Satwadhara News

Category: Special News

  • ಹಳಿ ತಪ್ಪಿದ ರೈಲು : ಹಲವು ರೈಲುಗಳ ಮಾರ್ಗ ಬದಲು

    ಹಳಿ ತಪ್ಪಿದ ರೈಲು : ಹಲವು ರೈಲುಗಳ ಮಾರ್ಗ ಬದಲು

    ಜೋಯಿಡಾ : ಕ್ಯಾಸಲ್ ರಾಕ್ ಬಳಿ ರೇಲ್ವೆ ಮಾರ್ಗದಲ್ಲಿ ರೈಲೊಂದು ಹಳಿ ತಪ್ಪಿದ ಘಟನೆ ಶುಕ್ರವಾರ ಬೆಳಿಗ್ಗೆ ಸಂಭವಿಸಿದೆ. ದೂದ್ ಸಾಗರ ಹಾಗೂ ಸೋನಾಲಿಮ್ ನಡುವೆ ಈ ಘಟನೆ ನಡೆದಿದ್ದು ಕಲ್ಲಿದ್ದಲು ಹೊತ್ತ ರೈಲಿನ ಸುಮಾರು 11 ಭೋಗಿ ಕೆಳಕ್ಕೆ ಜಾರಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ.

    ದೂದ್ ಸಾಗರ್‌ನಿಂದ ಸೋನಾಲಿಂ ನಡುವಿನ ಸುರಂಗ ಸಂಖ್ಯೆ 15ರ ಸಮೀಪ ತೋರಣಗಲ್ ಹೊಸಪೇಟೆಯಲ್ಲಿ ವಾಸ್ಕೋದಿಂದ ಜಿಂದಾಲ್ ಕಂಪನಿಗೆ ಕಲ್ಲಿದ್ದಲು ಸಾಗಿಸುವ ಸರಕು ರೈಲು ದಬ್ಬೆಯಲ್ಲಿ ಹಳಿ ತಪ್ಪಿದೆ. ಸದ್ಯ ಈ ಮಾರ್ಗದಲ್ಲಿ ಎಲ್ಲಾ ರೈಲು ಸಂಚಾರ ಸ್ಥಗಿತ ಮಾಡಲಾಗಿದೆ.

    ಈ ಮಾರ್ಗದಲ್ಲಿ ಸಂಚರಿಸುವ ರೈಲು ಸಂಖ್ಯೆ 17309 ಯಶವಂತಪುರ ದಿಂದ ವಾಸ್ಕೋಡಿ ಹಾಗೂ 17310 ವಾಸ್ಕೋಡಿಯಿಂದ ಯಶವಂತಪುರಕ್ಕೆ ಹೋಗುವ ಎರಡು ರೈಲುಗಳು ರದ್ದು ಮಾಡಲಾಗಿದೆ.ಇಂದು ಸಂಜೆ ತೆರಳುವ ಗೋವಾ ಎಕ್ಸ್‌ಪ್ರೆಸ್‌ ರೈಲು ಮಾರ್ಗ ಬದಲಾವಣೆ ಮಾಡಲಾಗಿದೆ. ಅದರಂತೆ ಹುಬ್ಬಳ್ಳಿ, ಬೆಳಗಾವಿಯಿಂದ ಗೋವಾಕ್ಕೆ ಸಂಚರಿಸುವ ರೈಲಿನಲ್ಲಿ ವ್ಯತ್ಯಯ ಆಗಬಹುದು.

    ಘಟನೆಯಿಂದಾಗಿ ಮಡಗಾಂವನಿಂದ ಬೆಳಗಾವಿ ಮತ್ತು ಹುಬ್ಬಳ್ಳಿ ಕಡೆ ತೆರಳುವ ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ನೈರುತ್ಯ ವಲಯದ ಹುಬ್ಬಳ್ಳಿ ವಿಭಾಗದಲ್ಲಿ ಈ ಘಟನೆ ನಡೆದಿದೆ.

  • ಹೆದರುವುದೇ ನಮ್ಮೆಲ್ಲರ ದೌರ್ಬಲ್ಯವಾಗಿದ್ದು, ಹೆದರದೇ ಮುನ್ನುಗಿದಾಗ ಯಶಸ್ಸು ಸಾಧ್ಯ : ತೇಜಸ್ವಿ ಸೂರ್ಯ

    ಹೆದರುವುದೇ ನಮ್ಮೆಲ್ಲರ ದೌರ್ಬಲ್ಯವಾಗಿದ್ದು, ಹೆದರದೇ ಮುನ್ನುಗಿದಾಗ ಯಶಸ್ಸು ಸಾಧ್ಯ : ತೇಜಸ್ವಿ ಸೂರ್ಯ

    ಹೆದರುವುದೇ ನಮ್ಮೆಲ್ಲರ ದೌರ್ಬಲ್ಯವಾಗಿದ್ದು, ಹೆದರದೇ ಮುನ್ನುಗಿದಾಗ ಯಶಸ್ಸು ಸಾಧ್ಯ.
    ನಾವು ಸಶಕ್ತವಾಗಿದ್ದಾಗ ಮಾತ್ರ ಜಗತ್ತಿನಲ್ಲಿ ಗೌರವ ಪ್ರಾಪ್ತವಾಗುತ್ತದೆ. ಉದ್ಯಮಗಳನ್ನು ಹುಟ್ಟುಹಾಕಲು ಈಗ ಪೂರಕ ವಾತಾವರಣವಿದ್ದು, ಈ ದಿಶೆಯಲ್ಲಿ ಯುವ ಸಮುದಾಯ ಆಲೋಚಿಸಬೇಕು ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದರು.

    ಹವ್ಯಕ ಮಹಾಸಭೆಯಿಂದ ಮಲ್ಲೇಶ್ವರದ ಹವ್ಯಕ ಭವನದಲ್ಲಿ ಆಯೋಜಿತವಾಗಿದ್ದ ‘ಪ್ರತಿಬಿಂಬ Grand Final’ ಹಾಗೂ ‘ಯುವಜನೋತ್ಸವ’ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಅವರು, ಭಾಷೆ ಕೇವಲ ಸಂವಹನ ಮಾಧ್ಯಮ ಮಾತ್ರವಲ್ಲ. ಭಾಷೆ ನಮ್ಮ ಸಂಸ್ಕೃತಿಯ ಸಂವಹನ ಮಾಧ್ಯಮವೂ ಹೌದು. ನಾವು ನಮ್ಮ ಮಾತೃಭಾಷೆಯನ್ನೇ ಮನೆಲ್ಲಿ ಬಳಸುವುದರಿಂದ ನಮ್ಮ ಸಂಸ್ಕೃತಿಯನ್ನು ಉಳಿಸಿಕೊಳ್ಳಲು ಸಾಧ್ಯ. ಧಾರ್ಮಿಕ ಹಾಗೂ ಸಾಂಸ್ಕೃತಿಕವಾಗಿ ಇರುವವರು ಉದ್ಯಮ ಜಗತ್ತಿನಲ್ಲಿ ಯಶಸ್ಸಾಗಳಿಸುವುದು ಅಸಾಧ್ಯ ಎಂಬ ವಾತಾವರಣವನ್ನು ಕಲ್ಪಿಸಲಾಗಿದೆ. ಇದನ್ನು ಮೀರಿ ನಾವು ನಮ್ಮ ಸಂಸ್ಕೃತಿಯನ್ನು ಉಳಿಸಿಕೊಳ್ಳುವ ಜೊತೆಜೊತೆಗೆ ಉದ್ಯಮದಲ್ಲೂ ಯಶಸ್ಸುಗಳಿಸಬೇಕು ಎಂದು ಕಿವಿಮಾತು ಹೇಳಿದ ಅವರು, ಹಣಕಾಸಿನ ಕುರಿತಾದ ಶಿಕ್ಷಣ ಇಂದಿನ ಯುವಜನಾಂಗಕ್ಕೆ ಅತ್ಯಗತ್ಯ ಎಂದು ಅಭಿಪ್ರಾಯಪಟ್ಟರು.

    ಹವ್ಯಕ ಸಮಾಜ ಜನಸಂಖ್ಯಾ ದೃಷ್ಟಿಯಿಂದ ಅತಿ ಚಿಕ್ಕ ಸಮುದಾಯವಾದರೂ, ಸಮಷ್ಟಿ ಸಮಾಜದ ಮೇಲೆ ಈ ಪುಟ್ಟ ಸಮುದಾಯದ ಪ್ರಭಾವ ಅಚ್ಚಳಿಯದಂತಿದೆ ಎಂದು ಹವ್ಯಕ ಸಮಾಜವನ್ನು ಶ್ಲಾಘಿಸಿದರು.

    ಹಿರಿಯ ಪತ್ರಕರ್ತರು ಹಾಗೂ ಉದಯವಾಣಿ ಪ್ರಧಾನ ಸಂಪಾದಕ ರವಿಶಂಕರ್ ಭಟ್ ಮಾತನಾಡಿ, ಸಂಸ್ಕೃತಿ ಎಂಬುದು ಇಂಜಿನ್ ಇದ್ದಂತೆ. ನಾವು ಬಳಸಿದಂತೆ ನಮ್ಮ ಸಂಸ್ಕೃತಿಯು ಉಳಿದು ಬೆಳೆಯುತ್ತದೆ. ವೈವಿಧ್ಯಮಯವಾದ ನಮ್ಮ ಸಂಸ್ಕೃತಿಯನ್ನು ತಲೆಮಾರಿನಿಂದ ತಲೆಮಾರಿಗೆ ದಾಟಿಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ. ಇಂದು ಸಂಬಂಧಗಳು ವಾಟ್ಸಪ್ – ಫೇಸ್‌ಬುಕ್‌’ಗೇ ಮಾತ್ರ ಸೀಮಿತವಾಗುತ್ತರುವುದು ವಿಷಾಧನೀಯ ಎಂದರು.

    ಹವ್ಯಕ ಜನಾಂಗವು ತನ್ನದೇ ಆದ ಭಾಷಾ ಸೊಗಡನ್ನು ಹೊಂದಿದೆ. ಪ್ರಾಂತ್ಯವಾರು ವಿಭಿನ್ನವಾದ ಭಾಷಾ ಸೊಗಡು ಹವಿಗನ್ನಡದ ಹಿರಿಮೆ. ಮನೆಯಲ್ಲಿ ನಮ್ಮ ಭಾಷೆಯನ್ನು ಬಳಸುವ ಮೂಲಕ ಭಾಷೆ ಹಾಗೂ ಸಂಸ್ಕೃತಿಯನ್ನು ಉಳಿಸಬೇಕು ಎಂದು ಅಭಿಪ್ರಾಯಪಟ್ಟರು.

    ಹವ್ಯಕ ಮಹಾಸಭೆಯ ಅಧ್ಯಕ್ಷರಾದ ಡಾ.ಗಿರಿಧರ ಕಜೆ ಮಾತನಾಡಿ, ಯಾವುದೇ ಬೇಡಿಕೆ ಇಲ್ಲದ ಸಮಾಜ ಹವ್ಯಕ ಸಮಾಜ. ನಾವು ಸರ್ಕಾರಗಳಿಗೆ ಎಂದಿಗೂ ಬೇಡಿಕೊಳ್ಳುವುದಿಲ್ಲ. ಹವ್ಯಕ ಸಮಾಜ ನೀಡುವ ಸಮಾಜವಾಗಿದ್ದು, ನಮ್ಮಲ್ಲಿರುವ ಪ್ರತಿಭೆಯಿಂದ ಸಮಷ್ಠಿ ಸಮಾಜದಲ್ಲಿ ಅಗ್ರಗಣ್ಯ ಸ್ಥಾನವನ್ನು ಪಡೆದಿದ್ದೇವೆ ಎಂದರು.

    ಹವಿಗನ್ನಡ ಭಾಷಾ ಶ್ರೀಮಂತಿಕೆಯನ್ನು ಹೊಂದಿದೆ. ಕನ್ನಡದ ಮೊದಲ ನಾಟಕ ಯಾವದು ಎಂದು ಕೇಳಿದರೆ ‘ಇಗ್ಗಪ್ಪ ಹೆಗಡೆ ವಿವಾಹ ಪ್ರಹಸನ’ ಎಂಬ ಉತ್ತರ ಬರುತ್ತದೆ. ಈ ನಾಟಕ ಇರುವುದು ಹವಿಗನ್ನಡದಲ್ಲಿ ಎಂಬುದು ಹವ್ಯಕ ಕನ್ನಡದ ಭಾಷಾ ಶ್ರೀಮಂತಿಕೆಯನ್ನು ತಿಳಿಸುತ್ತದೆ ಎಂದರು.

    ಡಿಸೆಂಬರ್ 27,28 ಹಾಗೂ 29 ರಂದು ಮೂರನೇ ವಿಶ್ವಹವ್ಯಕ ಸಮ್ಮೇಳನ ನಡೆಯಲಿದೆ. ಇದು ಜಾತಿಯ ಸಮ್ಮೇಳನವಾಗಿರದೇ, ಹವ್ಯಕ ಸಂಸ್ಕೃತಿಯನ್ನು ಜಗತ್ತಿನ ಮುಂದೆ ತೆರದಿಡುವ ಕಾರ್ಯವಾಗಿರಲಿದೆ. ಈ ಬೃಹತ್ ಕಾರ್ಯಕ್ರಮಕ್ಕೆ ಸಮಾಜ ಕೈಜೋಡಿಸಬೇಕು ಎಂದು ಕರೆನೀಡಿದರು‌.

    ಇದಕ್ಕೂ ಮೊದಲು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವಿದ್ವಾನ್ ಸೂರ್ಯನಾರಾಯಣ ಭಟ್ ಹಿತ್ಲಳ್ಳಿ, ನಾವು ಅನುಸರಿಸುವ ಅದ್ವೈತ ತತ್ತ್ವದ ಪ್ರತಿಪಾದನೆಯಂತೆ ಈ ಜಗತ್ತೇ ಪ್ರತಿಬಿಂಬವಾಗಿದ್ದು, ಈ ಪ್ರತಿಬಿಂಬ ಕಾರ್ಯಕ್ರಮ ಹವ್ಯಕ ಸಮಾಜದ ಪ್ರತಿಬಿಂಬವಾಗಿದೆ. ಹವ್ಯಕ ಸಮಾಜ ಎಲ್ಲಾ ರಂಗದಲ್ಲೂ ಇದ್ದು, ನಮ್ಮ ಛಾಪನ್ನು ಎಲ್ಲೆಡೆ ಮೂಡಿಸಬೇಕು ಎಂದರು.

    ಮಿಸ್ ಯೂನಿವರ್ಸ್ ಪಿಟೈಟ್ ಡಾ.ಶೃತಿ ಹೆಗಡೆ ಮಾತನಾಡಿ, ಸ್ಪರ್ಧೆಯಲ್ಲಿ ಅಥವಾ ಜೀವನದಲ್ಲಿ ಗೆಲ್ಲಲು ಆತ್ಮವಿಶ್ವಾಸ ಮುಖ್ಯ. ಆತ್ಮವಿಶ್ವಾಸದ ಜೊತೆಗೆ ಪರಿಶ್ರಮ ಸೇರಿಕೊಂಡಾಗ ಯಶಸ್ಸು ಕಟ್ಟಿಟ್ಟಬುತ್ತಿ ಎಂದು ಯುವಜನತೆಗೆ ಸ್ಪೂರ್ತಿಯ ಮಾತುಗಳನ್ನಾಡಿದರು.

    ಅಭ್ಯಾಗತರಾದ ಅಜಿತ್ ಬೊಪ್ಪನಹಳ್ಳಿ ಮಾತನಾಡಿ, ಇದು ಸಮಾಜಮಾಧ್ಯಮದ ಯುಗವಾಗಿದ್ದು ಸಮಾಜ ಮಾಧ್ಯಮದಲ್ಲಿ ನಾವು ಜವಾಬ್ದಾರಿಯುತವಾಗಿ ವರ್ತಿಸಬೇಕು. ತಾಳ್ಮೆಯಿಂದ ವರ್ತಿಸಬೇಕಾದ್ದು ಸಮಾಜ ಮಾಧ್ಯಮದ ಕುರಿತಾದ ಮೊದಲ ನಿಯಮ ಎಂದು ಕಿವಿಮಾತು ಹೇಳಿದರು.

    ಉತ್ತರ ಕನ್ನಡ, ಶಿವಮೊಗ್ಗ, ದಕ್ಷಿಣಕನ್ನಡ, ಬೆಂಗಳೂರಿನ ವಿವಿಧ ಪ್ರಾಂತ್ಯಗಳಲ್ಲಿ ಆಯೋಜಿಸಲಾಗಿದ್ದ ‘ಪ್ರತಿಬಿಂಬ’ ಕಾರ್ಯಕ್ರಮದ Grand finale ನಡೆಯಿತು. ವಿವಿಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು.

    ‘The success story of enterpriser’ ಎಂಬ ಕಾರ್ಯಕ್ರಮದಲ್ಲಿ ಹವ್ಯಕ ಸಮಾಜದ ಯುವ ಉದ್ಯಮಿಗಳು ತಮ್ಮ ಅನುಭವವನ್ನು ಹಂಚಿಕೊಂಡು, ಉದ್ಯಮವನ್ನು ಆರಂಭಿಸುವ ಕುರಿತು ಯುವ ಜನತೆಗೆ ಮಾರ್ಗದರ್ಶನ ಮಾಡಿದರು.

    ಖ್ಯಾತ ಗಾಯಕಿ ಪೃಥ್ವಿ ಭಟ್ ಹಾಗೂ ದಿಯಾ ಹೆಗಡೆ ಅವರ ಭಾವಯಾನ ಸಂಗೀತ ಕಾರ್ಯಕ್ರಮ, ಯಕ್ಷನೃತ್ಯ ವೈಭವ, ಯೋಗನೃತ್ಯ ಮುಂತಾದ ಕಾರ್ಯಕ್ರಮಗಳು ಜನಮನರಂಜಿಸಿತು.

    ಮಹಾಸಭೆಯ ಪ್ರಧಾನ ಕಾರ್ಯದರ್ಶಿ ಸಿಎ. ವೇಣುವಿಘ್ನೇಶ ಸಂಪ, ಉಪಾಧ್ಯಕ್ಷರಾದ ಶ್ರೀಧರ್ ಭಟ್ ಕೆಕ್ಕಾರು, ಕಾರ್ಯದರ್ಶಿ ಪ್ರಶಾಂತ ಭಟ್, ಆದಿತ್ಯ ಕಲಗಾರು, ಕೋಶಾಧಿಕಾರಿ ಕೃಷ್ಣಮೂರ್ತಿ ಭಟ್ , ಕಾರ್ಯಕ್ರಮದ ಸಂಚಾಲಕ ದಿನೇಶ್ ಎಂ ಭಟ್ ಸೇರಿದಂತೆ ಮಹಾಸಭೆಯ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

  • ವಿದ್ಯಾರ್ಥಿಗಳ ಸುರಕ್ಷತೆಯೇ ನಮಗೆ ಪ್ರಥಮಾದ್ಯತೆಯಾಯಿತು : ಕೊಂಕಣ ಸಂಸ್ಥೆಯಿಂದ ಪ್ರಕಟಣೆ.

    ವಿದ್ಯಾರ್ಥಿಗಳ ಸುರಕ್ಷತೆಯೇ ನಮಗೆ ಪ್ರಥಮಾದ್ಯತೆಯಾಯಿತು : ಕೊಂಕಣ ಸಂಸ್ಥೆಯಿಂದ ಪ್ರಕಟಣೆ.

    ಕುಮಟಾ : ತೀವ್ರ ಮಳೆಯ ಮುನ್ಸೂಚನೆಯ ಹಿನ್ನೆಲೆಯಲ್ಲಿ ಬುಧವಾರ ಬೆಳಗ್ಗೆ 8 ಗಂಟೆಯ ಸರಿಸುಮಾರಿಗೆ ಮಾನ್ಯ ಜಿಲ್ಲಾಧಿಕಾರಿಗಳು ಉ.ಕ ಜಿಲ್ಲೆಯ ಹಲವು ತಾಲೂಕುಗಳಿಗೆ ರಜೆ ಘೋಷಣೆ ಮಾಡಿ, ಆದೇಶ ಹೊರಡಿಸಿರುತ್ತಾರೆ. ಆದರೆ ಅದಾಗಲೇ ಕುಮಟಾ ತಾಲೂಕಿನ ಹಲವು ಹಳ್ಳಿಗಳಿಂದ ಹಾಗೂ ಇತರೆಡೆಗಳಿಂದ ತಾಲೂಕಿನ ಕೊಂಕಣ ಎಜ್ಯುಕೇಶನ್ ಟ್ರಸ್ಟ್‌ ನ ಬಸ್ ಗಳು ವಿದ್ಯಾರ್ಥಿಗಳನ್ನು ಕರೆದುಕೊಂಡು ಶಾಲೆಗೆ ಹೊರಟಿದ್ದು, ಕೆಲ ದೂರ ಕ್ರಮಿಸಿತ್ತು. ನರ್ಸರಿಯಿಂದ ಪ್ರಾರಂಭಿಸಿ ಪುಟಾಣಿಗಳು ಶಾಲೆಗೆ ದೂರದ ವಿವಿಧ ಸ್ಥಳಗಳಿಂದ ಬರುವವರಿದ್ದಾರೆ. ಹಲವು ಮಕ್ಕಳ ತಂದೆ ತಾಯಿ ಇಬ್ಬರೂ ಉದ್ಯೋಗದಲ್ಲಿದ್ದು, ಮಕ್ಕಳನ್ನು ಶಾಲೆಯ ಬಸ್ ಹತ್ತಿಸಿ, ಬೇರೆ ಬೇರೆ ತಾಲೂಕುಗಳಿಗೆ ಉದ್ಯೋಗಕ್ಕಾಗಿ ತೆರಳುತ್ತಾರೆ. ಇಂತಹ ಸಂದರ್ಭದಲ್ಲಿ ಶಾಲೆಯ ಬಸ್ಸನ್ನು ಪುನಃ ಕಳುಹಿಸಿದರೆ, ಮಕ್ಕಳನ್ನು ಮನೆಗೆ ಕರೆದೊಯ್ಯಲೂ ಆಗದೇ, ಮನೆಯಲ್ಲಿ ನೋಡಿಕೊಳ್ಳುವವರೂ ಯಾರೂ ಇಲ್ಲದೇ ಸಮಸ್ಯೆಯಾಗುತ್ತದೆ ಎಂಬುದು ಹಲವು ಪಾಲಕರ ಅಭಿಪ್ರಾಯವಾಗಿತ್ತು. ಹೀಗಾಗಿ ಮಕ್ಕಳು ನಡುದಾರಿಯ ಪಾಲಾದಂತಾಗುತ್ತಾರೆ ಎಂಬಂತೆ ಪಾಲಕರ ಅನಿಸಿಕೆ. ಈ ಹಿಂದೆಯೂ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದು ಇದೆ.

    ಇದಲ್ಲದೇ, ಬೆಳ್ಳಂಬೆಳಗ್ಗೆಯೇ ಹಲವು ಪಾಲಕರು ತಮ್ಮ ಮಕ್ಕಳನ್ನು ಶಾಲಾ ಆವಾರದಲ್ಲಿ ಬಿಟ್ಟು, ಅವರವರ ಉದ್ಯೋಗಕ್ಕೆ ಬೇರೆ ಬೇರೆ ಕಡೆಗೆ ತೆರಳುತ್ತಾರೆ. ಆ ಮಕ್ಕಳಿಗೆ ರಜಾ ಮಾಹಿತಿ ತಲುಪಿಸಲು, ಹಾಗೂ ಅವರನ್ನು ಸುರಕ್ಷಿತವಾಗಿ ಅವರನ್ನು ಮನೆಗೆ ತಲುಪಿಸುವ ವ್ಯವಸ್ಥೆ ಮಾಡಬೇಕಾದ ಕರ್ತವ್ಯ ನಮ್ಮದಾಗಿದೆ. ಹೀಗಾಗಿ ಮಕ್ಕಳ ಸುರಕ್ಷತೆಗೆ ಪ್ರಥಮ ಆದ್ಯತೆ ನೀಡುವುದು ನಮ್ಮ ಕರ್ತವ್ಯವಾಗಿದ್ದು, ನಾವು ಅರ್ಧದಾರಿ ಸಾಗಿಬಂದಿದ್ದ ಮಕ್ಕಳನ್ನು ಶಾಲೆಯವರೆಗೆ ಶಾಲಾ ಬಸ್ ನಲ್ಲಿ ಕರೆತಂದು, ಹಾಗೂ ಸೂಚನೆಗೂ ಮೊದಲೇ ಶಾಲೆ ತಲುಪಿದ್ದ ಮಕ್ಕಳ ಪಾಲಕರನ್ನು ಸಂಪರ್ಕ ಮಾಡಿ ಸೂಕ್ತ ರೀತಿಯಲ್ಲಿ ಮನೆ ತಲುಪಿಸುವ ವ್ಯವಸ್ಥೆ ಮಾಡಿದ್ದೇವೆ.

    ಜಿಲ್ಲಾಡಳಿತ ಹಾಗೂ ಇಲಾಖೆ ಈ ಹಿಂದೆ ಹೊರಡಿಸಿದ ಎಲ್ಲಾ ಸುತ್ತೋಲೆಗಳನ್ನೂ ನಾವು ಪಾಲಿಸಿದ್ದು ಇರುತ್ತದೆ. ಈ ದಿನವೂ ನಾವು ಮಾನ್ಯ ಜಿಲ್ಲಾಧಿಕಾರಿಗಳ ಆದೇಶ ಪಾಲನೆಗೆ ಪ್ರಯತ್ನ ಮಾಡಿದ್ದೇವೆ. ಇದರ ಜೊತೆಗೆ ನಮ್ಮ ವಿದ್ಯಾರ್ಥಿಗಳ ಹಿತ ಕಾಪಾಡುವ ದೃಷ್ಟಿಯಿಂದ, ನಾವು ಸೂಕ್ತ ಈ ವ್ಯವಸ್ಥೆಯನ್ನು ಈ ದಿನ ಮಾಡಿಕೊಂಡಿದ್ದು ಹೊರತುಪಡಿಸಿ ಇನ್ನಾವುದೇ ನಿಯಮ ಮೀರುವ ಪ್ರಯತ್ನ ಮಾಡಿಲ್ಲ ಎಂಬುದನ್ನು ಈ ಮೂಲಕ ಸ್ಪಷ್ಟಪಡಿಸುತ್ತಿದ್ದೇವೆ ಎಂದು ಸಂಸ್ಥೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

  • ಸಾರಿಗೆ ಬಸ್ ಹಾಗೂ ಪಿಕ್ಅಪ್ ವಾಹನದ ನಡುವೆ ಭೀಕರ ಅಪಘಾತ

    ಸಾರಿಗೆ ಬಸ್ ಹಾಗೂ ಪಿಕ್ಅಪ್ ವಾಹನದ ನಡುವೆ ಭೀಕರ ಅಪಘಾತ

    ಸಿದ್ದಾಪುರ: ಸಿದ್ದಾಪುರ ಸಾಗರ ರಾಜ್ಯ ಹೆದ್ದಾರಿಯ ಅರೆಂದೂರು ಸಮೀಪ ಸಾರಿಗೆ ಬಸ್ ಹಾಗೂ ಪಿಕ್ಅಪ್ ವಾಹನದ ನಡುವೆ ಡಿಕ್ಕಿ ಸಂಭವಿಸಿ ಪಿಕ್ಅಪ್ ವಾಹನ ಚಾಲಕನಿಗೆ ತೀವ್ರತರನಾದ ಗಾಯಗಳಾದ ಘಟನೆ ಸಂಭವಿಸಿದೆ. ಶಿರಸಿಯಿಂದ ಸಾಗರಕ್ಕೆ ಹೋಗುತ್ತಿದ್ದ ಸಾರಿಗೆ ಬಸ್ ಹಾಗೂ ಸಾಗರ ಕಡೆಯಿಂದ ಸಿದ್ದಾಪುರ ಕಡೆಗೆ ಪಿಕ್ಅಪ್ ವಾಹನ ಬರುತ್ತಿತ್ತು ಎನ್ನಲಾಗಿದ್ದು, ಗಾಯಾಳುಗಳನ್ನು ಸಾಗರ ಆಸ್ಪತ್ರೆಗೆ ರವಾನಿಸಲಾಗಿದೆ. ಪಿಕ್ಅಪ್ ವಾಹನ ಸಾಗರದ್ದೆಂದು ಹೇಳಲಾಗಿದ್ದು, ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಬಿಜೆಪಿ ಅಭ್ಯರ್ಥಿ ಕಾಗೇರಿ ಗೆಲುವು.

    ಬಿಜೆಪಿ ಅಭ್ಯರ್ಥಿ ಕಾಗೇರಿ ಗೆಲುವು.

    ಕುಮಟಾ: ಲೋಕಸಭಾ ಚುನಾವಣಾ ಮತ ಎಣಿಕೆ ಜಿಲ್ಲಾ ಮತ ಎಣಿಕೆಯ ಕೇಂದ್ರ ಕುಮಟಾದಲ್ಲಿ ಅಂತಿಮ ಹಂತಕ್ಕೆ ಬಂದಿದ್ದು, ಸುಮಾರು ಎರಡೂವರೆ ಲಕ್ಷಕ್ಕೂ ಅಧಿಕ ಅಂತರದಲ್ಲಿ ಮುನ್ನಡೆ ಇರುವ ಮಾಜಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಗೆಲುವಿನ ನಗೆ ಬೀರಿದ್ದಾರೆ. ಕಾಂಗ್ರೆಸ್ ನ ಅಂಜಲಿ ನಿಂಬಾಳ್ಕರ್ ಹಿನ್ನೆಡೆ ಅನುಭವಿಸಿದ್ದಾರೆ. ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಮೂರು ಲಕ್ಷಕ್ಕೂ ಅಧಿಕ ಮತಗಳಿಂದ ಕಾಗೇರಿ ಗೆಲುವಿನ ನಗು ಬೀರಿದ್ದಾರೆ.

  • ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಆಸ್ಪತ್ರೆಗೆ ದಾಖಲು.

    ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಆಸ್ಪತ್ರೆಗೆ ದಾಖಲು.

    ಅಹಮದಾಬಾದ್ : ಹೀಟ್ ಸ್ಟ್ರೋಕ್ ನಿಂದ ಬಳಲುತ್ತಿದ್ದ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರನ್ನು ಅಹಮದಾಬಾದ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ. ಮಂಗಳವಾರ ನಡೆದ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವಿನ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯವನ್ನು ವೀಕ್ಷಿಸಲು ನಟ ಅಹಮದಾಬಾದ್‌ಗೆ ಆಗಮಿಸಿದ್ದರು. “ಅಹಮದಾಬಾದ್‌ನಲ್ಲಿ 45 ಡಿಗ್ರಿ ಸೆಲ್ಸಿಯಸ್‌ನ ಅಧಿಕ ತಾಪಮಾನದಿಂದಾಗಿ ನಟ ಶಾರುಖ್ ಖಾನ್ ನಿರ್ಜಲೀಕರಣ(dehydration)ದಿಂದ ಬಳಲುತ್ತಿದ್ದರು. ಅವರ ಆರೋಗ್ಯ ಸ್ಥಿರವಾಗಿದ್ದರೂ ವೈದ್ಯಕೀಯ ಮೇಲ್ವಿಚಾರಣೆಯಲ್ಲಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ವರದಿ ಹೇಳಿದೆ.


    ಐಪಿಎಲ್ ತಂಡದ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಸಹ ಮಾಲೀಕರಾದ ಶಾರುಖ್ ಖಾನ್ ಮಂಗಳವಾರ ರಾತ್ರಿ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ತಂಡದ ವಿಜಯೋತ್ಸವವನ್ನು ಆಚರಿಸಿದ್ದರು.

  • ವಿಧಾತ್ರಿ ಸಹಭಾಗಿತ್ವದಲ್ಲಿ ನಿರಂತರ ಸಾಧನೆಯ ಮೂಲಕ, ವಿದ್ಯಾಗಿರಿಯನ್ನು ಜ್ಞಾನ ಶಿಖರವಾಗಿಸಿದ “ಸರಸ್ವತಿ ಪಿ.ಯು ಕಾಲೇಜು”

    ವಿಧಾತ್ರಿ ಸಹಭಾಗಿತ್ವದಲ್ಲಿ ನಿರಂತರ ಸಾಧನೆಯ ಮೂಲಕ, ವಿದ್ಯಾಗಿರಿಯನ್ನು ಜ್ಞಾನ ಶಿಖರವಾಗಿಸಿದ “ಸರಸ್ವತಿ ಪಿ.ಯು ಕಾಲೇಜು”

    ಕುಮಟಾ : ಮಂಗಳೂರು ಹಾಗೂ ಕರ್ನಾಟಕದ ಪ್ರಮುಖ ನಗರಗಳಲ್ಲಿ ಈಗಾಗಲೇ ಅತ್ಯುತ್ತಮ ಶಿಕ್ಷಣ ನೀಡುತ್ತಿರುವ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ತರಬೇತಿ ಪಡೆಯಲು ವಿದ್ಯಾರ್ಥಿಗಳಿಗೆ ಮೊದಲ ಆಯ್ಕೆ ಎಂಬಂತೆ ಗುರುತಿಸಿಕೊಂಡಿರುವ ವಿಧಾತ್ರಿ ಅಕಾಡೆಮಿ ಕಳೆದ ಐದು ವರ್ಷಗಳಿಂದ ಕುಮಟಾದ ಕೊಂಕಣ ಎಜುಕೇಶನ್ ಟ್ರಸ್ಟ್ ನ ಬಿ.ಕೆ ಭಂಡಾರ್ಕರ್ಸ ‘ಸರಸ್ವತಿ ಪಿ.ಯು ಕಾಲೇಜಿನ’ ಮೂಲಕ ಉತ್ತರ ಕನ್ನಡದಲ್ಲಿಯೇ ಹೊಸ ಸಂಚಲನ ಮೂಡಿಸುವ ಜೊತೆಗೆ, ನಿರಂತರ ಸಾಧನೆಯ ಮೂಲಕವೂ ಹೆಸರುಗಳಿಸಿದೆ. ಹೀಗಾಗಿ ಕೊಂಕಣ ಎಜ್ಯುಕೇಶನ್ ಹಾಗೂ ವಿಧಾತ್ರಿ ಅಕಾಡೆಮಿ ಸಹಭಾಗಿತ್ವದಲ್ಲಿ ನಿರಂತರ ಸಾಧನೆಯ ಮೂಲಕ, ವಿದ್ಯಾಗಿರಿಯನ್ನು ನಿಜಾರ್ಥದಲ್ಲಿ ಜ್ಞಾನ ಶಿಖರವಾಗಿಸಿದೆ “ಸರಸ್ವತಿ ಪಿ.ಯು ಕಾಲೇಜು”.

    KCET, JEE (Mains), NEET, NATA, NDA, AGRI ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕಳೆದ ನಾಲ್ಕೈದು ವರ್ಷದಿಂದ, ಕರೋನಾ ಸಂಕಷ್ಟದ ಸಮಯದಲ್ಲಿಯೂ ಆನ್ಲೈನ್ ಮೂಲಕ ಅತ್ಯುತ್ತಮ ಮಾರ್ಗದರ್ಶನ ನೀಡಿ ಸೈ ಎನಿಸಿಕೊಂಡಿರುವ ಸಂಸ್ಥೆ ಇದಾಗಿದೆ. ವಿದ್ಯಾರ್ಥಿಗಳ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದು ಅಗತ್ಯ ಮಾರ್ಗದರ್ಶನ ಮಾಡುತ್ತ, ಅವರಿಗೆ ಅಗತ್ಯವಾದ ಶೈಕ್ಷಣಿಕ ಪರಿಕರ ಹಾಗೂ ಪ್ರಾಯೋಗಿಕ ತರಗತಿ ಸೌಲಭ್ಯಗಳನ್ನು ಒದಗಿಸಿಕೊಡುತ್ತಿದೆ.

    ಕಳೆದ ನಾಲ್ಕು ವರ್ಷಗಳಿಂದ 100%ದ ಸಾಧನೆ ಮಾಡುತ್ತಿರುವ ಸಂಸ್ಥೆ ಇದಾಗಿದೆ. ೨೦೨೩-೨೪ನೇ ಸಾಲಿನ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳಿಸಿ ರಾಜ್ಯ ಮಟ್ಟದಲ್ಲಿ ನಾಲ್ಕು ಸ್ಥಾನವನ್ನು ಪಡೆದು ಸಂಸ್ಥೆಯ ಹಿರಿಮೆಯನ್ನು ಹೆಚ್ಚಿಸಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಶ್ರಾವ್ಯ ಭಟ್ಟ 594 ಅಂಕಗಳಿಸಿ ರಾಜ್ಯ ಮಟ್ಟದಲ್ಲಿ 5 ನೇ ಸ್ಥಾನ, ಜಿಲ್ಲೆಗೆ ಮೊದಲ ಸ್ಥಾನ ಪಡೆದು ಕಾಲೇಜಿಗೆ ಪ್ರಥಮಳಾಗಿ ಹೊರಹೊಮ್ಮಿದ್ದಾಳೆ. ತಿಲಕ ಕುಮಟಾ ಹಾಗೂ ಶ್ರೀಕೃಷ್ಣ ಶಾನಭಾಗ 589 ಅಂಕಗಳಿಸಿ ರಾಜ್ಯ ಮಟ್ಟದಲ್ಲಿ 10 ನೇ ಸ್ಥಾನ ಗಳಿಸುವುದರೊಂದಿಗೆ ಕಾಲೇಜಿಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ. ರಾಘವೇಂದ್ರ ಎನ್. ಹಾಗೂ ಪೂರ್ಣ ಶೇಟ್ 584 ಅಂಕಗಳಿಸಿ ಕಾಲೇಜಿಗೆ ತೃತೀಯ ಸ್ಥಾನ ಪಡೆದಿದ್ದಾರೆ. ಒಟ್ಟು 193 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಅದರಲ್ಲಿ 139 ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿಯಲ್ಲಿ ಹಾಗೂ ಉಳಿದ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿರುವದು ಸಂಸ್ಥೆಯ ಸಾಧನೆಗೆ ಹಿಡಿದ ಕೈಗನ್ನಡಿಯಂತಿದೆ.

    ಅತ್ಯುತ್ತಮ ಪ್ರಾಧ್ಯಾಪಕ ವೃಂದ :

    ಮಂಗಳೂರು-ಬೆಂಗಳೂರು ಹುಬ್ಬಳ್ಳಿ-ಧಾರವಾಡಗಳಲ್ಲಿ ಸರಿ ಸುಮಾರು 10ರಿಂದ 20 ವರ್ಷ ಸೇವೆ ಸಲ್ಲಿಸಿ ಅನುಭವ ಹೊಂದಿರುವ ಪ್ರಾಧ್ಯಾಪಕರು ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ತಮ್ಮ ಅನುಭವದ ಧಾರೆ ಎರೆಯುತ್ತಿದ್ದಾರೆ. ಪ್ರಾಯೋಗಿಕ ತರಗತಿಗಳು ಹಾಗೂ ವಿದ್ಯಾರ್ಥಿಗಳಿಗೆ ಅಗತ್ಯವಾದ ಶಿಕ್ಷಣದ ಜೊತೆಗೆ ಸ್ಪರ್ಧಾತ್ಮಕ ಜಗತ್ತಿಗೆ ವಿದ್ಯಾರ್ಥಿಗಳನ್ನು ರೂಪಿಸಲು ತಮ್ಮ ಪರಿಪೂರ್ಣ ಶ್ರಮ ವಹಿಸುತ್ತಿರುವುದು ಶ್ಲಾಘನೀಯ ಎಂದು ಪಾಲಕರು ಈಗಾಗಲೇ ಮೆಚ್ಚುಗೆ ಸೂಚಿಸಿರುವುದನ್ನು ಇಲ್ಲಿ ಸ್ಮರಿಸಬಹುದು.

    ಪ್ರತೀ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಗಮನ :

    ಪ್ರತಿ ವಿದ್ಯಾರ್ಥಿಗಳಿಗೆ ಅವರ ಶಿಕ್ಷಣಕ್ಕೆ ಅನುಕೂಲವಾಗುವ ದೃಷ್ಟಿಯಿಂದ ಉಪನ್ಯಾಸಕರು ಪ್ರತ್ಯೇಕ ಗಮನ ನೀಡುತ್ತಿದ್ದು ಇದರ ಜೊತೆಗೆ ಅತ್ಯುತ್ತಮವಾದ ಯೋಜನೆಗಳೊಂದಿಗೆ ರಿವಿಸನ್ ಟೆಸ್ಟ್ ಗಳು ನಡೆಯಲಿದೆ.

    ಸುಸಜ್ಜಿತವಾದ ಲ್ಯಾಬೋರೇಟರಿ :

    ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಗತಿಗಳನ್ನು ನಡೆಸಲು ಸುಸಜ್ಜಿತವಾದ ಲ್ಯಾಬೋರೇಟರಿ ಗಳನ್ನು ಸಂಸ್ಥೆ ಒಳಗೊಂಡಿದ್ದು ಯಾವೆಲ್ಲಾ ಅವಶ್ಯಕತೆಗಳ ಅಗತ್ಯತೆ ಇದೆಯೋ ಅವುಗಳನ್ನು ನಿರಂತರವಾಗಿ ವಿದ್ಯಾರ್ಥಿಗಳಿಗೆ ಪೂರೈಸುವಲ್ಲಿ ದಿಟ್ಟ ಹೆಜ್ಜೆ ಇಟ್ಟಿದೆ. ವಿದ್ಯಾರ್ಥಿಗಳನ್ನು ಕ್ರಿಯಾತ್ಮಕವಾಗಿ ರೂಪಿಸುವ ದೃಷ್ಟಿಯಿಂದ ಸ್ಟೇಟ್ ಆಫ್ ಆರ್ಟ್ ಲ್ಯಾಬೋರೇಟರಿ ಗಳು ಬಳಕೆಯಲ್ಲಿದೆ.

    ಬಸ್ ಹಾಗೂ ಊಟದ ವ್ಯವಸ್ಥೆ :

    27 ವರ್ಷಗಳಿಂದ ಶಿಕ್ಷಣದಲ್ಲಿ ವೈವಿದ್ಯತೆಯ ಮೂಲಕ ಹೆಸರುಗಳಿಸಿರುವ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ವಿದ್ಯಾರ್ಥಿಗಳಿಗೆ ಗೋಕರ್ಣ, ಹೊನ್ನಾವರ, ಅಂಕೋಲಾ ದಂತಹ ಪಟ್ಟಣದ ಪ್ರದೇಶಗಳಿಗೆ ಹಾಗೂ ಬಾಡ, ಚಂದಾವರ, ನವಿಲಗೋಣನಂತಹ ಹಳ್ಳಿಗಳಿಗೆ ಸುಸಜ್ಜಿತ ಶಾಲಾ ಬಸ್ ವ್ಯವಸ್ಥೆ ಕಲ್ಪಿಸಿದೆ. ತನ್ನ ಎಲ್ಲಾ ವಿದ್ಯಾರ್ಥಿಗಳಿಗೆ ಶುದ್ಧ, ಹಾಗೂ ಸ್ವಾದಿಷ್ಟ ಮಧ್ಯಾಹ್ನದ ಊಟದ ವ್ಯವಸ್ಥೆ ಕಲ್ಪಿಸಿರುವ ಮೂಲಕ ಜನ ಮೆಚ್ಚುಗೆ ಗಳಿಸಿದೆ. ವಿಶಾಲ ಕ್ರೀಡಾಂಗಣ, ಸ್ಮಾರ್ಟ ಕ್ಲಾಸ್, ಕ್ರೀಡೋಪಕರಣಗಳು, ವಿಜ್ಞಾನ ಲ್ಯಾಬ್‍ಗಳನ್ನು ಒದಗಿಸಿರುವ ಕೊಂಕಣ ಎಜ್ಯುಕೇಶನ್ ವಿಧಾತ್ರಿ ಅಕಾಡೆಮಿ ಜೊತೆಗೆ ಸೇರಿ ಅತ್ಯುನ್ನತ ಕಾಲೇಜು ಶಿಕ್ಷಣ ನೀಡುತ್ತಿದೆ.

    ಹಾಸ್ಟೇಲ್ ವ್ಯವಸ್ಥೆ :

    ಕುಮಟಾ ಹಾಗೂ ಸುತ್ತಮುತ್ತಲ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಹೊರ ಜಿಲ್ಲೆ ಹಾಗೂ ಬೇರೆ ಬೇರೆ ಕಡೆಗಳಿಂದ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಗಂಡುಮಕ್ಕಳಿಗೆ ಹಾಗೂ ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಹಾಸ್ಟೆಲ್ ವ್ಯವಸ್ಥೆ ಹಾಗೂ ಈ ವರ್ಷದಿಂದ ಶಾಖಾಹಾರಿಗಳಿಗೆ ಪ್ರತ್ಯೇಕ ಊಟ, ತಿಂಡಿ, ವಸತಿ ವ್ಯವಸ್ಥೆಯನ್ನು ಕಲ್ಪಿಸಿಕೊಡಲಾಗಿದೆ.

    ನಿರಂತರ ಪಾಲಕರ ಸಭೆ :

    ವಿದ್ಯಾರ್ಥಿಗಳ ಶೈಕ್ಷಣಿಕ ದೃಷ್ಟಿಯಿಂದ ಪಾಲಕರ ಜೊತೆಗೆ ನಿರಂತರ ಸಂವಹನವನ್ನು ಕಾಲೇಜು ನಡೆಸಲಿದ್ದು, ನಿರಂತರವಾಗಿ ಪಾಲಕರ ಸಭೆ ಮಾಹಿತಿ ವಿನಿಮಯ ಕಾರ್ಯಕ್ರಮ ಹಾಗೂ ವಿವಿಧ ನುರಿತ ಉಪನ್ಯಾಸಕರಿಂದ ಉಪನ್ಯಾಸ ಕಾರ್ಯಕ್ರಮ ಇವುಗಳನ್ನು ಏರ್ಪಡಿಸುವ ಮೂಲಕ ವಿದ್ಯಾರ್ಥಿಗಳ ಹೆಜ್ಜೆ ಹೆಜ್ಜೆಯನ್ನೂ ಗಮನಿಸಿ ಅವರ ಬೆಳವಣಿಗೆಗೆ ಪೂರಕ ವಾತಾವರಣ ನಿರ್ಮಿಸಿದೆ.

    ಶೈಕ್ಷಣಿಕ ಪರಿಕರಗಳು :

    ವಿದ್ಯಾರ್ಥಿಗಳ ಶೈಕ್ಷಣಿಕ ದೃಷ್ಟಿಯಿಂದ ಅಗತ್ಯವಾದ ಶೈಕ್ಷಣಿಕ ಪರಿಕರಗಳು ಪಠ್ಯಪುಸ್ತಕಗಳು ಹಾಗೂ ಬೇರೆ ಬೇರೆ ಕಡೆಗಳಲ್ಲಿ ಬಳಕೆಯಾಗುತ್ತಿರುವ ಜ್ಞಾನದ ಅಭಿವೃದ್ಧಿಯ ದೃಷ್ಟಿಯಿಂದ ಉಪಯುಕ್ತ ಪರಿಕರಗಳನ್ನು ವಿದ್ಯಾರ್ಥಿಗಳಿಗೆ ಒದಗಿಸುತ್ತಿದೆ.

    ಹೆಚ್ಚಿನ ಮಾಹಿತಿಗಾಗಿ ಹಾಗೂ ಹೆಸರು ನೋಂದಾವಣೆ, ದಾಖಲಾತಿ ಪ್ರಕ್ರಿಯೆಗಳಿಗಾಗಿ www.vidhatriacademy.org ಗೆ ಭೇಟಿ ನೀಡಿ ಅಥವಾ 9972663855 / 9972664155 ಸಂಪರ್ಕಿಸಿ.

  • ಮತದಾನ ಮಾಡಿದ ಸಂಸದ ಅನಂತಕುಮಾರ್ ಹೆಗಡೆ.

    ಮತದಾನ ಮಾಡಿದ ಸಂಸದ ಅನಂತಕುಮಾರ್ ಹೆಗಡೆ.

    ಶಿರಸಿ : ಆರು ಬಾರಿ ಸಂಸದರಾಗಿ ಆಯ್ಕೆಯಾಗಿ, ಈ ಸಾಲಿನಲ್ಲಿ ಟಿಕೆಟ್ ವಂಚಿತರಾಗಿದ್ದು ನಂತರದಲ್ಲಿ ಯಾವುದೇ ಗೊಡವೆಗೆ ಹೋಗದೆ ಸುಮ್ಮನಾಗಿ, ಬಿಜೆಪಿಯ ಚುನಾವಣಾ ಪ್ರಚಾರಕ್ಕೂ ಗೈರಾಗಿದ್ದ ಅನಂತಕುಮಾರ್ ಹೆಗಡೆ ಶಿರಸಿ ನಗರದ ಕೆಎಚ್ ಬಿ ಕಾಲೋನಿಯಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿನ ಮತಗಟ್ಟೆ ಯಲ್ಲಿ ಪತ್ನಿ ಜೊತೆ ಆಗಮಿಸಿ ಮತದಾನ ಮಾಡಿದರು.

    ಮತದಾನ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು ಮತದಾನ ಮಾಡುವುದು ದೇಶದ ಜನರ ಕರ್ತವ್ಯ, ಹಾಗಾಗಿ ನಾನು ಒಬ್ಬ ಪ್ರಜೆ ಆಗಿ ಮತದಾನ ಮಾಡಿದ್ದೇನೆ ಎಂದರು. ಇನ್ನು ಮೋದಿಯವರು ಬಂದಾಗ ತಾವು ಏಕೆ ಬರಲಿಲ್ಲ? ಎಂಬ ಮಾಧ್ಯಮದವರ ಪ್ರಶ್ನೆಗೆ ಅವರು ಯಾವುದೇ ಪ್ರತಿಕ್ರಿಯೆ ನೀಡದೆ ಧನ್ಯವಾದಗಳನ್ನು ತಿಳಿಸಿ ವಾಪಸ್ಸಾಗಿದ್ದಾರೆ.

  • ‘ರಾಮಾಯಣ ಹಕ್ಕಿನೋಟ’ವು ಶ್ರೀಮದ್ವಾಲ್ಮೀಕಿರಾಮಾಯಣದ ಮೂಲಕತೆಯನ್ನು ಈ ಸಮೂಹಗಳಿಗೆ ತಲಪಿಸುವ ಕಾಯಕ ಮಾಡುತ್ತಿದೆ : ರಾಘವೇಶ್ವರ ಶ್ರೀ.

    ‘ರಾಮಾಯಣ ಹಕ್ಕಿನೋಟ’ವು ಶ್ರೀಮದ್ವಾಲ್ಮೀಕಿರಾಮಾಯಣದ ಮೂಲಕತೆಯನ್ನು ಈ ಸಮೂಹಗಳಿಗೆ ತಲಪಿಸುವ ಕಾಯಕ ಮಾಡುತ್ತಿದೆ : ರಾಘವೇಶ್ವರ ಶ್ರೀ.

    ಜೀವನಮೌಲ್ಯಗಳನ್ನು ತುಂಬಿ ವಿಸ್ತರಿಸುವ ಎತ್ತರಿಸುವ ರಾಮಾಯಣದಂತಹ ಕತೆಗಳ ಕೃತಿಗಳು ಜನರಿಗೆ ಸುಲಭದಲ್ಲಿ ದೊರಕುವಂತಾಗಬೇಕು. ಅದರಲ್ಲೂ ಇಂದಿನ ವಿದ್ಯಾರ್ಥಿ-ಯುವ ಸಮುದಾಯಕ್ಕೆ ಅನುಕೂಲವಾಗುವಂತೆ ಸರಳವಾಗಿ ಕನ್ನಡ-ಇಂಗ್ಲಿಷ್ ಭಾಷೆಗಳಲ್ಲಿರುವ ‘ರಾಮಾಯಣ ಹಕ್ಕಿನೋಟ’ವು ಶ್ರೀಮದ್ವಾಲ್ಮೀಕಿರಾಮಾಯಣದ ಮೂಲಕತೆಯನ್ನು ಈ ಸಮೂಹಗಳಿಗೆ ತಲಪಿಸುವ ಉದ್ದೇಶದಿಂದ ಬರೆದು ಪ್ರಕಟಿಸಿರುವುದು ಮೆಚ್ಚತಕ್ಕ ವಿಷಯವಾಗಿದೆ. ಈ ಕೃತಿಯ ಮಾರಾಟದಿಂದ ಬರುವ ಆದಾಯವನ್ನು ವಿಷ್ಣುಗುಪ್ತ ವಿಶ್ವವಿದ್ಯಾಪೀಠದಲ್ಲಿ ಕಲಿಯುವ ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯವನ್ನು ನೀಡಲು ಉದ್ದೇಶಿಸಿರುವ ‘ದತ್ತಿನಿಧಿ’ಗೆ ಸಮರ್ಪಣೆಯಾಗಲಿರುವುದು ಲೇಖಕ ವಿಶ್ವೇಶ್ವರ ಭಟ್ಟರ ನಿಸ್ವಾರ್ಥ ಸೇವೆಯನ್ನು ತೋರಿಸುತ್ತದೆ. ಲೇಖಕರಿಗೆ ಓದುಗರಿಗೆ ಒಳಿತಾಗಲಿ ಲೇಖಕನ ಸದಾಶಯಗಳು ಈಡೇರಲಿ ಎಂದು ಇತ್ತೀಚೆಗೆ ಹೊಸನಗರದ ಶ್ರೀರಾಮಚಂದ್ರಾಪುರಮಠದಲ್ಲಿ ಲೋಕಾರ್ಪಣೆಗೊಂಡ ಉಂಡೆಮನೆ ಶಂ.ವಿಶ್ವೇಶ್ವರ ಭಟ್ಟರ “ರಾಮಾಯಣ ಹಕ್ಕಿನೋಟ- A Bird’s Eye View of Raamaayana ಕೃತಿಯ ಬಿಡುಗಡೆಯ ಸಂದರ್ಭದಲ್ಲಿ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ತಮ್ಮ ಆಶೀರ್ವಚನದಲ್ಲಿ ಹೇಳಿದರು. ಮಂಗಳೂರಿನ ಆಂಗ್ಲ ಭಾಷಾ ಉಪನ್ಯಾಸಕಿ
    ಶ್ರೀಮತಿ ರಶ್ಮೀ ಕೃಪಾಲು ಸುವರ್ಣರು ಇದರ ಆಂಗ್ಲಭಾಷಾನುನುವಾದವನ್ನು ಮಾಡಿದ್ದು ಒಂದೇ ಕೃತಿಯಲ್ಲಿ ಎರಡು ಭಾಷೆಗಳಲ್ಲಿ ಮೂಲಕತೆಯನ್ನು ಹೇಳಿರುವುದು ಇದರ ವಿಶೇಷತೆಯಾಗಿದೆ. ಮುನ್ನುಡಿಯ ಮುನ್ನೋಟವನ್ನು ಬರೆದ ಖ್ಯಾತ ಲೇಖಕ ವಿದ್ವಾನ್ ಡಾ.ಪಾದೇಕಲ್ಲು ವಿಷ್ಣು ಭಟ್ಟರು ಕೃತಿ ಪರಿಚಯವನ್ನು ಮಾಡಿದರು. ಖ್ಯಾತ ರಾಮಾಯಣ ಚಿತ್ರಕಲಾವಿದ ನೀರ್ನಳ್ಳಿ ಗಣಪತಿಯವರು ಮುಖಪುಟ ಚಿತ್ರ ಹಾಗೂ ಕಾಂಡಗಳ ವರ್ಣಚಿತ್ರಗಳನ್ನು ರಚಿಸಿದ್ದು 370ಕ್ಕಿಂತ ಹೆಚ್ಚಿನ ಪುಟಗಳನ್ನು ಈ ಪುಸ್ತಕವು ಹೊಂದಿದೆ. ₹500 ಮುಖ ಬೆಲೆಯ ಈ ಪುಸ್ತಕವು ಇದೀಗ ₹450 ಕ್ಕೆ ಆಸಕ್ತ ಓದುಗರಿಗೆ ಲಭ್ಯವಾಗಲಿದ್ದು ಶಾಲೆಗಳಿಗೆ ₹425 ಕ್ಕೆ ಲಭ್ಯವಾಗಲಿದೆ ಎಂದು ಲೇಖಕ ಉಂಡೆಮನೆ ಶಂ.ವಿಶ್ವೇಶ್ವರ ಭಟ್ಟರು ತಿಳಿಸಿರುತ್ತಾರೆ. ಲೋಕಾರ್ಪಣೆಯ ಕಾರ್ಯಕ್ರಮದಲ್ಲಿ ಡಾ. ಪಾದೇಕಲ್ಲು ವಿಷ್ಣು ಭಟ್ಟ, ಅನುವಾದಕಿ ಶ್ರೀಮತಿ ರಶ್ಮೀ ಕೃಪಾಲು ಸುವರ್ಣ ದಂಪತಿ ಉಪಸ್ಥಿತರಿದ್ದರು.

  • ನಾನು ಮೋಜಿಗಾಗಿ ಹುಟ್ಟಿಲ್ಲ. ನಿಮ್ಮ ಸೇವೆಗಾಗಿ ಜನ್ಮತಾಳಿದ್ದಾನೆ : ಪ್ರಧಾನಿ ನರೇಂದ್ರ ಮೋದಿ.

    ನಾನು ಮೋಜಿಗಾಗಿ ಹುಟ್ಟಿಲ್ಲ. ನಿಮ್ಮ ಸೇವೆಗಾಗಿ ಜನ್ಮತಾಳಿದ್ದಾನೆ : ಪ್ರಧಾನಿ ನರೇಂದ್ರ ಮೋದಿ.

    ಶಿರಸಿ : ಮೋದಿ ಮೋಜಿಗಾಗಿ ಹುಟ್ಟಿಲ್ಲ. ನಿಮ್ಮ ಸೇವೆಗಾಗಿ ಜನ್ಮತಾಳಿದ್ದಾನೆ. ನಿಮ್ಮ ಕನಸು ನನಸು ಮಾಡಲು ನಿಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ 24×7 ಶ್ರಮಿಸುತ್ತೆನೆ. ನಿಮ್ಮ ತಪಸ್ಸಿನ ಫಲವಾಗಿ ಭಾರತವನ್ನು ವಿಕಾಸ ಮಾಡುತ್ತೇನೆ. ನನ್ನ ಹಳೆಯ ಒಡನಾಡಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ದಾಖಲೆ ಮತಗಳಿಂದ ಗೆಲ್ಲಿಸಿ. ಫಿರ್ ಏಕ್ ಬಾರ್ ಮೋದಿ ಸರ್ಕಾರ್..! ವಿಕಸಿತ ಭಾರತ, ವಿಕಸಿತ ಕರ್ನಾಟಕಕ್ಕೆ ಬಿಜೆಪಿಗೆ ಆಶೀರ್ವಾದ ಮಾಡಿ. ಉತ್ತರ ಕನ್ನಡ ಜಿಲ್ಲೆಯಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿಯವರನ್ನು ದಾಖಲೆ ಮತಗಳಿಂದ ಗೆಲ್ಲಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು. ನಗರದ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

    ಇಲ್ಲಿನ ಜನಸಾಗರ ನೋಡಿದರೆ ಇದು ಭಾರತೀಯ ಜನತಾ ಪಕ್ಷದ ವಿಜಯಯಾತ್ರೆಯಾಗಿದೆ. ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ನಿಮ್ಮ ಆಶೀರ್ವಾದ ಪಡೆಯಲು ಬಂದಿದ್ದೆ. ಅಲ್ಲಿಂದ ಇಲ್ಲಿಯವರೆಗೆ ಮನತುಂಬಿ ಆಶೀರ್ವಾದ ಮಾಡಿದ್ದಿರಾ ನಿಮಗೆ ಕೃತಜ್ಞತೆ ಸಲ್ಲಿಸುತ್ತೆನೆ. ನಿಮ್ಮ ತಪಸ್ಸಿಗೆ ಪ್ರತಿಫಲ ನೀಡುತ್ತೆನೆ ಎಂದರು.

    ನಿಮ್ಮ ಆಶೀರ್ವಾದಿಂದ ಪೂರ್ಣ ಪ್ರಮಾಣದಿಂದ ಹತ್ತು ವರ್ಷಗಳ ಕಾಲ ಅಧಿಕಾರ ನಡೆಸಿದೆ. ಅನೇಕ ಅಭಿವೃದ್ಧಿ ಯೋಜನೆಗಳನ್ನು ನೀಡಿದ್ದೇವೆ. ಬಹುಮತ ಸರ್ಕಾರ ಅಧಿಕಾರದಲ್ಲಿ ಇದ್ದರೆ ವಿಶ್ವವೇ ಗೌರವಿಸುತ್ತದೆ. ನಿಮ್ಮ ಒಂದು ಮತ ಭಾರತದ ಗೌರವವನ್ನು ವಿಶ್ವಕ್ಕೆ ಪರಿಚಯಿಸಿದೆ. 140ಕೋಟಿ ಜನರ ಬೆಂಬಲ ಮೋದಿಯ ಜೊತೆಗಿರುವ ಕಾರಣ ವಿಶ್ವವೇ ಭಾರತವನ್ನು ಗುರುತಿಸಿದೆ ಎಂದ ಮೋದಿ, ರಾಮ ಮಂದಿರ ನಿರ್ಮಾಣ ಕಾರ್ಯದಲ್ಲಿ ನಮ್ಮ ಪೂರ್ವಜರ ತ್ಯಾಗ ಬಲಿದಾನವಾಗಿದೆ. 500 ವರ್ಷಗಳ ಬಳಿಕ ನಿಮ್ಮ ಮತದ ತಾಕತ್ತಿ ನಿಂದ ಪ್ರಭು ಶ್ರೀರಾಮನ ಮಂದಿರ ನಿರ್ಮಾಣವಾಗಿದೆ. ದೇಶದ ಜನತೆಯ ಹತ್ತು ರೂಪಾಯಿಂದ ಕೋಟಿ ರೂ.ಗಳ ದಾನದಿಂದ ಮಂದಿರ ನಿರ್ಮಾಣವಾಗಿದೆ. ರಾಮಲಲ್ಲಾನನ್ನು ತಿರಸ್ಕರಿಸಿದ ಪಕ್ಷವನ್ನು ರಾಜ್ಯದ ಜನತೆ ತಿರಸ್ಕರಿಸುವ ಕಾಲ ಬಂದಿದೆ ಎಂದರು.

    ಬಿಜೆಪಿ ಸರ್ಕಾರ ಅಡಕೆ ಬೆಳೆಗೆ ಮಾನ್ಯತೆಯನ್ನು ನೀಡಿದೆ. ಉತ್ತರ ಕನ್ನಡದ ಅಡಿಕೆಗೆ ಬಿಜೆಪಿ ಸರ್ಕಾರ ಜಿಐ ಟ್ಯಾಗ್ ನೀಡಿದೆ.‌ ಕರ್ನಾಟಕದ ಸಿರಿ ಧಾನ್ಯ ವಿಶ್ವದೆಲ್ಲೆಡೆ ಪ್ರಸಿದ್ಧಿ ಪಡೆದಿದೆ.‌ ಇಲ್ಲಿಂದ ಅಮೇರಿಕಾದವರೆಗೂ ಹರಡಿಕೊಂಡಿದೆ ಎಂದ ಅವರು, ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಹದಗೆಟ್ಟಿದೆ. ಕಾಂಗ್ರೆಸ್ ಪಕ್ಷದ ಪಾಪದಿಂದ ಮಹಿಳೆಯರಿಗೆ ಸಹೋದರಿಗೆ ರಕ್ಷಣೆಯಿಲ್ಲದಂತಾಗಿದೆ. ಬಾಂಬ್ ಸ್ಫೋಟವಾದರೆ ಸಿಲಿಂಡರ್ ಸ್ಫೋಟವಾಗಿದೆ ಎಂದು ಹೇಳುತ್ತಾರೆ. ಆದರೆ ಬಿಜೆಪಿ ಸರ್ಕಾರ ಬಂದ‌ ಮೇಲೆ ಭಯೋತ್ಪಾದನೆ ಕಡಿಮೆ ಆಗಿದೆ ಎಂದರು.

    ಕಾಂಗ್ರೆಸ್ ಪಕ್ಷದ ಲೂಟಿ ನಿರಂತರವಾಗಿ ನಡೆಯಲಿದೆ. ಮೋದಿಯ ಬಳಿ ಏನೂ ಇಲ್ಲ. ನೀವೇ ನನ್ನ ಪರಿವಾರವಾಗಿದೆ. ಕಮಲದ ಬಟನ್ ಒತ್ತಿದಾಗ ನಿಮಗೆ ಮೋದಿ ಕಾಣುತ್ತಾರೆ. ಪ್ರತಿ ಮನೆ ಮನೆಗೆ ತೆರಳಿ ನನ್ನ ನಮಸ್ಕಾರವನ್ನು ತಿಳಿಸಿ. ಅವರಿಂದ ಕಮಲದ ಹೂವಿಗೆ ಆಶೀರ್ವಾದ ಸಿಗುವಂತೆ ಮಾಡಿ. ನಿಮ್ಮ ಮತದಿಂದಲೇ ಎಲ್ಲವೂ ಸಾಧ್ಯವಾಗಿದೆ. ಪ್ರತಿಯೊಂದು ಅಭಿವೃದ್ಧಿಗೂ ನೀವು ಆಶೀರ್ವದಿಸಿದ ಒಂದು ಮತವೇ ಕಾರಣವಾಗಿದೆ ಎಂದರು.

    ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಮಾರಿಕಾಂಬೆಯ ಆಶೀರ್ವಾದದಿಂದ ಗಂಗಾಪ್ರವಾಹದೋಪಾದಿ ಜನರ ಆಗಮನವಾಗಿದ್ದು, ಕಾಶಿಯಿಂದ ಪ್ರತಿನಿಧಿಸುವ ನರೇಂದ್ರ ಮೋದಿ ನೋಡಲು ಲಕ್ಷಾಂತರ ಜನರು ಆಗಮಿಸಿದ್ದಾರೆ. ಇದು ದೇಶದ ಭವಿಷ್ಯ ಬರೆಯುವ ಚುನಾವಣೆಯಾಗಿದ್ದು, ಕಾಂಗ್ರೆಸ್ ಈ ಚುನಾವಣೆಯನ್ನು ಗ್ರಾಪಂ. ಚುನಾವಣೆಗೂ ಕಡೆಯೆಂಬಂತೆ ಎದುರಿಸುತ್ತಿರುವದು ವಿಷಾದನೀಯ. ವಿಕಸಿತ ಭಾರತ ಮೋದಿ ಗುರಿಯಾದರೆ ಕಾಂಗ್ರೆಸ್ ಚೊಂಬಿನ ಬಗ್ಗೆ ಮಾತನಾಡುತ್ತಿದೆ. ೧೧ ಕೋಟಿ ಶೌಚಾಲಯ ಕಟ್ಟಿದ ಮೇಲೂ ಕಾಂಗ್ರೆಸ್ ಯಾಕೆ ಚೊಂಬು ಹಿಡಿದುಕೊಂಡಿದೆ ಎಂದು ಪ್ರಶ್ನಿಸಬೇಕಿದೆ. ೨೩೦ ಸೀಟ್ ನಿಲ್ಲಿಸಿ ೨೭೩ ಸೀಟ್ ಬೇಕಿದ್ದರೂ ಪ್ರಣಳಿಕೆಯಲ್ಲಿ ಆಮಿಷ. ಮೋದಿ ದೇಶಕ್ಕೆ ಕಟ್ಟಿಕೊಟ್ಟ ಘನತೆ ಉಳಿಯಲು ಬಿಜೆಪಿ ಗೆಲ್ಲಿಸುವ ಗುರಿ ಜನತೆಯದ್ದೆಂಬ ವಿಶ್ವಾಸವಿದೆ. ದೇಶದ ರಕ್ಷಣೆಗೆ ಮೋದಿ ಬೇಕಿದೆ. ಕಾಂಗ್ರೆಸ್ ಅವಧಿಯಲ್ಲಿ ರಾಮಮಂದಿರ ಆಗಿರಲಿಲ್ಲ, ಮೋದಿ, ಯೋಗಿ ಪ್ರಯತ್ನದಿಂದ ಅಯೋಧ್ಯಾದಲ್ಲಿ ಭವ್ಯ ರಾಮಂದಿರ ನಿರ್ಮಾಣವಾಗಿದ್ದು, ಇಲ್ಲಿನ ಸಂಸ್ಕೃತಿ, ಜ್ಞಾನದ ಸಂಪತ್ತು ವಿಶ್ವಕ್ಕೆ ಗುರುವಾಗಿ ಭಾರತ ನಿಲ್ಲುವಂತೆ ಮಾಡಿದೆ. ಅಯೋಧ್ಯೆಗೆ ಆಹ್ವಾನಿಸಿದರೆ ಕಾಂಗ್ರೆಸ್ ಬಹಿಷ್ಕರಿಸಿತು. ಇಲ್ಲಿ ಕೇಸರಿ ಪೇಟ ತೊಟ್ಟು ಹಿಂದುತ್ವವಾದಿಯೆನ್ನುವ ಕಾಂಗ್ರೆಸ್ ಮುಸ್ಲಿಂ ಲೀಗ್‌ನಂತೆ ವರ್ತಿಸುತ್ತಿದೆ. ದೇಶದ ಘಟನೆ, ಗೌರವಕ್ಕೆ ನರೇಂದ್ರ ಮೋದಿ ೩ ನೆಯ ಬಾರಿಗೆ ಪ್ರಧಾನಿಯಾಗಬೇಕೆಂದು ಜನರು ತೀರ್ಮಾನಿಸಿದ್ದಾರಲ್ಲದೇ, ಕಾಂಗ್ರೆಸ್‌ನ್ನು ಮನೆಗೆ ಕಳುಹಿಸಬೇಕೆಂಬ ನಿರ್ಧಾರ ಮಾಡಿದ್ದಾರೆ. ಮೇ.೭ ರಂದು ನಡೆಯಲಿರುವ ಚುನಾವಣೆಯಲ್ಲಿ ಕಮಲದ ಬಟನ್‌ಗೆ ಮತ ನೀಡುವುದರ ಮೂಲಕ ನನ್ನನ್ನು ಸಂಸದನನ್ನಾಗಿ ಆಯ್ಕೆ ಮಾಡಬೇಕು ಎಂದರು.

    ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, ಯಾವ್ಯಾವಾಗ ಬಿಜೆಪಿ ಪ್ರವರ್ಧಮಾನಕ್ಕೆ ಬರುತ್ತದೋ ಆ ಸಂದರ್ಭದಲ್ಲಿ ಸಂವಿಧಾನ ಬದಲಿಸುತ್ತದೆಂಬ ಅಪ್ರಚಾರ ಮಾಡಲಾಗುತ್ತದೆ. ಸಂವಿಧಾನಕ್ಕೆ, ಅಂಬೇಡ್ಕರರಿಗೆ ಗೌರವ ನೀಡಿ ಪಂಚತೀರ್ಥ ಎಂದು ಗೌರವಿಸಿದ್ದರೆ ಅದು ಬಿಜೆಪಿ. ರಾಮನಾಥ ಕೋವಿಂದ ಅವರನ್ನು ರಾಷ್ಟ್ರಪತಿ ಮಾಡಿರುವುದು ಬಿಜೆಪಿ. ಬುಡಕಟ್ಟು ಆದಿವಾಸಿ ಮಹಿಳೆ ದ್ರೌಪತಿ ಮುರ್ಮು ಅವರನ್ನು ರಾಷ್ಟ್ರಪತಿ ಮಾಡಿದ ಪಕ್ಷ ಬಿಜೆಪಿ. ಜೀವನದ ಭದ್ರತೆಯ ಗ್ಯಾರೆಂಟಿ ಮೋದಿ ಗ್ಯಾರೆಂಟಿ. ಭಯೋತ್ಪಾದನೆ ಇಲ್ಲವಾದ ಸಂದರ್ಭದಲ್ಲಿ ಕರ್ನಾಟಕ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ವಿಧಾನಸೌಧದಲ್ಲೇ ಪಾಕಿಸ್ತಾನ ಪರ ಘೋಷಣೆ ಕೇಳುವಂತಾಯ್ತು. ರಾಮೇಶ್ವರ ಕೆಫೆ ಬ್ಲಾಸ್ಟ್ ಆದಾಗ ಸಿಲಿಂಡರ್ ಸ್ಫೋಟ ಎಂದು ಗೃಹಸಚಿವ ಹೇಳಿದರು. ಹುಬ್ಬಳ್ಳಿಯ ಪೊಲೀಸ್ ಠಾಣೆ ಸುಟ್ಟ ಪಿಎಫ್‌ಐ ಸಂಪರ್ಕವಿದ್ದ ೧೫೦ ಆರೋಪಿಗಳಿಗೆ ಬೇಲ್ ನೀಡಲು ತಯಾರಾಗಿದ್ದು ಕಾಂಗ್ರೆಸ್. ಕೆಜಿಹಳ್ಳಿ, ಡಿಜಿ ಹಳ್ಳಿ ಗಲಭೆ ವೇಳೆ ಕಾಂಗ್ರೆಸ್‌ನ ದಲಿತ ಶಾಸಕರಿಗೇ ರಕ್ಷಣೆ ನೀಡಿಲ್ಲ. ನೇಹಾ ಮತಾಂತರವಾಗಲು ಒಪ್ಪದಿದ್ದಾಗ ಕೊಲೆ ಮಾಡಲಾಯಿತು ಎಂದು ಆಕೆಯ ತಂದೆಯೇ ಹೇಳಿದ್ದರೂ ವೈಯಕ್ತಿಕ ಕಾರಣಕ್ಕಾಗಿ ಕೊಲೆ ಎಂದು ಕಾಂಗ್ರೆಸ್‌ನವರು ಹೇಳುತ್ತಿದ್ದಾರೆ. ಗ್ಯಾರೆಂಟಿ ಹಣ ಹೊಂದಾಣಿಕೆಗಾಗಿ ಬಾಂಡ್ ಪೇಪರ್ ಬೆಲೆ, ಪಹಣಿ ಉತಾರ್ ದರ, ಹಾಲಿನ ದರ, ಹಾಲಿನ ಸಬ್ಸಿಡಿ ನಿಲ್ಲಿಸಿ, ರೆಜಿಸ್ಟ್ರೇಶನ್ ದರ ಹೆಚ್ಚಳ, ಮದ್ಯದ ದರ ಹೆಚ್ಚಳ ಮಾಡಿದ್ದಾರೆ. ಮೋದಿಯ ಗ್ಯಾರಂಟಿ ಜೀವದ ಗ್ಯಾರಂಟಿ. ನಾಚಿಗೆಗೇಡಿನ ಸರ್ಕಾರ ರಾಜ್ಯದಲ್ಲಿದೆ ಎಂದರು.

    ವಿಧಾನಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಮಾತನಾಡಿ, ಕೇರಳ ಕಾಂಗ್ರೆಸ್ ಮುಖಂಡನು ಬುಡಕಟ್ಟು ಜನಾಂಗದವರು ದನದ ಮಾಂಸ ತಿನ್ನುತ್ತಾರೆ ಎಂದು ಹೇಳಿಕೆ ನೀಡಿದ್ದು, ಬುಡಕಟ್ಟು ಸಮುದಾವರು ಎಂದಿಗೂ ದನದ ಮಾಂಸ ತಿಂದವರಲ್ಲ. ಗೋವು, ನದಿ, ಭೂಮಿಯನ್ನು ದೇವರು ಎಂದು ಪೂಜಿಸುವವರು. ಅವರ ಹೇಳಿಕೆ ಖಂಡನೀಯ. ನಾವ್ಯಾರು ಕಾಂಗ್ರೆಸ್ ಜತೆ ಸೇರುವುದಿಲ್ಲ. ಬುಡಕಟ್ಟು ಜನಾಂಗವಿದ್ದ ಎಲ್ಲೂ ಕಾಂಗ್ರೆಸ್ ಆಡಳಿತಕ್ಕೆ ಬಂದಿಲ್ಲ. ಮಾಜಿ ಪ್ರಧಾನಿ ದಿ.ಅಟಲ್ ಬಿಹಾರಿ ವಾಜಪೇಯಿ ಅರಣ್ಯ ಹಕ್ಕು ಕಾಯ್ದೆ ತಂದರು. ಕಾಂಗ್ರೆಸ್ ಸರ್ಕಾರ ಅದನ್ನು ಸ್ಥಗಿತಗೊಳಿಸಿತು. ೨೦೧೨ ರಲ್ಲಿ ಬಿಜೆಪಿ ಸರ್ಕಾರವಿದ್ದಾಗ ಹೆಚ್ಚು ಹಕ್ಕು ಪತ್ರ ನೀಡಲಾಯಿತು. ದಲಿತರಿಗೆ ಮತ್ತು ಪರಿಶಿಷ್ಟ ಜಾತಿಯವರಿಗೆ ಮೀಸಲಾತಿ ಹೆಚ್ಚಳ ಬಿಜೆಪಿ ಸರ್ಕಾರ. ಕಾಂಗ್ರೆಸ್ ಬಂದಾಗ ಗ್ಯಾರೆಂಟಿ ತಂತು. ದಲಿತ ಸಮುದಾಯ ಅಭಿವೃದ್ಧಿಗೆ ಮೀಸಲಿಟ್ಟ ೧೧೫೦೦ ಕೋಟಿ ರೂ. ಹಣ ತೆಗೆದು ಗ್ಯಾರೆಂಟಿಗೆ ನೀಡಿತು. ಎಲ್ಲ ಕೆಲಸಗಳು ಈಡೇರಲು, ಸಂಸ್ಕಾರ, ಸಂಸ್ಕೃತಿ ಉಳಿಯಲು ಬಿಜೆಪಿ ಬೆಂಬಲಿಸಿ ಎಂದರು.

    ಕುಮಟಾ ಶಾಸಕ ದಿನಕರ ಶೆಟ್ಟಿ ಮಾತನಾಡಿ, ವಿಶ್ವಾಸ ಗಳಿಸಿದ ನಾಯಕ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಪಕ್ಷಾಂತರಿಯೂ ಅಲ್ಲ, ಸ್ವಾರ್ಥಿಯೂ ಅಲ್ಲ. ೨೦೦೬ರಲ್ಲಿ ಮಂತ್ರಿಯಾಗುವ ಅವಕಾಶವಿತ್ತು. ಭಟ್ಕಳದ ಶಿವಾನಂದ ನಾಯ್ಕಗೆ ಮಂತ್ರಿ ಸ್ಥಾನ ಸಿಗುವಂತೆ ಮಾಡಿದವರು. ಸಭಾಧ್ಯಕ್ಷತಾಗಿದ್ದ ಕಾಗೇರಿಯವರು ಪ್ರತಿ ಪತ್ರಕ್ಕೆ, ಪ್ರಶ್ನೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದರು. ಆಸ್ಪತ್ರೆ ವಿಚಾರದಲ್ಲೂ ತನಗೆ ಬೆಂಬಲ ನೀಡಿದ್ದರು. ಸುದೀರ್ಘ ೫೦ ವರ್ಷ ಆಡಳಿತ ನಡೆಸಿದ್ದ ಕಾಂಗ್ರೆಸ್‌ಗೆ ಯಾಕೆ ಮಲ್ಟಿ ಸ್ಪೇಶಾಲಿಟಿ ಆಸ್ಪತ್ರೆ ನೆನಪಾಗಿಲ್ಲವೇ? ಕಾಂಗ್ರೆಸ್ ಕುಮಟಾದಲ್ಲಿ ಆಸ್ಪತ್ರೆ ನಿರ್ಮಿಸಲು ಅವಕಾಶ ನೀಡಿಲ್ಲ. ಜಿಲ್ಲೆಗೆ ಒಂದೇ ಮೆಡಿಕಲ್ ಕಾಲೇಜ್ ನೀಡುತ್ತೇವೆಂದು ಉತ್ತರಿಸಿದ್ದರು. ಕ್ರೆಡಿಟ್ ಬಿಜೆಪಿಗೆ ಹೋಗುತ್ತದೆಂಬ ಉದ್ದೇಶದಿಂದ ಆಸ್ಪತ್ರೆ ಮಾಡಿಲ್ಲ. ಹೊನ್ನಾವರಕ್ಕೆ ನೀರಿನ ಸಂಪರ್ಕ ಕಾಂಗ್ರೆಸ್ ಶಾಸಕರು ಅಡಿಗಲ್ಲು ಹಾಕಿದ್ದರೂ ಕ್ರೆಡಿಟ್ ನಿರೀಕ್ಷೆಯಿಲ್ಲದೆ ಯೋಜನೆ ಪೂರ್ಣಗೊಳಿಸಿದ್ದು ಬಿಜೆಪಿ. ಆರ್.ವಿ.ದೇಶಪಾಂಡೆ ಸಚಿವರಾಗಿದ್ದರೂ ಎಷ್ಟು ಕೈಗಾರಿಕೆಗಳನ್ನು ಉಳಿಸಿಕೊಂಡರು. ಜಿಲ್ಲೆಯಲ್ಲಿ ಎಷ್ಟು ಕೈಗಾರಿಕೆಯನ್ನು ಉಳಿಸಿಕೊಂಡಿದ್ದಾರೆ ಎಂಬುದನ್ನು ತಿಳಿಸಲಿ ಎಂದು ಸವಾಲು ಹಾಕಿದರು.

    ಖಾನಾಪುರ ಮಾಜಿ ಶಾಸಕ ಅರವಿಂದ ಪಾಟೀಲ ಮಾತನಾಡಿ, ಕಾಂಗ್ರೆಸ್ ಅಭ್ಯರ್ಥಿ ಖಾನಾಪುರದ ಆಕಿ, ಶಾಸಕನಾಗಿದ್ದೇನೆ ಎಂದು ಹೇಳಿದ್ದರು. ಮರಾಠಾ ಸಮುದಾಯ ಜನರ ಬೆಂಬಲವಿದೆ ಎನ್ನುತ್ತಾರೆ. ಖಾನಾಪುರದಲ್ಲಿ ೫೫ ಸಾವಿರ ಮತಗಳ ಅಂತರದಿಂದ ಸೋಲಿಸಿ, ಮನೆಗೆ ಕಳುಹಿಸಿದ್ದೇವೆ. ಖಾನಾಪುರದಲ್ಲಿ ಮಲ್ಟಿ ಸ್ಪೇಶಾಲಿಟಿ ಆಸ್ಪತ್ರೆ ನಿರ್ಮಾಣವಾಗಿರುವುದು ಬಿಜೆಪಿ ಸರ್ಕಾರದ ಅವಧಿಯಲ್ಲಿ. ಸುಳ್ಳು ಹೇಳುತ್ತಿರುವ ಅಂಜಲಿ ನಿಂಬಾಳ್ಕರ ಚರ್ಚೆಗೆ ಬರಲಿ. ವೈದ್ಯರಾದವರು ಎಂದು ಹೇಳಿಕೊಳ್ಳುವ ಅಂಜಲಿ ಮಲ್ಟಿ ಸ್ಪೇಶಾಲಿಟಿ ಆಸ್ಪತ್ರೆಯ ಅರ್ಥ ತಿಳಿದುಕೊಳ್ಳಲಿ. ನೇಹಾ ಹತ್ಯೆಯಂಥ ಕೃತ್ಯ ನಿಲ್ಲಿಸಲು ಬಿಜೆಪಿಗೆ ಮತ ನೀಡಬೇಕು. ಕಳೆದ ಚುನಾವಣೆಗಿಂತ ಈ ಬಾರಿಗೆ ಮತ್ತಷ್ಟು ಅತ್ಯಧಿಕ ಮತಗಳ ಅಂತರದಿಂದ ಕಾಗೇರಿ ಅವರನ್ನು ಗೆಲ್ಲಿಸಬೇಕು ಎಂದರು.
    ಕಾರವಾರದ ಮಾಜಿ ಶಾಸಕಿ ರೂಪಾಲಿ ನಾಯ್ಕ ಮಾತನಾಡಿ, ಶಿರಸಿಗೆ ೪೦ ವರ್ಷದ ಬಳಿಕ ಪ್ರಧಾನ ಮಂತ್ರಿ, ದೇವ ಮಾನವ ನರೇಂದ್ರ ಮೋದಿ ಆಗಮಿಸುತ್ತಿರುವುದು ಹೆಮ್ಮೆ ಮತ್ತು ಖುಷಿ ತಂದಿದೆ. ಗ್ಯಾರಂಟಿ ಮತ್ತು ವಾರಂಟಿಗೆ ಮಹಿಳೆಯರು ಬಲಿಯಾಗದೇ, ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ ಹೇಳಬೇಕು. ಭಯೋತ್ಪಾದನೆ ತಡೆಗಟ್ಟಿ, ದೇಶದ ದಲ್ಲಿ ಶಾಂತಿಯುತ ಜೀವನ ನಡೆಸಲು ಪ್ರಧಾನಿ ನರೇಂದ್ರ ಮೋದಿ ಹಗಲಿರುಳು ಶ್ರಮಿಸಿದ್ದಾರೆ. ಹುಬ್ಬಳ್ಳಿ-ಅಂಕೋಲಾ ರೈಲು, ತಾಳಗುಪ್ಪ-ಶಿರಸಿ ರೈಲು, ಶಿರಸಿ-ಹಾವೇರಿ ರೈಲು ಮಾರ್ಗಗಳ ಅನುಷ್ಠಾನಕ್ಕೆ ವಿಶ್ವೇಶ್ವರ ಹೆಗಡೆ ಸಂಸದರಾದ ಮೇಲೆ ಮಂಜೂರಿಗೆ ಪ್ರಯತ್ನಿಸುತ್ತಾರೆ ಎಂಬ ವಿಶ್ವಾಸವಿದೆ. ಜಿಲ್ಲೆಯ ಯುವಕರಿಗೆ ಜಿಲ್ಲೆಯಲ್ಲಿ ಉದ್ಯೋಗ ಲಭಿಸಲು ಬಿಜೆಪಿ ಸಂಸದರು ಆಯ್ಕೆಯಾಗಬೇಕು. ಜಿಲ್ಲೆಯಲ್ಲಿ ಮಲ್ಟಿ ಸ್ಪೇಶಾಲಿಟಿ ಆಸ್ಪತ್ರೆ ನಿರ್ಮಾಣ ಬಿಜೆಪಿಯಿಂದ ಮಾತ್ರ ಸಾಧ್ಯ ಎಂದರು.

    ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಮಾತನಾಡಿ, ಭಾರತ ದೇಶದ ಭವಿಷ್ಯ ಬರೆಯುವ ಚುನಾವಣೆಯಾಗಿದ್ದು, ಕಾಂಗ್ರೆಸ್ ಅವಧಿಯಲ್ಲಿ ಆರ್ಥಿಕ ದುಸ್ಥಿತಿಗೆ ಹದಗೆಟ್ಟು ಚಿನ್ನ ಅಡವಿಟ್ಟಿದ್ದ ದೇಶವಾಗಿತ್ತು ಭಾರತ. ಅದೇ ಭಾರತವೀಗ ಹತ್ತು ವರ್ಷಗಳಲ್ಲಿ ಹಲವು ದೇಶಗಳಿಗೆ ಸಾಲ ನೀಡಿದ ದೇಶವಾಗಿದೆ. ಸಮರ್ಥ ಭಾರತಕ್ಕಾಗಿ ಮೋದಿ ಗೆಲ್ಲಿಸಬೇಕಿದೆ. ಆಸ್ಪತ್ರೆಗಾಗಿ ೩೦ ಜಾಗ ಕಾಯ್ದಿರಿಸಿದ್ದೆವು. ಕಾಗೇರಿ ಗೆಲ್ಲಿಸಿ ಆಸ್ಪತ್ರೆ ಕನಸು ನನಸಾಗಿಸೋಣ. ೧೫೦ ಕೋಟಿ ಜನರನ್ನು ಪ್ರತಿನಿಧಿಸುವ ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರನ್ನು ಏಕವಚನದಲ್ಲಿ ಸಂಬೋಧಿಸಿದ ಸಿದ್ಧರಾಮಯ್ಯನವರಿಗೆ ಬುದ್ಧಿಕಲಿಸಬೇಕು. ೧೦ ಕೆಜಿ ಅಕ್ಕಿ ಬೇಕೋ ಬೇಡವೋ ಅಂತ ಕೇಳಿದ ಸಿದ್ದರಾಮಯ್ಯ ಒಂದು ಕಾಳು ಅಕ್ಕಿಯನ್ನೂ ನೀಡಿಲ್ಲ. ಪ್ರತಿ ತಿಂಗಳು ೨೫ ಲಕ್ಷ ಟನ್ ಅಕ್ಕಿಯನ್ನು ಕೇಂದ್ರ ಸರ್ಕಾರ ನೀಡುತ್ತಿದೆ. ಬಿಜೆಪಿ ಸಂವಿಧಾನ ವಿರೋಧಿ ಎಂದು ಕಾಂಗ್ರೆಸ್ ಹೇಳುತ್ತಿದೆ. ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರಿಗೆ ಹತ್ತಡಿ ಜಾಗವನ್ನೂ ನೀಡದೇ ಪಾರ್ಥಿವ ಶರೀರವನ್ನು ಮುಂಬೈಗೆ ಕಳುಹಿದ್ದು, ಅಂಬೇಡ್ಕರ ಅವರನ್ನು ಸೋಲಿಸಿದ್ದು ಕಾಂಗ್ರೆಸ್. ದಲಿತರಿಗೆ ಶೇ.3ರಿಂದ ಶೇ.7 ಕ್ಕೆ ಮೀಸಲಾತಿ ಏರಿಸಿದ್ದು ಬಿಜೆಪಿ. ಎಸ್.ಸಿ ಮೀಸಲಾತಿ ಶೇ.15 ಕ್ಕೆ ಹೆಚ್ಚಳ ಮಾಡಿರುವುದು ಬಿಜೆಪಿ ಎಂದರು.

    ಮಾಜಿ ಸಚಿವ ಹರತಾಳು ಹಾಲಪ್ಪ, ಕಾರ್ಕಳ ಶಾಸಕ ವಿ.ಸುನೀಲಕುಮಾರ, ಭಟ್ಕಳ ಮಾಜಿ ಶಾಸಕ ಸುನೀಲ ನಾಯ್ಕ, ಪ್ರಮುಖರಾದ ಗೋವಿಂದ ನಾಯ್ಕ
    ಸುನೀಲ ಹೆಗಡೆ, ಸೀಮಾ ಮಸೂತಿ, ವಿವೇಕಾನಂದ ವೈದ್ಯ, ಶಿವಾನಂದ ನಾಯ್ಕ, ಗಿರೀಶ ಪಟೇಲ್, ಎಸ್.ಎಲ್.ಘೊಟ್ನೇಕರ, ಭಾರತಿ ಜಿಂದಗಿ, ವೆಂಟಕೇಶ ನಾಯಕ, ಪ್ರಸನ್ನ ಕೆರೇಕೈ, ಶಿವಾನಿ ಶಾಂತಾರಾಮ್, ಹರಿಪ್ರಕಾಶ ಕೋಣೆಮನೆ, ಜೆಡಿಎಸ್ ಮುಖಂಡರಾದ ಸೂರಜ್ ನಾಯ್ಕ ಸೋನಿ, ಉಪೇಂದ್ರ ಪೈ, ಜೆಡಿ.ಎಸ್ ಉಪಾಧ್ಯಕ್ಷ ಗೋವಿಂದ ಗೌಡ, ಬಿಜೆಪಿಯ ಧನಶ್ರೀ, ಚೈತ್ರಾ ಶಿರೂರ, ಮಹೇಂದ್ರ ಕೌಟ್ ಮತ್ತಿತರರು ಇದ್ದರು. ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್.ಹೆಗಡೆ ಕರ್ಕಿ ಸ್ವಾಗತಿಸಿದರು. ಬಿಜೆಪಿ ಗ್ರಾಮೀಣ ಮಂಡಳ ಅಧ್ಯಕ್ಷೆ ಉಷಾ ಹೆಗಡೆ ನಿರೂಪಿಸಿ, ವಂದಿಸಿದರು.