Home Article ಅಂತರಂಗ ಶುದ್ಧಿಯ ಸಮಚಿತ್ತದ ವೀಣಾ ಗಾಂವಕರ ವೀಣಕ್ಕಳಿಗೀಗ ಷಷ್ಠ್ಯಬ್ದಿಯ ಸುಸಮಯ.

ಅಂತರಂಗ ಶುದ್ಧಿಯ ಸಮಚಿತ್ತದ ವೀಣಾ ಗಾಂವಕರ ವೀಣಕ್ಕಳಿಗೀಗ ಷಷ್ಠ್ಯಬ್ದಿಯ ಸುಸಮಯ.

ಅಂತರಂಗ ಶುದ್ಧಿಯ ಸಮಚಿತ್ತದ ವೀಣಾ ಗಾಂವಕರ ವೀಣಕ್ಕಳಿಗೀಗ ಷಷ್ಠ್ಯಬ್ದಿಯ ಸುಸಮಯ. ಅರವತ್ತು ವಸಂತಗಳು ತುಂಬಿದ ಹೊಸ್ತಿಲಿನಲ್ಲಿ ವಯೋಸಹಜವಾಗಿ ಇಲಾಖೆಯ ಪ್ರಚಲಿತ ನಿಯಮಾವಳಿಯಂತೆ ತಾನು ವೃತ್ತಿರಂಗದಿಂದ ನಿರ್ಗಮಿಸುವಲ್ಲಿ ಆಕೆಗೇನು ಕೊರಗಿಲ್ಲ. ಆಕೆಯಂತೂ ಇಷ್ಟು ವರ್ಷಗಳಾದರೂ ಸೇವೆ ಸಲ್ಲಿಸಲಾದುದೇ ಭಾಗ್ಯವೆಂದು ಸಹಜವಾಗಿಯೇ ಭಾವಿಸಿದ್ದಾಳೆ. ಯಾವ ಹಂತದಲ್ಲೂ ಭಾವೋದ್ವೇಗಕ್ಕೆ ಒಳಗಾಗದ ತನ್ನ ಸಮಚಿತ್ತದ ಹಿರಿತನದ ಮುತ್ಸದ್ದಿಕೆಯ ನಡೆಯನಿಂದೂ ಆಕೆ ಉಳಿಸಿಕೊಂಡು ಬೆರಗು ಮೂಡಿಸಿದ್ದಾಳೆ. **ನನ್ನರವಿನಂತೆ 2008ರಿಂದೀಚೆ ಸರಿಸುಮಾರು ಒಂದುವರೆ ದಶಕಗಳಿಂದ ನನಗೆ ಪರಿಚಿತಳಾಗಿರುವ ವೀಣಕ್ಕಳು 2017ರಲ್ಲಿ ನಾನು ನನ್ನೂರಿನ ಬರ್ಗಿಯ ಪ್ರೌಢಶಾಲೆಗೆ ಬಂದಲ್ಲಿಂದ ಕಳೆದ ಆರೇಳು ವರ್ಷಗಳಲ್ಲಿ ನನ್ನ ಸಹೋದ್ಯೋಗಿಯಾಗಿದ್ದವಳು. ಶಾಲೆಯಲ್ಲಿದ್ದ ತಾರಕ್ಕೋರ ಹೊರತಾಗಿ ಇತರರೆಲ್ಲರಿಗೂ ಹಿರಿಯಳಾದ ಆಕೆಯ ಹಿರಿತನದ ಕುರಿತಂತೆ ಶಾಲೆಯಲ್ಲಿ ಹಿಂದಿದ್ದ ಹಾಗೂ ಈಗಿರುವ ಎಲ್ಲಾ ಮುಖ್ಯಾಧ್ಯಾಪಕರಾದಿಯಾಗಿ ಎಲ್ಲಾ ಶಿಕ್ಷಕ-ಸಿಬ್ಬಂದಿಗಳಿಗೆ ವಿಶೇಷವಾದ ಗೌರವ. ಇದಕ್ಕೆ ಆಕೆಯೂ ಕಿರಿಯರನ್ನು ಕಿರಿಯರೆಂದೆಣಿಸದೇ, ಅತ್ಯಂತ ಪ್ರೀತ್ಯಭಿಮಾನದ ವಾತ್ಸಲ್ಯದಿಂದ ನಡೆಸಿಕೊಳ್ಳುತ್ತಿದ್ದುದೆಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ವಯೋಮಾನದಲ್ಲಿ ಆಕೆಗಿಂತ ಹದಿನಾರು ವರ್ಷಗಳೇ ಮೇಲ್ಪಟ್ಟು ಕಿರಿಯನಾದ ನನ್ನನ್ನೊಳಗೊಡಂತೆ ಸರ್ಸಕ್ಕ- ಸೀಮಕ್ಕನೊಂದಿಗೆಲ್ಲ ನಾಡವರ ಜನಾಂಗದ ಸಲುಗೆಯ ಪರಸ್ಪರ ಏಕವಚನದ ದಾಟಿಯಲ್ಲಿ ಸಹಜವಾಗಿರುವುದರಿಂದಲೇ ಬರ್ಗಿ ಪ್ರೌಢಶಾಲೆಯಲ್ಲಿ ಬೆಡಗಿಲ್ಲದ ಬಾಂಧವ್ಯದ ವಾತಾವರಣವು ನಿರ್ಮಾಣವಾಗಿದ್ದೆಂದುಕೊಂಡಿದ್ದೇನೆ. **ವೀಣಕ್ಕನ ಮಾತು- ಮೌನಗಳೆರಡೂ ಆಕೆಗೆ ಜನ್ಮತ: ಸಂಸ್ಕಾರದಿಂದಲೇ ಸಿದ್ಧಿಸಿದಂತಿವೆ. ನಾಡುಮಾಸ್ಕೇರಿಯ ಸುಸಂಸ್ಕೃತ ಗಾಂವಕರ ಮನೆಯ ಕುಡಿಯಾಗಿ, ಮಾಸ್ತರರ ಮಗಳಾಗಿ,ಗಾಂವಕಾರಿಕೆಯ ಘನತೆಗೆ ಒಪ್ಪವಾಗಿ, ರಾಜಗಾಂಭೀರ್ಯಕ್ಕೆ ಅಗತ್ಯವಾದ ಬೇಕಷ್ಟು ತಾಳ್ಮೆಯನ್ನು ಆಕೆಯು ಮೈಗೂಡಿಸಿಕೊಂಡಿದ್ದರಿಂದಲೇ ಬಂದು-ಬಾಂಧವರ ನಡುವೆ, ಕಾರ್ಯಕ್ಷೇತ್ರದಲ್ಲಿ ಹಾಗೂ ಸಾಮಾಜಿಕವಾಗಿ ಹದವಾಗಿ ಆಕಾರಗೊಂಡಿದ್ದಾಳೆ. ಯಾರಲ್ಲಿ- ಏನನ್ನು-ಎಷ್ಟು-ಮಾತನಾಡಬೇಕು? ಯಾರಲ್ಲಿ-ಏನನ್ನು ಮಾತನಾಡಬಾರದು? ಎಲ್ಲೆಲ್ಲಿ ಮಾತನಾಡಬಾರದು?ಎಲ್ಲಿ ಮಾತನಾಡಬೇಕು?- ಎಂಬ ಲೆಕ್ಕಾಚಾರವಂತೂ ಆಕೆಗಿದ್ದೇ ಇದೆ. ಶಾಲೆಯಲ್ಲಾಗಲಿ, ಪ್ರಯಾಣದಲ್ಲಾಗಲಿ, ಕಾರ್ಯಕ್ರಮಗಳಲ್ಲಾಗಲಿ- ಎಲ್ಲಿಯೂ ಎಲ್ಲೆ ಮೀರಿ ಹರಟುತ್ತಾ ತಾನು ಮಾತಿಗೆ ವಿಷಯವಾಗುವವಳಲ್ಲ, ಅನಾವಶ್ಯಕವಾದ ವಿಷಯದಲ್ಲಿ ಮೂಗು ತೂರಿಸುವವಳೂ ಅಲ್ಲಾ,ತಪ್ಪಿಯೂ ತಪ್ಪನ್ನು ಮಾಡುವವಳಲ್ಲ,.ಸರಿಯನ್ನು ಸರಿಯೆನ್ನುವಲ್ಲಿ ಯಾರಿಗೋ ಬೇಸರವಾಗುತ್ತದೆಯೆಂದೆಣಿಸುವವಳೂ ಅಲ್ಲ,ಯಾರದೋ ಕಾರಣಕ್ಕೆ ಪೂರ್ವಾಗ್ರಹದ ಭಾವನೆಯಿಂದಲೂ ವರ್ತಿಸುತ್ತಿದ್ದವಳಲ್ಲ,ಹಗೆತನವನ್ನೂ ತಳೆದವಳಲ್ಲ, ಎಲ್ಲರನ್ನೂ ಪ್ರೀತಿಯಕಣ್ಣುಗಳಲ್ಲಿಯೇ ಕಾಣುತ್ತಿದ್ದರಿಂದಲೇ ಆಕೆಯು ಅಕ್ಷರಶಃ ಅಜಾತಶತ್ರುವಾಗಿದ್ದಾಳೆ! **ಆಕೆಗೆ ನಾವೆಂದುಕೊಂಡ ದೇವರು- ಧರ್ಮದಲ್ಲಿ ಎಳ್ಳೆನಿತು ಶ್ರದ್ಧೆ ಇಲ್ಲ. ಹಾಗೆಂದು ಅವಳು ನಾಸ್ತಿಕಳಲ್ಲ. ನೂರಕ್ಕೆ ನೂರರಷ್ಟು ಅನಾಸ್ತಿಕಳು. ದೇವರು ಇರಲಿ- ಬಿಡಲಿ ತನ್ನ ಕಾಯಕವನ್ನು ತಾನು ಮಾಡಬೇಕೆಂದು ಮಾಡುತ್ತಿದ್ದವಳು. ಮಾಡಬಾರದ್ದನ್ನು ಮಾಡುತ್ತಾ ದೇವರ ಹುಂಡಿಗೆ ಕಾಣಿಕೆಯನ್ನು ಹಾಕುವ, ಆಡಬಾರದ್ದನ್ನು ಆಡುತ್ತ ದೇವಾಲಯಗಳಿಗೆ ಸುತ್ತುವ,ಜೀವಂತವಿದ್ದಾಗ ನೋಡದೇ,ಸತ್ತ ತಾಯ್ತಂದೆಯರ ಹೆಸರಿನಲ್ಲಿ ಸಮಾರಾಧನೆಯನ್ನು ಮಾಡುವ ಡಾಂಬಿಕತೆಯನ್ನು ಸುತರಾ0 ಒಪ್ಪುವವಳಲ್ಲ. ಮದುವೆಯಾದ ಬಳಿಕವೂ ತಾಯಿ- ತಂದೆಯರ ಆರೈಕೆಯಲ್ಲಿ ಹಿರಿಯ ಮಗಳಾಗಿ ತನ್ನ ಜವಾಬ್ದಾರಿಯನ್ನು ಗರಿಷ್ಠ ಮಟ್ಟದಲ್ಲಿ ನಿರ್ವಹಿಸಿದವಳು.ತಮ್ಮಂದಿರಿಗೆ ಹಿರಿಯಕ್ಕನಾಗದೇ -ಹಿರಿಯಣ್ಣನಾಗಿ ಕಳಕಳಿಯನ್ನು ತೋರುತ್ತ ಬಂದವಳು.ಹಾಲುಂಡ ತವರಿನ ಕುರಿತಾದ ಆಕೆಯ ಹಂಬಲವು ಬೂಟಾಟಿಕೆಯದಾಗಿರದ ನಿಜವಾದ ಒಲವೆಂಬುದು ಗೊತ್ತಿದ್ದವರಿಗೆ ಗೊತ್ತು.ಹಾಗೆಯೇ ಆಕೆಯ ಕಾರ್ಯಕ್ಷೇತ್ರದಲ್ಲಿನ ಸೇವೆಯು ಶ್ರದ್ಧೆಯ ಪೂಜೆಯೇ ಹೊರತು ಒಟ್ಟಂದದ್ದಲ್ಲ.ತನ್ನ ದೈಹಿಕ ಅಸೌಖ್ಯ ಹಾಗೂ ವಯೋಸಹಜವಾದ ಹಿಂಸೆಯ ನಡುವೆಯೂ ದೂರದಿಂದ ಶಾಲೆಗೆ ಬಂದು- ಹೋಗುವಲ್ಲಿ ಯಾವುದೇ ವಿನಾಯಿತಿಯನ್ನು ಹಂಬಲಿಸಿದವಳಲ್ಲ. **ಅದಾಗಲೆ ಅಂದಂತೆ ವೀಣಕ್ಕಳಲ್ಲಿ ಕೇವಲ ತಾಳ್ಮೆಯಷ್ಟೇ ನೆಲೆಗೊಂಡು ಆಕೆಯು ಬದುಕಿನಲ್ಲಿ ಗೆಲುವನ್ನು ಕಂಡುಕೊಂಡಿದ್ದಲ್ಲ.ಅದಕ್ಕೂ ಮಿಗಿಲಾಗಿ ಆಕೆಯಲ್ಲಿನ ಕ್ಷಮಾಗುಣವೇನು ಸಾಮಾನ್ಯವಲ್ಲ. ಎಲ್ಲವನ್ನೂ ಬೆಳೆಸಬಾರದು ಎಂದುಕೊಂಡವಳು ಅವಳು. ಆದಷ್ಟು ವಿಷಯವನ್ನು ಹೊಟ್ಟೆಗೆ ಹಾಕಿಕೊಳ್ಳಬೇಕು, ತಣ್ಣೀರನ್ನಾದರೂ ತಣಿಸಿ ಕುಡಿಯಬೇಕು,ಪ್ರೀತಿಯಿಂದ ಗೆಲ್ಲಲಾಗದ್ದು ಯಾವುದೂ ಇಲ್ಲ- ಇದು ಆಕೆಯ ಸ್ಪಷ್ಟವಾದ ಅಂಬೋಣ.ಆಕೆಯು ವಾಸ್ತವವನ್ನು ಅಲ್ಲಗಳಿಯುವವಳೂ ಅಲ್ಲ,ದೂಷಿಸುವವಳೂ ಅಲ್ಲ. “ಇರಬೇಕು ಇರುವಂತೆ-ತೊರೆದು ಸಾವಿರ ಚಿಂತೆ” ಎಂಬ ಕವಿವಾಣಿಗೆ ಕಿವಿಗೊಟ್ಟವಳು.ಶಾಲಾ ಮಕ್ಕಳಿಗೆ ಪಾಠ-ಪರೀಕ್ಷೆ-ಪ್ರವಾಸಗಳಲ್ಲಿ ನಿಷ್ಠುರವೆನಿಸಿದರೂ,ಅವರ ಹಿತದಲ್ಲಿ ತಾಯಿಯಾಗಿಯೇ ಇದ್ದವಳು. ಬುದ್ಧಿವಂತಿಕೆಯ “ಮಾಸ್ತರಣಿ”ಎನಿಸದೆ, ಹೃದಯವಂತಿಕೆಯ ದಾರಿದೀಪಕಗಳಾಗಿ ಧನ್ಯಳಾದವಳು ವೀಣಕ್ಕ! ಸಾತ್ವಿಕ ನಡೆಯ ಪುಣ್ಯದ ಫಲವು ವೀಣಕ್ಕಳಿಗೆ ವಿಶ್ರಾಂತ ಬದುಕಿನ ಉದ್ದಗಲದಲ್ಲೆಲ್ಲಾ ಜತನದಿಂದ ಕಾಪಾಡಲೆಂಬುದು ಆಕೆಯ ಒಡನಾಡಿಗಳ ಎದೆದುಂಬಿದ ಆಶಯವೇ ಹೌದು. ಬರ್ಗಿಯ ಪ್ರೌಢ ಶಾಲೆಯೆಂದೂ “ನಮ್ಮ ವೀಣಾ ಗಾಂವ್ಕರ್ ಟೀಚರ್ “ಎಂಬ ಅಕ್ಕರೆಯನೆಂದೂ ಕಳೆದುಕೊಳ್ಳದು. ಇದಕ್ಕೂ ಹೊರತಾದ ಧನ್ಯತೆಯು ವೀಣಕ್ಕಳಿಗೆ ಇನ್ನೇನು ಬೇಕು? -ಮಂಜುನಾಥ ಗಾಂವಕರ, ಬರ್ಗಿ.