5

ಕನಸು ಕಾಣಿರಿ, ಕನಸು ಕಾಣಿರಿ, ಕನಸು ಕಾಣಿರಿ
ಕನಸುಗಳು ಯೋಚನೆಯ ರೂಪ ತಾಳುತ್ತದೆ.
ಆ ಯೋಚನೆಗಳು ಕಾರ್ಯ ರೂಪಕ್ಕಿಳಿಯುತ್ತವೆ.”
ಎನ್ನುತ್ತಿದರು ನಮ್ಮ ಮಾಜಿ ರಾಷ್ಟ್ರಪತಿ ಎ.ಪಿ.ಜೆ ಅಬ್ದುಲ್ ಕಲಾಂ ಅದಕ್ಕವರು ಕೊಡುತ್ತಿದ್ದ ವಿವರಣೆ ಕೂಡಾ ಅಷ್ಟೇ ಕೂತುಹಲಕಾರಿಯಾಗಿತ್ತು. ಕನಸು ನನಸಾಗುವುದು ಆ ಮೇಲಿನ ಮಾತು, ಆದರೆ ನಿಮ್ಮಲ್ಲಿ ಕನಸೇ ಇಲ್ಲದಿದ್ದರೆ? ಎಂತಹ ಅದ್ಬುತವಾದ ಅಷ್ಟೇ ಹರಿತವಾದ ಮಾತಲ್ಲವೇ? ಇದು ”ಅಸಾಧ್ಯವಾದುದನ್ನು ಸಾಧ್ಯವಾಗಿಸುವ ಕನಸು ಕಾಣಿರಿ ನೀವು ಕಾಣುವ ಕನಸು ನನಸಾಗಿಯೇ ಆಗುತ್ತದೆ.” ಇದು ಅವರ ಆತ್ಮ ವಿಶ್ವಾಸದ ನುಡಿಯಾಗಿತ್ತು.
ಒಂದು ಉತ್ತಮ ಬದುಕಿಗೆ ಬೇಕಾದ ಏನನ್ನೇ ಆಗಲಿ ಆರೋಗ್ಯ, ಶಿಕ್ಷಣ, ಗುರಿ ಸಾಧನೆಗೆ ಅಗತ್ಯವಾದ ಸ್ವಾತಂತ್ರ್ಯ ಎಲ್ಲಕ್ಕಿಂತ ಮುಖ್ಯವಾಗಿ ಶಾಂತಿ ಇವನ್ನೆಲ್ಲ ನಮ್ಮ ಜನ ಪಡೆಯಬೇಕಾಗಿದೆ. ಅದಕ್ಕಾಗಿ ಕನಸು ಕಾಣಬೇಕಿದೆ. ಅಂತೆಯೇ ರಾಷ್ಟ್ರದ ಅಭಿವೃದ್ಧಿಯ ಕನಸು ಕಾಣುವವರಿಗೆ ಶೈಕ್ಷಣಿಕ ಪ್ರಗತಿಯ ಕನಸು ಬೀಳದಿರಲು ಸಾಧ್ಯವಿಲ್ಲ ಯಾಕೆಂದರೆ ದೇಶದ ಸರ್ವತೋಮುಖ ಅಭಿವೃದ್ಧಿಗೂ ಶಿಕ್ಷಣಕ್ಕೂ ನೇರ ಸಂಬಂಧವಿದೆ.
ವಾಸ್ತವವಾಗಿ ಶಿಕ್ಷಣದ ಕನಸುಗಳೇನು? ಶಿಕ್ಷಣದ ಕನಸುಗಳ ಬಗೆಗೆ ವಿದ್ವಜ್ಜನರಲ್ಲಿಯೇ ಅಭಿಪ್ರಾಯ ಬೇಧಗಳಿರುವಂತೆ ತೋರುತ್ತದೆ. ಅಲ್ಲದೇ ಕಾಣುವ ಕನಸುಗಳಲ್ಲೂ ಕಾಲದಿಂದ ಕಾಲಕ್ಕೆ ಬದಲಾವಣೆಗಳಾಗುತ್ತಿರುವುದನ್ನು ನೀವು ನಾವು ಕಾಣಬಹುದಾಗಿದೆ. ನಮ್ಮ ಪೂರ್ವಜರು ”ಯಾ ವಿದ್ಯಾ ಸಾ ವಿಮುಕ್ತಯೇ” ಎಂದರು. ಯಾವುದು ನಮಗೆ ಬ್ರಹ್ಮಜ್ಞಾನ ನೀಡಿ ಜೀವನ್ಮುಕ್ತಿಯನ್ನು ನೀಡುತ್ತದೊ ಅದನ್ನು ಶಿಕ್ಷಣ ಅಂದರು, ಅವರು ಅಂತಹ ಕನಸನ್ನು ಕಂಡರು. ಇಂದು ನಾವು ಮಗುವು ಜೀವನ ನಿರ್ವಹಣೆಗೆ ಅಗತ್ಯವಿರುವ ಸಾಮಥ್ರ್ಯಗಳನ್ನು ಗಳಿಸಿಕೊಳ್ಳುವುದನ್ನು ಶಿಕ್ಷಣ ಎನ್ನುತ್ತಿದ್ದೇವೆ. ಮಗುವು ಸಹಜ ಪರಿಸರದಲ್ಲಿ ಬದುಕಲು ಏನೆಲ್ಲಾ ಸಾಮಥ್ರ್ಯಗಳನ್ನು ಗಳಿಸಿಕೊಳ್ಳಬೇಕೋ ಅದನ್ನು ನೀಡುವುದೇ ಇಂದಿನ ಶೈಕ್ಷಣಿಕ ಕನಸಾಗಿದೆ. ಸ್ವಾತಂತ್ರ್ಯಾ ನಂತರ ಆರು ದಶಕಗಳು ಕಳೆದರೂ ಕೂಡಾ ”ಎಲ್ಲರಿಗೂ ಗುಣಾತ್ಮಕ ಶಿಕ್ಷಣದ ಕನಸು” ಕನಸಾಗಿಯೇ ಇದೆ. ಆದರೆ ನಾವು ನಿರಾಶವಾದಿಯಲ್ಲ ಎಂಬುದು ಸಮಾಧಾನ ತರುವ ಸಂಗತಿ.
ಯೋಚನೆಯೇ ಬಂಡವಾಳ, ಧೈರ್ಯ ಉತ್ಸಾಹವೇ ಉತ್ತಮ ಮಾರ್ಗ, ಕಠಿಣ ಪರಿಶ್ರಮವೇ ಎಲ್ಲ ಸಮಸ್ಯೆಗಳಿಗೂ ಪರಿಹಾರ ಅಲ್ಲವೇ? ನಮ್ಮ ಸಾಮಥ್ರ್ಯಗಳ ಮೇಲೆ ನಾವು ನಂಬಿಕೆ ಇಟ್ಟಾಗ ನಾವು ಯಾವ ಕನಸು ಕಾಣುತ್ತೇವೆ ಅದು ನನಸಾಗಿಯೇ ಆಗುತ್ತದೆ ಎಂಬ ವಿಶ್ವಾಸವಿಟ್ಟಾಗ ಫಲಕಾಣಲಾರಂಭಿಸುತ್ತದೆ. ಕನಸಿಗೂ ವಾಸ್ತವಕ್ಕೂ ಸಹಜವಾಗಿ ಅಂತರವಿದ್ದರೂ ಕಂಡ ಕನಸು ಕೆಲವು ಹಂತಗಳಲ್ಲಿ ನನಸಾಗಿರುವುದನ್ನು ನಾವೆಲ್ಲಾ ಒಪ್ಪಲೇಬೇಕು.
ಶಿಕ್ಷಣ ಕ್ಷೇತ್ರದ ದೀರ್ಘ ಪಯಣದ ಅವಲೋಕನ ಮಾಡಿದರೆ ವಾಸ್ತವದಲ್ಲಿ ಅಚ್ಚರಿಯ ಬದಲಾವಣೆಗಳನ್ನು ಅಲ್ಲಿ ನಾವು ಕಾಣಲು ಸಾಧ್ಯ ಸ್ವಾತಂತ್ರ್ಯಾನಂತರ ಹೆಣ್ಣುಮಕ್ಕಳ ಕಲಿಕೆಯಲ್ಲಿನ ಪ್ರಗತಿ, ಶಾಲಾ ಮಕ್ಕಳ ಹಾಜರಾತಿಯಲ್ಲಾದ ಹೆಚ್ಚಳ, ಶಾಲೆಯ ಮೂಲಭೂತ ಅಗತ್ಯಗಳನ್ನು ಪೂರೈಸಿದ ಪರಿ, ವಿನೂತನ ಕಾರ್ಯಕ್ರಮಗಳ ಜಾರಿ, ಶಿಕ್ಷಣ ಕ್ಷೇತ್ರದಲ್ಲಿ ಸಮುದಾಯವನ್ನು ತೊಡಗಿಸಿಕೊಂಡ ಜಾಣ ನಡೆ, ವಯಸ್ಕರಿಗೆ sಶಿಕ್ಷಣವನ್ನು ನೀಡುವಲ್ಲಿ ತೋರಿದ ಕಾಳಜಿ, ತರಬೇತಿಯ ಮೂಲಕ ಶಿಕ್ಷಕರನ್ನು ಪ್ರಬುದ್ಧಗೊಳಿಸಿದ ರೀತಿ ಒಂದೇ ಎರಡೇ ನೂರಾರು ಸಾವಿರಾರು ಗುಣಾತ್ಮಕ ಬದಲಾವಣೆಗಳಿಗೆ ಶಿಕ್ಷಣ ಕೇತ್ರವಿಂದು ಸಾಕ್ಷಿಯಾಗಿದೆ. ಆದರೂ ಕೂಡಾ ಕನಸಿಗೂ ವಾಸ್ತವಕ್ಕೂ ಅಂತರವಿದೆ ಎಂಬುದನ್ನು ನಾವು ಒಪ್ಪಲೇಬೇಕು. ಮಗುವಿನ ಸಹಜ ಸಾಮಥ್ರ್ಯಗಳನ್ನು ಚಿಗುರಿಸುವ ಕನಸು ಚಿಗುರಿನಲ್ಲಿಯೇ ಬಾಡಿ ಹೋಗಿದೆ ಎನ್ನದೇ ವಿಧಿಯಿಲ್ಲ. ಮೌಲ್ಯಗಳನ್ನು ಬೆಳೆಸುವ ಕನಸು ಕಂಡಿದ್ದ ಶೈಕ್ಷಣಿಕ ಕ್ಷೇತ್ರ ಸಮಾಜ ಉನ್ನತಿಗೆ ಅಗತ್ಯ ಮೌಲ್ಯಗಳನ್ನು ಬೆಳೆಸುವಲ್ಲಿ ವಿಫಲವಾಗಿರುವುದು ಕಹಿ ಸತ್ಯ ಶಿಕ್ಷಣ ಪಡೆದವರ ನಡತೆಯಲ್ಲಿ ಮಾನವೀಯ ಮೌಲ್ಯಗಳು ಕಡಿಮೆಯಾಗುತ್ತಿರುವುದು ವಿಷಾದನೀಯ. ವಿದೇಶಿ ಭಾಷೆಯ ಕುರುಡು ವ್ಯಾಮೋಹ ಅತಿಯಾದ ಅವಲಂಬನೆಗಳಿಂದಾಗಿ ಕೇವಲ ಅಂಕಗಳಿಕೆ ಮಾತ್ರವೇ ಶಿಕ್ಷಣದ ಗುರಿ ಎಂಬಂತಾಗಿದೆ. ಸಹಜವಾಗಿ ಕ್ಲುಪ್ತ ಸಮಯದಲ್ಲಿ ಅರಳಬೇಕಾದ ಹೂವೊಂದನ್ನು ಅವಧಿಗಿಂತ ಮೊದಲೇ ಬಲವಂತವಾಗಿ ಅರಳುವಂತೆ ಮಾಡುತ್ತಿರುವಂತೆ ತೋರುತ್ತದೆ. ಕ್ಷುಲ್ಲಕ ಕಾರಣಗಳಿಗೆ ತೀರಾ ಚಿಕ್ಕ ಚಿಕ್ಕ ಸಮಸ್ಯೆಗಳಿಗೆ ಹೆದರಿಯೋ ಎದುರಿಸಲಾಗದೆಯೋ ಜೀವ ಕಳೆದುಕೊಳ್ಳುತ್ತಿರುವ ಎಳೆಯರು ಯುವ ಜನತೆ ಶಿಕ್ಷಣದ ವೈಫಲ್ಯದ ಸಂಕೇತವಾಗಿದ್ದಾರೆ ಎಂದರೆ ತಪ್ಪಾಗಲಾರದು. ಬಹುಷಃ ಅದಕ್ಕೆ ಇರಬಹುದು ರಾಷ್ಟ್ರಕವಿ ಕುವೆಂಪುರವರು ಇಂದಿನ ಶಿಕ್ಷಣ ಪದ್ಧತಿಯನ್ನು “‘ಹಿಂದೆ ಗುರುವಿಲ್ಲ ಮುಂದೇ ಗುರಿ ಇಲ್ಲ ಸಾಗುತ್ತಿದೆ ಹೇಡಿ ಹಿಂಡು” ಎಂದು ಮಾರ್ಮಿಕವಾಗಿ ವಿಮರ್ಶಿಸಿದ್ದಾರೆ. ಅತ್ಯಂತ ಕುತೂಹಲದ ಸಂಗತಿಯೆಂದರೆ ಗುಣಾತ್ಮಕ ಶಿಕ್ಷಣದ ಗುರಿ ತಲುಪುವ ಪ್ರಯತ್ನದ ಈ ದೀರ್ಘ ಪಯಣದ ಮಧ್ಯ ಒಂದು ಹಂತದಲ್ಲಿ ಹಣಕಾಸಿನ ನೆರವಿನ ಕನಸು ಕಾಣಲಾಯ್ತು ಫಿಲಿಪ್ಸ್ ಕೂಂಬ್ಸ್‍ನ ಹೇಳಿಕೆಯಂತೆ ”Educational progress do not run on slogans and good Intention’s, they run on money” ಎನ್ನುತ್ತಾ ಕೋಟ್ಯಾಂತರ ರೂಪಾಯಿಗಳನ್ನು ಶಿಕ್ಷಣ ಕ್ಷೇತ್ರಕ್ಕೆ ಸುರಿಯಲಾಯ್ತು ಆದರೆ ಅದು ನಿರೀಕ್ಷಿತ ಪರಿಣಾಮ ಬೀರದೇ ಗುಣಾತ್ಮಕ ಶಿಕ್ಷಣವನ್ನು ಎಲ್ಲರಿಗೂ ನೀಡುವ ಕನಸು ನನಸಾಗುತ್ತಿಲ್ಲ. ಆ ನಿಟ್ಟಿನಲ್ಲಿ ಪ್ರಯಾಣ ಸ್ವಲ್ಪ ವೇಗವನ್ನು ಪಡೆದುಕೊಂಡಿದೆ ಅಷ್ಟೇ.
ದೇಶದ ಭವಿಷ್ಯವನ್ನು ರೂಪಿಸುವವರು, ಶಿಕ್ಷಣ ತಜ್ಞರು, ಚಿಂತಕರು ಕಂಡ ಕನಸು ಈ ಮಟ್ಟಿಗಾದರೂ ವಾಸ್ತವ ಸ್ಥಿತಿಗಿಳಿಯುವಾಗ ಶ್ರಮಿಸಿದ ಮನಸ್ಸುಗಳೆಷ್ಟೋ? ಯೋಚನೆ , ಯೋಜನೆಯ ರೂಪ ತಾಳಿ ಕಾರ್ಯಾಚರಣೆಗೆ ಬರುವ ಹಂತದಲ್ಲಿ ಶಿಕ್ಷಕನ ಪಾತ್ರ ಮಾತ್ರ ಹಿರಿದಾದದ್ದು, ಈ ಹಂತದಲ್ಲಿ ತೀವ್ರ ಒತ್ತಡದ ಮಧ್ಯೆಯೂ ತನ್ನ ಜವಾಬ್ದಾರಿಯನ್ನು ಶಿಕ್ಷಕ ನಿಭಾಯಿಸಿದ ಪರಿ ಇದೆಯಲ್ಲಾ ..ಅದು ಅನನ್ಯವಾದುದು.
”ಅರ್ಚಕಸ್ಯ ಪ್ರಭಾವೇನ ಶಿಲಾ ಭವತಿ ಶಂಕರಃ” ಎಂಬುದೊಂದು ಸಂಸ್ಕೃತ ಉಕ್ತಿ. ಅರ್ಚಕನ ಪ್ರಭಾವದಿಂದಾಗಿ ಸಾಮಾನ್ಯ ಶಿಲೆಯೂ ದೈವತ್ವವನ್ನು ಪಡೆದು ಪೂಜಿಸಲ್ಪಡುತ್ತದೆ ಎಂಬುದು ಇದರ ಭಾವಾರ್ಥ . ಈ ಮಾತನ್ನು ಶಿಕ್ಷಣ ರಂಗದ ವಿದ್ಯಾ ದೇಗುಲದ ಪೂಜಾರಿಗಳಾದ ಶಿಕ್ಷಕರಿಗೂ ಅನ್ವಯಿಸಬಹುದು. ಯಾವುದೇ ಯೋಜನೆಗಳು ಸಾಫಲ್ಯಗೊಳ್ಳಬೇಕಾದರೆ ಮೂರ್ತರೂಪ ಪಡೆಯಬೇಕಾದರೆ ಶಿಕ್ಷಕನ ಶ್ರಮ ಅಲ್ಲಿರುವುದು ಅತ್ಯಗತ್ಯ. ಶಿಕ್ಷಣ ಇಂದು ಕೇವಲ ನಾಲ್ಕು ಗೋಡೆಗಳ ನಡುವಿನ ಕಲಿಕೆಯಾಗಿರದೇ ತನ್ನ ಚೌಕಟ್ಟನ್ನು ಮೀರಿ ಹೊರಬಂದಿದೆ. ”ನಿಂತ ನೀರಾಗದೇ ಹರಿಯುವ ಪ್ರವಾಹವಾಗುತ್ತಿದೆ. ಹೊಸ ಪದ್ಧತಿಗಳ ಅನುಷ್ಠಾನ ಶಿಕ್ಷಕರ ಸಾಮಥ್ರ್ಯವನ್ನು ಅವಲಂಬಿಸಿದೆ. ಶಿಕ್ಷಣ ಕ್ಷೇತ್ರದ ಕನಸುಗಳು ಈ ಮಟ್ಟಿಗಾದರೂ ನನಸಾಗುವಲ್ಲಿ ಶಿಕ್ಷಕನ ಪಾತ್ರ ಗಮನಾರ್ಹವಾದದ್ದು. ಹಾಗಾದರೆ ಶಿಕ್ಷಣ ಕ್ಷೇತ್ರದ ಈ ಮಟ್ಟಿನ ಬದಲಾವಣೆಯಲ್ಲಿ ಶಿಕ್ಷಕವಹಿಸಿದ ಪಾತ್ರವೇನು? ಅದು ಖಂಡಿತಾ ನಿರ್ಲಕ್ಷಿಸುವಂತದ್ದಲ್ಲ.
ಶಿಕ್ಷಣದೆಡೆಗೆ ಮಕ್ಕಳ ಮನಸ್ಸನ್ನು ಆಕರ್ಷಿಸಿ ಅವರ ಮನ ಒಲಿಸಿ ಶಾಲೆಗೆ ಬರುವಂತೆ ಮಾಡಿದ್ದು ಅದು ಸಾಮಾನ್ಯ ಕಾರ್ಯವಲ್ಲ. ನಿರಂತರ ಬದಲಾವಣೆಗೆ ತನ್ನನ್ನು ಒಡ್ಡಿಕೊಳ್ಳುತ್ತಿರುವ ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆಗೆ ಸ್ಪಂದಿಸುತ್ತಾ ”ಬದಲಾವಣೆ ಜಗದ ನಿಯಮ” ಎಂದು ತಣ್ಣಗೆ ತನ್ನ ಕಾರ್ಯದಲ್ಲಿ ಮಗ್ನನಾಗಿರುವುದು ಸ್ಥಿತ ಪ್ರಜ್ಞನಿಗೆ ಮಾತ್ರ ಸಾಧ್ಯ. ಅಂತಹ ಸ್ಥಿತ ಪ್ರಜ್ಞತೆಯನ್ನು ಶಿಕ್ಷಕ ಇಂದು ಪ್ರದರ್ಶಿಸುತ್ತಿರುವುದು ಗಮನಾರ್ಹ ಸಂಗತಿ. ಸಮುದಾಯದ ಸಹಭಾಗಿತ್ವಕ್ಕೆ ಶಿಕ್ಷಣ ಕ್ಷೇತ್ರದ ಬಾಗಿಲು ತೆರೆದುಕೊಂಡಾಗ ಕೆಲವು ಆತಂಕದ ಕ್ಷಣಗಳ ಮಧ್ಯೆಯೂ ನಿರಾತಂಕವಾಗಿ ಶಿಕ್ಷಣ ಕ್ಷೇತ್ರದಲ್ಲಿ ಗುಣಾತ್ಮಕ ಬದಲಾವಣೆಗೆ ಕಾರಣರಾದ್ದು ಶಿಕ್ಷಕರ ಹೆಗ್ಗಳಿಕೆ ಎಂದರೆ ಅತಿಶಯೋಕ್ತಿಯಲ್ಲ. ರಾಷ್ಟ್ರೀಯ ಕಾರ್ಯಕ್ರಮಗಳ ಅನುಷ್ಠಾನ ಹಂತದಲ್ಲಿ ತನ್ನ ಕಾರ್ಯಬಾಹುಳ್ಯದ ಮಧ್ಯದಲ್ಲಿಯೂ ಗೊಣಗುತ್ತಾದರೂ ಅಚ್ಚುಕಟ್ಟಾಗಿ ಆ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಿದ್ದು ಶಿಕ್ಷಕನ ಸಾಮಥ್ರ್ಯಕ್ಕೆ ಸಾಕ್ಷಿ. ಹರಿದು ಬಂದ ಹಣಕಾಸಿನ ನೆರವಿನ ಮಧ್ಯೆಯೂ ”ಕೆಸರಿನ ಕಮಲದಂತೆ” ತನ್ನ ಶುದ್ಧತೆಯನ್ನೂ ಬದ್ಧತೆಯನ್ನೂ ಪ್ರದರ್ಶಿಸಿ ತನ್ನ ವೃತ್ತಿಗೆ ಗೌರವ ತಂದ ಶಿಕ್ಷಕ ಶಿಕ್ಷಣ ಕ್ಷೇತ್ರದ ವಾಸ್ತವದ ಬದಲಾವಣೆಗಳಿಗೆ ಮೂಲ ಕಾರಣ ಎಂದರೆ ತಪ್ಪಾಗಲಿಕ್ಕಿಲ್ಲ.
ಈ ಎಲ್ಲಾ ಯಶಸ್ಸಿನ ನಡುವೆಯೂ ಅಲ್ಲಲ್ಲಿ ಶಿಕ್ಷಕರ ವಿಫಲತೆಯೂ ಎದ್ದು ಕಾಣುತ್ತದೆ. ”ಯಶಸ್ಸಿನ ಗಾಥೆಯ ನಡುವೆ ವಿಫಲತೆಯ ಕಥೆ”ಯನ್ನು ಹೇಳದಿದ್ದರೆ ಆತ್ಮ ವಂಚನೆ ಮಾಡಿಕೊಂಡಂತೆ ಎಂಬುದು ನನ್ನ ಭಾವನೆ. ಒಂದು ವ್ಯವಸ್ಥೆ ಉತ್ತಮವಾಗಿ ಕಾರ್ಯನಿರ್ವಸಬೇಕೆಂದರೆ ಅದರ ನಿರ್ವಹಣೆ ಮಾಡುವವರೂ ಉತ್ತಮರಾಗಿರಬೇಕಾಗುತ್ತದೆ. ಹಾಗಾಗಿ ನಾವು ಕೇವಲ ಶಿಕ್ಷಕರಾಗದೇ ನಿಜ ಅರ್ಥದಲ್ಲಿ ಗುರುಗಳಾಗಬೇಕಿದೆ. ನಾವು ಅಧ್ಯಯನ ಶೀಲರಾಗಿ ಮಕ್ಕಳೂ ಸಹ ಅಧ್ಯಯನ ಶೀಲರಾಗುವಂತೆ ಮಾಡಬೇಕಾಗಿದೆ. ನಮ್ಮ ಮುಂದಿರುವ ಮಕ್ಕಳಲ್ಲಿ ಆಸಕ್ತಿಯನ್ನು ಹುಟ್ಟಿಸುವಲ್ಲಿ ನಾವು ಬಹುತೇಕ ವಿಫಲರಾಗುತ್ತಿರುವುದಕ್ಕೆ ನಮ್ಮ ಅಧ್ಯಯನ ಕೊರತೆಯೇ ಕಾರಣ ಎಂಬುದು ಸತ್ಯ. ಇನ್ನು ”ಗುರು” ಅನೇಕ ಕಾರಣಗಳಿಂದ ಜನರ ದೃಷ್ಟಿಯಲ್ಲಿ ”ಲಘು” ವಾಗುತ್ತಿರುವುದು ಇಂದಿನ ಶಿಕ್ಷಣ ವ್ಯವಸ್ಥೆಯ ದುರಂತವೇ ಸರಿ. ಹಾಗಾದರೆ ಶಿಕ್ಷಣದ ಕನಸು ವಾಸ್ತವಕ್ಕೆ ಬರಬೇಕಾದರೆ ಆ ಬದಲಾವಣೆಯಲ್ಲಿ ಶಿಕ್ಷಕನ ಪಾತ್ರವೇನು? ಎಂಬುದನ್ನು ವಿಶ್ಲೇಷಿಸ ಹೊರಟರೆ ಅಲ್ಲಿ ಕಂಡು ಬರಬಹುದಾದ ಮಹತ್ವದ ಅಂಶಗಳು ಈ ಕೆಳಗಿನಂತಿದೆ
* ನಾವು ಅಧ್ಯಯನ ಶೀಲರಾಗಿ ಮಕ್ಕಳೂ ಅಧ್ಯಯನ ಶೀಲರಾಗುವಂತೆ ಮಾಡಬೇಕಿದೆ.
* ನಾವು ನಮ್ಮ ವ್ಯಕ್ತಿತ್ವವನ್ನು ಎತ್ತರಕ್ಕೇರಿಸಿಕೊಂಡು ಮಕ್ಕಳಿಗೆ ಆದರ್ಶಪ್ರಾಯರಾಗಬೇಕಿದೆ ಅನುಕರಣೀಯ ವ್ಯಕ್ತಿತ್ವ ನಮ್ಮದಾಗಬೇಕಿದೆ.
* ಸಮಸ್ಯೆಗಳಿಗೆ ಹೆದರೆದೇ ಧೈರ್ಯದಿಂದ ಎದುರಿಸುವ ಗುಣವನ್ನು ಮಗುವಿಗೆ ಧಾರೆ ಎರೆಯಬೇಕಿದೆ.
* ಮಗುವಿಗೆ ಸಂಸ್ಕøತಿಯ ಅರಿವನ್ನು ಮೂಡಿಸಿ ಅದನ್ನು ಇಂದಿನ ಕಾಲಕ್ಕೆ ಬೆಸೆಯುವ ಕೆಲಸವನ್ನು ನಾವು ಮಾಡಬೇಕಿದೆ.
* ಸದ್ಗುಣಗಳನ್ನು ನಾವು ರೂಢಿಸಿಕೊಳ್ಳುವ ಮೂಲಕ ಮಗುವಿನಲ್ಲಿ ಸದ್ಗುಣಗಳ ಬೆಳವಣಿಗೆಗೆ ಮಾರ್ಗದರ್ಶನ ಮಾಡಬೇಕಿದೆ.
* ಕೇವಲ ಪಾಠ ಬೋಧನೆ ಮಾಡುವ ಶಿಕ್ಷಕರಾಗದೇ ಗುರುಗಳಾಗಬೇಕಿದೆ. ಗುರು ತನ್ನ ಶಿಷ್ಯನಲ್ಲಿ ಸಮಾಜೋನ್ನತಿಗೆ ಕಾರಣವಾಗುವ ಎಲ್ಲಾ ಮಾನವೀಯ ಗುಣಗಳೂ ಬೆಳೆಯುವಂತೆ ಮಾಡಬಲ್ಲ.
ನಮ್ಮಲ್ಲಿ ”ಶಿಷ್ಯಾದಿಚ್ಚೇತ್ ಪರಾಜಯಂ” ಎಂಬ ಮಹಾನ್ ಗುರು ಪರಂಪರೆ ಇದೆ. ಶಿಷ್ಯನಿಂದ ತಾನು ಸೋಲಿಸಲ್ಪಡಬೇಕು ಎಂಬ ಮಹಾನ್ ಧೈರ್ಯವುಳ್ಳ ಗುರುಗಳು ನಮಗೆ ಆದರ್ಶಪ್ರಾಯರಾಗಬೇಕಿದೆ. ಹಾಗಾದಾಗ ಈಗಿರುವ ಎಲ್ಲ ಸಮಸ್ಯೆಗಳೂ ಸೂರ್ಯನ ಶಾಖಕ್ಕೆ ಕರಗಿ ಹೋಗುವ ಮಂಜಿನಂತೆ ಚದುರಿಹೋಗುತ್ತದೆ. ಸ್ವಸ್ಥ ಮನಸ್ಸುಳ್ಳ ಸುಖೀ ಸಮಾಜ ನಮ್ಮದಾಗುತ್ತದೆ. ಶಿಕ್ಷಣದ ಕನಸನ್ನು ನನಸಾಗಿಸಿದ ಕೀರ್ತಿಗೆ ಭಾಜನರಾಗುತ್ತೇವೆ.
ಒಟ್ಟಿನಲ್ಲಿ ನಾವು ನಡೆವ ಹಾದಿಯನ್ನು ಕೊಂಚ ಬದಲಿಸಿಕೊಳ್ಳಬೇಕಿದೆ. ಉತ್ಸಾಹಿಗಳ ಉಸಿರುಕಟ್ಟಿಸುವಂತ ವಾತಾವರಣವನ್ನು ತೊಡೆದು ಹಾಕುವ ದಿಸೆಯಲ್ಲಿ ನಮ್ಮ ನೀತಿ ನಿರೂಪಣೆ ಇನ್ನಷ್ಟು ಉತ್ತರದಾಯಿಯಾಗಬೇಕಿದೆ. ಇನ್ನಷ್ಟು ಸಮರ್ಥವಾಗಬೇಕಿದೆ. ಅದು ಇಂದಿನ ಅನಿವಾರ್ಯತೆ ಕೂಡಾ ಹೌದು.
ಪ್ರಾರ್ಥಮಿಕ ಶಿಕ್ಷಣದ ಸಾರ್ವತ್ರೀಕರಣದ ಪ್ರಮುಖ ಮಜಲುಗಳಾದ ಅವಕಾಶ ,ದಾಖಲಾತಿ ಹಾಜರಾತಿಗಳಲ್ಲಿನ ಸಾಧನೆ ಸ್ವಲ್ಪ ನೆಮ್ಮದಿ ತಂದಿದೆಯಾದರೂ ”ಗುಣಾತ್ಮಕತೆ”ಯ ನಿಟ್ಟಿನಲ್ಲಿ ನಮ್ಮ ಕನಸು ಇನ್ನೂ ನನಸಾಗಬೇಕಿದೆ. ”ಪ್ರಾಥಮಿಕ ಶಿಕ್ಷಣ ಶೈಕ್ಷಣಿಕ ವೃಕ್ಷದ ಬೇರು” ಅದಕ್ಕೆ ಸರಿಯಾಗಿ ನೀರೆರೆದಾಗ ಮಾತ್ರ ಉತ್ತಮ ಫಲ ನಿರೀಕ್ಷಿಸಲು ಸಾಧ್ಯ. ಬೋಧನೆ ಹಾಗೂ ಕಲಿಕೆಯಲ್ಲಿ ಗುಣಾತ್ಮಕತೆ ಕಾಣುವ ಕನಸು ಶೀಘ್ರದಲ್ಲಿ ನನಸಾಗಬೇಕಾದರೆ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದವರೆಲ್ಲರಿಗೂ ಇಚ್ಛಾಶಕ್ತಿ ಇರಬೇಕಾದದ್ದು ಅವಶ್ಯ. ಯೋಜನೆ ರೂಪಿಸುವಾಗಿನ ಉತ್ಸಾಹ ಅದರ ಅನುಷ್ಠಾನ ಹಂತದಲ್ಲೂ ಉಳಿದರೆ ಕನಸಿನ ಲೋಕದಿಂದ ವಾಸ್ತವ ಲೋಕಕ್ಕೆ ಬರುವುದಕ್ಕೆ ಸಾಧ್ಯ. ‘ಗುಣಾತ್ಮಕ ಶಿಕ್ಷಣ’ದ ಕನಸು ಸಂಪೂರ್ಣವಾಗಿ ನನಸಾಗುವುದು ಸಾಧ್ಯ.
”ಉದ್ಯಮೇನಹಿ ಸಿಧ್ಯಂತಿ ಕಾರ್ಯಾಣಿನ ಮನೋರಥೈ
ನಹಿ ಸುಪ್ತಸ್ಯ ಸಿಂಹಸ್ಯ ಪ್ರವಿಶಂತಿ ಮುಖೇ ಮೃಗಃ”
ಯಾವುದೇ ಕಾರ್ಯಗಳು ಕುಳಿತು ಸಂಕಲ್ಪ ಮಾಡುವುದರಿಂದ ಸಿದ್ಧಿಸುವುದಿಲ್ಲ. ಮೃಗರಾಜ ತಾನೆಂದು ಸಿಂಹ ಬೇಟೆಯಾಡದೇ ಸುಮ್ಮನೆ ಕುಳಿತಿದ್ದರೆ ಮೃಗಗಳು ತಾವಾಗಿಯೇ ಬಂದು ಅದರ ಬಾಯಲ್ಲಿ ಬೀಳುವುದಿಲ್ಲ ಎಂದು ಸುಭಾಷಿತವೊಂದರಲ್ಲಿ ಹೇಳಲಾಗಿದೆ. ಹಾಗಿಯೇ ಕುಳಿತು ಕನಸು ಕಾಣುವುದರಿಂದ ಎಲ್ಲರಿಗೂ ಗುಣಾತ್ಮಕ ಶಿಕ್ಷಣದ ಗುರಿ ಸಾಧನೆ ಸಾಧ್ಯವಿಲ್ಲ. ವಾಸ್ತವದಲ್ಲಿ ಅದನ್ನು ಸಾಧಿಸಬೇಕೆಂದರೆ ಆ ನಿಟ್ಟಿನಲ್ಲಿ ಎಲ್ಲರ ಪ್ರಯತ್ನ ಅವಶ್ಯ. ಬದಲಾವಣೆ ಜಗದ ನಿಯಮ ಸತ್ಯ ಆದರೆ ಆ ಬದಲಾವಣೆಗೆ ನಾವು ಹೊಂದಿಕೊಳ್ಳಬೇಕು ನಿತ್ಯ…..ಅಲ್ಲವೇ?
ಒಟ್ಟಿನಲ್ಲಿ ಶೈಕ್ಷಣಿಕ ಕನಸು ಕಾಣೋಣ …ಅದನ್ನು ವಾಸ್ತವಕ್ಕಿಳಿಸುವಲ್ಲಿ ಮನಸ್ಸು ಮಾಡೋಣ .

RELATED ARTICLES  ಗಾಂಧೀಜಿ ಮತ್ತು ನೇತಾಜಿ - ಭಾಗ 1