45

 

ಸಿದ್ದರಾಮಯ್ಯ ನೇತ್ರತ್ವದ ರಾಜ್ಯಸರಕಾರ ಹಿಂದುಳಿದ ಜಾತಿ ಮತ್ತು ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುವ ಯೋಜನೆಯನ್ನು ಪ್ರಕಟಿಸಿದೆ. ಚುನಾವಣೆ ಹತ್ತಿರ ಬಂದಂತೆ ವೋಟ್‍ಬ್ಯಾಂಕ್ ರಾಜಕಾರಣ ಮಾಡುವ ಸರಕಾರಗಳ ಖಾಯಿಲೆ ಹೊಸದೇನಲ್ಲ. ಆದರೆ ನಾಲ್ಕು ವರ್ಷಗಳಿಂದಲೂ ಕರ್ನಾಟಕದ ಕಾಂಗ್ರೆಸ್ ಸರಕಾರ ಮಾಡಿದ್ದು ಅದನ್ನೇ ಅಲ್ಲವೇ? ನನಗನ್ನಿಸುವ ಪ್ರಕಾರ ಈ ಸರಕಾರವನ್ನು ಕಾಂಗ್ರೆಸ್ ಸರಕಾರವೆನ್ನುವದಕ್ಕಿಂತ ಸಿದ್ದರಾಮಯ್ಯ ಸರಕಾರವೆನ್ನುವದೇ ಸೂಕ್ತ. ಏಕೆಂದರೆ ಮೂಲ ಕಾಂಗ್ರೆಸ್ಸಿಗರೂ ಸಿದ್ದರಾಮಯ್ಯನವರ ಆಡಳಿತದ ಪರಿಯನ್ನು ಒಪ್ಪಲಾರರು. ಜಾತಿಯ ದ್ವೇಶಕ್ಕೆ ಬಿದ್ದವರಂತೆ ಆಡಳಿತ ನಡೆಸುತ್ತಿರುವ ರೀತಿಯನ್ನು ಜಾತ್ಯಾತೀತ ನಿಲುವಿನವರ್ಯಾರೂ ಸಹಿಸಲು ಸಾಧ್ಯವಿಲ್ಲ.
ಹಣದಲ್ಲೇ ಎಲ್ಲವನ್ನೂ ಅಳೆಯುವ ಈ ಕಾಲಘಟ್ಟದಲ್ಲಿ ಬಡತನವನ್ನು ಜಾತಿಯಿಂದ ಅಳೆಯುವದೇ ಅವೈಜ್ಞಾನಿಕ ಕ್ರಮ. ಇಂದು ರಾಜಕಾರಣಿಗಳು ಜಾತ್ಯಾತೀತ ಶಬ್ದಪ್ರಯೋಗ ಮಾಡಿದರೆಂದರೆ ಯಾವುದೋ ಜಾತಿಯೊಂದರ ಮತಗಳನ್ನು ಲೆಕ್ಕಹಾಕಿ ಓಲೈಕೆಗೆ ತೊಡಗುತ್ತಾರೆಂದೇ ಅರ್ಥ.ಸ್ವಾತಂತ್ಯಾನಂತರದ ಕಾಲದಿಂದಲೂ ಜಾತ್ಯತೀತತೆಯ ಹೆಸರಲ್ಲೇ ಜಾತೀಯತೆಯನ್ನು ಪೋಶಿಸಿಕೊಂಡು ಬರಲಾಗುತ್ತಿದೆ. ಸ್ವತಃ ಅಂಬೇಡ್ಕರ್ ಅವರೂ ಒಪ್ಪದಂತಹ ನೀತಿಯನ್ನ್ಪು ಅವರ ಹೆಸರಿನಲ್ಲಿ ಪೋಶಿಸಿಕೊಂಡು ಬರಲಾಗುತ್ತಿದೆ. ಸ್ವಾತಂತ್ರ್ಯಪೂರ್ವದಲ್ಲಿದ್ದ ಸಾಮಾಜಿಕ ವ್ಯವಸ್ತೆಯನ್ನೇ ಇಂದಿಗೂ ಇದೆಯೆಂದು ನಂಬಿಸಿಕೊಂಡುಬರಲು ರಾಜಕೀಯ ವ್ಯವಸ್ಥೆ ಪ್ರಯತ್ನಪಡುತ್ತಲೇಬರುತ್ತಿದೆ. ಕಣ್ತೆರೆದು ನೋಡಿದ ಪ್ರತಿಯೊಬ್ಬ ಪ್ರಜೆಗೂ ಸಮಾಜ ಅಲ್ಲಿಗೇ ನಿಂತುಹೋಗಿಲ್ಲವೆನ್ನುವದು ಅರ್ಥವಾಗುತ್ತಿದೆಯಾದರೂ ರಾಜಕೀಯ ವ್ಯವಸ್ಥೆ ಮಾತ್ರ ಮತಗಳಿಕೆಗೆ ಜಾತಿವೈಷಮ್ಯವನ್ನೇ ನಂಬಿ ಕುಳಿತುಬಿಟ್ಟಿದೆ. ಸಮಾಜವನ್ನು ಛಿದ್ರಮಾಡಿ ಅದರಲ್ಲಿ ತಮಗೆ ಬೇಕಾದ್ದನ್ನು ಮಾತ್ರ ಪಡೆಯುವದು ರಾಜಕಾರಣವಾಗಿಬಿಟ್ಟಿದೆ. ಬ್ರಿಟೀಶರು ಭಾರತ ಬಿಟ್ಟು ತೊಲಗಿದರೂ ಅವರು ತಂದ ಈ ನೀತಿ ಇಂದಿಗೂ ಭಾತವನ್ನಾಳುತ್ತಿದೆ. ಹೇಗೆ ಭಾರತೀಯರನ್ನು ಒಡೆದು ಒಬ್ಬರಮೇಲೊಬ್ಬರನ್ನು ಕಟ್ಟಿ ತಮ್ಮ ಬೇಳೆಯನ್ನು ಆಂಗ್ಲರು ಬೇಯಿಸಿಕೊಂಡರೋ ಅದೇ ನೀತಿಯನ್ನೇ ಸ್ವತಂತ್ರಭಾರತದ ರಾಜಕಾರಣ ಮುಂದುವರೆಸಿಕೊಂಡಿದ್ದರೂ ನಾವೆಲ್ಲ ಇದನ್ನೇ ಸ್ವತಂತ್ರವೆಂದು ಆನಂದಿಸುತ್ತಿದ್ದೇವೆ.
ಶೋಷಿತ ಪದವನ್ನು ಬಹುತೇಕ ಎಲ್ಲಾ ರಾಜಕಾರಣಿಗಳೂ ಬಳಸುತ್ತಾರೆ. ಇವತ್ತು ಶೋಷಣೆಯ ಲೆಕ್ಕಾಚಾರ ಇನ್ನೊಂದು ವ್ಯಾಖ್ಯೆಯನ್ನು ಪಡೆದುಕೊಂಡಿದೆ. ನನ್ನ ಪ್ರಕಾರ ಇವತ್ತಿನ ಸಾಮಾನ್ಯ ಪ್ರಜೆಗಳೆಲ್ಲರೂ ರಾಜಕೀಯ ಶೋಷಿತರು. ಏಕೆಂದರೆ ತೆರಿಗೆಗೆ ಪ್ರತ್ಯೇಕ ಪದ್ಧತಿಗಳಿಲ್ಲ.ತೆರಿಗೆ ಹಣಕಾಸಿನ ಸ್ಥಿತಿಗತಿಗನುಸಾರ ಸ್ವೀಕಾರವಾಗುತ್ತದೆ. ಆದರೆ ಸರಕಾರ ಕೊಡಮಾಡುವ ಸವಲತ್ತುಗಳು ಮಾತ್ರ ಸಂಪೂರ್ಣ ಆಳುವವರ ಮರ್ಜಿ. ಯೋಜನೆಗಳನ್ನು ಜಾತಿಯಾಧಾರದಲ್ಲಿ ನೀಡಲಾಗುತ್ತದೆ. ಒಂದೇ ಜಾತಿಯವರೆಲ್ಲ ಬಡವರು ಅಥವಾ ಶ್ರೀಮಂತರೆಂದು ಹೇಗೆ ನಿರ್ಧರಿಸುತ್ತಾರೆ ಎಂದೇ ತಿಳಿಯುವದಿಲ್ಲ. ಬ್ರಾಮ್ಹಣರೆಲ್ಲರೂ ಅಥವಾ ಮತ್ಯಾವುದೋ ಮೇಲ್ವರ್ಗವೆಂದು ಗುರುತಿಸಿದ ಜಾತಿಯವರೆಲ್ಲ ಶ್ರೀಮಂತರು, ಅವರುಗಳಿಗೆ ಯಾವುದೇ ಸರಕಾರಿ ಪ್ರೋತ್ಸಾಹ ಅಗತ್ಯವಿಲ್ಲವೆಂದು ಹೇಳುವ ಮಾನದಂಡವಾದರೂ ಯಾವುದು ಮತ್ತು ಯಾರು ನಿಗದಿಪಡಿಸಿದರು ಎನ್ನುವದನ್ನು ಇವತ್ತಿನವರೆಗೆ ಯಾರೂ ಹೇಳಿಲ್ಲ. ಹಾಗಿದ್ದರೆ ಬ್ರಾಮ್ಹಣನೊಬ್ಬ ಆರ್ಥಿಕವಾಗಿ ತೀರಾ ಬಡವನಾಗಿದ್ದರೂ ಅವನಿಗೆ ಯಾವುದೇ ಸವಲತ್ತು ಸಿಗಬಾರದು ಎಂದು ಯಾವ ಸಂವಿಧಾನದಲ್ಲಿ ಬರೆದಿದ್ದಾರೆ ಎಂದು ಆಳುವವರು ತೋರಿಸಿಕೊಡಬೇಕಾಗುತ್ತದೆ. ಜಾತಿಯಷ್ಟೇ ಅಲ್ಲ ಇಲ್ಲಿ ಧರ್ಮಗಳನ್ನೂ ಸಮಾಜವೊಡೆಯಲು ಬಳಸಲಾಗುತ್ತಿದೆ.
ಮಾನ್ಯ ಸಿದ್ದರಾಮಯ್ಯನವರು ಮುಸ್ಲೀಮರಿಗಾಗಿ ಶಾದಿಭಾಗ್ಯ ಯೋಜನೆ ಜಾರಿಗೆತಂದರು. ಅಂತಹ ಯೋಜನೆಯೊಂದರ ಅಗತ್ಯವೇ ಇರಲಿಲ್ಲ. ಸಿದ್ದರಾಮಯ್ಯ ಅಧಿಕಾರಕ್ಕೆ ಬರುತ್ತಾರೆ,ಬಂದ ನಂತರ ಮದುವೆಯಾಗೋಣವೆಂದು ಹಾಗೇ ಇದ್ದ ಮುಸ್ಲೀಮ್ ಯುವಕನೊಬ್ಬನನ್ನೂ ತೋರಿಸಲಂತೂ ಸಾಧ್ಯವಿಲ್ಲ. ಹಿಂದೆಯೂ ಮುಸ್ಲೀಮರು ಮದುವೆಯಾಗಿದ್ದಾರೆ ಮತ್ತು ಮುಂದೆಯೂ ಮದುವೆಯಾಗುತ್ತಾರೆ. ಆದರೆ ಕೇವಲ ಮುಸ್ಲೀಮರು ಮಾತ್ರ ಮದುವೆಯಾಗುವದಿಲ್ಲ, ಇಲ್ಲಿ ಎಲ್ಲಾ ಧರ್ಮದ, ಜಾತಿಯ ಜನರೂ ಮದುವೆಯಾಗುತ್ತಾರೆ. ಮದುವೆಯಾಗುವದಕ್ಕೂ ಆರ್ಥಿಕ ಬಡತನವಿದ್ದವರು ಯಾವುದೋ ದೇವಸ್ಥಾನದಲ್ಲಿ ಆಗುತ್ತಿದ್ದಾರಲ್ಲ. ಧರ್ಮಸ್ಥಳದಂತಹ ದೇವಾಲಯಗಳಲ್ಲಿ ಸಾಮೂಹಿಕ ವಿವಾಹ ಉಚಿತವಾಗಿ ನಡೆಯುತ್ತಿದೆ. ಹೀಗಿರುವಲ್ಲಿ ಕೇವಲ ಮುಸ್ಲೀಮ್ ಧರ್ಮದವರಿಗಾಗಿ ಮಾತ್ರ ಶಾದಿಭಾಗ್ಯ ಯೋಜನೆ ತಂದಿದ್ದು ಇಡೀ ರಾಜ್ಯದ ತೆರಿಗೆದಾರರಿಗೆ ಮಾಡಿದ ವಂಚನೆಯಲ್ಲದೆ ಇನ್ನೇನು ?ನಾವಿ ಕೊಡುವ ತೆರಿಗೆ ಯಾರದೋ ಮದುವೆಗೆ ಮಂಚಕ್ಕೆ ಆಗುವದಾದರೆ ನಮ್ಮ ಅಕ್ಕಪಕ್ಕದಲ್ಲಿರುವ ಬಡವರಿಗೆ ಮದುವೆಯಾಗಲು ದಾನ ಮಾಡಬಹುದು.ಅದಕ್ಕೆ ಸರಕಾರವೇ ಆಗಬೇಕೆ ? ಇಷ್ಟಕ್ಕೂ ಒಂದು ಧರ್ಮದವರ ಮದುವೆ ಮಾಡುವದು ಸರಕಾರದ ಕೆಲಸವೇನಲ್ಲ. ಹಾಗೆ ಬಡವರ ಮದುವೆಗೆ ಸಹಾಯ ಮಾಡುವದಿದ್ದರೆ ಆರ್ಥಿಕ ಅನುಕೂಲತೆಗಳ ಮೇಲೆ ಯೋಜನೆ ತರಬಹುದಾಗಿತ್ತು. ಇವತ್ತಿಗೂ ಭಿಕ್ಷೆ ಎತ್ತಿ ಮಗಳ ಮದುವೆ ಮಾಡುತ್ತೇನೆ ಸಹಾಯಮಾಡಿ ಎಂದು ತಿರುಗಾಡುವ ಯಾವ ಮೇಲ್ವರ್ಗದವನೂ ಕಾಣದಿದ್ದಿದ್ದು ಸರಕಾರದ ಕುರುಡುತನವಲ್ಲವೆ? ಜನತಾದರ್ಶನಗಳಲ್ಲಿ ಅರ್ಜಿ ಕೊಡುವದಕ್ಕೂ ಬೆಂಗಳೂರಿಗೆ ಬರಲೂ ಆರ್ಥಿಕ ಶಕ್ತಿಯಿಲ್ಲದ ಮೇಲ್ವರ್ಗದ ಎಷ್ಟು ಜನರನ್ನು ತೋರಿಸಲಿ? ಅವರು ಬಡವರಲ್ಲವೆಂದು ಈ ಸರಕಾರ ಹೇಳುತ್ತದೆಯಾದರೆ ಹಿಂದುಳಿದ ವರ್ಗದ ಮಂತ್ರಿಯೊಬ್ಬನ ಕೋಟಿ ಕೋಟಿ ಬೆಲೆಬಾಳುವ ಮಹಲು ಜೋಪಡಿಯೆಂದು ಒಪ್ಪೋಣವೇ?! ಅಧಿಕಾರದ ಉತ್ತುಂಗದಲ್ಲಿರುವವನೂ ಜಾತಿಯ ಹೆಸರಲ್ಲಿ ಫಲಾನುಬವಿಯಾಗುತ್ತಾನೆ.ಆದರೆ ಜಾತಿಯೇ ಗೊತ್ತಿಲ್ಲದವನೊಬ್ಬ ತನ್ನ ಬಡತನವನ್ನು ಹಳಿಯುತ್ತ ಗುಡಿಸಲಿನಲ್ಲಿ ಹಳಹಳಿಸುತ್ತಾನೆ.ಇದು ಜಾತೀಯನ್ನು ಪರಿಗಣಿಸಿ ತರುವ ಯೋಜನೆಗಳ ದುರಂತವಾಗಿದೆ.
ದಿವಂಗತ ರಾಮಕೃಷ್ಣ ಹೆಗಡೆಯವರ ಕನಸಿನ ಕೂಸು ಗ್ರಾಮೀಣ ವಿದ್ಯಾರ್ಥಿಗಳ ಬಸ್‍ಪಾಸ್. ನಾನು ನನ್ನಂತಹ ಲಕ್ಷಾಂತರ ಗ್ರಾಮೀಣ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲ ಕಲ್ಪಿಸಿದ್ದು ಈ ಯೋಜನೆ. ಅಂದು ರಾಮಕೃಷ್ಣ ಹೆಗಡೆಯವರ ದೂರದರ್ಶಿತ್ವದಿಂದ ಈ ಯೋಜನೆ ಜಾರಿಗೆ ಬಂದಿತ್ತು. ಸ್ವತಃ ಹಳ್ಳಿಗಾಡಿನಲ್ಲಿ ಓದಿ ಬೆಳೆದ ಅವರಿಗೆ ಗ್ರಾಮೀಣ ಪ್ರದೇಶದಿಂದ ಬರುವ ವಿದ್ಯಾರ್ಥಿಗಳ ಕಷ್ಟ ತಿಳಿದಿತ್ತು. ನನ್ನ ಓರಗೆಯ ಅದೆಷ್ಟೋ ಮಿತ್ರರು ಓದಿ ಒಂದು ಹಂತಕ್ಕೆ ಬಂದರೆಂದರೆ ಅದಕ್ಕೆ ಈ ಬಸ್‍ಪಾಸ್ ಯೋಜನೆಯೇ ಕಾರಣ. ಏಕೆಂದರೆ ಇಪ್ಪತ್ತು ಮೂವತ್ತು ಕಿಲೋಮೀಟರ್ ಕ್ರಮಿಸಿ ಶಾಲೆಗೋ ಕಾಲೇಜಿಗೋ ಹೋಗಬೇಕಾದ ಅನಿವಾರ್ಯತೆಯಲ್ಲಿ ಹೆಚ್ಚಿನ ಪಾಲಕರು ಇದು ನಮಗೆ ಸಾಧ್ಯವಾಗದ್ದು ಎಂದು ಮಕ್ಕಳನ್ನು ವಿದ್ಯಾಭ್ಯಾಸಕ್ಕೆ ಕಳುಹಿಸದೆ ಮನೆಕೆಲಸಕ್ಕೆ ಇರಿಸಿಕೊಂಡುಬಿಡುತ್ತಿದ್ದರು. ಎಂತೆಂತಹ ಗ್ರಾಮೀಣ ಪ್ರತಿಭೆಗಳು ಶಿಕ್ಷಣ ಪಡೆಯದೆ ಹಾಗೂ ತಮ್ಮ ಪ್ರತಿಭೆಯನ್ನು ಗುರುತಿಸಿಕೊಳ್ಳಲು ಸಾಧ್ಯವಾಗದೇ ಕಮರಿಹೋಗಿದ್ದವು. ಅಂತಹ ಪ್ರತಿಭೆಗಳಿಗೆ ಶಿಕ್ಷಣಕ್ಕೆ ಅವಕಾಶ ಮಾಡಿಕೊಟ್ಟಿದ್ದು ಈ ವಿದ್ಯಾರ್ಥಿ ಬಸ್‍ಪಾಸ್ ಯೋಜನೆ.ಉತ್ತರಕನ್ನಡದಂತಹ ಗುಡ್ಡಗಾಡು ಹೊಂದಿದ ಗ್ರಾಮೀಣ ಪ್ರದೇಶವನ್ನೇ ಹೊಂದಿದ ಜಿಲ್ಲೆಯಲ್ಲಿ ಈ ಯೋಜನೆ ಶಿಕ್ಷಣ ಕ್ರಾಂತಿಗೆ ಕಾರಣವಾಯಿತೆಂದರೂ ಮಿಥ್ಯೆಯಾಗಲಾರದು. ಗಮನಿಸಿ, ರಾಮಕೃಷ್ಣ ಹೆಗಡೆಯವರು ಸಮಾಜವಾದದ ನೆಲೆಯಲ್ಲಿ ಬಂದವರು. ಅವರ ಶಿಷ್ಯನೆಂದು ಹೇಳಿಕೊಳ್ಳುವ ಸಿದ್ದರಾಮಯ್ಯ ಹೇಳುತ್ತಿರುವದೂ ಸಮಾಜವಾದ. ಆದರೆ ರಾಮಕೃಷ್ಣ ಹೆಗಡೆಯವರು ತಂದ ಯೋಜನೆ ಯಾವುದೇ ಜಾತಿ ಧರ್ಮಗಳನ್ನು ಮೀರಿದ್ದು.ಕೇವಲ ಗ್ರಾಮೀಣ ವಿದ್ಯಾರ್ಥಿಗಳನ್ನು ಪರಿಗಣಿಸಿ ತಂದ ಯೋಜನೆಯಾಗಿತ್ತು. ಆದರೆ ಸಿದ್ದರಾಮಯ್ಯನವರು ತಂದಿದ್ದು ಜಾತೀಯ ಉದ್ದೇಶಗಳನ್ನಿಟ್ಟುಕೊಂಡು ತಂದ ಯೋಜನೆ. ಸಮಾಜವಾದದಲ್ಲೇ ಗುರು ಶಿಷ್ಯರಿಗೆ ಎಂತಾ ವ್ಯತ್ಯಾಸ ! ಇಷ್ಟಕ್ಕೂ ಜಾತಿಯನ್ನು ಪರಿಗಣಿಸಿ ಸವಲತ್ತು ನೀಡುವದನ್ನು ಸಮಾಜವಾದದ ಉನ್ನತ ಚಿಂತನೆಗಳನ್ನು ಹೊಂದಿದ ರಾಮಕೃಷ್ಣ ಹೆಗಡೆಯವರು ಈಗಿದ್ದರೂ ವಿರೋಧಿಸುತ್ತಿದ್ದರೇನೋ. ಹುಟ್ಟಿದ ಮಗುವಿನ ತಲೆಗೇ ಜಾತಿಯ ಬೀಜವನ್ನು ತುಂಬುವಂತಹ ಯೋಚನೆ ಯೋಜನೆಗಳನ್ನು ನೀಡುವ ಸರಕಾರಗಳು ಜಾತ್ಯಾತೀತತೆಯ ಭಾಷಣಗಳನ್ನು ಮಾತ್ರ ಮಾಡುತ್ತವೆ.
ಯಾವತ್ತು ಜಾತಿ ಧರ್ಮಗಳ ಹಿಂದೆ ರಾಜಕೀಯ ವ್ಯವಸ್ಥೆ ಬಿದ್ದಿರುತ್ತದೆಯೋ ಅಲ್ಲಿಯವರೆಗೆ ದೇಶದ ಬಡತನ ನಿರ್ಮೂಲನೆಯಾಗುವದಿಲ್ಲ.ರಾಜಕೀಯ ವ್ಯವಸ್ಥೆಗೆ ಬಡತನ ನಿರ್ಮೂಲನೆಯಾಗುವದು ಬೇಕಿಲ್ಲ. ಏಕೆಂದರೆ ಬಡತನದ ಹೆಸರಿನಲ್ಲಿ ಜಾತೀಯತೆಯನ್ನು ಪೋಶಿಸಿಕೊಂಡು ಬರಲು ಸಾಧ್ಯವಾಗಲಾರದು.ವಿದ್ಯಾರ್ಥಿಗಳಿಗೆ ಉಚಿತ ಬಸ್‍ಪಾಸ್ ಕೊಡುವದಿದ್ದರೆ ಬಡತನ ನೋಡಿ ಕೊಡಲಿ ಹೊರತು ಜಾತಿ ನೋಡಿ ಅಲ್ಲ.

RELATED ARTICLES  ಸನ್ಮಾರ್ಗವೇ ಜೀವನದ ಹರುಷ ಲೇಖನ ಮಾಲಿಕೆ