Home State News ವಾಣಿಜ್ಯ ತೆರಿಗೆ ಇಲಾಖೆ ಚೆಕ್‌ಪೋಸ್ಟ್‌ ಬಂದ್‌

ವಾಣಿಜ್ಯ ತೆರಿಗೆ ಇಲಾಖೆ ಚೆಕ್‌ಪೋಸ್ಟ್‌ ಬಂದ್‌

ಬೆಂಗಳೂರು: ಜಿಎಸ್ ಟಿ ಜಾರಿಯಾಗುವ ಹಿನ್ನೆಲೆಯಲ್ಲಿ ಜುಲೈ 1 ರಿಂದ ರಾಜ್ಯದ ಎಲ್ಲಾ ವಾಣಿಜ್ಯ ತೆರಿಗೆ ಇಲಾಖೆ  ಚೆಕ್‌ಪೋಸ್ಟ್‌ಗಳನ್ನು ಬಂದ್‌ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಮಂಗಳವಾರ ವಿಧಾನಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಒಟ್ಟು 20 ಚೆಕ್‌ಪೋಸ್ಟ್‌ಗಳು ಕಾರ್ಯ ನಿರ್ವಹಿಸುತ್ತಿವೆ, ಚೆಕ್ ಪೋಸ್ಟ್‌ಗಳಲ್ಲಿರುವ ಸುಮಾರು 300 ಸಿಬ್ಬಂದಿಗೆ  ಇಲಾಖೆಯ  ಲೆಕ್ಕ ಪರಿಶೋಧನೆ ಕೆಲಸಕ್ಕೆ ನಿಯೋಜಿಸಲಾಗುವುದು ಎಂದರು.
ಸರಕು ಮತ್ತು  ಸೇವಾ ತೆರಿಗೆ ಕಾಯ್ದೆ (ಜಿಎಸ್‌ಟಿ) ಅಡಿ ಉತ್ಪನ್ನದ ಮೇಲೆ ನೇರವಾಗಿ ಕೇಂದ್ರ ಸರ್ಕಾರಕ್ಕೆ ತೆರಿಗೆ ಪಾವತಿ ಮಾಡಲಾಗುತ್ತದೆ. ಆ ಬಳಿಕ ರಿಟರ್ನ್‌ ಫೈಲ್ ಮಾಡಬೇಕಾಗುತ್ತದೆ.ಆದ್ದರಿಂದ ರಾಜ್ಯದಲ್ಲಿ ಮಾರಾಟ ತೆರಿಗೆ ಪಾವತಿಸುವ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಿದ್ದಾರೆ.
ದೇಶಾದ್ಯಂತ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಪದ್ಧತಿ ಜುಲೈ 1ರಿಂದ ಜಾರಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಅದಕ್ಕೆ ಪೂರಕವಾಗಿ ರಾಜ್ಯದಲ್ಲೂ ‘ಕರ್ನಾಟಕ ಜಿಎಸ್‌ಟಿ ವಿಧೇಯಕ’ವನ್ನು ಮಂಡಿಸಲಾಗಿದೆ.
ವಾಣಿಜ್ಯ ತೆರಿಗೆ ಇಲಾಖೆಯು ಮಾರಾಟ  ತೆರಿಗೆ ಕಾಯ್ದೆ 1957 ರಡಿ ರಾಜ್ಯದಲ್ಲಿ ವಾಣಿಜ್ಯ ತೆರಿಗೆ ಸಂಗ್ರಹಕ್ಕೆ ಚೆಕ್‌ ಪೋಸ್ಟ್‌ಗಳನ್ನು ಸ್ಥಾಪಿಸಲಾಗಿತ್ತು. ವ್ಯಾಟ್‌ ಪದ್ಧತಿ ಜಾರಿ ಆಗುವವರೆಗೆ ರಾಜ್ಯದಲ್ಲಿ 45 ಚೆಕ್‌ ಪೋಸ್ಟ್‌ಗಳಿದ್ದವು. ಬಳಿಕ ಆ ಸಂಖ್ಯೆ  20 ಕ್ಕೆ ಇಳಿದಿತ್ತು ಎಂದು ಅವರು ತಿಳಿಸಿದರು.