Satwadhara News

Category: KUMTA

ಉತ್ತರಕನ್ನಡದ ಕುಮಟಾ ತಾಲೂಕಿನಲ್ಲಿ ನಡೆದ ಕಾರ್ಯಕ್ರಮಗಳ ವರದಿ ಮತ್ತು ಇನ್ನಿತರ ಘಟನಾವಳಿಗಳ ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ.

  • ಕಾರ್ಯಕರ್ತರೇ ಪಕ್ಷದ ಜೀವಾಳವಾಗಿದೆ : ದಿನಕರ ಶೆಟ್ಟಿ

    ಕಾರ್ಯಕರ್ತರೇ ಪಕ್ಷದ ಜೀವಾಳವಾಗಿದೆ : ದಿನಕರ ಶೆಟ್ಟಿ

    ಕುಮಟಾ : ದೇಶಕ್ಕಾಗಿ ಸದಾ ತುಡಿಯುವ ಹಾಗೂ ದುಡಿಯುವ ಹಂಬಲ ಹೊಂದಿರುವ ಬಿಜೆಪಿ ಕಾರ್ಯಕರ್ತರಿಂದ ಕಟ್ಟಲ್ಪಟ್ಟಿದ್ದು. ಕಾರ್ಯಕರ್ತರೇ ಪಕ್ಷದ ಜೀವಾಳವಾಗಿದೆ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.

    ಪಟ್ಟಣದ ನಾದಶ್ರೀ ಕಲಾಕೇಂದ್ರದಲ್ಲಿ ಕುಮಟಾ ಬಿಜೆಪಿ ಮಂಡಲದ ಸಂಘಟನಾ ಪರ್ವ-೨೦೨೪ರ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

    ಬಿಜೆಪಿಯನ್ನು ಕಟ್ಟಿ ಬೆಳೆಸಿ ಮುನ್ನಡೆಸುತ್ತಿರುವವರು ಕಾರ್ಯಕರ್ತರೇ ಆಗಿದ್ದಾರೆ. ದೇಶಕ್ಕಾಗಿ ಕಾರ್ಯ ಮಾಡುವ ಹಂಬಲ ಹೊಂದಿದ ಕಾರ್ಯಕರ್ತರು ಬಿಜೆಪಿಯನ್ನು ಮುನ್ನಡೆಸುತ್ತಿದ್ದಾರೆ. ಬಿಜೆಪಿಗೆ ಅವರೇ ಬಲವಾಗಿದ್ದು, ಅವರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳು ಸಂಯೋಜನೆಗೊಳ್ಳುತ್ತಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

    ಬಿಜೆಪಿಯಲ್ಲಿ ಯಾವುದೇ ಫಲಾಪೇಕ್ಷೆ ಇಲ್ಲದೇ ದುಡಿಯುವ ಕಾರ್ಯಕರ್ತರೇ ನಮ್ಮ ಶಕ್ತಿಯಾಗಿದ್ದು, ನಮ್ಮ ಕಾರ್ಯಕರ್ತರನ್ನು ಪ್ರೋತ್ಸಾಹಿಸುವ ಕಾರ್ಯವಾಗಬೇಕಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

    ಕಾರ್ಯಾಗಾರವನ್ನು ಬಿಜೆಪಿಯ ಕರ್ನಾಟಕದ ಮುಖ್ಯ ವಕ್ತಾರಾದ ಗಣೇಶ ಕಾರ್ಣಿಕ ಉದ್ಘಾಟಿಸಿ ಮಾತನಾಡಿ, ಪಕ್ಷದ ಉದ್ದೇಶವನ್ನು ಸದೃಢಗೊಳಿಸಲು ಮತ್ತು ಪಕ್ಷ ಸಂಘಟನೆಯನ್ನು ಬಲಪಡಿಸುವ ಕುರಿತು ವಿವರಿಸಿದರು.

    ಜಿಲ್ಲಾಧ್ಯಕ್ಷ ಎನ್. ಎಸ್ ಹೆಗಡೆ, ಜಿಲ್ಲಾ ಉಪಾಧ್ಯಕ್ಷ ಜಿ.ಎಸ್.ಗುನಗ, ಶಿಕ್ಷಣ ಪ್ರಕೋಷ್ಟದ ರಾಜ್ಯ ಸಹ ಸಂಚಾಲಕ ಎಂ. ಜಿ. ಭಟ್ಟ, ಪ್ರಮುಖರಾದ ಗುರುಪ್ರಸಾದ ಹೆಗಡೆ, ಗೋವಿಂದ್ ನಾಯ್ಕ, ಹಾಗೂ ಎಲ್ಲಾ ಮೋರ್ಚಾ ಪದಾಧಿಕಾರಿಗಳು, ಮಹಾಶಕ್ತಿ ಕೇಂದ್ರದ ಪ್ರಮುಖರು, ಶಕ್ತಿಕೇಂದ್ರದ ಪ್ರಮುಖರು, ಸಕ್ರಿಯ ಸದಸ್ಯತ್ವರು, ಶಕ್ತಿಕೇಂದ್ರ ಸಹಯೋಗಿಗಳು, ಪುರಸಭೆಯ ಸದಸ್ಯರು, ಗ್ರಾ.ಪಂ ಸದಸ್ಯರು ಉಪಸ್ಥಿತರಿದ್ದರು.

  • ಹೆದ್ದಾರಿ ಪಕ್ಕದಲ್ಲಿ ಕಂದಕಕ್ಕೆ ಇಳಿದ ಕಾರು

    ಹೆದ್ದಾರಿ ಪಕ್ಕದಲ್ಲಿ ಕಂದಕಕ್ಕೆ ಇಳಿದ ಕಾರು

    ಕುಮಟಾ : ಕಾರೊಂದು ಹೆದ್ದಾರಿ ಪಕ್ಕದ ಕಂದಕ್ಕೆ ಉರುಳಿ ಬಿದ್ದು, ಕಾರಿನಲ್ಲಿದ್ದ ಮೂವರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಕುಮಟಾ ಮಣಕಿ ಬಳಿ ಶನಿವಾರ ನಡೆದಿದೆ.

    ಮಹಾರಾಷ್ಟ್ರದಲ್ಲಿದ್ದ ಕೇರಳ‌ ಮೂಲದ ಮೂವರು ಸೇರಿಕೊಂಡು ಕಾರನಲ್ಲಿ ಕೇರಳಕ್ಕೆ ಪ್ರಯಾಣಿಸುತ್ತಿದ್ದರು. ಬೆಳಿಗ್ಗೆ 7ಗಂಟೆ ಸುಮಾರಿಗೆ ಕುಮಟಾ ಸಮೀಪ‌ ಚಲಿಸುತ್ತಿದ್ದ ವೇಳೆ ಎದುರಿಗೆ ಬಂದ ಜಾನುವಾರು ಒಂದನ್ನು ತಪ್ಪಿಸಲು ಹೋಗಿದ್ದರಿಂದ‌ ಹೆದ್ದಾರಿ ಪಕ್ಕದ ಸಮಾರು 30ಅಡಿ ಆಳಕ್ಕೆ ಉರುಳಿ ಬಿದ್ದಿದೆ.

    ಆದರೆ ಕಾರಿನದಲ್ಲಿ ಇದ್ದ ಮೂವರು ಸಹ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಬಗ್ಗೆ ಕುಮಟಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

  • ಹವ್ಯಕ ಮಹಾಮಂಡಲೋತ್ಸವಕ್ಕೆ ರಾಘವೇಶ್ವರ ಶ್ರೀ ಚಾಲನೆ

    ಹವ್ಯಕ ಮಹಾಮಂಡಲೋತ್ಸವಕ್ಕೆ ರಾಘವೇಶ್ವರ ಶ್ರೀ ಚಾಲನೆ


    ಗೋಕರ್ಣ: ಹವ್ಯಕ ಸಂಸ್ಕøತಿ- ಸಂಪ್ರದಾಯ, ಆಹಾರ- ವಿಹಾರ, ಆಚಾರ- ವಿಚಾರಗಳನ್ನು ಬಿಂಬಿಸುವ ಶ್ರೀರಾಮಚಂದ್ರಾಪುರ ಮಠದ ಹವ್ಯಕ ಮಹಾಮಂಡಲೋತ್ಸಕ್ಕೆ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿ ಶುಕ್ರವಾರ ಅಶೋಕೆಯ  ವಿದ್ಯಾನಂದ ಆವರಣದಲ್ಲಿ ಚಾಲನೆ ನೀಡಿದರು.


    ಪುಟ್ಟ ಮಗುವಿಗೆ ಸಿಹಿ ತಿನಿಸುವ ಮೂಲಕ, ಹವ್ಯಕ ಆಹಾರ ವೈವಿಧ್ಯವನ್ನು ಬಿಂಬಿಸುವ ಆಹಾರೋತ್ಸವಕ್ಕೆ ಶ್ರೀಗಳು ಚಾಲನೆ ನೀಡಿದರು. ಬಳಿಕ ಸಂಧ್ಯಾರಾಗ ಪರಿಕಲ್ಪನೆಯಡಿ ವಿದುಷಿ ಅನುಷಾ ಚೇಕೋಡ್ ಅವರ ಕರ್ನಾಟಕಿ ಸಂಗೀತ ಗಾಯನದೊಂದಿಗೆ ಸಂಗೀತೋತ್ಸವಕ್ಕೆ ಚಾಲನೆ ನೀಡಲಾಯಿತು. ಬಳಿಕ ವಿದುಷಿ ಸಿರಿ ಶರ್ಮಾ ಅವರಿಂದ ಶಾಸ್ತ್ರೀಯ ಸಂಗೀತ ಕಚೇರಿ ನಡೆಯಿತು. ವಯಲಿನ್‍ನಲ್ಲಿ ಜ್ಯೋತಿಲಕ್ಷ್ಮಿ ಅಮೈ ಮತ್ತು ಮೃದಂಗದಲ್ಲಿ ತಮನ್ ಎಕ್ಕಡ್ಕ ಸಾಥ್ ನೀಡಿದರು.


    ಬಳಿಕ ಕಾರ್ತೀಕ ಮಾಸದ ವಿಶೇಷ ಕಾರ್ಯಕ್ರಮವಾದ ದಾಮೋದರ ಆರತಿ ನಡೆಯಿತು. ಭಾಗವತದ 10ನೇ ಸ್ಕಂದದಲ್ಲಿ ಬರುವ ಶ್ರೀಕೃಷ್ಣನ ಬಾಲಲೀಲೆಗಳ ಕಥಾನಕವನ್ನು, ಗಲ್ಘ್ ದೇಶಗಳಲ್ಲಿ ಇಂಥ ನೂರಾರು ಭಕ್ತಿಪ್ರಧಾನ ಕಾರ್ಯಕ್ರಮಗಳನ್ನು ನಡೆಸಿಕೊಟ್ಟ ಸ್ವರ್ಣಗೌರಿ ಸಾಯ ವಿವಿವಿ ಮಕ್ಕಳಿಗೆ ಕಣ್ಣಿಗೆ ಕಟ್ಟುವಂತೆ ವಿವರಿಸಿದರು. ಶ್ರೀಗಳು ದಾಮೋದರ ಆರತಿ ನೆರವೇರಿಸುವ ಮೂಲಕ ಈ ವಿಶೇಷ ಕಾರ್ಯಕ್ರಮ ಸಂಪನ್ನಗೊಂಡಿತು.


    ಶ್ರೀಮಠದ ಪ್ರಶಾಸನಾಧಿಕಾರಿ ಸಂತೋಷ್ ಹೆಗಡೆ, ವಿತ್ತಾಧ್ಯಕ್ಷ ಗಣೇಶ್ ಜೆ.ಎಲ್, ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ಉಪಾಧ್ಯಕ್ಷ ಜಿ.ಎಸ್.ಹೆಗಡೆ, ರುಕ್ಮಾವತಿ ಸಾಗರ, ವಿದ್ಯಾರ್ಥಿ ಪ್ರಧಾನ ಈಶ್ವರ ಪ್ರಸಾದ್ ಕನ್ಯಾನ, ಯುವ ಪ್ರಧಾನ ಕೇಶವ ಪ್ರಕಾಶ್ ಎಂ, ಮಾತೃಪ್ರಧಾನರಾದ ವೀಣಾ ಗೋಪಾಲಕೃಷ್ಣ, ವಿವಿಧ ಮಂಡಲಗಳ ಅಧ್ಯಕ್ಷರಾದ ಮಹೇಶ್ ಚಟ್ನಳ್ಳಿ, ಮುರಳಿ ಗೀಜಗಾರ್, ಆರ್.ಜಿ.ಹೆಗಡೆ ಹೊಸಾಕುಳಿ, ಪದಾಧಿಕಾರಿಗಳಾದ ರಮೇಶ್ ಭಟ್ ಸರವು, ಕೇಶವ ಕಿರಣ, ವಿವಿವಿ ಸಮಿತಿ ಪ್ರಧಾನ ಕಾರ್ಯದರ್ಶಿ ನಾಗರಾಜ ಭಟ್ ಪೆದಮಲೆ, ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ. ಹೆಗಡೆ, ಅರವಿಂದ ಧರ್ಬೆ, ಲಲಿತಾ ಹೆಬ್ಬಾರ, ಪಾರ್ವತಿ ಹೆಬ್ಬಾರ, ವ್ಯವಸ್ಥಾ ಪರಿಷತ್ ಅಧ್ಯಕ್ಷ ಮಂಜುನಾಥ ಸುವರ್ಣಗದ್ದೆ, ಕಾರ್ಯದರ್ಶಿ ಶ್ರೀಕಾಂತ್ ಪಂಡಿತ್, ಮುಖಂಡರಾದ ಜಿ.ವಿ.ಹೆಗಡೆ, ಸ್ವಾತಿ ಭಾಗ್ವತ್, ಶ್ರೀಕಾರ್ಯದರ್ಶಿ ಮಧು ಜಿ.ಕೆ, ಶ್ರೀಮಠದ ಶಾಸ್ತ್ರಿಗಳಾದ ಸುಬ್ರಾಯ ಅಗ್ನಿಹೋತ್ರಿ,  ಮತ್ತಿತರರು ಉಪಸ್ಥಿತರಿದ್ದರು.


    ಉಂಡ್ಲಕಾಳು, ಹಲಸಿನ ಉಪ್ಪು ಸೊಳೆ ವಡೆ, ಮೈಸೂರುಪಾಕ್, ಸೆವೆನ್‍ಕಪ್, ಚಕ್ಕುಲಿ, ಖಾರಾ ಬೂಂದಿ, ಮನೋಹರಮ ತುಕ್ಕುಡಿ (ಶಂಕರಪೆÇೀಳೆ), ಬಾಳೆಕಾಯಿ ಚಿಪ್ಸ್, ಕಾರಕಡ್ಡಿ/ಸೇಮಿಗೆ, ಕಾಯಿವಡೆ, ಬೆಲ್ಲ + ತೆಂಗಿನಕಾಯಿ ಉಂಡೆ, ಅತಿರಸ, ಸುಕ್ಕಿನುಂಡೆ, ನೇಂದ್ರ ಚಿಪ್ಸ್, ಚಾಕೊಲೇಟ್ ಕಡಿ, ಸೋಂಪಾ ಪುಡಿ, ಕೋಡುಬಳೆ, ಖಾರಾ ಶೇವ್, ಪಪ್ಪಾಯಿ ಸಿಹಿ (ಹಲ್ವ), ನಿಪ್ಪಟ್ಟು, ಬಾಳೆ ಹಣ್ಣಿನ ಹಲ್ವ, ಬೂಂದಿ ಲಾಡು, ಅವಲಕ್ಕಿ ಚುಡುವಾ, ರವೆ ಉಂಡೆ, ಮಿಶ್ಚರ್, ಕಾಯಿ ಹೋಳಿಗೆ, ಗೋಡಂಬಿ ಚಿಕ್ಕಿ, ಕ್ಯಾರೆಟ್- ತೆಂಗಿನಕಾಯಿ ಬರ್ಫಿ, ಇದರ ಜತೆಗೆ ಬಿಸಿ ಬಿಸಿ ದೋಸೆ, ಜಿಲೇಬಿ, ಬಿಸ್ಕೆಟ್ ರೊಟ್ಟಿ, ಬೇಯಿಸಿದ ಶೇಂಗಾ, ಹಲಸಿನ ಎಲೆಯ ಕೊಟ್ಟೆ ಕಡುಬು ಹೀಗೆ ಹವ್ಯಕರ ಆಹಾರ ಪದ್ಧತಿಯ ವೈವಿಧ್ಯಮಯ ತಿಂಡಿ ತಿನಸುಗಳು ಈ ಮೇಳದಲ್ಲಿ ಪ್ರದರ್ಶನ ಮತ್ತು ಮಾರಾಟಕ್ಕಿವೆ.
    ಮಹಾಮಂಡಲೋತ್ಸವ ಮಹಾಮಂಡಲ ವ್ಯಾಪ್ತಿಯ ಎಲ್ಲ 11 ಮಂಡಗಳಿಂದ ಆಗಮಿಸುವ ಐದು ಸಾವಿರಕ್ಕೂ ಹೆಚ್ಚು ಶಿಷ್ಯಭಕ್ತರು, ಯುವಕರು, ವಿದ್ಯಾರ್ಥಿಗಳು ಈ ಬೃಹತ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.


    ವಲಯ ಮತ್ತು ಮಂಡಲ ಮಟ್ಟದಲ್ಲಿ ನಡೆದ ವಿವಿಧ ಬೌದ್ಧಿಕ ಮತ್ತು ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದ 1250ಕ್ಕೂ ಹೆಚ್ಚು ಮಂದಿ ಸ್ಪರ್ಧಾಳುಗಳು ಮಹಾಮಂಡಲ ಮಟ್ಟದ ಸ್ಪರ್ಧೆಗಾಗಿ ಆಗಮಿಸುತ್ತಿದ್ದು, ಸುಮಾರು 43 ಕ್ರೀಡಾ/ ಬೌದ್ಧಿಕ ಸ್ಪರ್ಧೆಗಳು 17 ಮತ್ತು 18ರಂದು ನಡೆಯಲಿವೆ. ಇದು ಹವ್ಯಕ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮಹಾಮಂಡಲದ ವಿದ್ಯಾರ್ಥಿ ಹಾಗೂ ಯುವ ವಿಭಾಗದ ಮಹತ್ವದ ಕಾರ್ಯಕ್ರಮಗಳಲ್ಲೊಂದಾಗಿದೆ. ಈಗಾಗಲೇ ವಲಯ ಹಾಗೂ ಮಂಡಲ ಮಟ್ಟದ ಸ್ಪರ್ಧೆಗಳಲ್ಲಿ ಸುಮಾರು 15 ಸಾವಿರ ಮಂದಿ ಪಾಲ್ಗೊಂಡಿದ್ದು, ಅಲ್ಲಿ ವಿಜೇತರಾದವರು ಮಹಾಮಂಡಲ ಮಟ್ಟದಲ್ಲಿ ಸ್ಪರ್ಧಿಸುತ್ತಿದ್ದಾರೆ.


    ಉದಯೋನ್ಮುಖ ಕಲಾವಿದರಿಂದ ಶಿಲ್ಪಕಲೋತ್ಸವ ಈ ಬಾರಿಯ ಮಹಾಮಂಡಲೋತ್ಸವದ ಮತ್ತೊಂದು ವಿಶೇಷ. ಪುರಾಣದ ಯುವ ಸಾಧಕರ ಶಿಲಾಶಿಲ್ಪಗಳನ್ನು ಪ್ರತಿಭಾವಂತ ಕಲಾವಿದರು ಇಲ್ಲೇ ನಿರ್ಮಿಸಿ, ಜೀವಕಳೆ ತುಂಬಿ ವಿವಿವಿಗೆ ಕೊಡುಗೆಯಾಗಿ ನೀಡಲಿದ್ದಾರೆ. ಅಂತೆಯೇ ಭಾವ ರಾಮಾಯಣದ ಆಯ್ದ ಸನ್ನಿವೇಶಗಳ ಚಿತ್ರಣ, ಯುವ ಸಾಧಕರ ಜೀವನ ಸಾಧನೆಯನ್ನು ಬಿಂಬಿಸುವ ಅಪೂರ್ವ ಚಿತ್ರಕಲೋತ್ಸವ ಕೂಡಾ ಸೇರಿದೆ.


    ಯಕ್ಷೋತ್ಸವ, ನಾಟಕೋತ್ಸವ, ಎರಡು ದಿನಗಳ ಕಾಲ ಅಖಂಡ ಭಜನೋತ್ಸವ, ಚಿಣ್ಣರ ಉತ್ಸವಗಳು ವಿಶೇಷ ಮೆರುಗು ನೀಡಲಿವೆ. ಒಂದು ವರ್ಷದ ಒಳಗಿನ ಮಕ್ಕಳಿಗಾಗಿ ಆರೋಗ್ಯವಂತ ಶಿಶು ಸ್ಪರ್ಧೆ, ಮೂರು ವರ್ಷದ ಮಕ್ಕಳೊಂದಿಗೆ ತಾಯಂದಿರು ಸೆಲ್ಫಿ ಕ್ಲಿಕ್ಕಿಸುವ ಸ್ಪರ್ಧೆ, ಅತಿ ಹೆಚ್ಚು ಮಕ್ಕಳನ್ನು ಹೊಂದಿರುವ ದಂಪತಿ ಸ್ಪರ್ಧೆ ಹೀಗೆ ಹತ್ತು ಹಲವು ಸ್ಪರ್ಧೆಗಳೂ ಆಯೋಜನೆಗೊಂಡಿವೆ. ರಾಜ್ಯದ ವಿವಿಧೆಡೆಗಳಿಂದ ಆಗಮಿಸುವ 20ಕ್ಕೂ ಹೆಚ್ಚು ಭಜನಾ ತಂಡಗಳು ಅಖಂಡವಾಗಿ ಕಾರ್ಯಕ್ರಮ ನಡೆಸಿಕೊಡುವರು.


    18ರಂದು ಮಧ್ಯಾಹ್ನ ಮಹಾಮಂಡಲೋತ್ಸವ ಸಭಾ ಕಾರ್ಯಕ್ರಮದ ಸಾನ್ನಿಧ್ಯವನ್ನು ರಾಘವೇಶ್ವರಭಾರತೀ ಸ್ವಾಮೀಜಿಯವರು ಮತ್ತು ಶ್ರೀಕ್ಷೇತ್ರ ಶಕಟಪುರದ ಶ್ರೀ ವಿದ್ಯಾಪೀಠಾಧೀಶ್ವರರಾದ ಬದರೀ ಶಂಕರಾಚಾರ್ಯ ಶ್ರೀ ತೋಟಕಾಚಾರ್ಯ ಶ್ರೀವಿದ್ಯಾಭಿನವ ಶ್ರೀಶ್ರೀಕೃಷ್ಣಾನಂದತೀರ್ಥಮಹಾಸ್ವಾಮಿಗಳು ಸಾನ್ನಿಧ್ಯ ವಹಿಸುವರು. ಉಭಯ ಶ್ರೀಗಳ ಆಶೀರ್ವಚನ, ಪ್ರಶಸ್ತಿ ವಿತರಣೆ, ಸಮಾರೋಪ ಸಮಾರಂಭದಲ್ಲಿ ಇರುತ್ತದೆ.
    ಸಾಂಸ್ಕøತಿಕ ಕಾರ್ಯಕ್ರಮಗಳು ಸಂಜೆ 5 ರಿಂದ ರಾತ್ರಿ 10.30ರವರೆಗೆ ಇದ್ದು, ಆಹಾರೋತ್ಸವ 16ರಂದು ಮಧ್ಯಾಹ್ನದಿಂದ 18ರ ಸಂಜೆವರೆಗೆ ಸಾರ್ವಜನಿಕರಿಗೆ ತೆರೆದಿರುತ್ತದೆ.

  • ಅಧಿಕಾರಿಗಳು ಸಾರ್ವಜನಿಕರಿಗೆ ಸ್ಪಂದಿಸಲಿ : ಭಾಸ್ಕರ ಪಟಗಾರ

    ಅಧಿಕಾರಿಗಳು ಸಾರ್ವಜನಿಕರಿಗೆ ಸ್ಪಂದಿಸಲಿ : ಭಾಸ್ಕರ ಪಟಗಾರ

    ಕುಮಟಾ : ತಾಲೂಕಿನ ಮೂರೂರು ರಸ್ತೆಯಲ್ಲಿ ಇರುವ ತಾಲೂಕಾ ಆಡಳಿತ ಸೌಧ (ಮಿನಿ ವಿಧಾನಸೌಧ) ದಲ್ಲಿ ತಾಲೂಕಿನ ಜನರಿಗೆ ಒಂದೇ ಸೂರಿನಡಿ ಎಲ್ಲಾ ಕಚೇರಿಯ ಸೌಲಭ್ಯಗಳು ಸಿಗುವಂತಾಗಲಿ ಎನ್ನುವ ನಿಟ್ಟಿನಲ್ಲಿ ಸರ್ಕಾರದಿಂದ ನಿರ್ಮಾಣಗೊಂಡ ಕಛೇರಿಯಲ್ಲಿ ವಿಶೇಷವಾಗಿ ತಹಶೀಲ್ದಾರ್ ಭೇಟಿಯಾಗಲು ಸಾಕಷ್ಟು ಸಾರ್ವಜನಿಕರು ಅಹವಾಲನ್ನು ತೆಗೆದುಕೊಂಡು ಬರುತ್ತಾರೆ. ಆದರೆ ಅಧಿಕಾರಿಗಳು ಯಾವ ಸಮಯದಲ್ಲಿ ಸಿಗುತ್ತಾರೆ ಎನ್ನುವ ಮಾಹಿತಿ ಇಲ್ಲದೆ ಇರುವುದು ಸಾಕಷ್ಟು ಸಾರ್ವಜನಿಕರಿಗೆ ತೊಂದರೆಗೆ ಕಾರಣವಾಗಿದೆ. ಅಧಿಕಾರಿಗಳ ಭೇಟಿಗೆ ಬಂದವರು ಅಲೆದಾಡುವ ಪರಿಸ್ಥಿತಿ ಬರುತ್ತದೆ ಹಾಗೂ ಕೆಲವು ಸಂದರ್ಭಗಳಲ್ಲಿ ಕಚೇರಿಯಲ್ಲಿ ಇದ್ದರು ವಿಡಿಯೋ ಕಾನ್ಫರೆನ್ಸ್ ಅಲ್ಲಿ ಇರುವ ಕಾರಣ ಎಲ್ಲ ರೀತಿಯ ಅಧಿಕಾರಿಗಳು ಗಂಟೆಗಟ್ಟಲೆ ಸಾರ್ವಜನಿಕರಿಗೆ ಲಭ್ಯವಾಗದೆ ದೂರದ ಹಳ್ಳಿಗಳಿಂದ ಬಂದು ಸಮಸ್ಯೆಯಾಗುತ್ತದೆ ಎಂದು ಕರವೇ ಜಿಲ್ಲಾಧ್ಯಕ್ಷ ಭಾಸ್ಕರ ಪಟಗಾರ ಆರೋಪಿಸಿದ್ದಾರೆ.

    ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಯಾವುದೇ ರೀತಿಯ ಸರ್ಕಾರದ ವಿಡಿಯೋ ಕಾನ್ಫರೆನ್ಸ್ ಇದ್ದರೆ, ಬೇರೆ ಅಧಿಕಾರಿಗಳು ಸ್ಥಳದಲ್ಲಿ ಇದ್ದು ಹಾಗೂ ಕೆಲವು ಸಂದರ್ಭಗಳಲ್ಲಿ ಸರ್ಕಾರಿ ಕಚೇರಿಯ ಅವಧಿ ಮುಗಿದರೆ ಬಾಗಿಲನ್ನು ಹಾಕದೆ ಸಾರ್ವಜನಿಕರಿಗೆ ಹಾಗೂ ಹಳ್ಳಿಗಳಿಂದ ಬಂದವರಿಗೆ ನೆರವಾಗಬೇಕು. ಸಾರ್ವಜನಿಕರಿಗೆ ಯಾವ ಸಮಯದಲ್ಲಿ ಅಧಿಕಾರಿಗಳು ಸಿಗುತ್ತಾರೆ ಎನ್ನುವ ಮಾಹಿತಿ ಫಲಕವನ್ನ ಹಾಕಬೇಕು ಎಂದು ಒತ್ತಾಯಿಸಿದ್ದಾರೆ.

    ಈ ರೀತಿ ಮಾಡದಿದ್ದಲ್ಲಿ ಸಾರ್ವಜನಿಕರು ದಿನನಿತ್ಯ ಅಧಿಕಾರಿಗಳ ಭೇಟಿಗೆ ಹರಸಹಾಸ ಪಡಬೇಕಾಗುತ್ತದೆ. ಈ ಪರಿಸ್ಥಿತಿ ಬರದಂತೆ ನೋಡಿಕೊಳ್ಳಬೇಕು ಎಂದು ಭಾಸ್ಕರ ಪಟಗಾರ ಆಗ್ರಹಿಸಿದ್ದಾರೆ.

    ತಹಶೀಲ್ದಾರ್ ಕಚೇರಿಗೆ ಶುಕ್ರವಾರ ಭೇಟಿ ನೀಡಿದ ಸಂದರ್ಭದಲ್ಲಿ ಭಾಸ್ಕರ ಪಟಗಾರ ಅವರಿಗೂ ಇದೇ ಅನುಭವವಾಗಿದ್ದು, ಸಾಕಷ್ಟು ಸಾರ್ವಜನಿಕರು ಸಹ ಅಧಿಕಾರಿಗಳೇ ಸಿಗದೇ ಅರ್ಧ ಗಂಟೆಗೂ ಹೆಚ್ಚು ಕಾಯಬೇಕಾದ ಪರಿಸ್ಥಿತಿ ಬಂದಿದೆ ಎಂದು ಅವರು ವಿವರಿಸಿದರು.

  • ವಿಜ್ಞಾನ ವಿಚಾರಗೋಷ್ಠಿಯಲ್ಲಿ ಸಿವಿಎಸ್‍ಕೆಯ ಕೃತಿಕಾ ರಾಷ್ಟ್ರ ಮಟ್ಟಕ್ಕೆ ಆಯ್ಕೆ.

    ವಿಜ್ಞಾನ ವಿಚಾರಗೋಷ್ಠಿಯಲ್ಲಿ ಸಿವಿಎಸ್‍ಕೆಯ ಕೃತಿಕಾ ರಾಷ್ಟ್ರ ಮಟ್ಟಕ್ಕೆ ಆಯ್ಕೆ.

    ಕುಮಟಾ : ಜಿಲ್ಲಾ ಪಂಚಾಯತ್ ಮೈಸೂರು, ಇತರೆ ಅಲ್ಪಸಂಖ್ಯಾತ ಭಾಷಾ ಶಾಲೆಗಳ ನಿರ್ದೇಶನಾಲಯ, ಶಾಲಾ ಶಿಕ್ಷಣ ಇಲಾಖೆ ಬೆಂಗಳೂರು ಇವರ ಸಹಯೋಗದೊಂದಿಗೆ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಮೈಸೂರು ಇವರು ನಡೆಸಿದ ರಾಜ್ಯಮಟ್ಟದ  ‘ಕೃತಕ ಬುದ್ಧಿಮತ್ತೆ’ ಎಂಬ ವಿಷಯದ ವಿಜ್ಞಾನ ವಿಚಾರ ಗೋಷ್ಠಿ  ಸ್ಪರ್ಧಾ ಕಾರ್ಯಕ್ರಮ 2024-25 ರಲ್ಲಿ ಕುಮಟಾದ ಪ್ರತಿಷ್ಠಿತ ವಿದ್ಯಾಸಂಸ್ಥೆಯಾದ ಕೊಂಕಣ ಎಜ್ಯುಕೇಶನ್‌ ಟ್ರಸ್ಟ್‌ ನ ಸಿವಿಎಸ್‌ಕೆ ಪ್ರೌಢಶಾಲೆಯ 10ನೇ ವರ್ಗದ ವಿದ್ಯಾರ್ಥಿನಿ ಕೃತಿಕಾ ಮಹೇಶ ಭಟ್ಟ ಪ್ರಥಮ ಸ್ಥಾನ ಪಡೆದಿರುತ್ತಾಳೆ. ಸ್ಪರ್ಧೆಯಲ್ಲಿ ಭಾಗವಹಿಸಿದ 36 ಮಂದಿಯಲ್ಲಿ ಈಕೆ ಮೊದಲ ಸ್ಥಾನ ಅಲಂಕರಿಸಿ, ಮುಂಬೈನಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಸ್ಪರ್ಧೆಗೆ ಸ್ಥಾನ ಗಿಟ್ಟಿಸಿಕೊಂಡು ಸಾಧನೆ ಮೆರೆದಿದ್ದಾಳೆ. 

    ಸಾಧನೆಗೈದ ವಿದ್ಯಾರ್ಥಿನಿಗೆ ಹಾಗೂ ಮಾರ್ಗದರ್ಶಿಸಿದ ಅಮಿತಾ ಗೋವೆಕರ್‌, ಜ್ಯೋತಿ ಪಟಗಾರ ಹಾಗೂ ಅರ್ಚನಾ ನಾಯ್ಕ ವಿಜ್ಞಾನ ಶಿಕ್ಷಕಿಯರಿಗೆ, ಶಾಲಾ ಆಡಳಿತ ಮಂಡಳಿ, ಶೈಕ್ಷಣಿಕ ಸಲಹೆಗಾರರು, ಮುಖ್ಯಾಧ್ಯಾಪಕರು, ಶಿಕ್ಷಕ ಹಾಗೂ ಪಾಲಕವೃಂದ ಅಭಿನಂದಿಸಿ, ಮುಂದಿನ ಹಂತದ ಸ್ಪರ್ಧೆಗೆ ಶುಭ ಕೋರಿದ್ದಾರೆ.

  • ಕುಮಟಾ ವೈಭವ-2024 ಕ್ಕೆ ತಾಲೂಕಿನ ಮಣಕಿ ಮೈದಾನದಲ್ಲಿ ಅದ್ದೂರಿ ಚಾಲನೆ

    ಕುಮಟಾ ವೈಭವ-2024 ಕ್ಕೆ ತಾಲೂಕಿನ ಮಣಕಿ ಮೈದಾನದಲ್ಲಿ ಅದ್ದೂರಿ ಚಾಲನೆ

    ಕುಮಟಾ : ತಾಂಡವ ಕಲಾನಿಕೇತನ ಬೆಂಗಳೂರು ಹಾಗೂ ಕುಮಟಾ ವೈಭವ ಸಮಿತಿ ಜಂಟಿಯಾಗಿ ಹಮ್ಮಿಕೊಂಡ ಕುಮಟಾ ವೈಭವ-2024 ಕ್ಕೆ ತಾಲೂಕಿನ ಮಣಕಿ ಮೈದಾನದಲ್ಲಿ ಅದ್ದೂರಿ ಚಾಲನೆ ದೊರೆತಿದೆ. ಜನತೆಗೆ ಮನರಂಜನೆ ನೀಡುವ ನಿಟ್ಟಿನಲ್ಲಿ ನಿರ್ಮಿಸಲಾದ ಬೃಹತ್ ವೇದಿಕೆಯಲ್ಲಿ ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ ದಿನಕರ ಶೆಟ್ಟಿ ದೀಪ ಬೆಳಗಿ ಕಾರ್ಯಕ್ರಮ ಉದ್ಘಾಟಿಸಿದರು.

    ಈ ಸಂದರ್ಭದಲ್ಲಿ ಮಾಯನಾಡಿದ ಶಾಸಕರು ನಶಿಸಿಹೋಗುತ್ತಿರುವ ಕಲಾಪ್ರಕಾರಗಳನ್ನು ಜೀವಂತವಾಗಿರಿಸುವ ಪ್ರಯತ್ನವನ್ನು ಕಲಾನಿಕೇತನ ತಂಡದ ಮುಖ್ಯಸ್ಥ ಮಂಜುನಾಥ ನಾಯ್ಕರವರು ಹಲವು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯವಾಗಿದೆ. ಜಿಲ್ಲೆಯ ಜನರಿಗೆ ಮನರಂಜನೆ ಒದಗಿಸುವ ಕಾರ್ಯಕ್ರಮಗಳಿಗೆ ಯಾವತ್ತೂ ತನ್ನ ಸಹಾಯವಿರುವುದಾಗಿ ತಿಳಿಸಿದರು.

    ತಾಂಡವ ಕಲಾನಿಕೇತನ ಸಂಸ್ಥೆಯ ಅಧ್ಯಕ್ಷ ಮಂಜುನಾಥ ಎಲ್. ನಾಯ್ಕ ಪ್ರಾಸ್ತಾವಿಕ ನುಡಿಗಳನ್ನಾಡಿ, ಆಧುನಿಕ ಯುಗದ ಒತ್ತಡದ ಜೀವನದಲ್ಲಿ ನಮ್ಮ ಕಲೆ, ಸಂಸ್ಕೃತಿಗಳು ಕಣ್ಮರೆಯಾಗುತ್ತಿವೆ. ಅವುಗಳ ಬಗ್ಗೆ ಯುವ ಜನತೆಯಲ್ಲಿ ಜಾಗೃತಿ ಮೂಡಿಸಿ ಮುಂದಿನ ತಲೆ ಮಾರಿಗೆ ದಾಟಿಸುವ ಸದುದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಐದು ದಿನಗಳು ಅದ್ಧೂರಿಯಾಗಿ ಕಾರ್ಯಕ್ರಮ ನಡೆಯಲಿದ್ದು, ಬೆಂಗಳೂರಿನ ಖ್ಯಾತ ಕಲಾವಿದರ ತಂಡಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ಜಿಲ್ಲೆಯ ಕಲೆ, ಸಂಸ್ಕೃತಿಯನ್ನು ಸಾರುವ ವಿವಿಧ ಕಲಾ ಪ್ರಕಾರಗಳ ಪ್ರದರ್ಶನ ನಡೆಯಲಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ವಿನಂತಿಸಿದರು.

    ಮುಖ್ಯ ಅತಿಥಿಗಳಾಗಿ ಆಗಮಿಸಿದ ಬಿಜೆಪಿ ಉತ್ತರ ಕನ್ನಡ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ ಭಾರತೀಯ ಸನಾತನತೆಯ ದಿಗ್ದರ್ಶನ ಕುಮಟಾ ವೈಭವದಲ್ಲಿ ಹೊರಹೊಮ್ಮಲಿ ಎಂದು ಆಶಿಸಿದರು.

    ವಿಶ್ರಾಂತ ಪ್ರೌಢಶಾಲಾ ಮುಖ್ಯಾಧ್ಯಾಪಕ ಎನ್. ಆರ್. ಗಜು ಮಾತನಾಡಿ ನಮ್ಮ ನೆಲದ ಸಾಂಸ್ಕøತಿಕ ಸತ್ವವನ್ನು ಅನಾವರಣಗೊಳಿಸುವ ಕಲಾ ಪ್ರದರ್ಶನ ವ್ಯಕ್ತಿಯಲ್ಲಿರುವ ಸಾಂಸ್ಕøತಿಕ ಮನಸ್ಸನ್ನು ಉದ್ದೀಪನಗೊಳಿಸುವಲ್ಲಿ ಮತ್ತು ಉತ್ತೇಜಿಸುವಲ್ಲಿ ಇಂತಹ ವೇದಿಕೆಗಳು ಮಹತ್ವದ ಪಾತ್ರವಹಿಸುತ್ತವೆ ಮತ್ತು ಕಾರ್ಯಕ್ರಮದ ಸಂಘಟನೆಯಲ್ಲಿ ಸಾರ್ವಜನಿಕ ಶಿಸ್ತಿನ ಬದ್ಧತೆಗೆ ಒಳಪಡಬೇಕಾದ ಮಂಜುನಾಥ ನಾಯ್ಕರು ಜಿಲ್ಲೆಯ ಸಾಂಸ್ಕøತಿಕ ರಾಯಭಾರಿಯಂತೆ ಕಂಗೊಳಿಸುತ್ತಾರೆಂದು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಅಭಿಪ್ರಾಯಪಟ್ಟರು.

    ಅಧ್ಯಕ್ಷತೆಯನ್ನು ವಹಿಸಿದ್ದ ಜಿಲ್ಲಾ ಗ್ರಾರಂಟಿ ಪ್ರಾಧಿಕಾರದ ಅಧ್ಯಕ್ಷ ಸತೀಶ ಪಿ. ನಾಯ್ಕ ಇಲ್ಲಿಯ ಜನರು ಕಲೆ ಮತ್ತು ಕಲಾವಿದರಿಗೆ ನೀಡುವ ಪ್ರಾಧಾನ್ಯತೆ ಗರಿಷ್ಠವಾದುದೆಂದರು. ಹಿರಿಯ ವಕೀಲ ಮಂಗಲ ಮೂರ್ತಿ ಸಭಾಹಿತ, ಜಿಲ್ಲಾ ಬಾರ್ ಅಸೋಸಿಯೇಷನ್ ಅಧ್ಯಕ್ಷ ನಾಗರಾಜ ಹಿತ್ತಲಮಕ್ಕಿ, ಪುರಸಭಾ ಮಾಜಿ ಅಧ್ಯಕ್ಷೆ ಮೋಹಿನಿ ಗೌಡ, ಪುರಸಭಾ ಸದಸ್ಯ ಮಹೇಶ ನಾಯ್ಕ, ವೈಭವ ಸಮಿತಿ ಕಾರ್ಯದರ್ಶಿ ಗಣಪತಿ ನಾಯ್ಕ, ವೇದಿಕೆ ಸಮಿತಿ ಅಧ್ಯಕ್ಷ ರವಿ ಶೇಟ್, ಸಿಪಿಐ ಯೋಗೇಶ್ ಮೊದಲಾದವರು ಉಪಸ್ಥಿತರಿದ್ದರು.

    ಪ್ರಾರಂಭದಲ್ಲಿ ರವಿ ಗಾವಡಿ ಪ್ರಾರ್ಥಿಸಿದರು. ಕುಮಟಾ ವೈಭವ ಸಮಿತಿ 2024ರ ಅಧ್ಯಕ್ಷ ಆರ್.ಎಚ್. ನಾಯ್ಕ ಸ್ವಾಗತಿಸಿದರು. ಇದೇ ಸಂದರ್ಭದಲ್ಲಿ ನಿವೃತ್ತ ಸೈನಿಕ ಪರಮೇಶ್ವರ ಹರಿಕಂತ್ರ ಮತ್ತು ರಂಗಭೂಮಿ ಕಲಾವಿದ ಎಮ್.ಟಿ. ಭಟ್ ನವಿಲಗೋಣ ಅವರನ್ನು ಸಮಿತಿ ಸನ್ಮಾನಿಸಿತು. ಶಿಕ್ಷಕ ಮಂಜುನಾಥ ನಾಯ್ಕ ಹಾಗು ಪ್ರೊ. ಮಂಜುನಾಥ ಭಂಡಾರಿ ನಿರೂಪಿಸಿದರು. ಶಿರಸಿಯ ಬೇಡರ ವೇಷ ಹಾಗೂ ವಿವಿಧ ಜಾನಪದ ಕಲಾ ತಂಡಗಳ ಪ್ರದರ್ಶನ ಗಮನ ಸೆಳೆಯಿತು. ಆಲ್ ಓಕೆ ತಂಡದ ರಸಮಂಜರಿ ಜನಾಕರ್ಷಣೆಯ ಕೇಂದ್ರವಾಗಿತ್ತು.

  • ಬಹುಬಗೆಯ ಆರಾಧನೆಯೊಂದಿಗೆ ದೊಡ್ಡಬ್ಬ ಸಂಪನ್ನ.

    ಬಹುಬಗೆಯ ಆರಾಧನೆಯೊಂದಿಗೆ ದೊಡ್ಡಬ್ಬ ಸಂಪನ್ನ.

    ಕುಮಟಾ : ಬೆಳಕಿನ ಹಬ್ಬ ದೀಪಾವಳಿ ಹಲವು ವೈಶಿಷ್ಟ್ಯಗಳನ್ನು ಕಟ್ಟಿಕೊಡುತ್ತದೆ. ಮೂರು ದಿನಗಳ ಕಾಲ ಅತ್ಯಂತ ವಿಜ್ರಂಬಣೆಯಿಂದ ನಡೆದ ದೀಪಾವಳಿ ಹಬ್ಬವು ಸಂಪನ್ನವಾಗಿದ್ದು, ಬಲಿಂದ್ರನನ್ನು ಕಳುಹಿಸಿ ಕೊಡುವುದರ ಮೂಲಕ ಹಬ್ಬಕ್ಕೆ ಮಂಗಲ ಹಾಡಲಾಯಿತು.

    ಇನ್ನು ಭಾರತೀಯ ಸಂಸ್ಕೃತಿಯಲ್ಲಿ ಗೋವಿಗೆ ತುಂಬಾ ಮಹತ್ವವಿದ್ದು. ಹಬ್ಬದಲ್ಲಿ ಮರೆಯದೇ ಗೋವನ್ನು ಪೂಜಿಸುವ ಸಂಪ್ರದಾಯವಿದೆ. ಅಂತೆಯೇ ಹಬ್ಬದ ಪಾಡ್ಯದ ದಿನದಂದು ಬಹು ವಿಶೇಷವಾಗಿ ಗೋ ಪೂಜೆ ಸಂಪನ್ನಗೊಂಡಿತು. ಗೋವುಗಳಿಗೆ ವಿಶೇಷ ಅಲಂಕಾರ ಮಾಡಿ, ಪೂಜಿಸಿ, ದನಗಳನ್ನು ಬೆಚ್ಚಿಸುವ ಪಾರಂಪರಿಕ ಆಚರಣೆಗಳೂ ಬಹು ವಿಶೇಷವಾಗಿ ನಡೆದವು.

    ಸಾಂಪ್ರದಾಯಿಕ ಪೂಜೆ ಪುನಸ್ಕಾರಗಳ ಜೊತೆಯಲ್ಲಿ ಹಬ್ಬದ ಅಡುಗೆ ಮಾಡಿ ಸಂಭ್ರಮಿಸುವ ಜೊತೆಗೆ, ಯುವಕರು ಹಾಗೂ ಹುಡುಗರು ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸಿದರು.

    ಒಟ್ಟಿನಲ್ಲಿ ದೀಪಾವಳಿಯ ಹಬ್ಬವು ಬಹು ವಿಶೇಷವಾಗಿ ನಡೆದಿದ್ದು, ತಾಲೂಕಿನಲ್ಲಿ ಅತ್ಯಂತ ವಿಜ್ರಂಭಣೆಯಿಂದ ಮೂರು ದಿನಗಳ ಕಾಲ ಹಬ್ಬ ಆಚರಿಸಲ್ಪಟ್ಟಿತು. ಊರಿನ ಹಾಗೂ ಪರ ಊರಿನ ಅನೇಕರು ವಿವಿಧ ಸಂಪ್ರದಾಯಗಳು, ಪೂಜೆ ಪುನಸ್ಕಾರದಲ್ಲಿ ಭಾಗವಹಿಸಿ ಹಬ್ಬದೂಟವನ್ನು ಸವಿದು ಸಂತಸ ಪಟ್ಟರು.

  • ಉಮೇಶ ಭಟ್ಟ ಬಾಡ ಅವರಿಗೆ ‘ಸಾರ್ಥಕ ಸಾಧಕ’ ಪ್ರಶಸ್ತಿ

    ಉಮೇಶ ಭಟ್ಟ ಬಾಡ ಅವರಿಗೆ ‘ಸಾರ್ಥಕ ಸಾಧಕ’ ಪ್ರಶಸ್ತಿ

    ಕುಮಟಾ : ಯಕ್ಷಸಿಂಚನ ಟ್ರಸ್ಟ್ ಬೆಂಗಳೂರು ಇವರು ಪ್ರತಿವರುಷ ಯಕ್ಷಗಾನದಲ್ಲಿ ಸೇವೆಯನ್ನು ಮಾಡಿದ ಮಹನೀಯರಿಗೆ ನೀಡುವ ‘ಸಾರ್ಥಕ ಸಾಧಕ’ ಪ್ರಶಸ್ತಿಯನ್ನು ಈ ಬಾರಿ ಯಕ್ಷಗಾನದಲ್ಲಿ ೪೦ ವರುಷಗಳ ಅನನ್ಯ ಸೇವೆಗಾಗಿ ಉಮೇಶ ಭಟ್ಟ ಬಾಡ ಅವರಿಗೆ ನೀಡಿ ಗೌರವಿಸಲು ನಿರ್ಧರಿಸಿದೆ. ನವೆಂಬರ್ ೧೭ರಂದು ಬೆಂಗಳೂರಿನ ಉದಯಭಾನು ಕಲಾಸಂಘದಲ್ಲಿ ನಡೆಯವ ಯಕ್ಷಸಿಂಚನದ ೧೫ನೇ ವರುಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಗಣ್ಯರ ಸಮ್ಮುಖದಲ್ಲಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವದು ಎಂದು ಟ್ರಸ್ಟಿನ ಪ್ರಕಟಣೆಯಲ್ಲಿ ತಿಳಿಸಲಾಗಿದೆ

    ಉಮೇಶ್ ಭಟ್: ಕಳೆದ ನಾಲ್ಕು ದಶಕಗಳಿಂದ ಯಕ್ಷಗಾನದಲ್ಲಿ ಭಾಗವತರಾಗಿ ಯಕ್ಷ ಗುರುಗಳಾಗಿ ಕಾಣಿಸಿಕೊಂಡಿದ್ದಾರೆ. ಯಕ್ಷಗಾನದ ಮಹಾನ್ ತಾರೆಗಳಾದ ಚಿಟ್ಟಾಣಿ ರಾಮಚಂದ್ರ ಹೆಗಡೆ, ಜಲವಳ್ಳಿ ವೆಂಕಟೇಶ್ ರಾವ್, ಕುಮಟಾ ಗೋವಿಂದ ನಾಯ್ಕ್ ಮುಂತಾದ ಅತಿರಥ ಕಲಾವಿದರನ್ನು ರಂಗದಲ್ಲಿ ಕುಣಿಸಿದ ಖ್ಯಾತಿ ಇವರದ್ದಾಗಿದೆ. ಜೊತೆಗೆ ಬೇರೆ ಬೇರೆ ವೃತ್ತಿ ಮೇಳಗಳಲ್ಲಿ ತಿರುಗಾಟವನ್ನು ಮಾಡಿದ್ದಾರೆ. ಪರಂಪರೆಯ ಭಾಗವತರಾಗಿ ರಂಗದಲ್ಲಿ ಕಾಣಿಸಿಕೊಂಡಿದ್ದಾರೆ.

  • ಕೆಕ್ಕಾರಿನ ರಘೂತ್ತಮ ಮಠದಲ್ಲಿ ನವರಾತ್ರಿಯ ವಿಶೇಷ ‘ಮಾತೃ ನಮಸ್ಯಾ’

    ಕೆಕ್ಕಾರಿನ ರಘೂತ್ತಮ ಮಠದಲ್ಲಿ ನವರಾತ್ರಿಯ ವಿಶೇಷ ‘ಮಾತೃ ನಮಸ್ಯಾ’

    ಕುಮಟಾ : ಶ್ರೀರಾಮಚಂದ್ರಾಪುರ ಮಠದ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ ತಾಲೂಕಿನ ಕೆಕ್ಕಾರಿನ ರಘೂತ್ತಮ ಮಠದಲ್ಲಿ ‘ನವರಾತ್ರ ಮಹೋತ್ಸವ’, ‘ಮಾತೃ ನಮಸ್ಯಾ’ ಕಾರ್ಯಕ್ರಮ ಸಂಯೋಜನೆಗೊಂಡಿದೆ. ಈ ದಿವ್ಯ ಸಂದರ್ಭದಲ್ಲಿ ‘ಬನ್ನಿ ಅಮ್ಮನ ಮಡಿಲಿಗೆ.. ನೆಮ್ಮದಿಯ ಕಡಲಿಗೆ’ ಎಂದು ರಘೂತ್ತಮ ಮಠ ಕೆಕ್ಕಾರಿನ ಸಮಿತಿ ಸದಸ್ಯರು ಸಮಸ್ತ ಭಕ್ತವೃಂದವರನ್ನು ಆಮಂತ್ರಿಸಿದ್ದಾರೆ.

    ಅ. 1 ರಿಂದ 14 ರ ವರೆಗೆ ವಿಶೇಷ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ. ಶಿಷ್ಯರ ಬೇಡಿಕೆಯಂತೆ ಪರಮಪೂಜ್ಯ ಶ್ರೀ ಸಂಸ್ಥಾನದವರು ಅತ್ಯಂತ ಸಂತೋಷದಿಂದ ಈ ಸಲದ ನವರಾತ್ರಿ ಉತ್ಸವವನ್ನು ಕೆಕ್ಕಾರಿನಲ್ಲಿಯೇ ಆಚರಿಸಲು ಒಪ್ಪಿರುವುದು ಶಿಷ್ಯರಲ್ಲಿ ಹೊಸ ಹುಮ್ಮಸ್ಸನ್ನ ಮೂಡಿಸಿದೆ ಎಂದು ಸಮಿತಿ ಅಧ್ಯಕ್ಷ ಸುಬ್ರಾಯ ಭಟ್ಟ ಕೋಣಾರೆ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.

    ಈ ಬಗ್ಗೆ ವಿವರ ನೀಡಿದ ಅವರು, ಈ ವರ್ಷ ಬಗೆ ಬಗೆಯ ಉತ್ತಮೋತ್ತಮ ಕಾರ್ಯಕ್ರಮಗಳು ನವರಾತ್ರಿ ಉತ್ಸವದೊಂದಿಗೆ ಸೇರಿಕೊಂಡು ಮಹಾ ಉತ್ಸವವಾಗಿ ಇದು ರೂಪ ಪಡೆಯುತ್ತಿದೆ. ಅ.೧ ರಂದು ಮಂಗಳವಾರ ಪರಮಪೂಜ್ಯರ ಅದ್ದೂರಿ ಸ್ವಾಗತದೊಂದಿಗೆ ಉತ್ಸವ ಕಾರ್ಯಕ್ರಮಗಳು ಆರಂಭಗೊಳ್ಳಲಿದೆ. ಬುಧವಾರ ಬಹು ವಿಶೇಷವಾದ ‘ವಿದ್ಯಾಭಿಕ್ಷಾ’ ನಡೆಯಲಿದೆ. ಅದೇ ದಿನ ಸಂಜೆ 6 ಗಂಟೆಗೆ ಬಹು ನಿರೀಕ್ಷಿತ “ವರದಯೋಗಿ ಶ್ರೀಧರ” ನಾಟಕ 11ನೇ ಪ್ರದರ್ಶನಕ್ಕೆ ಅಣಿಯಾಗುತ್ತಿದೆ.

    ಗುರುವಾರದಿಂದ ಮಾತೃ ನಮಸ್ಯಾ ನವರಾತ್ರಿ ಉತ್ಸವ ಆರಂಭವಾಗಲಿದ್ದು, ನವರಾತ್ರಿಯ ಪರ್ವಕಾಲದಲ್ಲಿ ಶ್ರೀರಾಮಚಂದ್ರಾಪುರ ಮಠದ ಪ್ರಧಾನ ದೇವತೆಗಳಲ್ಲೊಂದಾದ ಶ್ರೀರಾಜರಾಜೇಶ್ವರಿಯ ಮಹಾಸಮಾರಾಧನೆ. ಜೊತೆಗೆ ಸ್ವರ್ಣಮಂಟಪದಲ್ಲಿ ಶ್ರೀಕರಾರ್ಚಿತ ದೇವತೆಗಳ ಪೂಜೆ, ಸ್ವರ್ಣಪಾದುಕಾ ಪೂಜೆ, ಶ್ರೀಸಂಸ್ಥಾನದವರಿಂದ ಲಲಿತೋಪಾಖ್ಯಾನ ಪ್ರವಚನ ನಡೆಯಲಿದೆ.

    ಮೂರು ಪ್ರಮುಖ ದೇವ ಸನ್ನಿಧಿಗಳಲ್ಲಿ ನವದುರ್ಗಿಯರುಗಳ ಪಾರಾಯಣಗಳು , ಉಡಿಸೇವೆಗಳು, ಕುಂಕುಮಾರ್ಚನೆ, ವಿವಿಧ ಬಗೆಯ ಸೇವೆಗಳು ನಡೆಯಲಿದೆ.
    ನವರಾತ್ರಿಯ ಒಂಬತ್ತು ದಿನಗಳೂ ಪ್ರತಿದಿನ ಶ್ರೀ ಸಂಸ್ಥಾನದವರಿಂದ ದುರ್ಗಾ ದೇವಿಯರ ಕುರಿತು ಲಲಿತೋಪಾಖ್ಯಾನ ಪ್ರವಚನ ನಡೆಯಲಿದೆ. ವಿಜಯ ದಶಮಿಯಂದು ‘ಶಿಕ್ಷಕ ಸಂಗಮ’ “ವಿದ್ಯಾ ಭಿಕ್ಷಾ”, ಆಶೀರ್ವಚನ ಹಾಗೂ ಸಾರ್ವಜನಿಕ ಮಂತ್ರಾಕ್ಷತೆ ಇರಲಿದೆ. ಮಾರನೇದಿನ ಸೋಮವಾರ ಮಾತೃ ಸಂಗಮ ಆ ದಿನವೂ ಕೂಡಾ “ವಿದ್ಯಾ ಭಿಕ್ಷಾ” ನಡೆಯಲಿದೆ. ಈ ಸಂದರ್ಭದಲ್ಲಿ ಚಂಡಿಕಾ ಯಾಗ, ಆಂಜನೇಯ ಸ್ವಾಮಿಗೆ ಕಣಜ ಸೇವೆ ಹಾಗೂ ಇನ್ನೂ ಅನೇಕ ಸೇವಾವಕಾಶಗಳನ್ನು ಕಲ್ಪಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

    ಈ ಎಲ್ಲ ಕಾರ್ಯಕ್ರಮಗಳಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀದೇವರ ಹಾಗೂ ಶ್ರೀ ಗುರುಗಳ ಆಶೀರ್ವಾದ ಪಡೆದು ಸೇವೆಯಲ್ಲಿ ಪಾಲ್ಗೊಳ್ಳಬೇಕೆಂದು ಸಮಿತಿಯ ಸದಸ್ಯರು ವಿನಂತಿಸಿದ್ದಾರೆ.

  • ಮಂಜುನಾಥ ಭಟ್ಟ ಕಟ್ಟೆಯವರಿಗೆ ನಾಟಕ ಅಕಾಡೆಮಿ ಪ್ರಶಸ್ತಿ.

    ಮಂಜುನಾಥ ಭಟ್ಟ ಕಟ್ಟೆಯವರಿಗೆ ನಾಟಕ ಅಕಾಡೆಮಿ ಪ್ರಶಸ್ತಿ.

    ಕುಮಟಾ : ಕರ್ನಾಟಕ ಸರ್ಕಾರ ಮತ್ತು ನಾಟಕ ಅಕಾಡೆಮಿಯಿಂದ ರಂಗಭೂಮಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕಲಾವಿದರಿಗೆ ನೀಡುವ ವಾಷಿಕ ರಾಜ್ಯ ಪ್ರಶಸ್ತಿಗೆ ಮಂಜುನಾಥ ತಿಮ್ಮಣ್ಣ ಭಟ್ಟ ಕಟ್ಟೆ ಇವರು ಆಯ್ಕೆಯಾಗಿ, ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಿರುತ್ತಾರೆ.

    ಮಂಜುನಾಥ ತಿಮ್ಮಣ್ಣ ಭಟ್ಟರು ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕಟ್ಟೆ ಎನ್ನುವ ಪುಟ್ಟ ಗ್ರಾಮದವರು. ಉತ್ತರಕನ್ನಡ ಜಿಲ್ಲೆಯು ಸಂಗೀತ, ಸಾಹಿತ್ಯ, ರಂಗಭೂಮಿ, ಯಕ್ಷಗಾನ, ತಾಳಮದ್ದಲೆ, ನೃತ್ಯ ಮುಂತಾದ ಸಾಂಸ್ಕçತಿಕ ಕಲಾಲೋಕಕ್ಕೆ ಹೆಸರುವಾಸಿಯಾದ ಜಿಲ್ಲೆಯಾಗಿದೆ. ಅಂತಹ ಕಲಾಲೋಕದ ವಾತಾವರಣದಲ್ಲಿ ಬೆಳೆದ ಮಂಜುನಾಥ ತಿಮ್ಮಣ್ಣ ಭಟ್ಟ ಕಟ್ಟೆಯವರು ತಮ್ಮ ಶಾಲಾ ದಿನಗಳಿಂದಲೇ ರಂಗಭೂಮಿ ಹಾಗೂ ಯಕ್ಷಗಾನದ ಪ್ರಭಾವಕ್ಕೆ ಒಳಗಾದವರು. 

    ೫ನೇ ತರಗತಿಯಲ್ಲಿದ್ದಾಗ ಹೊನ್ನಾವರ ತಾಲೂಕಿನ  ನವಿಲಗೋಣ ಗ್ರಾಮದ ಪ್ರಸಿದ್ಧ ನಾಟಕಕಾರ ರಾಮಚಂದ್ರ ಗಣೇಶ ಭಟ್ಟರಮಕ್ಕಿ ಇವರ ಮಾರ್ಗದರ್ಶನದಲ್ಲಿ  ಏಕಾಂಕ ನಾಟಕಗಳನ್ನು ಮಾಡುವ ಮೂಲಕ ರಂಗಭೂಮಿಗೆ ಪ್ರವೇಶ ಮಾಡುತ್ತಾರೆ. ಶಾಲಾ ಅವಧಿಯಲ್ಲಿಯೇ ಸುಮಾರು ೨೦ ಏಕಾಂಕ ನಾಟಕಗಳಲ್ಲಿ ಅಭಿನಯ ಮಾಡಿದ್ದಾರೆ. ಮುಂದೆ ೧೯೬೨ ರಲ್ಲಿ ಎಸ್.ಎಸ್.ಎಲ್.ಸಿ ಮುಗಿಸಿದ ನಂತರ  ತಾವೇ ಸ್ವತಃ ಯುವಜನ ಮೇಳ, ಸ್ಥಳೀಯ ಮಿತ್ರ ಮಂಡಳಿಯನ್ನು ಪ್ರಾರಂಭಿಸಿ ಸಂಘಟನೆ ಮಾಡಿ ನಾಟಕ ಕಟ್ಟಿ ಆಡಿದ್ದಾರೆ.

    ಇವರು ಮುಂದೆ ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದುಕೊಂಡೇ ನೂರಾರು ನಾಟಕಗಳಲ್ಲಿ ಅಭಿನಯ, ನಿರ್ದೇಶನದಂತಹ ನಾಟಕಕ್ಕೆ ಸಂಭಂಧಿಸಿದ ಕೆಲಸವನ್ನು ಕಳೆದ ೫೫ ವರ್ಷದಿಂದ ನಿರಂತರವಾಗಿ ಮಾಡಿದ್ದಾರೆ.  ತಮ್ಮ ೨೫ನೇ ವಯಸ್ಸಿನಲ್ಲಿ ವೃತ್ತಿರಂಗಭೂಮಿಯಲ್ಲಿ ಹವ್ಯಾಸಿ ನಟರಾಗಿ ಕೆಲಸ ಮಾಡಿದ್ದಾರೆ. ಇವರು ವೃತ್ತಿನಾಟಕ ರಂಗಭೂಮಿಯಲ್ಲಿ ಐತಿಹಾಸಿಕ ನಾಟಕಗಳು, ಪೌರಾಣ ಕ ನಾಟಕಗಳು, ಸಾಮಾಜಿಕ ನಾಟಕಗಳನ್ನು ಮಾಡಿದರು. 

    ಅವರು ಅಭಿನಯಿಸಿದ ನಾಟಕಗಳೆಂದರೆ ದಸರಾ, ಬಸ್ ಕಂಡಕ್ಟರ್, ರಕ್ತ ದೀಪ, ಜೀವನ ಯಾತ್ರೆ ಹಾಗೂ ಇವರೇ ಬರೆದು  ನಿರ್ದೇಶನ ಮಾಡಿದ ನಾಟಕಗಳಾದ  ‘ಜೀವನ ಯಾತ್ರೆ, ‘ಕರ್ನಾಟಕ ರಮಾರಮಣ, ತ್ಯಾಗಿ, ಅಣ್ಣ ತಂಗಿ’, ‘ನಚಿಕೇತ’, ‘ಧ್ರುವ’. 

    ಇವರ ಕಲಾಸೇವೆಯನ್ನು ಗುರುತಿಸಿ ಸಂದ ಪ್ರಶಸ್ತಿ  “ಕಲಾವಿದ” ಪ್ರಶಸ್ತಿ ಮತ್ತು ವಿವಿಧ ಸಂಘಗಳಿಂದ ಸನ್ಮಾನಿತಗೊಂಡಿದ್ದಾರೆ.

    ಇವರು ಹವ್ಯಾಸಿ ರಂಗಭೂಮಿಯಲ್ಲಿನ ಹೊಸ ಅಲೆಯ ಹಲವು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಇದರಲ್ಲಿ  ಕೆಲವು ನಾಟಕಗಳು  ೩೦ಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡಿವೆ.  ಲಚ್ಚಿ, ಬೇಲಿ ಹಣ್ಣು, ಕರುನಾಡ ರಮಾರಮಣ, ಹುತ್ತ, ಸಾವಾದ ಕೊಲೆ ಮುಂತಾದವುಗಳಲ್ಲಿ ಇವರು ಬಣ್ಣ ಹಚ್ಚಿದವರು.

    ವೃತ್ತಿಯಲ್ಲಿ ಶಾಲಾ ಶಿಕ್ಷಕರಾಗಿದ್ದರಿಂದ ಶಾಲೆಯಲ್ಲಿ ಮಕ್ಕಳಿಗೂ ಕೂಡ ನಾಟಕದ ರುಚಿಯನ್ನು ಹಚ್ಚಿ ಹಲವಾರು ಜನ ಶಿಷ್ಯರನ್ನ ರಂಗಭೂಮಿಗೆ ತಯಾರು ಮಾಡಿದ್ದಾರೆ. ಅವರಿಗೆ ರಂಗಭೂಮಿಯ ಮಜಲುಗಳನ್ನ ಪರಿಚಯ ಮಾಡಿಕೊಟ್ಟಿದ್ದಾರೆ. ಹಲವು ನಾಟಕಗಳನ್ನು ಬರೆದು ನಿರ್ದೇಶನವನ್ನು ಮಾಡಿದ್ದಾರೆ.  ಮಾರ್ಕಂಡೇಯ, ಅಹಲ್ಯೋದ್ಧಾರ, ಇತ್ಯಾದಿ.  ಅದರ ಜತೆಗೆ ಕುವೆಂಪು ಅವರು ರಚಿಸಿದ ಮಕ್ಕಳ ನಾಟಕ ‘ನನ್ನ ಗೋಪಾಲ’ ಎಂಬ ನಾಟಕವನ್ನೂ ನಿರ್ದೇಶಿಸಿದ್ದಾರೆ.

    ‘ಬೇಲಿ ಹಣ್ಣು’ ನಾಟಕ ಬೆಂಗಳೂರಿನ ಟೌನ್ ಹಾಲ್ ನಲ್ಲಿ ಪ್ರದರ್ಶನಗೊಂಡು ಬಹಳ ಪ್ರಸಿದ್ಧಿಯನ್ನು ಪಡೆಯಿತು. ಈ ನಾಟಕದಲ್ಲಿ ಇವರ ಅಭಿನಯಕ್ಕೆ ಜನಮನ್ನಣೆ ದೊರೆತು ಜನರ ಮೆಚ್ಚುಗೆಗೆ ಕಾರಣವಾಗಿದ್ದಾರೆ. “ಹುಲಿ ಶೇಖರ” ವಿರಚಿತ “ಗುದುಮುರ್ಗಿ” ನಾಟಕವನ್ನು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶನ ಮಾಡಿದ್ದಾರೆ. ಹಾಗೆಯೇ ಬಿಜಾಪುರ, ಇಳಕಲ್ಲ ,ಕುಂದಾಪುರದ ಗಂಗೊಳ್ಳಿಯಲ್ಲಿ ಸಾವಾದ ಕೊಲೆ ನಾಟಕ ಮತ್ತು ಹುತ್ತ ನಾಟಕಗಳನ್ನು ಪ್ರದರ್ಶನ ನೀಡಿ ಜನರ ಮೆಚ್ಚುಗೆ ಗಳಿಸಿದ್ದಾರೆ.

    ರಂಗ ನಟ, ನಿರ್ದೇಶಕರಲ್ಲದೇ ಸ್ತ್ರೀ ವೇಷದಲ್ಲಿ ಕೂಡ ತಾಯಿ ಪಾತ್ರವನ್ನು ಹಲವಾರು ನಾಟಕಗಳಲ್ಲಿ ನಿರ್ವಹಿಸಿದ್ದಾರೆ. ಕಥಾನಾಯಕ, ಖಳನಾಯಕ, ಹಾಸ್ಯಪಾತ್ರ, ಪೋಷಕ ಪಾತ್ರ ಹೀಗೆ ಹಲವಾರು ವಿಭಿನ್ನ ಪಾತ್ರಗಳಲ್ಲಿ ಮತ್ತು ವಿಭಾಗಗಳಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ನಾಟಕ ಬರೆಯುವುದು, ನಿರ್ದೇಶನ ಮಾಡುವುದು ಹಾಗೂ ರಂಗಭೂಮಿಗೆ ಬೇಕಾದಂತಹ ಪ್ರತಿಯೊಂದು ಕೆಲಸದಲ್ಲೂ ಇವರು ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇವರ ಅಣ್ಣನಾದ ಶ್ರೀ ದತ್ತಾತ್ರೇಯ ತಿಮ್ಮಣ್ಣ ಭಟ್ಟ ಕಟ್ಟೆ ಯಕ್ಷಗಾನ ಕಲಾವಿದರು. ಇವರು ತಮ್ಮನಿಗೆ ಗುರುಗಳಾಗಿ ಬಡಗುತಿಟ್ಟು ಯಕ್ಷಗಾನವನ್ನು ಕಲಿಸಿದರು. ಆನಂತರ ಇವರು ಬಡಗುತಿಟ್ಟಿನ ಕಲಾವಿದರಾಗಿ ಸುಮಾರು ಯಕ್ಷಗಾನ ಪ್ರಸಂಗಗಳಲ್ಲಿ ಅಭಿನಯಿಸಿದ ಅನುಭವವನ್ನು ಹೊಂದಿದ್ದಾರೆ. ಮುಂದೆ ತಮ್ಮ ಶಿಷ್ಯವೃಂದದಲ್ಲಿ ಸಿದ್ದಾಪುರ (ತಾ) ಶಿವಳಮನೆ ಗ್ರಾಮದ ರಾಮಚಂದ್ರ ಜೋಶಿಯವರು ಇವರ ಮೆಚ್ಚಿನ ಶಿಷ್ಯರಾದರು.

    ಇವರು ಅಭಿನಯಿಸಿದ ಕೆಲವು ಪಾತ್ರಗಳು.

    ೧) ಕಿರಾತಾರ್ಜುನನೀಯ ಪ್ರಸಂಗದಲ್ಲಿ ‘ಶಬರ’ನಾಗಿ ಅಭಿನಯ

    ೨) ಭೂಕೈಲಾಸದಲ್ಲಿ-‘ ಮಾಯಾ ಸುಧಾ’ನಾಗಿ ಅಭಿನಯ

    ೩) ಶರಸೇತು ಬಂಧನದಲ್ಲಿ ‘ಹನುಮಂತ ಮತ್ತು ಅರ್ಜುನ’ನಾಗಿ ಅಭಿನಯ

    ೪) ‘ಗಧಾಪರ್ವ’ದಲ್ಲಿ ‘ಭೀಮ’ನಾಗಿ ಅಭಿನಯ ಹೀಗೆ ಹಲವು ವೇದಿಕೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. 

    ಕಲಾ ಕುಟುಂಬದ ಇವರಿಗೆ ಪ್ರಸಕ್ತ ೮೦ ವರ್ಷ ಮುಗಿದಿದೆ ಹಾಗೂ ಅವರು ಬರೆದು ನಿರ್ದೇಶಸಿದ ನಾಟಕಗಳು ಇಂದಿಗೂ ಕೂಡ ರಂಗದ ಮೇಲೆ ರಾರಾಜಿಸುತ್ತಿವೆ. ಇತಂಹ ಕಲಾವಿದನನ್ನು ಕರ್ನಾಟಕ ಸರ್ಕಾರ ಮತ್ತು ನಾಟಕ ಅಕಾಡೆಮಿ ಗುರುತಿಸಿ ಪ್ರಶಸ್ತಿ ನೀಡಿರುವದು ಮಂಜುನಾಥ ತಿಮ್ಮಣ್ಣ ಭಟ್ಟರು ಕಲಾ ಕ್ಷೇತ್ರಕ್ಕೆ ಸೇವೆಗೆ ಸಂದ ಪ್ರಶಸ್ತಿ ಎಂದೇ ಬಣ್ಣಿಸಲಾಗುತ್ತಿದೆ.