123 copy

 
ಪ್ರವಾಸ ಎಂದ ತಕ್ಷಣ ವಿಕೆಂಡ್ ದಿನ ಮತ್ತು ಶಾಲಾ ರಜಾ ದಿನಗಳು ನೆನಪಿಗೆ ಬರುತ್ತದೆ. ಹೌದು ಎರಡು ದಿನ ಕೆಲಸದ ಬಿಡುವಿದೆ ಎಂದಾಗ ಎಲ್ಲಿಯಾದರೂ ಸುತ್ತಾಡಿ ಜಾಲಿಯಾಗಿದ್ದು ಬರೋಣ ಅನ್ನಿಸುತ್ತದೆ. ಇಂತಹ ಪ್ರಯಾಣ ಕೇವಲ ಒಂದೋ ಎರಡೋ ದಿನದಲ್ಲಿ ಮುಗಿದುಬಿಡುವುದರಿಂದ ಹೆಚ್ಚಿನ ತಯಾರಿ ಏನೂ ಬೇಕಾಗುವುದಿಲ್ಲ. ಒಂದು ಪುಟ್ಟ ಬ್ಯಾಗಲ್ಲಿ ನಿತ್ಯದ ಬಳಕೆಯ ವಸ್ತುಗಳಾದ ಪೇಸ್ಟ್-ಬ್ರೆಷ್, ಒಂದು ಜೊತೆ ಬಟ್ಟೆ ಒಂದೆರಡು ಪುಸ್ತಕಗಳು ಬೇಕಿದ್ದಲ್ಲಿ, ಕ್ಯಾಮರಾ, ನೀರಿನ ಬಾಟಲಿ, ಕಿಸೆಯಲ್ಲಿ ಒಂದಿಷ್ಟು ಹಣ ಇದ್ದರೆ ಪ್ರವಾಸ ಮುಗಿದು ಹೋಗುತ್ತದೆ.
ಆದರೆ ದೂರದೂರ ಪ್ರವಾಸ ಇಷ್ಟು ಸಿಂಪಲ್ಲಾಗಿ ಮುಗಿಯುವುದಿಲ್ಲ. ಒಂದು ವಾರ ದೇಶದ ಇನ್ನೊಂದು ಮೂಲೆಯನ್ನು ಸುತ್ತಾಡಬೇಕು ಎಂದುಕೊಂಡರೆ ಅದಕ್ಕೆ ಖಂಡಿತ ಪೂರ್ವ ತಯಾರಿ ಬೇಕು. ಮೊದಲನೆದಾಗಿ ಯಾವ ಮಾರ್ಗವಾಗಿ ಹೋಗಬೇಕು. ವಾಹನದ ವ್ಯವಸ್ಥೆ ಏನು ಅನ್ನುವುದು ನೋಡಿಕೊಳ್ಳಬೇಕು. ಮುಂಚಿತವಾಗಿ ಟಿಕೇಟ್ ಕಾದಿರಿಸಿಕೊಳ್ಳಬೇಕು. ದೂರದ ಪ್ರಯಾಣದಲ್ಲಿ ಕುಳಿತುಕೊಳ್ಳಲು ಆಗದಿದ್ದರೆ ಪ್ರಯಾಣ ಅರ್ಧದಲ್ಲೆ ಪ್ರಯಾಸವಾಗುವುದು.
ನಂತರದಲ್ಲಿ ಹೋಗುವ ತಯಾರಿ ಬ್ಯಾಗ್ ಪ್ಯಾಕ್ ಎಷ್ಟು ಕಾಳಜಿಯಿಂದ ಮಾಡುತ್ತೇವೆಯೋ ಅದೇ ರೀತಿ ದೇಹದ ಆರೋಗ್ಯದ ತಯಾರಿಯೂ ಆಗಬೇಕು. ದೂರದ ಪ್ರಯಾಣದಲ್ಲಿ ಹಲವು ರಿತಿಯ ತೊಂದರೆಗಳು ಎದುರಾಗುತ್ತವೆ. ಸರಿಯಾದ ನಿದ್ರೆ ಇರುವುದಿಲ್ಲ. ಊಟ ಸಿಗುವುದಿಲ್ಲ, ಪರಿಚಯದ ಸ್ಥಳ ಆಗಿರುವುದಿಲ್ಲ. ಆಗ ನಾವು ಯಾವ ರೀತಿಯಲ್ಲಿ ಆ ಸಮಯವನ್ನು ದಾಟ ಬೇಕು ಎನ್ನುವ ಸಣ್ಣ ಪರಿಜ್ಞಾನ ಹೊಂದಿರಬೇಕು.
ಸಿಕ್ಕಸಿಕ್ಕ ಕಡೆಯಲ್ಲ ತಿನ್ನಬಾರದು, ಕುರುಕಲು ತಿಂಡಿ ಇಷ್ಟವೆಂದು ತಿಂದರೆ ಅದು ಜೀರ್ಣವಾಗದೇ ವಾಂತಿ ಭೇಧಿ ಆಗುವ ಸಾಧ್ಯತೆ ಇರುತ್ತದೆ. ಹೊಟ್ಟೆ ತುಂಬಲು ತಿನ್ನಬೇಕೆ ವಿನಹ ಜಡವಾಗುವಂತೆ ಆಹಾರವನ್ನು ತೆಗೆದುಕೊಳ್ಳಬಾರದು. ಹಾಗೆ ಅಂತಹ ಸಂಧರ್ಭ ಬಂದರೆ ಎನ್ನುವ ಕಾರಣಕ್ಕೆ ಮುಂಜಾಗ್ರತವಾಗಿ ಜ್ವರ, ಶೀತ, ವಾಂತಿಭೇಧಿ, ತಲೆನೋವು ಇವುಗಳ ಮಾತ್ರಗಳನ್ನು ತೆಗೆದುಕೊಂಡು ಹೋಗುವುದು ಉತ್ತಮ. ಪ್ರವಾಸ ಎಂದು ದೂರದೂರಿಗೆ ಹೋಗಿ ಆರೋಗ್ಯ ಕೆಟ್ಟು ಆಸ್ಪತ್ರೆಯಲ್ಲಿ ಕಳೆಯುವಂತಾದರೆ ಆ ಪ್ರಯಾಣ ಹೇಗಾಗಬಹುದು ಎಂದು ಉಹಿಸಿ.
ಇದೆಲ್ಲದರ ಜೊತೆ ಮತ್ತೊಂದು ಮುಖ್ಯವಾಗಿ ತೆಗೆದು ಒಯ್ಯಲೇ ಬೇಕಾಗಿರುವುದು ನಮ್ಮ ಐಡಿ ಕಾರ್ಡ್. ಒಟರ್ ಐಡಿ, ಆಧಾರ್, ಯಾವುದಾರದೂ ಬ್ಯಾಂಕ್ ಪಾಸ್ಬುಕ್ ಇಂತಹುಗಳನ್ನು ಒಯ್ಯಬೇಕು. ನಮ್ಮ ರಾಜ್ಯ ಬಿಟ್ಟು ಹೊರ ರಾಜ್ಯ ಅಥವಾ ದೇಶಗಳಿಗೆ ಹೋದಾಗ ಯಾವ ಸಮಯಕ್ಕೆ ಯಾವ ರೀತಿಯ ಪರಿಸ್ಥಿತಿಗಳು ಎದುರಾಗುತ್ತದೆ ಎಂದು ತಿಳಿಯುವುದಿಲ್ಲ. ಯಾವುದೋ ಸಂದರ್ಭಕ್ಕೆ ಪೋಲಿಸರ ಕೈವಶವಾದರೆ ತಾನು ಇಂತಲ್ಲಿಂದ ಬಂದ ವ್ಯಕ್ತಿ ಎಂದು ಈ ಐಡಿಯನ್ನು ನೀಡಿ ಸರಿಯಾದ ಮಾರ್ಗದಲ್ಲಿ ವಾಪಸ್ ಬರಬಹುದು. ಇಲ್ಲವಾದಲ್ಲಿ ಕಳ್ಳನೋ ಕೊಲೆಗೆಡುಕನೋ ಅವನ ಜೊತೆ ಸಿಕ್ಕಿ ಹಾಕಿಕೊಂಡರೆ ಸರಿಯಾದ ಒದೆ ಬಿಳುವುದು.
ನಮ್ಮೂರಿನ ವಯಸ್ಸಾದ ಹೆಂಗಸೊಬ್ಬರು ಕಾಶಿ ಗಯಾ ಪ್ರಯಾಗ ಎಂದು ತೀರ್ಥ ಸ್ಥಳಕ್ಕೆ ಬೇರೆಯವರ ಜೊತೆ ಹೋಗಿದ್ದರು. ಅವರು ಹೋಗಿದ್ದ ಖಾಸಗಿ ವಾಹನ ಒಂದು ಕಡೆ ಊಟ ಉಪಹಾರಕ್ಕೆಂದು ಅಲ್ಲಲ್ಲಿ ನಿಲ್ಲಿಸುತ್ತಿದ್ದಾಗ ಈ ವಯಸ್ಸಾದ ಹೆಂಗಸು ಹೇಗೋ ವಾಹನಹತ್ತದೇ ತಪ್ಪಿಸಿಕೊಂಡುಬಿಟ್ಟಿದ್ದಾಳೆ. ಅದು ದಿಲ್ಲಿಯಂತ ಮಹಾ ನಗರದಲ್ಲಿ. ಆಕೆಗೆ ಕನ್ನಡ ಬಿಟ್ಟು ಬೇರೆ ಯಾವ ಭಾಷೆಯೂ ಬರದು. ಅಕ್ಷರ ಕಲಿತವಳು ಅಲ್ಲ. ಆಕೆಯನ್ನು ನೋಡಿದ ಯಾರೋ ಪೋಲಿಸರಿಗೆ ಒಪ್ಪಿಸಿದ್ದಾರೆ. ಈಕೆಗೆ ಹಿಂದಿ ಇಂಗ್ಲಿಷ್ ಬರುವುದಿಲ್ಲ. ಈಕೆಯ ಬಳಿ ಯಾವುದೆ ಐಡಿ ಪ್ರೂಪ್ ಇಲ್ಲ. ಹಾಗಿದ್ದಾಗ ಆ ಪೋಲಿಸರು ಈಕೆಯನ್ನು ಹೇಗೆ ತಾನೆ ಮನೆತಲುಪಿಸಲು ಸಾಧ್ಯವಾದೀತು. ಆದರೂ ಆ ಮುದುಕಿ ಸಾಹಸ ಪಟ್ಟು ತನ್ನ ಮನೆಯ ಪೋನ್ ನಂಬರನ್ನು ಹೇಗೋ ಬರೆದು ತೋರಿಸಿದ್ದಾಳೆ. ಹಾಗಾಗಿ ತಿರುಗಿ ಮನೆಗೆ ವಾಪಸ್ ಬಂದಳು. ಇಲ್ಲವಾದಲ್ಲಿ ಆ ಪೋಲಿಸ್ ಇವಳನ್ನು ಎಷ್ಟು ದಿನ ರಕ್ಷಿಸುತ್ತಿದ್ದರು? ಅವಳ ಪರಿಸ್ಥಿತಿ ಏನಾಗುತಿತ್ತು ಎನ್ನುವುದು ಉಹಿಸುವುದು ಕಷ್ಟವಾಗುತ್ತದೆ.
ಪ್ರವಾಸದಲ್ಲಿ ಬ್ಯಾಕ್ ಪ್ಯಾಕಿಂಗ್ ಕೂಡ ಮುಖ್ಯ. ಒಂದು ವಾರದ ಪ್ರಯಾಣಕ್ಕೆ ಬೇಕಾಗುವ ಬಟ್ಟೆಗಳ ನಿಯಮ ಹಾಕದಿದ್ದರೆ, ಪ್ರವಾಸ ಮಾಡುವ ಬದಲು ನಮ್ಮ ಬ್ಯಾಗಿಗೆ ನಾವೇ ಕೂಲಿಗಳಾಗಿಬಿಡುತ್ತೇವೆ. ನಿತ್ಯ ರಾತ್ರಿ ಮಲಗುವಾಗ ಒಂದು ಜೊತೆ ಬಟ್ಟೆ, ಹಾಗು ಅದನ್ನು ಹೊರತು ಪಡಿಸಿ ಎರಡು ಅಥವಾ ಮೂರು ಜೊತೆ ಬಟ್ಟೆಯನ್ನು ಒಯ್ಯುವುದು ಸೂಕ್ತ. ಅದಕ್ಕಿಂತ ಹೆಚ್ಚಿಗೆ ಬಟ್ಟೆ ಬ್ಯಾಗಿಗೆ ತುಂಬಿಸಿಕೊಂಡು ಅದನ್ನು ಬಳಸಲಾಗದೆ ಹೊತ್ತುಕೊಂಡು ತಿರುಗುದು ಮಾತ್ರ ಗ್ಯಾರಂಟಿ. ಅದರಂತೆ ಬೆಲೆಬಾಳುವ ವಸ್ತುಗಳಾದ ಬಂಗಾರ ಬೆಳ್ಳಿಯನ್ನು ಧರಿಸಿಕೊಂಡು ಹೋಗಲೇ ಬಾರದು. ನಾವು ಆ ವಸ್ತುಳನ್ನು ಮೈಮೇಲೆ ಇಟ್ಟುಕೊಂಡಾಗ ಎಲ್ಲಿ ಕಳುವಾಗುವುದೋ ಎನ್ನುವ ಭಯದಿಂದ ಗಮನವೆಲ್ಲ ಇತ್ತಲೇ ಇರುತ್ತದೆ. ನೋಡಬೇಕಾದ ಸೌಂದರ್ಯ ಹಾಗೆ ಕಳೆದುಹೋಗುತ್ತದೆ. ಮನಸ್ಸಿಗೆ ಕಿರಿಕಿರಿ ಆಗುತ್ತದೆ.
ನಮ್ಮ ಪ್ರವಾಸ ಆದಷ್ಟು ಹಗುರವಾಗಿ ಸುಖಕರವಾಗಿ ನೆಮ್ಮದಿಯಾಗಿ ಕಳೆಯುವಂತಿರಬೇಕೆ ವಿನಹ ಕಷ್ಟಕ್ಕೆ ಸಿಲುಕಿ, ಒಜ್ಜೆ ಹೊತ್ತುಕೊಂಡು ಭಾರವೆನಿಸಬಾರದು. ಪ್ರವಾಸದ ಮುನ್ನದಿನ ನಾವು ನಿರಾಳವಾಗಿ ಹೇಗೆ ಇರಬೇಕು ಎಂದು ಒಮ್ಮೆ ಯೋಚಿಸಿ. ಆಗ ಮೇಲಿನವುಗಳೆಲ್ಲ ಸತ್ಯ ಅನ್ನಿಸದೇ ಇರದು

RELATED ARTICLES  ಮೂರನೇ ವರ್ಗಕ್ಕೆ ಸೇರದ ಹೆಣ್ಣು