ಈಶ್ವರಪ್ಪ ಯಡಿಯೂರಪ್ಪ ಜಗಳ ಜಿಲ್ಲೆಯಲ್ಲೂ ಪ್ರಭಾವ

ಪ್ರವೀಣ ಹೆಗಡೆ ಕುಮಟಾ
ರಾಜ್ಯ ಬಿಜೆಪಿಯಲ್ಲಿ ನಿತ್ಯ ಜಗಳ ನಡೆಯುತ್ತಿದ್ದರೆ ಜಿಲ್ಲಾ ಬಿಜೆಪಿಯಲ್ಲಿ ಟಿಕೆಟ್ ಬಣಜಗಳ ನಡೆಯುತ್ತಿದೆ. ಇಲ್ಲಿ ಕಾಗೇರಿ ಬಣ ಅರ್ಥಾತ್ ಕೇಂದ್ರ ಸಚಿವ ಅನಂತಕುಮಾರ್ ಅವರ ಬಣ,ಜೊತೆಗೆ ಯಡಿಯೂರಪ್ಪನವರ ಬಣ ಮುಸುಕಿನ ಗುದ್ದಾಟದಲ್ಲಿ ತೊಡಗಿದ್ದರೆ ಈಗ ಈಶ್ವರಪ್ಪನವರ ಮತ್ತೊಂದು ಬಣ ಸ್ರಷ್ಟಿಯಾಗುವಂತೆ ಕಂಡುಬರುತ್ತಿದೆ.
ಈಗಾಗಲೇ ಮೂಲವಾಸಿಗಳು ಮತ್ತು ವಲಸೆದಾರರ ವೈಮನಸ್ಸಿನಿಂದ ದೂರವಾದ ಕಮಲ ಹೃದಯಗಳುಳ್ಳವರು ಈಶ್ವರಪ್ಪನವರ ರಾಯಣ್ಣ ಬ್ರಿಗೇಡ್ ಮತ್ತು ಯಡಿಯೂರಪ್ಪನವರ ಗಲಾಟೆಯಿಂದ ಮುಂದೆ ಪಕ್ಷದ ವರ್ಚಸ್ಸು ಕುಂದಿ ಕೈಗೆ ಬರಲಿರುವ ಅಧಿಕಾರವನ್ನು ಕಳೆದುಕೊಳ್ಳುವೆವೋ ಎಂದು ಚಿಂತಿಸಲು ತೊಡಗಿದ್ದಾರೆ. ಬಹಿರಂಗವಾಗಿ ತಮ್ಮ ಪಕ್ಷದÁಂತರಿಕ ಚಟುವಟಿಕೆಗಳನ್ನು , ವೈಮನಸ್ಸುಗಳನ್ನು ಹೇಳಿಕೊಳ್ಳದಿದ್ದರೂ ಪಕ್ಷದ ವಲಯದಲ್ಲಿ ಆತಂಕ ಮನೆಮಾಡಿದ್ದಂತೂ ನಿಜ. ಇದೆಲ್ಲ ವರ್ತಮಾನಗಳನ್ನು ದೂರದಿಂದ ನೋಡುತ್ತಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಮುಖಂಡರು ಕಾರ್ಯಕರ್ತರಲ್ಲಿ ನಿರಾಳತೆಯುಂಟಾಗುತ್ತಿದೆ. ಹಳಿಯಾಳದಲ್ಲಿ ಸುನಿಲ್ ಹೆಗಡೆ ಮತ್ತು ಕುಮಟಾದಲ್ಲಿ ದಿನಕರ ಶೆಟ್ಟಿ ಬಿಜೆಪಿ ಸೇರಿದಮೇಲೆ ಜಿಲ್ಲೆಯಲ್ಲಿ ಗುರುತಿಸಬಹುದಾದ ಜೆಡಿಎಸ್ ಮುಖಂಡರು ಸಿದ್ದಾಪುರದ ಶಶಿಭೂಷಣ ಹೆಗಡೆ ಮಾತ್ರ.ಆದ್ದರಿಂದ ಜೆಡಿಎಸ್ ಗಿಂತ ಬಿಜೆಪಿಯಲ್ಲಿನ ಜಗಳದಿಂದ ಕಾಂಗ್ರೆಸ್ಸಿಗೆ ಹೆಚ್ಚು ಅನುಕೂಲವಾಗುವದಂತೂ ಹೌದು.
ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ದಿನಕರ ಶೆಟ್ಟಿಯವರ ಪ್ರಭಾವದಿಂದ ಜೀವವುಳಿಸಿಕೊಂಡಿತ್ತು. ಎಲ್ಲರೊಂದಿಗೂ ಬೆರೆಯುವ ಗುಣದಿಂದಾಗಿ ದಿನಕರ ಶೆಟ್ಟಿ ಕುರಿತು ಕ್ಷೇತ್ರದಲ್ಲಿ ಒಂದಿಷ್ಟು ಸಹಾನುಭೂತಿಯಿದೆ. ಆದರೆ ದಿನಕರ ಶೆಟ್ಟಿ ಬಿಜೆಪಿ ಸೇರಿಕೊಂಡರು. ಈಗ ಜೆಡಿಎಸ್ ಕಾರ್ಯಕರ್ತರು ತಂಡೋಪತಂಡವಾಗಿ ಬಿಜೆಪಿ ಸೇರುವ ಕಾರ್ಯಕ್ರಮಗಳು ನಡೆಯುತ್ತಿವೆ. ಪ್ರತೀ ಕಾರ್ಯಕ್ರಮದಲ್ಲೂ ಸಂಸದ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಅನಂತಕುಮಾರ ಹೆಗಡೆ ಪಾಲ್ಗೊಂಡು ಒಂದೊಂದು ಹೇಳಿಕೆ ನೀಡುತ್ತ ಚರ್ಚೆಗೆ ಹರಿಬಿಡುತ್ತಿದ್ದಾರೆ. ಅದೇರೀತಿ ರವಿವಾರ ಕೋಡ್ಕಣಿಯಲ್ಲಿ ಕಾರ್ಯಕರ್ತರ ಸೇರುವಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅನಂತ್ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಹೊರತುಪಡಿಸಿ ಬೇರೆ ಯಾರೇ ಬಂದರೂ ಪಕ್ಷಕ್ಕೆ ಸೇರಿಸಿಕೊಳ್ಳುವುದಾಗಿ ಹೇಳಿ ಪಕ್ಷ ಸೇರ್ಪಡೆಯ ಪ್ರವಾಹಕ್ಕೆ ಮತ್ತಷ್ಟು ವೇಗ ನೀಡಲು ಪ್ರಯತ್ನಿಸುತ್ತಿದ್ದಾರೆ. ಆದರೆ ಪಕ್ಷಕ್ಕೆ ಹೊಸದಾಗಿ ಸೇರಿಕೊಂಡವರ ಮತ್ತು ಮೂಲವಾಸಿಗಳ ಮನಸ್ಸನ್ನು ಜೋಡಿಸುವದು ಒಡಕು ಗಡಿಗೆಯನ್ನು ಸೇರಿಸಿದಷ್ಟೇ ಪರಿಣಾಮ ಬೀರಬಹುದು. ಚುನಾವಣೆಯ ಸಂದರ್ಭದಲ್ಲಿ ಎಲ್ಲಾ ಬಣದವರೂ ತಮ್ಮ ತಮ್ಮ ಬಣಗಳಿಗೆ ಪ್ರಾಶಸ್ತ್ಯ ಸಿಗಬೇಕೆಂದು ಬಯಸುವದರಿಂದ ಯಾರಿಗೆ ಅನುಕೂಲವಾಗಲಿಲ್ಲವೋ ಅವರು ಸಹಜವಾಗಿ ಆಕ್ರೋಶಗೊಳ್ಳುತ್ತಾರೆ. ಇದರಿಂದ ಅಡ್ಡಮತದಾನ, ನಿರುತ್ಸಾಹಕ್ಕೆ ಕಾರಣವಾಗಿ ಅದು ಪಕ್ಷದಮೇಲೆ ಪ್ರಭಾವಬೀರುವದಂತೂ ಖಂಡಿತ.
ಕುಮಟಾ ಬಿಜೆಪಿಯಲ್ಲಿ ಹಳೆಯ ಮುಖಂಡರು,ಕಾರ್ಯಕರ್ತರ ಜೊತೆಗೆ ಹೊಸದಾಗಿ ಸೇರ್ಪಡೆಗೊಂಡ ಮುಖಂಡರುಗಳೆಲ್ಲ ತಮಗೇ ಪಕ್ಷ ಟಿಕೆಟ್ ನೀಡುತ್ತದೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಕೆಲವರು ಬಿ ಎಸ್ ಯಡಿಯೂರಪ್ಪನವರು ತಮ್ಮಮೇಲೆ ಒಲವು ಹೊಂದಿದ್ದಾರೆ ಎಂದರೆ ಮತ್ತೆ ಕೆಲವರು ಶೋಭಾ ಕರಂದ್ಲಾಜೆಯವರ ಮೇಲೆ ವಿಶ್ವಾಸವಿರಿಸಿದ್ದಾರೆ. ಇನ್ನು ಕೆಲವರು ಕೆ ಎಸ್ ಈಶ್ವರಪ್ಪನವರ ಬೆನ್ನು ಬಿದ್ದಿದ್ದಾರೆ. ಹಲವರು ಈಸಲದ ಟಿಕೆಟ್ ಸಂಘ ಪರಿವಾರದ ಸಲಹೆಯಂತೆ ಹಂಚಿಕೆಯಾಗುತ್ತದೆ ಎಂದು ಸಂಘದ ಪ್ರಭಾವಿಗಳ ಬೆನ್ನು ಬಿದ್ದಿದ್ದಾರೆ. ಎಲ್ಲರೂ ತಮ್ಮ ಬೆಂಬಲಿಗರಿಗೆ ಟಿಕೆಟ್ ಗಿಟ್ಟಿಸುತ್ತೇನೆ ಎಂದು ನಂಬಿಸುತ್ತಿದ್ದಾರೆ. ಕುಮಟಾ ಹೊನ್ನಾವರ ಕ್ಷೇತ್ರದ ಸ್ಪರ್ದೆಗಾಗಿ ಹೆಚ್ಚು ಕಡಿಮೆ 15 ಮುಖಂಡರ ಪೈಪೋಟಿ ಕಂಡುಬರುತ್ತಿದೆ. ದಿನಕರ ಶೆಟ್ಟಿಯವರಂತೂ ಪಕ್ಷ ಸೇರ್ಪಡೆಯ ಹಿಂದಿನದಿನದ ಪತ್ರಿಕಾಗೋಷ್ಠಿಯಲ್ಲಿ ಬಹಿರಂಗವಾಗಿಯೇ ತನಗೆ ಟಿಕೆಟ್ ತರುವದು ಹೇಗೆಂದು ಗೊತ್ತು ಎಂದಿದ್ದಾg.É ಜೊತೆಗೆ ಉತ್ಸಾಹದಿಂದ ತಮ್ಮೊಡನೆ ಜೆಡಿಎಸ್ ನಲ್ಲಿ ಕೆಲಸಮಾಡಿದ ಎಲ್ಲಾ ಬೆಂಬಲಿಗರನ್ನೂ ಬಿಜೆಪಿ ಹೊಸಮನೆಗೆ ಕರೆತಂದು ಬಿಡುತ್ತಿದ್ದಾರೆ.ಈಶ್ವರಪ್ಪನವರನ್ನು ನಂಬಿದ್ದಾರೆ ಎನ್ನಲಾದ ಸೂರಜ್ ನಾಯ್ಕ ಸೋನಿ ದಿನಕರ ಶೆಟ್ಟರ ನಿಲುವನ್ನು ಬಹಿರಂಗವಾಗಿಯೇ ವಿರೋಧಿಸಿದ್ದಾರೆ ಮತ್ತು ಗೋಕರ್ಣದಲ್ಲಿ ನಡೆದ ಪಕ್ಷದ ಕಾರ್ಯಕಾರಿಣಿ ಸಭೆಯಲ್ಲಿ ಖಂಡನೆ ಕೂಡ ವ್ಯಕ್ತಪಡಿಸಿದ್ದಾರೆ. ಒಂದೊಮ್ಮೆ ದಿನಕರ ಶೆಟ್ಟಿಯವರಿಗೆ ಟಿಕೆಟ್ ಕೊಟ್ಟರೆ ನಾಮಧಾರಿಗಳ ಮತವನ್ನು ಒಡೆಯಲು ಇದು ದಾರಿಯೂ ಆಗುವ ಸಾಧ್ಯತೆಗಳಿವೆ.ಅಲ್ಲದೇ ಯಡುಯೂರಪ್ಪ ಮತ್ತು ಈಶ್ವರಪ್ಪನವರ ಜಗಳವನ್ನು ಕುಮಟಾ ಕ್ಷೇತ್ರಕ್ಕೂ ತಂದಂತಾಗುತ್ತದೆ. ಕವಲಕ್ಕಿಯ ವೆಂಕಟ್ರಮಣ ಹೆಗಡೆಯವರು ತಮ್ಮದೇ ಆದ ಒಂದಿಷ್ಟು ಸಾರ್ವಜನಿಕ ಕೆಲಸಗಳನ್ನು ಮಾಡುವ ಮೂಲಕ ಜನರ ಒಲವುಗಳಿಸಿ ಪಕ್ಷದಲ್ಲಿ ಪ್ರಭಾವಬೀರಲು ಪ್ರಯತ್ನಿಸುತ್ತಿದ್ದಾರೆ. ಡಾ ಜಿ ಜಿ ಹೆಗಡೆ ಸಂಘಪರಿವಾರದ ಒಲವು ಗಳಿಸಲು ಪ್ರಯತ್ನ ನಡೆಸಿದ್ದು ಕಂಡುಬರುತ್ತಿದೆ. ನಾಗರಾಜ ನಾಯ್ಕ ತೊರ್ಕೆ ಶಾಲೆಗಳನ್ನು ಕೇಂದ್ರೀಕರಿಸಿ ಪ್ರತಿಭಾ ಪುರಸ್ಕಾರ,ಕ್ರೀಡೆ ಮುಂತಾದ ಕಾರ್ಯಕ್ರಮಗಳ ಮೂಲಕ ಸದಾ ಪ್ರಚಾರದಲ್ಲಿದ್ದು ಟಿಕೆಟ್ ಪಡೆಯುವ ಪ್ರಯತ್ನದಲ್ಲಿದಾರೆ. ಒಬ್ಬೊಬ್ಬರ ಪ್ರಯತ್ನ ಒಂದೊಂದು ರೀತಿಯಾದರೂ ಎಲ್ಲರ ಮುಖವೂ ಒಂದೊಂದು ದಿಕ್ಕು !
ಇದೆಲ್ಲದರ ನಡುವೆ ಉದ್ಯಮಿ ಸುಬ್ರಾಯ ವಾಳ್ಕೆಯವರ ಆಗಮನವಾಗಿದೆ. ವಾಳ್ಕೆ ಬಂಡವಾಳ ಹೊಂದಿದವರು ಮತ್ತು ತಮ್ಮೂರಿನಲ್ಲಿ ಹೆಸರು ಕೆಡಿಸಿಕೊಳ್ಳದಿರುವದರಿಂದ ಬಿಜೆಪಿ ಹೈಕಮಾಂಡಿನಮೇಲೆ ಪ್ರಭಾವ ಬೀರುವ ಸಾಧ್ಯತೆಗಳಿವೆ. ಶಂಕರ ಪಂಚಮಿಯ ಹೊಸ ಸುದ್ದಿಯೇನೆಂದರೆ ಮಹಿಳಾ ಸ್ವಸಹಾಯ ಸಂಘಗಳಿಗೆ ಸಾಲ, ಮಹಿಳೆಯರಿಗೆ ಹೊಲಿಗೆ ಯಂತ್ರಗಳನ್ನು ನೀಡುತ್ತ ತಳಮಟ್ಟದಲ್ಲಿ ಗುರುತಿಸಿಕೊಂಡು ಯಾವುದೇ ಪಕ್ಷವಿರಲಿ ಇಲ್ಲದಿರಲಿ ಸ್ಪರ್ದಿಸುವದು ಸ್ಪರ್ದಿಸುವದೇ ಎನ್ನುವ ಯಶೋಧರ ನಾಯ್ಕರು ಯಡಿಯೂರಪ್ಪನವರ ಭೇಟಿಗೆ ಸಿದ್ದಾಪುರಕ್ಕೆ ಬಂದು ಹೋಗಿದ್ದಾರೆ. ಅಂತೂ ಇಂತೂ ಕುಮಟಾ ಬಿಜೆಪಿ ಸ್ಪರ್ದಿಗಳ ಸಂಖ್ಯೆ ಏರಿಕೆ ಕಾಣುತ್ತಲೇ ಮುನ್ನಡೆದಿದೆ.
ಇದೆಲ್ಲ ಬೆಳವಣಿಗೆಗಳನ್ನು ಹಾಲಿ ಶಾಸಕಿ ಶಾರದಾ ಮೋಹನ ಶೆಟ್ಟಿ ದೂರದಿಂದ ಗಮನಿಸಿಸುತ್ತಿದ್ದಾರೆ. ಶಾರದಾ ಶೆಟ್ಟಿಯವರಿಗೆ ಪ್ರಬಲ ಪ್ರತಿಸ್ಪರ್ದಿಯಾಗುವದು ಬಿಜೆಪಿ ಮಾತ್ರ. ಏಕೆಂದರೆ ಜೆಡಿಎಸ್ ಪ್ರಭಾವ ದಿನಕರರೊಂದಿಗೇ ನಡೆದುಬಿಟ್ಟಿದೆ. ಪ್ರದೀಪ ನಾಯ್ಕ ಒಂದಿಷ್ಟು ಪೈಪೋಟಿ ನೀಡಬಲ್ಲರಾದರೂ ಜಾತಿ,ಪಕ್ಷಗಳ ಲೆಕ್ಕಾಚಾರದಲ್ಲಿ ನೋಡಿದಾಗ ಜೆಡಿಎಸ್ ಗೌಣವಾಗುತ್ತದೆ. ಬಿಜೆಪಿಯಲ್ಲಿನ ಒಳಜಗಳ ತಾರಕಕ್ಕೇರಿದಷ್ಟೂ ಶಾರದಾ ಶೆಟ್ಟರಿಗೆ ಲಾಭವಾಗುವದರಲ್ಲಿ ಸಂಶಯವಿಲ್ಲ. ಕುಮಟಾ ಕ್ಷೇತ್ರ ಬಿಜೆಪಿಗೆ ಒಲಿದುಬರುವದು ಒಗ್ಗಟ್ಟಿನಿಂದ ಮಾತ್ರ ಸಾಧ್ಯ ನನ್ನ ಒಂದು ಕಣ್ಣು ಹೋದರೆ ಹೋಗಲಿ ಮತ್ತೊಬ್ಬನ ಎರಡೂ ಕಣ್ಣು ಹೋಗಲಿ ಎನ್ನುವ ನಿಲುವಿನಿಂದ ಬಿಜೆಪಿ ಮುಖಂಡರು ಹೊರಬಂದರೆ ಮಾತ್ರ ಕುಮಟಾದಲ್ಲಿ ಕಮಲ ಅರಳಬಹುದು. ಮುಂದಿನದಿನಗಳಲ್ಲಿ ಮತ್ತಷ್ಟು ತಿರುವು ಸಿಕ್ಕು ಕುಮಟಾ ಕ್ಷೇತ್ರ ಜಿಲ್ಲೆಯ ರಾಜಕೀಯ ಮನರಂಜನಾ ತಾಣವಾಗಲೂಬಹುದು !

RELATED ARTICLES  ಶರಣಾದವ…..!