18644504 1785311991783267 1470067674 n

ಲೇಖಕರು :- ಶುಭಾ ಗಿರಣಿಮನೆ
ಮನುಷ್ಯ ಅತೀ ಬುದ್ದಿವಂತ. ಯಾವ ಮಾತಿಗೂ ಸಿಲುಕದ, ಮಾತಲ್ಲಿ ಮಾತನ್ನೇ ಗೆಲ್ಲುವಷ್ಟು ಬುದ್ದಿವಂತ. ಯಾವ ವಿಷಯಕ್ಕಾದರೂ ತರ್ಕವನ್ನು ಹೂಡಿ ಗೆಲ್ಲ ಬಲ್ಲ. ತನ್ನ ಕರ್ತವ್ಯ ಇದು ಎಂದು ತಿಳಿದರೂ ಕೂಡ ತರ್ಕ ನಿಲ್ಲಿಸಲಾರ. ತಾನು ಹೇಳಿದ್ದೇ ಸರಿ ಎಂದು ವಾದ ಹೂಡುವಲ್ಲಿ ನಿಸ್ಸಿಮ. ತಾನು ಎದುರಿಗಿರುವವನಿಗಿಂತ ಒಂಚೂರು ಬಲವಾದ ಮಾತು ಆಡಬಲ್ಲೆ ಎಂದು ಗುರುತಿಸಿಕೊಂಡರಂತೂ ತರ್ಕದ ಮಾತುಗಳು ಜೋರಾಗಿಯೇ ಸಾಗುತ್ತದೆ. ಅಲ್ಲಿ ತಾನು ಹೇಳುತ್ತಿರುವುದೇ ಸರಿ ಎಂದು ವಾದ ಹುಡುತ್ತಾ ಅದು ಅತೀರೇಕವಾಗಿ ಯಾವ ಹಂತವೂ ತಲುಪಬಹುದು. ಆದರೆ ಆಡುವ ಮಾತುಗಳು ಯಾವ ರೀತಿಯಲ್ಲಿ ಸಾಗುತ್ತಿದೆ ಎನ್ನುವುದು ತರ್ಕ ಮಾಡುವವರಿಗೂ ಕೆಲವೊಮ್ಮೆ ಹಿಡಿತ ತಪ್ಪಿ ಬಿಡುವುದು.
ಒಮ್ಮೆ ಶ್ರೀಮಂತನೊಬ್ಬ ತನ್ನ ಹೊಲವನ್ನು ಗೇಣಿಗೆ ರೈತನಿಗೆ ನೀಡಿದ. ಪ್ರತೀ ಬೆಳೆ ಬಂದಾಗ ತನಗೆ ನೀಡಬೇಕಾದದ್ದಷ್ಟನ್ನು ಸರಿಯಾಗಿ ಕೊಟ್ಟು ಬಿಡಬೇಕು. ಹಾಗೆಯೇ ಈ ಬಾರಿ ಬೆಳೆ ಬೆಳೆಯಲು ಬೇಕಾದ ವಸ್ತುಗಳನ್ನು ನೀನೆ ತಂದುಕೊಳ್ಳಬೇಕು. ನಾನು ಎರಡನೆಯ ಬೆಳೆ ಬೆಳೆಯುವಾಗ ಹೊಲದ ಸಾಗುವಳಿಗಾಗಿ ಹಣವನ್ನು ನೀಡುತ್ತೇನೆ ಎಂದನು. ಅದರಂತೆ ರೈತನೂ ಒಪ್ಪಿ ಒಂದು ಕಾಲದ ಫಸಲು ಬೆಳೆದನು. ರೈತ ಆ ಶ್ರೀಮಂತನಿಗೆ ಕೊಡಬೇಕಾದ ಗೇಣಿಯನ್ನು ಕೊಟ್ಟು ಉಳಿದಿದ್ದು ಲಾಭವೇ ಆಗಿತ್ತು. ಅದರಂತೆ ಮರುಬಾರಿಯೂ ಶ್ರೀಮಂತನ ಹೊಲವನ್ನು ಗೇಣಿ ಮಾಡಿದ ಆದರೆ ಸಕಾಲಕ್ಕೆ ಮಳೆಯಾಗದೆ ಅದರ ಜೊತೆ ಕಾಡು ಹಂದಿಗಳ ಹಾವಳಿಯಿಂದ ಬಂದ ಬೆಳೆಯೂ ನಾಶವಾಗಿ ಲಾಭವಿರಲಿ ಸರಿಯಾಗಿ ಗೇಣಿಯನ್ನು ಶ್ರೀಮಂತನಿಗೆ ನೀಡಲು ಸಾಧ್ಯವಾಗಲಿಲ್ಲ.
ತನ್ನ ಪರಿಸ್ಥಿತಿಯನ್ನು ಹೇಳಿಕೊಂಡ ರೈತನ ಮಾತು ಶ್ರೀಮಂತ ಕೇಳಲಿಲ್ಲ. ಆಗ ರೈತ ನೀವು ಎರಡನೇ ಬಾರಿ ಬೆಳೆವ ಬೆಳೆಗೆ ಹೊಲದ ಸಾಗುವಳಿಗಾಗಿ ಹಣವನ್ನು ನೀಡುತ್ತೇನೆ ಎಂದಿದ್ದೀರಿ ಆ ಹಣವನ್ನು ನೀಡಿ ಎಂದನು. ಶ್ರೀಮಂತ ನೀನು ಹೊಲದಲ್ಲಿ ಬೆಳೆ ಹೇಗೆ ಬೆಳೆದೆ ಗೊತ್ತಿಲ್ಲ ಆದರೆ ನನಗೆ ಸಿಗಬೇಕಾದ ಗೇಣಿ ಕೊಡು ನಾನು ಹಣ ಕೊಡುತ್ತೇನೆ ಎಂದ. ಇಬ್ಬರಲ್ಲೂ ವಾದ ವಿವಾದಗಳು ಎದ್ದು ತಮ್ಮ ಮಾತೇ ಸರಿ ಎಂದು ತರ್ಕಿಸತೊಡಗಿದರು. ಅದು ಕೊರ್ಟ್ ಮೆಟ್ಟಿಲೇರಿತು. ಇದೆ ವಿಚಾರ ಮುಂದುವರೆದು ತಮ್ಮ ಮಾತೇ ಹೆಚ್ಚು ಎಂದು ತರ್ಕಕ್ಕೆ ಬಿದ್ದರೆ ಹೊರತು ಇಲ್ಲಿ ಬೆಳೆ ಯಾಕೆ ಬೆಳೆಯಲಿಲ್ಲ ಎಂಬ ಕಾರಣವನ್ನು ನೋಡದೇ ಗೇಣಿ ಬೇಕು ಎಂದು ವಾದಿಸಿದ ಶ್ರೀಮಂತ. ಶ್ರೀಮಂತನ ಮಾತು ತಪ್ಪು ಬೆಳೆ ಬರಲಿಲ್ಲವಾದರೂ ಆಡಿದ ಮಾತಿನಂತೆ ಹಣ ನೀಡಬೇಕು ಎನ್ನುವುದು ಇವನ ವಾದ. ಒಟ್ಟಿನಲ್ಲಿ ತರ್ಕಕ್ಕೆ ಬಿದ್ದು ಮಾಡಬೇಕಿದ್ದ ಕರ್ತವ್ಯ ಹಾಗೆ ಉಳಿಯಿತು. ಮುಂದಿನ ಬೆಳೆಗೆ ಸಜ್ಜಾಗಬೇಕಿದ್ದ ಹೊಲ ಪಾಳು ಬಿದ್ದಿತು. ಕೋರ್ಟ್ ರೈತನಿಗೆ ಹಣವನ್ನು ಕೊಡಿಸಲಿಲ್ಲ. ಇತ್ತ ರೈತ ಮತ್ತೆ ಬೆಳೆ ಬೆಳೆಯಲಿಲ್ಲ.
ಈಗ ಅನ್ನಿಸುತ್ತಿದೆ ನಾವು ಮಾಡಬೇಕಿದ್ದ ಎಷ್ಟೋ ಕರ್ತವ್ಯದ ಕೆಲಸಗಳು ಮಾಡದೇ ಬರೀ ಮಾತಿನಲ್ಲೆ ಕಾಲ ಕಳೆದು ನಾನು ಮಾಡಿದ್ದೇ ಸರಿ ಎಂದು ತರ್ಕವನ್ನು ಮಾಡುತ್ತಾಸಾಗುತ್ತೇವೆ. ಎಂದೋ ಮಾಡಿದ ಕೆಲಸವನ್ನು ನಾನು ಹೀಗೆ ಮಾಡಿದ್ದೆ ಈಗ ಯಾರೂ ಮಾಡುತ್ತಿಲ್ಲ ಎಂದು ಆರೋಪದ ಜೊತೆ ನಾನು ಎನ್ನುವುದೇ ಸರಿ ಎಂದು ಹೇಳುತ್ತೇವೆ. ಹಾಗಿದ್ದಾಗ ನಿಜವಾಗಿ ನಾವು ಮಾಡಬೇಕಿದ್ದುದು ಏನು ಎಂದು ಯೋಚಿಸಲು ಹೋಗದೆ ನಮ್ಮ ಕರ್ತವ್ಯದಿಂದ ನುಣುಚಿಕೊಂಡು ಸಾಗುತ್ತಿದ್ದೇವೆಯೇ! ಎಲ್ಲ ವಿಷಯದಲ್ಲೂ ಇರಲಿಕ್ಕಿಲ್ಲ ಆದರೆ ನಮ್ಮಿಂದ ಆ ಒಂದು ಕೆಲಸ ಸಾಧ್ಯವಾಗದು ಎಂದು ಅರಿವಿಗೆ ಬರುತ್ತಿದ್ದಂತೆ ಅದನ್ನು ನೇರ ನೇರ ಹೇಳದೆ ಮತ್ತೇನನ್ನೊ ಹೇಳಿ ಆ ಹೇಳಿಕೆ ಸರಿ ಎಂದು ತರ್ಕ ಹೂಡಿ ಎದುರಿಗಿರುವವರ ಬಾಯಿ ಮುಚ್ಚಿಸಿ ಗೆದ್ದೆ ಎನ್ನುವ ಬೀಗುವಿಕೆಗೆ ಏನನ್ನಬೇಕೋ ಕಾಣೆ.
ಆದರೆ ಪ್ರತಿಯೊಬ್ಬನಿಗೂ ಅವನದೇ ಆದ ಕರ್ತವ್ಯ ಖಂಡಿತ ಇದೆ. ಆ ಕರ್ತವ್ಯದಿಂದ ಪಾರಗಲು ಸುಲಭ ಉಪಾಯ ತರ್ಕ ಹೂಡುವುದು. ಮಗಳನ್ನು ಕಾಲೇಜಿಗೆ ಕಳಿಸುವುದು ಕರ್ತವ್ಯ. ಯಾಕೆ ಮಗಳು ಕಾಲೇಜಿಗೆ ಹೋಗಬೇಕು. ಹತ್ತನೇ ತರಗತಿ ಕಲಿಸಿದ್ದೇನೆ. ಅಷ್ಟು ಕಲಿತರೆ ಸಾಕು. ಅವಳು ದುಡಿಯಲೇ ಬೇಕು ಎನ್ನುವುದು ಏನಿದೆ. ಹೆಣ್ಣು ಅಂದ ಮೇಲೆ ಒಂದು ಗಂಡು ಇರುತ್ತಾನೆ ಮದುವೆ ಮಾಡುತ್ತೇನೆ. ನನ್ನ ಮಗಳ ವಿಚಾರವನ್ನು ನೀವು ಕೇಳಲು ಯಾರು ಎಂದು ತರ್ಕಿಸುವವನ ಮುಂದೆ ಯಾರು ತಾನೆ ನಿಲ್ಲಲು ಸಾಧ್ಯ?
ತರ್ಕ ಮಾಡುತ್ತ ನಿಜವಾದ ನಮ್ಮ ಕರ್ತವ್ಯ ಮರೆಯದೆ ಪಾಲಿಸಿದರೆ ಅದಕ್ಕೊಂದು ಬೆಲೆ ಸಿಕ್ಕೀತು. ಹೊರತು ಬರೀ ತರ್ಕದಲ್ಲೇ ತನ್ನ ಜೀವನ ಎಂದುಕೊಂಡು ನಡೆದರೆ ಮುಂದಿನ ಆಗುಹೋಗುಗಳಿಗೆ ಅವನೆ ಹೊಣೆ ಹೊರತು ಬೇರೆಯವರಲ್ಲ. ಈಗ ನಮಗೆ ತರ್ಕತ ಮಾತು ಬೇಕೋ ಕರ್ತವ್ಯದ ನಡೆ ಬೇಕೋ ಆಯ್ದುಕೊಳ್ಳುವ ಕೆಲಸ ನಮ್ಮದು

RELATED ARTICLES  ನಿಮ್ಮ ತಾಪ ಶಮನವಾಗಲಿ! ಎಲ್ಲರೂ ಸುಖಿಗಳಾಗಲಿ!( ಶ್ರೀಧರಾಮೃತ ವಚನಮಾಲೆ’).