ಪ್ರವೀಣ ಬಿ
ತಪ್ಪು ಮನುಷ್ಯರಾದವರೆಲ್ಲ ಮಾಡುತ್ತಾರೆ. ಮನುಷ್ಯ ತಪ್ಪನ್ನು ಮಾಡಲೇಬೇಕು. ಏಕೆಂದರೆ ತಪ್ಪು ಕೊಟ್ಟಷ್ಟು ಜೀವನಾನುಭವವನ್ನು ಇನ್ಯಾವುದೂ ಕೊಡಲಾರದು. ಆದರೆ ತಪ್ಪೊಂದಕ್ಕೆ ಕ್ಷಮೆ ಒಂದೇಸಲ ಸಿಗುತ್ತದೆ.ಮತ್ತೆ ಬೇರೆ ತಪ್ಪನ್ನು ಮಾಡಬಹುದು.ಆದರೆ ಒಮ್ಮೆ ಮಾಡಿದ ತಪ್ಪನ್ನೇ ಪುನಃ ಮಾಡುವವನು ಮಾತ್ರ ಮೂರ್ಖ. ತಪ್ಪಿನ ಕುರಿತು ಇರುವ ಇದೆಲ್ಲ ವ್ಯಾಖ್ಯಾನಗಳು ಮತ್ತು ವಾಸ್ತವ ರಾಜ್ಯ ಬಿಜೆಪಿಗೆ ಅರ್ಥವಾಗಲೇ ಇಲ್ಲ. ಕಣ್ಣೆದುರು ಗುರಿ ಮತ್ತು ಸರಿ ದಾರಿಯಿದ್ದರೂ ಬಿಜೆಪಿ ಮಾತ್ರ ಮಾಡಿದ ತಪ್ಪನ್ನೇ ಮತ್ತೆ ಮತ್ತೆ ಮಾಡಿ ಜನರ ತಾಳ್ಮೆ ಪರೀಕ್ಷಿಸುತ್ತಿದೆ.ಕಾಂಗ್ರೆಸ್ ಆಡಳಿತಕ್ಕೆ ಬೇಸರಗೊಂಡ ರಾಜ್ಯದ ಜನ ಬಿಜೆಪಿ ಕೈಗೆ ಅಧಿಕಾರ ಕೊಟ್ಟರು. ಬಿಜೆಪಿಗೆ ಅಧಿಕಾರ ಕೊಡುವ ಸಮಯಕ್ಕೆ ಮೋದಿ ಅಲೆಯೂ ಇರಲಿಲ್ಲ.20:20 ಸರಕಾರದಲ್ಲಿ ಮಾತಿಗೆ ತಪ್ಪಿದ ಕುಮಾರಸ್ವಾಮಿ ಅಧಿಕಾರ ಸುರಳೀತ ಬಿಟ್ಟುಕೊಟ್ಟಿದ್ದರೆ ಮತ್ತೊಮ್ಮೆ ಬಿಜೆಪಿ ಅಧಿಕಾರ ಹಿಡಿಯುತ್ತಿತ್ತು ಎಂದು ಭಾವಿಸುವದು ಕಷ್ಟವಾಗುತ್ತಿತ್ತು. ಕೇವಲ ಜೆಡಿಎಸ್ ಬಿಜೆಪಿಗೆ ಅನ್ಯಾಯಮಾಡಿಬಿಟ್ಟಿತು ಎನ್ನುವ ಭಾವುಕ ಅಲೆ ಮಾತ್ರ ಬಿಜೆಪಿಯನ್ನು ಗೆಲ್ಲಿಸಿತ್ತು. ಯಡಿಯೂರಪ್ಪನವರ ಇಷ್ಟುವರ್ಷಗಳ ಹೋರಾಟಕ್ಕೆ ಬೆಲೆ ಬಂತು ಎಂದು ಅಂದುಕೊಳ್ಳುವದರೊಳಗೆ ಬೃಷ್ಟಾಚಾರದ ಆರೋಪ ಹೊತ್ತು ರಾಜೀನಾಮೆ ನೀಡಿ ಜೈಲಿಗೂ ಹೋಗಿಬಂದಾಯಿತು. ನ್ಯಾಯಾಲಯದಲ್ಲಿ ಪ್ರಕರಣ ನಡೆಯುವದು, ಪಕ್ಷದೊಳಗಿನ ವಿರೋಧಿಗಳೇ ಷಡ್ಯಂತ್ರ ಹೂಡುವದು, ಕಾಲೆಳೆಯುವ ಆಟಗಳನ್ನೆಲ್ಲ ಬದಿಗಿಟ್ಟು ನೋಡಿದರೂ ಶೋಭಾ ಕರಂದ್ಲಾಜೆ,ರಾಘವೇಂದ್ರ, ಈಗಿನ ಕಾಂಗ್ರೆಸ್ ಸರಕಾರದ ಆಂಜನೇಯರಂತಿರುವ ಮಂತ್ರಿ ರೇಣುಕಾಚಾರ್ಯ ಇವರನ್ನೆಲ್ಲ ಕಟ್ಟಿಕೊಂಡು ಆಡಿದ ದೃತರಾಷ್ಟ್ರ ಪ್ರೇಮವೇ ಯಡಿಯೂರಪ್ಪನವರ ಖುರ್ಚಿ ಪತನಕ್ಕೆ ನಾಂದಿಯಾಗಿದ್ದು ಸುಳ್ಳಲ್ಲ.
ಕೇಂದ್ರಮಂತ್ರಿ ಅನಂತಕುಮಾರ್, ಜಗದೀಶ ಶೆಟ್ಟರ್, ಸದಾನಂದ ಗೌಡರು, ರೆಡ್ಡಿ ಸಾಮ್ರಾಜ್ಯ ಹೀಗೆ ಎಲ್ಲಾ ವಿರೋಧಿಗಳೂ ಅಧಿಕಾರ ದಾಹಿಗಳಾಗಿ ಮುಗಿಬಿದ್ದ ಕಾರಣಕ್ಕೆ ಒಂದು ಸರಕಾರದ ಅವಧಿಯಲ್ಲಿ ಮೂರು ಮುಖ್ಯಮಂತ್ರಿಗಳನ್ನು ಕಾಣುವಂತಾಗಿ ಸಾಕಪ್ಪ ಬಿಜೆಪಿ ಸಹವಾಸ ಎಂದು ಜನ ಅನಿವಾರ್ಯವಾಗಿ ಕಾಂಗ್ರೆಸ್ಸಿಗೆ ಮತ ಹಾಕುವಂತೆ ಮಾಡಿಕೊಂಡಿದ್ದಕ್ಕೆ ಕಾರಣ ಈ ರಾಜ್ಯದ ಮತದಾರರಂತೂ ಅಲ್ಲ.
ಯಡಿಯೂರಪ್ಪ ಸರ್ವಾಧಿಕಾರಿಯಂತೆ ವರ್ತಿಸುತ್ತಾರೆ ಎನ್ನುವ ಆರೋಪವೊಂದಿತ್ತು. ಅದು ಅಷ್ಟೇನೂ ಮಹತ್ವದ್ದಲ್ಲ ಎನ್ನುವದು ನನ್ನ ವಾದ. ಏಕೆಂದರೆ ಮೋದಿಯನ್ನೂ ಸರ್ವಾಧಿಕಾರಿ ಧೋರಣೆಯ ಮನುಷ್ಯ ಎಂದು ಕರೆಯುತ್ತಾರೆ.ಆದರೆ ವ್ಯತ್ಯಾಸವಿಷ್ಟೇ ಮೋದಿಯನ್ನು ಸರ್ವಾಧಿಕಾರಿಯೆಂದು ಕರೆದವರು ಮೋದಿಯ ಸರ್ವಾಧಿಕಾರಿ ಧೋರಣೆಗೆ ಪ್ರಾಮಾಣಿಕತೆಯೇ ಬುನಾದಿ ಎನ್ನುವದನ್ನು ವಿರೋಧಿಗಳೂ ಒಪ್ಪುತ್ತಾರೆ.ಆದರೆ ಯಡಿಯೂರಪ್ಪನವರ ವಿಷಯದಲ್ಲಿ ಒಪ್ಪುವದಿಲ್ಲ. ಇದಕ್ಕೆ ಕಾರಣವೇನೆಂದರೆ ಯಡಿಯೂರಪ್ಪನವರ ಸುತ್ತಲಿರುವ ಭಟ್ಟಂಗಿಗಳ ಮೇಲೆ ಯಾರಿಗೂ ವಿಶ್ವಾಸವಿಲ್ಲ. ರೇಣುಕಾಚಾರ್ಯರಂತವರನ್ನ ಮತ್ತೆ ತಂದು ಬುಡದಲ್ಲಿಟ್ಟುಕೊಂಡರೆ ಜನ ಕಾಂಗ್ರೆಸ್ ಸರಕಾರಕ್ಕಿಂತ ಬಿಜೆಪಿ ಸರಕಾರವನ್ನು ಹೇಗೆ ಭಿನ್ನವಾಗಿ ನೋಡಲು ಸಾಧ್ಯ ?ರಾಜ್ಯ ಬಿಜೆಪಿಯಲ್ಲಿ ವಿಷಯ ಬರಿದಾದಂತೆ ತೋರುತ್ತಿದೆ. ಅದೇ ಬೃಷ್ಟಾಚಾರ ನಿರ್ಮೂಲನೆ,ಹಿಂದುತ್ವದ ಕಥೆಗಳು ಇದೆಲ್ಲ ಹಳಸಿಹೋಗಿದೆ. ಜನರಿಗೆ ಹೊಸ ಕನಸುಗಳನ್ನು ಕಟ್ಟಿಕೊಡಲು ಸಾಧ್ಯವಿಲ್ಲದ ಯಾವ ಪಕ್ಷವನ್ನೂ ನೋಡಲು ಯಾರಿಗೂ ಇಷ್ಟವಿಲ್ಲ. ಮೋದಿ ಇಂದಿಗೂ ಹೊಸ ಕನಸುಗಳನ್ನು ಕಟ್ಟಿಕೊಡುತ್ತ ಕೆಲವನ್ನಾದರೂ ಸಾಕಾರಗೊಳಿಸಲು ಪ್ರಯತ್ನಿಸುತ್ತಿದ್ದುದ್ದಕ್ಕೆ ಮಾತ್ರ ಎಲ್ಲರಿಗೂ ಇಷ್ಟವಾಗುತ್ತಾರೆಯೇ ಹೊರತು ಮನಮೋಹನ ಸಿಂಗರಂತೆ ರೋಬೋಟ್ ಪ್ರಧಾನಿಯಾಗಿದ್ದಿದ್ದರೆ ಮತ್ತೆ ಬದಲಾವಣೆಯೇಕೆಬೇಕು ಎಂದು ಪ್ರಶ್ನಿಸುತ್ತಾರೆ. ಮೊದಲಿನಂತೆ ಉಣ್ಣಲು ಕೈ ಬೇಕು.ಆದ್ದರಿಂದ ಕೈಗೆ ಮತ ಹಾಕುತ್ತೇನೆ ಎನ್ನುವ ಮುಗ್ಧರ ಮಕ್ಕಳೆಲ್ಲ ವಿದ್ಯಾವಂತರಾಗಿದ್ದಾರೆ.ಈಗ ಮತ ಹಾಕುವ ಕೈಗಳಿಗೆ ದುಡಿಯಲು ಕೆಲಸ ಬೇಕು.ತಲೆಯಲ್ಲಿ ಕನಸಿರಬೇಕು.ಜನಿಸುವಾಗಲೇ ಕೈ ದೇಹದ ಜೊತೆಗೆ ಬಂತು.ಆದ್ದರಿಂದ ಎಲ್ಲೆಲ್ಲೂ ಕೈ ಬೇಕೇಬೇಕು ಎನ್ನುವ ಕಾಂಗ್ರೆಸ್ ಚಿರಯುವಕನ ಹೇಳಿಕೆಗೆ ಜನ ಒಂದಿಷ್ಟು ನಗುತ್ತಾರಷ್ಟೇ. ಈಗ ಅದೆಲ್ಲ ಭಾರತದಲ್ಲಿ ನಡೆಯದು. ಯಡಿಯೂರಪ್ಪನವರಿU ಈಗ 74 ವಯಸ್ಸು. ಪಕ್ಷದೊಳಗಿನ ಹುಂಬರನ್ನೆಲ್ಲ ಸುಧಾರಿಸಿ ಒಟ್ಟಿಗೆ ಕರೆದೊಯ್ಯುವ ಸಹನೆ ಈ ವಯಸ್ಸಿನಲ್ಲಿರುವದು ಕಷ್ಟ. ಈಶ್ವರಪ್ಪನವರನ್ನು ಬಿಡಿ.ಅವರು ಮುಖ್ಯಮಂತ್ರಿಯಾಗಬಹುದಾದರೂ ಅವರ ನಾಲಿಗೆಗೆ ಖಂಡಿತಾ ಆ ಯೋಗ್ಯತೆಯಿಲ್ಲ. ರಾಜ್ಯ ಬಿಜೆಪಿಯ ಹಿರಿತಲೆಗಳನ್ನೆಲ್ಲ ವಿಶ್ರಾಂತಿಗೆ ಕಳಿಸಿ ಹೊಸ ತಲೆಮಾರಿನ ನಾಯಕರುಗಳಿಗೆ ಅವಕಾಶ ಕೊಟ್ಟರೆ ಮಾತ್ರ ಮುಂದಿನ ದಿನಗಳಲ್ಲಿ ಬಿಜೆಪಿ ಕುರಿತು ಒಂದಿಷ್ಟು ಕನಸು ಕಾಣಬಹುದು.ಅವತ್ತು ಕೇಂದ್ರದಲ್ಲಿ, ಹಾಲಿ ಉತ್ತರಪ್ರದೇಶದಲ್ಲಿ ನಡೆದ ಜಾದೂ ಅದೇ ಅಲ್ಲವೇ ?
ಅಮಿತ್ ಶಾ ಅದ್ಭುತ ರಾಜಕೀಯ ಆಟಗಾರ.ಅವರೇ ಕರ್ನಾಟಕದ ಬಿಜೆಪಿ ಕಾಯಿಗಳನ್ನು ನಡೆಸುತ್ತಿದ್ದಾರೆ. ಒಂದೇ ಕಲ್ಲಲ್ಲಿ ಎರಡು ದೊಡ್ಡ ಹಕ್ಕಿಗಳನ್ನು ಹೊಡೆಯುವ ಆಟವನ್ನು ಆಡುತ್ತಿರುವ ಅಮಿತ್ ಶಾ ನಿಧಾನವಾಗಿ ಕರ್ನಾಟಕದ ರಾಜಕೀಯವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುತ್ತಿದ್ದಾರೆ.ಗುಜರಾತ್ ಚುನಾವಣೆಯ ನಂತರ ಕರ್ನಾಟಕಕ್ಕೆ ದಾಂಗುಡಿಯಿಡುವ ಯೋಚನೆ ಅವರದ್ದಾದರೂ ಅಲ್ಲಿಯವರೆಗೆ ತಮ್ಮ ಆಟಕ್ಕೆ ಸರಿಯಾದ ಅಂಗಳ ತಯಾರಿಸಿಕೊಳ್ಳುತ್ತಿದ್ದಾರೆ. ಒಂದು ಮೂಲದ ಪ್ರಕಾರ ಜಗಳ ಮಾಡಿಕೊಂಡು ಮುಖ ತಿರುಗಿಸಿಕೊಂಡ ಯಡಿಯೂರಪ್ಪ ಮತ್ತು ಈಶ್ವರಪ್ಪನವರಿಗೆ ಅಮಿತ್ ಶಾ ಹೇಳಿದ್ದು ಕರ್ನಾಟಕದಲ್ಲಿ ಅಧಿಕಾರ ತಂದುಕೊಳ್ಳುವದು ನಿಮ್ಮ ಕೆಲಸ. ನನಗೆ ಅವಷ್ಯವಿದೆಯೆಂದು ತಿಳಿಯದಿರಿ.ನಿಮಗೆ ಅವಷ್ಯವಿದ್ದರೆ ಕೆಲಸ ಮಾಡಿ.ಯಡಿಯೂರಪ್ಪ ಮತ್ತು ಈಶ್ವರಪ್ಪನವರನ್ನು ಸರಿಯಾಗಿ ಚಿವುಟಿ ಒಬ್ಬರಮೇಲೊಬ್ಬರು ಕೆಸರೆರಚಿಕೊಳ್ಳುವಂತೆ ಮಾಡಿ ಕೊನೆಯಲ್ಲಿ ಇಬ್ಬರನ್ನೂ ಬದಿಗಿಟ್ಟು ಹೊಸದಾಗಿ ಚುನಾವಣಾ ತಂತ್ರವನ್ನು ಹೆಣೆದು ಕರ್ನಾಟಕದಲ್ಲಿ ಅಧಿಕಾರ ಗಳಿಸಿ ಉತ್ತರಪ್ರದೇಶದಲ್ಲಿ ಮಾಡಿದಂತೆ ಪ್ರಬಲ ಮುಖ್ಯಮಂತ್ರಿಯೊಬ್ಬರನ್ನು ಕೂರಿಸಿ ಕೈತೊಳೆದುಕೊಳ್ಳುತ್ತಾರೆ.
ಈಗ ಬಿಜೆಪಿ ಅಧಿಕಾರ ಹಿಡಿದ ರಾಜ್ಯಗಳನ್ನು ಒಮ್ಮೆ ತಿರುಗಿನೋಡಿ. ಜಾತಿ ಮತ್ತೊಂದು ಇನ್ನೊಂದು ಯಾವುದನ್ನೂ ಪರಿಗಣಿಸದೇ ಮುಖ್ಯಮಂತ್ರಿ ಹುದ್ದೆಯಲ್ಲಿ ಕೂರಿಸಿದ ವ್ಯಕ್ತಿಗಳನ್ನು ಒಮ್ಮೆ ತಿಳಿದುಕೊಳ್ಳಿ. ಉತ್ತರಪ್ರದೇಶದಲ್ಲಿ ಯೋಗಿಯೊಬ್ಬರನ್ನು ಮುಖ್ಯಮಂತ್ರಿ ಮಾಡಿದ ರೀತಿಯನ್ನು ಕರ್ನಾಟಕಕ್ಕೆ ಅಳವಡಿಸಲೂ ಹಿಂದೆ ಬೀಳುವವರಲ್ಲ ಎನ್ನುದನ್ನು ಕರ್ನಾಟಕದ ಬಿಜೆಪಿಗಳಿಗೆ ಈಗಲೇ ಅರ್ಥ ಮಾಡಿಸಲು ಸಾಧ್ಯವಿಲ್ಲ.
ಇಲ್ಲಿಯವರೆಗೂ ಪ್ರಚಾರಕ್ಕೆ ಬರದ ಸಂತೋಷ್ ಜಿ ಹೆಸರನ್ನು ತೇಲಿಬಿಟ್ಟಿದ್ದು, ಚಕ್ರವರ್ತಿ ಸೂಲಿಬೆಲೆಯವರ ಬಾಯಲ್ಲಿ ಮುಂದಿನ ನಡೆಯನ್ನು ಹೇಳಿಸಿದ್ದು ಯಾರೆಂದು ಅರಿಯದವರು ಕಂಡ ಕಂಡಲ್ಲೆಲ್ಲ ಬೈಯುತ್ತ ತಿರುಗಾಡುತ್ತಿದ್ದಾರೆ. ಲಿಂಗಾಯತ ಸಂಘಟನೆಗಳು, ರಾಯಣ್ಣ ಬ್ರಿಗೇಡ್, ಯುವ ಬ್ರಿಗೇಡ್ ಹೀಗೆ ಉದ್ದೇಶವೊಂದೇ ಇರುವ ಬೇರೆ ಬೇರೆ ಸಂಘಟನೆಗಳ ನಡುವೆ ತಿಕ್ಕಾಟದ ಮಂಥನವಾದಾಗಲೇ ಎಲ್ಲರನ್ನೂ ಒಗ್ಗೂಡಿಸಲು ಒಂದು ಶಕ್ತಿ ಬೇಕು ಬೇಕು ಎನ್ನಿಸುವಾಗ ತಮ್ಮ ಕೆಲಸ ಸಾಧಿಸಿಕೊಳ್ಳುವದು ಅಮಿತ್ ಶಾ ಬಳಗಕ್ಕೆ ಕರತಲಾಮಲಕ. ಮುಂದೆ ಅದೇ ನಡೆಯಲಿಕ್ಕಿದೆ.