“ಶುಭಂ ಕರೋತಿ ಕಲ್ಯಾಣಂ ಆರೋಗ್ಯಂ ಧನಸಂಪದಾ|
ಶತ್ರುಬುದ್ಧಿ ವಿನಾಶಾಯ ದೀಪಜ್ಯೋತಿರ್ನಮೋಸ್ತುತೆ||”
ಊರು ಮನೆಗಳಲ್ಲಿ ಇಂದಿಗೂ ದಿನನಿತ್ಯ ನಸು ಮುಂಜಾವಿನಲ್ಲಿ, ಮುಸ್ಸಂಜೆಯಲ್ಲಿ ಈ ಶ್ಲೋಕ ಕೇಳಿಸುತ್ತಿರುತ್ತದೆ. ಇದರ ಅರ್ಥವಿಷ್ಟೇ ‘ಹೇ ದೀಪಜ್ಯೋತಿಯೇ ನೀನು ಶುಭವನ್ನೂ ಕಲ್ಯಾಣವನ್ನೂ ಉಂಟು ಮಾಡಿ,ಶತ್ರುಬುದ್ಧಿಯನ್ನು ನಾಶಗೊಳಿಸುತ್ತಿ.ಅದಕ್ಕಾಗಿ ನಾನು ನಿನಗೆ ನಮಸ್ಕರಿಸುತ್ತೆನೆ’ ಎಂದು. ಬೆಳಕು ಭಗವಂತನ ಸ್ವರೂಪವಾದುದು.ಭಗವಂತನಿಗೆ ನಾಮ ಹಲವು,ಹಾಗೇ ಬೆಳಕಿಗೂ ನಾಮವನೇಕ,ಅಂತಹುದ್ದೊಂದು ನಾಮದಲ್ಲಿ ಶ್ರೇಷ್ಠವಾದುದೇ ‘ದೀಪ’.ಬಹುತೇಕ ಎಲ್ಲರ ಮನೆಗಳಲ್ಲಿ ಬೆಳಿಗ್ಗೆ ಮತ್ತು ಸಾಯಂಕಾಲ ದೀಪ ಹಚ್ಚುವ ಕ್ರಮವಿರುತ್ತದೆ,ಕೆಲವೆಡೆ ಗೌರಿಹಬ್ಬ,ನವರಾತ್ರಿಯಂದು ನಂದಾದೀಪವನ್ನು ಬೆಳಗಿಸುವ ವಾಡಿಕೆಯಿದೆ. ಭಗವಂತನ ಸ್ವರೂಪವನ್ನು ದೀಪದಲ್ಲಿ ನೋಡುವಂತಹ ಮನೋಭಾವ ನಮ್ಮ ಭಾರತೀಯರಿಲ್ಲುರುವ ಕಾರಣ,’ದೀಪಕ್ಕೆ’ ಅದರದ್ದೇ ಆದ ಪ್ರಾಮುಖ್ಯತೆಯೂ ಇದೆ. ಇದೇ ಕಾರಣಕ್ಕೆ ಯಾವುದೇ ಶುಭಸಮಾರಂಭ,ಕಾರ್ಯಕ್ರಮದ ಆರಂಭಗಳೆಲ್ಲಾ ದೀಪ ಬೆಳಗುವುದರ ಮೂಲಕವೇ ಮುಂದುವರಿಯುತ್ತದೆ.
ಸಾಂಪ್ರದಾಯಿಕ ನಂಬಿಕೆಯ ಪ್ರಕಾರ ‘ದೀಪ’ ಎನ್ನುವುದು ಕೇವಲ ಬೆಳಕಿಗಾಗಿ ಹಚ್ಚುವ ಸಾಧನವಲ್ಲ,ಬದಲಿಗೆ ಅದು ನಮ್ಮ ಪ್ರಾರ್ಥನೆಯನ್ನು ದೇವರಿಗೆ ತಲುಪಿಸುವ ಮಧ್ಯವರ್ತಿ.ಭಗವಂತನಿಗೆ ಯಾಗದ ಹವಿಸ್ಸನ್ನು ಅಗ್ನಿದೇವ ಹೇಗೆ ತಲುಪಿಸಬಲ್ಲನೋ,ಅದೇ ತೆರನಾಗಿ ನಾವು ಹಚ್ಚಿಡುವ ದೀಪದಿಂದ ಪ್ರಜ್ವಲಿಸುವ ಅಗ್ನಿಯು ಪ್ರಾರ್ಥನೆಯ ರೂಪದಲ್ಲಿ ದೇವರನ್ನು ತಲುಪಬಲ್ಲದು. ದೀಪವಿಲ್ಲದೆ ಮಾಡುವ ಪ್ರಾರ್ಥನೆಗೆ ಬಲವಿಲ್ಲವೆಂದು ನಂಬಲಾಗಿದೆ. ಹಿಂದಿನವರ ಪ್ರಕಾರ ದೀಪ ಹಚ್ಚಿ ನಾವು ಪ್ರಾರ್ಥನೆ ಮಾಡುವಾಗ ದೀಪ ನಂದಿ ಹೋದರೆ ಅದನ್ನು ಅಪಶಕುನವೆಂದು ಪರಿಗಣಿಸಲಾಗುತ್ತಿತ್ತು,ಅದರರ್ಥವಿಷ್ ಟೇ ನಮ್ಮ ಪ್ರಾರ್ಥನೆ ದೇವರನ್ನು ತಲುಪಲಿಲ್ಲ ಎಂದು.ದೀಪ ಹಚ್ಚಿದಾಗ ಅದರಿಂದ ಹೊರಹೊಮ್ಮುವ ಕಿರಣಗಳೇ ದೇವತೆಗಳು,ಕಾಂತಿಸ್ವರೂಪರು ಎಂದು ನಂಬಲಾಗಿದೆ. ಈ ದೀಪಗಳಲ್ಲೂ ಅನೇಕ ವಿಧಗಳಿವೆ :”ನಂದಾದೀಪ,ಎಣ್ಣೆಬತ್ತಿ ದೀಪ,ಹೂಬತ್ತಿ ದೀಪ,ತುಪ್ಪದ ದೀಪ,ಎಳ್ಳೆಣ್ಣೆ ದೀಪ,ಮಣಿದೀಪ” ಹೀಗೆ ಅನೇಕ.
ಸಾಂಕೇತಿಕವಾಗಿ ಹೇಳಹೊರಟರೆ ದೀಪ(ಬೆಳಕು) ಜ್ನಾನವನ್ನೂ,ಕತ್ತಲೆ ಅಜ್ನಾನವನ್ನೂ ಸೂಚಿಸುತ್ತದೆ.ಬೆಳಕು ಕತ್ತಲೆಯನ್ನು ಹೇಗೆ ದೂರಗೊಳಿಸುವುದೋ ಹಾಗೇ ಜ್ನಾನ ಅಜ್ನಾನವನ್ನು ದೂರಗೊಳಿಸುತ್ತದೆ.ಜ್ನಾನದ ಪ್ರಭಾವದಿಂದ ನಮ್ಮಲ್ಲಿರುವ ಕೀಳರಿಮೆ ತೊಲಗಿ,ಅಂತಃಸ್ಸತ್ವ ಹೆಚ್ಚಾಗುವುದರ ಜೊತೆಗೆ,ಮಾಡಹೊರಟಿರುವ ಕಾರ್ಯಗಳಲ್ಲಿ ಯಶಸ್ಸು ಕಾಣುತ್ತೆವೆ.ಇದೇ ಕಾರಣಕ್ಕಾಗಿ ನಾವು ದೀಪಹಚ್ಚಿ,ಬೆಳಕನ್ನು ಬೆಳಗುವುದರ ಮೂಲಕ ಲೋಕವಂಧ್ಯವಾದ ಜ್ನಾನಕ್ಕೆ ಶಿರಸಾನಮಿಸುತ್ತೇವೆ. ದೀಪವನ್ನೇ ಬೆಳಗಿಸುವುದಾದರೇ ವಿದ್ಧ್ಯುತ್ ದೀಪ ಯಾಕಾಗಬಾರದೆಂಬ ಪ್ರಶ್ನೆ ನಿಮ್ಮಲ್ಲಿ ಮೂಡಲೂ ಬಹುದು. ಆದರೆ ಮಣ್ಣಿನ ಹಣತೆಯಲ್ಲಿ, ಬತ್ತಿಯಿಂದ,ತುಪ್ಪ ಅಥವಾ ಎಳ್ಳೆಣ್ಣೆಯನ್ನುಪಯೋಗಿಸಿಕೊಂಡು ಹಚ್ಚುವ ದೀಪಕ್ಕೆ ಆಧ್ಯಾತ್ಮಿಕ ಹಿನ್ನೆಲೆಯೂ ಇದೆ. ದೀಪಕ್ಕೆ ಹಚ್ಚಲ್ಪಡುವ ಎಣ್ಣೆ-ತುಪ್ಪಗಳ ಪರಿಮಳ, ದೀಪದ ಬೆಳಕಿನ ಸೌಂದರ್ಯ ಮನಸ್ಸಿಗೆ ಮುದಗೊಡುವುದರ ಮೂಲಕ ನಕರಾತ್ಮಕ ಯೋಚನೆಯನ್ನು ತೊಡೆಯುವಂತೆ ಮಾಡುತ್ತದೆ.ಸಕಾರಾತ್ಮಕ ಯೋಚನೆಗಳು ಕ್ರಮೇಣ ಮನೆಮಾಡಿ,ನಮ್ಮಲ್ಲಿ ನಮಗೇ ಗೊತ್ತಿಲ್ಲದೇ ಮನೆ ಮಾಡಿದ ಅಹಂಕಾರವನ್ನು ನಶಿಸುವಂತೆ ಮಾಡುತ್ತದೆ.
‘ದೀಪದಿಂದ ದೀಪವ ಹಚ್ಚಬೇಕು ಮಾನವ’ ಹಂಸಲೇಖ ಅವರು ಬರೆದಿರುವ ಈ ಹಾಡಿಗೆ ಅದೇಷ್ಟು ಅರ್ಥವಿದೆ. ದೀಪದಿಂದ ದೀಪ ಹಚ್ಚಿ ಹೇಗೆ ಬೆಳಕನ್ನು ಹರಡಲು ಸಾಧ್ಯವಾಗುತ್ತದೆಯೋ ಹಾಗೆ ‘ಪ್ರೀತಿಯಿಂದ ಪ್ರೀತಿ ಹಚ್ಚಿ; ಮನ ಮನಗಳನ್ನೂ ಬೆಳಗಬೇಕು ಎಂಬುದೇ ಈ ಹಾಡಿನ ಮುಖ್ಯಾರ್ಥ.ದೀಪದ ಜ್ವಾಲೆ ಅದೇಷ್ಟೇ ತೀಕ್ಷ್ಣವಾಗಿದ್ದರೂ,ಅದೇಷ್ಟೇ ಹೊತ್ತು ಉರಿದರೂ ಅದರ ಪ್ರಕಾಶವು ಕುಂಠಿತವಾಗುವುದಿಲ್ಲ. ಹಾಗೆಯೇ ಜ್ನಾನಿಯಾದವನು ತನ್ನ ಜ್ನಾನವನ್ನು ಹೀಗೆ ದೀಪದಂತೆ ನಿಸ್ವಾರ್ಥತೆಯಿಂದ ಹಂಚಿ ಜ್ನಾನದ ಬೆಳಕನ್ನು ಎಲ್ಲೆಡೆ ಪಸರಿಸಿ ಅಜ್ನಾನವೆಂಬ ಅಂಧಕಾರವನ್ನು ತೊಲಗಿಸಬೇಕು. ಹೀಗೆ ದೀಪ ಹಚ್ಚುವುದಕ್ಕೆ ಸಾಂಪ್ರದಾಯಕವಾಗಿಯೂ,ಸಾಂಕೇತಿಕವಾಗಿ ಯೂ ಅದರದೇ ಆದ ಅರ್ಥವಿದೆ. ಇನ್ನಾದರೂ ಆಧುನಿಕತೆಯನ್ನು ನೆತ್ತಿಗೆರಿಸಿಕೊಂಡವರಿಗೆ ದೀಪ ಹಚ್ಚುವುದ್ಯಾಕೆ, ಅದರ ಉಪಯೋಗವೇನು ಎಂದು ಅರಿವಾಗುವುದರ ಮೂಲಕ ಎಲ್ಲರ ಮನೆಯಲ್ಲೂ ದೀಪ ಬೆಳಗಲಿ ಅಂಧಕಾರ ನಶಿಸಿದರೆ ಈ ಲೇಖನಿಯ ಉದ್ದೇಶವೂ ಸಾರ್ಥಕ.