ತೃಪ್ತಿಯಿಂದ ನೆಮ್ಮದಿ ಬರುತ್ತದೆ ಎಂಬುದು ನಿಜವಾದರೂ, ಜೀವನದಲ್ಲಿ ನೆಮ್ಮದಿಯನ್ನು ಪಡೆಯಲು ನಾನಾ ಕಸರತ್ತು ಮಾಡಿದರು ಏನಾದರೊಂದು ಘಟನೆ ನಡೆದು ನೆಮ್ಮದಿಯೇ ಹೋಗಬಹುದು. ಮನುಷ್ಯ ತನಗಿರುವ ಆಯುಷ್ಯದಲ್ಲಿ ನೆಮ್ಮದಿಯಾಗಿ ಜೀವನ ಮಾಡಿಕೊಂಡು ಬದುಕೋಣವೆಂದರೂ ವಿಧಿ ಯಾರನ್ನೂ ಸುಮ್ಮನೆ ನೆಮ್ಮದಿಯಿಂದ ಜೀವನ ಮಾಡಲು ಬಿಡುವುದಿಲ್ಲ ಎಂದರೆ ತಪ್ಪಾಗಲಾರದು. ಮಕ್ಕಳಾಗಿದ್ದಾಗ ವಿದ್ಯಾಭ್ಯಾಸ ಮಾಡುವವರೆಗೆ ಯಾವುದೇ ರೀತಿಯ ಅಂದರೆ ಓದುವುದನ್ನು ಬಿಟ್ಟು ಬೇರೆ ರೀತಿಯಲ್ಲಿ ಯೋಚನೆ ಮಾಡುವುದಿಲ್ಲ.
ಬುದ್ದಿವಂತರಾದ ವಿದ್ಯಾರ್ಥಿಯಾದರೂ ಸಹ ಅವರಿಗೆ ಪರೀಕ್ಷೆಯ ಭಯ ಕಾಡುತ್ತಾ ಇರುತ್ತದೆ. ಎಷ್ಟೇ ಓದಿದ್ದರೂ ಸಹ ಪರೀಕ್ಷೆ ಎಂಬ ಭೂತ ಎದುರು ಬಂದು ನಿಂತಾಗ ಒಂದು ರೀತಿಯ ಯೋಚನೆ ಬಂದಿರುತ್ತದೆ. ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದರೆ ಏನು ಮಾಡುವುದು? ಪರೀಕ್ಷೆ ಮುಗಿದ ಮೇಲೆ ಫಲಿತಾಂಶದ ಬಗ್ಗೆ ಭಯ ಕಾಡುತ್ತದೆ. ಮನಸ್ಸಿನಲ್ಲಿ ಎಷ್ಟೇ ಧೈರ್ಯವಿದ್ದರೂ ಸ್ವಲ್ಪ ಆತಂಕ ಮನೆ ಮಾಡಿರುತ್ತದೆ. ಬುದ್ದಿವಂತ ವಿದ್ಯಾರ್ಥಿಗಳ ಮನಸ್ಸು ಒಂದು ರೀತಿಯಾದರೆ ಎಷ್ಟು ಓದಿದರೂ ತಲೆಗೆ ಹತ್ತದೆ ಇರುವ ವಿದ್ಯಾರ್ಥಿಗಳದ್ದು ಬೇರೆ ರೀತಿಯ ಯೋಚನೆಯಾಗಿರುತ್ತದೆ. ವಿದ್ಯಾಭ್ಯಾಸ ಮುಗಿದ ತಕ್ಷಣ ಕೆಲಸಕ್ಕೆ ಸೇರುವ ಚಿಂತೆ, ಕೆಲಸಕ್ಕೆ ಸೇರಿದ ನಂತರ ಮದುವೆ, ಹೆಂಡತಿ ಮಕ್ಕಳ ಯೋಗಕ್ಷೇಮ ಇತ್ಯಾದಿ ಯೋಚನೆಗಳು ಮನೆ ಮಾಡುತ್ತದೆ. ಹೀಗೆ ವಿದ್ಯಾರ್ಥಿ ಜೀವನದಿಂದ ಹಿಡಿದು ಮುಂದಿನ ಮನುಷ್ಯನ ಜೀವನದಲ್ಲಿ ಯಾವುದಾದರೂ ಅಹಿತಕರ ಘಟನೆ ನಡೆದು ಜೀವನದಲ್ಲಿ ನೆಮ್ಮದಿಯು ಹೋಗುತ್ತದೆ. ಆತ್ಮೀಯರ ಅಥವಾ ಮನೆಯ ಸದಸ್ಯರ ಅಗಲಿಕೆ, ವಯಸ್ಸಾದಂತೆ ಹೇಳದೆ ಬರುವ ವಾಸಿಯಾಗದ ಖಾಯಿಲೆಗಳು, ಸಕ್ಕರೆ ಖಾಯಿಲೆ, ರಕ್ತದೊತ್ತಡ ಹೀಗೆ ಹಲವಾರು ರೀತಿಯ ಖಾಯಿಲೆಗಳು, ಈ ಖಾಯಿಲೆಗಳು ಬಂದರೆ ಮನುಷ್ಯನಿಗೆ ನೆಮ್ಮದಿ ಇರುವುದಿಲ್ಲ. ಸರಿಯಾಗಿ ಊಟ ಮಾಡಲಾಗುವುದಿಲ್ಲ, ದಿನ ನಿತ್ಯ ಪಥ್ಯದಿಂದರಬೇಕು, ಮಾತ್ರೆಗಳನ್ನು ಸೇವಿಸುತ್ತಾ ಇರಬೇಕು ಹೀಗೆ ಹಲವಾರು ರೀತಿಯ ತೊಂದರೆಗಳನ್ನು ಅನುಭವಿಸಬೇಕಾಗಿರುತ್ತದೆ. ಹಣವಂತರಾದರೆ ಪರವಾಗಿಲ್ಲ, ಇಲ್ಲದಿದ್ದ ಪಕ್ಷದಲ್ಲಿ ಬರುವ ವೇತನದಲ್ಲಿ ಸಂಸಾರದ ಖರ್ಚು, ಮಕ್ಕಳ ವಿದ್ಯಾಭ್ಯಾಸದ ಖರ್ಚು, ಇನ್ನಿತರೆ ಖರ್ಚಿನ ಜೊತೆಗೆ ಮಾತ್ರೆ ಔಷದಿಗಳ ಖರ್ಚು ಇವೆಲ್ಲವನ್ನು ಸರಿದೂಗಿಸಿಕೊಂಡು ಹೋಗಬೇಕಾದ ಅನಿವಾರ್ಯತೆ ಉಂಟಾಗುತ್ತದೆ. ಇಂತಹ ಸನ್ನಿವೇಶದಲ್ಲಿ ಜೀವನ ಸಾಗಿಸುತ್ತಾ ಇರುವಾಗ ನೆಮ್ಮದಿಯ ಬದುಕು ಎಲ್ಲಿ ಸಿಗುತ್ತದೆ? ಸಕ್ಕರೆ ಖಾಯಿಲೆ ರಕ್ತದೊತ್ತಡದ ಖಾಯಿಲೆಗಳು ವೈಯುಕ್ತಿಕವಾಗಿ ನೆಮ್ಮದಿಗೆಡೆಸಿದರೆ, ಮನೆಯಲ್ಲಿ ಯಾರಿಗಾದರೂ ದೊಡ್ಡ ಖಾಯಿಲೆಗಳು ಬಂದರಂತೂ ಮನೆಯಲ್ಲಿ ಯಾರಿಗೂ ನೆಮ್ಮದಿ ಇರುವುದಿಲ್ಲ. ಒಂದು ಕಡೆ ಮನೆಯಲ್ಲಿ ನರಳುತ್ತಾ ಮಲಗಿರುವ ವ್ಯಕ್ತಿಯನ್ನು ನೋಡುತ್ತಿರುವ ಬೇರೆ ಸದಸ್ಯರಿಗೆ ನೆಮ್ಮದಿ ಎಂಬುದು ಮರೀಚಿಕೆಯಾಗುತ್ತದೆ. ಎಂದಿಗೆ ಇವರ ಖಾಯಿಲೆ ವಾಸಿಯಾಗುತ್ತದೋ ಎಂಬ ಚಿಂತೆಯಿಂದ ದಿನಗಳನ್ನು ಕಳೆಯಬೇಕಾಗುತ್ತದೆ. ಎಷ್ಟು ದುಡಿದರೂ ಆಸ್ಪತ್ರೆಗೆ ನೀಡಬೇಕಾದ ಅನಿವಾರ್ಯ ಬಂದಲ್ಲಿ, ಹಾಗೂ ಆಸ್ಪತ್ರೆ ಖರ್ಚಿಗಾಗಿ ಸಾಲವನ್ನು ಮಾಡಬೇಕಾದ ಸಂದರ್ಭ ಬಂದಾಗಲಂತೂ ಕಣ್ಣಿನಲ್ಲಿ ನೀರು ಬರುವುದರ ಬದಲು ರಕ್ತ ಬಂದಂತ ಅನುಭವ ಆಗುತ್ತದೆ.
ಬಡವನಾದವನಿಗೆ ದಿನಕ್ಕೆ ಎರಡು ಹೊತ್ತು ಊಟ ಸಿಕ್ಕಿದರೆ ಸಾಕು ಹೇಗೋ ಬದುಕಬಹುದು ಎಂಬ ಆಲೋಚನೆ ಇರುತ್ತದೆ. ಎರಡು ಹೊತ್ತು ಊಟ ಸಿಕ್ಕಿದಂತಾದರೆ, ವಾಸಿಸಲು ಮನೆ ಕಟ್ಟಿಕೊಳ್ಳುವಾಸೆ, ಒಂದು ಮನೆ ಕಟ್ಟಿದರೂ ಸಹ ಬೇರೊಬ್ಬರು ಎರಡು ಅಂತಸ್ತು ಕಟ್ಟಿದರೆ ನಾವೇನು ಕಡಿಮೆ ನಾವು ಎರಡು ಅಂತಸ್ತು ಕಟ್ಟೋಣ ಎಂದು ಸಾಲವನ್ನು ಮಾಡಿ ಕಡೆಗೆ ಅದನ್ನು ತೀರಿಸಲಾಗದೆ ಇರುವ ಮನೆಯನ್ನೇ ಮಾರಾಟ ಮಾಡಿ, ಬಂದ ಹಣದಿಂದ ಮಾಡಿರುವ ಸಾಲ ತೀರಿಸಿ, ಕೊನೆಗೆ ಬಾಡಿಗೆ ಮನೆಯಲ್ಲಿ ಇರುವಂತಹ ಪ್ರಸಂಗ ಬರುತ್ತದೆ. ಹೀಗೆ ಅವನ ಆಸೆಯೂ ಬೆಳೆಯುತ್ತಾ ಹೋಗುತ್ತದೆ. ಪಕ್ಕದ ಮನೆಯವರು ಏನಾದರೂ ಹೊಸ ಪದಾರ್ಥಗಳನ್ನು ತಂದರೆ ತಮ್ಮ ಮನೆಯಲ್ಲಿಯೂ ತರಲೇಬೇಕೆಂಬ ಆಸೆ ಚಿಗುರೊಡೆಯುತ್ತದೆ. ಇದರಿಂದ ಸಾಲ ಮಾಡಿ ಅದನ್ನು ತೀರಿಸಲಾಗದೆ ಕಷ್ಟಕ್ಕೆ ಸಿಲುಕುವ ಮಂದಿ ಅನೇಕರು ಇದ್ದಾರೆ. ಮನುಷ್ಯನಿಗೆ ತೃಪ್ತಿ ಎಂಬುದಿಲ್ಲ, ಸ್ವಲ್ಪ ಸಿಕ್ಕರೆ ಇನ್ನೂ ಬೇಕು ಎಂಬ ಹಂಬಲ ಉಂಟಾಗುತ್ತದೆ. ಕೈಗೆಟಕದೇ ಇರುವ ವಸ್ತುಗಳನ್ನು ಪಡೆಯಲು ಹೋದರೆ, ಕಷ್ಟಕ್ಕೆ ಸಿಲುಕುವ ಅಪಾಯ ಇರುತ್ತದೆ ಎಂದು ತಿಳಿದಿದ್ದರೂ ಮನೆಯವರ ಬಲವಂತಕ್ಕೆ ಅಥವಾ ತನ್ನ ಗೌರವವನ್ನು ಹೆಚ್ಚಿಸಿಕೊಳ್ಳಲು ಹೋಗಿ, ಕಷ್ಟಕ್ಕೆ ಸಿಲುಕುವ ಮಂದಿಯೇ ಜಾಸ್ತಿ ಇದ್ದಾರೆ. ಅದರೆ ಇದನ್ನು ತಪ್ಪಿಸಿಕೊಳ್ಳಲು ಸಾಧ್ಯವಿದ್ದರೂ ಸಹ ಮನಸ್ಸು ಇರುವುದಿಲ್ಲ.
ಸಮಾಧಾನದ ಬಗ್ಗೆ ಹೇಳಬೇಕೆಂದರೆ, ಯಾವುದೇ ಕೆಲಸವಾದಾಗ ಯಾರನ್ನಾದರೂ ಕೇಳಿದರೂ, ಈಗ ಸ್ವಲ್ಪ ಮನಸ್ಸಿಗೆ ಸಮಾಧಾನ ಆಯಿತು ಅನ್ನುತ್ತಾರೆ ವಿನಃ ಪೂರ್ಣವಾಗಿ ಸಮಾಧಾನವಾಯಿತು ಎಂದು ಹೇಳಲು ಬರುವುದಿಲ್ಲ. ಎಷ್ಟೋ ವರ್ಷದಿಂದ ನೆನಗುದಿಗೆ ಬಿದ್ದದ್ದ ಕೆಲವು ಕೆಲಸ ಕಾರ್ಯಗಳು ಈಡೇರಿದಾಗಲೂ ಸಹ ಸ್ವಲ್ಪ ಸಮಾಧಾನವಾಯಿತು ಎನ್ನುವರೇ ಜಾಸ್ತಿ, ಅಕಸ್ಮಾತ್ ತನ್ನವರನ್ನು ಕಳೆದುಕೊಂಡ ನಂತರ ಕಾರ್ಯ ಕೈಗೂಡಿದರೆ ಆಗ ಸಮಾಧಾನ ಎಂಬುದು ಇರುವುದೇ ಇಲ್ಲ. ಕೆಲಸ ಕೈಗೂಡಿತೆಂಬ ಸ್ವಲ್ಪ ಸಮಾಧಾನ ಇರಬಹುದು ಅಷ್ಟೇ. ಇನ್ನೂ ಕೆಲವು ಕಾರ್ಯಗಳಲ್ಲಿ ಹೇರಳವಾಗಿ ಹಣವು ಖರ್ಚಾಗಿದ್ದರೆ ಹಣ ಖರ್ಚಾಯಿತಲ್ಲ ಎಂಬ ಅಸಮಾಧಾನವಾಗಿ, ಕೆಲಸವಾಗಿದ್ದರೂ ಪೂರ್ಣ ಸಮಾಧಾನವಾಯಿತು ಎನ್ನುವ ಮಂದಿ ಬಹಳ ಕಡಿಮೆ ಎನ್ನಬಹುದು. ಅವರು ಕೈಗೊಂಡ ಕೆಲಸಗಳು ಬಹುದಿನಗಳ ನಂತರ ಕೈಗೂಡಿದದರೆ ಈ ರೀತಿ ಉದ್ಗಾರ ಬರಬಹುದು. ಮಕ್ಕಳ ವಿದ್ಯಾಭ್ಯಾಸ ಮುಗಿದು, ಕೆಲಸಕ್ಕೆ ಸೇರಿ ಒಂದು ನೆಲೆ ನಿಂತರೂ ಅಥವಾ ಒಂದು ಮನೆ ಕಟ್ಟಿದರೂ ಸಹ, ಈಗ ಸಮಾಧಾನವಾಯಿತು ಆದರೆ ಇನ್ನೂ ಪರಿಶ್ರಮಪಟ್ಟಿದ್ದರೆ ಇನ್ನೂ ಹೆಚ್ಚಿನ ರೀತಿಯಲ್ಲಿ ಬಾಳಬಹುದಿತ್ತು ಎಂಬ ಉದ್ಗಾರ ಬರುತ್ತದೆ. ಪೂರ್ಣವಾಗಿ ಸಮಾಧಾನವಾಯಿತು ಎಂಬ ನುಡಿ ಬರುವುದೇ ಇಲ್ಲ. ಒಂದು ಪದವಿ ಅಥವಾ ಎರಡು ಸಾಧ್ಯವಾದಲ್ಲಿ ಇನ್ನು ಎರಡು ಪದವಿ ಪಡೆದರೂ ಸಹ ಇನ್ನೂ ಓದಬೇಕೆಂಬ ಆಸೆ ಇರುತ್ತದೆ. ವಯಸ್ಸು ನಿಲ್ಲುವುದಿಲ್ಲ. ಜೀವನಪೂರ್ತಿ ಓದುತ್ತಾ ಇರಲು ಸಾಧ್ಯವಿಲ್ಲ. ಓದಿದರೆ ಯಾರೂ ಬೇಡ ಎನ್ನುವುದಿಲ್ಲ. ಆದರೆ ಬೇರೆ ಜವಾಬ್ದಾರಿಗಳನ್ನು ಪೂರೈಸಬೇಕಾಗಿರುವುದರಿಂದ ಓದಿಗೂ ಒಂದು ಮಿತಿ ಇಡಬೇಕಾಗುತ್ತದೆ. ಪೂರ್ಣ ಸಮಾಧಾನವಾಗುವುದು ಮನುಷ್ಯನ ಎಲ್ಲಾ ಆಸೆಗಳು ಪೂರ್ಣಗೊಂಡ ನಂತರವಷ್ಟೇ, ಆಸೆ ಎಂಬುದು ಸಾಗರದಂತೆ ಇರುತ್ತದೆ. ಆದರೆ ಪ್ರಯತ್ನ ಎಂಬುವುದು ಸಾಗರದ ನೀರನ್ನು ಬೊಗಸೆಯಲ್ಲಿ ತುಂಬಿಕೊಂಡು ಹೊರಹಾಕಿದಂತೆ ಇರುತ್ತದೆ. ಎಷ್ಟು ಬೊಗಸೆ ನೀರು ಹಿಡಿದು ಹೊರ ಹಾಕಿದರೂ ಸಾಗರದ ನೀರು ಕಡಿಮೆಯಾಗಲು ಸಾಧ್ಯವೇ? ಅದೇರೀತಿ ಮನುಷ್ಯನ ಆಸೆ ಕೊನೆಯಾಗುವುದಿಲ್ಲ.
ಮನುಷ್ಯನ ಪೂರ್ಣ ಆಸೆಗಳು ಕೈಗೂಡಲು ಎಷ್ಟು ಜನ್ಮ ಎತ್ತಿ ಬಂದರೂ ಸಾಧ್ಯವಿಲ್ಲ. ಇರುವುದರಲ್ಲೇ ತೃಪ್ತಿಪಟ್ಟು ಸಮಾಧಾನ ಹೊಂದಿ ಸಂತೋಷವಾಗಿ ಕಾಲ ಕಳೆಯಬೇಕಾಗಿದೆ. ಇರುವುದರಲ್ಲಿ ಸಮಾಧಾನ ಮಾಡಿಕೊಂಡು ಜೀವನ ನಡೆಸದರೆ ಮಾತ್ರ ಸಮಾಧಾನದಿಂದ ಬದುಕಬಹುದು.
ಮುಂದುವರೆಯುತ್ತದೆ,,,,