ಹೌದು! ಇವರ ಸಂಭಾವನೆಗಳೆಲ್ಲಾ ಕೋಟಿಗಳಲ್ಲೇ ಇರುವುದು. ಸಿನಿಮಾ ಮತ್ತು ಕ್ರಿಕೆಟ್ ತಾರೆಯರು ತಮ್ಮ ವೃತ್ತಿಯಿಂದ ಗಳಿಸುವ ಸಂಭಾವನೆಗಿಂತ ಹೆಚ್ಚಿನ ಹಣ ಜಾಹೀರಾತುಗಳಿಂದ ಸಂಪಾದಿಸುತ್ತಾರೆ. ಇನ್ನು ಸಾಮಾಜಿಕ ಜಾಲತಾಣಗಳಿಂದಲೂ ಅವರಿಗೆ ಹಣ ಹರಿದು ಬರುತ್ತದೆ ಎಂಬುವುದು ಗೊತ್ತಿರುವ ಸಂಗತಿ.
ಕಳೆದ ಕೆಲವು ವರ್ಷಗಳಿಂದ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿಯ ಮಾರುಕಟ್ಟೆ ಬೆಲೆ ಗಗನಕ್ಕೇರಿದೆ. ಅವರು ಸಾಮಾಜಿಕ ಜಾಲತಾಣದಲ್ಲಿ ಒಂದು ಫೋಟೋ ಅಥವಾ ಒಂದು ಪದ ಬರೆದರೆ ಅದರಿಂದ ಕೋಟಿಗಟ್ಟಲೆ ಹಣ ಅವರ ಖಾತೆಗೆ ಬಂದು ಬೀಳುತ್ತದೆ.
ಇಂಟರ್ ನೆಟ್ ನಲ್ಲಿ ಯಾವಾಗಲೂ ಆ್ಯಕ್ಟೀವ್ ಆಗಿರುವ 29 ವರ್ಷದ ಕೊಹ್ಲಿ ಆಗಾಗ ಇನ್ ಸ್ಟಾಗ್ರಾಂನಲ್ಲಿ ತಮ್ಮ ವಿಶೇಷ ಕ್ಷಣಗಳ ಚಿತ್ರಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ. ಅಂತಹ ಒಂದು ಚಿತ್ರಕ್ಕೆ ಅವರು ಪಡೆಯುವ ಸಂಭಾವನೆ ಕೇಳಿದರೆ ಒಂದು ಕ್ಷಣ ತಲೆತಿರುಗುವುದು ಗ್ಯಾರಂಟಿ!
ಇನ್ ಸ್ಟಾಗ್ರಾಂ ನಲ್ಲಿ ಬರೋಬ್ಬರಿ 1.67 ಕೋಟಿ ಫಾಲೋಯರ್ಸ್ ಇರುವ ಬಲಗೈ ಬ್ಯಾಟ್ಸ್ ಮ್ಯಾನ್ ಗೆ, ಕೇವಲ ಒಂದು ಪೋಸ್ಟ್ ಗೆ 3.2 ಕೋಟಿ ರೂ. ಸಿಗುತ್ತದಂತೆ. ಫೇಸ್‌ಬುಕ್‌ನಲ್ಲಿ 3.6 ಕೋಟಿ ಹಾಗೂ ಟ್ವೀಟರ್‌ನಲ್ಲಿ 2 ಕೋಟಿ ಫಾಲೋಯರ್ಸ್ ಇರುವ ಕೋಹ್ಲಿ ವಿಶ್ವದಲ್ಲಿಯೇ ಹೆಚ್ಚು ಜನಪ್ರಿಯತೆ ಹೊಂದಿರುವ ಕ್ರೀಡಾಳು ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ನಂತರದ ಸ್ಥಾನವನ್ನು ಜಾಗತಿಕ ಕ್ರೀಡಾಳು ಲಿಯೋನಿಲ್ ಮೆಸ್ಸಿ ಪಡೆದಿದ್ದಾರೆ.
ಸಾಮಾನ್ಯವಾಗಿ ಹೆಚ್ಚಾಗಿ ತರಬೇತಿ, ಪಂದ್ಯ ಎಂದು ಪ್ರವಾಸದಲ್ಲೇ ಕಾಲ ಕಳೆಯುವ ಇವರು ತಮ್ಮ ಸಾಮಾಜಿಕ ತಾಣಗಳ ಪ್ರೊಫೈಲ್ ಗಳನ್ನು ವಾಣಿಜ್ಯದ ದೃಷ್ಟಿಯಿಂದ ಕೆಲವು ಏಜೆನ್ಸಿಗಳಿಗೆ ವಹಿಸಿಕೊಟ್ಟಿರುತ್ತಾರೆ.