ಶಿರಸಿ: ವಿಧಾನಸಭೆ ಚುನಾವಣೆ ಘೊಷಣೆಯಾದ ಹಿನ್ನೆಲೆಯಲ್ಲಿ ಜಿಲ್ಲಾ ಕಾಂಗ್ರೆಸ್ನಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಶಿರಸಿ- ಸಿದ್ದಾಪುರ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿರುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಹೀಗಾಗಿ, ಅವರಿಗೇ ಕ್ಷೇತ್ರದ ಟಿಕೆಟ್ ಅಂತಿಮವಾಗಿದೆ ಎಂಬ ಮಾತುಗಳು ಕಾಂಗ್ರೆಸ್ ವಲಯದಲ್ಲಿ ಕೇಳಿಬರುತ್ತಿವೆ. ಆದರೆ ಅದನ್ನು ಯಾವ ನಿಟ್ಟಿನಲ್ಲಿ ಪಕ್ಷ ಕೊಂಡೊಯ್ಯಲಿದೆ ಎಂಬುದನ್ನು ಕಾದುನೋಡಬೇಕಾಗಿದೆ.
ಮಾಜಿ ಸಚಿವೆ ಮಾರ್ಗರೇಟ್ ಆಳ್ವಾ ಅವರ ಪುತ್ರ ನಿವೇದಿತ ಆಳ್ವಾ ಹಾಗೂ ಭೀಮಣ್ಣ ನಾಯ್ಕ ಅವರ ನಡುವೆ ಈ ಕ್ಷೇತ್ರದ ಟಿಕೆಟ್ಗಾಗಿ ತೀವ್ರ ಪೈಪೋಟಿ ನಡೆದಿದೆ.
ನಿವೇದಿತ ಆಳ್ವಾ ಅವರು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ವೇಳೆ ಜಿಲ್ಲೆಯಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳ ಆಧಾರದಲ್ಲಿ ಟಿಕೆಟ್ಗಾಗಿ ಯತ್ನಿಸಿದ್ದರು. ‘ಮಾರ್ಗರೇಟ್ ಆಳ್ವಾ ಅವರ ಮಗ ಎಂಬ ಕಾರಣಕ್ಕೆ ನನ್ನನ್ನು ಪಕ್ಷ ವಿಶೇಷವಾಗಿ ಪರಿಗಣಿಸುವುದಿಲ್ಲ’ ಎಂದು ಬಹಿರಂಗ ಹೇಳಿಕೆ ಅವರು ನೀಡಿದ್ದರು. ಆದರೆ, ಆಂತರಿಕವಾಗಿ ಅವರ ಯತ್ನ ಮಾರ್ಗರೇಟ್ ಆಳ್ವಾ ಮೂಲಕವೇ ನಡೆದಿತ್ತು ಎಂಬ ಮಾತು ಕಾರ್ಯಕರ್ತರಿಂದ ಕೇಳಿಬಂದಿತ್ತು.
ಭೀಮಣ್ಣ ನಾಯ್ಕ 2013ರ ಚುನಾವಣೆಯಲ್ಲಿಯೇ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ದೀಪಕ ಹೊನ್ನಾವರ ಅವರಿಗೆ ಟಿಕೆಟ್ ಲಭಿಸಿ, ಭೀಮಣ್ಣ ಅವರ ಅಭಿಮಾನಿಗಳು ಅಸಮಾಧಾನಗೊಂಡಿದ್ದರು. ಈ ಬಾರಿ ನಿವೇದಿತ ಆಳ್ವಾ ಆಕಾಂಕ್ಷಿಯಾಗಿದ್ದುದು ಭೀಮಣ್ಣ ಅವರ ಅಭಿಮಾನಿಗಳಿಗೆ ಸ್ವಲ್ಪ ಮಟ್ಟಿನ ಆತಂಕ ಮೂಡಿಸಿದೆ.
ಹಾಲಿ ಶಾಸಕರಿಗೆ ಮತ್ತೆ ಟಿಕೆಟ್ ನೀಡುವ ಕಾಂಗ್ರೆಸ್ ಹೈಕಮಾಂಡ್ ನಿರ್ಧಾರವು ಭೀಮಣ್ಣ ಅವರಿಗೆ ವರವಾಗಿದೆ. ಏಕೆಂದರೆ ಜಿಲ್ಲೆಯ 6 ಸ್ಥಾನಗಳಲ್ಲಿ 5ರಲ್ಲಿ ಹಾಲಿ ಕಾಂಗ್ರೆಸ್ ಶಾಸಕರಿದ್ದಾರೆ. ಶಿರಸಿ- ಸಿದ್ದಾಪುರ ಕ್ಷೇತ್ರ ಮಾತ್ರ ಬಿಜೆಪಿ ತೆಕ್ಕೆಯಲ್ಲಿದೆ. ಹೀಗಾಗಿ, ಜಿಲ್ಲೆಯಲ್ಲಿ ನಾಮಧಾರಿಗಳಿಗೆ ಶಿರಸಿ- ಸಿದ್ದಾಪುರ ಹೊರತಾಗಿ ಎಲ್ಲೂ ಟಿಕೆಟ್ ನೀಡಲು ಸಾಧ್ಯವಾಗುತ್ತಿಲ್ಲ.
ಶಿರಸಿ- ಸಿದ್ದಾಪುರ ಕ್ಷೇತ್ರದಲ್ಲಿ 45 ಸಾವಿರಕ್ಕೂ ಅಧಿಕ ನಾಮಧಾರಿ ಮತದಾರರಿದ್ದು, ಅವರ ಮತ ಹೆಚ್ಚಿನ ನಿರ್ಣಾಯಕರಾಗಲಿದ್ದಾರೆ. ಕುಮಟಾ, ಯಲ್ಲಾಪುರ, ಭಟ್ಕಳದಲ್ಲಿಯೂ ನಾಮಧಾರಿ ಮತದಾರರು ಅಧಿಕ ಸಂಖ್ಯೆಯಲ್ಲಿರುವ ಕಾರಣ ರಾಜಕೀಯ ನಡೆ ಎತ್ತ ಸಗಾಲಿದೆ ಎಂಬುದೇ ಈಗ ತಿಳಿಯದಾಗಿದೆ.
ಈ ಮಧ್ಯೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭೀಮಣ್ಣ ನಾಯ್ಕ ಅವರನ್ನು ಬೆಂಗಳೂರಿಗೆ ಕರೆಸಿಕೊಂಡಿದ್ದಾರೆ. ರಾಜ್ಯಾಧ್ಯಕ್ಷ ಜಿ. ಪರಮೇಶ್ವರ ಅವರೊಂದಿಗೆ ಸಭೆ ನಡೆದ ಬಳಿಕ ಭೀಮಣ್ಣ ನಾಯ್ಕ ಅವರು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ‘ಅವರಿಗೆ ಟಿಕೆಟ್ ಖಚಿತವಾಗಿದ್ದಕ್ಕೇ ಜಿಲ್ಲಾಧ್ಯಕ್ಷ ಸ್ಥಾನದಿಂದ ರಾಜೀನಾಮೆ ಪಡೆಯಲಾಗಿದೆ’ ಎನ್ನುತ್ತಿದೆ ಭೀಮಣ್ಣ ಅವರ ಆಪ್ತ ವಲಯ.
ಭೀಮಣ್ಣ ನಾಯ್ಕ ಅವರಿಗೆ ಟಿಕೆಟ್ ಅಂತಿಮಗೊಂಡರೆ ಜೆಡಿಎಸ್ ಮತ್ತು ಬಿಜೆಪಿಯವರಿಗೆ ತಲೆಬಿಸಿ ಶುರುವಾಗಲಿದೆ. ಬಿಜೆಪಿಯ ಹಾಲಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಜೆಡಿಎಸ್ ಅಭ್ಯರ್ಥಿ ಶಶಿಭೂಷಣ ಹೆಗಡೆ ಹವ್ಯಕ ಸಮಾಜಕ್ಕೆ ಸೇರಿದವರಾಗಿದ್ದು, ಹವ್ಯಕರ ಮತಗಳು ಹಂಚಿಹೋಗಲಿವೆ. ಕಳೆದ ಚುನಾವಣೆಯಲ್ಲಿ ಭೀಮಣ್ಣ ನಾಯ್ಕ ಅವರಿಗೆ ಕಾಂಗ್ರೆಸ್ನಲ್ಲಿ ಟಿಕೆಟ್ ಲಭಿಸದಿರುವ ಕಾರಣದಿಂದಾಗಿ ಅಸಮಾಧಾನಗೊಂಡ ನಾಮಧಾರಿಗಳ ಮತಗಳು ಈ ಇಬ್ಬರಿಗೂ ಲಭಿಸಿದ್ದವು. ಇದರಿಂದಾಗಿ ಮೂರು ಸಾವಿರ ಮತಗಳ ಅಂತರದಿಂದ ವಿಶ್ವೇಶ್ವರ ಹೆಗಡೆ ಆಯ್ಕೆಯಾಗಿದ್ದರು ಎಂಬ ಮಾತು ಜನ ಸಾಮಾನ್ಯರಿಂದ ಕೇಳಿ ಬರುತ್ತಿದೆ.
ಈ ಎಲ್ಲ ವಿಷಯಗಳನ್ನು ಮನದಲ್ಲಿಟ್ಟು ಮೂರೂ ಪಕ್ಷವೂ ಟಿಕೆಟ್ ಹಂಚಿಕೆಯ ಲೆಕ್ಕಾಚಾರ ಮಾಡಿದೆ. ಆದರೆ ಮತದಾರ ಪ್ರಭು ಯಾರತ್ತ ಚಿತ್ತ ಹರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.