7

ಕುವೆಂಪು ಅವರ ಸಂಸ್ಕೃತಮಾತೆ ಕವಿತೆ
ಕನ್ನಡದ ಕವಿಗಳ ಸಾಲಿನಲ್ಲಿ ಕುವೆಂಪು ಅವರ ಸ್ಥಾನ ಚಿರಸ್ಥಾಯಿಯಾಗಿರುವುದು ಅವರ ಅದ್ಭುತವಾದ ಕವಿತ್ವಶಕ್ತಿಯಿಂದಷ್ಟೇ ಅಲ್ಲದೇ ಮಹಾಕಾವ್ಯಗಳ ಕಾಲ ಮುಗಿದು ಹೋಗಿದೆ ಎಂಬಂತಹ ಕಾಲದಲ್ಲಿ ಶ್ರೀರಾಮಾಯಣದರ್ಶನದಂತಹ ಅದ್ಭುತವಾದ ರಸಸೃಷ್ಟಿಮಾಡಿರುವ ಸರ್ಜನಶೀಲತೆಗಾಗಿ! ಕುಮಾರವ್ಯಾಸನೇ “ತಿಣಕಿದನು ಫಣಿರಾಯ ರಾಮಾಯಣದ ಕವಿಗಳ ಭಾರದಲಿ ತಿಂತಿಣಿಯ ರಘುವರ ಚರಿತೆಯಲಿ ಕಾಲಿಡಲು ತೆರಪಿಲ್ಲ” ಎಂದು ಹೇಳಿದ್ದಾನೆ ಎಂದರೆ ರಾಮಾಯಣವನ್ನು ಆಧರಿಸಿ ಅದೆಷ್ಟು ಕವಿಗಳು ಬರೆದಿದ್ದಾರೆ ಎಂದು ಅರಿವಾಗುತ್ತದೆ. ಅಂತಿದ್ದರೂ ಈಗ ಕನ್ನಡದ ಮಟ್ಟಿಗೆ ರಾಮಾಯಣ ಕಾವ್ಯವೆಂದರೆ ಕುವೆಂಪು ಅವರ “ಶ್ರೀರಾಮಾಯಣದರ್ಶನಂ” ಮಾತ್ರ ಎಂಬಂತಾಗಿದೆ. ಕನ್ನಡದಲ್ಲಿ ಅದಕ್ಕೂ ಹಿಂದೆ ಇದ್ದ ಎಲ್ಲ ರಾಮಾಯಣಾಧಾರಿತ ಕೃತಿಗಳು ವಿಶೇಷತಃ ಜೈನಪರಂಪರೆಯ ರಾಮಾಯಣಗಳು ಹೆಸರಿಲ್ಲದಂತಾಗಿವೆ ಎಂಬುದಂತೂ ಸತ್ಯ! ಕುವೆಂಪು ಅವರ ನಂತರ ಬಂದ ಮೊಯ್ಲಿಯವರ ರಾಮಾಯಣಮಹಾನ್ವೇಷಣೆಯಂತಹವೂ ಕೂಡ ಗಾತ್ರದಲ್ಲಿನ ಬೃಹತ್ತತೆಯಿಂದ ಹೊರತು ಪಡಿಸಿದರೆ ಗುಣದಿಂದ ಯಾವರೀತಿಯಲ್ಲೂ ಸಾಟಿಯಾಗಲಾರದೇ ಸೂರ್ಯನ ಎದುರು ನಿಂತ ಬೀದಿಯ ದೀಪದಂತಾಗಿದೆ.
ಮಹಾಕಾವ್ಯವನ್ನು ಓದಲು ಅಧ್ಯಯನ ಮಾಡಲು ತುಂಬಾ ದೀರ್ಘಕಾಲಾವಕಾಶ ಬೇಕು ಎಂಬಬುದು ಒಂದು ಹಾಗೂ ಅದಕ್ಕೆ ತಕ್ಕ ಭಾಷೆಯ ಪ್ರಭುತ್ವವೂ ಬೇಕು ಎಂಬುದು ಇನ್ನೊಂದು ಅವಶ್ಯಕತೆಯಾಗಿದೆ. ಅದಕ್ಕೆಲ್ಲ ಬೇಕಾದ ತಾಳ್ಮೆಯೂ ಓದುಗನಿಗೆ ಮುಖ್ಯ! ಕಾವ್ಯದಲ್ಲಿ ನಾರಿಕೇಳಪಾಕ, ಕದಳೀಪಾಕ,ದ್ರಾಕ್ಷಾಪಾಕ ಎಂದು ಮೂರು ವಿಧಗಳನ್ನು ಹೇಳುತ್ತಾರೆ. ನಾರಿಕೇಳ ಎಂದರೆ ತೆಂಗಿನಕಾಯಿ. ಅದರ ರುಚಿ ಗೊತ್ತಾಗಬೇಕಾದರೆ ಮೊದಲು ಸಿಪ್ಪೆಯನ್ನು ಸುಲಿದು ಆ ಬಳಿಕ ಒಡೆದು ತಿರುಳನ್ನು ಆಸ್ವಾದಿಸಬೇಕು. ಅಂದರೆ ನಾರಿಕೇಳಪಾಕದ ಕಾವ್ಯ ಎಂದರೆ ಅದನ್ನು ಓದಿ ಅರ್ಥ ಮಾಡಿಕೊಳ್ಳಲು ಅಂತಹ ಶ್ರಮವಂತೂ ಆವಶ್ಯಕ! ಕದಳಿ ಎಂದರೆ ಬಾಳೆ ಹಣ್ಣು- ಅದರ ಸಿಪ್ಪೆಯನ್ನು ಸುಲಿದ ಬಳಿಕ ನೇರವಾಗಿ ಆಸ್ವಾದಿಸಬಹುದು. ಕದಳೀಪಾಕದ ಕಾವ್ಯವೆಂದರೆ ಅದನ್ನು ಆಸ್ವಾದಿಸುವುದು ಬಾಳೆಯ ಹಣ್ಣನ್ನು ತಿಂದಷ್ಟೇ ಸರಳ ಎಂದು. ಇನ್ನು ದ್ರಾಕ್ಷಾಪಾಕದ ಕಾವ್ಯ ಎಂದರೆ ದ್ರಾಕ್ಷಿಯ ಹಣ್ಣನ್ನು ತಿಂದಷ್ಟು ಸುಲಭದಲ್ಲಿ ಆಸ್ವಾದ್ಯವಾಗಿರುವುದು ಎಂಬುದಂತೂ ಸ್ಪಷ್ಟ! ಹೀಗೆ ಹೇಳುವುದಾದರೆ ಕುವೆಂಪು ರಾಮಾಯಣದರ್ಶನಂ, ಚಿತ್ರಾಂಗದಾ ಮೊದಲಾದವು ನಾರಿಕೇಳಪಾಕಕ್ಕೇ ಸೇರುವಂತಹವು. ಕಿಂದರಿಜೋಗಿಯಂತಹವು ದ್ರಾಕ್ಷಾಪಾಕಕ್ಕೆ ಸಲ್ಲುವಂತಹವು. ಪ್ರಸ್ತುತ ವಿವೇಚಿಸಲು ಹೊರಟಿರುವ ಸಂಸ್ಕೃತಮಾತೆ ಎಂಬ ಕವಿತೆ ಕದಳೀಪಾಕ ಎನ್ನಬಹುದು.
ವಸ್ತುತಃ ಈ ಲೇಖನದಲ್ಲಿ ಕುವೆಂಪು ಅವರ ಸಂಸ್ಕೃತಮಾತೆ ಕವಿತೆಯ ಸ್ವಾರಸ್ಯವನ್ನು ತೋರಿಸುವುದರ ಜೊತೆಗೆ ಇರುವ ಇನ್ನೊಂದು ಉದ್ದೇಶವೆಂದರೆ ಅವರ ಸಂಸ್ಕೃತಪ್ರೇಮವನ್ನು ಕೂಡ ಬಿಂಬಿಸುವುದಾಗಿದೆ. ಕುವೆಂಪು ಅವರ ಹೆಸರನ್ನು ಇಂದಿನವರು ಅನವಶ್ಯಕವಾಗಿ ಜಾತಿಯ ಜೊತೆಗೆ ರಾಜಕೀಯದ ದುರುದ್ದೇಶಗಳಿಗೆ ಬಳಸಿಕೊಳ್ಳುವುದಷ್ಟೇ ಆಗಿದೆಯೆಂಬುದು ಬೇಸರದ ಸಂಗತಿ. ಸಂಸ್ಕೃತವನ್ನು ಹಳಿಯುವುದು ಕನ್ನಡದ ಪ್ರೀತಿ ಎಂಬಂತೆ ಬಿಂಬಿಸುವ ಜನರಿಂದ ಕನ್ನಡ ಎಷ್ಟು ಅಧೋಗತಿಗೆ ಹೋಗಿದೆ ಎಂಬುದಂತೂ ಸುವೇದ್ಯ! ಬ್ರಾಹ್ಮಣದ್ವೇಷಕ್ಕಾಗಿ ಕುವೆಂಪು ಅವರನ್ನು ಮೆಚ್ಚುವಂತಹವರು ಒಂದೆಡೆಯಾದರೆ ಅವರನ್ನು ಹಿಂದೂ ಧರ್ಮದ ವಿರುದ್ಧವಾಗಿ ಬಳಸಿಕೊಳ್ಳುತ್ತಿರುವವರು ಅದೆಷ್ಟು ಜನ! ವಿಪರ್ಯಾಸವೆಂದರೆ ಇವರು ಯಾರೂ ಕುವೆಂಪು ಅವರ ಕೃತಿಗಳನ್ನು ಓದಿಲ್ಲ, ಓದಿದ್ದರೂ ಸರಿಯಾಗಿ ಅರ್ಥಯಿಸಿಕೊಂಡಿಲ್ಲ! ರಾಮಾಯಣದರ್ಶನದಲ್ಲಿಯಾಗಲೀ ಅಥವಾ ಇನ್ನಾವುದೇ ಕಾವ್ಯದಲ್ಲಿಯಾಗಲೀ ಕುವೆಂಪು ಅವರ ದೃಷ್ಟಿ -ಸ್ಪಷ್ಟವಾಗಿ ಹಿಂದೂ ಧರ್ಮದ ಪರಂಪರೆಯನ್ನು ಪ್ರತಿನಿಧಿಸುವುದು ಕಾಣುತ್ತದೆ. ಸ್ವಾಮಿವಿವೇಕಾನಂದರ ಚಿಂತನೆಗಳಿಂದ ರಾಮಕೃಷ್ಣಾಶ್ರಮದ ದರ್ಶನಗಳಿಂದ ಪ್ರಭಾವಿತರಾದ ಕುವೆಂಪು ಅವರ ಚಿಂತನೆಗಳು ನಿಸ್ಸಂದಿಗ್ಧವಾಗಿ ವೈದಿಕಧರ್ಮಕ್ಕೆ ಬದ್ಧವಾಗಿವೆ. ಹೆಚ್ಚೇಕೆ! ಅವರ ಬರವಣಿಗೆಯ ಮೂರು ಆಯಾಮಗಳಲ್ಲಿ ಮಹಾಕಾವ್ಯವಾದ ರಾಮಾಯಣದರ್ಶನದ ಆಧ್ಯಾತ್ಮಿಕ ದೃಷ್ಟಿಕೋನಕ್ಕೂ, ಗದ್ಯಕಾವ್ಯವಾದ ಮಲೆಗಳಲ್ಲಿ ಮದುಮಗಳು ಕಾದಂಬರಿಯ ಕಾಣ್ಮೆಗೂ, ಚಿಕ್ಕದಾದ ‘ಕರಿಸಿದ್ಧ’ ಎಂಬ ಕಥನಕವನದ ಅಂತಸ್ಸತ್ತ್ವಕ್ಕೂ ಸಾಮ್ಯವನ್ನು ನೋಡಿದಾಗಳೇ ಸ್ಪಷ್ಟವಾಗುತ್ತವೆ. “ನೂರು ದೇವರನೆಲ್ಲ ನೂಕಾಚೆ ದೂರ” ಎಂದು ಹೇಳಿದ್ದಾರೆ ಎಂದು ಅವರನ್ನು ಹಿಂದೂ ಧರ್ಮಕ್ಕೆ ವಿರುದ್ಧವಾದ ಚಿಂತನೆಯವರೆಂದು ಬಿಂಬಿಸಲೂ ಆಗುವುದಿಲ್ಲ. ಏಕೆಂದರೆ ಅಲ್ಲಿ “ಭಾರತಾಂಬೆಯೇ ದೇವಿ ನಮಗಿಂದು ಪೂಜಿಸುವ ಬಾರ” ಎಂಬ ಸಾಲೂ ಇದೆ. ಅದು ಸ್ವಾತಂತ್ರ್ಯ ಸಂಗ್ರಾಮದ ಕಾಲದಲ್ಲಿ ೧೯೩೩ನೇ ಇಸವಿಯಲ್ಲಿ ಬರೆದದ್ದು (ಪಾಂಚಜನ್ಯ ೧೯೩೩) ಹಾಗಾಗಿ ಈ ಕವಿತೆಯ ಉದ್ದೇಶ ಸ್ಪಷ್ಟವಾಗುತ್ತದೆ.
ಕವಿಯನ್ನು ಹೀಗೆ ತತ್ತ್ವ ಸಿದ್ಧಾಂತಗಳಿಗೆ ಜಾತಿಮತದ ಕಟ್ಟಿಗೆ ಸಿಕ್ಕಿಸುತ್ತ ಹೋದಂತೆ ಅವರ ಕಾವ್ಯವನ್ನು ಆಸ್ವಾದಿಸುವ ಶಕ್ತಿ ನಮ್ಮಲ್ಲೇ ಕುಗ್ಗುತ್ತದೆಯೇ ಹೊರತು ಕವಿಯ ಮಹತ್ತ್ವವಾಗಲೀ ಅವರ ಪ್ರೌಢಿಯಾಗಲೀ ಎಳ್ಳಷ್ಟೂ ಕಡಿಮೆಯಾಗುವುದಿಲ್ಲ! ಕವಿಯಾದವನು ಕೂಡ ರಸೈಕದೃಷ್ಟಿಯಿಂದ ಕಾವ್ಯವನ್ನು ರಚಿಸದೇ ತನ್ನ ಮನಸ್ಸಿನ ಯಾವುದೋ ಒಂದು ಬಲವತ್ತರವಾದ ಸಿದ್ಧಾಂತವನ್ನು ಮುಂದಿಟ್ಟುಕೊಂಡು ಕಾವ್ಯವನ್ನು ರಚಿಸಿದರೆ ಆ ಕಾವ್ಯ ನಿಜವಾದ ಸಹೃದಯರನ್ನು ತಲುಪಲು ಸಾಧ್ಯವಿಲ್ಲ! ಹಾಗಾಗಿ ಕೇವಲ ಆಸ್ವಾದನೆಯದೃಷ್ಟಿಯಿಂದ ನವಿಲು(೧೯೩೫) ಕವನ ಸಂಕಲನದ ಸಂಸ್ಕೃತಮಾತೆ ಕವಿತೆಯನ್ನು ಅವಲೋಕಿಸೋಣ. ಮೊದಲ ಎತ್ತುಗಡೆಯಲ್ಲೇ ವಿಯಚ್ಚುಂಬಿಯಾಗಿ ಪದಗಳು ಪುಂಖಾನುಪುಂಖವಾಗಿ ಸಾಗುವುದನ್ನು ನೋಡಿ
“ಪೃಥಿವಿಯಾ ಪ್ರಥಮಪ್ರಭಾತದಲಿ ಇತಿಹಾಸ
ದೃಷ್ಟಿಗಸ್ಪಷ್ಟ ಅಜ್ಞಾತಪ್ರಾಚೀನದಲಿ
ಚಿರಧವಲಹಿಮಶೈಲಪೃಥುಲೋರುಪ್ರೇಂಖದಲಿ
ನವಜಾತಶಿಶುವಾಗಿ ನಲಿದ ಮಂಗಲಮಯೀ
ಆರ್ಯಮಾತೆಯ ಮೊದಲ ತೊದಲ ನಾಗರಿಕತೆಯ
ಸಾಮಗಾನದ ವಾಣಿಯಿಂದೆ ಮೂಡಿದ ಮೂರ್ತಿ
ನೀನೆಲೌ ಸಂಸ್ಕೃತದ ವಾಗ್ದೇವಿ!”
“ಈ ಭೂಮಿಗೆ ಮೊದಲ ಬಾರಿ ಸೂರ್ಯೋದಯವಾದಾಗ, ಇತಿಹಾಸದ ದೃಷ್ಟಿಗೇ ಕಾಣದಾದ ಅಜ್ಞಾತವಾದ ಕಾಲದಲ್ಲಿ ಸದಾ ಹಿಮದಿಂದ ಕೂಡಿದ ಬೆಳ್ಳಗಿರುವ ಹಿಮಗಿರಿಯ ಉಯ್ಯಾಲೆಯಲ್ಲಿ ನವಜಾತ ಶಿಶುವಾಗಿ ನಲಿದ ಮಂಗಲಮಯಿಯಾದ ಆರ್ಯಮಾತೆಯ ಮೊದಲ ತೊದಲು ಮಾತಿನ ಸಾಮಗಾನದಿಂದ ಮೂಡಿದ ಮೂರ್ತಿ ನೀನು!” ಎಂದು ಸಂಸ್ಕೃತದ ವಾಗ್ದೇವಿಯನ್ನು ಸಂಬೋಧಿಸುತ್ತಾರೆ. ಆ ಬಳಿಕ
ಮಾನವನು
ವನ ಭವನದಲಿ ಮೊದಲು ಬಾನೆಡೆಗೆ ಮೊಗವೆತ್ತಿ
ಕೈಮುಗಿದು ದೇವನಾಶೀರ್ವಾದವನೆ ಬಯಸಿ
ವೇದದಲಿ ಪ್ರಾರ್ಥಿಸಿದ ದನಿ ನಿನ್ನದೆಲೆ ತಾಯಿ!
ಉಪನಿಷತ್ತಿನಲಿ ಋಷಿಗಳು ನಿನ್ನನಾಶ್ರಯಿಸಿ
ತಮ್ಮ ಮಹದಾಲೋಚನಾ ಮಂಜರಿಯ ನೆಯ್ದು
………………………………….
…………………………ಮಂತ್ರ
ತೂರ್ಯದಲಿ ಶಿಶು ನರಗೆ ಅಭಯ ಮತವನು ಹೇಳಿ
………………………………………………………..
……………………………………………………
ಮೈತ್ರೇಯಿ ಯಾಜ್ಞವಲ್ಕ್ಯಾದಿಗಳು ತವಸ್ತನ್ಯ
ಪೀಯೂಷಪಾನದಿಂ ಮೃತ್ಯುವನೆ ಉತ್ತರಿಸಿ
ಅಮೃತರಾಗಿಹರಲ್ತೆ? ವ್ಯಾಸವಾಲ್ಮೀಕಿಗಳು
ಮೃದುಮಧುರಧೀರಗಂಭೀರ ತವ ವಾಣಿಯಿಂ
ಕಾವ್ಯಕಾಹಿನಿಯ ರಸವಾಹಿನಿಯ ಸ್ರೋತದಲಿ
…………………….
……………………………..ಆನಂದವರ್ಷವ ಕರೆದು ಲೋಕದಲಿ
ಸ್ವರ್ಣಸ್ವಪ್ನದ ನಂದನೋದ್ಯಾನವನು ಸೃಜಿಸಿ
ಕವಿಕುಲಶಿರೋಮಣಿಗಳಾಗಿ ರಂಜಿಪರಲ್ತೆ?
ಕಾಳಿದಾಸಾದಿಗಳು ಭಾಸ ಭವಭೂತಿಗಳು
ಜ್ಞಾನಿ,ವೈಯಾಕರಣ,ರಸಋಷಿ,ವಿಭೂತಿಗಳು
ನಿನ್ನ ನಿರ್ಜರನಿರ್ಝರಿಣಿಯಲ್ಲಿ ಕ್ರೀಡಿಸುವ
ಶಿಶುಗಳಾಗಿಹರು!
ಇಲ್ಲಿ ಪ್ರತಿಯೊಂದು ಕಲ್ಪನೆಯಲ್ಲೂ ಅಲಂಕಾರಯುತವಾದ ಭಾಷೆಯಿದೆ. ಸಂಸ್ಕೃತಮಾತೆಯ ದನಿಯಿಂದಲೇ ಮಾನವನು ಮೊದಲು ವೇದಗಳ ಮೂಲಕ ದೇವನ ಆಶೀರ್ವಾದವನ್ನು ಬಯಸಿ ಪ್ರಾರ್ಥಿಸಿದ ಎಂಬಲ್ಲಿ ಸಂಸ್ಕೃತದ ಪ್ರಾಚೀನತೆಯನ್ನೂ ವೇದಗಳ ಕಾಲದಲ್ಲಿ ಸಂಸ್ಕೃತ ವ್ಯಾವಹಾರಿಕಭಾಷೆಯಾಗಿತ್ತೆಂಬ ಸೂಚನೆಯೂ ಇದೆ. ಉಪನಿಷತ್ತಿನ ಋಷಿಗಳು ಆಲೋಚನೆಯ ಮಂಜರಿಯನ್ನು ನೆಯ್ದರು, ಮಂತ್ರಗಳೆಂಬ ತೂರ್ಯದಲ್ಲಿ (ಕಹಳೆ) ಮನುಷ್ಯಶಿಶುವಿಗೆ ಅಭಯಮತವನ್ನು ಹೇಳಿದರು, ಸಂಸ್ಕೃತಮಾತೆಯ ಸ್ತನ್ಯವಾದ ಅಮೃತದ ಪಾನದಿಂದ ಯಾಜ್ಞವಲ್ಕ್ಯಾದಿಗಳು ಮೃತ್ಯುವನ್ನೆ ಉತ್ತರಿಸುವಂತಾದರು. ವ್ಯಾಸವಾಲ್ಮೀಕಿಗಳು ಆನಂದವರ್ಷವನ್ನು ಕರೆಯುತ್ತಾ ಬಂಗಾರದ ಕನಸಿನಲ್ಲಿ ನಂದನೋದ್ಯಾನವನ್ನೇ ಸೃಷ್ಟಿಸಿದ್ದಾರೆ! ಕಾಳಿದಾಸಾದಿ ಕವಿಗಳು ನಿನ್ನ ಚಿರಯೌವನದ ಝರಿಯಲ್ಲಿ ಕ್ರೀಡಿಸುವ ಶಿಶುಗಳು! ಎಂದೆಲ್ಲ ಸಂಸ್ಕೃತವನ್ನು ಕೊಂಡಾಡಿರುವಲ್ಲಿ ಕವಿಗೆ ಸಂಸ್ಕೃತದ ಬಗ್ಗೆ ಇರುವ ಗೌರವ ಹಾಗೂ ಅಧ್ಯಯನವನ್ನೂ ಸೂಚಿಸುತ್ತವೆ. ಮುಂದೆ
ಆರ್ಯರಾಗಿಹ ನಾವು
ನಿನ್ನ ಮೊಲೆವಾಲ ಸವಿಯಿಲ್ಲದೆಯೆ ಬದುಕುವೆವೆ?
ನೀನಿಲ್ಲದೆಲ್ಲಿಯದು ಭರತಖಂಡದ ಬದುಕು,
ಸಂಪತ್ತು ಸಂಸ್ಕೃತಿ? ನಮ್ಮ ಜೀವನಗಂಗೆ
ನಿನ್ನೆದೆಯ ಅಕ್ಷಯಹಿಮಾಲಯವು ಸರ್ವದಾ
ದಾನ ಮಾಡುವ ಪುಣ್ಯಜಲ ತೀರ್ಥದಿಂದಲ್ತೆ
ಬತ್ತದೆಯೆ ತುಂಬಿ ನೂತನವಾಗಿ ಚಿರವಾಗಿ
ಹರಿಯುತಿದೆ?
ಸಂಸ್ಕೃತದ ಮೊಲೆವಾಲ ಸವಿಯಿಲ್ಲದೆಯೇ ಆರ್ಯರಾಗಿಹ ನಾವು ಬದುಕಲು ಸಾಧ್ಯವೇ? ಭರತಖಂಡದ ಬದುಕು ಸಂಪತ್ತು ಸಂಸ್ಕೃತಿ ನೀನಿಲ್ಲದೇ ಎಲ್ಲಿರಲು ಸಾಧ್ಯ! ಎಂಬ ಪ್ರಶ್ನೆಯಿಂದ ಭಾರತದಲ್ಲಿ ಹೇಗೆ ಎಲ್ಲ ಭಾಷೆಗಳಲ್ಲೂ ಸಂಸ್ಕೃತದ ಬಳಕೆಯಿದೆ ಎಂಬುದನ್ನು ಸೂಚಿಸುತ್ತಾರೆ. ನಮ್ಮ ಜೀವನ ಎಂಬ ಗಂಗಾ ನದಿಯು ಸಂಸ್ಕೃತಮಾತೆಯೆಂಬ ಹಿಮಾಲಯದ ಬತ್ತದ ಎದೆಯಿಂದ ದಾನ ಮಾಡುವ ಪುಣ್ಯತೀರ್ಥದಿಂದ ತುಂಬಿ ಚಿರಕಾಲದಿಂದ ಹರಿಯುತ್ತಿದೆ- ಎಂದು ಸದಾ ತುಂಬಿ ಹರಿಯುತ್ತಿರುವ ಗಂಗೆಯನ್ನು ನಮ್ಮ ಜೀವನಕ್ಕೆ ಹೋಲಿಸಿ ಅದಕ್ಕೆ ಪೂರಣವಾದರೂ ಸಂಸ್ಕೃತದ ಹಿಮಾಲಯದಿಂದ ಬರುತ್ತಿದೆ ಎಂದು ವರ್ಣಿಸುತ್ತಾರೆ! ಇಲ್ಲಿ ಗಮನಿಸಬಹುದು- ಹಿಮಾಲಯ ಎಷ್ಟು ಕೊಟ್ಟರೂ ಕರಗಿ ಕಿರಿದಾಗಿಲ್ಲ! ಗಂಗೆಯ ಒಡಲನ್ನು ತುಂಬುವಷ್ಟನ್ನೂ ಹಿಮಾಲಯ ಕೊಡಬಲ್ಲದು! ಗಂಗೆ ಕೂಡ ಹಿಮಾಲಯದಿಂದಲೇ ನೀರನ್ನು ಪಡೆದಿದ್ದರೂ ಹಿಮಾಲಯಕ್ಕಿಲ್ಲದ ಪಾವಿತ್ರ್ಯವನ್ನು ಅಥವಾ ಪುಣ್ಯಪ್ರದಾಯಕತ್ವವನ್ನು ಪಡೆದಿದೆ. ಹೀಗೆ ಹಲವು ಸಾರ್ಥಕವಾದ ಬಹುಧಾಪರೀಶೀಲನಯೋಗ್ಯವಾದ ಉಪಮೆಗಳನ್ನು ಕೊಡುತ್ತಾರೆ. ಆ ಬಳಿಕ
ಹೇ ದಿವ್ಯ ಸಂಸ್ಕೃತ ಹಿಮಾಚಲವೆ,
ಗಗನ ಚುಂಬಿತಮಾಗಿ ಬೆಳೆದು ನೀ ನಿಂತಿರುವೆ
ಸ್ಥಿರತೆಯದು ಸಾವಲ್ಲ, ಜೀವಿತ ಚರಮಲಕ್ಷ್ಯ!
ಅದೇ ಕಲ್ಪನೆಯನ್ನು ಮುಂದುವರೆಸಿಕೊಂಡು ಸಂಸ್ಕೃತವನ್ನು ಹಿಮಾಲಯಕ್ಕೆ ಹೋಲಿಸುತ್ತಾರೆ. ನೀನು ಗಗನಚುಂಬಿಯಾಗಿ ಬೆಳೆದಿರುವೆ. ನಿಂತುಕೊಂಡಿರುವುದು ಎಂಬುದು ಸಾವಲ್ಲ! ಅದೇ ಜೀವಿತದ ಕೊನೆಯ ಗುರಿ.
ಬೆಳೆಯುತಿಹ ನಿನ್ನೀ ಹಸುಳೆಗಳಿಗೆ ತಾವ ಕೊಡು
ಹರಕೆಗೈ! ಸ್ತನ್ಯಪಾನವ ನೀಡು ಹೇ ಜನನಿ!
ಹಸಿದ ಹಸುಳೆಯ ಕೈಯ ಅಶನವನು ಕಸಿಯುವುದು
ಹಿರಿಯ ಸಂಸ್ಕೃತಿ ಪಡೆದ ಸಂಸ್ಕೃತ ಮಹೀಯಸಿಗೆ
ಗೌರವದ ಕುರುಹಲ್ಲ! ತಾಯಿ ಮಗುವಿಗೆ ಕರುಬಿ
ವೈಯಾರಿಯಾಗುವುದು, ಅಯ್ಯೊ, ಲಕ್ಷಣವಲ್ಲ!
ಮಗು ಬೆಳೆಯಲೆಳಸುವುದು ಜನನಿಯ ಮರಣಕಲ್ಲ;
ಜನನಿಗದು ಅಭಿಮಾನ, ತೇಜಸ್ಸು , ಶ್ರೇಯಸ್ಸು!
ಸಂಪ್ರದಾಯದ ಆರ್ಯೆ, ನಿನಗೇಕೆ ತರಳೆಯರ
ಈ ನವನವೀನ ಪರಸಂಸ್ಕೃತಿಯ ಅನುಕರಣ
ಲೋಲುಪತೆ? ಅದು ನಮಗಿರಲಿ ಬಿಡು, ಜಗದ್ವಂದ್ಯೆ!
ಹೀಗೆ ಮುಗಿಯುವ ಕವಿತೆಯ ಕೊನೆಯ ಸಾಲುಗಳಲ್ಲಿ ಕುವೆಂಪು ಅವರ ದೃಷ್ಟಿ ಸ್ಪಷ್ಟವಾಗುತ್ತದೆ. “ಸಂಸ್ಕೃತಮಾತೆಯೇ ಬೆಳೆಯುತ್ತಿರುವ ನಿನ್ನ ಹಸುಳೆಗಳಿಗೆ ತಾಣವನ್ನು ಕೊಡು, ಹರಸು, ಸ್ತನ್ಯಪಾನವ ನೀಡು” ಎಂದು ಉಳಿದ ಭಾಷೆಗಳು ಸಂಸ್ಕೃತದ ಜೊತೆಯಲ್ಲಿ ಹೋಲಿಸಿದರೆ ಶೈಶವದಲ್ಲಿದೆ ಅವುಗಳು ಬೆಳೆಯುವುದಕ್ಕೆ ನಿನ್ನ ಪೋಷಣೆ ಅವಶ್ಯಕವಾಗಿದೆ, ಮಕ್ಕಳ ಮೇಲೆ ತಾಯಿ ಕೋಪಿಸಿಕೊಳ್ಳುವುದು ಹಿತವಲ್ಲ! ಮಗು ಬೆಳೆಯುವುದು ತಾಯಿಯ ಮರಣಕ್ಕಲ್ಲ. ತಾಯಿಗೆ ಅದು ಅಭಿಮಾನ ಶ್ರೇಯಸ್ಸನ್ನು ಕೊಡುತ್ತದೆ. ಪರಸಂಸ್ಕೃತಿಯ ಅನುಕರಣ ಮಾಡುವ ಲೋಲುಪತೆ ನಿನಗೆ ಬೇಡ. ಅದು ನಮಗಿರಲಿ ಎಂದು.
ಇಲ್ಲಿ ಕವಿಗಳ ಅಂತರಂಗದಲ್ಲಿ ಸಂಸ್ಕೃತದ ಕುರಿತು ಅವರಿಗಿರುವ ಗೌರವ ತಿಳಿಯುತ್ತದೆ. ಕಾರಣ ಆ ಪ್ರೌಢಿಯನ್ನು ಒದಗಿಸುವ ಸಂಸ್ಕೃತದ ಶಕ್ತಿಯ ಬಗ್ಗೆ ಚೆನ್ನಾಗಿ ಅರಿವಿರುವುದೇ ಆಗಿದೆ. ಹಾಗಾಗಿಯೇ ನಾರಿಕೇಳಪಾಕದ ಸಂಸ್ಕೃತಭೂಯಿಷ್ಠವಾದ ಸಮಸ್ತಪದಗಳ ಗುಂಫನವನ್ನು ಮಾಡುವ ಶಕ್ತಿ ಅವರಿಗೆ ಒದಗಿದೆ. ಅವರ ಕಾವ್ಯದಲ್ಲಿ ಹಲವು ಹೊಸಗನ್ನಡದ ರೂಪಗಳಿದ್ದರೂ ಸಂಸ್ಕೃತದ ಸಂಲೇಪದಿಂದ ಪ್ರೌಢವಾದ ಹಳಗನ್ನಡದ ರೂಪವೆಂಬಂತೆ ಭಾಸವಾಗುತ್ತದೆ. ಹಾಗಿದ್ದರೂ ಕೂಡ ಅದು ಅರ್ಥವಾಗದ ಕಗ್ಗಂಟಾಗದೇ ಸವಿಯಲೂ ಸಾಧ್ಯವಾಗುತ್ತದೆ. ಇಂತಹ ರಸವತ್ಕವಿತೆಗಳನ್ನು ಅಗಣಿತವಾಗಿ ಬರೆದವರನ್ನು ಕೇವಲ ಜಾತಿಗೋ ಮತಕ್ಕೋ ಅಥವಾ ಇನ್ನಾವುದೋ ದುರುದ್ದೇಶಕ್ಕೋ ಬಳಸಿಕೊಳ್ಳುತ್ತಿರುವುದು ವಿಡಂಬನೆಯಷ್ಟೇ!

RELATED ARTICLES  ನೆಮ್ಮದಿ ಎಲ್ಲಿದೆ….?