ಸಿದ್ದಾಪುರ : ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ಕುಟುಂಬವು ಆಧುನಿಕತೆಗೆ ತೆರೆದುಕೊಳ್ಳುವ ಭರದಲ್ಲಿ ಕೃಷಿಯಿಂದ ಹಾಗೂ ಗೋ ಸಾಕಾಣಿಕೆಯಿಂದ ವಿಮುಖವಾಗುತ್ತಿರುವುದು ವಿಷಾದನೀಯ ಸಂಗತಿಯಾಗಿದೆ, ಪ್ರತಿಯೊಬ್ಬರ ಆರೋಗ್ಯ ಪೂರ್ಣ ಜೀವನದಲ್ಲಿ ಇವು ಒಂದು ಭಾಗವಾಗಬೇಕಾಗಿದೆ ಎಂದು ಗೋಕರ್ಣದ ಸಸ್ಯ ಸಂಜೀವಿನಿ ಪಂಚಕರ್ಮ ಕೇಂದ್ರದ ಡಾ. ಸೌಮ್ಯಶ್ರೀ ಶರ್ಮಾ ಅವರು ಅಭಿಪ್ರಾಯ ಪಟ್ಟರು.
ಸಿದ್ದಾಪುರ ತಾಲೂಕಿನ ಹಳ್ಳಿಬೈಲ್ ಗ್ರಾಮದ ಹುತ್ಗಾರ ಶಾಲೆ ಆವಾರದಲ್ಲಿ ಸ್ಪಂದನ ಟ್ರಸ್ಟ್ (ರಿ.) ಹಳ್ಳಿಬೈಲ್ ಆಯೋಜನೆಯ ಹನ್ನೊಂದನೇ ವರ್ಷದ ಹಳ್ಳಿಹಬ್ಬ – 2025 ರ ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ. ಸೌಮ್ಯಶ್ರೀ ಶರ್ಮಾ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
“ಗ್ರಾಮದಿಂದ ಅನ್ಯೋನ್ಯ ಕಾರಣಗಳಿಗಾಗಿ ಷಹರ ಸೇರಿರುವ ಊರವರನ್ನು ಒಂದು ದಿನ ತಮ್ಮ ಹುಟ್ಟುರಿಗೆ ಕರೆಸಿ ಎಲ್ಲರೂ ಜೊತೆಯಾಗಿ ಹಳ್ಳಿಹಬ್ಬವನ್ನು ಆಚರಿಸುತ್ತಿರುವುದು ಇಂದಿನ ವಿದ್ಯಮಾನದಲ್ಲಿ ಸ್ಪಂದನ ಟ್ರಸ್ಟ್ ನ ಕಾರ್ಯ ಶ್ಲಾಘನೀಯವಾಗಿದೆ, ಹಾಗೆಯೇ ಹುತ್ಗಾರ ಶಾಲೆಯಲ್ಲಿ ಕಲಿಸಿದ ನಿವೃತ್ತ ಶಿಕ್ಷಕರನ್ನು ಗೌರವಿಸಿ ಅವರಿಂದ ಆಶೀರ್ವಾದ ಪಡೆಯುವ ಗುರುವಂದನೆ, ಹೃದಯಸ್ಪರ್ಶಿ ಕ್ಷಣಗಳು. ಅದರಲ್ಲೂ ಅಂಗನವಾಡಿ ಕೇಂದ್ರದಲ್ಲಿ ಕೆಲಸ ನಿರ್ವಹಿಸಿ ಸೇವಾ ನಿವೃತ್ತಿ ಹೊಂದಿದ ಶಿಕ್ಷಕರು ಹಾಗೂ ಸಹಾಯಕಿ ಇಬ್ಬರನ್ನೂ ಗೌರವಿಸುತ್ತಿರುವುದು ನಿಮ್ಮ ಊರು ಅವರ ಮೇಲಿಟ್ಟ ಪ್ರೀತಿಗೆ ಸಾಕ್ಷಿಯಾಗಿದೆ.
ಒಂದು ಗ್ರಾಮದ ಅಥವಾ ಸಂಸ್ಥೆಯ ಒಗ್ಗಟ್ಟು ಕಷ್ಟದ ಸಮಯದಲ್ಲಿ ತಿಳಿಯುತ್ತದೆ, ಇಂದು ಮಳೆಯಿಂದ ಅನೇಕ ಸಮಸ್ಯೆಗಳು ಉದ್ಭವವಾಗಿ ಕಾರ್ಯಕ್ರಮ ತಡವಾಗಿ ಪ್ರಾರಂಭವಾದರು ಊರಿನ ಪ್ರತಿಯೊಬ್ಬರು ಒಬ್ಬರಿಗೊಬ್ಬರಿಗೆ ಸಹಕರಿಸುತ್ತಾ ಬಂದದ್ದು ನೋಡಿದರೆ ನಿಮ್ಮ ಊರಿನ ಸಹಬಾಳ್ವೆ ಉಳಿದವರಿಗೆ ಮಾದರಿಯಾಗಿದೆ ಎನ್ನುತ್ತಾ ತಮ್ಮ ಬಾಲ್ಯ ಜೀವನವನ್ನು ಮೆಲುಕು ಹಾಕಿ ಸಂತಸದ ನುಡಿಗಳನ್ನು ಹಂಚಿಕೊಂಡರು. ಡಾಕ್ಟರ್ ಆಗಿದ್ದರು ಸಹ, ಊರವರ ಜೊತೆಗೆ ಊರಿನವರಾಗೆ ಕಾಣಿಸಿಕೊಂಡದ್ದು ವಿಶೇಷವಾಗಿತ್ತು.
ಈ ಸಂದರ್ಭದಲ್ಲಿ ಹುತ್ಗಾರ ಅಂಗನವಾಡಿ ಕೇಂದ್ರದ ನಿವೃತ್ತ ಶಿಕ್ಷಕಿ ಹೇಮಾವತಿ ಹೆಗಡೆ ಹಾಗೂ ಸಹಾಯಕಿ ಕಮಲಾ ಗೌಡ ಇವರನ್ನು ಟ್ರಸ್ಟ್ ನ ವತಿಯಿಂದ ಗೌರವಿಸಲಾಯಿತು. ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಪೂರ್ಣ ಏಳು ವರ್ಷಗಳ ಕಾಲ ಅಧ್ಯಯನ ಮಾಡಿ ಕಳೆದ ಸಾಲಿನಲ್ಲಿ ಎಸ್.ಎಸ್. ಎಲ್. ಸಿ. ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ಕು. ಮಧುರಾ ಭಟ್ಟ ಹಾಗೂ ಕು. ವಿಜೇತಾ ಹೆಗಡೆ ಇವರಿಗೆ ಟ್ರಸ್ಟ್ ನ ವತಿಯಿಂದ ಪ್ರತಿಭಾ ಪುರಸ್ಕಾರವನ್ನು ನೀಡಲಾಯಿತು.
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹುತ್ಗಾರನ ಎಸ್.ಡಿ.ಎಮ್.ಸಿ ಅಧ್ಯಕ್ಷರು ಹಾಗೂ ಸ್ಪಂದನ ಟ್ರಸ್ಟ್ ನ ಕಾರ್ಯದರ್ಶಿಗಳಾದ ಗಣೇಶ ಹೆಗಡೆ ಬಿಳೇಕಲ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ನಿಲ್ಕುಂದ ಗ್ರಾಮ ಪಂಚಾಯತಿಯ ಅಧ್ಯಕ್ಷರು ಹಾಗೂ ಟ್ರಸ್ಟಿನ ಸದಸ್ಯರಾದ ರಾಜಾರಾಮ ಹೆಗಡೆ ಬಿಳೇಕಲ್ ತಮ್ಮ ಅನುಭವದ ಮಾತುಗಳನ್ನು ಹಂಚಿಕೊಂಡರು. ಟ್ರಸ್ಟಿನ ಅಧ್ಯಕ್ಷರಾದ ಪ್ರಸನ್ನ ಹೆಗಡೆ ಸೂರನಜಡ್ಡಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಅಧ್ಯಕ್ಷೀಯ ನುಡಿಗಳನ್ನಾಡಿದರು.
ಭೂಮಿಕಾ ಭಟ್ಟ ಹಾಗೂ ಲತಾ ಹೆಗಡೆ ಅನಿಸಿಕೆಗಳನ್ನು ಹಂಚಿಕೊಂಡರು. ನಿತೀಶ್ ಹೆಗಡೆ ಹಾಗೂ ಸುಬ್ರಹ್ಮಣ್ಯ ಹೆಗಡೆ ಅತಿಥಿಗಳ ಹಾಗೂ ಗುರುಗಳ ಪರಿಚಯ ಮಾಡಿಕೊಟ್ಟರು.
ಪನ್ನಗ ಹೆಗಡೆ ಸ್ವಾಗತಿಸಿದರು ಮತ್ತು ನರೇಂದ್ರ ಹೆಗಡೆ ವಂದಿಸಿದರು. ಕಿರಣ ಭಟ್ಟ ಹುತ್ಗಾರ ಕಾರ್ಯಕ್ರಮ ನಿರೂಪಿಸಿದರು. ಟ್ರಸ್ಟಿಗಳಾದ ಬಾಲಚಂದ್ರ ಹೆಗಡೆ, ದಿನೇಶ ಹೆಗಡೆ, ಪ್ರಸನ್ನ ಹೆಗಡೆ ಹಳ್ಳಿಬೈಲ್ ಸಹಕರಿಸಿದರು.
ಸಭಾಕಾರ್ಯಕ್ರಮದ ನಂತರ ಅಂಗನವಾಡಿ ಹಾಗೂ ಹಿರಿಯ ಪ್ರಾರ್ಥಮಿಕ ಶಾಲಾ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು ಮತ್ತು ಊರಿನ ಹಿರಿ-ಕಿರಿಯ ಉದಯೋನ್ಮುಖ ಕಲಾವಿದರಗಳು ಜಾನಪದ ಸಂಗೀತ, ನೃತ್ಯ, ನಾಟಕ, ಬಿಂಗಿ ಕುಣಿತ, ಕೋಲಾಟ ಹೀಗೆ ಹಲವಾರು ಮನೋರಂಜನಾ ಕಾರ್ಯಕ್ರಮವನ್ನು ನೀಡಿದರು.
ಗಜಾನನ ಹೆಗಡೆ ಸೂರನಜಡ್ಡಿ ಹಾಗೂ ಸಂಗಡಿಗರು ರುಚಿ-ಶುಚಿಯಾದ ಊಟವನ್ನು ನೆರೆದ 300ಕೂ ಹೆಚ್ಚು ಜನರಿಗೆ ಉಣಬಡಿಸಿದರು. ಉಮೇಶ ಹೆಗಡೆ ಕಲ್ಲಾರೆಮನೆ ಹಾಗೂ ಸಂಗಡಿಗರು ಲೈಟಿಂಗ್ ವ್ಯವಸ್ಥೆಯಲ್ಲಿ ಹಾಗೂ ಶ್ರೀ ಸೌಂಡ್ಸ್ ಹೆಗ್ಗರಣಿ ಇವರು ಧ್ವನಿವರ್ಧಕ ವ್ಯವಸ್ಥೆಯಲ್ಲಿ ಸಹಕರಿಸಿದರು.