Satwadhara News

Category: KUMTA

ಉತ್ತರಕನ್ನಡದ ಕುಮಟಾ ತಾಲೂಕಿನಲ್ಲಿ ನಡೆದ ಕಾರ್ಯಕ್ರಮಗಳ ವರದಿ ಮತ್ತು ಇನ್ನಿತರ ಘಟನಾವಳಿಗಳ ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ.

  • ಮಣಕಿ ಮೈದಾನದಲ್ಲಿ ನುಡಿಹಬ್ಬ : ನೆಲ, ಜಲದ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಲು ಗಣ್ಯರ ಕರೆ.

    ಮಣಕಿ ಮೈದಾನದಲ್ಲಿ ನುಡಿಹಬ್ಬ : ನೆಲ, ಜಲದ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಲು ಗಣ್ಯರ ಕರೆ.

    ಕುಮಟಾ : ಪಾಲಕರಲ್ಲಿ ಇಂಗ್ಲೀಷ್ ವ್ಯಾಮೋಹ ಹೆಚ್ಚುತ್ತಿದೆ. ಇದು ಕಳವಳಕಾರಿ ಸಂಗತಿಯಾಗಿದ್ದು, ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕಾದ ಅನಿವಾರ್ಯತೆ ಇದೆ. ನಮ್ಮ ನಾಡು, ನುಡಿ, ಭಾಷೆಗಾಗಿ ಕಾರ್ಯ ಮಾಡುವ ಮನಸ್ಸು ಎಲ್ಲರಲ್ಲಿಯೂ ಬರಬೇಕು ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು. 

    ಪಟ್ಟಣದ ಮಣಕಿ ಮೈದಾನದಲ್ಲಿ ಕನ್ನಡ ರಾಜ್ಯೋತ್ಸವ ಸಮಿತಿಯಿಂದ ಆಯೋಜಿಸಿದ್ದ ೧೪ನೇ ವರ್ಷದ “ನುಡಿ ಹಬ್ಬ-೨೦೨೩” ನ್ನು ದೀಪ ಬೆಳಗಿಸಿ, ಕನ್ನಡಾಂಬೆಗೆ ಪುಷ್ಪ ನಮನ ಸಲ್ಲಿಸಿ, ಡೊಲ್ಲು ಬಾರಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

     ಕಳೆದ ೧೩ ವರ್ಷಗಳಿಂದ ಎಂ ಜಿ ಭಟ್ಟ ನೇತೃತ್ವದಲ್ಲಿ ನುಡಿಹಬ್ಬವನ್ನು ವಿಶಿಷ್ಟವಾಗಿ ಮತ್ತು ವೈಭವದಿಂದ ಆಚರಿಸುತ್ತಾ, ಇದೀಗ ೧೪ನೇ ವರ್ಷಕ್ಕೆ ಕಾಲಿಟ್ಟಿರುವುದು ನಮಗೆಲ್ಲರಿಗೂ ಅಭಿಮಾನದ ಸಂಗತಿ. ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಎಲ್ಲ ಕನ್ನಡಿಗರೂ ಒಂದಾಗಬೇಕು ಎನ್ನುವುದು ಈ ಹಬ್ಬದ ಮೂಲ ಉದ್ದೇಶವಾಗಿದೆ. ಆಂಗ್ಲ ಭಾಷೆಯ ಮೇಲಿನ ವ್ಯಾಮೋಹ ಪಾಲಕರಲ್ಲಿ ಹೆಚ್ಚುತ್ತಿರುವುದು ಕಳವಳಕಾರಿ ಸಂಗತಿಯಾಗಿದ್ದು, ಕನ್ನಡದ ನೆಲ, ಜಲ, ಭಾಷೆ ರಕ್ಷಣೆಗೆ ನಾವೆಲ್ಲರೂ ಕಟಿಬದ್ಧರಾಗಬೇಕು ಎಂದು ಅವರು ಅಭಿಪ್ರಾಯಪಟ್ಟರು.

    ನುಡಿಹಬ್ಬ ಸಮಿತಿಯ ಗೌರವಾಧ್ಯಕ್ಷ, ಚಲನಚಿಕ್ರ ನಿರ್ಮಾಪಕ ಸುಬ್ರಾಯ ವಾಳ್ಕೆ ಮಾತನಾಡಿ ಕರ್ನಾಟಕದ ಏಕೀಕರಣ ಹೋರಾಟದ ಕುರಿತಾಗಿ ವಿಷಯ ನೌ ಪ್ರಸ್ತಾಪಿಸುತ ಹಿಂದಿನವರ ಹೋರಾಟದ ಫಲವಾಗಿ ನಾವೆಲ್ಲ ಒಂದಾಗಿದ್ದೇವೆ. ನಮ್ಮೊಳಗಿನ ವೈಮನಸ್ಸು ಮರೆತು ನಾವೆಲ್ಲರೂ ನಾಡು ಕಟ್ಟುವ, ಭಾಷೆಯನ್ನು ಪ್ರೀತಿಸುವ ಕಾರ್ಯ ಮಾಡಬೇಕು ಎಂದು ಅಭಿಪ್ರಾಯಪಟ್ಟರು. ಕನ್ನಡ ಉಳಿಯಬೇಕು, ಬೆಳೆಯಬೇಕು ಎಂದರೆ ಕನ್ನಡದವರು ಉಳಿಯಬೇಕು, ಕನ್ನಡದವರು ಬೆಳೆಯಬೇಕು. ಆಗ ಮಾತ್ರವೇ ಭಾಷೆಯ ಬೆಳವಣಿಗೆ ಸಾಧ್ಯ ಎಂದರು. ಆಯಾ ರಾಜ್ಯದ ಭಾಷೆಯೇ ಪ್ರಥಮ ಭಾಷೆಯಾಗಿ ಕಲಿಕೆ ಆಗಬೇಕು. ಕರ್ನಾಟಕದ ಹೆಸರನ್ನೇ ಬದಲಾಯಿಸಲು ಹೊರಟಿರುವುದು ಖೇಧಕರ. ಅದೆಲ್ಲವೂ ರಾಜಕೀಯ ದುರುದ್ದೇಶದಿಂದ ನಡೆಯುವುದು ಎಂದು ಅವರು ಅಭಿಪ್ರಾಯಪಟ್ಟರು.

    ಸಮಿತಿಯ ಕಾರ್ಯಾಧ್ಯಕ್ಷ ನಾಗರಾಜ ನಾಯಕ ತೋರ್ಕೆ ಮಾತನಾಡಿ ಉತ್ತರಕನ್ನಡ ಜಿಲ್ಲೆಯನ್ನು ಭಗವಂತ ಹೆಚ್ಚು ಪ್ರೀತಿಸಿದ ಜಿಲ್ಲೆ ಎಂದರೆ ತಪ್ಪಾಗಲಾರದು. ಯಾಕೆಂದರೆ ಕರಾವಳಿ, ಮಲೆನಾಡು, ಬಯಲುಸೀಮೆ ಒಳಗೊಂಡಿರುವ ಭೌಗೋಳಿಕವಾಗಿ ವಿಷಾಲವಾದ ಸಂಪದ್ಭರಿತ ಜಿಲ್ಲೆಯಾಗಿದೆ. ಎಲ್ಲ ಕ್ಷೇತ್ರದಲ್ಲಿಯೂ ಬುದ್ಧಿವಂತರಿರುವ ಜಿಲ್ಲೆ ನಮ್ಮದು. ಹಾಗಾಗಿ ಕನ್ನಡ ಭಾಷೆಯನ್ನು ಪ್ರೀತಿಸಿ, ಇತರ ಭಾಷೆಗಳಿಗೂ ಗೌರವ ನೀಡಬೇಕಿದೆ ಎಂದರು.

    ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಭಾಸ್ಕರ ಪಟಗಾರ ಮಾತನಾಡಿ ಆಯಾ ರಾಜ್ಯದಲ್ಲಿ ಆಯಾ ಭಾಷೆಗಳನ್ನು ಮಾತನಾಡುವ ಹಾಗೂ ಭಾಷೆಯ ಬಗ್ಗೆ ಅಭಿಮಾನ ಹೊಂದಿರುವ ಜನರಿದ್ದಾರೆ. ನಮ್ಮಲ್ಲಿ ಕನ್ನಡ ಬಿಟ್ಟು ಉಳಿದೆಲ್ಲ ಭಾಷೆಗಳನ್ನು ಮಾತನಾಡುತ್ತಾರೆ. ಭಾಷೆಯ ಬಗ್ಗೆ ಅಭಿಮಾನ ಇರದಿದ್ದರೆ ಮುಂದಿನ ದಿನಗಳಲ್ಲಿ ಭಾಷೆ ಬೆಳವಣಿಗೆ ಹೇಗೆ ಎಂದು ಅವರ ಪ್ರಶ್ನಿಸಿದ್ದರು.

    ಕನ್ನಡ ರಾಜ್ಯೋತ್ಸವ ಸಮಿತಿಯ ಅಧ್ಯಕ್ಷ ಎಂ. ಜಿ ಭಟ್ಟ ಪ್ರಾಸ್ತಾವಿಕ ಮಾತನಾಡಿ, ನಮ್ಮಲ್ಲಿರುವ ಬೇಧ-ಭಾವ ಮರೆತು ಕನ್ನಡದ ಹೆಸರಿನಲ್ಲಿ ನಾವೆಲ್ಲರೂ ಒಂದಾಗಬೇಕು ಎಂದು ಸತತ ಪ್ರಯತ್ನ ನಡೆಸುತ್ತಿದ್ದೇವೆ ಹಾಗೂ ಅದರಲ್ಲಿ ಯಶಸ್ಸು ಗಳಿಸುತ್ತಿದ್ದೇವೆ. ಕನ್ನಡದ ಎದುರು ನಾವೆಲ್ಲರೂ ಸರಿಸಮಾನರು ಎಂಬ ಕಾರಣಕ್ಕೆ ವೇದಿಕೆಯಲ್ಲಿ ಆಸನದ ವ್ಯವಸ್ಥೆಯಿರುವುದಿಲ್ಲ. ಎಲ್ಲರೂ ಒಂದೇ ಬಾರಿ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ ಎಂದರು.

    ಈ ಸಂದರ್ಭದಲ್ಲಿ ಸಂಗೀತ ಕಲಾವಿದ ಗೌರೀಶ ಯಾಜಿ, ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ನಾರಾಯಣ ಭಾಗ್ವತ, ಯಕ್ಷಗಾನ ಕಲಾವಿದ ಸುಬ್ರಹ್ಮಣ್ಯ ಹೆಗಡೆ ಕೋಣಾರೆ, ನಾಟಿ ವೈದ್ಯರಾದ ಈರು ಜಾಯು ಮರಾಠಿ, ಶೇಷು ಜಾಯು ಮರಾಠಿ ಅವರನ್ನು ಸನ್ಮಾನಿಸಲಾಯಿತು.

    ಕನ್ನಡ ನಾಡು ನುಡಿಯ ಬಗ್ಗೆ ನಿವೃತ್ತ ಡಯಟ್ ಉಪನ್ಯಾಸಕ ಬಿ.ಎಸ್ ಗೌಡ ಅವರು ಅಭಿಮಾನದ ನುಡಿಗಳನ್ನಾಡುವರು. 

    ವೇದಿಕೆಯಲ್ಲಿ ಜಿ.ಪಂ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ರತ್ನಾಕರ ನಾಯ್ಕ, ಸಾಮಾಜಿಕ ಕಾರ್ಯಕರ್ತ ಬಾಬು ನಾಯ್ಕ, ಸೇರಿದಂತೆ ಕನ್ನಡ ರಾಜ್ಯೋತ್ಸವ ಆಚರಣಾ ಸಮಿತಿಯ ಪದಾಧಿಕಾರಿಗಳಾದ ಆರ್.ಎನ್ ಹೆಗಡೆ, ಮಂಜುನಾಥ ನಾಯ್ಕ, ಗಣೇಶ ರಾಯ್ಕರ್, ಶಿವಾನಂದ ಮರಾಠಿ, ವೆಂಕಟೇಶ ಹೆಗಡೆ, ಜಯಾ ಶೇಟ್, ಪ್ರಕಾಶ ನಾಯ್ಕ, ಮಂಜುನಾಥ ಪಟಗಾರ ವಿವಿಧ ಕನ್ನಡ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. 

    ಶಿಕ್ಷಕರಾದ ಮಂಜುನಾಥ ನಾಯ್ಕ ಹಾಗೂ ಮಂಜುನಾಥ ಬಂಡಾರಿ ನಿರೂಪಿಸಿದರು. ಡಾನ್ಸ್ ಡಿವೋಟರ್ಸ್ ತಂಡದವರಿಂದ ವಿವಿಧ ಬಗೆಯ ನೃತ್ಯ ವೈಭವ ಹಾಗೂ ಖ್ಯಾತ ರಿಜಾಯ್ಸ್ ಮೆಲೋಡಿಸ್ ಸಂಗೀತ ಕಲಾವಿದರಿಂದ ನಡೆದ ರಸಮಂಜರಿ ಕಾರ್ಯಕ್ರಮ ಮಣಕಿ ಮೈದಾನದಲ್ಲಿ ಮೆರೆದ ಸಾವಿರಾರು ಪ್ರೇಕ್ಷಕರನ್ನು ರಂಜಿಸಿತು.

  • ಗೂಡಂಗಡಿಗೆ ನುಗ್ಗಿದ ಲಾರಿ – ಸಿನಿಮೀಯ ರೀತಿಯಲ್ಲಿ ಪಾರಾದ ಜನರು.

    ಗೂಡಂಗಡಿಗೆ ನುಗ್ಗಿದ ಲಾರಿ – ಸಿನಿಮೀಯ ರೀತಿಯಲ್ಲಿ ಪಾರಾದ ಜನರು.

    ಕುಮಟಾ : ಗೂಡಂಗಡಿ ಒಂದಕ್ಕೆ‌ ಲಾರಿ ನುಗ್ಗಿ ಗೂಡಂಗಡಿಯಲ್ಲಿದ್ದವರು ಅದೃಷ್ವಷಾತ್ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ತಾಲೂಕಿನ ಬರ್ಗಿ ಗ್ರಾಮದ‌ಲ್ಲಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿ ‌66ರ‌ ಕೆಳಭಾಗದಲ್ಲಿದ್ದ ಬರ್ಗಿಯ ಮಂಜುನಾಥ ಪಟಗಾರ ಎಂಬುವವರಿಗೆ ಸೇರಿದ್ದ ಗೂಡಂಗಡಿ ಇದಾಗಿದ್ದು, ಕುಮಟಾ ಕಡೆಯಿಂದ ಅಂಕೋಲಾ ಕಡೆ ಚಲಿಸುತ್ತಿದ್ದ ಲಾರಿ  ಅತೀವೇಗ ಹಾಗೂ ನಿರ್ಲಕ್ಷ್ಯದಿಂದ ಬಂದು ಹೆದ್ದಾರಿಯಿಂದ ಸಾಕಷ್ಟು ದೂರಲ್ಲಿ ಇದ್ದ ಗೂಡಂಗಡಿಗೆ ನುಗ್ಗಿದೆ. ಈ ವೇಳೆ ಅಂಗಡಿಯ ಒಳಗಡೆ ಕುಳಿತ್ತಿದ್ದ ಮಾಲೀಕ ಮಂಜುನಾಥ ಪಟಗಾರ ಸೇರಿ ಅಲ್ಲೆ‌ ಕುಳಿತ್ತಿದ್ದ ನಾಲ್ಕಕ್ಕೂ ಹೆಚ್ಚು ಮಂದಿ ಸಿನಿಮೀಯ ರೀತಿಯಲ್ಲಿ ಪ್ರಾಣಾಪಾಯದಿಂದ‌ ಪಾರಾಗಿದ್ದಾರೆ.

    ಅಂಗಡಿ ಒಳಗೆ ಲಾರಿ ನುಗ್ಗಿದ್ದು, ಅಂಗಡಿ ಜಖಂ ಆಗಿದ್ದು, ಲಾರಿ ಸಹ ಜಖಂ‌ ಆಗಿದೆ. ಅಂಗಡಿಗೆ ಲಾರಿ‌ ನುಗ್ಗಿರುವುದರಿಂದ ಐವತ್ತು ಸಾವಿರಕ್ಕೂ ಅಧಿಕ ಹಾನಿ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಮೆಡಿಕಲ್ ಕಾಲೇಜ್ ಹಾಗೂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕಾಗಿ ಆಗ್ರಹಿಸಿ ಪಾದಯಾತ್ರೆ ಪ್ರಾರಂಭಿಸಿದ ಅನಂತಮೂರ್ತಿ ಹೆಗಡೆ.

    ಮೆಡಿಕಲ್ ಕಾಲೇಜ್ ಹಾಗೂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕಾಗಿ ಆಗ್ರಹಿಸಿ ಪಾದಯಾತ್ರೆ ಪ್ರಾರಂಭಿಸಿದ ಅನಂತಮೂರ್ತಿ ಹೆಗಡೆ.

    ಅನಂತಮೂರ್ತಿ ಹೆಗಡೆ ಹಾದಿಗೆ ಜೊತೆಯಾದ ಜನತೆ: ಜಿಲ್ಲೆಯ ಬೇಡಿಕೆ ಈಡೇರಿಕೆಗೆ ಆರಂಭಗೊಂಡ ಪಾದಯಾತ್ರೆ

    ಶಿರಸಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಆಗಬೇಕು ಎನ್ನುವುದು ಜನರು ಬಹು ವರ್ಷಗಳ ಬೇಡಿಕೆ. ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆಯಿಲ್ಲದೇ ಸಾವಿರಾರು ಜನರು ಸಾವನ್ನಪ್ಪಿದ್ದಾರೆ. ಇನ್ನು ಜಿಲ್ಲೆಗೊಂದು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನ ನಿರ್ಮಿಸಿ ಜನರ ಜೀವವನ್ನ ಕಾಪಾಡಿ ಎಂದು ಸಾಮಾಜಿಕ ಕಾರ್ಯಕರ್ತ ಅನಂತ ಮೂರ್ತಿ ಹೆಗಡೆ ಪಾದಯಾತ್ರೆಯ ಮೂಲಕ ಸರ್ಕಾರವನ್ನ ಎಚ್ಚರಿಸುವ ಕೆಲಸಕ್ಕೆ ಮುಂದಾಗಿದ್ದಾರೆ.

    ಉತ್ತರ ಕನ್ನಡ ಜಿಲ್ಲೆ ರಾಜ್ಯದ ಗಡಿ ಜಿಲ್ಲೆ. ಗೋವಾ ಗಡಿಯಲ್ಲಿರುವ ಉತ್ತರ ಕನ್ನಡ ಭೌಗೋಳಿಕವಾಗಿ ಸಾಕಷ್ಟು ದೊಡ್ಡದಿದ್ದರೂ ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆಯೊಂದು ಇಲ್ಲದಿರುವುದು ಜನರಿಗೆ ದೊಡ್ಡ ಸಮಸ್ಯೆಯಾಗಿಯೇ ಕಾಡುತ್ತಿದೆ. ಇನ್ನು ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಬೇಕು ಎಂದು ಹಲವಾರು ವರ್ಷಗಳಿಂದ ಹೋರಾಟ ನಡೆಸುತ್ತಿದ್ದರು ಸರ್ಕಾರ ಮಾತ್ರ ಈ ಬಗ್ಗೆ ಗಮನಹರಿಸಿಲ್ಲ. ಜಿಲ್ಲೆಯಲ್ಲಿ ಅಪಘಾತ, ಹೃದಯಾಘಾತ, ಇನ್ನಿತರ ಗಂಭೀರ ಸಮಸ್ಯೆ ಆದರೆ ರೋಗಿಗಳನ್ನ ನೆರೆಯ ಉಡುಪಿ ಮಂಗಳೂರು, ಶಿವಮೊಗ್ಗ, ಗೋವಾ ಭಾಗದ ಆಸ್ಪತ್ರೆಗಳಿಗೆ ಕರೆದುಕೊಂಡು ಹೋಗುವ ಅನಿವಾರ್ಯ ಪರಿಸ್ಥಿತಿ ಇದೆ. ಎಷ್ಟೇ ಜನರು ದಾರಿ ಮಧ್ಯೆಯೇ ಸಾವನ್ನಪ್ಪಿದ ಘಟನೆ ಸಹ ಇದೆ. ಇನ್ನು ಜಿಲ್ಲೆಯಿಂದ ಬೇರೆ ಜಿಲ್ಲೆಯ ಆಸ್ಪತ್ರೆಗಳಿಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲಾಗದೇ ಸಾವನ್ನಪ್ಪಿದ ಘಟನೆಗಳು ಸಹ ಇದೆ. ಈ ನಿಟ್ಟಿನಲ್ಲಿ ಸರ್ಕಾರದ ಗಮನ ಸೆಳೆಯಲು ಶಿರಸಿಯ ಸಾಮಾಜಿಕ ಕಾರ್ಯಕರ್ತ ಅನಂತ್ ಮೂರ್ತಿ ಹೆಗಡೆ ಎನ್ನುವವರು ಪಾದಯಾತ್ರೆ ಮೂಲಕ ಮುಂದಾಗಿದ್ದಾರೆ. ಇಂದಿನಿಂದ ಏಳು ದಿನಗಳ ಕಾಲ ಪಾದಯಾತ್ರೆಯ ಮೂಲಕ ಸುಮಾರು 143 ಕಿಲೋ ಮೀಟರ್ ಸಂಚರಿಸಿ ಕಾರವಾರದಲ್ಲಿ ಹೋರಾಟ ನಡೆಸಲು ಮುಂದಾಗಿದ್ದು ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣದ ವರೆಗೆ ನಮ್ಮ ಹೋರಾಟ ಇರುತ್ತದೆ ಎಂದು ಅವರು ತಿಳಿಸಿದರು.

    ಇಂದಿನಿಂದ ಪಾದಯಾತ್ರೆ ಪ್ರಾರಂಭ ಮಾಡಿದ್ದು ದೇವಿಮನೆ ಘಟ್ಟದ ಮಾರ್ಗವಾಗಿ ಕುಮಟಾ, ಅಂಕೋಲಾ ಮೂಲಕ ಕಾರವಾರಕ್ಕೆ ನವೆಂಬರ್ 8ನೇ ತಾರೀಕು ತೆರಳಲಿದ್ದಾರೆ. ಆಟೋ ಚಾಲಕ ಮಾಲಕ ಸಂಘ, ನಿವೃತ್ತ ಸೈನಿಕರು, ಹಲವು ಸಂಘ ಸಂಸ್ಥೆಯವರು ಹಾಗೂ ಸಾರ್ವಜನಿಕರು ಈ ಪಾದಯಾತ್ರೆಗೆ ಬೆಂಬಲ ನೀಡಿದ್ದಾರೆ. ಇನ್ನು ಅನಂತ್ ಮೂರ್ತಿ ಹೆಗಡೆ ಕಳೆದ ಹಲವಾರು ವರ್ಷಗಳಿಂದ ಆಟೋ ಚಾಲಕರಿಗೆ ಉಚಿತ ಪಾಸ್ ವಿತರಣೆ, ಬಡ ರೋಗಿಗಳಿಗೆ ಸಹಾಯ, ಬಡ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ಸಹಾಯ ಹೀಗೆ ಹಲವು ಕಾರ್ಯಗಳನ್ನ ಮಾಡುತ್ತಾ ಬಂದಿದ್ದು ಸದ್ಯ ಜಿಲ್ಲೆಯ ಜನರ ಪ್ರಮುಖ ಬೇಡಿಕೆಯಾಗಿರುವ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಹೋರಾಟವನ್ನ ಪ್ರಾರಂಭಿಸಿದ್ದಾರೆ. ಇನ್ನು ಅನಂತ್ ಮೂರ್ತಿ ಹೆಗಡೆಯವರ ಹೋರಾಟ ಇತರರಿಗೆ ಮಾದರಿ, ಜಿಲ್ಲೆಯ ಸಂಸದರಾಗಿ ಇಂತಹ ಮನಸ್ಥಿತಿಯವರನ್ನ ಆಯ್ಕೆ ಮಾಡಬೇಕು ಎನ್ನುವುದು ಪಾದಯಾತ್ರೆಯಲ್ಲಿ ಪಾಲ್ಗೊಂಡ ಸಾರ್ವಜನಿಕರ ಅಭಿಪ್ರಾಯವಾಗಿದೆ.

    ಅನಂತ ಮೂರ್ತಿ ಹೆಗಡೆ ಅವರು ನಡೆಸುವ ಪಾದಯಾತ್ರೆಯ ಮಾರ್ಗದುದ್ದಕ್ಕೂ ಸಭೆಗಳನ್ನ ಮಾಡುವ ಮೂಲಕ ಜನರಲ್ಲಿ ಆಸ್ಪತ್ರೆ ನಿರ್ಮಾಣದ ಅಗತ್ಯತೆಯ ಅರಿವು ಮೂಡಿಸುವ ಕಾರ್ಯವನ್ನ ಸಹ ಮಾಡಲು ಮುಂದಾಗಿದ್ದಾರೆ. ಒಟ್ಟಿನಲ್ಲಿ ಉತ್ತರ ಕನ್ನಡ ಜಿಲ್ಲೆಯ ಜನರ ಬಹು ವರ್ಷಗಳ ಬೇಡಿಕೆ ಈಡೇರಿಕೆಗೆ ಪಾದಾಯಾತ್ರೆ ಮೂಲಕ ಗಮನ ಸೆಳೆಯಲು ಮುಂದಾಗಿರುವುದು ನಿಜಕ್ಕೂ ಉತ್ತಮ ಬೆಳವಣಿಗೆಯೇ. ಸರ್ಕಾರ ಈಗಲಾದರು ಎಚ್ಚೆತ್ತು ಜಿಲ್ಲೆಯ ಜನರಿಗೆ ಬೇಕಾಗಿರುವ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡಲು ಮುಂದಾಗಬೇಕಿದೆ.

    ಉತ್ತರ ಕನ್ನಡ ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜ್ ಹಾಗೂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕಾಗಿ ಆಗ್ರಹಿಸಿ ಅನಂತಮೂರ್ತಿ ಹೆಗಡೆ ನೇತೃತ್ವದಲ್ಲಿ ನಡೆಯಲಿರುವ ಪಾದಯಾತ್ರೆಯು ಮಾರಿಕಾಂಬಾ ದೇವಾಲಯಲ್ಲಿ ಶ್ರೀ ಮಾರಿಕಾಂಬೆಗೆ ಪೂಜೆ ಸಲ್ಲಿಸುವ ಮೂಲಕ ಆರಂಭಗೊಂಡಿದೆ.

    ಶಿರಸಿಯ ಶ್ರೀ ಮಾರಿಕಾಂಬಾ ದೇವಸ್ಥಾನದಿಂದ ಪ್ರಾರಂಭವಾಗುವ ಈ ಪಾದಯಾತ್ರೆಯು ಕಾರವಾರದ ಜಿಲ್ಲಾಧಿಕಾರಿ ಕಾರ್ಯಾಲಯದಲ್ಲಿ ನ.9 ರಂದು ಅಂತ್ಯಗೊಳ್ಳಲಿದೆ. ಉತ್ತರಕನ್ನಡ ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ನಡೆಯುವ ಈ ಪಾದಯಾತ್ರೆಯಲ್ಲಿ ಜಿಲ್ಲೆಯ ಹಲವು ಸಂಘಸಂಸ್ಥೆಗಳು, ಗಣ್ಯರು, ಸಾಮಾಜಿಕ ಕಾರ್ಯಕರ್ತರು ಹಾಗೂ ಸಹಸ್ರಾರು ಸಾರ್ವಜನಿಕರು ಪಾಲ್ಗೊಂಡಿದ್ದಾರೆ.

    ಶ್ರೀಗಳ ಭೇಟಿ.

    ಅನಂತಮೂರ್ತಿ ಹೆಗಡೆಯವರು ಇಂದು ಶ್ರೀ ಕ್ಷೇತ್ರ ಸ್ವರ್ಣವಲ್ಲಿಯಲ್ಲಿ ಶ್ರೀಗಳಾದ ಶ್ರೀ ಶ್ರೀ ಗಂಗಾದರೇಂದ್ರ ಸರಸ್ವತೀ ಸ್ವಾಮೀಜಿಯವರನ್ನು ಭೇಟಿ ಮಾಡಿ ಅವರಿಂದ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಶ್ರೀಗಳು ವಿಶೇಷ ಪೂಜೆ ನೆರವೇರಿಸಿ, ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು. ಇಂದಿನಿಂದ ಹಮ್ಮಿಕೊಂಡ ಜಿಲ್ಲೆಯಲ್ಲಿ ಎರಡು ಮೆಡಿಕಲ್ ಕಾಲೇಜು ಹಾಗೂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆಗೆ ಆಗ್ರಹಿಸಿ ಮಾಡುತ್ತಿರುವ ಪಾದಯಾತ್ರೆಗೆ ಶ್ರೀಗಳು ಔಪಚಾರಿಕವಾಗಿ ಚಾಲನೆ ನೀಡಿ ಪಾದಯಾತ್ರೆಗೆ ಶುಭ ಹಾರೈಸಿದರು.

    ನೆಗ್ಗು ಪಂಚಾಯತಿಗೆ ಆಗಮನ.

    ಅನಂತಮೂರ್ತಿ ಹೆಗಡೆಯವರ ನೇತೃತ್ವದಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಎರಡು ಮೆಡಿಕಲ್ ಕಾಲೇಜು ಮತ್ತು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಶಿರಸಿಯಿಂದ ಕಾರವಾರದವರೆಗೆ ಹಮ್ಮಿಕೊಂಡ ಪಾದಯಾತ್ರೆಯು ಇಂದು ಸಂಜೆ ಶಿರಸಿಯ ನೆಗ್ಗು ಪಂಚಾಯತ್ ಗೆ ಆಗಮಿಸಿದೆ. ಈ ಸಂದರ್ಭದಲ್ಲಿ ನೆಗ್ಗು ಗ್ರಾಮಸ್ಥರು ಅನಂತಮೂರ್ತಿ ಹೆಗಡೆಯವರಿಗೆ ಭವ್ಯ ಸ್ವಾಗತ ನೀಡಿದ್ದು, ಪಾದಯಾತ್ರೆ ನೈತಿಕ ಬೆಂಬಲ ನೀಡುವುದರ ಜೊತೆಗೆ ಪಾದಯಾತ್ರೆಗೆ ಶುಭ ಹಾರೈಸಿದರು.

  • ಮಹಿಳೆಯ ಮಾನಭಂಗಕ್ಕೆ ಯತ್ನ : ಆರೋಪಿಯನ್ನು ಬಂಧಿಸಿದ ಪೊಲೀಸರು.

    ಮಹಿಳೆಯ ಮಾನಭಂಗಕ್ಕೆ ಯತ್ನ : ಆರೋಪಿಯನ್ನು ಬಂಧಿಸಿದ ಪೊಲೀಸರು.

    ಹೊನ್ನಾವರ : ತಾಲೂಕಿನ ಬಳ್ಕೂರು ಗ್ರಾಮದ ಹೆಗ್ಗಾರ ಲಕ್ಷ್ಮೀ ವೆಂಕಟೇಶ ದೇವಸ್ಥಾನ ಹತ್ತಿರ ಮಹಿಳೆಯೊರ್ವಳನ್ನು ಮಾನಭಂಗಕ್ಕೆ ಯತ್ನಿಸಿದ ಘಟನೆ ನಡೆದಿತ್ತು ಈ ಘಟನೆಯ ಬೆನ್ನು ಹತ್ತಿದ ಪೊಲೀಸರು, ಮಹಿಳೆಯನ್ನು ಮಾನಭಂಗಕ್ಕೆ ಯತ್ನಿಸಿದ ಆರೋಪಿಯನ್ನು ಬಂಧಿಸುವಲ್ಲಿ ಯಶ್ವಸಿಯಾಗಿದ್ದಾರೆ.

    ಬಳ್ಕೂರಿನಿಂದ ಹೆಗ್ಗಾರ ಕಡೆಗೆ ಮಹಿಳೆ ನಡೆದುಕೊಂಡು ಹೋಗುತ್ತಿರುವ ಸಂದರ್ಭದಲ್ಲಿ ಕಳಿಗೆದ್ದೆ ಲಕ್ಷ್ಮೀ ವೆಂಕಟೇಶ ದೇವಸ್ಥಾನ ಸಮೀಪ ಅಪರಿಚಿತ ವ್ಯಕ್ತಿ ಹಿಂದಿನಿಂದ ಬಂದು ಬಾಯಿಗೆ ಕೈಯಿಂದ ಒತ್ತಿ ಹಿಡಿದು, ನೆಲಕ್ಕೆ ಬೀಳಿಸಿದ ಸಂದರ್ಭದಲ್ಲಿ ರಸ್ತೆಯಲ್ಲಿ ಜನರು ಬರುವುದನ್ನು ಕಂಡು ಆರೋಪಿ ಪರಾರಿಯಾಗಿದ್ದ. ಈ ಕುರಿತು ಮಂಕಿ ಪೊಲೀಸ್ ಠಾಣಿಯಲ್ಲಿ ಮಹಿಳೆ ದೂರು ನೀಡಿದ್ದಳು.

    ಇದೀಗ ಕುಮಟಾ ರೈಲ್ವೆ ನಿಲ್ದಾಣ ಸಮೀಪ ಬಿಹಾರ ಮೂಲದ ಬೋಲಾ( ರಾಹುಲ್) ಎನ್ನುವವನನ್ನು ಬಂಧಿಸಿ ನ್ಯಾಯಲಯಕ್ಕೆ ಹಾಜರುಪಡಿಸಿದ್ದಾರೆ.

  • ಕುಮಟಾದಲ್ಲಿ ವಿಜ್ರಂಭಣೆಯಿಂದ ಕನ್ನಡ ರಾಜ್ಯೋತ್ಸವ ಆಚರಣೆ : ಕಾಟಾಚಾರಕ್ಕೆ ಕಾರ್ಯಕ್ರಮ ಮಾಡಬೇಡಿ ಎಂದು ಅಧಿಕಾರಿಗಳಿಗೆ ಸೂಚಿಸಿದ ಶಾಸಕ ದಿನಕರ ಶೆಟ್ಟಿ.

    ಕುಮಟಾದಲ್ಲಿ ವಿಜ್ರಂಭಣೆಯಿಂದ ಕನ್ನಡ ರಾಜ್ಯೋತ್ಸವ ಆಚರಣೆ : ಕಾಟಾಚಾರಕ್ಕೆ ಕಾರ್ಯಕ್ರಮ ಮಾಡಬೇಡಿ ಎಂದು ಅಧಿಕಾರಿಗಳಿಗೆ ಸೂಚಿಸಿದ ಶಾಸಕ ದಿನಕರ ಶೆಟ್ಟಿ.

    ಕುಮಟಾ : ಕನ್ನಡವನ್ನು ನಾವು ಉಳಿಸಬೇಕಾಗಿದೆ, ಕನ್ನಡವನ್ನು ರಕ್ಷಣೆ ಮಾಡಬೇಕಾಗಿದೆ, ರಾಜ್ಯಕ್ಕಾಗಿ ಹೋರಾಟ ಮಾಡುವ ಅನಿವಾರ್ಯತೆ ಎದುರಾಗಿದೆ. ಹೀಗಾಗಿ ಇಂತಹ ಕಾರ್ಯಕ್ರಮವನ್ನು ಎಲ್ಲಾ ಇಲಾಖೆಯವರು ಹಾಜರಿದ್ದು ಚೆಂದದ ಕಾರ್ಯಕ್ರಮವನ್ನು ರೂಪಿಸಬೇಕು. ಎಂದು ಶಾಸಕ ದಿನಕರ ಶೆಟ್ಟಿ ಸಭೆಯಲ್ಲಿಯೇ ಅಧಿಕಾರಿಗಳಿಗೆ ಸೂಚನೆ ನೀಡಿದರು.

    ತಾಲೂಕಿನ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯವರು ಇಲ್ಲಿನ ಮಹಾತ್ಮಾ ಗಾಂಧಿ ಕ್ರೀಡಾಂಗಣದಲ್ಲಿ ಹಮ್ಮಿಕೊಂಡ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ನಮ್ಮ ಸುತ್ತಲ ರಾಜ್ಯಗಳನ್ನು ಗಮನಿಸಿದರೆ ಕೇರಳದಲ್ಲಿ ತಮಿಳುನಾಡಿನಲ್ಲಿ ಮಹಾರಾಷ್ಟ್ರಗಳಲ್ಲಿ ಅವರದೇ ಭಾಷೆ ಇದೆ ಅಲ್ಲಿರುವ ಎಲ್ಲರೂ ಅದೇ ಭಾಷೆಯನ್ನು ಮಾತನಾಡುತ್ತಾರೆ. ಆದರೆ ಈ ಹಿಂದೆ ಬೆಂಗಳೂರಿಗೆ ಹೋದರೆ ಇಂಗ್ಲೀಷ್ ನಲ್ಲಿ ಮಾತನಾಡುವ ಅನಿವಾರ್ಯತೆ ಇತ್ತು ನಾವು ಚಿಕ್ಕವರಿದ್ದಾಗಲೂ ಈ ಪರಿಸ್ಥಿತಿಯನ್ನು ಗಮನಿಸಿದ್ದೇವೆ ಆದರೆ ಈಗ ಕನ್ನಡದ ಬಗ್ಗೆ ಅಭಿಮಾನ ಎಲ್ಲರಲ್ಲಿಯೂ ಮೂಡಿದೆ. ಸಹ ಕಾರ್ಯಕ್ರಮವನ್ನು ಸರ್ಕಾರಿ ಇಲಾಖೆಯವರು ಕಾಟಾಚಾರಕ್ಕೆ ಮಾಡದೆ ಉತ್ತಮ ರೀತಿಯಲ್ಲಿ ಸಂಘಟಿಸಬೇಕು ಎಂದರು.

    ಅಧ್ಯಕ್ಷತೆ ವಹಿಸಿದ್ದ ಉಪವಿಭಾಗಾಧಿಕಾರಿ ಕಲ್ಯಾಣಿ ಕಾಂಬಳೆ ಮಾತನಾಡಿ ನಮ್ಮ ಕರುನಾಡು ಧೀಮಂತ ಪರಂಪರೆಯನ್ನು ಹೊಂದಿದೆ. 1956 ರಲ್ಲಿ ದಕ್ಷಿಣ ಭಾರತದ ಎಲ್ಲಾ ಕನ್ನಡ ಭಾಷೆ ಮಾತನಾಡುವ ಪ್ರದೇಶಗಳನ್ನು ವಿಲೀನಗೊಳಿಸಿ ಮೈಸೂರು ರಾಜ್ಯವನ್ನು ರಚಿಸಲಾಯಿತು. ಐತಿಹಾಸಿಕವಾಗಿ ಈ ನಾಡಿನ ಹೆಸರು ಕರುನಾಡು, ಎತ್ತರದ ಪ್ರದೇಶ ಎಂಬ ಅರ್ಥವನ್ನು ಇದು ಹೊಂದಿದೆ. ಕಪ್ಪು ಮಣ್ಣಿನ ನಾಡು ಇದು ಎಂದು ಉಲ್ಲೇಖವಾಗಿದೆ. ಕೆಂಗಲ್ ಹನುಮಂತಯ್ಯ, ದೇವರಾಜ್ ಅರಸು, ಆಲೂರು ವೆಂಕಟರಾಯರು ಮುಂತಾದ ನಾಯಕರನ್ನು ಸ್ಮರಿಸಿದ ಅವರು 1973 ನವಂಬರ್ 1 ರಂದು ಕರ್ನಾಟಕ ರಾಜ್ಯವೆಂದು ನಾಮಕರಣವಾದ ಸನ್ನಿವೇಶಗಳನ್ನು ಸ್ಮರಿಸಿಕೊಂಡರು.

    ವೇದಿಕೆಯಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಬಹುಮಾನ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಸಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

    ವೇದಿಕೆಯಲ್ಲಿ ತಹಶೀಲ್ದಾರ್ ಸತೀಶ ಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಂದ್ರ ಭಟ್ಟ, ಪೊಲೀಸ್ ನಿರೀಕ್ಷಕ ತಿಮ್ಮಪ್ಪ ನಾಯ್ಕ, ತಾಲೂಕಾ ಪಂಚಾಯತಿಯ ಕಾರ್ಯನಿರ್ವಹಣಾಧಿಕಾರಿ ನಾಗರತ್ನಾ ನಾಯಕ, ಪುರಸಭಾ ಮುಖ್ಯಾಧಿಕಾರಿ ವಿದ್ಯಾಧರ ಕಲಾದಗಿ, ಕನ್ನಡ ಸಾಹಿತ್ಯ ಪರಿಷತ್‌ ತಾಲೂಕ ಅಧ್ಯಕ್ಷ ಸುಬ್ಬಯ್ಯ ನಾಯ್ಕ, ರೋಟರಿ ಅಧ್ಯಕ್ಷರಾದ ಎನ್.ಆರ್ ಗಜು, ದೈಹಿಕ ಶಿಕ್ಷಣ ಪರಿವೀಕ್ಷಕ ಎಸ್.ಬಿ ನಾಯ್ಕ, ಪುರಸಭಾ ಸದಸ್ಯರು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ವೇದಿಕೆಯಲ್ಲಿದ್ದರು.

  • ಸರಸ್ವತಿ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ.

    ಸರಸ್ವತಿ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ.

    ಕುಮಟಾ : ಕೊಂಕಣ ಎಜುಕೇಶನ್ ಟ್ರಸ್ಟ್ ನ ಬಿ ಕೆ ಭಂಡಾರಕರ್ ಪದವಿಪೂರ್ವ ಕಾಲೇಜು ಹಾಗೂ ವಿದಾತ್ರಿ ಅಕಾಡೆಮಿ ಮಂಗಳೂರು ವತಿಯಿಂದ ಕನ್ನಡರಾಜ್ಯೋತ್ಸವ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

    ಕಾಲೇಜಿನ ವಿದ್ಯಾರ್ಥಿಗಳಿಂದ ಮನರಂಜನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಉಪನ್ಯಾಸಕಿ ದೀಕ್ಷಿತಾ ಕುಮಟಾಕರ್ ರಾಜ್ಯೋತ್ಸವದ ಕುರಿತು ಮಾತನಾಡಿದರು.

    ಕನ್ನಡ ಉಪನ್ಯಾಸಕ ಕಾಗಾಲ ಚಿದಾನಂದ ಭಂಡಾರಿ ನಾಡು ನುಡಿಯ ಕುರಿತಾದ ಅಭಿಮಾನದ ನುಡಿಗಳನ್ನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯ ಕಿರಣ ಭಟ್ಟ ವಹಿಸಿದ್ದರು. ಈ ಸಂದರ್ಭದಲ್ಲಿ ವಿಧಾತ್ರಿ ಅಕಾಡೆಮಿಯ ಸಹಸಂಸ್ಥಾಪಕರಾದ ಗುರುರಾಜ ಶೆಟ್ಟಿಯವರು, ಉಪಪ್ರಾಚಾರ್ಯೆ ಸುಜಾತಾ ಹೆಗಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

    ಕರ್ನಾಟಕ ನಕ್ಷೆಗೆ ದೀಪವನ್ನು ಹಚ್ಚಿ ತಾಯಿ ಭುವನೇಶ್ವರಿ ದೇವಿಗೆ ಪುಷ್ಪನಮನ ಸಲ್ಲಿಸಲಾಯಿತು. ಶಿವಾನಿ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು. ಭೂಮಿಕಾ ಹಾಗೂ ಸಂಗಡಿಗರು ನಾಡಗೀತೆ ಹಾಡಿದರು. ಉಪನ್ಯಾಸಕಿ ಶಿಲ್ಪಾ ನಾಯ್ಕ      ವಂದನಾರ್ಪಣೆ ಗೈದರು. ಉಪನ್ಯಾಸಕರು, ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

  • ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಮೆಡಿಕಲ್ ಕಾಲೇಜು ಸ್ಥಾಪನೆಗೆ ಒತ್ತಾಯಿಸಿ ಪಾದಯಾತ್ರೆ. : ಅನಂತಮೂರ್ತಿ ಹೆಗಡೆ ನೇತ್ರತ್ವದಲ್ಲಿ ನಾಳೆಯಿಂದ ಪ್ರಾರಂಭ.

    ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಮೆಡಿಕಲ್ ಕಾಲೇಜು ಸ್ಥಾಪನೆಗೆ ಒತ್ತಾಯಿಸಿ ಪಾದಯಾತ್ರೆ. : ಅನಂತಮೂರ್ತಿ ಹೆಗಡೆ ನೇತ್ರತ್ವದಲ್ಲಿ ನಾಳೆಯಿಂದ ಪ್ರಾರಂಭ.

    ಕಾರವಾರ : ಅನಂತಮೂರ್ತಿ ಹೆಗಡೆ ಮುಂದಾಳತ್ವದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಮೆಡಿಕಲ್ ಕಾಲೇಜು ಸ್ಥಾಪನೆಗಾಗಿ ನಾಳೆ ನವೆಂಬರ್ 02 ರಿಂದ 9ರ ವರೆಗೆ ಶಿರಸಿಯಿಂದ ಕಾರವಾರದ ತನಕ ನಡೆಯಲಿರವ ಪಾದಯಾತ್ರೆಗೆ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾಗಿರುವ ಕಾಶಿನಾಥ ಮೂಡಿ ಅವರು ಚಾಲನೆ ನೀಡಲಿದ್ದಾರೆ.

    ಅನಂತಮೂರ್ತಿ ಹೆಗಡೆ ಅವರ ಮುಂದಾಳತ್ವದಲ್ಲಿ ಈ ಪಾದಯಾತ್ರೆ ಆರಂಭವಾಗಲಿದೆ. ಮಲನಾಡಿನ ಹೆಬ್ಬಾಗಿಲು ಶಿರಸಿಯಲ್ಲಿ ಪಾದಯಾತ್ರೆಗೆ ಚಾಲನೆ ಸಿಗಲಿದ್ದು, ಶಿರಸಿಯಿಂದ ಕುಮಟಾ ತಲುಪಲಿದ್ದು, ನಂತರದಲ್ಲಿ ಕುಮಟಾದಿಂದ ದೀವಗಿ, ಮಿರ್ಜಾನ, ಬರ್ಗಿ, ಹಿರೇಗುತ್ತಿ, ಮಾದನಗೇರಿ ಮಾರ್ಗವಾಗಿ ಪಾದಯಾತ್ರೆ ಕಾರವಾರ ತಲುಪಲಿದೆ.

    ಪಾದಯಾತ್ರೆ ಉದ್ದಕ್ಕೂ ಸಾವಿರಾರು ಸಂಖ್ಯೆಯಲ್ಲಿ ಜನ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಜಿಲ್ಲೆಯ ಜ್ವಲಂತ ಸಮಸ್ಯೆಯಾಗಿರುವ ಮೆಡಿಕಲ್ ಆಸ್ಪತ್ರೆ ಕುರಿತಾಗಿ ಪಾದಯಾತ್ರೆ ಉದ್ದಕ್ಕೂ ಹೋರಾಟಗಾರು, ನ್ಯಾಯವಾದಿಗಳು, ಪತ್ರಕರ್ತರು,ರಾಜಕೀಯ ಪಕ್ಷದ ಮುಖಂಡರು ಹೆಜ್ಜೆ ಹಾಕಲಿದ್ದು,ಮೆಡಿಕಲ್ ಕಾಲೇಜು ಹಾಗೂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕುರಿತಾಗಿ ಸರಕಾರದ ಗಮನ ಸೆಳೆಯಲಿದ್ದಾರೆ.

  • ಬಂದ್ ಆಗಲ್ಲ ಶಿರಸಿ ಕುಮಟಾ ರಸ್ತೆ : ಖಡಕ್ ವಾರ್ನ ನೀಡಿದ ಮಂಕಾಳ ವೈದ್ಯ.

    ಬಂದ್ ಆಗಲ್ಲ ಶಿರಸಿ ಕುಮಟಾ ರಸ್ತೆ : ಖಡಕ್ ವಾರ್ನ ನೀಡಿದ ಮಂಕಾಳ ವೈದ್ಯ.

    ಕುಮಟಾ: ಶಿರಸಿ-ಕುಮಟಾ ರಸ್ತೆಯನ್ನು ಯಾವುದೇ ಕಾರಣಕ್ಕೂ ಬಂದ್‌ ಮಾಡುವುದಿಲ್ಲ. ಬಂದ್‌ ಮಾಡಿದರೆ ಅಂಥವರ ಮೇಲೆ ಕ್ರಮ ವಹಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ತಿಳಿಸಿದರು.

    ಕುಮಟಾದಲ್ಲಿ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು. ರಸ್ತೆ ಬಂದ್‌ ಮಾಡುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗಲಿದೆ. ಈ ಹಿನ್ನೆಲೆಯಲ್ಲಿ ಪಕ್ಕದಲ್ಲಿ ವಾಹನ ಓಡಾಟಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ ರಸ್ತೆ ಕಾಮಗಾರಿ ನಡೆಸಬೇಕು ಎಂದು ಆದೇಶಿಸಿದರು.

    ಈ ಸಂಬಂಧ ಒಂದು ಆದೇಶವನ್ನೇ ಹೊರಡಿಸಿ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್‌ ಅವರಿಗೆ ಸೂಚನೆ ನೀಡಿದರು.

    ಶಾಸಕ ದಿನಕರ ಶೆಟ್ಟಿ ಮಾತನಾಡಿ, ನಾನೂ ಸ್ಥಳ ಪರಿಶೀಲನೆ ಮಾಡಿದ್ದೆ. ಯಾವುದೇ ಕಾರಣಕ್ಕೂ ರಸ್ತೆ ಬಂದ್‌ ಮಾಡಬಾರದು ಎಂದು ಒತ್ತಾಯಿಸಿದ್ದೆ. ಏಕೆಂದರೆ, ರಸ್ತೆ ಕಾಮಗಾರಿ ಇನ್ನೂ ನಿರೀಕ್ಷೆಯಷ್ಟು ಮುಗಿದಿಲ್ಲ. ವಾಹನ ಓಡಾಟ ಬಂದ್‌ ಮಾಡಿದರೂ ಏಳು ತಿಂಗಳಲ್ಲಿ ರಸ್ತೆ ಕಾಮಗಾರಿ ಮುಗಿಸಲು ಸಾಧ್ಯವಿಲ್ಲ ಎಂದರು.

    ಶಿರಸಿ-ಕುಮಟಾ ರಾಷ್ಟ್ರೀಯ ಹೆದ್ದಾರಿ 766 ಇ ವಿಸ್ತರಣೆ ಕಾರ್ಯ ನಡೆಯುತ್ತಿದ್ದು, ರಸ್ತೆ, ಸೇತುವೆ ನಿರ್ಮಾಣಕ್ಕಾಗಿ ನವೆಂಬರ್‌ 1 ರಿಂದ 2024 ರ ಮೇ 31 ರವರೆಗೆ ರಸ್ತೆಯಲ್ಲಿ ಎಲ್ಲ ರೀತಿಯ ವಾಹನ ಸಂಚಾರ ಬಂದ್‌ ಮಾಡಲಾಗುವುದು ಎಂದು ಶಿರಸಿ ಎಸಿ ದೇವರಾಜ್‌ ಅವರು ಸಭೆ ನಡೆಸಿ ಪ್ರಕಟಣೆ ನೀಡಿದ್ದರು. ನಂತರ ಸಭೆ ನಡೆಸಿದ್ದ ಭೀಮಣ್ಣ ನಾಯ್ಕ ಸ್ಥಳೀಯ ವಾಹನಗಳ ಸಂಚಾರಕ್ಕೆ ಅವಕಾಶ ನೀಡುವಂತೆ ಸೂಚಿಸಿದ್ದರು

    ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್‌, ಜಿಂಪಂ ಸಿಇಒ ಈಶ್ವರ ಕಾಂದೂ ಇತರರು ಇದ್ದರು.

  • ಕುಮಟಾದ ಆಭರಣ ಚಿನ್ನಾಭರಣ ಮಳಿಗೆ ಮೇಲೆ ಐ.ಟಿ ದಾಳಿ?

    ಕುಮಟಾದ ಆಭರಣ ಚಿನ್ನಾಭರಣ ಮಳಿಗೆ ಮೇಲೆ ಐ.ಟಿ ದಾಳಿ?

    ಕುಮಟಾ : ತಾಲೂಕಿನ ಹೊಸ ಬಸ್ ನಿಲ್ದಾಣದ ಸಮೀಪದ ಆಭರಣಂ ಶಾಖೆಯ ಮೇಲೆ ಐ.ಟಿ ದಾಳಿ ನಡೆದಿದೆ. ಮಂಗಳವಾರ ಬೆಳ್ಳಂ ಬೆಳಗ್ಗೆ ದಾಳಿಗೆ ಮುಂದಾದ ತನಿಖಾ ತಂಡದ ಸದಸ್ಯರು. ಕ್ಯಾಶ್ ಕೌಂಟರ್, ವಿವಿಧ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.

    ಮಳಿಗೆ ಬಂದ್ ಮಾಡಿರುವ ಆಭರಣದ ಸಿಬ್ಬಂಧಿಗಳು ಇಂದಿನ ಎಲ್ಲಾ ವ್ಯವಹಾರ ನಿಲ್ಲಿಸಿದ್ದಾರೆ. ಎರಡು ಕಾರುಗಳಲ್ಲಿ ಬಂದ ತನಿಖಾ ತಂಡದ ಎಂಟಕ್ಕೂ ಹೆಚ್ಚು ಅಧಿಕಾರಿಗಳು ತನಿಖೆ ನಡೆಸಿದ್ದಾರೆ.

    ಮಳಿಗೆಯೊಳಗೆ ಯಾರನ್ನೂ ಪ್ರವೇಶ ಅವಕಾಶ ನೀಡದ ಅಧಿಕಾರಿಗಳು. ಅಲ್ಲಿನ ಸಿಬ್ಬಂಧಿಗಳನ್ನೂ ವಿಚಾರಿಸುತ್ತಿದ್ದಾರೆ.

  • ಯಕ್ಷೋತ್ಸವ ೨೦೨೩ ಸಂಪನ್ನ – ಅಭಿನೇತ್ರಿ ಟ್ರಸ್ಟ್ ಕಾರ್ಯದ ಬಗ್ಗೆ ಮೆಚ್ಚುಗೆ.

    ಯಕ್ಷೋತ್ಸವ ೨೦೨೩ ಸಂಪನ್ನ – ಅಭಿನೇತ್ರಿ ಟ್ರಸ್ಟ್ ಕಾರ್ಯದ ಬಗ್ಗೆ ಮೆಚ್ಚುಗೆ.

    ಕುಮಟಾ : ಹಿಂದಿನವರ ಹೃದಯ ಶ್ರೀಮಂತಿಕೆಯ, ತ್ಯಾಗದ ಫಲವಾಗಿ ನಮಗೆ ದೊರೆತಿರುವ ಯಕ್ಷಗಾನ ಕಲೆಯನ್ನು ನಾವು ಅನುಭವಿಸುತ್ತಿದ್ದು, ಭವಿಷ್ಯದ ಜನತೆಗೆ ಅದನ್ನು ದಾಟಿಸಬೇಕಾದ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ‌. ಆರಾಧನಾ ಪ್ರಧಾನವಾದ ಯಕ್ಷಗಾನ ಕಲೆಯನ್ನು ಅರ್ಥ ಪ್ರಧಾನವಾದ ದೃಷ್ಟಿಕೋನದಿಂದ ನೋಡಲಾಗುತ್ತಿರುವುದು ಬೇಸರದ ಸಂಗತಿ. ಯಾವ ಕಲೆ ಅರ್ಥ ಪ್ರಧಾನ ದೃಷ್ಟಿಕೋನದಲ್ಲಿ ಮುಂದೆ ಸಾಗುತ್ತಿದೆಯೋ ಅದಕ್ಕೆ ದೀರ್ಘಾಯುಷ್ಯ ಇರುವುದಿಲ್ಲ. ಹೀಗಾಗಿ ಯಕ್ಷಗಾನವನ್ನು ಉಳಿಸುವ ಹಾಗೂ ಅದರ ಮೌಲಿಕತೆಯನ್ನು ಮುನ್ನಡೆಸುವ ಕಾರ್ಯ ಮಾಡಬೇಕು ಎಂದು ನಿವೃತ್ತ ಉಪನ್ಯಾಸಕ, ಹವ್ಯಾಸಿ ಯಕ್ಷಗಾನ ಕಲಾವಿದ ಡಾ. ಎಂ.ಆರ್ ನಾಯಕ ಅಭಿಪ್ರಾಯಪಟ್ಟರು.

    ಅಭಿನೇತ್ರಿ ಆರ್ಟ್ ಟ್ರಸ್ಟ್ ನೀಲ್ಕೋಡ್ ಇದರ ಆಶ್ರಯದಲ್ಲಿ ತಾಲೂಕಿನ ಗೋಗ್ರೀನ್ ಮೈದಾನದಲ್ಲಿ ಮೂರು ದಿನಗಳ ಕಾಲ ನಡೆದ ‘ಅಭಿನೇತ್ರಿ ಯಕ್ಷೋತ್ಸವ-೨೦೨೩’ ರ ಕೊನೆಯ ದಿನವಾದ ರವಿವಾರ ಸಮಾರೋಪ ಸಮಾರಂಭ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

    ಯಕ್ಷಗಾನ ಆರಾಧನಾ ಕಲೆಯಾಗಿದ್ದು, ಪೂರ್ವಜರ ತ್ಯಾಗ ಹಾಗೂ ಅವರು ಉಳಿಸಿಕೊಂಡು ಬಂದ ಈ ಕಲೆಯನ್ನು ಮುಂದಿನ ಸಮಾಜಕ್ಕೆ ದಾಟಿಸುವ ಗುರುತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಇಂದಿನ ಜನತೆ ಮೊಬೈಲ್ ದಾಸರಾಗುತ್ತಿದ್ದು ಯಕ್ಷಗಾನ ನೋಡುವ ಪರಂಪರೆ ಕಡಿಮೆಯಾಗುತ್ತಿದೆ. ಯಕ್ಷಗಾನ ಕಲೆಯನ್ನು ಹೆಚ್ಚು ಹೆಚ್ಚು ನೋಡುವ ಪ್ರೇಕ್ಷಕ ವರ್ಗವನ್ನು ನಿರ್ಮಾಣ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಅವರು ಅಭಿಪ್ರಾಯಯಿಸಿದರು.

    ಕಲೆ ಸಮಾಜದ ಆಸ್ತಿಯಾಗಿರುವ ಕಾರಣ ಕಲೆಯನ್ನು ಉಳಿಸುವ ಕಾರ್ಯ ಪ್ರಜ್ಞಾವಂತ ಪ್ರೇಕ್ಷಕರಲ್ಲಿ ಇರಬೇಕು. ಅಸಂಬದ್ಧ ಪ್ರಲಾಪಗಳು ಯಕ್ಷಗಾನದಲ್ಲಿ ಬರದಂತೆ ನೋಡಿಕೊಳ್ಳುವ ಜವಾಬ್ದಾರಿ ಎಲ್ಲರದ್ದಾಗಿದೆ. ಕೇವಲ ಯಕ್ಷಗಾನ ಸಂಘಟನೆಯನ್ನು ಮಾಡುವುದರಿಂದ ಕಲೆಯು ಉಳಿಯುವುದಿಲ್ಲ. ಯಕ್ಷಗಾನ ನಿಖರ ಚೌಕಟ್ಟು ರೂಪಗೊಳ್ಳಬೇಕು. ಸಮಾಜದ ಆಸ್ತಿಯಾಗಿರುವ ಕೆಲೆಯನ್ನು ಬಳಸಿಕೊಂಡು ಕಲಾವಿದನು ಬೆಳೆಯಬೇಕು, ಕಲೆಯ ಮೌಲ್ಯಗಳು ಕುಸಿಯದಂತೆ ಅದನ್ನು ಬೆಳೆಸಬೇಕು.

    ಯಕ್ಷಗಾನ ಕಲೆ ಹಳ್ಳಿ ಹಳ್ಳಿಯಲ್ಲಿಯೂ  ಪ್ರಸ್ತುತವಾಗಿದೆ. ಯಕ್ಷಗಾನ ಮಾಡಿಸುವವರಿಗೆ ಹೆಚ್ಚಿನ ಖರ್ಚು ಬರುತ್ತಿದ್ದು, ಇದರಿಂದ ಮೂರು ಆಟಗಳು ಪಡೆಯುವಲ್ಲಿ ಒಂದು ಯಕ್ಷಗಾನ ಆಟಗಳು ನಡೆಯುತ್ತಿದೆ. ಆದರೆ ಮೂರೂ ಆಟದಷ್ಟು ಖರ್ಚು ಬರುತ್ತಿದೆ ಎಂದು ಎಂ.ಆರ್ ನಾಯಕ ಕಳವಳ ವ್ಯಕ್ತಪಡಿಸಿದರು. 

    ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನಿವೃತ್ತ ಉಪನ್ಯಾಸಕ ಹಾಗೂ ಸಾಹಿತಿ ಡಾ. ಶ್ರೀಪಾದ ಶೆಟ್ಟಿ ಮಾತನಾಡಿ ಉಸಿರಾಡಲಾಗದವರಿಗೆ ಉಸಿರು ನೀಡುವುದು, ಬಿದ್ದವರನ್ನು ಎದ್ದು ನಿಲ್ಲಿಸುವುದು, ಕೈಲಾಗದವರಿಗೆ ಸಹಾಯ ಮಾಡುವ ಕಾರ್ಯವನ್ನು ಅಭಿನೇತ್ರಿ ಟ್ರಸ್ಟ್ ಮಾಡುತ್ತಿದೆ. ಯಕ್ಷಗಾನದ ಕುರಿತಾಗಿ ಕಾರಂತರು ಮಾಡಿದ ಕಾರ್ಯವನ್ನೇ ಉತ್ತರ ಕನ್ನಡದಲ್ಲಿ ನೀಲ್ಕೋಡ ಶಂಕರ ಹೆಗಡೆಯವರು ಮಾಡುತ್ತಿದ್ದಾರೆ. ಇವ ನಮ್ಮವ ಎಂಬುದಾಗಿ ಸಾರ್ವಜನಿಕರು ಅವರನ್ನು ಒಪ್ಪಿದ್ದಾರೆ.

    ಯಾವುದೇ ಜಾತಿ ಮತ ಭೇದವಿಲ್ಲದೆ ಎಲ್ಲರೂ ಒಂದಾಗಿ ಮುನ್ನಡೆಯಬೇಕು ಕಲೆಯನ್ನು ಪೂಜಿಸಬೇಕು. ಯಕ್ಷಗಾನ ಕಲೆಯನ್ನು ಉಳಿಸುವ ನಿಟ್ಟಿನಲ್ಲಿ ಇಂತಹ ಸಂಘಟನೆಗಳು ಅಗತ್ಯವಾಗಿದ್ದು, ಎಲ್ಲರೂ ಇಂತಹ ಸಂಘಟನೆಗಳ ಜೊತೆಗೆ ಭಾಗಿಗಳಾಗಿ ಇನ್ನಷ್ಟು ಶಕ್ತಿ ತುಂಬಬೇಕು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

    ಕರಿಕಾನ ಪರಮೇಶ್ವರಿ ದೇವಾಲಯದ ಪ್ರಧಾನ ಅರ್ಚಕರಾದ ವೇ.ಸುಬ್ರಹ್ಮಣ್ಯ ಭಟ್ಟ ಮಾತನಾಡಿ ಕಲಾ ಸೇವೆಯನ್ನು ಮಾಡಿದವರಿಗೆ ಎಂದಿಗೂ ಸೋಲಾಗುವುದಿಲ್ಲ ಎನ್ನುವುದಕ್ಕೆ ಶಂಕರ ಹೆಗಡೆ ಉದಾಹರಣೆಯಾಗಿದ್ದಾರೆ. ದೈವೀ ಶಕ್ತಿ ಆರ್ಥಿಕ ಶಕ್ತಿ ಹಾಗೂ ಪ್ರೀತಿಯ ಶಕ್ತಿ ಅವರ ಜೊತೆಗೆ ಸೇರಬೇಕು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

    ಯಕ್ಷಗಾನ ಹಿಮ್ಮೇಳದ ಕಲಾವಿದ ಗಜಾನನ ಭಂಡಾರಿಯವರಿಗೆ ಸಂಸ್ಥೆಯ ವತಿಯಿಂದ ಸಹಾಯಧನ ನೀಡಲಾಯಿತು. ಈ ಬಾರಿಯ ಅಭಿನೇತ್ರಿ ಪ್ರಶಸ್ತಿಯನ್ನು ಹಿರಿಯ ಸ್ತ್ರೀ ವೇಷಧಾರಿ ದಯಾನಂದ ನಾಗೂರು, ಹಾಗೂ ಬೆಳೆಯೂರು ಕೃಷ್ಣಮೂರ್ತಿ ಪ್ರಶಸ್ತಿಯನ್ನು ಯಕ್ಷಗಾನದ ಹಿರಿಯ ಹಾಸ್ಯಗಾರರಾದ ಶ್ರೀಧರ ಹೆಗಡೆ ಚಪ್ಪರಮನೆ ಇವರಿಗೆ  ಹಾಗೂ ಕಣ್ಣಿ ಪ್ರಶಸ್ತಿಯನ್ನು ಹಿರಿಯ ಭಾಗವತ ಉಮೇಶ ಭಟ್ಟ ಬಾಡ ಇವರಿಗೆ  ಪ್ರದಾನ ಮಾಡಲಾಯಿತು. ಆಯಾಮ ಟ್ರಸ್ಟ್ ನವರು ಅಭಿನೇತ್ರಿ ಟ್ರಸ್ಟ್ ಗೆ ಬೆಂಬಲವಾಗಿ ಆರ್ಥಿಕ ಸಹಕಾರ ನೀಡಿದರು.

    ಅಭಿನೇತ್ರಿ ಟ್ರಸ್ಟ್ ಸಂಸ್ಥಾಪಕ ನಿಲ್ಕೋಡ ಶಂಕರ ಹೆಗಡೆ ಪ್ರಸ್ತಾವಿಕವಾಗಿ ಮಾತನಾಡಿದರು. ನಾಗರಾಜ ಹೆಗಡೆ ಸನ್ಮಾನಿತರನ್ನು ಪರಿಚಯಿಸಿದರು. ತೃಪ್ತಿ ಶಂಕರ ಹೆಗಡೆ ವಂದಿಸಿದರು. ಪ್ರಶಾಂತ ಹೆಗಡೆ ಮೂಡಲಮನೆ ನಿರೂಪಿಸಿದರು. ದ್ಯುತಿ ಹೆಗಡೆ ಭರತನಾಟ್ಯದ ಮೂಲಕ ಗಮನ ಸೆಳೆದಳು. ಸಭೆಯ ನಂತರ ಹಿರಿಕಿರಿಯ ಕಲಾವಿದರು ಪ್ರಸ್ತುತಪಡಿಸಿದ ಶ್ರೀಮತಿ ಪರಿಣಯ ಯಕ್ಷಗಾನ ಪ್ರೇಕ್ಷಕರ ಮನ ಗೆದ್ದಿತು.