Home Uttara Kannada ಸಂಭ್ರಮದಿಂದ ಆಚರಣೆಗೊಂಡ ದೊಡ್ಡ ಹಬ್ಬ : ನಡೆಯಿತು ಗೋ ಪೂಜೆ, ಲಕ್ಷ್ಮೀ ಪೂಜೆ

ಸಂಭ್ರಮದಿಂದ ಆಚರಣೆಗೊಂಡ ದೊಡ್ಡ ಹಬ್ಬ : ನಡೆಯಿತು ಗೋ ಪೂಜೆ, ಲಕ್ಷ್ಮೀ ಪೂಜೆ

ಕುಮಟಾ :  ದೊಡ್ಡ ಹಬ್ಬ ಎಂದು ಕರೆಸಿಕೊಳ್ಳುವ ದೀಪಾವಳಿಯ ಪ್ರಮುಖ ಆಚರಣೆ ಯಾದ ಗೋಪೂಜೆ ಹಾಗೂ ಲಕ್ಷ್ಮೀ ಪೂಜೆ ತಾಲ್ಲೂಕಿನ ವಿವಿಧೆಡೆ ನಡೆಯಿತು.

    ರೈತರು ಗೋವುಗಳನ್ನು ಬಣ್ಣ, ಬೆಗಡೆ, ಗಂಟೆ, ಗೆಜ್ಜೆಗಳಿಂದ ಸಿಂಗರಿಸಿದರು. ದನ–ಕರುಗಳಿಗೆ ಅಡಿಕೆ ಸರ ಹಾಗೂ ಚೆಂಡು ಹೂವಿನ ಸರಗಳನ್ನು ಹಾಕಿದರು. ನಂತರ ಅವುಗಳಿಗೆ ಪೂಜೆ ಸಲ್ಲಿಸಿ, ಗೋಗ್ರಾಸ ನೀಡಿದರು. ದೊಡ್ಡ ಹಳ್ಳಿಗಳಲ್ಲಿ ಊರಿನ ಹೊರಭಾಗದ ಭೂತನಕಟ್ಟೆಗೆ ಅಥವಾ ನಿಗದಿತ ಸ್ಥಳಕ್ಕೆ ಊರಿನ ಎಲ್ಲ ದನ–ಕರುಗಳನ್ನು ಕರೆತಂದು, ಅವುಗಳನ್ನು ಬೆದರಿಸುವ ಸಂಪ್ರದಾಯ ಕೂಡ ನಡೆಯಿತು. ಗ್ರಾಮಸ್ಥರು ಊರಿನ ಗ್ರಾಮ ದೇವತೆಗೆ, ಬೆಟ್ಟ ಗುಡ್ಡಗಳಲ್ಲಿರುವ ಚೌಡಿ, ಭೂತ, ಯಕ್ಷಿ ಮೊದಲಾದ ದೈವಗಳಿಗೆ ಹಣ್ಣು–ಕಾಯಿ ನೀಡಿದರು. ಧನ–ಧಾನ್ಯ, ಕೃಷಿ ಪರಿಕರಗಳು, ಹೊಸ್ತಿಲು, ತುಳಸಿ, ವಾಹನಗಳನ್ನು ಪೂಜೆ ಮಾಡಿದರು.

ಆಯಾ ಸಮುದಾಯದವರು, ಊರಿನವರು ಸಂಪ್ರದಾಯದ ಪ್ರಕಾರ ತಮ್ಮ ಮನೆಗಳಲ್ಲಿ ಭಾನುವಾರ ಬಲೀಂದ್ರ ಹಾಗೂ ವಿಂದ್ಯಾವಳಿ ದಂಪತಿಯನ್ನು ತೆಂಗಿನ ಕಾಯಿ ಹಾಗೂ ಸೌತೆ ಕಾಯಿ ರೂಪದಲ್ಲಿ ಪ್ರತಿಷ್ಠಾಪಿಸಿದರು. ಮಹಿಳೆಯರು ಬಾವಿಗಳಿಂದ ಬೂರೆ ನೀರು(ಶುದ್ಧ ನೀರು) ತಂದು, ಬಲೀಂದ್ರನೊಂದಿಗೆ ಇಟ್ಟರು. ಬಲೀಂದ್ರ, ವಿಂದ್ಯಾವಳಿ ಹಾಗೂ ಬೂರೆ ನೀರಿಗೆ ಪೂಜೆ ಸಲ್ಲಿಸಲಾಯಿತು. ಕೆಲವು ಕಡೆ ಅಂಗಡಿ, ಮನೆಗಳಲ್ಲಿ ಲಕ್ಷ್ಮೀ ಪೂಜೆ ಕೂಡ ನಡೆಯಿತು.