ಸಾಮಾನ್ಯಜ್ಞಾನವನ್ನು ಕಳೆದುಕೊಂಡು ಅಸಾಧಾರಣ ವೈಜ್ಞಾನಿಕ ಪರಿಹಾರ ಹುಡುಕಿಕೊಳ್ಳುವುದು ನಮ್ಮ ಕಾಲದ ದುರಂತ ಎನ್ನಬಹುದು. ಇಂದು ಮನುಕುಲವನ್ನು ಕಾಡುತ್ತಿರುವ ಬೊಜ್ಜು, ಮಧುಮೇಹ, ಹೃದ್ರೋಗ ಮತ್ತು ರಕ್ತದ ಒತ್ತಡ – ಇವಕ್ಕೆ ಆಹಾರಕ್ರಮವೇ ಮೂಲ ಕಾರಣ ಎನ್ನುವುದು ತಿಳಿದಿರುವ ವಿಷಯ. ಆದರೂ, ಆಹಾರದ ವಿಚಾರದಲ್ಲಿ ಗೊಂದಲ ಮತ್ತು ಗೋಜಲು ಹೆಚ್ಚುತ್ತಿರುವುದನ್ನು ಕಾಣಬಹುದು.
ಹಣ್ಣು ತಿನ್ನಬೇಕೋ – ಜ್ಯೂಸ್ ಕುಡಿಯಬೇಕೋ, ಗೋಧಿ ತಿನ್ನಬೇಕೋ – ಅನ್ನ ತಿನ್ನಬೇಕೋ, ಹಾಲು ಕುಡಿಯಬೇಕೋ – ಬಿಡಬೇಕೋ, ಮಾಂಸ ತಿನ್ನಬೇಕೋ – ತಿನ್ನಬಾರದೋ, ಹಸಿ ತಿನ್ನಬೇಕೋ – ಬೇಯಿಸಿದ್ದು ತಿನ್ನಬೇಕೋ, ಯಾವುದರ ಜೊತೆ ಯಾವುದನ್ನು ಸೇರಿಸಬೇಕೋ – ಸೇರಿಸಬಾರದೋ – ಅದೆಲ್ಲಾ ಹೋಗಲಿ… ನೀರು ಎಷ್ಟು ಲೀಟರ್ ಕುಡಿಯಬೇಕು ಎನ್ನುವುದೇ ದೊಡ್ಡ ಜಿಜ್ಞಾಸೆಯ ವಿಷಯವಾಗುತ್ತಿದೆ.
ಈ ವಿಶ್ಲೇಷಣೆ ಮತ್ತು ಗೊಂದಲ ಹೆಚ್ಚು ಕಾಣುತ್ತಿರುವುದು ವಿದ್ಯಾವಂತರಲ್ಲಿ. ಒಂದು ಉದಾಹರಣೆ ಹೇಳುವುದಾದರೆ, ವಿದ್ಯಾಭ್ಯಾಸ ಹೆಚ್ಚಾದಂತೆಲ್ಲ ತಾಯಿಯು ಮಗುವಿಗೆ ಎದೆಹಾಲನ್ನು ಕುಡಿಸುವುದು ಕಡಿಮೆಯಾಗಿರುವುದು ಜಗತ್ತಿನಾದ್ಯಂತ ಕಂಡುಬರುವ ವಿಷಯ. ಜೆನ್ ಗುರುವೊಬ್ಬರು ಜ್ಞಾನೋದಯವೆಂದರೆ ಹಸಿವಾದಾಗ ಊಟ ಮಾಡುವುದು, ಬಾಯಾರಿಕೆಯಾದಾಗ ನೀರು ಕುಡಿಯುವುದು, ಸುಸ್ತಾದಾಗ ಮಲಗುವುದು ಎಂದಿದ್ದರಂತೆ. ಆದರೆ, ಇಂತಹ ಸಾಮಾನ್ಯಜ್ಞಾನ ಕಳೆದುಕೊಂಡಿರುವುದನ್ನು ಈಗ ಕಾಣಬಹುದು. ಸೂಫಿ ಕಥೆಯಲ್ಲಿ ಬರುವಂತೆ ಎಲ್ಲೋ ಕಳೆದ ವಸ್ತುವನ್ನು ಬೀದಿ ದೀಪದ ಅಡಿ ಬೆಳಕಿದೆ ಎಂದು ಹುಡುಕುವ ಜಾಯಮಾನವಾಗಿದೆ.
ಇಂದಿನ ಆಹಾರವಿಚಾರದಲ್ಲಿ ಕೆಲವು ಮೂಲಭೂತ ದೋಷಗಳನ್ನು ನಾವು ಕಾಣಬಹುದು. ಎಣ್ಣೆ ಮತ್ತು ಕೊಬ್ಬು – ಇವನ್ನು ನಮ್ಮ /ಪರಮಶತ್ರುಗಳು ಎಂದುಕೊಂಡಿದ್ದೇವೆ. ಇದರಿಂದಲೇ ಬೊಜ್ಜು, ಹೃದ್ರೋಗ ಬರುವುದು ಎನ್ನುವ ಪ್ರತೀತಿ ನಮ್ಮಲ್ಲಿ ಗಾಢವಾಗಿ ಬೇರೂರಿದೆ. ಸಾಂಕೇತಿಕವಾಗಿ ಅದು ಮೇಲ್ನೋಟಕ್ಕೆ ಸರಿ ಎಂದು ತೋರಿದರೂ, ದೇಹ ಪೌಷ್ಟಿಕಾಂಶಗಳನ್ನು ಪಚನಿಸುವ ಪ್ರಕ್ರಿಯೆಯೇ ಬೇರೆ. ಇಂದು ಬೊಜ್ಜು ಮತ್ತು ಅದಕ್ಕೆ ಸಂಬಂಧಪಟ್ಟ ರೋಗಗಳಿಗೆ ಮೂಲಕಾರಣ ಸಂಸ್ಕರಿಸಿದ ಏಕದಳ ಧಾನ್ಯ. ಅಂದರೆ, ಬಿಳಿ ಅಕ್ಕಿ, ತೌಡು ತೆಗೆದ ಹಿಟ್ಟು, ಮೈದಾ ಮತ್ತು ಸಕ್ಕರೆ. ಈ ಕಾರ್ಬೋಹೈಡ್ರೇಟ್ ಶೀಘ್ರವಾಗಿ ರಕ್ತಗತವಾಗಿ, ರಕ್ತದಲ್ಲಿ ಸಕ್ಕರೆಯನ್ನು ಗಗನಕ್ಕೇರಿಸುತ್ತದೆ. ದೇಹ ತಕ್ಷಣ ಇದನ್ನು ಕೊಬ್ಬಿನ ಜೀವಕೋಶಗಳಲ್ಲಿ ಕೊಬ್ಬಾಗಿ ಶೇಖರಿಸಿ ಪ್ರವಾಹ ತಡೆಗಟ್ಟುತ್ತದೆ. ಹೀಗಾಗಿ ಕೊಬ್ಬಿನಿಂದಲೇ ಬಂದದ್ದಲ್ಲ. ಹಾಗೆಯೇ, ಈ ರೀತಿ ಆಹಾರ ತಿಂದ ಕೆಲವೇ ಕ್ಷಣಗಳಲ್ಲಿ ಮತ್ತೆ ಹಸಿವಾಗಬಹುದು. ಆಗ ಮತ್ತೆ ತಿನ್ನಬಹುದು. ಹೀಗೆ ಮಾಡಿದಾಗ ಬೊಜ್ಜಿನ ಗೋದಾಮು ತುಂಬುತ್ತಾ ಹೋಗುತ್ತದೆ.
ಇತ್ತೀಚೆಗೆ ಹೇಳುವುದುಂಟು. ದಿನಕ್ಕೆ ಏಳು, ಎಂಟು ಬಾರಿ ಊಟ ಮಾಡಿ ಎಂದು. ಇದಕ್ಕೆ ಕಾರಣ ನಮ್ಮ ದೇಹಪ್ರಕೃತಿಯೋ ಅಥವಾ ಹೆಚ್ಚು ಕೆಲಸವೋ ಅಲ್ಲ. ನಾವು ಸೇವಿಸುವ ಆಹಾರದ ರೂಪ ಮತ್ತು ಗುಣ. ಹಿಂದೆ, ರೈತಾಪಿ ಜನರು ಕೇವಲ ಎರಡೇ ಬಾರಿ ಊಟ ಮಾಡುತ್ತಿದ್ದರು. ಆದರೆ, ಬೆಳಗಿನಿಂದ ಸಾಯಂಕಾಲದವರೆಗೂ ದುಡಿಯುತ್ತಿದ್ದರು. ತಿನ್ನುವ ಆಹಾರ ಹೆಚ್ಚಾಗಿ ಮುದ್ದೆ, ಹುರುಳಿಯಂತದ್ದಾಗಿರುತ್ತಿತ್ತು. ಇದು ನಮ್ಮ ಹಳೆಯ ಮೈಸೂರು ಕಡೆ ಹೆಚ್ಚಿಗೆ ಕಂಡುಬರುವುದು. ತಿಂದ ಆಹಾರ ನಿಧಾನವಾಗಿ ರಕ್ತಗತವಾಗುವುದರಿಂದ ಹಸಿವು ಮತ್ತು ಬೊಜ್ಜನ್ನು ಒಟ್ಟಿಗೆ ತಡೆಯಬಹುದಿತ್ತು. ಜೊತೆಗೆ ದುಡಿಮೆ ಬೇರೆ ಸಹಕಾರಿಯಾಗುತ್ತಿತ್ತು.
ಡಾ. ಡೇವಿಡ್ ಲುಡ್‌ವಿಗ್ ’ಸದಾ ಹಸಿವು’ (always hungry) ಎನ್ನುವ ಪುಸ್ತಕ ಬರೆದಿದ್ದಾರೆ. ಅವರು ಹಾರ್ವಡ್ ವಿಶ್ವವಿದ್ಯಾಲಯದಲ್ಲಿ ಮಕ್ಕಳ ಮತ್ತು ಪೌಷ್ಟಿಕಾಂಶ ತಜ್ಞ; ಅನೇಕ ಅನ್ವೇಷಣೆಗಳನ್ನು ಮಾಡಿದ್ದಾರೆ. ಇವರ ಪ್ರಕಾರ ಎಷ್ಟು ಕ್ಯಾಲೊರಿ ತಿಂದೆವು ಮತ್ತು ಖರ್ಚು ಮಾಡಿದೆವು ಎನ್ನುವುದಕ್ಕಿಂತ ಯಾವ ರೀತಿ ಆಹಾರದಿಂದ ಎಷ್ಟು ಪೋಷಕಾಂಶ ಬಂತು ಮತ್ತು ಎಲ್ಲಿ ಹೋಗಿ ಸೇರಿ, ಬೀಗ ಅಗುಳಿ ತಡೆ ಒಡ್ಡಿತು ಎನ್ನುವುದು ಮುಖ್ಯವಾಗುತ್ತದೆ. ಹೀಗಾಗಿ ಎಷ್ಟು ತಿಂದರೂ ಹಸಿವು ನಿಲ್ಲದು. ಕಡಿಮೆ ತಿಂದರೂ ಬೊಜ್ಜು ಉಂಟಾಗುವುದನ್ನು ಅಥವಾ ದೇಹದಲ್ಲಿ ಕೊಬ್ಬಿನ ಪ್ರಮಾಣ ಹೆಚ್ಚಾಗುವುದನ್ನು ಮತ್ತು ಸಂಬಂಧಪಟ್ಟ ಕಾಯಿಲೆ ಉಲ್ಬಣಗೊಳ್ಳುವುದನ್ನು ಕಾಣಬಹುದಾಗಿದೆ. ಇದರಿಂದಾಗಿ, ಕಾರ್ಬೋಹೈಡ್ರೇಟ್ ಪ್ರಮಾಣ ಕಡಿಮೆ ಮಾಡುವುದು ಮತ್ತು ಯಾವುದೇ ಕಾರಣಕ್ಕೂ ಅತಿ ಸಂಸ್ಕರಿಸಿ ಅವುಗಳಲ್ಲಿನ ನಾರು ಮತ್ತು ಪೌಷ್ಟಿಕಾಂಶಗಳನ್ನು ಎಮ್ಮೆ, ಹಂದಿಗೆ ಹಾಕಿ, ನಾವು ನಿಜವಾದ ಬೂಸ ತಿನ್ನುವುದು ನಿಲ್ಲಿಸಿದರೆ, ಬೊಜ್ಜು ತಡೆಗಟ್ಟಬಹುದೇನೋ.