ಕುಮಟಾ : ಮೆದುಳು ಮತ್ತು ನರರೋಗ ತಜ್ಞ ವೈದ್ಯರಾಗಿ ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತ ಭರವಸೆಯ ಕುಡಿಯಾಗಿರುವ ಡಾ.ಸುಮಂತ್ ಜಯದೇವ ಬಳಗಂಡಿ ಅವರನ್ನು “ಹವ್ಯಕ ವಿದ್ಯಾ ರತ್ನ” ಪ್ರಶಸ್ತಿ ನೀಡಿ ಪುರಸ್ಕರಿಸಲು ಶ್ರೀ ಅಖಿಲ ಹವ್ಯಕ ಮಹಾಸಭೆ ಆಯ್ಕೆಮಾಡಿದ್ದು,ಪ್ರಶಸ್ತಿ- ಸನ್ಮಾನ ಸ್ವೀಕರಿಸಲು ಅವರನ್ನು ಅಧಿಕೃತವಾಗಿ ಆಹ್ವಾನಿಸಿದೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಿರುವ ಮೂರು ದಿನಗಳ ತೃತೀಯ ‘ವಿಶ್ವ ಹವ್ಯಕ ಸಮ್ಮೇಳನ’ದಲ್ಲಿ ಹಮ್ಮಿಕೊಂಡಿರುವ ಈ ಭವ್ಯ ಸಮಾರಂಭದಲ್ಲಿ ಡಿ.28 ರಂದು ಪ್ರಶಸ್ತಿ- ಸನ್ಮಾನ ಸ್ವೀಕರಿಸಲು ತಾನು ಕುಟುಂಬದವರೊಂದಿಗೆ ಪಾಲ್ಗೊಳ್ಳುತ್ತಿರುವುದಾಗಿ ಡಾ.ಸುಮಂತ್ ಬಳಗಂಡಿ ತಮ್ಮ ಹರ್ಷ ವ್ಯಕ್ತಪಡಿಸಿದ್ದಾರೆ.
ಮುಂಬರುವ 2025 ಫೆಬ್ರುವರಿ ಯಲ್ಲಿ ನವದೆಹಲಿಯಲ್ಲಿ ಜರುಗಲಿರುವ ಅಂತರರಾಷ್ಟ್ರೀಯ ಮಟ್ಟದ 15 ನೇ ‘ಏಶಿಯನ್ ಆ್ಯಂಡ್ ಓಷಿಯನ್ ಎಪಿಲೆಪ್ಸಿ ಕಾಂಗ್ರೆಸ್ ‘ನಲ್ಲಿ ಭಾಗವಹಿಸಿ ತನ್ನ ಅಧ್ಯಯನ ಪ್ರಬಂಧ ಮಂಡಿಸುವ ಅಪೂರ್ವ ಸದವಕಾಶ ತನಗೆ ಲಭಿಸಿದ್ದು, ಈಗಾಗಲೇ ಈ ಕುರಿತಾಗಿ ಅಧಿಕೃತ ಆಹ್ವಾನ ಪಡೆದಿರುವುದಾಗಿಯೂ ಈ ಸಂದರ್ಭದಲ್ಲಿ ಅವರು ಮಾಹಿತಿ ನೀಡಿದರು.
ಇವರು ಎಂಬಿಬಿಎಸ್ ಪದವಿ ಪಡೆದ ನಂತರ ಜನರಲ್ ಮೆಡಿಸಿನ್ ವಿಷಯದಲ್ಲಿ ಎಮ್.ಡಿ.ಮತ್ತು ಡಿ.ಎನ್.ಬಿ.ಸ್ನಾತಕೋತ್ತರ ಪದವಿಗಳನ್ನು ಪಡೆದು,ಅಂತರರಾಷ್ಟ್ರೀಯ ಮನ್ನಣೆ ಪಡೆದ ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ(ನಿಮ್ಹಾನ್ಸ್) ನಡೆಸಿದ ರಾಷ್ಟ್ರಮಟ್ಟದ ಪ್ರವೇಶ ಪರೀಕ್ಷೆಯಲ್ಲಿ ಪ್ರಥಮ ಯತ್ನ ದಲ್ಲಿಯೇ ದಾಖಲೆಯ ಅಂಕಗಳನ್ನು ಪಡೆದು ಆಯ್ಕೆಯಾಗಿ ಪ್ರವೇಶ ಪಡೆದು ನ್ಯೂರೋಲೊಜಿಯಲ್ಲಿ 3 ವರ್ಷಗಳ ಡಿ.ಎಮ್.ಸೂಪರ್ ಸ್ಪೆಶಲೈಸೇಶನ್ ಕೋರ್ಸ್ ನ್ನು ಯಶಸ್ವಿಯಾಗಿ ಪೂರೈಸಿರುತ್ತಾರೆ.
ಪ್ರತಿಭಾವಂತರಾಗಿರುವ ಇವರು ಪಠ್ಯ,ಪಠ್ಯೇತರ ವಿಷಯಗಳಲ್ಲಿ ರಾಜ್ಯ,ರಾಷ್ಟ್ರ ಮಟ್ಟದ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ವೇದ, ಉಪನಿಷತ್ತು ,ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ,ಲಘು ಸಂಗೀತಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಡಾ.ಸುಮಂತ್ ಜಯದೇವ ಬಳಗಂಡಿ ಅವರು ಪ್ರಸ್ತುತ ಶಿವಮೊಗ್ಗಾ ಜಿಲ್ಲೆಯ ಸಾಗರದ ಪ್ರತಿಷ್ಠಿತ ‘ಭಾಗವತ್ ಆಸ್ಪತ್ರೆ’ ಯಲ್ಲಿ ಮೆದುಳು ಹಾಗೂ ನರ ರೋಗ ತಜ್ಞ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಕುಮಟಾ : ಪ್ರಾರಂಭದಲ್ಲಿ ನನ್ನ ಮೇಲೆಯೇ ನನಗೆ ಕೀಳರಿಮೆ ಇತ್ತು. ಎಲ್ಲ ವಿಷಯದಲ್ಲಿಯೂ ಕೀಳರಿಮೆಯಿಂದ ನಾನು ಹಿಂದೆ ಉಳಿಯುತ್ತಿದೆ. ಆದರೆ ಯಾವುದೋ ಒಂದು ಹಂತದಲ್ಲಿ ಎಲ್ಲವನ್ನು ಎದುರಿಸಿ ಮುನ್ನಡೆಯಬೇಕೆಂಬ ಮನಃಪರಿವರ್ತನೆಯ ನಂತರದಲ್ಲಿ ನಾನು ಕಾರ್ಯೋನ್ಮುಖನಾದೆ. ಇದರಿಂದ ಸಾಧನೆ ಸಾಧ್ಯವಾಯಿತು. ನಮ್ಮಲ್ಲಿರುವ ಕೀಳರಿಮೆಯನ್ನು ಬಿಟ್ಟು ನಾವು ಕಾರ್ಯೋನ್ಮುಖರಾದಾಗ ಯಶಸ್ಸನ್ನು ಸಾಧಿಸಲು ಸಾಧ್ಯ ಎಂದು ಖ್ಯಾತ ಚಲನಚಿತ್ರ ನಟಿ, ರಂಗಕರ್ಮಿ, ಭರತನಾಟ್ಯ ಕಲಾವಿದೆ ಮಾನಸಿ ಸುಧೀರ್ ಅಭಿಪ್ರಾಯ ಪಟ್ಟರು. ಅವರು ಕೊಂಕಣ ಎಜ್ಯುಕೇಶನ್ ಟ್ರಸ್ಟ್ ಹಾಗೂ ವಿಧಾತ್ರಿ ಅಕಾಡೆಮಿ ಸಹಯೋಗದಲ್ಲಿ ನಡೆಯುತ್ತಿರುವ ಸರಸ್ವತಿ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡ ಕಲಾಂಜಲಿ ಕಾರ್ಯಕ್ರಮ ಉದ್ಘಾಟಿಸಿ, ಆಶಯನುಡಿಗಳನ್ನಾಡಿದರು.
ಬದುಕಿನಲ್ಲಿ ಕಲೆಯನ್ನು ನೆಚ್ಚಿಕೊಂಡವಳು ನಾನು. ಕಲಾವಿದೆಯಾಗಿ ಕಲಾ ಪ್ರಪಂಚಕ್ಕೆ ತೆರೆದುಕೊಳ್ಳುವಲ್ಲಿ ನನ್ನದಷ್ಟೇ ಪ್ರಯತ್ನಗಳಿಲ್ಲ. ಅದರ ಹಿಂದೆ ಹಲವರು ಕಾರ್ಯ ಮಾಡಿದ್ದಾರೆ. ಕಾಂತಾರ ಚಲನಚಿತ್ರದಲ್ಲಿ ನಾನು ಪಾತ್ರ ಮಾಡಿದರೂ, ಪಾತ್ರದ ಹಿಂದೆ ನಿರ್ದೇಶಕರು ಚಿತ್ರತಂಡ ಸಂಪೂರ್ಣ ಕಾರ್ಯನಿರ್ವಹಿಸಿದೆ. ನಾನು ಯೂಟ್ಯೂಬ್ ನ ಮೂಲಕ ಪ್ರಸಿದ್ಧಿಯನ್ನು ಪಡೆದಿದ್ದರು ಆ ವಿಡಿಯೋಗಳನ್ನು ಮಾಡಲು ನನಗೆ ಸಹಕಾರ ನೀಡಿದವರು ನನ್ನ ಕುಟುಂಬದ ಸದಸ್ಯರು. ಅವರೆಲ್ಲರೂ ನನ್ನ ಸಾಧನೆಯ ಭಾಗವಾಗಿರುವುದರಿಂದ ಎಲ್ಲಾ ಗೌರವ ಸನ್ಮಾನಗಳನ್ನು ನನ್ನ ಜೊತೆಗಿರುವ ಕಲಾತಂಡಕ್ಕೆ ಹಾಗೂ ನನ್ನ ಹಿತೈಷಿಗಳಿಗೆ ಅರ್ಪಣೆ ಮಾಡುತ್ತೇನೆ ಎಂದು ಅವರ ಅಭಿಪ್ರಾಯಪಟ್ಟರು.
ಉತ್ತರ ಕನ್ನಡದವರು ಪ್ರತಿಭಾನ್ವಿತರು. ಸದಾ ಪ್ರಯತ್ನಶೀಲರು. ಉತ್ತರ ಕನ್ನಡದ ಜನರು ನನ್ನನ್ನು ಅತಿ ಹೆಚ್ಚು ಪ್ರೀತಿಸಿದವರು. ನನಗೆ ಅತಿ ಹೆಚ್ಚಿನ ಪ್ರಚಾರ ಕೊಟ್ಟವರು. ಉತ್ತರ ಕನ್ನಡದವರ ನಿರ್ದೇಶನದಲ್ಲಿ ನಾನು ರಂಗಕರ್ಮಿಯಾಗಿ ಮೂಡಿಬಂದಿದ್ದು ನನ್ನ ಬದುಕಿನ ಸಾರ್ಥಕತೆ, ಹಾಗಾಗಿ ಉತ್ತರ ಕನ್ನಡಕ್ಕೆ ಬರಲು ಸಂತೋಷವೆನಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. ವಿವಿಧ ಕಥನ ಹಾಗೂ ಹಾಡುಗಳ ಮೂಲಕ ಅಭಿನಯ ಮಾಡಿ ತೋರಿಸಿ ಮಕ್ಕಳ ಹಾಗೂ ನೆರೆದಿದ್ದ ಪ್ರೇಕ್ಷಕರ ಮನ ಗೆದ್ದ ಅವರು, ತನ್ನ ಕಲಾ ಜೀವನದ ಅನೇಕ ಘಟನಾವಳಿಗಳನ್ನು ಸ್ಮರಿಸಿಕೊಂಡರು.
ವಿಧಾತ್ರಿಯ ಅಕಾಡೆಮಿಯವರು ನಡೆಸುತ್ತಿರುವ ಸರಸ್ವತಿ ಪದವಿ ಪೂರ್ವ ಕಾಲೇಜಿಗೆ ಕಾಲಿಟ್ಟ ತಕ್ಷಣ ಇದೊಂದು ಸರಸ್ವತಿ ಮಂದಿರ ಎನ್ನುವಂತೆ ಭಾಸವಾಯಿತು. ಇಲ್ಲಿಯ ಜನರ ಪ್ರೀತಿಯ ಸ್ವಾಗತಕ್ಕೆ ನಾನು ಮನಸೋತಿದ್ದೇನೆ. ವಿದ್ಯಾರ್ಥಿಗಳ ಕಲೆ ಹಾಗೂ ಕಾರ್ಯಕ್ರಮದ ರೂಪುರೇಷೆ ಕಂಡು ಮೈಮನಗಳು ಪುಳಕಗೊಂಡಿತು. ಎಲ್ಲಿ ಕಲಾರಾಧನೆ ನಡೆಯುತ್ತದೆಯೋ ಆ ಸಂಸ್ಥೆ ಬೆಳೆಯುತ್ತದೆ. ಶಿಕ್ಷಣ ಕೇವಲ ಬಾಯಿಪಾಠವಲ್ಲ. ಜೊತೆಗೆ ಸರ್ವತೋಮುಖ ಅಭಿವೃದ್ಧಿಯ ದಿಸೆಯಲ್ಲಿ ಪ್ರಯತ್ನ ಸಾಗುತ್ತಿರುವುದು ಸಂತಸದ ವಿಚಾರ ಎಂದು ಅವರ ಅಭಿಪ್ರಾಯ ಪಟ್ಟರು.
ಇದೇ ಸಂದರ್ಭದಲ್ಲಿ ಹಿರಿಯ ಯಕ್ಷಗಾನ ಕಲಾವಿದ ಹಾಗೂ ನಿವೃತ್ತ ಉಪನ್ಯಾಸಕ ಡಾ. ಆರ್. ಜಿ ಗುಂದಿ ಹಾಗೂ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತೆ ಶಾರದಾ ಮೊಗೇರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನಿತರು ಸನ್ಮಾನ ಸ್ವೀಕರಿಸಿ ಮಾತನಾಡಿ, ಇಂತಹ ವೇದಿಕೆಯಲ್ಲಿ ನಮ್ಮನ್ನು ಗುರುತಿಸಿ ಗೌರವಿಸಿರುವುದು ಬದುಕಿನ ಸಾರ್ಥಕತೆ ಎಂದು ಅಭಿಪ್ರಾಯಪಟ್ಟರು. ಅಮೇರಿಕಾದಲ್ಲಿ ಇಂಜನೀಯರ್ ಆಗಿ ಸೇವೆ ಸಲ್ಲಿಸಿ ನಿವೃತ್ತರಾದ ಡಾ. ಅಶೋಕ ಪ್ರಭು ವೇದಿಯೆಲ್ಲಿ ಗೌರವ ಸ್ವೀಕರಿಸಿ ಮಾತನಾಡಿ, ಶಿಕ್ಷಕರು ಬದುಕಿನ ಆಸರೆಯಾಗಿದ್ದಾರೆ. ನಮ್ಮ ಬದುಕಿನ ದಾರಿದೀಪ ಶಿಕ್ಷಕರು. ಅವರನ್ನು ಸದಾ ಸ್ಮರಿಸುವ ಕಾರ್ಯ ವಿದ್ಯಾರ್ಥಿಗಳಿಂದ ಆಗಬೇಕು ಎಂದು ಅಭಿಪ್ರಾಯಪಟ್ಟರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಕೊಂಕಣ ಎಜುಕೇಶನ್ ಟ್ರಸ್ಟ್ ನ ಕಾರ್ಯದರ್ಶಿ ಮುರಳೀಧರ ಪ್ರಭು ಮಾತನಾಡಿ, ಉತ್ತರ ಕನ್ನಡದವರು ಉತ್ತಮರನ್ನು ಹುಡುಕಿ ಅವರ ಬೆನ್ನು ತಟ್ಟಿ ಅವರ ಕಲೆಗೆ ಪ್ರೋತ್ಸಾಹಿಸಿದವರು. ತಾವು ಮಾಡಲಾಗದ ಸಾಧನೆಯನ್ನು ಇನ್ನೊಬ್ಬರು ಮಾಡಿದರೆ ಅವರ ಜೊತೆಗೆ ನಿಂತು ಸಂಭ್ರಮ ಪಡುವವರು ನಾವು. ಕಲಾವಿದರು, ಶೈಕ್ಷಣಿಕ ರಂಗ ಹಾಗೂ ಇಂತಹ ಕಾರ್ಯಕ್ರಮಗಳ ಮೂಲಕ ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡವನ್ನು ಹತ್ತಿರವಾಗಿಸಿದ ಕೀರ್ತಿ ವಿಧಾತ್ರಿ ಅಕಾಡೆಮಿಯ ಗುರುರಾಜ ಶೆಟ್ಟಿಯವರಿಗೆ ಸಲ್ಲುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಪ್ರಾಸ್ತಾವಿಕವಾಗಿ ಮಾತನಾಡಿದ ವಿಧಾತ್ರಿ ಅಕಾಡೆಮಿಯ ಸಹ ಸಂಸ್ಥಾಪಕ ಗುರುರಾಜ ಶೆಟ್ಟಿ, ಮಕ್ಕಳ ಸರ್ವತೋಮುಖ ಬೆಳವಣಿಗೆಗಾಗಿ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರಲಾಗಿದೆ. ಕಲೆಯನ್ನು ಪರಿಚಯಿಸುವ, ಕಲಾವಿದರನ್ನು ಗೌರವಿಸುವ ಹಾಗೂ ಮಕ್ಕಳಿಗೆ ಮಾದರಿಯಾಗುವ ವ್ಯಕ್ತಿತ್ವವನ್ನು ಕರೆತಂದು ಕಾರ್ಯಕ್ರಮದಲ್ಲಿ ಸನ್ಮಾನಿಸಿ ಮಕ್ಕಳಿಗೂ ಸಾಧನೆಗೆ ಸ್ಪೂರ್ತಿ ನೀಡುವ ಹಿನ್ನೆಲೆಯಲ್ಲಿ ಕಲಾಂಜಲಿ ರೂಪ ತಾಳಿದ್ದು, ಕಳೆದ ನಾಲ್ಕು ವರ್ಷಗಳಿಂದ ಅಭೂತಪೂರ್ವ ಜನಬೆಂಬಲ ವ್ಯಕ್ತವಾಗಿದೆ ಎಂದು ಅಭಿಪ್ರಾಯಪಟ್ಟರು.
ಪ್ರಾಂಶುಪಾಲ ಕಿರಣ ಭಟ್ಟ ಸ್ವಾಗತಿಸಿದರು. ಉಪಪ್ರಾಂಶುಪಾಲೆ ಸುಜಾತ ಹೆಗಡೆ ವೇದಿಕೆಯಲ್ಲಿದ್ದರು. ಗಣೇಶ ಜೋಶಿ ನಿರೂಪಿಸಿದರು. ಚಿದಾನಂದ ಭಂಡಾರಿ ವಂದಿಸಿದರು. ಇದೇ ಸಂದರ್ಭದಲ್ಲಿ ಕಲಾಂಜಲಿಯ ನಿಮಿತ್ತ ತಾಲೂಕಿನ ಹಾಗೂ ಹತ್ತಿರದ ಕೆಲ ಪ್ರೌಢಶಾಲೆಗಳಿಗೆ ನಡೆಸಿದ ವಿಜ್ಞಾನ ಸ್ಪರ್ಧೆಯ ಬಹುಮಾನವನ್ನು ವಿತರಿಸಲಾಯಿತು. ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸಾಂಸ್ಕೃತಿಕ ಚಟುವಟಿಕೆಗಳ ಸಂಚಾಲಕರು ಗಣಕ ವಿಜ್ಞಾನ ಉಪನ್ಯಾಸಕರಾದ ಗುರುರಾಜ ಶೆಟ್ಟಿಯವರು ಕಾರ್ಯಕ್ರಮವನ್ನು ಸಂಯೋಜಿಸಿದರು. ನಂತರ ನಡೆದ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ಗಮನಸೆಳೆಯಿತು. ಊರಿನ ಗಣ್ಯರು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ಕುಮಟಾ : ಕರ್ನಾಟಕ ಯಕ್ಷಗಾನ ಅಕಾಡೆಮಿಯ ನಿಕಟ ಪೂರ್ವ ಅಧ್ಯಕ್ಷ, ವಿಶ್ರಾಂತ ಕನ್ನಡ ಉಪನ್ಯಾಸಕ, ಯಕ್ಷಗಾನ ಕಲಾವಿದ, ನಾಟಕಕಾರ, ಯಕ್ಷಗಾನ ಸಂಶೋಧನಾ ಕೇಂದ್ರದ ಸಂಸ್ಥಾಪಕ ಡಾ. ಜಿ. ಎಲ್ ಹೆಗಡೆಯವರ ಅಭಿನಂದನಾ ಸಮಾರಂಭ ಹಾಗೂ ‘ಗುರುಗೌರವ ವರ್ಣ ವೈಭವ’ ಅಭಿನಂದನಾ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮ ಡಿ. 22 ಭಾನುವಾರ ಕುಮಟಾ ತಾಲೂಕಿನ ತಲಗೋಡದ ಶ್ರೀ ಜನಾರ್ಧನ ದೇವಸ್ಥಾನದ ಆವಾರದಲ್ಲಿ ನಡೆಯಲಿದೆ ಎಂದು ಅಭಿನಂದನಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
ಅಂದು ಬೆಳಗ್ಗೆ ೧೧ ಗಂಟೆಗೆ ಶ್ರೀಪಾದ ಭಟ್ಟ ಕಡತೋಕಾ, ಶೇಷಾದ್ರಿ ಅಯ್ಯಂಗಾರ್ ಮತ್ತು ಸಂಗಡಿಗರು ನಡೆಸಿಕೊಡುವ ‘ಗೀತ ರಾಮಾಯಣ’ ನಡೆಯಲಿದ್ದು ೧೨:೩೦ ಕ್ಕೆ ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯಲಿದೆ. ಪ್ರಸಾದ ಭೋಜನದ ನಂತರ ಮಧ್ಯಾಹ್ನ ೨ ಗಂಟೆಯಿಂದ ವಾಲಿ ಮೋಕ್ಷ ತಾಳಮದ್ದಳೆ ನಡೆಯಲಿದ್ದು ಗೋಪಾಲಕೃಷ್ಣ ಭಟ್ಟ ಜೋಗಿ, ಪಿ.ಕೆ ಹೆಗಡೆ ಹರಿಕೇರಿ, ಮಯೂರ ಹರಿಕೇರಿ, ಮೋಹನ ಹೆಗಡೆ ಹೆರವಟ್ಟಾ ನಾರಾಯಣ ಯಾಜಿ ಸಾಲಿಬೈಲು ಭಾಗವಹಿಸಲಿದ್ದಾರೆ.
ಮಧ್ಯಾಹ್ನ 4 ಗಂಟೆಗೆ ಅಭಿನಂದನಾ ಸಮಾರಂಭ ಹಾಗೂ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದ್ದು, ದಾಸ ಸಾಹಿತ್ಯ ಸಂಗೀತ ಕಲಾರತ್ನ ಡಾ. ವಿದ್ಯಾಭೂಷಣ, ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಕುಲಪತಿ ನಿರಂಜನ ವಾನಳ್ಳಿ, ಚಿಂತಕ ಹಾಗೂ ವಿದ್ವಾಂಸ ಲಕ್ಷ್ಮಿಶ ತೊಳ್ವಾಡಿ, ಖ್ಯಾತ ಯಕ್ಷಗಾನ ಕಲಾವಿದ ಡಾ. ಎಂ ಪ್ರಭಾಕರ ಜೋಶಿ ಭಾಗವಹಿಸಲಿದ್ದಾರೆ.
ಸಂಜೆ 7:30 ರಿಂದ ಯಕ್ಷಗಾನ ಭಸ್ಮಾಸುರ ಮೋಹಿನಿ ನಡೆಯಲಿದ್ದು, ಶಂಕರ್ ಹೆಗಡೆ ಬ್ರಹ್ಮೂರು, ನರಸಿಂಹ ಮೂರೂರು, ಕು. ರಾಮನ್, ವಿನಾಯಕ ಹೆಗಡೆ ಕಲಗದ್ದೆ, ನರಸಿಂಹ ಚಿಟ್ಟಾಣಿ, ಸದಾಶಿವ ಭಟ್ಟ ಮಳವಳ್ಳಿ, ವಿಘ್ನೇಶ ಹಾವ್ಗುಡಿ, ನಾಗೇಂದ್ರ ಮೂರೂರು, ರಮಕಾಂತ ಮೂರೂರು ಭಾಗವಹಿಸಲಿದ್ದಾರೆ.
ಈ ಕಾರ್ಯಕ್ರಮಕ್ಕೆ ಡಾ. ಜಿ.ಎಲ್. ಹೆಗಡೆಯವರ ಅಭಿಮಾನಿಗಳು, ಶಿಷ್ಯರು, ಬಂಧು, ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ವಿನಂತಿಸಲಾಗಿದೆ.
ಕುಮಟಾ : ಕೊಂಕಣ ಎಜುಕೇಶನ್ ನ ವಿದ್ಯಾರ್ಥಿಗಳು ಮಾಡಿದ ಸಾಧನೆ ಇತರ ವಿದ್ಯಾರ್ಥಿಗಳಿಗೂ ಪ್ರೇರಣೆ ನೀಡುವಂಥದ್ದು. ರಾಷ್ಟ್ರಮಟ್ಟದಲ್ಲಿ ತಾಲೂಕನ್ನೂ, ಜಿಲ್ಲೆಯನ್ನೂ, ತಮ್ಮ ಹುಟ್ಟೂರನ್ನೂ ಪ್ರತಿನಿಧಿಸಿ ಸಾಧನೆ ಮಾಡುವುದರ ಮೂಲಕ ನಾವೆಲ್ಲರೂ ಹೆಮ್ಮೆಪಡುವಂತೆ ಮಾಡಿದ ಇಂತಹ ಸಾಧಕರು ಪ್ರತಿಯೊಬ್ಬರ ಜೀವನದ ಸ್ಪೂರ್ತಿ ಚಿಲುಮೆಗಳು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಂದ್ರ ಎಲ್. ಭಟ್ಟ ಅಭಿಪ್ರಾಯಪಟ್ಟರು. ಅವರು ರಾಷ್ಟ್ರ ಮಟ್ಟದ ವಿವಿಧ ಸ್ಪರ್ಧೆಗಳಲ್ಲಿ ರಾಜ್ಯವನ್ನು ಪ್ರತಿನಿಧಿಸಿ ರಾಷ್ಟ್ರಮಟ್ಟದಲ್ಲಿ ಕರ್ನಾಟಕದ ಕೀರ್ತಿಯ ಕಹಳೆಯನ್ನು ಮೊಳಗಿಸಿದ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನ ಸಿವಿಎಸ್‌ಕೆ ಪ್ರೌಢಶಾಲೆಯ ಪ್ರತಿಭಾನ್ವಿತ ಸಾಧಕ ವಿಧ್ಯಾರ್ಥಿಗಳನ್ನು ಗೌರವಿಸುವ ಹಾಗೂ ಇತರರಿಗೆ ಪ್ರೇರಣೆ ಸಿಗಲೆಂದು ಹಮ್ಮಿಕೊಂಡ ಅಭಿಪ್ರೇರಣಾ ಜಾಥಾದಲ್ಲಿ ಭಾಗವಹಿಸಿ ಮಾತನಾಡಿದರು.
ಜೀವನದ ಇರುವಿಕೆ ಸಾಧನೆಗಾಗಿ ಏನನ್ನು ಸಾಧಿಸದ ಜೀವನ ವ್ಯರ್ಥ ಹಾಗಾಗಿ ಈ ವಿದ್ಯಾರ್ಥಿಗಳು ಚಿಕ್ಕವರಿರುವಾಗಲೇ ಎಲ್ಲರು ಹೆಮ್ಮೆಪಡುವಂತ ರಾಷ್ಟ್ರಮಟ್ಟದ ಸಾಧನೆಯನ್ನು ಮಾಡಿರುತ್ತಾರೆ. ದೃಢವಾದ ಆತ್ಮವಿಶ್ವಾಸ ಸತತ ಪ್ರಯತ್ನದಿಂದ ಯಶಸ್ಸನ್ನು ಗಳಿಸಿದ್ದಾರೆ. ಒಂಬತ್ತು ಪ್ರತಿಭೆಗಳು ಒಂಬತ್ತು ದ್ರುವತಾರೆಗಳ ಹಾಗೆ ಮಿಂಚುತ್ತಿದ್ದಾರೆ. ವಿದ್ಯಾರ್ಥಿಗಳು ವಿಜ್ಞಾನ ಚಟುವಟಿಕೆ, ಸಾಂಸ್ಕೃತಿಕ ಚಟುವಟಿಕೆ, ಕ್ರೀಡೆಯಲ್ಲಿ ಮಾಡಿದ ಸಾಧನೆ ಇತರ ಮಕ್ಕಳಿಗೆ ಮಾದರಿ ಹಾಗೂ ಪ್ರೇರಣೆಯಾಗಿದೆ. ಶಿಕ್ಷಣದ ಜೊತೆ ಸಂಸ್ಕಾರ ಎಂಬ ಕೊಂಕಣ ಶಿಕ್ಷಣ ಸಂಸ್ಥೆಯ ಆಶಯ ಸಾಕಾರಗೊಂಡಿದೆ ಎಂಬುದಕ್ಕೆ ವಿದ್ಯಾರ್ಥಿಗಳ ಸಾಧನೆ ಸಾಕ್ಷಿಯಾಗಿದೆ. ವಿದ್ಯಾರ್ಥಿಗಳ ಅಭೂತಪೂರ್ವ ಸಾಧನೆಗೆ ಬೆನ್ನೆಲುಬಾಗಿ ನಿಂತ ಸಂಸ್ಥೆಯವರನ್ನು, ಮುಖ್ಯಶಿಕ್ಷಕರನ್ನು, ಗುರುಗಳು ಹಾಗೂ ಪಾಲಕರ ವೃಂದದವರನ್ನು ಅಭಿವಂದಿಸಿ, ಸಾಧಕ ವಿದ್ಯಾರ್ಥಿಗಳ ಸಾಧನೆಯ ಯಶೋಗಾಥೆ ಹೀಗೆ ಮುಂದುವರೆಯಲಿ ಎಂದು ಶುಭ ಹಾರೈಸಿದರು.
ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನ ಗೌರವ ಕಾರ್ಯದರ್ಶಿಗಳಾದ ಮುರಳಿಧರ ಪ್ರಭು ಮಾತನಾಡಿ ಕುಮಟಾದ ಮಣ್ಣಿನ ಮೇಲೆ ನನಗೆ ಹೆಮ್ಮೆ. ಈ ಮಣ್ಣು ನವತಾರೆಗಳನ್ನು ನಮ್ಮ ಮುಂದೆ ತೆರೆದಿಟ್ಟಿದೆ. ಹಾಗಾಗಿ ಮೊದಲು ಈ ಮಣ್ಣಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಎನ್ನುತ್ತಾ, ಸಾಧನೆಯ ಶಿಖರವನ್ನು ಏರುವುದು ಸುಲಭದ ಕಾರ್ಯವಲ್ಲ ಇಂತಹ ಕಾರ್ಯವನ್ನು ಮಾಡಿದ ವಿದ್ಯಾರ್ಥಿಗಳಿಗೆ ಅಭಿನಂದನೆ. ಇಂತಹ ಮಕ್ಕಳನ್ನು ಪಡೆದ ಪಾಲಕರು ಧನ್ಯರು ಎಂದರು. ವಿದ್ಯಾರ್ಥಿಗಳ ಸಾಧನೆ ಉಳಿದ ತಾಲೂಕಿನ ಎಲ್ಲಾ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಉತ್ಸಾಹ ಚಿಮ್ಮುವಂತೆ ಮಾಡುವ ಅಸ್ತ್ರವಾಗಬೇಕು ಎಂಬುದೇ ಈ ಜಾಥಾದ ಉದ್ದೇಶ ಎಂದು ನುಡಿದರು.
ರಾಷ್ಟ್ರಮಟ್ಟದ ಸಾಧಕರಾದ ಕೃತಿಕಾ ಮಹೇಶ್ ಭಟ್ಟ, ಸಿಂಚನಾ ಜಿ.ಭಟ್ಟ, ಸ್ನೇಹ ಉದಯ ನಾಯ್ಕ, ದೀಪ್ತಿ ಚಂದ್ರಕಾಂತ್ ಪಂಡಿತ, ಆಸ್ತಾ ಮಧುಕರ ನಾಯಕ, ಯುಕ್ತಾ ಸತೀಶ್ ಗೌಡ ರಾಹುಲ ಮುರಳಿ ಭಟ್ಟ, ಸಾಕ್ಷಿ ಕೆ. ಎಸ್, ಪ್ರಥಮ ಮಹಾದೇವ ಗೌಡ ಇವರನ್ನು ಸನ್ಮಾನಿಸಿ, ಸಿಹಿನೀಡಿ ಸಂಭ್ರಮಿಸಲಾಯಿತು. ಅಭಿಪ್ರೇರಣಾ ಮೆರವಣಿಗೆಯು ಕುಮಟಾದ ಗಿಬ್ ಸರ್ಕಲ್ ನಿಂದ ಪ್ರಾರಂಭಗೊಂಡು ರಥಬೀದಿ, ಬಸ್ತಿಪೇಟೆ, ಮಾಸ್ತಿಕಟ್ಟಾ ಮಾರ್ಗವಾಗಿ ಮಣಕಿ ಮೈದಾನದಲ್ಲಿ ಮುಕ್ತಾಯಗೊಂಡಿತು.
ಕಾರ್ಯಕ್ರಮದಲ್ಲಿ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನ ಜಂಟೀ ಕಾರ್ಯದರ್ಶಿ ಶೇಷಗಿರಿ ಶಾನಭಾಗ, ವಿಶ್ವಸ್ಥರುಗಳಾದ ಅನಂತ ಶಾನಭಾಗ, ರಾಮಕೃಷ್ಣ ಗೋಳಿ, ದಾಸಾ ಶಾನಭಾಗ, ರಮೇಶ ಪ್ರಭು, ಶಿಕ್ಷಣ ಇಲಾಖೆಯ ವಿನಾಯಕ ವೈದ್ಯ, ಮುಖ್ಯಶಿಕ್ಷಕಿ ಸುಮಾ ಪ್ರಭು, ವಿಧಾತ್ರಿ ಅಕಾಡೆಮಿಯ ಗುರುರಾಜ ಶೆಟ್ಟಿ, ಸರಸ್ವತಿ ಪಿ.ಯು ಕಾಲೇಜಿನ ಪ್ರಾಂಶುಪಾಲ ಕಿರಣ ಭಟ್ಟ, ಕೊಂಕಣದ ಸಮೂಹ ಅಂಗ ಸಂಸ್ಥೆಗಳ ಮುಖ್ಯೋಪಾಧ್ಯಾಯರುಗಳು, ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನ ಶೈಕ್ಷಣಿಕ ಸಲಹೆಗಾರರು, ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿಗಳು ಸಾಧಕ ವಿದ್ಯಾರ್ಥಿಗಳ ಪಾಲಕರು, ಪ್ರೌಢಶಾಲೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಮುಖ್ಯಶಿಕ್ಷಕ ಗಣೇಶ ಜೋಶಿ ಕಾರ್ಯಕ್ರಮವನ್ನು ನಿರೂಪಿಸಿದರು.
ಕುಮಟಾ : ಗಾಂಜಾ ಮಾರಾಟ ಮಾಡುತ್ತಿದ್ದ ಓರ್ವನನ್ನ ಬಂಧಿಸಿ ಗಾಂಜಾ ಹಾಗೂ ಸ್ಕೂಟರ್ ವಶಕ್ಕೆ ಪಡೆದ ಘಟನೆ ಕೋಡ್ಕಣಿಯ ಕೋಟೆ ಕ್ರಾಸ್ ಬಳಿ ನಡೆದಿದೆ.
ಶರತ್ ಜರ್ನಾರ್ಧನ್ ನಾಯ್ಕ, ಬಂಧಿತ ಆರೋಪಿಯಾಗಿದ್ದಾನೆ. ಈತ ಕೋಡ್ಕಣಿ ಕೋಟೆ ಕ್ರಾಸ್ ಬಳಿ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಆಧಾರ ಮೇಲೆ ದಾಳಿ ನಡೆಸಿದ ಪಿಎಸ್‌ಐ ಸಾವಿತ್ರಿ ನಾಯಕ ಅವರು ದಾಳಿ ನಡೆಸಿ ಆರೋಪಿಯನ್ನ ಬಂಧಿಸಿ 10 ಸಾವಿರ ಬೆಲೆಯ 179ಗ್ರಾಂ ಗಾಂಜಾ ಹಾಗೂ ಮಾರಾಟಕ್ಕೆ ಬಳಸಿದ್ದ ಹೊಂಡಾ ಕಂಪನಿಯ ಡೊಯೋ ಸ್ಕೂಟರ್ ವಶಕ್ಕೆ ಪಡೆಯಲಾಗಿದೆ. ಬಂಧಿಯ ಆರೋಪಿ ಕಳೆದ ಅನೇಕ ದಿನಗಳಿಂದ ಬೇರೆ ಬೇರೆ ಭಾಗದ ಜನರಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಮಟಾ : ಮುಂಬೈ ಮಹಾನಗರಿಯ ನೆಹರು ವಿಜ್ಞಾನಕೇಂದ್ರದಲ್ಲಿ ನಡೆದ ರಾಷ್ಟ್ರಮಟ್ಟದ ವಿಜ್ಞಾನ ವಿಚಾರಗೋಷ್ಠಿಯಲ್ಲಿ, ಕರ್ನಾಟಕದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಕೊಂಕಣ ಎಜ್ಯುಕೇಶನ್ ಟ್ರಸ್ಟ್‌ನ ಸಿವಿಎಸ್‌ಕೆ ಪ್ರೌಢಶಾಲೆಯ ಹತ್ತನೇ ವರ್ಗದ ವಿದ್ಯಾರ್ಥಿನಿ ಕೃತಿಕಾ ಮಹೇಶ ಭಟ್ಟ ನ್ಯಾಶನಲ್ ರನ್ನರ್ ಅಪ್ ಆಗಿ ರಾಷ್ಟ್ರಮಟ್ಟದಲ್ಲಿ ಸಾಧನೆಗೈದಿದ್ದಾಳೆ.
ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ – ಪೊಟೆನ್ಷಿಯಲ್ಸ್ & ಕನ್ಸರ್ನ್ಸ್ ವಿಷಯದಡಿಯಲ್ಲಿ ಹಮ್ಮಿಕೊಂಡ ವಿಚಾರಗೊಷ್ಠಿಯಲ್ಲಿ, ಭಾರತದ ವಿವಿಧ ರಾಜ್ಯಗಳಿಂದ ಭಾಗವಹಿಸಿದ್ದ 32 ಪ್ರತಿಸ್ಪರ್ಧೆಗಳಲ್ಲಿ ಕೃತಿಕಾಳ ಪ್ರಸ್ತುತಿ ತೀರ್ಪುಗಾರರ ವಿಶೇಷ ಗಮನ ಸೆಳೆಯಿತು. ಪ್ರಶ್ನೋತ್ತರ ಸುತ್ತಿನಲ್ಲಿ ಎ.ಐ. ತಂತ್ರಜ್ಞಾನದ ಕುರಿತಾಗಿ ಕೇಳಿದ ಪ್ರಶ್ನೆಗಳಿಗೆ ಕೃತಿಕಾಳಿಂದ ಬಂದ ನೇರಾನೇರ ಉತ್ತರ ತೀರ್ಪುಗಾಗರರನ್ನು ಅವಾಕ್ಕಾಗಿಸಿತು. ಪ್ರಶ್ನೆ ಮುಗಿಸುವ ಮುನ್ನವೇ ಉತ್ತರವನ್ನೆಸೆಯಲು ತಾನು ಸಿದ್ಧಳಿದ್ದೇನೆ ಎನ್ನುವಷ್ಟರ ಮಟ್ಟಿಗಿನ ಕೃತಿಕಾಳ ಸ್ಪಂದನೆ ತೀರ್ಪುಗಾರರ ಮನಸೂರೆಗೊಂಡಿತು. ಸ್ಪರ್ಧೆಯ ಎಲ್ಲಾ ಸುತ್ತಿನಲ್ಲಿ ಉತ್ತಮ ಪೈಪೋಟಿ ನೀಡಿ, ಅಂತಿಮವಾಗಿ ಬಂದ ಫಲಿತಾಂಶದಲ್ಲಿ ತಮಿಳುನಾಡು ಪ್ರಥಮ ಸ್ಥಾನ ಪಡೆದರೆ, ಕರ್ನಾಟಕವನ್ನು ಪ್ರತಿನಿಧಿಸಿದ್ದ ಕೃತಿಕಾ ಎರಡನೇ ಸ್ಥಾನ ಪಡೆದು ರನ್ನರ್‌ಅಪ್ ಆಗಿ ಹೊರಹೊಮ್ಮಿ, ರೂ. 24,000 ನಗದು ಹಾಗೂ ಪ್ರಶಸ್ತಿಪತ್ರವನ್ನು ತನ್ನದಾಗಿಸಿ, ರಾಷ್ಟ್ರಮಟ್ಟದಲ್ಲಿ ಸಿವಿಎಸ್‌ಕೆ ಪ್ರೌಢಶಾಲೆಯ ಹೆಸರನ್ನು ರಾರಾಜಿಸುವಂತೆ ಮಾಡಿದ್ದಾಳೆ.
ಶಾಲೆಯ ವಿಜ್ಞಾನ ಶಿಕ್ಷಕಿಯರಾದ ಅಮಿತಾ ಗೋವೆಕರ್, ಜ್ಯೋತಿ ಭಂಡಾರಿ, ಹಾಗೂ ಅರ್ಚನಾ ನಾಯ್ಕ ಮಾರ್ಗದರ್ಶನದಲ್ಲಿ ಬಾಲಕಿ ಸಾಧನೆ ಮಾಡಿದ್ದಾಳೆ.
ಸಾಧಕಿಗೆ ಉಪ ನಿರ್ದೇಶಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕರೆ ಮಾಡಿ ಶುಭಾಶಯ ಕೋರಿದ್ದಾರೆ. ಶಾಲಾ ಆಡಳಿತ ಮಂಡಳಿ, ಮುಖ್ಯಾಧ್ಯಾಪಕಿ, ಶೈಕ್ಷಣಿಕ ಸಲಹೆಗಾರರು, ಶಿಕ್ಷಕ ವೃಂದದವರು ಅಭಿನಂದಿಸಿದ್ದಾರೆ.
ಕುಮಟಾ : ತಾಲೂಕಿನಿಂದ ಶಿರಸಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಮಗಾರಿ ನಡೆಯುತ್ತಿರುವುದರಿಂದ ಕಾಮಗಾರಿಗೆ ವೇಗ ನೀಡುವ ನಿಟ್ಟಿನಲ್ಲಿ ಡಿ. 2 ರಿಂದ 2025 ರ ಫೇ. 25 ವರೆಗೆ ಬಂದ್ ಆಗಲಿದ್ದು ಬದಲಿ ಮಾರ್ಗ ಸೂಚಿಸಲಾಗಿದೆ.
ಹಿಂದೆಯೂ ಕೆಲವು ಬಾರಿ ಇಲ್ಲಿಯ ರಸ್ತೆ ಬಂದ್ ಮಾಡುವ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಿ, ಮತ್ತೆ ನಿರ್ಣಯ ಬದಲಿಸಲಾಗಿತ್ತು ಇದೀಗ ಮತ್ತೊಮ್ಮೆ ಪ್ರಕಟಣೆ ಹೊರಬಿದ್ದಿದೆ.
ಬದಲಿ ಮಾರ್ಗ ಯಾವುದು?
ಕುಮಟಾ-ಶಿರಸಿ ಮೂಲಕ ಸಿದ್ದಾಪುರ ರಾಷ್ಟ್ರೀಯ ಹೆದ್ದಾರಿ 766-ಇ ಲಘು ವಾಹನಗಳು ಸಂಚರಿಸಬಹುದು.2. ಅಂಕೋಲಾ-ಶಿರಸಿ ಮೂಲಕ ಯಲ್ಲಾಪುರ ರಾಷ್ಟ್ರೀಯ ಹೆದ್ದಾರಿ 63 ಮತ್ತು ರಾಜ್ಯ ಹೆದ್ದಾರಿ-93 ಮಾರ್ಗವಾಗಿ ಎಲ್ಲಾ ವಿಧದ ವಾಹನಗಳು ಸಂಚರಿಸಬಹುದು.
ಅಂಕೋಲಾ-ಶಿರಸಿ ಮೂಲಕ ಯಲ್ಲಾಪುರ ರಾಷ್ಟ್ರೀಯ ಹೆದ್ದಾರಿ 63 ಮತ್ತು ರಾಜ್ಯ ಹೆದ್ದಾರಿ-93 ಮಾರ್ಗವಾಗಿ ಎಲ್ಲಾ ವಿಧದ ವಾಹನಗಳು ಸಂಚರಿಸಬಹುದು.
ಮಂಗಳೂರು-ಹೊನ್ನಾವರ-ಶಿರಸಿ ಮೂಲಕ ಸಿದ್ದಾಪುರ-ಮಾವಿನಗುಂಡಿ ಮಾರ್ಗವಾಗಿ ಎಲ್ಲಾ ವಿಧದ ವಾಹನಗಳು ಸಂಚರಿಸಬಹುದು.
ರಾಷ್ಟ್ರೀಯ ಹೆದ್ದಾರಿ-766 ಇ ಕುಮಟಾ-ಶಿರಸಿ ರಸ್ತೆಯಲ್ಲಿ ಉನ್ನತೀಕರಣ ಕಾಮಗಾರಿ ಸಮಯದಲ್ಲಿ ಮಾನ್ಯ ಜಿಲ್ಲಾಧಿಕಾರಿಗಳ ಆದೇಶದಂತೆ ಸೂಚಿಸಿರುವ ಬದಲಿ ಮಾರ್ಗದಲ್ಲಿ ಸಂಚರಿಸಿ ಸಹಕರಿಸುವಂತೆ ಸಾರ್ವಜನಿಕರಲ್ಲಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎಂ.ನಾರಾಯಣ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗೋಕರ್ಣ: ಜೀವ- ದೇವಾದ್ವೈತಕ್ಕೆ ಪೀಠಿಕೆಯಾಗಿ ಜೀವ- ಜೀವಗಳ ನಡುವಿನ ಅದ್ವೈತದ ಪ್ರತೀಕವೇ ಮಹಾಮಂಡಲೋತ್ಸವ. ಪ್ರತಿಭಾ ಪ್ರದರ್ಶನಕ್ಕೆ ಇದು ವೇದಿಕೆ. ನಮಗೆ ನಮ್ಮ ಅಂತರಂಗದ ಪ್ರತಿಭೆಯನ್ನು ತೋರಿಸಿಕೊಡುವ ವೇದಿಕೆ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀ ಮಹಾಸ್ವಾಮೀಜಿ ನುಡಿದರು. ಅಶೋಕೆಯ ಗುರುದೃಷ್ಟಿಯಲ್ಲಿ ಮೂರು ದಿನಗಳ ಕಾಲ ನಡೆದ ಹವ್ಯಕ ಮಹಾಮಂಡಲೋತ್ಸವ ಮಂಗಲ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಪರಮಪೂಜ್ಯರು ಆಶೀರ್ವಚನ ನೀಡಿದರು. ಮಹಾಮಂಡಲೋತ್ಸವ ಅತ್ಯಂತ ಯಶಸ್ವಿಯಾಗಿ ನಡೆದಿದ್ದು, ಸಮಾಜದ ಎಲ್ಲ ವಯೋಮಾನದವರು ಇಲ್ಲಿ ಭಾಗವಹಿಸಿ ಪರಸ್ಪರ ಖುಷಿಯನ್ನು ಹಂಚಿಕೊಂಡು ನಕ್ಕು ನಲಿಯುವ ಹಬ್ಬ. ಈ ಬಾರಿ ಇಂಥ ಮಹಾಮಂಡಲೋತ್ಸವಕ್ಕೆ ಶಕಟಪುರ ಶ್ರೀಗಳ ಸಾನ್ನಿಧ್ಯ ದೊರಕಿದೆ ಎಂದು ಬಣ್ಣಿಸಿದರು.
ಶಕಟಪುರ ಶ್ರೀಗಳ ಜತೆಗಿನ ಆತ್ಮೀಯ ಸಂಬಂಧವನ್ನು ಮೆಲುಕು ಹಾಕಿದ ಶ್ರೀಗಳು, ಹಲವು ಯತಿಗಳ ಜತೆ ಸಂವಾದ, ಭಾವಾದ್ವೈತ ನಡೆದರೂ, ಶಕಟಪುರ ಸ್ವಾಮೀಜಿಯವರ ಜತೆಗಿನ ಸಮಾಗಮ ಅವಿಸ್ಮರಣೀಯ. ಇದು ಮಠ, ಯತಿಗಳು ಮತ್ತು ಶಿಷ್ಯರ ನಡುವಿನ ಅದ್ವೈತ ಎಂದು ವಿಶ್ಲೇಷಿಸಿದರು. ವೃಷ ಎಂದರೆ ಧರ್ಮಸ್ವರೂಪ. ಇದನ್ನು ಧರ್ಮದ ಪ್ರತೀಕವಾಗಿ ಕೊಡುಗೆಯಾಗಿ ನೀಡಿದ್ದೇವೆ. ಸ್ವತ್ತುಗಳಿಗಿಂತ ಸಂಬಂಧ ದೊಡ್ಡದು. ಸಂಬಂಧ ಜೀವಚೈತನ್ಯವನ್ನು ಹೊಂದಿರಬೇಕು. ಸ್ವತ್ತುಗಳು ನಿರ್ಜೀವ ಎಂದು ವಿವರಿಸಿದರು. ಶಕಟಪುರ ಶ್ರೀಗಳ ಗೌರವಾರ್ಥವಾಗಿ ಸುವರ್ಣ ಮಂಟಪ ಸೇವೆಯನ್ನು ನೆರವೇರಿಸಲಾಗುತ್ತಿದೆ ಎಂದರು.
ಶ್ರೀಕ್ಷೇತ್ರ ಶಕಟಪುರಿ ಶ್ರೀ ಜಗದ್ಗುರು ಬದರೀ ಶಂಕರಾಚಾರ್ಯ ತೋಟದಾಚಾರ್ಯ ಶ್ರೀವಿದ್ಯಾಭಿನವ ಶ್ರೀಶ್ರೀಕೃಷ್ಣಾನಂದತೀರ್ಥ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ನಾಲ್ಕು ಪುರುಷುರಾರ್ಥ, ನಾಲ್ಕು ವೇದಗಳು, ನಾಲ್ಕು ಮುಕ್ತಿಗಳು, ಬ್ರಹ್ಮನ ನಾಲ್ಕು ಮುಖಗಳು ಪುರುಷರೂಪ ತಾಳಿ ಶಂಕರಾಚಾರ್ಯರ ನಾಲ್ವರು ಶಿಷ್ಯರನ್ನು ಕವಿಗಳು ಬಣ್ಣಿಸಿದ್ದಾರೆ. ಅಂಥ ಶಿಷ್ಯರನ್ನು ಹೊಂದಿದ ಶಂಕರರು ಸಾಕ್ಷಾತ್ ಪರಶಿವನ ಅವತಾರ. ಶಂಕರರ ನಾಲ್ವರು ಶಿಷ್ಯರು ಒಂದೊಂದು ಸಂದೇಶವನ್ನು ಜಗತ್ತಿಗೆ ಸಾರಿದವರು ಎಂದು ವಿವರಿಸಿದರು.
ಪಾಂಡಿತ್ಯ ಎಷ್ಟಿದ್ದರೂ ಗುರುಭಕ್ತಿ ಇಲ್ಲದಿದ್ದರೆ ಏನೂ ಪ್ರಯೋಜನವಿಲ್ಲ ಎಂದು ಆಚಾರ್ಯ ಪದ್ಮಪಾದಾಚಾರ್ಯರು ಜಗತ್ತಿಗೆ ತೋರಿಸಿಕೊಟ್ಟರು. ಹಸ್ತಾಮಲಕಾರ್ಯರು ಯೋಗಶಾಸ್ತ್ರಕ್ಕಿಂತ ಜ್ಞಾನಮಾರ್ಗ ಶ್ರೇಷ್ಠ ಎನ್ನುವುದನ್ನು ವಿಶ್ವಕ್ಕೆ ತೋರಿಸಿಕೊಟ್ಟರು. ಗುರುಭಕ್ತಿಯಿಂದ ಜ್ಞಾನ ಪಡೆಯಬಹುದು ಎಂಬುದನ್ನು ಸಾಧಿಸಿ ತೋರಿಸಿದವರು ತೋಟಕಾಚಾರ್ಯರು. ಆಚಾರ್ಯರ ವಯೋವೃದ್ಧ, ಜ್ಞಾನವೃದ್ಧ ಶಿಷ್ಯರು ಸುರೇಶ್ವರಾಚಾರ್ಯರು. ಕರ್ಮಮಾರ್ಗ ತ್ಯಾಗ ಮಾಡಿದಾಗ ಜ್ಞಾನ ಪ್ರಾಪ್ತಿಯಾಗುತ್ತದೆ ಎನ್ನುವುದನ್ನು ತೋರಿಸಿದವರು ಇವರು ಎಂದು ಬಣ್ಣಿಸಿದರು.
ಹನ್ನೆರಡು ವರ್ಷಗಳ ಹಿಂದೆ ಶ್ರೀರಾಮಚಂದ್ರಾಪುರ ಮಠ ಮತ್ತು ಶಕಟಪುರಿಯ ನಡುವೆ ಅವಿನಾಭಾವ ಸಂಬಂಧ ಏರ್ಪಟ್ಟಿತು. ಉಭಯ ಮಠಗಳ ಸ್ನೇಹಸಂಬಂಧ ಸ್ಥಿರವಾದದ್ದು. ಯಾರೂ ಬಿಡಿಸಲಾಗದಂಥದ್ದು. ಅಮೂಲ್ಯ, ಅನಘ್ರ್ನ ಸ್ನೇಹವನ್ನು ಹನ್ನೆರಡು ವರ್ಷಗಳ ಕಾಲ ಪ್ರತೀಕ್ಷೆ ನಡೆಸಿ ಪಡೆದಂಥದ್ದು ಎಂದು ಹೇಳಿದರು. ಶ್ರೀಕ್ಷೇತ್ರ ಹೊಸೂರಿನ ಕೃಷ್ಣಾತ್ಮಾನಂದ ಸರಸ್ವತಿ ಸ್ವಾಮೀಜಿ, ಶಕಟಪುರಿ ಆಡಳಿತಾಧಿಕಾರಿ ಎಂ.ಚಂದ್ರಮೌಳೀಶ್ವರ, ಶ್ರೀಮಠದ ರಾಘವ, ಹವ್ಯಕ ಮಹಾಮಂಡಲ ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆ, ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ಪದಾದಿಕಾರಿಗಳಾದ ಈಶ್ವರ ಪ್ರಸಾದ್ ಕನ್ಯಾನ, ಕೇಶವ ಪ್ರಸಾದ್ ಎಂ, ಜಿ.ಜಿ.ಹೆಗಡೆ ತಲೆಕೇರಿ, ವೀಣಾ ಗೋಪಾಲಕೃಷ್ಣ ಪುಳು, ರುಕ್ಮಾವತಿ ಸಾಗರ, ವೆಂಕಟೇಶ ಹಾರೇಬೈಲ್, ಶ್ರೀಮಠದ ಪ್ರಶಾಸನಾಧಿಕಾರಿ ಸಂತೋಷ ಹೆಗಡೆ, ವಿತ್ತಾಧಿಕಾರಿ ಜೆ.ಎಲ್.ಗಣೇಶ್, ವಿವಿವಿ ಸಮಿತಿ ಪ್ರಧಾನ ಕಾರ್ಯದರ್ಶಿ ನಾಗರಾಜ ಭಟ್ ಪೆದಮಲೆ, ವ್ಯವಸ್ಥಾ ಪರಿಷತ್ ಅಧ್ಯಕ್ಷ ಮಂಜುನಾಥ್ ಸುವರ್ಣಗದ್ದೆ, ಕಾರ್ಯದರ್ಶಿ ಶ್ರೀಕಾಂತ ಪಂಡಿತ್, ಹಿರಿಯ ಅಭಿಯೋಜಕರಾದ ಅರುಣ್‍ಶ್ಯಾಮ, ವಿವಿವಿ ಆಡಳಿತಾಧಿಕಾರಿ ಡಾ.ಟಿ.ಜಿ. ಪ್ರಸನ್ನ ಕುಮಾರ್, ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ವಿ.ಹೆಗಡೆ, ಜಿ.ಕೆ.ಹೆಗಡೆ ಮತ್ತಿತರರು ಉಪಸ್ಥಿತರಿದ್ದರು. ಹೊನ್ನಾವರ ಮಂಡಲ ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆಯಿತು. ವಿಷ್ಣುಗುಪ್ತ ವಿಶ್ವವಿದ್ಯಾಪೀಠ ರನ್ನರ್ ಅಪ್ ಪ್ರಶಸ್ತಿ ಪಡೆಯಿತು. ಪ್ರಶಾಂತ್ ಹೆಗಡೆ ಕಾರ್ಯಕ್ರಮ ನಿರೂಪಿಸಿದರು.
ಕ್ರೀಡೆ ಎನ್ನುವುದು ಮಿನಿ ಯುದ್ಧ; ಆದರೆ ಯುದ್ಧ ಸಂಬಂಧಗಳನ್ನು ಕೆಡಿಸಿದರೆ ಕ್ರೀಡೆ ಸಂಬಂಧಗಳನ್ನು ಬೆಸೆಯುವಂಥದ್ದು ಎಂದು ಹವ್ಯಕ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಶ್ರೀಗಳು ಅಭಿಪ್ರಾಯಪಟ್ಟರು. ನಾಡಿನ ವಿವಿಧೆಡೆಗಳಿಂದ ಆಗಮಿಸಿದ್ದ 700ಕ್ಕೂ ಹೆಚ್ಚು ಮಂದಿ ಕ್ರೀಡಾ ಹಾಗೂ ಬೌದ್ಧಿಕ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.
ಕುಮಟಾ : ಉತ್ತರ ಕನ್ನಡ ಜಿಲ್ಲೆಯ ಅಭಿವೃದ್ಧಿಗೆ ನಾವು ಒಂದಿಷ್ಟು ಕನಸು ಕಂಡಿದ್ದೇವೆ. ಜಿಲ್ಲೆಯು ಶೈಕ್ಷಣಿಕವಾಗಿ ಬೆಳೆಯಬೇಕು ಎಂಬುದಕ್ಕಾಗಿ ಕಾರ್ಯ ಮಾಡುತ್ತಿದ್ದೇವೆ. ಅದಕ್ಕೆ ಏಕ ಮನಸ್ಸಿನ ಅನೇಕರು ಕೈಜೋಡಿಸಬೇಕಾಗಿದೆ ಎಂದು ಡಾ.ಎ.ವಿ.ಬಾಳಿಗಾ ಕಲಾ-ವಿಜ್ಞಾನ ಪದವಿ ಕಾಲೇಜು ಅಲ್ಯುಮ್ನಿ ಟ್ರಸ್ಟ್ ಅಧ್ಯಕ್ಷ ಎಚ್. ಜಿ. ವಿಜಯಕುಮಾರ ಹೇಳಿದರು. ತಾಲೂಕಿನ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನ ಸಭಾಭವನದಲ್ಲಿ ನಡೆದ ವಾರ್ಷಿಕ ಸಭೆಯಲ್ಲಿ ಸಾಧಕ ಸನ್ಮಾನ ಹಾಗೂ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ ಮಾಡಿ ಅವರು ಮಾತನಾಡಿದರು.
ನಾವು ಕಂಡ ಕನಸನ್ನು ಸವಾಲಾಗಿ ಎದುರಿಸುವ ಧೈರ್ಯ ತೋರುವಂಥ ವಿಭಿನ್ನ ಶೈಕ್ಷಣಿಕ ಹಾಗೂ ಔದ್ಯೋಗಿಕ ವಾತಾವರಣ ಜಿಲ್ಲೆಯಲ್ಲಿ ನಿರ್ಮಾಣವಾಗಲು ಸಮಾನ ಮನಸ್ಕರು ಕೈ ಜೋಡಿಸಬೇಕು ಎಂದು ವಿನಂತಿಸಿದ ಅವರು, ಡಾ.ಎ.ವಿ.ಕಾಲೇಜಿನ ವಿವಿಧ ಅಂಗ ಸಂಸ್ಥೆಗಳಿಗೆ ಇದುವರೆಗೆ ಬೇರೆ ಉದ್ಯಮಿಗಳ ದಾನಿಗಳ ಸಿ.ಎಸ್.ಆರ್ ನಿಧಿ ಸೇರಿ ಅಲ್ಯುಮ್ಮಿ ಟ್ರಸ್ಟ್ ಅಂದಾಜು ಎರಡು ಕೋಟಿ ದೇಣಿಗೆ ನೀಡಿದೆ. ನಾವು ಓದಿದ ಕಾಲೇಜಿನಲ್ಲಿ ಶೈಕ್ಷಣಿಕ ಅಭಿವೃದ್ಧಿಯನ್ನು ಟ್ರಸ್ಟ್ ಮೂಲಕ ಮಾಡುವ ಗುರಿ ಹೊಂದಲಾಗಿದೆ. ಜೊತೆಗೆ ಉತ್ತರ ಕನ್ನಡದ ಇತರ ಸಂಸ್ಥೆಗಳು ಶಿಕ್ಷಣದಲ್ಲಿ ಹಿಂದೆ ಬೀಳಬಾರದು ಅಗತ್ಯ ಇರುವ ವಿದ್ಯಾರ್ಥಿಗಳಿಗೆ ಆರ್ಥಿಕವಾಗಿ ಹಾಗೂ ಶೈಕ್ಷಣಿಕ ಪ್ರಕ್ರಿಯೆ ಅಗತ್ಯವಾದ ವಸ್ತುಗಳನ್ನು ನೀಡುವುದರ ಮೂಲಕ ಶಾಲೆಗಳಿಗೆ ನೆರವಾಗುತ್ತಿದ್ದೇವೆ ಎಂದರು.
ಬಾಳಿಗಾ ಕಾಲೇಜಿನಲ್ಲಿ ಕಲಿತ ವಿದ್ಯಾರ್ಥಿಗಳೆಲ್ಲ ಸೇರಿಕೊಂಡು ಈ ಟ್ರಸ್ಟನ್ನು ಹುಟ್ಟು ಹಾಕಿದ್ದು ಈ ಮೂಲಕ ಜಿಲ್ಲೆಯ ಅಭಿವೃದ್ಧಿಯ ಕನಸು ಕಾಣುತ್ತಿದ್ದೇವೆ ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು.
ಕೊಂಕಣ ಎಜುಕೇಶನ್ ಟ್ರಸ್ಟ್ ಕಾರ್ಯದರ್ಶಿ ಮುರಳಿಧರ ಪ್ರಭು ಮಾತನಾಡಿ, ‘ನೆರೆಯ ಹುಬ್ಬಳ್ಳಿ, ಧಾರವಾಡ, ಇನ್ನೊಂದೆಡೆ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳ ಹೆಚ್ಚಿನ ಶಿಕ್ಷಣ ಸಂಸ್ಥೆಗಳಿಗಿಂತ 5 ಪಟ್ಟು ಹಳೆಯದಾದ ಶಿಕ್ಷಣ ಸಂಸ್ಥೆಗಳು ಉತ್ತರ ಕನ್ನಡದಲ್ಲಿ ಇದ್ದರೂ ಉತ್ತರ ಕನ್ನಡದಲ್ಲಿ ಶೈಕ್ಷಣಿಕವಾಗಿ ನಾವು ಇನ್ನಷ್ಟು ಕಾರ್ಯ ಮಾಡಬೇಕಾಗಿದೆ. ಮಳೆಯ ಜಿಲ್ಲೆಯವರು ಉತ್ತರ ಕನ್ನಡಕ್ಕೆ ಬಂದು ಶಿಕ್ಷಕರನ್ನು ಮೊದಲು ಕರೆದೊತ್ತಿದ್ದರು ಆದರೆ ಇದೀಗ ವಿದ್ಯಾರ್ಥಿಗಳನ್ನು ಹುಡುಕಿಕೊಂಡು ಜಿಲ್ಲೆಗೆ ಬಂದು ಲಕ್ಷ ಲಕ್ಷ ರೂಪಾಯಿಗಳ ವಿದ್ಯಾರ್ಥಿ ವೇತನ ನೀಡುವುದಾಗಿ ಘೋಷಣೆ ಮಾಡುತ್ತಾರೆ ನಮ್ಮ ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ಬೇರೆಡೆಗೆ ಹೋಗುವ ಅವಶ್ಯಕತೆ ಇದೆಯೇ? ನಮ್ಮ ಮಕ್ಕಳು ನಮ್ಮಲ್ಲಿಯೇ ಕಲಿಯುವ ವ್ಯವಸ್ಥೆಯನ್ನು ನಾವೇಕೆ ಹುಟ್ಟು ಹಾಕಬಾರದು? ಎಂದು ಪ್ರಶ್ನಿಸಿದರು.
ತಾಲೂಕಿನಲ್ಲಿರುವ ಎಲ್ಲಾ ಸಂಸ್ಥೆಗಳು ಒಂದಾಗಿ ಒಂದು ಚಿಂತನ ಸಭೆಯನ್ನು ನಡೆಸಬೇಕು. ಆ ಮೂಲಕ ಎಲ್ಲರೂ ಒಂದಾಗಿ ಕುಮಟಾವನ್ನು ಇಡೀ ಜಿಲ್ಲೆಯ ಶೈಕ್ಷಣಿಕ ಗುರುಕುಲವಾಗಿ ರೂಪಿಸಲು ಸಾಧ್ಯವಿದೆ. ಕಾಡುಗಳು ಹೆಚ್ಚಿರುವ ಉತ್ತರ ಕನ್ನಡ ಜಿಲ್ಲೆ, ನಿಜವಾಗಿಯೂ ಶೈಕ್ಷಣಿಕ ಗುರುಕುಲವಾಗಿ ಬೆಳೆಯಬೇಕು ಎಂಬುದು ನಮ್ಮ ಆಶಯ ಇದಕ್ಕೆ ಇಂತಹ ಟ್ರಸ್ಟ್ ಗಳು ಕಾರ್ಯೋನ್ಮುಖವಾದಲ್ಲಿ ನಾವೆಲ್ಲರೂ ಜೊತೆಗಿದ್ದೇವೆ ಎಂದು ಅವರು ಅಭಿಪ್ರಾಯಪಟ್ಟರು.
‘ತಾಲ್ಲೂಕಿನ ಹೆಚ್ಚಿನ ಸರ್ಕಾರಿ ಶಾಲೆಗಳಿಗೆ ಪ್ರತೀ ವರ್ಷ ಮೂಲ ಸದ ಸೌಲಭ್ಯ, ಶಿಕ್ಷಕರನ್ನು ನೀಡುತ್ತಿರುವ ಕೆ ಅಲ್ಯುಮ್ಮಿ ಟ್ರಸ್ಟ್ ಮಾದರಿಯಾಗುವಂಥ ಕೆಲಸಗಳನ್ನು ಮಾಡುತ್ತಿದೆ. ಇಲ್ಲಿ ಶೈಕ್ಷಣಿಕ ಕ್ರಾಂತಿ ಆರಂಭಿಸುವ ಬಗ್ಗೆ ಟ್ರಸ್ಟ್ ಸಮಾನ ಮನಸ್ಕರೊಂದಿಗೆ ಚಿಂತನೆ ನಡೆಸಬೇಕಿದೆ’ ಎಂದರು.
ಡಾ. ಎ.ವಿ.ಬಿ ಕಲಾ-ವಿಜ್ಞಾನ ಪದವಿ ಕಾಲೇಜು ನಿವೃತ್ತ ಪ್ರಾಧ್ಯಾಪಕ ಹಾಗೂ ಭಾರತೀಯ ವಿಜ್ಞಾನ ಸಂಸ್ಥೆಯ ಹಿರಿಯ ವಿಜ್ಞಾನಿ ಎಂ.ಡಿ.ಸುಭಾಶ್ಚಂದ್ರನ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಟ್ರಸ್ಟ್ ಕಾರ್ಯದರ್ಶಿ ಜ್ಯೋತಿ ಪೈ, ಉಪಾಧ್ಯಕ್ಷ ಅರುಣ ಪ್ರಭು, ಖಜಾಂಚಿ ಉಲ್ಲಾಸ ಅಬ್ಬಿಮನೆ, ಜಂಟೀ ಕಾರ್ಯದರ್ಶಿ ಜಯಶ್ರೀ ಶಿವಕುಮಾರ್ ವೇದಿಕೆಯಲ್ಲಿ ಇದ್ದರು.
ಡಾ. ಎ.ವಿ.ಬಾಳಿಗಾ ಸಂಸ್ಥೆಯ ಸಂಸ್ಥೆಯ ಎಲ್ಲ ಕಾಲೇಜುಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 151 ವಿದ್ಯಾರ್ಥಿಗಳಿಗೆ ಹಾಗೂ ತಾಲೂಕಿನ ವಿವಿಧ ಶಾಲೆಗಳ ಅರ್ಹ ಬಡ ವಿದ್ಯಾರ್ಥಿಗಳಿಗೆ ಒಟ್ಟೂ ರೂ. 9 ಲಕ್ಷಕ್ಕೂ ಅಧಿಕ ಮೊತ್ತದ ನಗದಿನ ಜೊತೆ ಸಾಧಕರಿಗೆ ಟ್ರೋಫಿ ನೀಡಿ ಪ್ರೋತ್ಸಾಹಿಸಲಾಯಿತು.
ಕುಮಟಾ : ಡಿಸೆಂಬರ್ ೨೭ ರಿಂದ ೨೯ ರವರೆಗೆ ಮೂರುದಿನಗಳ ಕಾಲ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅಖಿಲ ಹವ್ಯಕ ಮಹಾಸಭೆಯಿಂದ “ತೃತೀಯ ವಿಶ್ವ ಹವ್ಯಕ ಸಮ್ಮೇಳನ” ವನ್ನು ಹಮ್ಮಿಕೊಳ್ಳಲಾಗಿದೆ. ವಿಶೇಷ ಕಾರ್ಯಕ್ರಮಗಳು, ಸಾಧಕ ಸಮ್ಮಾನ, ಹವ್ಯಕರ ಸಂಸ್ಕೃತಿ ಬಿಂಬಿಸುವ ಕಾರ್ಯಗಳು ಸಂಯೋಜನೆಗೊಳ್ಳುತ್ತಿದ್ದು ಸಿದ್ಧತೆ ಪ್ರಾರಂಭವಾಗಿದೆ. ಎಲ್ಲಾ ಹವ್ಯಕರೂ ಹಾಗೂ ಇತರ ಸಮಾಜದ ಹವ್ಯಕ ಅಭಿಮಾನಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಿಸುವಂತೆ ಅಖಿಲ ಹವ್ಯಕ ಮಹಾಸಭೆಯ ಅಧ್ಯಕ್ಷ ಡಾ. ಗಿರಿಧರ ಕಜೆ ವಿನಂತಿಸಿದರು. ಇಲ್ಲಿನ ಕೊಂಕಣ ಎಜುಕೇಶನ್ ಟ್ರಸ್ಟಿನ ಸರಸ್ವತಿ ವಿದ್ಯಾಕೇಂದ್ರದ ಪ್ರಾಥಮಿಕ ಶಾಲೆಯ ಪ್ರಾರ್ಥನಾ ಮಂದಿರದಲ್ಲಿ ಭಾನುವಾರ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.
ಡಿಸೆಂಬರ್ ೨೭ ರಿಂದ ೨೯ ರವರೆಗೆ ಮೂರುದಿನಗಳ ಕಾಲ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅಖಿಲ ಹವ್ಯಕ ಮಹಾಸಭೆಯಿಂದ “ತೃತೀಯ ವಿಶ್ವ ಹವ್ಯಕ ಸಮ್ಮೇಳನ” ನಡೆಯಲಿದ್ದು, ಹವ್ಯಕ ಮಹಾಸಭೆ ೮೧ ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸಹಸ್ರಚಂದ್ರದರ್ಶನದ ಸಂಭ್ರಮೋತ್ಸವವಾಗಿಯೂ ಹವ್ಯಕ ಸಮ್ಮೇಳನಕ್ಕೆ ವಿಶೇಷ ಮೆರುಗಿನೊಂದಿಗೆ ಸಕಲ ಸಿದ್ಧತೆಗಳು ನಡೆಯುತ್ತಿದೆ ಎಂದು ಅವರು ವಿವರಿಸಿದರು.
೧೯೪೩ ರಲ್ಲಿ ಬ್ರಿಟೀಷರ ಆಳ್ವಿಕೆಯ ಕಾಲದಲ್ಲೇ ನೋಂದಾಯಿತವಾದ ಹವ್ಯಕ ಮಹಾಸಭೆಯು ದೇಶ-ವಿದೇಶಗಳು ಸೇರಿದಂತೆ ಒಟ್ಟಾರೆ 30,000 ಸದಸ್ಯ ಬಲಹೊಂದಿದೆ. ಸಮಾಜಕ್ಕೆ ಕ್ರಿಯೆಗಳನ್ನು ಅರ್ಥವಾಗಿಸುವ ದೃಷ್ಟಿಯಲ್ಲಿ, ಕೊಡಬೇಕಾದ ಪ್ರಾಮುಖ್ಯತೆಯ ಹಿನ್ನಲೆಯಲ್ಲಿ ಹವ್ಯಕ ಎಂದೂ ಹಿಂದೆ ಬಿದ್ದಿಲ್ಲ. ಇತ್ತೀಚಿನ ವರ್ಷಗಳಲ್ಲಿ ಹವ್ಯಕರ ಸಾಂಸ್ಕೃತಿಕ ಬದುಕನ್ನು ಸಮೃದ್ಧವಾಗಿ, ಸುಂದರವಾಗಿ ಕಟ್ಟಿಕೊಡುತ್ತಿರುವ ಯಶಸ್ಸು ಹವ್ಯಕಕ್ಕೆ ಸಲ್ಲುತ್ತದೆ. ನೆಲ ಸಂಸ್ಕೃತಿಯನ್ನು ಪೋಷಿಸುವ, ಹೊಸ ಹೊಸ ಸಾಧ್ಯತೆಯನ್ನು ಹುಡುಕುವ, ಸೃಜನಶೀಲ ಕಾರ್ಯಕ್ರಮಗಳ ಮೂಲಕ ಅಪಾರ ಜನಪ್ರಿಯತೆಯೊಂದಿಗೆ ಹೊಸ ಹೆಜ್ಜೆ ಇಟ್ಟಿದೆ. ಸಂಸ್ಕೃತಿಯನ್ನು ಉಳಿಸುವಲ್ಲಿ ಹಾಗೂ ಮುಂದಿನ ಪೀಳಿಗೆಗೆ ತಲುಪಿಸುವಲ್ಲಿ ವೈವಿಧ್ಯಮಯ ಸಂಸ್ಕಾರಗಳ ಬಾಗಿಲುಗಳನ್ನು ತೆರೆಯುತ್ತಾ, ಹವ್ಯಕತನವನ್ನು ಉಳಿಸುತ್ತಾ ಸಾಗಿರುವ ಒಂದೊಂದು ಕಾರ್ಯಕ್ರಮಗಳೂ ಹವ್ಯಕದ ಮೈಲುಗಲ್ಲುಗಳಾಗಿವೆ.
ಇಂತಹ ಕಾರ್ಯಕ್ರಮಗಳು ಇಂದು ಯುವಜನತೆಯನ್ನು ಹವ್ಯಕದ ಕಡೆ ವಿಶೇಷವಾಗಿ ಆಕರ್ಷಿಸುತ್ತದೆ. ಶೇಕಡಾ 80ಕ್ಕಿಂತಲೂ ಹೆಚ್ಚು ಉತ್ಸಾಹಿ ಕ್ರಿಯಾಶೀಲ ಯುವಕರು ಮಹಾಸಭೆಯೊಂದಿಗಿರುವುದು ಕಟ್ಟಿಕೊಂಡ ಸಂಘಟನೆಗೆ ಆನೆ ಬಲ ಬಂದಂತಾಗಿದೆ. ನಿಜವಾಗಲೂ ಸಂಸ್ಥೆಯ ಭವಿಷ್ಯದ ದೃಷ್ಟಿಯಿಂದ ಇದೊಂದು ಅರೋಗ್ಯಕರ ಬೆಳವಣಿಗೆ.
ಸಂಖ್ಯಾಬಲದಲ್ಲಿ ತೀರಾ ಕಡಿಮೆ ಇದ್ದರೂ ತನ್ನ ಪರಂಪರೆ, ಸಂಸ್ಕೃತಿ, ಸಂಪ್ರದಾಯ, ಭಾಷೆ ಹಾಗೂ ಬೌದ್ಧಿಕ ಪ್ರಬುದ್ಧತೆಯಿಂದ ವಿಶ್ವದೆಲ್ಲೆಡೆ ವಿಶೇಷವಾಗಿ ಗುರುತಿಸಿಕೊಂಡಿರುವ ಹವ್ಯಕ ಸಮುದಾಯದ ಸಾಧನೆ ಮತ್ತು ಸವಾಲುಗಳಿಗೆ ಸಮ್ಮೇಳನ ವೇದಿಕೆಯಾಗಲಿದೆ. ಈ ಸಮ್ಮೇಳನ ಹವ್ಯಕರಿಗೆ ಸೇರಿದ್ದಾದರೂ ಮೂರೂ ದಿನದ ಸಮಾರಂಭದಲ್ಲಿ ನಾಡಿನ ಎಲ್ಲ ಸಮುದಾಯದವರು ಪಾಲ್ಗೊಳ್ಳುವಂತೆ ಮುಕ್ತವಾಗಿ ಸಂಘಟಿಸಲಾಗಿದೆ. ಎಲ್ಲರೂ ಸೇರಿ ಹವ್ಯಕ ಹಬ್ಬ ಆಚರಿಸುವುದು ಹಾಗೂ ಇದೊಂದು ನಾಡಿನಹಬ್ಬವಾಗಬೇಕು ಎನ್ನುವುದು ನಮ್ಮೆಲ್ಲರ ಆಶಯವಾಗಿದೆ. ಈ ಬಾರಿ ಸಮ್ಮೇಳನದಲ್ಲಿ ಒಂದೂವರೆ ಲಕ್ಷಕ್ಕೂ ಹೆಚ್ಚು ಜನ ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ಸ್ಪರ್ಧೆಗಳು ಮತ್ತು ಸಾಧಕರಿಗೆ ಪ್ರಶಸ್ತಿ.
ಮಕ್ಕಳಿಗಾಗಿ ಹವ್ಯಕ ಸಂಸ್ಕೃತಿಯ ಚಿತ್ರ ಸ್ಪರ್ಧೆ, ರಂಗೋಲಿ ಸ್ಪರ್ಧೆ, ಹೂಕುಂಡ-ಇಕಬಾನ ಕಲಾಸ್ಪರ್ಧೆ, ಹವ್ಯಕ ಆಹಾರ ಸ್ಪರ್ಧೆ, ಹವ್ಯಕ ಸಂಪ್ರದಾಯ ಚಿತ್ರಕಲಾ ಸ್ಪರ್ಧೆ, ಕರಕುಶಲ ವಸ್ತು ಪ್ರದರ್ಶನ ಸ್ಪರ್ಧೆ, ಪಾರಂಪರಿಕ ವಸ್ತು ಪ್ರದರ್ಶನ ಸ್ಪರ್ಧೆಗಳು ಇರಲಿದೆ. ಸಾಧಕರಿಗೆ ಸಾಧಕರತ್ನ, ವೇದಮೂರ್ತಿಗಳಿಗೆ ವೇದರತ್ನ, ಶಿಕ್ಷಕರಿಗೆ ಶಿಕ್ಷಕರತ್ನ. ಕೃಷಿಕರಿಗೆ ಕೃಷಿರತ್ನ, ಸೈನಿಕರಿಗೆ ದೇಶರತ್ನ, ವಿದ್ಯಾರ್ಥಿಗಳಿಗೆ ವಿದ್ಯಾರತ್ನ, ಸಮಾಜಕ್ಕೆ ಸ್ಫೂರ್ತಿಯದವರಿಗೆ ಸ್ಫೂರ್ತಿ ರತ್ನ ಪ್ರಶಸ್ತಿಯಂತೆ ಪ್ರತಿವಿಭಾಗದಲ್ಲಿ ೮೧ ಜನರಂತೆ ಒಟ್ಟೂ ೫೬೭ ಜನರಿಗೆ ಪ್ರಶಸ್ತಿ ಸಹಿತ ಸನ್ಮಾನಿಸಲಾಗುವುದು.
ಕಾರ್ಯಕ್ರಮ ವೈವಿಧ್ಯಗಳು :
೮ ವಿಚಾರಗೋಷ್ಠಿಗಳು,
ಸ್ಮರಣ ಸಂಚಿಕೆ-ಕೃತಿಗಳ ಲೋಕಾರ್ಪಣೆ.
ಕಲೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ೩೦೦ ಕ್ಕೂ ಅಧಿಕ ಪ್ರಸಿದ್ಧ ಕಲಾವಿದರು ಭಾಗಿ.
ದಕ್ಷಿಣೋತ್ತರ ತಿಟ್ಟುಗಳ ಮೇರು ಕಲಾವಿದರ ಸಂಗಮದಲ್ಲಿ ಯಕ್ಷಗಾನ.
ಸಾವಿರಾರು ಜನರಿಂದ ವಾಕಥಾನ್, ಅಹಿಚ್ಛತ್ರದಿಂದ ಜ್ಯೋತಿಯ ಆಗಮನ, ರಕ್ತದಾನ, ವಸ್ತುಪ್ರದರ್ಶನ,
೬೦೦೦ಕ್ಕೂ ಹೆಚ್ಚು ಹವ್ಯಕ ಪುಸ್ತಕ ಪ್ರದರ್ಶನ, ಪಾಕೋತ್ಸವದಲ್ಲಿ ಹವ್ಯಕ ಅಡುಗೆ-ತಿಂಡಿಗಳ ವೈವಿಧ್ಯ, ಬೈಕ್ ರ್‍ಯಾಲಿ, ಗಾಯತ್ರೀ ಥೀಮ್ ಪಾರ್ಕ, ದೇಶೀ ಗೋಲೋಕ, ಯಕ್ಷಕಿರೀಟ ವೇಷಭೂಷಣ ಪ್ರದರ್ಶನ, ಛಾಯಾ ಚಿತ್ರ ಪ್ರದರ್ಶನ, ಯಾಗ ಮಂಡಲಗಳ ಪ್ರದರ್ಶನ.
೧೦೮ ವರ್ಷಗಳ ಪಂಚಾಂಗ ದರ್ಶನ ಮತ್ತು ಪೂಜಾ ವೈವಿಧ್ಯ, ಅಡಕೆ ಪ್ರಪಂಚ, ಕಬ್ಬಿನ ಆಲೆಮನೆ, ಗೊಂಬೆಗಳ ಆಟ.
ಆನೆ-ಕುದುರೆ-ಒಂಟೆ ಸವಾರಿ, ಹವ್ಯಕ ನಾಟಕ, ಸಂಗೀತ ಸಂಗಮ, ನಾಟ್ಯೋತ್ಸವ, ವಾದ್ಯ ವೈಭವ, ಗಾನಾಮೃತ, ಜಾದೂ ಪ್ರದರ್ಶನ, ವಾಣಿಜ್ಯ ಮಳಿಗೆಗಳಕೋಟ್
ಮಹಾಸಭೆಯ ನಿರ್ದೇಶಕ ಅರುಣ ಹೆಗಡೆ ಸ್ವಾಗತಿಸಿದರು. ಮಹಾಸಭೆಯ ಉಪಾಧ್ಯಕ್ಷ ಶ್ರೀಧರ ಭಟ್, ಕೋಶಾಧ್ಯಕ್ಷ ಕೃಷ್ಣಮೂರ್ತಿ, ಕಾರ್ಯದರ್ಶಿಗಳಾದ ಪ್ರಶಾಂತ ಭಟ್ಟ ಯಲ್ಲಾಪುರ, ಆದಿತ್ಯ ಹೆಗಡೆ ಕಲಗಾರ, ನಿರ್ದೇಶಕ ಆರ್. ಜಿ. ಹೆಗಡೆ ಇನ್ನಿತರರು ಇದ್ದರು.