11 2
     ರಂಗವಲ್ಲಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ.ಮನೆಯ ಅಥವಾ ದೇವಸ್ಥಾನದ ಮುಂಬಾಗಿಲಲ್ಲಿ ಹೊಸ್ತಿಲಲ್ಲಿ,ದೇವರ ಗೂಡಲ್ಲಿ,ತುಳಸಿ ಕಟ್ಟೆಯ ಮುಂದೆ ರಂಗವಲ್ಲಿಯಿದ್ದರೆ ಅದನ್ನು ‘ಶುಭ’ದ ಸಂಕೇತವೆಂದೂ,ರಂಗವಲ್ಲಿಯಿಲ್ಲದಿದ್ದರೆ ಅದನ್ನು ಅಶುಭವೆಂದು ಸಾಂಕೇತಿಸಲಾಗುತ್ತಿತ್ತು.ರಂಗವಲ್ಲಿಯ ಕೆಳಗೆ ದೇವತೆಗಳು ವಾಸಿಸುತ್ತಾರೆಂದು,ರಂಗವಲ್ಲಿ ಅಡಿಯಿರುವ ದೇವತೆಗಳು ದುಷ್ಟಶಕ್ತಿಯಿಂದ ಕಾಪಾಡುತ್ತವೆಯೆಂದೂ ನಂಬಿಕೆಯಿತ್ತಂತೆ. ಭೂದೇವಿಯ ಸ್ವರೂಪಳಾಗಿರುವ ಭೂಮಿಯನ್ನು ಸಂಸ್ಕಾರ ಪೂರಕವಾಗಿ ಸಾರಿಸಿ,ಭಕ್ತಿ ಭಾವನೆಯಿಂದ ರಂಗವಲ್ಲಿ ರಚಿಸಿದರೆ,ಇದರಲ್ಲಿ ಆಹ್ವಾನಿತರಾದ ದೇವತೆಗಳು ಸದಾಕಾಲ ಮನೆಯಲ್ಲಿ ವಾಸವಾಗಿರುತ್ತಾರೆ,ಅದರಲ್ಲೂ ಲಕ್ಷ್ಮೀದೇವಿಯು ಅಂತಹ ಸುಸಂಸ್ಕೃತ ಮನೆಯಲ್ಲಿ ಶಾಶ್ವತವಾಗಿ ನೆಲೆಸುವಳೆಂಬ ನಂಬಿಕೆಯೂ ಇದೆಯಂತೆ.ಇನ್ನೂ ಕೆಲವೆಡೆ ರಂಗವಲ್ಲಿಯ ಮೇಲಿಡುವ ಅರಿಶಿನವನ್ನು ಲಕ್ಶ್ಮೀಗೆಂದೂ,ಕಂಕುಮವು ಗೌರಿಗೆಂದೂ ಪರಿಗಣಿಸುತ್ತಾರಂತೆ. ಹಿಂದೆ ಪುರಾಣಗಳಲ್ಲಿ ಸಿದ್ಧಪುರುಷರು,ಸಂತರು,ಸಾಧುಗಳು ರಂಗವಲ್ಲಿಯಿದ್ದರೇ ಮನೆಗೆ ಬರುತ್ತಿದ್ದರಂತೆ,ರಂಗವಲ್ಲಿಯಿಲ್ಲದ ಮನೆಗೆ ಕಾಲಿಡುತ್ತಿರಲಿಲ್ಲವಂತೆ.ಋಷಿಪತ್ನಿಯರೂ ಯಜ್ಞಮಂಟಪವನ್ನು ಸುಂದರವಾದ,ಅರ್ಥಪೂರ್ಣವಾದ ರಂಗವಲ್ಲಿಯಿಂದ ಅಲಂಕರಿಸಿರುತ್ತಿದ್ದರು.ಇದರಿಂದ ಕಲೆಯ ಆರಾಧಕನಾದ ಭಗವಂತನು ರಂಗವಲ್ಲಿಯ ಅಲಂಕಾರ ನೋಡಿ ಸಂತೋಷ ಪಡುತ್ತಾರೆಂಬ ನಂಬಿಕೆಯೂ ಇತ್ತಂತೆ.ಹೀಗೆ ಹಿಂದೂ ಸಂಸ್ಕೃತಿಯಲ್ಲೂ ರಂಗವಲ್ಲಿಗೆ ಅದರದ್ದೇ ಆದ ಮಹತ್ವವಿದೆ.
ರಂಗವಲ್ಲಿ ಕುರಿತು ಒಂದು ಸ್ವಾರಸ್ಯಕರವಾದ ಸಣ್ಣ ಕಥೆಯಿದೆ:
     ಒಮ್ಮೆ ಯಮಧರ್ಮರಾಜ ತನ್ನ ಪಾಶವನ್ನು ಹಿಡಿದು,ಕೋಣವನ್ನೇರಿ ಆಯುಷ್ಯ ಮುಗಿದಿದ್ದ ಸಾಧ್ವ್ವಿಯೊಬ್ಬಳ ಪತಿಯ ಪ್ರಾಣಹರಣಕ್ಕಾಗಿ ಭೂಲೋಕಕ್ಕೆ ಸೂರ್ಯೋದಯಕ್ಕೂ ಮುನ್ನವೇ ಬಂದಿದ್ದನಂತೆ.ಸಾಧ್ವಿಯ ಮನೆಯ ಮುಂದೆ ಬರುವಷ್ಟರಲ್ಲಾಗಲೇ ಅವಳು ಎದ್ದು,ತಾನೂ ಶುಭ್ರಗೊಂಡು-ಮನೆಯನ್ನೂ ಶುಭ್ರಗೊಳಿಸಿ ನಯನಮನೋಹರವಾದ ರಂಗವಲ್ಲಿಯಿಂದ ಮನೆಯಂಗಳವನ್ನು ಅಲಂಕರಿಸಿದ್ದಳಂತೆ.ಪ್ರಾಣಹರಣಕ್ಕೆಂದು ಅವರ ಮನೆಗೆ ಬಂದ ಯಮನೂ ಕೂಡ ಆ ರಮಣೀಯವಾದ ರಂಗವಲ್ಲಿಗೆ ಮಾರುಹೋಗಿ ಕೆಲವು ಕಾಲ ತಾನು ಬಂದ ಕಾರ್ಯವನ್ನೇ ಮರೆತನಂತೆ.ವಜ್ರಕಠೋರಿಯಾದ ತನ್ನನ್ನೂ ಕ್ಷಣಕಾಲ ತಡೆಹಿಡಿದ ರಂಗವಲ್ಲಿ ಕೌಶಲ್ಯಕ್ಕೆ ಶರಣಾಗಿ ಸಾಧ್ವಿಯ ಪತಿಯ ಆಯುಷ್ಯವನ್ನು ಹೆಚ್ಚುಪಡಿ ಮಾಡುವುದರ ಜೊತೆಗೆ,ಇನ್ಮುಂದೆ ಯಾರು ಸೂರ್ಯೋದಯಕ್ಕೆ ಮುನ್ನ ಸ್ನಾನ ಮಾಡಿ, ಮನೆಯ ಮುಂದೆ ಶುಭ್ರಗೊಳಿಸಿ,ಚೆಂದದ ರಂಗವಲ್ಲಿ ಹಾಕಿ ದೇವರನ್ನು ಪೂಜಿಸುತ್ತಾರೆಯೋ ಅಂತಹ ಸಾಧ್ವಿಯರ ಪತಿಯ ಪ್ರಾಣವನ್ನು ತಾನು ಕೊಂಡೊಯ್ಯುವುದಿಲ್ಲವೆಂದು ಆಶ್ವಾಸನೆ ನೀಡುತ್ತಾನಂತೆ. ಇದೇ ಕಾರಣದಿಂದ ಅನಾದಿಕಾಲದಿಂದಲೂ ರಂಗವಲ್ಲಿ ಹಾಕುವುದು ಸಂಪ್ರದಾಯವಾಗಿದೆಯೆಂದೂ ಹೇಳುತ್ತಾರೆ.
      ಬಹುತೇಕ ಎಲ್ಲಾ ಕಡೆ ಅಂದರೆ ಕಾಶ್ಮೀರದಿಂದ ಕನ್ಯಾಕುಮಾರಿಯ ತನಕವೂ ರಂಗವಲ್ಲಿ ಇಡುವ ಪದ್ಧತಿಯಿದೆ.ಗೃಹಿಣಿಯಾದವಳು ಮುಂಜಾನೆ(ನಸುಕಲ್ಲಿ) ಸ್ನಾನ ಮಾಡಿ,ಮೊದಲು ಮಾಡುವ ಕೆಲಸವೇ ದೇವರ ಮುಂದೆ,ಮನೆಯ ಮುಂದೆ ಗುಡಿಸಿ ಸಾರಿಸಿ ರಂಗವಲ್ಲಿ ಹಾಕುತ್ತಾರೆ.ಶುಭ ಸಮಾರಂಭಗಳಲ್ಲಿ,ಹಬ್ಬ ಹರಿದಿನಗಳಲ್ಲಿ ಮನೆಯ ಮುಂದೆ ವಿಶೇಷವಾದ ರಂಗವಲ್ಲಿ ಹಾಕುವುದೇ ಸಂಪ್ರದಾಯ. ರಂಗೋಲಿ ಪುಡಿ,ಅಕ್ಕಿ ಹಿಟ್ಟು,ಕಾಳುಗಳು,ಹೂವುಗಳನ್ನುಪಯೋಗಿಸಿ ರಂಗವಲ್ಲಿ ಹಾಕುತ್ತಾರೆ.ಇನ್ನು ಬುಡಕಟ್ಟು ಜನಾಂಗಗಳಲ್ಲಿ ಇಂದಿಗೂ ವಿಶಿಷ್ಠವಾದ ಅಪರೂಪದ ರಂಗವಲ್ಲಿಗಳನ್ನು ಚಿತ್ರಿಸಲಾಗುತ್ತದಂತೆ. ಇನ್ನು ನಮ್ಮ ಪಕ್ಕದ ನಾಡು ಕೇರಳದಲ್ಲಿ ಆಚರಿಸುವ ‘ಓಣಂ’ ಹಬ್ಬಕ್ಕೆ ವಿಶೇಷವಾಗಿ ಹೂವುಗಳಿಂದ ರಂಗವಲ್ಲಿ ಹಾಕಿ(ಅದಕ್ಕೆ ಪೂಕಳಂ ಎಂದು ಕರೆಯುತ್ತಾರೆ) ವಾಮನನ್ನು ಸ್ವಾಗತಿಸುತ್ತಾರಂತೆ.ಹೀಗೆ ವಿಶೇಷವಾಗಿ ಹಬ್ಬ ಹರಿದಿನಗಳಲ್ಲಿ ವಿಶೇಷ ರಂಗವಲ್ಲಿಯನ್ನು ಚಿತ್ರಿಸಿ,ದೇವಾದಿ ದೇವತೆಗಳನ್ನು  ಮನೆಗೆ ಬರಮಾಡಿಕೊಳ್ಳುವ ಸಲುವಾಗಿ ಈ ಸಂಪ್ರದಾಯ ಆಚರಣೆಗೆ ಬಂತಂತೆ.
ವೈಚಾರಿಕವಾಗಿ ಹೇಳಿವುದಾದರೆ ರಂಗವಲ್ಲಿಯನ್ನು ಮನೆಗೆ ಏಳಿಗೆಯನ್ನು ಸೂಚ್ಯವಾಗಿ ಬಳಸುತ್ತಾರಂತೆ.ಅಂದರೆ ಹಿಂದಿನ ಕಾಲದಲ್ಲಿ ತಮ್ಮ ಎಳಿಗೆಯನ್ನು ಜನರ ಜೊತೆಗಲ್ಲದೇ ಸಣ್ಣಪುಟ್ಟ ಹಕ್ಕಿ-ಕೀಟ-ಇರುವೆಗಳಂತಹ ಜೀವಿಗಳ ಜೊತೆಯೂ ಹಂಚಿಕೊಳ್ಳಲು ಬಯಸಿ ರಂಗವಲ್ಲಿ ಬಿಡಿಸುತ್ತಿದ್ದರಂತೆ.ಆ ರಂಗವಲ್ಲಿಯ ಸೊಬಗು,ಮನೆಯಲ್ಲಿರುವ ಆಹ್ಲಾದಕರ ವಾತಾವರಣ ಜನರ ಮನಸ್ಸನ್ನು ಸೆಳೆದರೆ,ರಂಗವಲ್ಲಿಗೆ ಬಳಸುವ ಅಕ್ಕಿಹಿಟ್ಟು,ಹೂವು-ಕಾಳುಗಳು ಮೂಕಜೀವಿಗಳಿಗೆ ಆಹಾರವಾಗುತ್ತಿತ್ತಂತೆ.
ವೈಜ್ಞಾನಿಕವಾಗಿ ಹೇಳುವುದಾದರೆ ರಂಗವಲ್ಲಿ ಬಿಡಿಸುವಾಗ ಇಡುವ ಸಮವಾದ ಚುಕ್ಕಿ,ನಿಯಮಿತವಾದ ಚಿತ್ರಗಳು ನೋಡುಗರ ಕಣ್ಣಿನ ನರಗಳ ಮೇಲೆ ಧನಾತ್ಮಕ ಪರಿಣಾಮವನ್ನು ಬೀರುತ್ತದೆಯಂತೆ.ಜೊತೆಗೆ ರಂಗವಲ್ಲಿ ಹಾಕುವ ಹೆಣ್ಮಕ್ಕಳಿಗೆ ನಿಯಮಿತವಾದ ವ್ಯಾಯಾಮವಾದಂತಾಗಿ ಆರೋಗ್ಯ ಸುಧಾರಿಸಲು ಸಹಾಯಕವಾಗಬಲ್ಲದೂ ಎಂದು ಹೇಳಲಾಗುತ್ತದೆಯಂತೆ.
 ಈ ಎಲ್ಲಾ ವಿಚಾರಗಳಿಂದ ಮುಂಜಾವಿನಲ್ಲಿ ಮನೆಯ ಮುಂದೆ ರಂಗವಲ್ಲಿ ಬಿಡಿಸುವುದು ಒಳ್ಳೆಯದು ಎನ್ನುತ್ತಾರೆ.
RELATED ARTICLES  ಸ್ನೇಹ (ಕವನ)