪ್ಸಿ ತಜ್ಞ ವೈದ್ಯರುಗಳು ಭಾಗವಹಿಸಿದ್ದರು.

    ಡಾ.ಸುಮಂತ್ ಬಳಗಂಡಿ ಅವರ ಈ ಸಂಶೋಧನಾತ್ಮಕ ಪ್ರಬಂಧವು ಭಾರತೀಯ ವೈದ್ಯಕೀಯ ಸಂಶೋಧನೆಗೆ ಮಹತ್ತರ ಕೊಡುಗೆ ನೀಡಿದಂತಾಗಿದೆ.

  • ಶಾಲೆಗೆ ೭ ಲಕ್ಷ ರೂ. ಗಳಿಗೂ ಹೆಚ್ಚು ಮೌಲ್ಯದ ಶೈಕ್ಷಣಿಕ ಉಪಕರಣ ಕೊಡುಗೆ.

    ಶಾಲೆಗೆ ೭ ಲಕ್ಷ ರೂ. ಗಳಿಗೂ ಹೆಚ್ಚು ಮೌಲ್ಯದ ಶೈಕ್ಷಣಿಕ ಉಪಕರಣ ಕೊಡುಗೆ.

    ಕುಮಟಾ : ತಾಲೂಕಿನ ಕರ್ಕಿಮಕ್ಕಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನೊವೊ ನೊರ್ಡಿಸ್ಕ ಕಂಪನಿಯ ಸಿಎಸ್‌ಆರ್ ನಿಧಿಯಿಂದ ಕೊಡುಗೆಯಾಗಿ ನೀಡಿದ ೭ ಲಕ್ಷ ರೂ. ಗಳಿಗೂ ಹೆಚ್ಚು ಮೌಲ್ಯದ ವಿಜ್ಞಾನ ಮತ್ತು ಇತರ ವಿಷಯಗಳಿಗೆ ಸಂಬಂಧಿಸಿದ ಉಪಯುಕ್ತ ಶೈಕ್ಷಣಿಕ ಉಪಕರಣಗಳನ್ನು ಹಸ್ತಾಂತರಿಸಲಾಯಿತು. ಇದೇ ವೇಳೆ ಶಾಲೆಯ ಪ್ರಯೋಗಾಲಯ ಹಾಗೂ ವಾಚನಾಲಯವನ್ನು ನೊವೊ ನೊರ್ಡಿಸ್ಕ ಕಂಪನಿಯ ಮೆನೆಜರ್ ಪ್ರಶಾಂತ ಉದ್ಘಾಟಿಸಿ ಶುಭಹಾರೈಸಿದರು.

    ಶೈಕ್ಷಣಿಕ ಉಪಕರಣಗಳನ್ನು ಶಾಲೆಯ ಪರವಾಗಿ ಸ್ವೀಕರಿಸಿದ ಬಿಇಒ ರಾಜೇಂದ್ರ ಎಲ್. ಭಟ್ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿರುವ ಕರ್ಕಿಮಕ್ಕಿ ಶಾಲೆ ಸಾಕಷ್ಟು ಶೈಕ್ಷಣಿಕ ಪ್ರಗತಿಯತ್ತ ಸಾಗುವುದಕ್ಕೆ ಇಲ್ಲಿನ ಶಿಕ್ಷಕ ವರ್ಗ, ಎಸ್‌ಡಿಎಂಸಿ ಪ್ರಯತ್ನದಂತೆಯೇ ಹಳೆಯ ವಿದ್ಯಾರ್ಥಿಗಳ ಸಹಯೋಗವೂ ದೊರೆಯತ್ತಿರುವುದು ಶ್ಲಾಘನೀಯವಾಗಿದೆ. ಮೂರೂರು ಕ್ಲಸ್ಟರಿನ ಗ್ರಾಮೀಣ ಪ್ರದೇಶದಲ್ಲಿರುವ ಕರ್ಕಿಮಕ್ಕಿ ಸರ್ಕಾರಿ ಶಾಲೆಯಲ್ಲಿ ಕಲಿತ ಹಳೆಯ ವಿದ್ಯಾರ್ಥಿ ಗಣಪತಿ ಮಂಜುನಾಥ ಹೆಗಡೆ ಬಾಳೆಗದ್ದೆ ಇವರು ಬೆಂಗಳೂರಿನಲ್ಲಿ ನೊವೊ ನೊರ್ಡಿಸ್ಕ ಕಂಪನಿಯಲ್ಲಿ ಉದ್ಯೋಗದಲ್ಲಿದ್ದಾರೆ. ತಾವು ಕಲಿತ ಶಾಲೆಯ ಸ್ಮರಣೆಯಿಟ್ಟು ೭ ಲಕ್ಷರೂ.ಗಳಿಗೂ ಹೆಚ್ಚು ಮೌಲ್ಯದ ವಿಜ್ಞಾನ ಹಾಗೂ ಇತರೆ ಶೈಕ್ಷಣಿಕ ಉಪಕರಣಗಳನ್ನು ಶಾಲೆಗೆ ನೀಡಿದ್ದಾರೆ. ಶಾಲೆಗೆ ಈ ಕೊಡುಗೆ ಲಭ್ಯವಾಗುವಲ್ಲಿ ಶಾಲೆಯ ಮುಖ್ಯ ಶಿಕ್ಷಕ ಹರೀಶ ಪಟಗಾರ, ಎಸ್‌ಡಿಎಂಸಿಯ ಅಧ್ಯಕ್ಷ ರಾಮಚಂದ್ರ ಗೌಡ ಪ್ರಯತ್ನ ಗಮನಾರ್ಹವಾಗಿದೆ. ಕರ್ಕಿಮಕ್ಕಿ ಶಾಲೆಗೆ ಬರುವ ಮಕ್ಕಳಲ್ಲಿ ಬಹುತೇಕ ಕುಟುಂಬಗಳು ಬಡ ಹಾಗೂ ಕೂಲಿಕಾರ್ಮಿಕ ಕುಟುಂಬಗಳಾದರೂ ಪಾಲಕರು ಮಕ್ಕಳ ಶಿಕ್ಷಣಕ್ಕಾಗಿ ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ಶಾಲೆಯ ಮುಖ್ಯ ಶಿಕ್ಷಕರು ಈಗಾಗಲೇ ಸುಮಾರು ಒಂದೂವರೆ ಲಕ್ಷ ಮೌಲ್ಯದ ಸೋಲಾರ್ ವ್ಯವಸ್ಥೆ ಮತ್ತು ಡಿಜಿಟಲ್ ಟಿವಿಗಳನ್ನು ಒದಗಿಸಿದ್ದಾರೆ. ಇದರಿಂದ ವಿದ್ಯಾರ್ಥಿಗಳಿಗೆ ಡಿಜಿಟಲ್ ಶಿಕ್ಷಣಕ್ಕೂ ಅನುಕೂಲವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಶಾಲೆಯ ಹಳೆಯ ವಿದ್ಯಾರ್ಥಿ ಗಣಪತಿ ಮಂಜುನಾಥ ಹೆಗಡೆ ಬಾಳೆಗದ್ದೆ ಇವರ ಸೇವೆಯನ್ನು ಇಲಾಖೆಯು ಸದಾ ಸ್ಮರಿಸಲಿದೆ ಎಂದರು. 

    ವೇದಿಕೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾರತಿ ನಾಯ್ಕ. ಗಣಪತಿ ಮಂಜುನಾಥ ಹೆಗಡೆ ಬಾಳೆಗದ್ದೆ, ಎಸ್‌ಡಿಎಂಸಿ ಅಧ್ಯಕ್ಷ ರಾಮಚಂದ್ರ ಮಾರು ಗೌಡ, ಉಪಾಧ್ಯಕ್ಷೆ ರೇಣುಕಾ ಮಂಜುನಾಥ ನಾಯ್ಕ. ಸಿಆರ್‌ಪಿ ಎಲ್.ಜಿ.ಪಟಗಾರ. ಮುಖ್ಯ ಶಿಕ್ಷಕ ಹರೀಶ ಪಟಗಾರ ಸ್ವಾಗತಿಸಿದರು. ಗಣೇಶ ನಾಯ್ಕ ವಂದಿಸಿದರು. ಮಾಲಿನಿ ಭಟ್ ಮತ್ತು ವಿದ್ಯಾ ಶೆಟ್ಟಿ ನಿರ್ವಹಿಸಿದರು.

  • ಕಟ್ಟಡದಿಂದ ಬಿದ್ದು ಮಹಿಳೆ ಸಾವು

    ಕಟ್ಟಡದಿಂದ ಬಿದ್ದು ಮಹಿಳೆ ಸಾವು

    ಗೋಕರ್ಣ: ಕಟ್ಟಡದ ಕಾಂಕ್ರಿಟ್ ಕೆಲಸ ಮುಗಿಸಿ ಬರುವ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಕಟ್ಟಡದಿಂದ ಬಿದ್ದು ಮಹಿಳೆ ಸಾವನಪ್ಪಿರುವ ಘಟನೆ ಗೋಕರ್ಣದಲ್ಲಿ ನಡೆದಿದೆ. ಕುಡ್ಲೆ ಬೀಚ್‌ನ ಬಳಿ ಖಾಸಗಿ ವ್ಯಕ್ತಿಯ ಕಟ್ಟಡ ನಿರ್ಮಾಣಕ್ಕೆ ಕಾಂಕ್ರಿಟ್ ಕೆಲಸ ಮುಗಿಸಿ ಬರುತ್ತಿರುವ ವೇಳೆ ಮಂಕಾಳಿ ಗೌಡ ಹೆಗ್ಡೆ ಎಂಬ ಮಹಿಳೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಸ್ಥಳದಲ್ಲೇ ಸಾವನಪ್ಪಿದ್ದಾಳೆ. ಈ ಬಗ್ಗೆ ಮೃತಳ ತಮ್ಮ ಪೊಲೀಸರಿಗೆ ದೂರನ್ನು ನೀಡಿದ್ದು ಈ ಬಗ್ಗೆ ಗೋಕರ್ಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಸರಸ್ವತಿ ಪಿ.ಯು ಕಾಲೇಜಿನಲ್ಲಿ ‘ಸಂಸ್ಕಾರಧಾರೆ’ ಅರ್ಥಪೂರ್ಣ ಕಾರ್ಯಕ್ರಮ

    ಸರಸ್ವತಿ ಪಿ.ಯು ಕಾಲೇಜಿನಲ್ಲಿ ‘ಸಂಸ್ಕಾರಧಾರೆ’ ಅರ್ಥಪೂರ್ಣ ಕಾರ್ಯಕ್ರಮ

    ಕುಮಟಾ : ಎಲ್ಲಿಯೋ ಹರಕೆ ಹೊತ್ತು, ಜೀವನಕ್ಕೆ ನೆರವಾಗುತ್ತಾರೆಂದು ಮಕ್ಕಳನ್ನು ಪಡೆದು ಅವರ ಸಂತೋಷದಲ್ಲಿಯೇ ತಮ್ಮ ಸಂತೋಷವನ್ನು ಕಾಣುವ ತಂದೆ ತಾಯಿಗಳನ್ನು ನೋಯಿಸದಂತೆ ಬದುಕಿದರೆ ಜೀವನ ಸಾರ್ಥಕ ಎಂದು ಖ್ಯಾತ ವಾಗ್ಮಿ ಎನ್.ಆರ್ ದಾಮೋದರ ಶರ್ಮಾ ಅಭಿಪ್ರಾಯಪಟ್ಟರು. ಅವರು ವಿಧಾತ್ರಿ ಅಕಾಡೆಮಿ ಮಂಗಳೂರು ಇವರ ಸಹಯೋಗದೊಂದಿಗೆ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನಲ್ಲಿ ನಡೆಯುತ್ತಿರುವ ಬಿ.ಕೆ ಭಂಡಾರಕರ್ಸ ಸರಸ್ವತಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗಾಗಿ ಶನಿವಾರ ನಡೆದ ‘ಸಂಸ್ಕಾರಧಾರೆ’ ಕಾರ್ಯಕ್ರಮದಲ್ಲಿ ಮಾತಾ ಪಿತೃ ಪೂಜನ ಹಾಗೂ ಗುರು ನಮನ ಕಾರ್ಯಕ್ರಮವನ್ನು ನಡೆಸಿಕೊಡುತ್ತಾ, ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು.

    ಹೆತ್ತವರ ಪ್ರಾಮಾಣಿಕ ಪ್ರಯತ್ನಕ್ಕೆ ಬೆಂಬಲವಾಗಿ ನಿಂತು ಅವರ ಘನತೆ, ಗೌರವಕ್ಕೆ ಚ್ಯುತಿ ಬಾರದಂತೆ ಬದುಕಿ, ಸಾಧನೆಯ ಎಸಲುಗಳಿಂದ ತಂದೆ ತಾಯಿಯನ್ನು ಪೂಜಿಸಿದಾಗ ಜೀವನ ಸಾರ್ಥಕವಾಗುವುದು. ವಿದ್ಯಾರ್ಥಿಗಳಲ್ಲಿ ಸಂಸ್ಕಾರಯುತ ವ್ಯಕ್ತಿತ್ವ ಮೈಗೂಡಿಸುವ, ದೇಶದ ಸಂಸ್ಕೃತಿಯನ್ನು ಬಿತ್ತರಿಸುವಂತಹ ಕಾರ್ಯಕ್ರಮದ ಮೂಲಕ ಭವ್ಯ ಭಾರತಕ್ಕೆ ವಿಧಾತ್ರಿ ಅಕಾಡೆಮಿ, ಕೊಂಕಣ ಎಜ್ಯುಕೇಶನ್ ವಿದ್ಯಾಸಂಸ್ಥೆ ಮಹತ್ತರವಾದ ಕೊಡುಗೆ ನೀಡುತ್ತಿದೆ. ರಾಷ್ಟ್ರ ನಿರ್ಮಾಣ ಕೈಂಕರ್ಯ ಮಂದಿರವಿದು ಎಂದು ರಾಷ್ಟ್ರಸೇವೆಯ ಜವಾಬ್ದಾರಿ ಹೊತ್ತು ಸಂಸ್ಥೆ ನಿಜಕ್ಕೂ ಸಮಾಜಕ್ಕೆ ಮಾದರಿ ಎಂದರು.

    ಮಾತು ಮತ್ತು ಅದರ ಅರ್ಥ ಒಂದಕ್ಕೊಂದು ಹೇಗೆ ಬೆಸೆದುಕೊಂಡಿರುತ್ತದೆಯೋ ಹಾಗೆಯೇ ತಂದೆ ತಾಯಿಯೂ ಮಕ್ಕಳ ಭವಿಷ್ಯಕ್ಕಾಗಿ ಒಬ್ಬರಿಗೊಬ್ಬರು ತಮ್ಮ ಇಡೀ ಜೀವನವನ್ನೇ ತ್ಯಾಗ ಮಾಡುತ್ತಾರೆ. ವಿದ್ಯಾವಂತರು ಎನ್ನುವ ಭಾವೋದ್ರೇಕದಿಂದ ಅಥವಾ ತಾತ್ಕಾಲಿಕ ಆಕರ್ಷಣೆಗೆ ಒಳಗಾಗಿ ಹೆತ್ತವರ ತ್ಯಾಗವನ್ನು ದಿಕ್ಕರಿಸದಿರಿ. ಹೆತ್ತವರ ತ್ಯಾಗ ಮತ್ತು ನಾವು ಏಕೆ ದಾರಿ ತಪ್ಪುತ್ತಿದ್ದೇವೆ ಎನ್ನುವ ಆತ್ಮಾವಲೋಕನವೇ ನಮ್ಮನ್ನು ಸರಿದಾರಿಗೆ ತರುವುದು ಎಂದು ದಾಮೋದರ ಶರ್ಮಾ ಅಭಿಪ್ರಾಯಪಟ್ಟರು.

    ಅನೇಕ ಅನೇಕ ಉದಾಹರಣೆಗಳ ಮೂಲಕ ಹಲವರ ಬದುಕನ್ನು ಚಿತ್ರಿಸಿದವರು ಕಾಲೇಜು ದಿನಗಳಲ್ಲಿ ಉಂಟಾಗುವ ಆಕರ್ಷಣೆ ಪ್ರೀತಿ ಇವುಗಳನ್ನೇ ಸತ್ಯವೆಂದು ಭಾವಿಸಿ, ನಾವು ಜೀವನವನ್ನು ಅಂತ್ಯ ಮಾಡಿಕೊಳ್ಳುತ್ತಿದ್ದೇವೆ. ಆದರೆ ನಮ್ಮನ್ನು ನಂಬಿಕೊಂಡ ಪಾಲಕರಿಗೆ ನಾವು ನೀಡಬೇಕಾಗಿರುವುದು ಏನು ಎಂಬುದರ ಬಗ್ಗೆ ಚಿಂತನೆಗಳು ನಡೆಯಬೇಕು. ಯಾರದೋ ಮನೆಯ ಫ್ರಿಜ್ಜಿನಲ್ಲಿ ಮಾಂಸಗಳಾಗದೆ, ತಂದೆ ತಾಯಿಯನ್ನು ತಂಪಾಗಿ ನೋಡಿಕೊಂಡು ಅವರ ಮನಸ್ಸಿಗೆ ತಂಪೆರೆವ ಫ್ರಿಡ್ಜ್ ಗಳಾಗಿರಬೇಕು ಎಂದರು.

    ಆರಂಭದಲ್ಲಿ ಕೊಂಕಣ ಸಂಸ್ಥೆಯ ಹಿರಿಯ ವಿಶ್ವಸ್ಥರಾದ ರಮೇಶ ಪ್ರಭು ಅವರು ಪ್ರಸ್ತುತ ಕುಸಿಯುತ್ತಿರುವ ಮಾನವೀಯ ಮೌಲ್ಯಗಳ ಕುರಿತು ಕಳವಳ ವ್ಯಕ್ತ ಪಡಿಸಿದರು.
    ಪ್ರಾಚಾರ್ಯ ಕಿರಣ ಭಟ್ಟ ಹುತ್ಗಾರ ಸ್ವಾಗತ ಗೈದರು. ವೇದಿಕೆಯಲ್ಲಿ ವಿಧಾತ್ರಿ ಅಕಾಡಮಿ ಸಹ ಸಂಸ್ಥಾಪಕ ಗುರುರಾಜ ಶೆಟ್ಟಿಯವರು ಕೊಂಕಣದ ವಿಶ್ವಸ್ಥರಾದ ಡಿ.ಡಿ ಕಾಮತ್ ಉಪಸ್ಥಿತರಿದ್ದರು. ಉಪನ್ಯಾಸಕ ಕಾಗಾಲ ಚಿದಾನಂದ ಭಂಡಾರಿ ವಂದಿಸಿದರು. ಗಣೇಶ ಜೋಶಿ ಸಂಕೊಳ್ಳಿ ಕಾರ್ಯಕ್ರಮ ನಿರೂಪಿಸಿದರು.

  • 29ರಂದು ಪಂ. ಷಡಕ್ಷರಿ ಗವಾಯಿ ಪುಣ್ಯಸ್ಮರಣೆ, ಪ್ರಶಸ್ತಿ ಪ್ರದಾನ

    29ರಂದು ಪಂ. ಷಡಕ್ಷರಿ ಗವಾಯಿ ಪುಣ್ಯಸ್ಮರಣೆ, ಪ್ರಶಸ್ತಿ ಪ್ರದಾನ

    ಕುಮಟಾ : ಪಂ. ಷಡಕ್ಷರಿ ಗವಾಯಿ ಅಕಾಡೆಮಿ ವತಿಯಿಂದ ಪಂ. ಷಡಕ್ಷರಿ ಗವಾಯಿ ಪುಣ್ಯಸ್ಮರಣೆ-2024 ಹಾಗೂ ಷಡಕ್ಷರಿ ರಾಷ್ಟ್ರೀಯ ಪುರಸ್ಕಾರ ಪ್ರದಾನ ಕಾರ್ಯಕ್ರಮ ಡಿ. 29ರಂದು ಕೂಜಳ್ಳಿ ಕುಳಿಹಕ್ಕಲಿನ ಶ್ರೀ ಶಾಂತಿಕಾ ಪರಮೇಶ್ವರಿ ದೇವಸ್ಥಾನದ ಸಭಾಭವನದಲ್ಲಿ ನಡೆಯಲಿದೆ. ಪಂ. ವಿನಾಯಕ ತೊರ್ವಿ ಅವರಿಗೆ ಈ ಬಾರಿ ಷಡಕ್ಷರಿ ರಾಷ್ಟ್ರೀಯ ಪುರಸ್ಕಾರ ಪ್ರದಾನ ಮಾಡಲಾಗುತ್ತದೆ.

    ದಿನವಿಡೀ ವೈವಿಧ್ಯಮಯ ಸಂಗೀತ ಕಾರ್ಯಕ್ರಮ ನಡೆಯಲಿದೆ. ಪಂ. ವಿನಾಯಕ ತೊರ್ವಿ, ಮುಂಬೈನ ಕೃಷ್ಣ ಭಟ್ಟ ಅವರ ಗಾಯನ, ಮುಂಬೈನ ರಾಜನ್ ಮಾಶೇಲ್ಕರ ಅವರ ವಯೋಲಿನ್, ಬಸವರಾಜ ಭಜಂತ್ರಿ ಹೆಡಿಗ್ಗೊಂಡ ಅವರ ಶಹನಾಯಿ ವಾದನ ಕಾರ್ಯಕ್ರಮ, ಬಾರ್ಕೂರಿನ ಇಂದಿರಾ ಎಂ. ಭಟ್ಟ, ವಿನಾಯಕ ಹೆಗಡೆ ಹಿರೇಹದ್ದ ಅವರ ಗಾಯನ, ಭಾರ್ಗವ ಭಟ್ಟ ಮತ್ತು ಅಜಯ ಹೆಗಡೆ ಅವರ ಬಾನ್ಸುರಿ-ಹಾರ್ಮೋನಿಯಂ ಜುಗಲ್ಬಂಧಿ ಕಾರ್ಯಕ್ರಮ ನಡೆಯಲಿದೆ. ತಬಲಾದಲ್ಲಿ ಗುಣವಂತೆಯ ಎನ್.ಜಿ. ಅನಂತಮೂರ್ತಿ, ಮುಂಬೈನ ಗುರುಶಾಂತ ಸಿಂಗ್, ಹೊಸಗದ್ದೆ ಮಹೇಶ ಹೆಗಡೆ, ಬೆಂಗಳೂರಿನ ಯೋಗೀಶ ಭಟ್ಟ, ಕಡತೋಕಾದ ವಿನೋದ ಭಂಡಾರಿ, ಹರಿಕೇರಿ ಗಣಪತಿ ಹೆಗಡೆ, ಅಂಸಳ್ಳಿ ಅಕ್ಷಯ ಭಟ್ಟ ಸಹಕರಿಸುವರು. ಕೂಜಳ್ಳಿ ಗೌರೀಶ ಯಾಜಿ, ವರ್ಗಾಸರದ ಅಜೇಯ ಹೆಗಡೆ ಸಂವಾದಿನಿ ಸಾಥ್ ನೀಡುವರು.

    ಬೆಳಗ್ಗೆ 9 ಗಂಟೆಗೆ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ. ಪಂ. ಬಸವರಾಜ ಭಜಂತ್ರಿ, ಹೆಡಿಗ್ಗೊಂಡ, ಸ್ವರ ಸಂಗಮದ ಅಧ್ಯಕ್ಷ ಎಸ್.ಜಿ. ಭಟ್ಟ, ಷಡಕ್ಷರಿ ಗವಾಯಿ ಅಕಾಡೆಮಿ ಖಜಾಂಚಿ ಎಸ್.ಎನ್. ಭಟ್ಟ ಭಾಗವಹಿಸುವರು.

    ಸಂಜೆ 4 ಗಂಟೆ ಷಡಕ್ಷರಿ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯದ್ದು, ಮೇರು ಗಾಯಕ ಬೆಂಗಳೂರಿನ ವಿನಾಯಕ ತೊರ್ವಿ ಅವರಿಗೆ ಪುರಸ್ಕಾರ ನೀಡಲಾಗುವುದು. ಪ್ರಾಧ್ಯಾಪಕ, ಗುಣವಂತೆಯ ಡಾ. ನರಸಿಂಹ ಪಂಡಿತ, ಉಡುಪಿ ಆಭರಣ ಗ್ರೂಪ್ನ ಸಂಧ್ಯಾ ಸುಭಾಷ ಕಾಮತ್, ಹುಬ್ಬಳ್ಳಿಯ ರಂಗನಾಥ ಕಮತರ, ವೇಲಾ ಟೆಕ್ನಾಲಾಟಿಸ್ನ ಗಿರೀಶ ಹೆಗಡೆ, ಲೆಕ್ಕ ಪರಿಶೋಧಕ ಸಚಿನ್ ಬಿ.ಆರ್. ಪಾಲ್ಗೊಳ್ಳುವರು. ಷಡಕ್ಷರಿ ಗವಾಯಿ ಅಕಾಡೆಮಿಯ ಅಧ್ಯಕ್ಷ ವಸಂತರಾವ್ ಅಧ್ಯಕ್ಷತೆ ವಹಿಸುವರು ಎಂದು ಅಕಾಡೆಮಿ ಪ್ರಕಟಣೆಯಲ್ಲಿ ತಿಳಿಸಿದೆ.