ಕಾರವಾರ: ಜಿಲ್ಲೆಯಲ್ಲಿರುವ ಹಾಲಕ್ಕಿ ಜನಾಂಗದವರನ್ನು ಹಾಗೂ ಕುಣಬಿ ಜನಾಂಗದವರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಕೇಂದ್ರ ಸರಕಾರವನ್ನು ಒತ್ತಾಯಿಸಲಾಗಿದ್ದು ಈ ಬಗ್ಗೆ ಸೂಕ್ತ ಭರವಸೆಯು ಕೂಡ ದೊರಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಜೋಯಿಡಾ ಭಾಗದಲ್ಲಿರುವ ಕುಣಬಿ ಸಮುದಾಯದವರನ್ನು ಹಾಗೂ ಕರಾವಳಿ ಭಾಗದಲ್ಲಿ ನೆಲೆಸಿರುವ ಹಾಲಕ್ಕಿ ಸಮುದಾಯದವರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸ ಬೇಕು ಎಂದು ದಶಕಗಳಿಂದ ಮನವಿ ಮಾಡುತ್ತಲೇ ಬರಲಾಗಿದೆ. ಇತ್ತೀಚೆಗೆ ನವದೆಹಲಿಗೆ ತೆರಳಿದ ವೇಳೆ ಸಚಿವರನ್ನು ಭೇಟಿಯಾಗಿ ಈ ಬಗ್ಗೆ ಮನವಿ ಮಾಡಿಕೊಳ್ಳಲಾಗಿದ್ದು ಸಚಿವರು ಈ ಬಗ್ಗೆ ಭರವಸೆಯನ್ನೂ ನೀಡಿದ್ದಾರೆ ಎಂದರು.

RELATED ARTICLES  ಸಂಭ್ರಮದಿಂದ ಆಚರಣೆಗೊಂಡ ದೊಡ್ಡ ಹಬ್ಬ : ನಡೆಯಿತು ಗೋ ಪೂಜೆ, ಲಕ್ಷ್ಮೀ ಪೂಜೆ

ಹಾಲಕ್ಕಿ ಜನಾಂಗವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಒತ್ತಾಯಿಸುತ್ತಲೇ ಬರಲಾಗಿತ್ತು. ಅದರಂತೆ ಅಧ್ಯಯನ ನಡೆಸಿ ವಿಸ್ತೃತ ವರದಿಯನ್ನು ತಯಾರಿಸಿ ಸಲ್ಲಿಸಲಾಗಿತ್ತು. ಈ ಬಗ್ಗೆ ಕೇಂದ್ರವು ಕೂಡ ಹಾಲಕ್ಕಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಸಿದ್ಧವಾಗಿತ್ತು. ಆದರೆ ಅಷ್ಟರಲ್ಲಿ ಯಾರೋ ಓರ್ವರು ಹಾಲಕ್ಕಿಗಳಿಗೂ ಹಾಗೂ ಬ್ರಾಹ್ಮಣರಿಗೂ ಸಾಮ್ಯತೆ ಇದೆ ಎಂದು ಸುಳ್ಳು ವಿವರವನ್ನು ಕೇಂದ್ರಕ್ಕೆ ನೀಡಿದ ಕಾರಣ ಅದು ಅಲ್ಲಿಗೆ ಸ್ಥಗಿತವಾಗಿತ್ತು.

RELATED ARTICLES  ಕಾರ್ಮಿಕರಿಗೆ ದಿನಸಿ ಕಿಟ್, ಮಾಸ್ಕ್ ಮತ್ತು ಸ್ಯಾನಿಟೈಸರ್‌ ವಿತರಿಸಿದ ಶಾಸಕಿ ರೂಪಾಲಿ ನಾಯ್ಕ.

ಆದ್ದರಿಂದ ಈ ಬಗ್ಗೆ ಇನ್ನೊಮ್ಮೆ ವಿಸ್ತೃತವಾಗಿ ಹಾಲಕ್ಕಿ ಜನಾಂಗದ ಬಗ್ಗೆ ಅಧ್ಯಯನ ನಡೆಸಿ ವರದಿ ಸಲ್ಲಿಸಲಾಗಿದೆ. ರಾಜ್ಯ ಸರಕಾರವು ಹಾಲಕ್ಕಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಪ್ರಸ್ತಾವನೆಯನ್ನು ಸಲ್ಲಿಸಿದ್ದು ಅದು ಈಗಾಗಲೇ ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗಕ್ಕೆ ಸಲ್ಲಿಕೆಯಾಗಿದೆ. ಅಲ್ಲಿಂದ ಬುಡಕಟ್ಟು ಸಚಿವಾಲಯಕ್ಕೆ ಹೋಗಬೇಕಾಗಿದ್ದು ಈ ಬಗ್ಗೆಯೂ ನಿರಂತರ ಪ್ರಯತ್ನಗಳು ನಡೆಯುತ್ತಿವೆ ಎಂದರು.