ವಿಷಯವಾಸನೆಗೆ, ಭಿನ್ನತ್ವ ಭಾವಕ್ಕೆ ಮತ್ತು ವಿವಿಧತೆಗೆ ಒಂದೇ ಒಂದು ಕಾರಣವೆಂದರೆ ಆ ಆನಂದಸ್ವರೂಪದ ಅಜ್ಞಾನವೇ ಎಂಬುದು ಸುಷುಪ್ತಿ(ಗಾಢನಿದ್ರೆ) ಯಲ್ಲಿಯ ‘ಆನಂದವಾಯಿತು ಮತ್ತು ಏನೂ ಅರಿವಿರಲಿಲ್ಲ’ ಎಂಬ ಅನುಭವದ ಮೇಲಿಂದಲೇ ಅರಿವಿಗೆ ಬರುತ್ತದೆ.
(ಶ್ರೀ ನಾರಾಯಣ ಬುವಾ ಕರಮರಕರ, ಸಜ್ಜನಗಡ, ಅವರಿಗೆ ಬರೆದ ಪತ್ರ)
||ಶ್ರೀರಾಮ ಸಮರ್ಥ||
ಐಸೇ ಸಛ್ಚಿಷ್ಯಾಚೆ ವೈಭವ| ಸದ್ಗುರುಚರಣೀ ದೃಢಭಾವ|
ತೇಣೇ ಗುಣೇ ದೇವರಾವ| ಸ್ವಯೇಚಿ ಹೋತೀ||
ಚಿ. ನಾರಾಯಣ ಕರಮರಕರನಿಗೆ ಆಶೀರ್ವಾದ,
ನಿನ್ನ ಹಾರ್ದಿಕ ತಳಮಳದ ಮತ್ತು ಅಷ್ಟೇ ಕಳಕಳಿಯ ಪತ್ರ ನೋಡಿ ಗದ್ಗದಿತನಾದೆ. ಸಂಪೂರ್ಣ ಪತ್ರದಲ್ಲಿ ಗುರುಭಕ್ತಿ ತುಂಬಿ ತುಳುಕುತ್ತಿತ್ತು. ಅದೇ ರೀತಿ ಆತ್ಮಸಾಕ್ಷಾತ್ಕಾರದ ಉತ್ಕಟತೆಯೂ ಪುಟಿಯುತ್ತಿತ್ತು.
ಸದ್ಗುರುವಿನಲ್ಲಿ ಅನನ್ಯತೆ| ಹಾಗಿರುವಾಗ ನಿನಗೇತರ ಚಿಂತೆ| ವಿಲಕ್ಷಣವೀ ಮಾತೆ| ‘ಅವಳು ಬಂಜೆ, ಇವನವಳ ಮಗ’ ಎಂಬಷ್ಟೇ ಜಗದ ಭಿನ್ನತೆಯ ನೈಜತೆ| ಹಾಗಾಗಿ ಅಭಿನ್ನತೆ| ಇದ್ದೇ ಇದೆ||
ಶ್ರವಣೋಪರಿ ಮನನ| ಮನನದಿಂದಲಿ ಸಾರ ಅಸಾರ ಅರಿವು| ನಿದಿಧ್ಯಾಸದಿ ಸಾಕ್ಷಾತ್ಕಾರ| ನಿಯಮಬದ್ಧ ಕ್ರಮವದು||
ಸೋಹಂ ಆತ್ಮಾ ಸ್ವಾನಂದಘನ| ಅರಿತಿಕೋ ನಿನಗೆ ಹುಟ್ಟಿಲ್ಲ ಸಾವಿಲ್ಲ| ಇದೇ ಸಾಧು ವಚನ| ದೃಢವಾಗಿ ಹಿಡಿದಿರಿದನು||
ಮಹಾವಾಕ್ಯಗಳ ತಿರುಳು| ನೀನೇ ಬ್ರಹ್ಮ ನಿರಂತರ| ಈ ವಚನಗಳ ಮರೆವು| ಎಂದೂ ಆಗದಿರಲಿ||
ಇದು ನೋಡು! ದಯಾಳು ಪರಮೇಶ್ವರನು ಜೀವಿಗೆ ‘ವೈರಾಗ್ಯ ಪ್ರಾಪ್ತವಾಗಲಿ ಮತ್ತು ಎಣೆಯಿಲ್ಲದ ಅನುಪಮ ಪರಮಸುಖದ ಪರಿಶೋಧನೆ ಮಾಡಲಿ’ ಎಂದೇ ಜಿಗುಪ್ಸೆ ಹುಟ್ಟಿಸುವ ಪದಾರ್ಥಗಳ, ದೇಹದ, ಪರಿಸ್ಥಿತಿಗಳ ಮತ್ತು ಅವುಗಳ ಅನುಭವಗಳ, ಅವುಗಳ ಅಭಿಮಾನಗಳ ಪರಿಚಯ ಈ ಜೀವನದಲ್ಲಿ ಎಲ್ಲರಿಗೂ ಮಾಡಿಕೊಟ್ಟಿದ್ದಾನೆ. ‘ಸುಷುಪ್ತಿಯಲ್ಲಿ(ಗಾಢ ನಿದ್ರೆಯಲ್ಲಿ) ಯಾವ ಸುಖ ಇರುತ್ತದೆಯೋ ಅದು ಜಾಗ್ರತ, ಸ್ವಪ್ನ ಮತ್ತು ಸುಷುಪ್ತಿಯ ಅಜ್ಞಾನವನ್ನು ತ್ಯಜಿಸಿ, ಅವನಲ್ಲಿ ಏಕರೂಪವಾದದ್ದರಿಂದಲೇ ಸಿಗುತ್ತದೆ ಮತ್ತು ಆಗ ಅಶ್ರುತ, ಅನುಪಮ ಸುಖದ ಅನುಭವವಾಗುವದರಿಂದ, ಆ ಪರಮಸುಖ ಪ್ರಾಪ್ತಿಗಾಗಿಯೇ, ಈ ಮತ್ತೆಲ್ಲ ಅವಸ್ಥೆಗಳನ್ನು ತ್ಯಜಿಸುವದು ದಿನಂಪ್ರತಿ ಪ್ರತ್ಯಕ್ಷ ನಡೆಯುತ್ತಾ ಇರುತ್ತವೆ’ ಎಂಬ ಸತ್ಯ ಸ್ವಲ್ಪ ವಿಚಾರ ಮಾಡಿದರೆ ಸ್ಪಷ್ಟವಾಗುತ್ತದೆ.
‘ಮಿಥ್ಯೆಯೆಂದರಿತು ತ್ಯಜಿಸು| ಬ್ರಹ್ಮನಾಗಿ ಜಗವ ನೋಡು| ಸಮಾಧಾನ ಪಡೆ| ನಿಃಸಂಗದಲ್ಲಿ|’
ಸರಿಯಾಗಿ ಅರ್ಥಮಾಡಿಕೊಂಡು ಆ ನಿಷ್ಠೆಯಲ್ಲೇ ಇರಲು, ಜಾಗೃತ, ಸ್ವಪ್ನ, ಸುಷುಪ್ತಿ ಈ ಮೂರೂ ಅವಸ್ಥೆಗಳ ಅನುಭವವೊಂದೇ ಸಾಕು; ಇದರ ಮೇಲಷ್ಟೇ ನಾವು ಸ್ವತಂತ್ರವಾಗಿ ವಿಚಾರ ಮಾಡಿದರೂ, ಆ ಪ್ರತ್ಯಕ್ಷಾನುಭವದ ಮೇಲಿಂದಲೇ, ಅವಸ್ಥೆಗಳನ್ನು ತ್ಯಜಿಸುವದರ ಮಹತ್ವ, ಜಗತ್ತಿನ ಮಿಥ್ಯತ್ವ, ಏಕಾತ್ಮತ್ವ ಮತ್ತು ಎಲ್ಲರೂ ಆನಂದರೂಪವೇ ಎಂಬುದು ಸ್ಪಷ್ಟವಾಗಿ ತಿಳಿದು ಬರುವಂತಿದೆ. ಜಾಗೃತ-ಸ್ವಪ್ನದಲ್ಲಿಯ ವಿಷಯವಾಸನೆಗೆ, ಭಿನ್ನತ್ವ ಭಾವಕ್ಕೆ ಮತ್ತು ವಿವಿಧತೆಗೆ ಒಂದೇ ಒಂದು ಕಾರಣವೆಂದರೆ ಆ ಆನಂದಸ್ವರೂಪದ ಅಜ್ಞಾನವೇ ಎಂಬುದು ಸುಷುಪ್ತಿ(ಗಾಢನಿದ್ರೆ)ಯಲ್ಲಿಯ ‘ಆನಂದವಾಯಿತು ಮತ್ತು ಏನೂ ಅರಿವಿರಲಿಲ್ಲ’ ಎಂಬ ಅನುಭವದ ಮೇಲಿಂದಲೇ ಅರಿವಿಗೆ ಬರುತ್ತದೆ. ‘ಆನಂದದ ಅನುಭವ ಬಂತು’ ಎನ್ನುವದು ಅಲ್ಲಿ ಆನಂದವಿರುವದರಿಂದಲೇ; ‘ಏನೂ ಅರಿವಿರಲಿಲ್ಲ’ ಎಂದಾಗ ತನ್ನ ಸ್ವರೂಪದ ಅಜ್ಞಾನದ ಭಾವ ಪ್ರಕಟ ಮಾಡುತ್ತಾನೆ ಮತ್ತು ಆ ಅಜ್ಞಾನದಿಂದಲೇ ಸ್ವಪ್ನ – ಜಾಗ್ರತಾವಸ್ಥೆಯಲ್ಲಿಯ ಸೃಷ್ಟಿಯ ಮತ್ತು ಅದರಲ್ಲಿ ಘಟಿಸುವ ಮಾನಸಿಕ ಮತ್ತು ದೈಹಿಕ ವ್ಯವಹಾರಗಳ ಉತ್ಪತ್ತಿಯಾಗುತ್ತದೆಯೆಂಬುದು ತಿಳಿದು ಬರುತ್ತದೆ. ಅಜ್ಞಾನದಿಂದ ನಾಮರೂಪಾತ್ಮಕ ಸೃಷ್ಟಿಯ ಉತ್ಪತ್ತಿಯಾಗುತ್ತದೆ ಮತ್ತು ಆಸಕ್ತಿಯಿಂದ ಜನ್ಮ-ಮರಣದ ಆಭಾಸವಾಗುತ್ತದೆ. ಆ ಅಜ್ಞಾನದ ನಾಶದಿಂದ ಅದ್ವಿತೀಯ ಆನಂದಸ್ವರೂಪದಲ್ಲಿ ಐಕ್ಯವಾಗಿ ದೃಶ್ಯ ವಾಸನೆ ಇಲ್ಲವಾಗುತ್ತದೆ, ದೃಶ್ಯಾಭಾಸ ಶಮನವಾಗಿ ಮತ್ತು ಜನ್ಮ-ಮರಣದ ಲೆಕ್ಕಾಚಾರ ನಿಯಂತ್ರಣಕ್ಕೆ ಬರುತ್ತದೆ ಎನ್ನುವದು ಸ್ಪಷ್ಟವಾಗುತ್ತದೆ. ಇದಕ್ಕೇ ಬ್ರಹ್ಮೈಕ್ಯ, ಸ್ವರೂಪಾನುಭವ, ಮೋಕ್ಷ ಅಥವಾ ಜೀವನಮುಕ್ತಿ ಎಂದು ಹೇಳುತ್ತಾರೆ. ‘ಈ ಸ್ವತಃಸಿದ್ಧತ್ವದ ಮತ್ತು ಕೃತಕೃತ್ಯತೆಯ ಅನುಭವ ನಿಮ್ಮೆಲ್ಲರಿಗೂ ಆಗಲಿ. ‘ಆನಂದಸ್ವರೂಪದ ಹಿಡಿಪು ಸದೈವ ಅಚಲವಾಗಿರಲಿ’ ಇದು ನನ್ನ ಆಶೀರ್ವಾದ
|ಇತಿ ಶಿವಮ್|
||ಸರ್ವೇ ಜನಾಃ ಸುಖಿನೋ ಭವಂತು||
ಶ್ರೀಧರ
(ಪತ್ರಸರಣಿ ಮುಂದುವರಿಯುವದು)