18644504 1785311991783267 1470067674 n

ಶುಭಾ ಗಿರಣಿಮನೆ
ಜನ ಅಂದರೆ ಅಥವಾ ದನ ಅಂದರೆ ಎಂದು ಹೇಳುತ್ತ ಕೂರುವುದಿಲ್ಲ. ಇವೆರಡರ ಬಗ್ಗೆ ಸಾಕಷ್ಟು ಜನಗಳಿಗೆ ತಿಳಿದಿದೆ. ಯಾವ ಕೋನದಲ್ಲಿ ಬೇಕಾದರೂ ಈ ಜನ ದನಗಳ ಬಗ್ಗೆ ಮಾತಾಡಬಲ್ಲರು ವಿಚಾರಿಸಬಲ್ಲರು. ಆದರೆ ಈ ಜನ ಮತ್ತು ದನ ಇದರಲ್ಲಿ ಎರಡು ಅಕ್ಷರಗಳು ಬೇರೆ ಬೇರೆ ‘ಜ’ ‘ದ’ ಇವು ಬೇರೆಯಾದರೂ ಕೂಡ ಮನುಷ್ಯ ಮತ್ತು ಈ ಪ್ರಾಣಿಯಲ್ಲಿ ಅತೀ ಹೆಚ್ಚಿನ ಸಾಮ್ಯತೆ ಎನ್ನುವುದು ಇದೆ.
ಹೆತ್ತ ತಾಯಿಯನ್ನು ಕಳೆದುಕೊಂಡು ಬದುಕಬಹುದು ಕೊಟ್ಟಿಗೆಯಲ್ಲಿ ಕರೆವ ಹಸು ಸತ್ತರೆ ಹಸುಳೆ ಬದುಕಿತೇ? ಎನ್ನುವುದು ನನ್ನ ಪ್ರಶ್ನೆ
ಹಸುವಿನ ಹಾಲು ಎಂದರೆ ಜೀವಾಮೃತಕ್ಕೆ ಸಮನಾದುದು. ಕಂದಮ್ಮಗಳ ಹೊಟ್ಟೆ ತುಂಬಿಸಲು ಒಂದು ಚಮಚ ಹಾಲು ಸಿಗದೇ ದುಃಖ ಪಡುವ ಮಂದಿ ಎಷ್ಟೋ, ಆದರೆ ಅದೇ ದನಗಳ ಪಾಡು ಈಗ ನೆನೆಸಿಕೊಳ್ಳುವುದಕ್ಕೆ ಭಯವಾಗುತ್ತಿದೆ. ಒಂದು ಕಡೆ ಬರಗಾಲದ ಹೊಡೆತದಿಂದ ಹಸಿವು ತಾಳಲಾರದೆ ಒದ್ದಾಟ ನಡೆಸಿ ಜೀವನ ಸಾಗಿಸುತ್ತಿವೆ ದನಗಳು, ಮತ್ತೊಂದು ಕಡೆ ಪ್ರಯೋಜನಕ್ಕೆ ಬಾರದು ಎಂದು ಸರಕಾರ ಗೋವುಗಳ ಅಂತ್ಯ ಹಾಡಲು ಕತ್ತಿ ಎತ್ತಿ ನಿಂತುಬಿಟ್ಟಿದೆ. ಹೊಟ್ಟೆ ತುಂಬಿಸಿಕೊಳ್ಳಲೋ ಇಲ್ಲ ಕತ್ತಿಗೆ ಶರಣಾಗಲೋ ಎನ್ನುವ ಉತ್ತರ ಸಿಗದೇ ಒದ್ದಾಟದಲ್ಲಿ ದನಗಳಿದ್ದರೆ ಮನುಷ್ಯ ಅಲ್ಲೆ ಸ್ವಾರ್ಥವನ್ನು ಬೆಳೆಸಿಕೊಂಡಿದ್ದಾನೆ.
ಪ್ರಯೋಜನಕ್ಕೆ ಬಾರದ ಈ ದನಗಳನ್ನು ಕಡಿದು ತಿಂದು ಪ್ರಯೋಜನ ಬೆಳೆಸಿಕೊಂಡರೆ ಹೇಗೆ ಎಂದು ದುರಾಲೋಚನೆಗೆ ಎಂದು ಕಡಿವಾಣ ಬೀಳುವುದು ತಿಳಿಯದು. ಭಾರತದಲ್ಲಿ ಹಿಂದೂ ಹೆಣ್ಣು ಮಕ್ಕಳು ಹಸುಗಳನ್ನು ಕೋಟಿ ಕೋಟಿ ದೇವರುಗಳಿರುವ ದೇವಸ್ಥಾನ ಎಂದು ಭಾವಿಸಿ ಪೂಜಿಸಿ, ಗೌರವಿಸಿ ಅದಕ್ಕೆ ಆದ ಒಂದು ಸ್ಥಾನ ಮಾನವನ್ನು ನೀಡಿದ್ದಾರೆ. ಭಾರತದಲ್ಲಿ ಹಸುವಿನ ಹಬ್ಬವಾಗಿ ದೀಪಾವಳಿ ಎಂದು ವಿಜೃಂಬಣೆಯಿಂದ ಆಚರಿಸುವಾಗ ಆ ಹಬ್ಬದ ಮೂಲ ಬುಡಕ್ಕೆ ಕೊಡಲಿ ಇಡಲು ನಿಂತ ಜನರ ವಿಕೃತ ಮನಸ್ಥಿತಿ ಹೇಗಿರಬೇಕು ಎನ್ನುವುದು ಅರಿಯುವುದು ಕಷ್ಟವಾಗಲಾರದು.
ಹಸುವೊಂದು ಕರು ಹಾಕಲು ಒದ್ದಾಟ ಮಾಡುತ್ತಿದ್ದರೆ ಆ ಮನೆಯ ಹೆಂಗಸು ತನ್ನ ಮಗಳಿಗೆ ಹೆರಿಗೆ ಬೇನೆ ಶುರುವಾಗಿದೆಯೇನೋ ಎನ್ನುವಂತೆ ಸೂಕ್ಷ್ಮವಾಗಿ ನೋಡುತ್ತ ಅದರ ಮೈ ದವಡುತ್ತ ಬಾಳಂತಿ ಹಸುವಿನ ಆರೈಕೆಗೆ ಬೇಕಾಗುವ ತಯಾರಿ ನಡೆಸುತ್ತಾಳೆ. ಕರುವನ್ನು ತನ್ನ ಮಗುವಿನಂತೆ ಜೋಪಾನ ಮಾಡುತ್ತಾಳೆ. ಹಗ್ಗ ಕಳಚಿ ಮೇಯಲು ಬಿಟ್ಟ ದನವು ಒಂದು ತಾಸು ತಡವಾಗಿ ಬಂದರೆ ಮಳೆ ಚಳಿ ಎನ್ನದೇ ತನ್ನ ಮನೆಯವರನ್ನು ಕರೆದುಕೊಂಡು ಹುಡುಕಾಟ ನಡೆಸಿ ಮನೆಗೆ ಕರೆತಂದು ಕಟ್ಟಿ ಪ್ರೀತಿಯಿಂದ ಎಲ್ಲಿಗೆ ಹೋಗಿದ್ದೆ ಮನೆ ನೆನೆಪಾಗಲಿಲ್ಲವೇ ನಾನು ಬೇಡವೆ ಎಂದು ಗದರಿದಾಗ ಆ ದನವು ತಿಳಿಯಿತು ಅಮ್ಮ ಎಂದು ಹೇಳುವಂತೆ ಮೌನವಾಗಿ ನಿಂತಿರುತ್ತದಲ್ಲ ಆ ಭಾವನೆಗೆ ಎಲ್ಲಿಯ ಬೆಲೆ ಕಟ್ಟಲು ಸಾಧ್ಯ.
ಆ ದನಗಳಿಗೂ ಮನುಷ್ಯರು ಎಂದರೆ ಅದೇನು ಪ್ರೀತಿಯೋ ಕೇವಲ ತನ್ನ ಆರೈಕೆ ಮಾಡುವವರನ್ನು ಮಾತ್ರವಲ್ಲ ಅವರ ಮಕ್ಕಳು ಬಂಧುಗಳು ಯಾರೇ ಬರಲಿ ಪ್ರೀತಿಯಿಂದ ಮೂಸಿ ಕೈ ಮೈ ನೆಕ್ಕಿ ತನ್ನ ಹೃದಯದಲ್ಲಿ ಬಂಧಿಸಿ ಬಿಡುತ್ತದಲ್ಲ ಆಗ ಅದಕ್ಕೆ ಬೆಲೆ ಕಟ್ಟಲು ಸಾಧ್ಯವೇ. ಹಾಗಾದರೆ ವಯಸ್ಸಾಯಿತು, ಪ್ರಯೋಜನಕ್ಕೆ ಬಾರದು ಎಂದು ಬೆಲೆ ಕಟ್ಟಲು ತಯಾರಾಗಿ ನಿಂತಿದ್ದಾರಲ್ಲ ಅವರಲ್ಲಿ ನಿಜಕ್ಕೂ ಮನುಷ್ಯತ್ವ ಇದೆಯೇ?
ಜನಕ್ಕೂ ದನಕ್ಕೂ ಒಂದೊಂದು ಬೇಲಿ ಹಾಕುತ್ತಲೇ ಇರುತ್ತಾರೆ. ಆದರೆ ಜನ ದನ ಎರಡು ಆ ಬೇಲಿ ಮುರಿದು ತನ್ನ ದಿಗ್ವಿಜಯ ಎಂದು ಸಾರುತ್ತ ನಡೆಯುತ್ತವೆ. ಹೇಗಂತಿರ ದನಗಳಿಗೆ ಮೇವು ಬೇಕು. ದಿನವೂ ಹಸಿರು ಹುಲ್ಲು ಬೇಕು ಎನ್ನುವ ಹಂಬಲ ಅದಕ್ಕಾಗಿ ಗದ್ದೆ, ತೋಟ ಎಂದು ಒಳಗೆ ಹೊಕ್ಕು ಅಲ್ಲಿಯ ಬೆಳೆಯನ್ನು ತಿನ್ನುತ್ತವೆ. ದನಗಳು ಒಳಗೆ ಬರಬಾರದು ಎಂದು ರೈತ ಬೇಲಿ ಕಟ್ಟುತ್ತಾನೆ. ಆದರೆ ದನ ಅದನ್ನು ಲೆಕ್ಕಿಸದೆ ನುಗ್ಗುತ್ತವೆ. ಆ ಬೇಲಿ ಬಲಿಷ್ಟವಾಗಿರಲಿ ಎಂದು ಐಬೆಕ್ಸ್ ಎನ್ನುವ ತಂತಿ ಬೇಲಿ ಸೃಷ್ಠಿಸಿ ಒಳಗೆ ನುಗ್ಗದಂತೆ ಮಾಡಿದ್ದಾನೆ. ಹಾಗೆ ಜನಗಳಲ್ಲೂ ನಾನು ಎನ್ನುವ ಅಹಂಕಾರದ ಪೊರೆಯ ಅಳಿಸಲು ಜ್ಞಾನವೆಂಬ ಬೇಲಿ ಕಟ್ಟುತ್ತಲೇ ಇರುತ್ತಾರೆ. ನಮಗೆ ಜ್ಞಾನ ಬೇಡ ನಾವು ಮೂಢರಾಗಿಯೇ ಇರುತ್ತೇವೆ ನಿಮ್ಮದೇನು ಎನ್ನುವ ಸವಾಲೊಡ್ಡಿ ಅಸಹ್ಯವಾದ ಕೃತ್ಯಕ್ಕೆ ಮುಂದಾಗುತ್ತಿದ್ದಾರೆ. ದನಗಳಿಗೆನೋ ತಂತಿ ಬೇಲಿ ಹಾಕಿ ಹೊಲಗದ್ದೆಗೆ ನುಸುಳದಂತೆ ಮಾಡಿದರು ಆದರೆ ಒಂದು ಧರ್ಮದ ಭಾವನೆಗಳ ಜೊತೆ ಆಟವಾಡುವು ವ್ಯವಸ್ಥೆಗೆ ಹೇಗೆ ಬೇಲಿ ಹಾಕುತ್ತಾರೋ ತಿಳಿಯುತ್ತಿಲ್ಲ. ಆ ಜನ ಜನರ ಕಿತ್ತಾಟದಲ್ಲಿ ಮುಗ್ದ ಪ್ರಾಣಿಗಳಾದ ದನಗಳ ಮಾರಣ ಆಗದಿರಲಿ ಎನ್ನುವುದು ದನಗಳಲ್ಲಿ ಜೀವವಿರಿಸಿದ ಎಲ್ಲ ಮುಗ್ದ ಜನಗಳ ವಿನಂಬ್ರ ವಿನಂತಿ.

RELATED ARTICLES  ದೂರಕ್ಕೆ ಸರಿ-ಪಕ್ಕಕ್ಕೆ ಸರಿ : ಭಾಗ-2