Home KUMTA ಪಟಾಕಿ ಸಿಡಿಸಿ, ಸಿಹಿ ಹಂಚಿ ಮೋದಿಗೆ ಜೈ ಅಂದ್ರು ಬಿಜೆಪಿ ಪ್ರಮುಖರು

ಪಟಾಕಿ ಸಿಡಿಸಿ, ಸಿಹಿ ಹಂಚಿ ಮೋದಿಗೆ ಜೈ ಅಂದ್ರು ಬಿಜೆಪಿ ಪ್ರಮುಖರು

ಕುಮಟಾ :  ದೇಶ ಮುಖ್ಯ ಎಂಬ ಭಾವನೆ ಜನರಲ್ಲಿ ಬಂದಿದೆ. ಹೀಗಾಗಿ ನರೇಂದ್ರ ಮೋದಿ ಅವರೇ ನಮಗೆ ಗ್ಯಾರೆಂಟಿ. ಆ ಗ್ಯಾರೆಂಟಿಯಿಂದಲೇ ನಾವು ನಮ್ಮ ದೇಶದಲ್ಲಿ ಏಪ್ರಿಲ್ ಮೇ ದಲ್ಲಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿಯಾಗುವ ವಿಶ್ವಾಸ ಬಂದಿದೆ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು ಅವರು ಮೂರು ರಾಜ್ಯಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದ ನಿಮಿತ್ತ ಕುಮಟಾದ ಗಿಬ್ ವೃತ್ತದಲ್ಲಿ ಹಮ್ಮಿಕೊಂಡ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಕಳೆದ ವಾರ ಉತ್ತರ ಭಾರತದ ಮೂರು ರಾಜ್ಯಗಳಲ್ಲಿ ನಡೆದ ಚುನಾವಣೆಯ ಫಲಿತಾಂಶ ರವಿವಾರ ಬಂದಿದ್ದು, ಮಧ್ಯಪ್ರದೇಶದಲ್ಲಿ ಭಾರತೀಯ ಜನತಾ ಪಾರ್ಟಿ ಅಭೂತಪೂರ್ವ ಜಯ ಸಾಧಿಸಿದೆ, ಜೊತೆಗೆ ರಾಜಸ್ಥಾನದಲ್ಲಿ, ಛತ್ತೀಸ್ಗಡದಲ್ಲಿಯೂ ನಿರೀಕ್ಷೆಗೂ ಮೀರಿ ಬಿಜೆಪಿ ದೊಡ್ಡ ಪ್ರಮಾಣದಲ್ಲಿ ಗೆದ್ದು ಬಂದಿದೆ. ಇದು ಹೆಮ್ಮೆಯ ವಿಚಾರ. ಈ ಚುನಾವಣೆಯಲ್ಲಿ ತೆಲಂಗಾಣದಲ್ಲಿ ಮಾತ್ರ ಕಾಂಗ್ರೆಸ್ ಹತ್ತು ಗ್ರಾಂ ಚಿನ್ನದ ಗ್ಯಾರಂಟಿ ಮೇಲೆ ವಿಜಯ ಸಾಧಿಸಿದ್ದು ಬಿಟ್ಟರೆ ಬೇರೆಲ್ಲಾ ಕಡೆ ಬಿಜೆಪಿ ಜಯ ಗಳಿಸಿದೆ. ಇದು ಶುಭ ಸೂಚನೆ ಎಂದು ಅವರು ಹೇಳಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್ಗಡ ಉತ್ತರ ಭಾರತದ ಅತ್ಯಂತ ನಿರ್ಣಾಯಕ ರಾಜ್ಯಗಳು. ಅದರಲ್ಲಿ ಭಾರತೀಯ ಜನತಾ ಪಾರ್ಟಿ ಕ್ಲೀನ್ ಸ್ವೀಪ್ ಮಾಡಿದೆ. ಇಲ್ಲಿಯ ಐತಿಹಾಸಿಕ ಗೆಲುವು ಬಿಜೆಪಿ ಪರವಾಗಿ ಜನರು ಇಟ್ಟಿರುವ ವಿಶ್ವಾಸವನ್ನು ತೋರಿಸುತ್ತದೆ. ತೆಲಂಗಾಣದಲ್ಲಿಯೂ ಭಾರತೀಯ ಜನತಾ ಪಾರ್ಟಿ ಹತ್ತು ಸ್ಥಾನಕ್ಕೆ ಏರಿದ್ದು ತನ್ನ ನೆಲೆಯನ್ನು ಕಂಡುಕೊಳ್ಳುತ್ತಿದೆ ಎಂದರು. ಉತ್ತರ ಕನ್ನಡದಲ್ಲಿಯು ಮುಂಬರುವ ಲೋಕಸಭಾ ಚುನಾವಣೆಯಲ್ಲಿಯೂ ಗೆಲ್ಲುವ ವಿಶ್ವಾಸವಿದೆ ಯುವ ರಾಜ್ಯಾಧ್ಯಕ್ಷ ವಿಜಯೇಂದ್ರ ಸಾರಥ್ಯದಲ್ಲಿ ಈ ರಾಜ್ಯದಲ್ಲಿ ಚುನಾವಣೆ ಎದುರಿಸಲು ಸಿದ್ಧತೆ ನಡೆಸಿದ್ದೇವೆ. 28ಕ್ಕೆ 28 ಲೋಕಸಭಾ ಕ್ಷೇತ್ರಗಳನ್ನು ಗೆಲ್ಲುವ ವಿಶ್ವಾಸ ನಮಗಿದೆ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಮಂಡಲಾಧ್ಯಕ್ಷ ಹೇಮಂತ ಕುಮಾರ್ ಗಾಂವಕರ, ವಿಭಾಗ ಪ್ರಮುಖ ಎನ್.ಎಸ್ ಹೆಗಡೆ ಕರ್ಕಿ, ಡಾ. ಜಿ.ಜಿ ಹೆಗಡೆ, ಎಂ.ಎಂ‌ ಹೆಗಡೆ, ಚೇತೇಶ ಶಾನಭಾಗ, ಅನುರಾಧಾ ಬಾಳೇರಿ, ವಿಶ್ವನಾಥ ನಾಯ್ಕ, ಅಶೋಕ ಪ್ರಭು, ಗೋಪಾಲ ಶೆಟ್ಟಿ, ಮಾರುತಿ ಶೆಟ್ಟಿ, ಜಯಾ ಶೇಟ್, ಮೋಹಿನಿ ಗೌಡ ಹಾಗೂ ಪಕ್ಷದ ಜಿಲ್ಲಾ ಹಾಗೂ ಮಂಡಲದ ವಿವಿಧ ಸ್ಥರಗಳ ಪದಾಧಿಕಾರಿಗಳು, ಪ್ರಮುಖರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇದು ಸೆಮಿಫೈನಲ್ ಮ್ಯಾಚ್, ನಂತರ ಫೈನಲ್ ನಲ್ಲಿಯೂ ನಾವು ಗೆಲ್ಲುತ್ತೇವೆ ಎಂದು ಹೇಳಿದ್ದರು. ಆದರೆ ಬಿಜೆಪಿ ದೊಡ್ಡ ಪ್ರಮಾಣದಲ್ಲಿ ಗೆಲುವು ಸಾಧಿಸಿದೆ. ಫೈನಲ್ ನಲ್ಲಿಯೂ ಬಿಜೆಪಿಯ ಜಯಗಳಿಸಲಿದೆ. – ದಿನಕರ ಶೆಟ್ಟಿ, ಶಾಸಕರು.

ಕರ್ನಾಟಕದ ಮಾದರಿಯ ಗ್ಯಾರಂಟಿಗಳನ್ನು ಆ ರಾಜ್ಯದಲ್ಲಿಯೂ ತೋರಿಸಿದರೂ, ಅಲ್ಲಿಯ ಜನ ಅದನ್ನು ತಿರಸ್ಕರಿಸಿದ್ದಾರೆ ಅಂದರೆ ಕರ್ನಾಟಕದಲ್ಲಿ ನಡೆಯುವ ದುರಾಡಳಿತದ ಬಗ್ಗೆ ಅವರು ಗಮನಿಸಿದ್ದಾರೆಂದೇ ಅರ್ಥ. – ವೆಂಕಟೇಶ ನಾಯಕ ಬಿಜೆಪಿ ಜಿಲ್ಲಾಧ್ಯಕ್ಷ