“ಆಗಮಾರ್ಥಂತು ದೇವಾನಾಂ ಗಮನಾರ್ಥಂತು ರಕ್ಷಸಾಂ|
ಕುರು ಘಂಟಾರವಂ ತತ್ರ ದೇವತಾಹ್ವಾನ ಲಾಂಛನಂ||”
ಇದರ ತಾತ್ಪರ್ಯವಿಷ್ಟೇ: “ಘಂಟೆ ಬಾರಿಸುವುದರಿಂದ ದೇವತೆಗಳು ಆಗಮಿಸುತ್ತಾರೆ,ದುಷ್ಟ ರಾಕ್ಷಸಶಕ್ತಿಗಳು ದೂರವಾಗುತ್ತವೆ”.ಇದೇ ಕಾರಣಕ್ಕೆ ಮನೆಯಲ್ಲಿ ಪೂಜೆ ಮಾಡುವಾಗ ಇಲ್ಲವೇ ದೇವಸ್ಥಾನದಲ್ಲಿ ಒಳಗಡಿಯಿಡುವಾಗ ಘಂಟೆಯನ್ನು ಮೊಳಗಿಸುತ್ತೆವೆ.
ಆಧ್ಯಾತ್ಮಿಕವಾಗಿ ಹೇಳುವುದಾದರೆ : ತ್ರಿಗುಣಾತ್ಮಕ ಶಕ್ತಿಯನ್ನು ಹೊಂದಿರುವ ಘಂಟೆಯನ್ನು ಬಾರಿಸಿದಾಗ,ಅದರಿಂದ ಹೊರಹೊಮ್ಮುವ ನಾದವು ‘ಓಂ’ಕಾರ ನಾದವೆಂದು ಭಾವಿಸಲಾಗುತ್ತದೆ. ಈ ನಾದವು ಬ್ರಹ್ಮನನ್ನು ಆಹ್ವಾನಿಸುವುದರ ಜೊತೆಗೆ ಸಕಲ ದೇವತೆಗಳಿಗೂ ಸಂಪ್ರೀತಿಯನ್ನುಂಟು ಮಾಡುತ್ತದೆಯೆಂಬ ನಂಬಿಕೆಯಿದೆ. ಘಂಟಾನಾದದಿಂದ ಮುದಗೊಂಡ ಸರ್ವ ದೇವತೆಗಳು ಪೂಜೆಗಾಗಿ ಮನೆಗೋ,ದೇವಸ್ಥಾನಗಳಿಗೋ ಆಗಮಿಸುತ್ತಾರೆ ಎಂಬ ನಂಬಿಕೆಯೂ ಇದೆ.ಅದಕ್ಕಾಗಿಯೇ ಪೂಜೆಯ ಸಮಯದಲ್ಲಿ ಘಂಟಾನಾದವಾದೊಡನೆ ಬರುವ ದೇವತಿಗಳಿಗೆ ತೊಡಕಾಗದಿರಲೆಂದೇ ಭಕ್ತಾದಿಗಳು ಕಣ್ಮುಚ್ಚಿಕೊಂಡು ಧ್ಯಾನಸ್ಥರಾಗಿ ಅನಿರ್ವಚನೀಯ ಆನಂದವನ್ನು ಅನುಭವಿಸುತ್ತಾರೆ.ಇದರಿಂದ ಭಕ್ತರು ಶಾಂತಚಿತ್ತರಾಗಿ ತಮ್ಮ ಪ್ರಾರ್ಥನೆಯ ಮೂಲಕ ಪರಮಾತ್ಮನನ್ನು ನೆನೆಯಲು ಸಹಾಯಕವಾಗುತ್ತದೆ ಎಂಬ ನಂಬಿಕೆಯಿದೆ. ‘ಸರ್ವನಾದಮಯೀ ಘಂಟಾ’ ಎಂಬ ಮಾತಿನಂತೆ ಘಂಟೆಯು ಎಲ್ಲಾ ವಿಧದ ನಾದವನ್ನೂ ಹೊರಹೊಮ್ಮಿಸುವುದರ ಜೊತೆಗೆ ದುಷ್ಟಶಕ್ತಿಗಳನ್ನೂ ನಾಶವಾಗಿಸುತ್ತದೆ ಎಂಬ ನಂಬಿಕೆಯೂ ಇದೆ.
ಸಾಂಕೇತಿಕವಾಗಿ,ವೈಜ್ಞಾನಿಕವಾಗಿ ಹೇಳಬೇಕೆಂದರೆ: ಘಂಟಾನಾದದಿಂದ ಹೊರಹೊಮ್ಮುವ ನಾದತರಂಗಗಳು ಮನಸ್ಸಿಗೆ ಆನಂದವನ್ನೂ, ನೆಮ್ಮದಿಯನ್ನೂ ಕೊಡುತ್ತದೆ. ಕೆಲವು ಕಡೆ ಘಂಟಾನಾದದ ಜೊತೆಗೆ ಶಂಖ,ಜಾಗಟೆ ಮತ್ತಿತರ ವಾದ್ಯಗಳನ್ನೂ ಉಪಯೋಗಿಸುತ್ತಾರೆ. ಇದರಿಂದ ಉಂಟಾಗುವ ಸುಮಧುರ ಶಬ್ಧತರಂಗಗಳು ಕಿವಿಯ ಸುತ್ತಲಿರುವ ನರಗಳ ಸಮಸ್ಯೆಯನ್ನು ನಿವಾರಿಸುವುದರ ಜೊತೆಗೆ ಮನಸ್ಸಿಗೆ ಹರ್ಷವನ್ನುಂಟು ಮಾಡುತ್ತದೆ. ವೈಜ್ಞಾನಿಕವಾಗಿ ಹೇಳುವುದಾದರೆ ಘಂಟೆಗಳು ಕಂಚಿನಿಂದ ತಯಾರಿಸಲ್ಪಡುವ ಒಂದು ವಾದ್ಯ,ಇದರ ಸದ್ದಿನಿಂದ ಕೆಲವು ವಿಷಕಾರಿ ಜಂತು-ಕ್ರಿಮಿಗಳು ದೂರವಾಗುವುದು ರುಜುವಾತಾಗಿದೆ.ಇನ್ನೂ ಕೆಲ ಮೂಲಗಳ ಪ್ರಕಾರ ಘಂಟೆಯನ್ನು ಏಳು ಲೋಹಗಳಿಂದ ತಯಾರಿಸಲಾಗುತ್ತದೆ. ಇದರ ನಾದವು ವಾಯುವಿನಲ್ಲಿ ಸಂಚರಿಸಿ ನಮ್ಮ ಶರೀರವನ್ನು ಸ್ಪರ್ಶಿಸುತ್ತದೆ ಹಾಗೂ ನಮ್ಮ ಶರೀರದಲ್ಲಿರುವ ಏಳು ಚಕ್ರಗಳಿಗೆ ಈ ನಾದ ತಲುಪುತ್ತದೆಯಂತೆ. ಜೊತೆಗೆ ಘಂಟಾನಾದವು ನಕಾರಾತ್ಮಕ ಆಲೋಚನೆಯನ್ನು ಸಕಾರಾತ್ಮಕವಾಗಿ ಬದಲಾಗಿಸಲೂ ಸಹಾಯಮಾಡುತ್ತದೆ. ಇದೇ ಶಕ್ತಿ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸಲೂ ಮನಸ್ಸಿನ ದುಗುಡ-ಒತ್ತಡ-ಖಿನ್ನತೆಗಳನ್ನು ನಿವಾರಿಸಲೂ ನೆರವಾಗುತ್ತದೆ.
ವೈಚಾರಿಕವಾಗಿ ಹೇಳಬೇಕೆಂದರೆ: ಘಂಟಾನಾದ ನವಜೀವನದ ಶಾಂತಿಯ ಮತ್ತು ಒಗ್ಗಟ್ಟಿನ ಪ್ರತೀಕವಾಗಿದೆ. ದೇವಸ್ಥಾನಗಳಲ್ಲಿ ಮೊಳಗಿಸಿಲ್ಪಡುವ ಘಂಟಾನಾದವು,ದೇವರ ಆರಾಧನೆಯ ಸಮಯವಾಯಿತೆಂದು ತಿಳಿಸುವುದರ ಮೂಲಕ ಊರು-ಕೇರಿಯ ಭಕ್ತಾದಿಗಳೆಲ್ಲಾ ಒಂದೆಡೆ ಸೇರುವಂತೆ ಸೂಚನೆ ನೀಡಲಾಗುತ್ತದೆ. ಇದೇ ರೀತಿ ಮನೆಯ ಪೂಜೆಯ ಸಮಯದಲ್ಲಿ ಒಮ್ಮೆ ಘಂಟಾನಾದ ಶುರುವಾದರೆ ಮನೆಯವರೆಲ್ಲಾ ಬಂದು ಪೂಜೆಯಲ್ಲಿ ಪಾಲ್ಗೊಳ್ಳುತ್ತಾರೆ. ಹೀಗೆ ಮಾಡುವುದರಿಂದ ಅರಿವಿಲ್ಲದೇ ಶಾಂತಿ-ಸೌಹಾರ್ದತೆ ಒಗ್ಗಟ್ಟು ಮನೆ ಮಾಡುತ್ತದೆ.
ಹೀಗೆ ಘಂಟಾನಾದ ಕೇವಲ ಧಾರ್ಮಿಕ ವಿಧಿ-ವಿಧಾನದಲ್ಲಿ ಬರುವ ಒಂದು ಭಾಗವಲ್ಲ,ಘಂಟಾನಾದದಲ್ಲೂ ವೈಜ್ಞಾನಿಕತೆ-ವೈಚಾರಿಕತೆಯ ಮಹತ್ವವಿದೆ.