ಶಿರಸಿ : ಉತ್ತರಕನ್ನಡ ಜಿಲ್ಲೆಯು ಹೈನುಗಾರಿಕೆಗೆ ಹೇಳಿ ಮಾಡಿಸಿದ ಪ್ರದೇಶವಾಗಿದ್ದು, ಹೈನುಗಾರರು ಉದ್ಯಮದ ರೀತಿಯಲ್ಲಿ ಹೈನುಗಾರಿಕೆ ಆರಂಭಿಸಿದಾಗ ಮಾತ್ರ ಹೆಚ್ಚಿನ ಲಾಭ ಪಡೆದು ಆರ್ಥಿಕವಾಗಿ ಸದೃಢವಾಗಲು ಸಾಧ್ಯವಿದೆ ಎಂದು ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ತಾಲೂಕಿನ ಕಡಬಾಳ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ನೂತನ ಕಟ್ಟಡ, ಮಿಲ್ಕ್ ಅನಲೈಸರ್, ಸೋಲಾರ್ ಘಟಕ ಉದ್ಘಾಟನೆ ಮತ್ತು ಬೋನಸ್ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಉತ್ತರಕನ್ನಡ ಜಿಲ್ಲೆಯಾದ್ಯಂತ 215ಕ್ಕೂ ಹೆಚ್ಚು ಹಾಲು ಉತ್ಪಾದಕ ಸಂಘಗಳು ಸಕ್ರೀಯವಾಗಿ ಕಾರ್ಯ ನಿರ್ವಹಿಸುತ್ತಿದೆ. ಹೈನುಗಾರಿಕೆ ಬಿಟ್ಟು ಬಾಳ್ವೆ ಮಾಡಲು ಸಾಧ್ಯವಿಲ್ಲ. ಆ ನಿಟ್ಟಿನಲ್ಲಿ ಮನೆ ಬಳಕೆಗೆಂದು ಸಾಕಿದ ಹಸುಗಳ ಹೆಚ್ಚಿದ ಅಲ್ಪ ಸ್ವಲ್ಪ ಹಾಲನ್ನು ಹತ್ತಿರದ ಡೇರಿಗಳಿಗೆ ನೀಡುತ್ತಾ ಕಿರು ಪ್ರಮಾಣದ ಆದಾಯ ಹೊಂದುತ್ತಿದ್ದಾರೆ ಎಂದರು.
ಹೈನುಗಾರಿಕೆಯನ್ನು ಉದ್ಯಮವಾಗಿ ಸ್ವೀಕಾರ ಮಾಡದ ರೈತರು ನೀಡುತ್ತಿರುವ ಹಾಲು ಜಿಲ್ಲೆಯಲ್ಲಿ ಪ್ರತಿನಿತ್ಯ 40ಸಾವಿರ ಲೀ, ದಾಟುತ್ತಿರುವುದು ಶ್ಲಾಘನೀಯ ಸಂಗತಿಯಾಗಿದೆ. ಬಿ.ಜೆ.ಪಿ ಸರ್ಕಾರ ಆರಂಭಿಸಿದ ಪ್ರೋತ್ಸಾಹ ಧನದಿಂದ ಹೆಚ್ಚಿನ ಹೈನುಗಾರರು ಆರ್ಥಿಕವಾಗಿ ಸದೃಢರಾಗಲು ಪ್ರಯತ್ನ ನಡೆಸಿದ್ದಾರೆ ಎಂದರು.
ಪಶು ಇಲಾಖೆ ಹಾಗೂ ರಾಜ್ಯ ಸರ್ಕಾರ ನಾನಾ ಇಲಾಖೆಗಳಲ್ಲಿ ಹೈನುಗಾರಿಕೆಗೆಂದು ಸಾಕಷ್ಟು ಯೋಜನೆಗಳನ್ನು ಸಿದ್ಧಪಡಿಸಿ ಅನುಷ್ಠಾನಗೊಳಿಸಿದೆ. ಆದರೆ ಕೃಷಿಕರು ಮಾತ್ರ ಉಪ ಆದಾಯವನ್ನಾಗಿ ಹೈನುಗಾರಿಕೆಯನ್ನು ಸ್ವೀಕರಿಸಲು ಮುಂದೆ ಬಾರದಿರುವುದು ಬೇಸರದ ಸಂಗತಿಯಾಗಿದೆ. ಸರ್ಕಾರಿ ಯೋಜನೆಗಳ ಬಳಕೆಯೊಂದಿಗೆ ವಯಕ್ತಿಕ ಆಸಕ್ತಿಯನ್ನು ಹೆಚ್ಚಿಸಿಕೊಂಡು ಹೈನುಗಾರಿಕೆಯತ್ತ ಯುವಜನತೆ ಹೆಚ್ಚು ಗಮನ ಹರಿಸಬೇಕಿದೆ ಎಂದರು.
ಕಡಬಾಳದ ಮಹಿಳಾ ಹಾಲು ಉತ್ಪಾದಕ ಸಂಘವು ಸ್ಥಳಿಯ ಕೆಲಸಗಾರರನ್ನೆ ತೊಡಗಿಸಿಕೊಂಡು ಸುಸಜ್ಜಿತ ಸುಂದರ ಕಟ್ಟಡ ನಿರ್ಮಿಸಿಕೊಂಡಿದೆ. ಸರ್ಕಾರಿ ವೆಚ್ಚಕ್ಕೆ ಹೋಲಿಕೆ ಮಾಡಿದಾಗ ಅತೀ ಕಡಿಮೆ ವೆಚ್ಚದಲ್ಲಿ ಕಟ್ಟಡ ನಿರ್ಮಾಣವಾಗಿರುವುದು ಇತರೆ ಹಾಉ ಉತ್ಪಾದಕ ಸಂಘಗಳಿಗೆ ಮಾದರಿಯಾಗಿದೆ ಎಂದರು.
ಎ.ಪಿ.ಎಂ.ಸಿ ಚುನಾವಣೆ ದಿನಾಂಕ ಹತ್ತಿರ ಬಂದಿದೆ. ಪಕ್ಷದ ಕಾರ್ಯಕರ್ತರು ಭಿರುಸಿನ ಓಡಾಟದ ಮೂಲಕ ಮತ ಪ್ರಚಾರ ಮಾಡುತ್ತಿದ್ದಾರೆ. ಗ್ರಾಮಸ್ಥರೆಲ್ಲರೂ ಉತ್ತಮ ಅಭ್ಯರ್ಥಿಯ ಕೈ ಬಿಡಬಾರದು. ರಾಜಕೀಯ ಜೀವನದಲ್ಲಿ ಒಳ್ಳೆಯ ಕೆಲಸ ಮಾಡಬೇಕೆಂಬ ಆಸೆ ನನ್ನದಾಗಿದೆ ಎಂದರು.