Satwadhara News

Category: Special News

  • ಹಾಸ್ಯ ನಟ ಬ್ಯಾಂಕ್ ಜನಾರ್ಧನ ಇನ್ನಿಲ್ಲ.

    ಹಾಸ್ಯ ನಟ ಬ್ಯಾಂಕ್ ಜನಾರ್ಧನ ಇನ್ನಿಲ್ಲ.

    ಬೆಂಗಳೂರು: 500 ಕ್ಕೂ ಹೆಚ್ಚು ಕನ್ನಡ ಸಿನಿಮಾಗಳಲ್ಲಿ ಜನರನ್ನು ನಕ್ಕು-ನಲಿಸಿದ ಹಾಸ್ಯ ನಟ ಬ್ಯಾಂಕ್ ಜನಾರ್ಧನ (76) ನಿಧನರಾಗಿದ್ದಾರೆ. ಮಧ್ಯರಾತ್ರಿ 2:30ರ ಸುಮಾರಿಗೆ ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ನಟ ಬ್ಯಾಂಕ್ ಜನಾರ್ಧನ್ ನಿಧನರಾಗಿದ್ದಾರೆ.
    ಸುಲ್ತಾನ್ ಪಾಳ್ಯದ ನಿವಾಸದಲ್ಲಿರುವ ಅವರ ನಿವಾಸದಲ್ಲಿ ಪಾರ್ಥೀವ ಶರೀರ ಇಡಲಾಗಿದ್ದು, ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನ 3 – 4 ಗಂಟೆ ವೇಳೆಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

    1948ರಲ್ಲಿ ಬ್ಯಾಂಕ್ ಜನಾರ್ಧನ್ ಅವರು ಬೆಂಗಳೂರಿನಲ್ಲಿ ಜನಿಸಿದರು. 1985ರಲ್ಲಿ ಪಿತಾಮಹ ಚಿತ್ರದ ಮೂಲಕ ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ನಾಟಕಗಳಿಂದ ಆರಂಭವಾದ ಅವರ ಬದುಕು ನಂತರ ಸಿನಿಮಾಗಳತ್ತ ಹೊರಳಿತು. ಆರಂಭದಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸಿದ್ದ ಅವರು ನಂತರ ದಿನಗಳಲ್ಲಿ ಪ್ರಮುಖ ಪೋಷಕ ಪಾತ್ರಗಳಲ್ಲಿ ನಟಿಸುವ ಮೂಲಕ ಕರ್ನಾಟಕದ ಮನೆ ಮಾತಾದರು. ಅವರು ಕನ್ನಡ ಚಿತ್ರಗಂಗದಲ್ಲಿ ಹಾಸ್ಯ ಹಾಗೂ ಪೋಷಕ ನಟನಾಗಿಯೇ ಗುರುತಿಸಿಕೊಂಡಿದ್ದರು. 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅವರು ನಟನೆ ಮಾಡಿದ್ದಾರೆ.

    2023ರ ಸೆಪ್ಟಂಬರ್ 26ರಂದು ಹೃದಯಘಾತ ಆಗಿತ್ತು. ಬಳಿಕ ಚಿಕಿತ್ಸೆಯ ಪಡೆದುಕೊಂಡು ಚೇತರಿಸಿಕೊಂಡಿದ್ದರು. ಕನ್ನಡ ಸಿನಿಮಾಗಳಲ್ಲಿ 80, 90ರ ದಶಕದ ಬಹುಬೇಡಿಕೆ ಹೊಂದಿದ್ದ ಹಾಸ್ಯನಟರಲ್ಲಿ ಒಬ್ಬರಾದ ಜನಾರ್ಧನ ಶ್, ತರ್ಲೆ ನನ್ ಮಗ, ಬೆಳ್ಳಿಯಪ್ಪ ಬಂಗಾರಪ್ಪ, ಜೀ ಬೂಂಬಾ, ಗಣೇಶ ಸುಬ್ರಮಣ್ಯ, ಕೌರವ ಸೇರಿದಂತೆ 500ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸಿನಿಮಾ ಅಲ್ಲದೇ, ಕಿರುತೆರೆ ಹಾಗೂ ರಂಗಭೂಮಿಯಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದರು. ಕಿರುತೆರೆಯಲ್ಲಿ ಪಾಪ ಪಾಂಡು, ಜೋಕಾಲಿ, ರೋಬೋ ಫ್ಯಾಮಿಲಿ, ಮಾಂಗಲ್ಯ ಧಾರಾವಾಹಿಗಳಲ್ಲಿಯೂ ಕೂಡ ಬ್ಯಾಂಕ್ ಜನಾರ್ಧನ ಅವರು ನಟನೆ ಮಾಡಿದ್ದಾರೆ.

  • ಸಮುದ್ರ ಸುಳಿಗೆ ಸಿಲುಕಿ ಅಸ್ವಸ್ಥನಾದ ಪ್ರವಾಸಿಗನ ರಕ್ಷಣೆ

    ಸಮುದ್ರ ಸುಳಿಗೆ ಸಿಲುಕಿ ಅಸ್ವಸ್ಥನಾದ ಪ್ರವಾಸಿಗನ ರಕ್ಷಣೆ

    ಗೋಕರ್ಣ : ಕಡಲ ತೀರದಲ್ಲಿ ಈಜುವ ವೇಳೆ ಓರ್ವ ಪ್ರವಾಸಿಗ ಸಮುದ್ರ ಸುಳಿಗೆ ಸಿಲುಕಿ ಅಸ್ವಸ್ಥನಾದ ವೇಳೆ ಕರ್ತವ್ಯದಲ್ಲಿದ ಲೈಫ್ ಸೇಫ್‌ಗಾರ್ಡ್ ಗಳು ರಕ್ಷಸಿದ್ದಾರೆ.

    ಪಂಜಾಬ ಮೂಲದ ದೌಲತ್ ಎನ್ನುವ ಪ್ರವಾಸಿಗ ತನ್ನ ಮೂರುಜನ ಗೆಳೆಯರೊಂದಿಗೆ ಗೋಕರ್ಣ ಪ್ರವಾಸಕ್ಕೆಂದು ಬಂದಿದ್ದ ಸಮಯದಲ್ಲಿ ಶನಿವಾರ ಸಮುದ್ರದಲ್ಲಿ ಈಜುವಾಗ ಸುಳಿಗೆ ಸಿಕ್ಕಿ ಸಹಾಯಕ್ಕಾಗಿ ಅಂಗಲಾಚುತಿದ್ದಾಗ ಗಮನಿಸಿದ ಜೀವ ರಕ್ಷಕ ಸಿಬ್ಬಂದಿಗಳಾದ ಮಂಜುನಾಥ್ ಹರಿಕಂತ್ರ, ನಾಗೇಂದ್ರ ಕುರ್ಲೆ ಮತ್ತು ಪ್ರದೀಪ ಅಂಬಿಗ ಹಾಗೂ ಮೈ ಸ್ಟಿಕ್ ಗೋಕರ್ಣ ಅಡ್ಡೆಂಚರ್ಸ್ ನ ಸಿಬ್ಬಂದಿ ತಕ್ಷಣ ರಕ್ಷಣೆಗೆ ಧಾವಿಸಿ ಪ್ರವಾಸಿಗನನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

  • ನಾಳೆಯಿಂದ ಹೊಸಾಡದಲ್ಲಿ ಆಲೆಮನೆ ಹಬ್ಬ ಪ್ರಾರಂಭ : ಮಾ. ೧ ರಂದು ಗೋ ಸಂಧ್ಯಾ.

    ನಾಳೆಯಿಂದ ಹೊಸಾಡದಲ್ಲಿ ಆಲೆಮನೆ ಹಬ್ಬ ಪ್ರಾರಂಭ : ಮಾ. ೧ ರಂದು ಗೋ ಸಂಧ್ಯಾ.

    ಕುಮಟಾ : ತಾಲೂಕಿನ ಮೂರೂರಿನ ಹೊಸಾಡಿನಲ್ಲಿರುವ ಅಮೃತಧಾರಾ ಗೋ ಶಾಲೆಯ ಆವಾರದಲ್ಲಿ ಫೇ. ೨೭ ರಿಂದ ಮಾ.೨ ರವರೆಗೆ “ಆಲೆಮನೆ ಹಬ್ಬ” ಹಮ್ಮಿಕೊಳ್ಳಲಾಗಿದೆ ಎಂದು ಗೋಶಾಲೆ ಸಮಿತಿ ಹಾಗೂ ಗೋ ಸಂಧ್ಯಾ ಸಮಿತಿಯವರು ಜಂಟಿ ಪ್ರಕಟಣೆ ನೀಡಿದ್ದಾರೆ.

    ಈ ದಿನಗಳಲ್ಲಿ ಸಾಂಪ್ರದಾಯಿಕ ಆಲೆಮನೆ ಹಬ್ಬ, ಕಬ್ಬಿನ ಹಾಲಿನ ವಿವಿಧೋತ್ಪನ್ನ ಮಾರಾಟ ಗೋಗ್ರಾಸ ಸೇವೆ, ಗವ್ಯೋತ್ಪನ್ನ ಮಾರಾಟ, ಗೋ ಸಂತರ್ಪಣೆ, ವಾರ್ಷಿಕ ಸಭೆ, ಗೋಸಂಧ್ಯಾ, ಗೋಪಾಲ ಗೌರವ, ದೇಶೀ ಗೋತಳಿ ವೈಭವ, ಗೋ ಪೂಜೆ, ಗೋ ದಾನ, ಪ್ರತೀ ದಿನ ಕಾಮಧೇನು ಯಾಗ, ವಿಶೇಷವಾಗಿ ಈ ವರ್ಷ ಗೋಆರತಿ ಎಂಬ ವಿಶಿಷ್ಟ ಕಾರ್ಯಕ್ರಮ. ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.

    ಫೇ. ೨೭ ರಂದು ಗೋ ಪ್ರೇಮಿ ಮಾತೆಯರ ದಿನ, 28 ರಂದು ಗೋ ಪ್ರೇಮಿ ಮಕ್ಕಳ ದಿನ, ಮಾ. 01 ರಂದು ಭಾರತೀಯ ಗೋ ಬ್ಯಾಂಕ್ ವಾಟ್ಸಾಪ್ ಬಳಗದ ದಿನ, 02 ರಂದು ಗೋ ಪ್ರೇಮಿ ಹಿರಿಯ ನಾಗರಿಕರ ದಿನ ನಡೆಯಲಿದ್ದು ಡಾ. ಡಿ.ಪಿ. ರಮೇಶ್ ಅವರ ಉಪಸ್ಥಿತಿಯಲ್ಲಿ ‘ವಿಶೇಷ ಪಂಚಗವ್ಯ ಚಿಕಿತ್ಸಾ ಶಿಬಿರ’ಮತ್ತು ಅವರಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ.

    ಗೋ ಸಂಧ್ಯಾ ಕಾರ್ಯಕ್ರಮ

    ಮಾ.೧ ರ ಶನಿವಾರ “ಗೋ ಸಂಧ್ಯಾ” ಕಾರ್ಯಕ್ರಮ ಆಯೋಜಿಸಲಾಗಿದೆ. ಕುಮಟಾ- ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ ದಿನಕರ ಕೆ. ಶೆಟ್ಟಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಮ್. ನಾರಾಯಣ, ಹೊನ್ನಾವರ ಉಪ ಅರಣ್ಯ ಸಂರಕ್ಷಣಾಧಿಕಾರಿ ಯೋಗೀಶ್ ಸಿ.ಕೆ., ಮೈಸೂರು ಡೆವಲಪ್‌ಮೆಂಟ್ ಸೆಂಟರ್ ನ ಪ್ರಮುಖ ವಿನಾಯಕ ಪಿ. ಹೆಗಡೆ, ನಿವೃತ್ತ ವಿಜ್ಞಾನಿ ಪ್ರಭಾಕರ ಜೆ. ಭಟ್ಟ, ಜಿ.ಪಂ ಮಾಜಿ ಸದಸ್ಯ ಪ್ರದೀಪ ನಾಯಕ ಉಪಸ್ಥಿತಿಯಲ್ಲಿ ಸಭಾ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ, ಕಾಮಧೇನು ಪ್ರಸಾದ ಭೋಜನ ನಡೆಯಲಿದೆ.

    ಗೋವಿನ ಉಳಿವಿನ ಹೊಸ ಪರಿಕಲ್ಪನೆಯೊಂದಿಗೆ ಈ ಕಾರ್ಯಕ್ರಮ‌ ಸಂಯೋಜನೆಗೊಂಡಿದ್ದು ನಾಲ್ಕು ದಿನಗಳ ಕಾಲ ಈ ಆಲೆಮನೆ ಹಬ್ಬ ನಡೆಯಲಿದೆ. ಪ್ರತಿದಿನ ಮಧ್ಯಾಹ್ನ 4 ಗಂಟೆಯಿಂದ ಆಲೆಮನೆ ಹಬ್ಬ ಪ್ರಾರಂಭವಾಗುತ್ತಿದ್ದು ಸಂಜೆ 5:30 ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.

    ಒಂದೇ ವೇದಿಕೆಯಲ್ಲಿ ಎರಡು ಕಬ್ಬಿನಗಾಣದ ಮಧ್ಯೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಇದರೊಂದಿಗೆ ಕೃಷಿ ಸಹಾಯಕ ಉಪಕರಣಗಳು ಮಾರಾಟ, ಗವ್ಯೋತ್ಪನ್ನಗಳ ಮಾರಾಟ, ಕರಕುಶಲ ಉತ್ಪನ್ನಗಳ ಮಾರಾಟ, ಕಬ್ಬಿನ ಹಾಲಿನ ಮಾರಾಟ, ಬಹು ಜನರ ಬೇಡಿಕೆಯ ತೊಡಾದೇವು, ಬೆಲ್ಲದ ಬಾಳೆದಿಂಡು, ಪಪ್ಪಾಯಿ ಬಾಳೆದಿಂಡು, ಬೆಲ್ಲ , ಕಬ್ಬಿನ ಹಾಲಿನ ಉತ್ಪನ್ನಗಳ ಮಾರಾಟ ನಡೆಯಲಿದೆ.

    ಯಾವುದೇ ನಿರ್ದಿಷ್ಟ ಆದಾಯವಿಲ್ಲದೇ ಅಂದಾಜು 300 ಗೋವುಗಳನ್ನು ಸಂರಕ್ಷಿಸುತ್ತಿರುವ ಅಮೃತಧಾರ ಗೋಶಾಲೆ ಹೊಸಾಡು ಅನಾಥ, ಅಪಘಾತಕ್ಕೀಡಾದ, ಕಸಾಯಿಖಾನೆಯಿಂದ ರಕ್ಷಿಸಲ್ಪಟ್ಟ, ವಯಸ್ಸಾದ ಗೋವುಗಳ ಪಾಲನೆ ಜೊತೆಯಲ್ಲಿ ಭಾರತೀಯ ಗೋ ತಳಿ ಸಂರಕ್ಷಣೆಯನ್ನು ಮಾಡುತ್ತಿದ್ದು ಆಲೆಮನೆ ಹಬ್ಬದ ಸಂಪೂರ್ಣ ಆದಾಯವನ್ನು ಗೋವಿನ ನಿರ್ವಹಣೆಗೆ ವಿನಿಯೋಗಿಸುವ ವಿನೂತನ ಯೋಜನೆ ಇದಾಗಿದೆ. ಇದರ ಜೊತೆಯಲ್ಲಿ ಆಧುನಿಕ ಭರಾಟೆಗೆ ಪಾರಂಪರಿಕ ಸಂಸ್ಕೃತಿ ನಶಿಸುತ್ತಿದ್ದು ಎಲ್ಲಾ ಗೋಪ್ರೇಮಿಗಳನ್ನು ಒಂದೆಡೆ ಸೇರಿಸಿ ಮುಂದಿನ ಪೀಳಿಗೆಗೆ ಗೋ ಸಂರಕ್ಷಣೆಯ ಜಾಗೃತಿ ಪಡಿಸುವ, ಪ್ರಾಚೀನ ಪರಂಪರೆಯನ್ನು ನೆನಪಿಸುವ, ಗೋವಿಗೆ ಸಂತರ್ಪಣೆಗೈಯುವ ಸದಾವಕಾಶ ಕಲ್ಪಿಸುವುದು ಇದರ ಉದ್ದೇಶವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • ಚೀನಾದಲ್ಲಿ ಪತ್ತೆಯಾಯ್ತಂತೆ ಕೊರೋನಾದಂತಹುದೇ ಇನ್ನೊಂದು ಹೊಸ ವೈರಸ್…!

    ಚೀನಾದಲ್ಲಿ ಪತ್ತೆಯಾಯ್ತಂತೆ ಕೊರೋನಾದಂತಹುದೇ ಇನ್ನೊಂದು ಹೊಸ ವೈರಸ್…!

    ಕೋವಿಡ್‌-19 (COVID-19) ವೈರಸ್‌ ಭೀಕರ ಸಾಂಕ್ರಾಮಿಕ ರೋಗಕ್ಕೆ ಕಾರಣವಾದಂತೆಯೇ ಪ್ರಾಣಿಯಿಂದ ಮನುಷ್ಯನಿಗೆ ಹರಡುವ ಅಪಾಯವನ್ನು ಹೊಂದಿರುವ ಹೊಸ ಬಾವಲಿ ಕೊರೊನಾ ವೈರಸ್ ಅನ್ನು ಚೀನಾದಲ್ಲಿ ಕಂಡುಹಿಡಿಯಲಾಗಿದೆ.

    ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ (SCMP) ಪ್ರಕಾರ, HKU5-CoV-2 ಎಂದು ಕರೆಯಲಾದ ಹೊಸ ವೈರಸ್ ಅನ್ನು ಪ್ರಸಿದ್ಧ ವಿಜ್ಞಾನಿ ಶಿ ಝೆಂಗ್ಲಿ ನೇತೃತ್ವದ ವೈರಾಲಜಿಸ್ಟ್‌ಗಳ ತಂಡವು ಪತ್ತೆ ಮಾಡಿದೆ. ಇದು ಬಾವಲಿಯಿಂದ ಮನುಷ್ಯನಿಗೆ ಹರಡುವ ಸಂಭಾವ್ಯ ಅಪಾಯವಿದೆ ಎಂಬುದು ಆತಂಕಕ್ಕೆ ಕಾರಣವಾಗಿದೆ.

    ಈ ಹೊಸ ವೈರಸ್ SARS CoV-2 ವೈರಸ್‌ ಹೋಲಿಕೆಯನ್ನು ಹೊಂದಿದೆ ಎಂದು ಚೀನಾದ ಸಂಶೋಧಕರು ಕಂಡುಕೊಂಡಿದ್ದಾರೆ. SARS CoV-2 ವೈರಸ್‌ ಕೋವಿಡ್ ಸಾಂಕ್ರಾಮಿಕಕ್ಕೆ ಕಾರಣವಾದ ವೈರಸ್ ಆಗಿದೆ. ಈಗ ಪತ್ತೆಯಾಗಿರುವ HKU5-CoV-2 ಎಂದು ಕರೆಯಲಾದ ಹೊಸ ವೈರಸ್ ಕೂಡ ಕೋವಿಡ್ ಮಾಡಿದ ರೀತಿಯಲ್ಲಿಯೇ ಎಸಿಇ2(ACE2) ಎಂಬ ಮಾನವ ಜೀವಕೋಶಗಳಿಗೆ ನುಸುಳಬಹುದು. ಇದು ಎಸಿಇ 2 ರಿಸೆಪ್ಟರ್ ಪ್ರೋಟೀನ್ ಮೂಲಕ ಜೀವಕೋಶಗಳನ್ನು ಪ್ರವೇಶಿಸುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ. ಕೋವಿಡ್ -19 ವೈರಸ್ ಬಳಸುವುದು ಅದೇ ಮಾರ್ಗವಾಗಿದೆ.

    HKU5-CoV-2 ಎಂದರೇನು?
    HKU5-CoV-2 ಎಂಬುದು ಮೆರ್ಬೆಕೊವೈರಸ್ ಉಪಕುಲಕ್ಕೆ ಸೇರಿದ ಕೊರೊನಾ ವೈರಸ್ ಆಗಿದೆ, ಇದು ಮಧ್ಯಪ್ರಾಚ್ಯದ ಉಸಿರಾಟದ ತೊಂದರೆ (MERS) ಗೆ ಕಾರಣವಾಗುವ ವೈರಸ್ ಅನ್ನು ಸಹ ಒಳಗೊಂಡಿದೆ. ಹೊಸ ವೈರಸ್ ಮಾನವನ ಇಸಿಇ2(ACE2) ಎಂಬ ಜೀವಕೋಶಗಳಿಗೆ ಪ್ರವೇಶಿಬಹುದು ಎಂದು ವಿಜ್ಞಾನಿಗಳು ಕಂಡುಕೊಂಡಿದ್ದಾರೆ, ಇದು SARS-CoV-2 ಮತ್ತು NL63 (ಸಾಮಾನ್ಯ ಶೀತ ವೈರಸ್) ಗೆ ಹೋಲುತ್ತದೆ. ಆದರೆ ಪ್ರತಿ ಕೊರೊನಾ ವೈರಸ್‌ ಮಾನವರಿಗೆ ಹರಡುವುದಿಲ್ಲ.

    ಜರ್ನಲ್ ಸೆಲ್‌ನಲ್ಲಿ ಪ್ರಕಟವಾದ ಅಧ್ಯಯನವು HKU5-CoV-2 ಪ್ರಯೋಗಾಲಯದ ವ್ಯವಸ್ಥೆಗಳಲ್ಲಿ ಮಾನವ ಜೀವಕೋಶಗಳಿಗೆ ಸೋಂಕು ತಗುಲಿರುವುದು ಕಂಡುಬಂದಿದೆ ಎಂದು ಹೈಲೈಟ್ ಮಾಡುತ್ತದೆ, ಪ್ರಯೋಗಾಲಯದ ಪರೀಕ್ಷೆಯ ಸಮಯದಲ್ಲಿ, ವಿಜ್ಞಾನಿಗಳು ಬಳಸಿದ ಮಿನಿ-ಹ್ಯೂಮನ್ ಆರ್ಗನ್ ಮಾದರಿಗಳಲ್ಲಿ ಮಾನವ ಜೀವಕೋಶಗಳಿಗೆ ಸೋಂಕು ತರಲು HKU5-CoV-2 ಗೆ ಸಾಧ್ಯವಾಗಿದೆ ಎಂದು ತಂಡವು ಕಂಡುಹಿಡಿದಿದೆ. ಕೊರೊನಾ ವೈರಸ್‌ ಸಾಮಾನ್ಯ ಶೀತದಿಂದ ತೀವ್ರವಾದ ಉಸಿರಾಟದ ಸಿಂಡ್ರೋಮ್ (SARS) ಮತ್ತು ಕೋವಿಡ್ -19ವರೆಗಿನ ರೋಗಗಳಿಗೆ ಕಾರಣವಾಗುವ ವೈರಸ್‌ ಇತರ ಪ್ರಣಿಗಳಿಗೆ ಜಿಗಿಯುವ ಸಾಮರ್ಥ್ಯದ ಬಗ್ಗೆ ಆತಂಕ ಉಂಟುಮಾಡುತ್ತದೆ. ಈ ಸಂಶೋಧನೆಯಲ್ಲಿ ಮಾನವರಲ್ಲಿ ಈ ವೈರಸ್‌ ರೋಗವನ್ನು ಉಂಟುಮಾಡುತ್ತದೆಯೇ ಎಂಬುದು ನಿಖರವಾಗಿ ಗೊತ್ತಾಗಿಲ್ಲ.

    ಆದಾಗ್ಯೂ, ಮಾನವ ಜೀವಕೋಶಗಳಿಗೆ ಸೋಂಕು ತಗುಲಿಸುವ ಅದರ ಪ್ರಸ್ತುತ ಸಾಮರ್ಥ್ಯ ಕೋವಿಡ್ -19 ವೈರಸ್‌ಗಿಂತ ಗಮನಾರ್ಹವಾಗಿ ಕಡಿಮೆ ಇದೆ ಎಂದು ಸಂಶೋಧಕರು ಹೇಳಿದ್ದಾರೆ. ಮಾನವ ಜೀವಕೋಶಗಳಿಗೆ ಸೋಂಕು ತಗುಲಿಸುವ ಸಾಮರ್ಥ್ಯದ ಹೊರತಾಗಿಯೂ, ಮಾನವ ಜನಸಂಖ್ಯೆಗೆ ಅದರ ತಕ್ಷಣದ ಅಪಾಯ ಬಗ್ಗೆ ವೈರಸ್‌ನ ಸಾಮರ್ಥ್ಯವು ಈ ಹಂತದಲ್ಲಿ ಊಹಾತ್ಮಕವಾಗಿಯೇ ಉಳಿದಿದೆ.
    ಈ ಹೊಸ ವೈರಸ್‌ನಿಂದ ಉಂಟಾಗುವ ಮತ್ತೊಂದು ಸಾಂಕ್ರಾಮಿಕದ ಬಗ್ಗೆ ಮಿನ್ನೇಸೋಟ ವಿಶ್ವವಿದ್ಯಾಲಯದ ಸಾಂಕ್ರಾಮಿಕ ರೋಗ ತಜ್ಞ ಡಾ ಮೈಕೆಲ್ ಓಸ್ಟರ್‌ಹೋಮ್ ಅವರು ಪ್ರತಿಕ್ರಿಯಿಸಿದ್ದು, ಸಂಶೋಧನೆಯ ವರದಿಯು ವೈರಸ್‌ ಬಗ್ಗೆ ಅತಿಯಾಗಿ ಉತ್ಪ್ರೇಕ್ಷಿಸಿದಂತಿದೆ ಎಂದು ಹೇಳಿದ್ದಾರೆ. ಕೋವಿಡ್‌-19 ವೈರಸ್‌ ಸಾಂಕ್ರಾಮಿಕ ಬಂದು ಹೋದ ನಂತರ ಈಗ ಜನರಲ್ಲಿ ರೋಗ ಪ್ರತಿಬಂಧಕ ಶಕ್ತಿ ಹೆಚ್ಚಿದೆ. ಹೀಗಾಗಿ ಅದು ಜನರಿಗೆ ಹಾನಿ ಮಾಡುವ ಸಾಧ್ಯತೆ ಇಲ್ಲ ಎಂದು ಹೇಳಿದ್ದಾರೆ.

  • ಮತ್ತೊಂದು ಡಿಜಿಟಲ್ ಕಾರ್ಯಾಚರಣೆ : ಗೂಗಲ್ ಪ್ಲೇ ಸ್ಟೋರ್‌ನಿಂದ 119 ಅಪ್ಲಿಕೇಶನ್ ಡಿಲೀಟ್

    ಮತ್ತೊಂದು ಡಿಜಿಟಲ್ ಕಾರ್ಯಾಚರಣೆ : ಗೂಗಲ್ ಪ್ಲೇ ಸ್ಟೋರ್‌ನಿಂದ 119 ಅಪ್ಲಿಕೇಶನ್ ಡಿಲೀಟ್

    ನವದೆಹಲಿ : ಗೂಗಲ್ ಪ್ಲೇ ಸ್ಟೋರ್‌ನಿಂದ 119 ಚೀನೀ ಅಪ್ಲಿಕೇಶನ್‌ಗಳನ್ನು ತೆಗೆದುಹಾಕಲು ಸೂಚನೆ ನೀಡುವ ಮೂಲಕ ಸರ್ಕಾರವು ಮತ್ತೊಂದು ಡಿಜಿಟಲ್ ಕಾರ್ಯಾಚರಣೆ ಪ್ರಾರಂಭಿಸಿದೆ.

    ಈ ಅಪ್ಲಿಕೇಶನ್‌ಗಳು ಚೀನಾ ಮತ್ತು ಹಾಂಗ್ ಕಾಂಗ್‌ನ ಡೆವಲಪರ್‌ಗಳ ಜೊತೆ ಸಂಪರ್ಕ ಹೊಂದಿವೆ, ನಿರ್ಬಂಧಿಸಿದ ಅಪ್ಲಿಕೇಶನ್‌ಗಳಲ್ಲಿ ಹಲವು ವೀಡಿಯೊ ಮತ್ತು ಧ್ವನಿ ಚಾಟ್ ಪ್ಲಾಟ್‌ಫಾರ್ಮ್‌ಗಳು ಸೇರಿವೆ. ಈ ಎಲ್ಲಾ ಅಪ್ಲಿಕೇಶನ್‌ಗಳು ಭಾರತದ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದ್ದವು. ಈ ಅಪ್ಲಿಕೇಶನ್‌ಗಳು ಭಾರತದ ರಾಷ್ಟ್ರೀಯ ಭದ್ರತೆ ಮತ್ತು ಸಾರ್ವಭೌಮತೆಗೆ ಅಪಾಯವನ್ನುಂಟು ಮಾಡುತ್ತದೆ ಎಂಬ ಆತಂಕದ ನಂತರ ಈ ಕ್ರಮವು ಬಂದಿದೆ. ಈ ಮೊದಲು ಟಿಕ್‌ಟಾಕ್ ಮತ್ತು ಶೇರ್‌ ಇಟ್‌ನಂತಹ ಜನಪ್ರಿಯ ಅಪ್ಲಿಕೇಶನ್‌ಗಳನ್ನು ಒಳಗೊಂಡಂತೆ ನೂರಾರು ಚೀನೀ ಅಪ್ಲಿಕೇಶನ್‌ಗಳನ್ನು ನಿರ್ಬಂಧಿಸುವ ಮೂಲಕ ಭಾರತವು 2020 ರಲ್ಲಿ ಡಿಜಿಟಲ್ ನಿಷೇಧವನ್ನು ಪ್ರಾರಂಭಿಸಿತು.

    ಮನಿ ಕಂಟ್ರೋಲ್‌ನ ವರದಿ ಪ್ರಕಾರ, ಇಷ್ಟೊಂದು ದೊಡ್ಡ ಸಂಖ್ಯೆಯ ಮೊಬೈಲ್‌ ಆ್ಯಪ್​ಗಳನ್ನು ನಿಷೇಧಿಸುವ ನಿರ್ಧಾರ 2020 ರ ನಂತರ ಇದೇ ಮೊದಲ ಬಾರಿ ಆಗಿದೆ. 2020 ರಲ್ಲಿ ಸಹ, ಕೇಂದ್ರ ಸರ್ಕಾರವು ಚೀನಾದ ಅಪ್ಲಿಕೇಶನ್‌ಗಳ ಮೇಲೆ ನಿಷೇಧವನ್ನು ಪ್ರಕಟಿಸಿತ್ತು. ಈ ಬಾರಿಯೂ ರಾಷ್ಟ್ರೀಯ ಭದ್ರತಾ ಕಾಳಜಿಯನ್ನು ಉಲ್ಲೇಖಿಸಿ ಮೊಬೈಲ್ ಅಪ್ಲಿಕೇಶನ್‌ಗಳನ್ನು ನಿಷೇಧಿಸಲಾಗಿದೆ.

    ಚೀನೀ ಅಪ್ಲಿಕೇಶನ್‌ಗಳ ಮೇಲಿನ ಈ ನಿಷೇಧವನ್ನು ಜಾರಿಗೊಳಿಸಲು ಕೇಂದ್ರ ಸರ್ಕಾರವು ಐಟಿ ಕಾಯಿದೆ 69A ಅನ್ನು ಜಾರಿಗೊಳಿಸಿತು. ನಿಷೇಧಿತ ಪಟ್ಟಿಯಲ್ಲಿರುವ ಕೆಲವು ಅಪ್ಲಿಕೇಶನ್‌ಗಳನ್ನು ಸಿಂಗಾಪುರ, ಅಮೆರಿಕ, ಯುಕೆ ಮತ್ತು ಆಸ್ಟ್ರೇಲಿಯಾ ದೇಶದ ಕಂಪನಿಗಳು ಅಭಿವೃದ್ಧಿಪಡಿಸಿವೆ.

    ವರದಿಯ ಪ್ರಕಾರ, ಭಾರತ ಸರ್ಕಾರವು ಈ ಅಪ್ಲಿಕೇಶನ್‌ಗಳಿಗೆ ಸಾರ್ವಜನಿಕ ಪ್ರವೇಶವನ್ನು ಸ್ಥಗಿತಗೊಳಿಸಿದೆ ಮತ್ತು 119 ರಲ್ಲಿ 15 ಅನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ ತೆಗೆದುಹಾಕಲಾಗಿದೆ, ಇನ್ನೂ ಹಲವಾರು ಪ್ರವೇಶಿಸಬಹುದಾಗಿದೆ.

    ಭಾರತ ಸರ್ಕಾರ ನಿರ್ಬಂಧಿಸಿದ 119 ಅಪ್ಲಿಕೇಶನ್‌ಗಳಲ್ಲಿ, ಕೇವಲ ಮೂರು ಅಪ್ಲಿಕೇಶನ್‌ಗಳ ಹೆಸರು ಮಾತ್ರ ರಿವೀಲ್ ಆಗಿದೆ. ಇವುಗಳಲ್ಲಿ ಸಿಂಗಾಪುರ ಮೂಲದ ವಿಡಿಯೋ ಚಾಟ್ ಮತ್ತು ಗೇಮಿಂಗ್ ಪ್ಲಾಟ್‌ಫಾರ್ಮ್ ಚಿಲ್‌ಚಾಟ್, ಚೀನೀ ಡೆವಲಪರ್ ಚಾಂಗ್‌ ಆ್ಯಪ್ ಮತ್ತು ಆಸ್ಟ್ರೇಲಿಯಾದ ಅಪ್ಲಿಕೇಶನ್ ಹನಿಕಾಂಬ್ ಸೇರಿವೆ. ಭದ್ರತಾ ಕಾರಣಗಳಿಗಾಗಿ ನಿಷೇಧಿಸಲಾದ ಅಪ್ಲಿಕೇಶನ್‌ಗಳ ಪಟ್ಟಿಯನ್ನು ಸರ್ಕಾರ ಬಿಡುಗಡೆ ಮಾಡಿಲ್ಲ.

  • ಪದ್ಮಶ್ರೀ ಪುರಸ್ಕೃತ ಸುಕ್ರಿ ಬೊಮ್ಮು ಗೌಡ ಇನ್ನಿಲ್ಲ : ಶಾಶ್ವತವಾಗಿ ಹಾಡು ನಿಲ್ಲಿಸಿದ ಸುಕ್ರಜ್ಜಿ.

    ಪದ್ಮಶ್ರೀ ಪುರಸ್ಕೃತ ಸುಕ್ರಿ ಬೊಮ್ಮು ಗೌಡ ಇನ್ನಿಲ್ಲ : ಶಾಶ್ವತವಾಗಿ ಹಾಡು ನಿಲ್ಲಿಸಿದ ಸುಕ್ರಜ್ಜಿ.

    ಅಂಕೋಲಾ : ಜಾನಪದ ಕೋಗಿಲೆ, ಪದ್ಮಶ್ರೀ‌ ಪುರಸ್ಕೃತರಾದ 88 ವರ್ಷದ ಸುಕ್ರಿ ಬೊಮ್ಮ ಗೌಡ ಅವರು ಗುರುವಾರ (ಫೆಬ್ರವರಿ 13) ಮುಂಜಾನೆ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಸುಕ್ರಿ ಬೊಮ್ಮ ಗೌಡ ಇಂದು, ಗುರುವಾರ ಮುಂಜಾನೆ 3:30ಕ್ಕೆ ಇಹಲೋಕ ತ್ಯಜಿಸಿದ್ದಾರೆ. ಸುಕ್ರಜ್ಜಿ ಎಂದೇ ಖ್ಯಾತಿ ಪಡೆದಿದ್ದ ಅವರು, ಕೆಲವು ತಿಂಗಳುಗಳಿಂದ ವಯೋಸಹಜ ಅನಾರೋಗ್ಯಕ್ಕೆ ಒಳಗಾಗಿದ್ದರು.

    ಮೂಲತಃ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ‌ ತಾಲೂಕಿನ ಬಡಿಗೇರಿ ಗ್ರಾಮದಲ್ಲಿ ಹಾಲಕ್ಕಿ ಬುಡಕಟ್ಟು ಜನಾಂಗದಲ್ಲಿ ಜನಿಸಿದ್ದ ಸುಕ್ರಿ ಬೊಮ್ಮ ಗೌಡ ಅವರು ಸಾರಾಯಿ ವಿರೋಧ ಆಂದೋಲನದಲ್ಲಿ ಮುಂಚೂಣಿಯಲ್ಲಿದ್ದರು.
    ಸುಕ್ರಿ ಬೊಮ್ಮಗೌಡ ಬಾಲ್ಯದಲ್ಲಿದ್ದಾಗ ತಮ್ಮ ತಾಯಿ ಮೂಲಕ ಜಾನಪದ ಹಾಡುಗಳನ್ನು ಕಲಿತಿದ್ದರು. ಜಾನಪದ ಹಾಡು, ಹಾಲಕ್ಕಿ ಒಕ್ಕಲಿಗ ಬುಡಕಟ್ಟಿನ ಸಾಂಪ್ರದಾಯಿಕ ಸಂಗೀತ ಹಾಡುಗಳನ್ನು ಸಂರಕ್ಷಿಸಿಕೊಂಡು ಹೋಗುವಲ್ಲಿ ಶ್ರಮಿಸಿದ್ದರು. ವಿವಿಧ ಸಾಮಾಜಿಕ ಹೋರಾಟಗಳಲ್ಲಿಯೂ ಪಾಲ್ಗೊಂಡಿದ್ದರು.ಭಾರತ ಸರ್ಕಾರ, 2017ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು. ಪದ್ಮಶ್ರೀ ಮಾತ್ರವಲ್ಲದೇ, ಸ್ಥಳೀಯ ಬುಡಕಟ್ಟು ಜನಾಂಗದ ಸಂಸ್ಕೃತಿಯನ್ನು ಸಂರಕ್ಷಿಸಿದ್ದಕ್ಕಾಗಿ 1988ರಲ್ಲಿ ಕರ್ನಾಟಕ ಸರ್ಕಾರದಿಂದ ಪ್ರಶಸ್ತಿ, 1999ರಲ್ಲಿ ‘ಜಾನಪದ ಶ್ರೀ’ ಪ್ರಶಸ್ತಿ 2006ರಲ್ಲಿ ಕನ್ನಡ ವಿಶ್ವವಿದ್ಯಾಲಯದಿಂದ ನೀಡಲಾಗುವ ‘ನಾಡೋಜ’ ಗೌರವ ಹಾಗೂ 2009ರಲ್ಲಿ ಸಂದೇಶ ಕಲಾ ಪ್ರಶಸ್ತಿ, ಆಳ್ವಾಸ್ ನುಡಿಸಿ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳಿಗೆ ಅವರು ಭಾಜನರಾಗಿದ್ದರು. ಬುಡಕಟ್ಟು ಜನಾಂಗವಾದ ಹಾಲಕ್ಕಿ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸದಿದ್ದರೆ ತಮಗೆ ನೀಡಿದ್ದ ಪದ್ಮಶ್ರೀ ಪ್ರಶಸ್ತಿಯನ್ನು ವಾಪಸ್ ನೀಡಲು ಮುಂದಾಗಿದ್ದರು.

    ಜಿಲ್ಲಾ ಉಸ್ತುವಾರಿ ಸಚಿವರ ಸಂತಾಪ :

    ಪದ್ಮಶ್ರೀ ಪುರಸ್ಕೃತೆ’ ಸುಕ್ರಿ ಬೊಮ್ಮ ಗೌಡ ಅವರು ನಮ್ಮನ್ನೆಲ್ಲ ಅಗಲಿರುವ ಸುದ್ದಿ ತಿಳಿದು ಮನಸ್ಸಿಗೆ ದುಃಖ ಉಂಟಾಗಿದೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನಲ್ಲಿ ಜನಿಸಿ, ತಮ್ಮ ಜಾನಪದ ಗಾಯನದ ಮೂಲಕ ಜಾನಪದ ಕ್ಷೇತ್ರದಲ್ಲಿ ಮೈಲುಗಲ್ಲು ಸೃಷ್ಟಿಸಿದ ಸುಕ್ರಿ ಗೌಡರನ್ನು ಕಳೆದುಕೊಂಡಿರುವುದು ಜಾನಪದ ಕ್ಷೇತ್ರಕ್ಕೆ ಹಾಗೂ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮoಕಾಳ ವೈದ್ಯ ಸಂತಾಪ ಸೂಚಿಸಿದ್ದಾರೆ.

    ಸಂಸದ ಕಾಗೇರಿ ಸಂತಾಪ :

    ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಜಾನಪದ ಗಾಯಕಿ ಹೋರಾಟಗಾರ್ತಿ ಸುಕ್ರಿ ಬೊಮ್ಮ ಗೌಡ ಅವರು ನಿಧನರಾದ ಸುದ್ದಿ ಕೇಳಿ ಅಘಾತವಾಯಿತು. ಸುಕ್ರಜ್ಜಿ ಎಂದೇ ಖ್ಯಾತರಾಗಿದ್ದ ಅವರು ಹಾಲಕ್ಕಿ ಜನಪದ ಹಾಡುಗಳನ್ನು ಹಾಡುವ ಮೂಲಕ ಚಿರಪರಿಚಿತರಾಗಿದ್ದರು ಮತ್ತು ಮಧ್ಯ ಮಾರಾಟ ಹಾವಳಿ ಹೆಚ್ಚಿದ್ದರಿಂದ ಅದನ್ನು ತಡೆಯಲು ಹಲವು ದಶಕಗಳ ಹಿಂದೆ ಸಾರಾಯಿ ವಿರೋಧಿ ಜನಾಂದೋಲನ ಸಹ ನಡೆಸಿದ್ದರು. ಭಾರತ ಸರ್ಕಾರದಿಂದ ಕೊಡಮಾಡುವ “ಪದ್ಮಶ್ರೀ” ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು. ಸುಕ್ರಿ ಗೌಡ ಅವರ ಅಗಲುವಿಕೆಯಿಂದ ಜನಪದ ಸಂಸ್ಕೃತಿ ಸಂರಕ್ಷಕಿಯಾಗಿದ್ದ, ಅದಮ್ಯ ಚೇತನವನ್ನು ನಾಡು ಕಳೆದುಕೊಂಡಂತಾಗಿದೆ ಎಂದು ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಸಂತಾಪ ಸೂಚಿಸಿದ್ದಾರೆ.

  • “ತರಂಗ ಫರ್ನಿಚರ್ ಫೆಸ್ಟಿವಲ್” ಪ್ರಾರಂಭವಾಗಿದೆ.

    “ತರಂಗ ಫರ್ನಿಚರ್ ಫೆಸ್ಟಿವಲ್” ಪ್ರಾರಂಭವಾಗಿದೆ.

    ಕುಮಟಾ : ಜನರು ಬಹುವಾಗಿ ಮೆಚ್ಚಿಕೊಂಡ ಹಾಗೂ ಜನರ ಭರವಸೆಗೆ ತಕ್ಕಂತೆ ಗುಣಮಟ್ಟದ ವಸ್ತುಗಳನ್ನು ಒದಗಿಸಿರುವ, ಜಿಲ್ಲೆಯ ಅತಿದೊಡ್ಡ ಶೋರೂಮ್ ತರಂಗ ಎಲೆಕ್ಟ್ರಾನಿಕ್ಸ್ ಆ್ಯಂಡ್ ಫರ್ನಿಚರ್ ನಲ್ಲಿ ಇದೀಗ “ತರಂಗ ಫರ್ನಿಚರ್ ಫೆಸ್ಟಿವಲ್” ಪ್ರಾರಂಭವಾಗಿದೆ. ಶೇಕಡಾ 45ರ ವರೆಗೆ ರಿಯಾಯತಿ, ಫ್ರೀ ಹೋಮ್ ಡಿಲೇವರಿ, ಶೂನ್ಯ ಬಡ್ಡಿದರದಲ್ಲಿ ಸುಲಭ ಕಂತುಗಳು ನಿಮಗಾಗಿ ಕಾದಿವೆ. ಜನವರಿ 14 ರಿಂದ ಜನವರಿ 31ರ ವರೆಗೆ ಈ ತರಂಗ ಫರ್ನಿಚರ್ ಮೇಳ ನಡೆಯಲಿದ್ದು, ಅತ್ಯಾಧುನಿಕ ವೈವಿದ್ಯ ಹೋಮ್ ಡೆಕೋರ್‌ಗಳು, ಇಂಪೋರ್ಟೆಡ್ ಫರ್ನಿಚರ್‌ಗಳ ಬೃಹತ್ ಕಲೆಕ್ಷನ್ ಒಂದೇ ಸೂರಿನಡಿ ಸಿಗಲಿದೆ.

    3+1+1 ವುಡನ್ ಸೋಫಾ ಸೆಟ್‌ಗಳು 18,990 ರಿಂದ ಪ್ರಾರಂಭ, ತ್ರೀ ಸೀಟರ್ ಕುಶನ್ ಸೋಫಾ 4,990 ರಿಂದ ಮತ್ತು ವುಡನ್ Four Chair ಡೈನಿಂಗ್ ಸೆಟ್ 17, 900 ರಿಂದ ಹಾಗು ಕ್ವೀನ್ ಸೈಜ್ ಅಕೇಶಿಯಾ ಕಾಟ್ 8,990 ರಿಂದ ಆರಂಭವಾಗಲಿದೆ. ಆಫೀಸ್ ಟೇಬಲ್ ಜೊತೆಗೆ ಆಫೀಸ್ ಚೇರ್ ಫ್ರೀ, ವಾರ್ಡ್ರೋಬ್ ಕೊಂಡರೆ, ಡ್ರೆಸ್ಸಿಂಗ್ ಟೇಬಲ್ ಉಚಿತ.. ಇನ್ನು ಹತ್ತಾರು ಆಕರ್ಷಕ ಆಫರ್‌ಗಳು ಲಭ್ಯ.

    ವುಡನ್, ಕುಶನ್ ಸೋಪಾ , ಕಾಟ್ ಸೇರಿ ಎಲ್ಲಾ ರೀತಿಯ ಫರ್ನಿಚರ್‌ಗಳನ್ನು ನಿಮ್ಮ ಅಗತ್ಯತೆಗೆ ತಕ್ಕಂತೆ ನಿರ್ಮಿಸಿಕೊಡಲಾಗುವುದು. ವುಡನ್ ಸೋಫಾ, ಕಾಟ್ಸ್ ಮತ್ತು ಡೈನಿಂಗ್ ಮೇಲೆ ಮೇಲೆ 5 ವರ್ಷ ಮತ್ತು ಕಪಾಟು ಮತ್ತು ಡ್ಯೂರೋಪ್ಲೇಕ್ಸ್ ಮ್ಯಾಟ್ರೆಸ್ ಮೇಲೆ 10 ವರ್ಷ ವಾರಂಟಿ ಇದೆ.

    ವಿಶ್ವಾಸಮಾನ್ಯ.. ಸೇವೆ ಅನನ್ಯ, ಇಂದೇ ಭೇಟಿ ನೀಡಿ ತರಂಗ ಎಲೆಕ್ಟ್ರಾನಿಕ್ಸ್, ಕುಮಟಾ ಮತ್ತು ಹೊನ್ನಾವರ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 8494988555, 8494891222 .

  • ಸಮುದ್ರದಲ್ಲಿ ಮುಳುಗುತ್ತಿರುವ ನಾಲ್ವರ ರಕ್ಷಣೆ

    ಸಮುದ್ರದಲ್ಲಿ ಮುಳುಗುತ್ತಿರುವ ನಾಲ್ವರ ರಕ್ಷಣೆ

    ಗೋಕರ್ಣ: ಇಲ್ಲಿಯ ಮುಖ್ಯ ಕಡಲ ತೀರದ ಮಿಡ್ಸ್ ಬೀಚಿನ ಬಳಿ ಸಮುದ್ರದ ನೀರಿನಲ್ಲಿ ಮುಳುಗುತ್ತಿದ್ದ ಕೇರಳ ಮೂಲದ ನಾಲ್ವರು ಪ್ರವಾಸಿಗರನ್ನು ಬುಧವಾರ ಸಂಜೆ ಜೀವ ರಕ್ಷಕ ಸಿಬ್ಬಂದಿ ರಕ್ಷಿಸಿ ಪ್ರಾಣಾಪಾಯದಿಂದ ಪಾರುಮಾಡಿದ್ದಾರೆ.

    ಕೇರಳದ ಅದ್ಭತ್, ಮುರುಳಿ, ತೇಜಸ್ವಿ ಮತ್ತು ಪ್ರಿಯಾಮ್ಮಾದ ಎಂಬುವರು ರಕ್ಷಿಸಲ್ಪಟ್ಟ ನಾಲ್ವರು ಪ್ರವಾಸಿಗರು. ಇವರು ಕುಟುಂಬ ಸಮೇತ ಗೋಕರ್ಣ ಪ್ರವಾಸಕ್ಕೆ ಬಂದಿದ್ದರು. ಸಮುದ್ರದಲ್ಲಿ ಈಜಾಡುತ್ತಿರುವಾಗ ಅಲೆಯ ಸುಳಿಗೆ ಸಿಲುಕಿ ಮುಳುಗುವ ಹಂತದಲ್ಲಿದ್ದರು. ಕೂಡಲೇ ಇದನ್ನು ಗಮನಿಸಿದ ಜೀವ ರಕ್ಷಕ ಸಿಬ್ಬಂದಿ ಮಹಾಂತೇಶ ಹರಿಕಂತ್ರ, ಸ್ಥಳೀಯರಾದ ರಾಘವೇಂದ್ರ ಗೌಡ ಮತ್ತು ಸಂತೋಷ ಗೌಡ ಜೀವ ರಕ್ಷಕ ಪರಿಕರದೊಂದಿಗೆ ಧಾವಿಸಿ ನಾಲ್ವರನ್ನೂ ರಕ್ಷಿಸಿ ದಡಕ್ಕೆ ತಂದು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ.

  • ಮಾಜಿ ಪ್ರಧಾನಿ ಮನ್‌ಮೋಹನ್‌ ಸಿಂಗ್‌ ಇನ್ನಿಲ್ಲ.

    ಮಾಜಿ ಪ್ರಧಾನಿ ಮನ್‌ಮೋಹನ್‌ ಸಿಂಗ್‌ ಇನ್ನಿಲ್ಲ.

    ಮಾಜಿ ಪ್ರಧಾನಿ ಮನ್‌ಮೋಹನ್‌ ಸಿಂಗ್‌ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ ಎಂದು ವರದಿಗಳು ತಿಳಿಸಿದೆ. ತೀವ್ರ ಆರೋಗ್ಯ ಹದಗೆಟ್ಟ ಹಿನ್ನಲೆಯಲ್ಲಿ ಗುರುವಾರ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಮನ್‌ಮೋಹನ್‌ ಸಿಂಗ್‌ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು.

    ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಮನ್‌ಮೋಹನ್‌ ಸಿಂಗ್‌ ಕಳೆದ ಕೆಲವು ತಿಂಗಳುಗಳಿಗೆ ಆಸ್ಪತ್ರೆಗೆ ದಾಖಲಾಗಿ ಬಿಡುಗಡೆ ಆಗುತ್ತಿದ್ದರು. ಗುರುವಾರ ಸಂಜೆಯ ವೇಳೆಗೆ ಆರೋಗ್ಯದಲ್ಲಿ ತೀವ್ರ ಏರುಪೇರು ಆಗಿದ್ದರಿಂದ ಅವರನ್ನು ಏಮ್ಸ್‌ಗೆ ದಾಖಲು ಮಾಡಲಾಗಿತ್ತು.

    ಈ ಬಗ್ಗೆ ರಾಬರ್ಟ್‌ ವಾದ್ರಾ ಟ್ವೀಟ್ ಮಾಡಿದ್ದು,’ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನದ ಬಗ್ಗೆ ತಿಳಿದು ನನಗೆ ತುಂಬಾ ದುಃಖವಾಗಿದೆ. ಅವರ ಕುಟುಂಬ ಮತ್ತು ಪ್ರೀತಿಪಾತ್ರರಿಗೆ ನನ್ನ ಆಳವಾದ ಸಂತಾಪಗಳು. ನಮ್ಮ ದೇಶಕ್ಕೆ ನೀವು ಮಾಡಿದ ಸೇವೆಗೆ ಧನ್ಯವಾದಗಳು. ನಿಮ್ಮ ಆರ್ಥಿಕ ಕ್ರಾಂತಿಗಾಗಿ ನೀವು ಯಾವಾಗಲೂ ನೆನಪಿನಲ್ಲಿರುತ್ತೀರಿ ಮತ್ತು ಪ್ರಗತಿಪರ ಬದಲಾವಣೆಗಳನ್ನು ನೀವು ದೇಶಕ್ಕೆ ತಂದಿದ್ದೀರಿ’ ಎಂದು ಬರೆದುಕೊಂಡಿದ್ದಾರೆ.

  • ಭಾಗವತ್ ಆಸ್ಪತ್ರೆಯಲ್ಲಿ ಸೇವೆ ಪ್ರಾರಂಭಿಸುತ್ತಿರುವ ಡಾ. ಸುಮಂತ್ ಬಳಗಂಡಿ

    ಭಾಗವತ್ ಆಸ್ಪತ್ರೆಯಲ್ಲಿ ಸೇವೆ ಪ್ರಾರಂಭಿಸುತ್ತಿರುವ ಡಾ. ಸುಮಂತ್ ಬಳಗಂಡಿ

    ಕುಮಟಾ : ‘ಬೆಳೆಯ ಸಿರಿ ಮೊಳಕೆಯಲ್ಲಿ’ ಎಂಬ ಉಕ್ತಿಯಂತೆ ಚಿಕ್ಕಂದಿನಿಂದಲೂ ಪ್ರತಿಭಾವಂತರಾಗಿ, ಈಗ ಪ್ರಖ್ಯಾತ ರಾಷ್ಟ್ರೀಯ ಮಾನಸಿಕ ಆರೋಗ್ಯ ಸಂಸ್ಥೆ (ನಿಮ್ಹ್ಯಾನ್ಸ್) ನಲ್ಲಿ ಡಿ.ಎಮ್.ನ್ಯುರೋಲೊಜಿ ಅಧ್ಯಯನವನ್ನು ಯಶಸ್ವಿಯಾಗಿ ಪೂರೈಸಿರುವ ಡಾ. ಸುಮಂತ್ ಬಳಗಂಡಿ ಅವರು ಮೆದುಳು ಮತ್ತು ನರ ರೋಗ ತಜ್ಙರಾಗಿ ಶಿವಮೊಗ್ಗಾ ಜಿಲ್ಲೆಯ ಸಾಗರದ ಪ್ರಸಿದ್ಧ ಭಾಗವತ್ ಆಸ್ಪತ್ರೆಯಲ್ಲಿಂದು ತಮ್ಮ ಸೇವೆಯನ್ನು ಆರಂಭಿಸುತ್ತಿದ್ದಾರೆ.

    ಎಮ್.ಬಿ.ಬಿ.ಎಸ್.ಪದವಿ ಹಾಗೂ ಎಮ್.ಡಿ.(ಜನರಲ್ ಮೆಡಿಸಿನ್) ಅಧ್ಯಯನವನ್ನು ರಾಜ್ಯದ ಪ್ರತಿಷ್ಠಿತ ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಪೂರೈಸಿರುವ ಇವರು ರಾಷ್ಟ್ರ ಮಟ್ಟದ ಡಿ.ಎನ್.ಬಿ.(ಜನರಲ್ ಮೆಡಿಸಿನ್) ಪದವಿಯನ್ನೂ ಪಡೆದವರಾಗಿದ್ದಾರೆ.
    ಏಷ್ಯಾದಲ್ಲೇ ನಂ.೧ ಸಂಸ್ಥೆಯೆಂದು ಹೆಸರು ವಾಸಿಯಾದ ನಿಮ್ಹ್ಯಾನ್ಸ್ ಸಂಸ್ಥೆ ನಡೆಸಿದ ರಾಷ್ಟ್ರ ಮಟ್ಟದ ಪ್ರವೇಶ ಪರೀಕ್ಷೆಯಲ್ಲಿ ಪ್ರಥಮ ಯತ್ನದಲ್ಲೇ ರಾಷ್ಟ್ರಕ್ಕೆ ಪ್ರಥಮ ಸ್ಥಾನ ಗಳಿಸಿ ಡಿ.ಎಮ್.ಪದವಿ ಕೋರ್ಸ್ ಗೆ ಆಯ್ಕೆಯಾಗಿ, ಮೂರು ವರ್ಷದ ‘ಸೂಪರ್ ಸ್ಪೆಶಲೈಸೇಶನ್’ ಕೋರ್ಸನಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ‘ನ್ಯುರೋಲೊಜಿಸ್ಟ್’ ಆಗಿದ್ದಾರೆ.

    ನ್ಯುರೋಲೊಜಿ ಗೆ ಸಂಬಂಧಿಸಿದಂತೆ ರಾಷ್ಟ್ರ ಮಟ್ಟದ ಹಲವಾರು ಕ್ವಿಜ್ ಮತ್ತು ಸೆಮಿನಾರ್ ಗಳಲ್ಲಿ ಭಾಗವಹಿಸಿ ಅಗ್ರ ಶ್ರೇಯಾಂಕಗಳಿಸಿ ನಾಡಿಗೆ ಕೀರ್ತಿ ತಂದಿರುತ್ತಾರೆ. ಇವರ ಪತ್ನಿ ಡಾ.ಶ್ರೀಯಾ ಆರ್.ಭಾಗವತ್ ಅವರು ಪ್ರಸೂತಿ ಹಾಗೂ ಸ್ತ್ರೀ ರೋಗ ತಜ್ಞರಾಗಿ ಭಾಗವತ್ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

    ಕುಮಟಾ ನಿವಾಸಿಗಳಾಗಿರುವ ಶಿರಸಿ ತಾಲೂಕಿನ ಮುಂಡಿಗೇಸರದ ಸ್ವಾತಿ ಮತ್ತು ಜಯದೇವ ಬಳಗಂಡಿ ಇವರ ಸುಪುತ್ರ ಡಾ.ಸುಮಂತ್ ಬಳಗಂಡಿ ಅವರು ನ್ಯುರೋಲೊಜಿಸ್ಟ್ ಆಗಿ ಸಾಗರದ ಭಾಗವತ್ ಆಸ್ಪತ್ರೆಯಲ್ಲಿ ತಮ್ಮ ಸೇವೆ ಆರಂಭಿಸುತ್ತಿದ್ದು, ಪ್ರತಿದಿನ ಇವರು ಆಸ್ಪತ್ರೆಯಲ್ಲಿ ಲಭ್ಯವಾಗಲಿದ್ದಾರೆ‌. ಇವರ ಮುಂದಿನ ಯಶಸ್ಸಿಗಾಗಿ ಈ ಸಂದರ್ಭದಲ್ಲಿ ಹಿತೈಷಿಗಳು ಶುಭ ಕೋರಿದ್ದಾರೆ.