7        

    ಭಾರತೀಯಕವಿಕಾವ್ಯಪರಂಪರೆಯಲ್ಲಿ ವ್ಯಾಸವಾಲ್ಮೀಕಿಗಳ ಬಳಿಕ ಕಾಳಿದಾಸನಷ್ಟು ವಿಶ್ರುತವಾದ ಹೆಸರು ಇನ್ನೊಂದಿಲ್ಲವೆಂದೇ ಹೇಳಬಹುದು. ಕಾಳಿದಾಸನ ಪ್ರತಿಭೆ ಯಾರನ್ನೂ ಆಕರ್ಷಿಸುವಂತಹದು. ಅದಕ್ಕೆ ನಿದರ್ಶನವೆಂದರೆ ಶಾಕುಂತಲದ ಕಥಾನಕ! ಮೂಲ ವ್ಯಾಸರು ಬರೆದ ಭಾರತದಲ್ಲಿ ಇದ್ದ ಕಥೆಯಲ್ಲಿ ಸ್ವಲ್ಪ ಬದಲಾವಣೆಯೊಂದಿಗೆ ಕಾಳಿದಾಸ ಈ ಕಥಾನಕವನ್ನು ಪುನಃಸೃಷ್ಟಿಸಿದ್ದಾನೆ. ದೂರ್ವಾಸ ಮಹರ್ಷಿಯ ಶಾಪದಿಂದ ದುಷ್ಯಂತನಿಗೆ ಶಾಕುಂತಲೆಯ ವಿಷಯದಲ್ಲಿ ಮರೆವುಂಟಾಗುತ್ತದೆ ಎಂಬ ಕಲ್ಪನೆಯ ಮೂಲಕ ಬೇರೆಯದೇ ಆದ ಆಯಾಮವನ್ನು ಕೊಟ್ಟು ಅದ್ಭುತವಾದ ಈ ರಸಗ್ರಂಥಿಯನ್ನು ಸೃಷ್ಟಿಸಿದ್ದಾನೆ ಕಾಳಿದಾಸ!ಅದೆಷ್ಟು ಜನಪ್ರಿಯವಾಗಿದೆಯೆಂದರೆ ಮೂಲ ಭಾರತದಲ್ಲಿದ್ದ ಕಥಾನಕವನ್ನು ಮರೆತು ಇದೇ ಮೂಲವೆಂಬಷ್ಟರ ಮಟ್ಟಿಗೆ ಭಾರತೀಯರೆಲ್ಲ ಒಪ್ಪಿಕೊಂಡುಬಿಟ್ಟಿದ್ದಾರೆ ಎಂದರೆ ಅತಿಶಯವಲ್ಲ! ದುಷ್ಯಂತ ಶಕುಂತಲೆಯರ ಕಥೆಯೆಂದೊಡನೆ ನಮಗೆ ಉಂಗುರವನ್ನು ನೆನಪಿಗೆಂದು ಕೊಟ್ಟು ಹೋದದ್ದು, ದೂರ್ವಾಸರ ಶಾಪ, ಉಂಗುರವನ್ನು ಶಕುಂತಲೆ ಕಳೆದುಕೊಂಡದ್ದು, ದುಷ್ಯಂತ ಅವಳನ್ನು ಮರೆತ ಕಾರಣ ಒಪ್ಪದೇ ಕಳುಹಿಸಿಬಿಡುವುದು, ಹಲವು ಕಾಲದ ನಂತರ  ಉಂಗುರ ಬೆಸ್ತನೊಬ್ಬನ ಮೂಲಕ ರಾಜನಿಗೆ ತಲುಪಿ ಅವನಿಗೆ ಮತ್ತೆ ಎಲ್ಲವೂ ನೆನಪಾಗುವುದು ಇದೆಲ್ಲವೂ ನಮ್ಮ ಕಣ್ಣ ಮುಂದೆ ಸಾಗುತ್ತದೆ. ಇಂತಹ ಶಾಕುಂತಲದಲ್ಲಿ ನಾಲ್ಕು ಶ್ಲೋಕಗಳು ತುಂಬ ರಸಮಯ ಎಂದು ಹಲವು ಕಾಲದಿಂದ ಒಪ್ಪಿಕೊಂಡಿರುವುದುಂಟು.

ಕಾವ್ಯೇಷು ನಾಟಕಂ ರಮ್ಯಂ ತತ್ರ ರಮ್ಯಾ ಶಕುಂತಲಾ

ತತ್ರಾಪಿ ಚ ಚತುರ್ಥೋಕಸ್ತತ್ರ ಶ್ಲೋಕಚತುಷ್ಟಯಂ ||

ಎಂಬ ಒಂದು ಶ್ಲೋಕದಲ್ಲಿ “ಕಾವ್ಯಗಳಲ್ಲಿ ನಾಟಕವೇ ರಮ್ಯವಾದದ್ದು, ನಾಟಕಗಳಲ್ಲಿ ಶಾಕುಂತಲನಾಟಕವೇ ರಮ್ಯವಾದದ್ದು. ಅದರಲ್ಲಿ ಕೂಡ ನಾಲ್ಕನೇ ಅಂಕವೇ ರಮ್ಯವಾದದ್ದು. ಅದರಲ್ಲಿ ಆ ನಾಲ್ಕು ಶ್ಲೋಕಗಳು ರಮ್ಯವಾದವು” ಎಂದು ಯಾರೋ ಕವಿಯೊಬ್ಬ  ಹೇಳಿದ್ದಾನೆ. ಈ ಲೇಖನದಲ್ಲಿ ಆ ನಾಲ್ಕು ಶ್ಲೋಕಗಳನ್ನು ಕನ್ನಡದ ಬಸವಪ್ಪ ಶಾಸ್ತ್ರಿಗಳ ಅನುವಾದ ಸಹಿತವಾಗಿ ನೋಡೋಣ.

            ಬಸವಪ್ಪ ಶಾಸ್ತ್ರಿಗಳು-(೧೮೪೩-೧೮೯೧) ಅಭಿನವ ಕಾಳಿದಾಸ ಎಂಬ ಬಿರುದನ್ನು ಪಡೆದಿದ್ದವರು. ಬೆಂಗಳೂರಿನ ನಾಗಸಂದ್ರದ ರುದ್ರಾಕ್ಷಿಮಠದ ಸ್ವಾಮಿಗಳಾಗಿದ್ದರು. ಮುಮ್ಮಡಿ ಕೃಷ್ಣರಾಜ ಒಡೆಯರ ಆಶ್ರಯದಲ್ಲಿ  ಬೆಳೆದವರು. ತಮ್ಮ ೧೮ರ ಹರೆಯದಲ್ಲಿಯೇ “ಕೃಷ್ಣರಾಜಾಭ್ಯುದಯ” ಎಂಬ ಕೃತಿಯನ್ನು ರಚಿಸಿದರು. ಕೃಷ್ಣರಾಜ ಒಡೆಯರ ಬಳಿಕ ಪಟ್ಟಕ್ಕೆ ಬಂದ ಚಾಮರಾಜ ಒಡೆಯರ ಪೋಷಣೆಯಲ್ಲಿದ್ದ “ಅರಮನೆ ನಾಟಕ ಮಂಡಳಿ”ಗೆ ನಾಟಕವನ್ನು ಬರೆಯುವ ಸಂದರ್ಭ ಒದಗಿ ಬಂದಾಗ ಕಾಳಿದಾಸನ ಶಾಕುಂತಲ ಮತ್ತು ವಿಕ್ರಮೋರ್ವಶೀಯ ನಾಟಕಗಳನ್ನು  ಮತ್ತೂ ಅನೇಕ ನಾಟಕಗಳನ್ನು ಅನುವಾದಿಸಿದರು. ಅದಲ್ಲದೇ ಸ್ವತಃ ಇಂಗ್ಲಿಷ್ ಜ್ಞಾನವಿಲ್ಲದಿದ್ದರೂ ಶ್ರೀ ಸಿ ಸುಬ್ಬರಾಯರು ಎಂಬವರ ಸಹಾಯದಿಂದ ಷೇಕ್ಸ್ ಪಿಯರ್ ನ ಒಥೆಲೋ ನಾಟಕವನ್ನು ಶೂರಸೇನಚರಿತ್ರೆ ಎಂದು ಅನುವಾದಿಸಿದರು. ಅವರ ಗಮಕವಾಚನವಂತೂ ಅತ್ಯದ್ಭುತವೆಂದು ಅವರ ಸಮಕಾಲೀನರನೇಕರು ಹೊಗಳಿದ್ದಾರೆ. ಪ್ರಸಿದ್ಧವಾದ “ಕಾಯೌ ಶ್ರೀಗೌರೀ” ಹಾಡನ್ನು ರಚಿಸಿದವರು ಇವರೇ! ಡಿವಿಜಿ  ಅವರು ಜ್ಞಾಪಕಚಿತ್ರಶಾಲೆಯಲ್ಲಿ ಬಸವಪ್ಪ ಶಾಸ್ತ್ರಿಗಳ ಆಶುಕವಿತ್ವದ ಕುರಿತು ಹಾಗೂ ಅವರ ಕಾವ್ಯವಾಚನವನ್ನು ತಮಗೆ ಕೇಳುವ ಭಾಗ್ಯವೊದಗಲಿಲ್ಲ ಎಂದೂ ಬರೆದಿದ್ದಾರೆ. ಅವರ ದಮಯಂತೀಸ್ವಯಂವರವೆಂಬ ಚಂಪೂಕಾವ್ಯವು ಒಂದು ಅನರ್ಘರತ್ನವೇ ಆಗಿದೆ. ಡಿವಿಜಿಯವರು “ದಮಯಂತೀಸ್ವಯಂವರ ಕಾವ್ಯದಲ್ಲಿ ಬರುವ ಸರಸ್ವತೀದಂಡಕವನ್ನು ಈಗಿನ ವಿದ್ಯಾರ್ಥಿಗಳಿಗೆ ಬಾಯಿಪಾಠ ಮಾಡಿಸಿದರೆ ಅವರ ಉಚ್ಚಾರಣೆ ಕಿವಿಯಿಂದ ಕೇಳುವಂತಾದೀತು” ಎಂದು ಬರೆಯುತ್ತಾರೆ.

            ೧೬೮೦ರಲ್ಲಿ ಸಿಂಗರಾರ್ಯನು ರಚಿಸಿದ ಮಿತ್ರವಿಂದಾಗೋವಿಂದವೇ ಕನ್ನಡದ ಮೊದಲ ನಾಟಕ. ಆ ಬಳಿಕ ಬಹುಕಾಲ ನಾಟಕಗಳ ರಚನೆಯೇ ಆಗದಿದ್ದ ಕಾಲದಲ್ಲಿ ಬಸವಪ್ಪ ಶಾಸ್ತ್ರಿಗಳಿಂದ ಹಲವು ನಾಟಕಗಳು ರಚನೆಯಾದವು. ಅವರ ಪ್ರತಿಭೆಗೆ ಕೈಗನ್ನಡಿಯಾದ ಇವುಗಳಲ್ಲಿ “ಕರ್ಣಾಟಕಶಾಕುಂತಲನಾಟಕ”ದ ನಾಲ್ಕನೆಯ ಅಂಕದ ಆ ನಾಲ್ಕು ಪ್ರಸಿದ್ಧ ಪದ್ಯಗಳನ್ನೂ ಕಾಳಿದಾಸನ ಮೂಲ ಪದ್ಯಗಳನ್ನೂ ನೋಡೋಣ.

RELATED ARTICLES  ಸಾವು ಬದುಕಿನ ಅಂತ್ಯವಲ್ಲ

            ಕಥಾಸಂದರ್ಭ- ಶಕುಂತಲೆ ಆಶ್ರಮಕ್ಕೆ ಬಂದ ದೂರ್ವಾಸಮಹರ್ಷಿಗಳನ್ನು ಗಮನಿಸದೇ ಇದ್ದ ಕಾರಣ ಅವರು “ನೀನು ಯಾರನ್ನು ನೆನೆಸಿಕೊಳ್ಳುತ್ತಿರುವೆಯೋ ಅವನು ನಿನ್ನನ್ನು ಮರೆತುಬಿಡಲಿ” ಎಂದು ಶಪಿಸುತ್ತಾರೆ. ಶಕುಂತಲೆಯ ಸಖಿಯಾದ ಪ್ರಿಯಂವದೆಯು ಅರಿಯದ ಬಾಲಕಿಯ ಪ್ರಥಮಾಪರಾಧವೆಂದು ಮನ್ನಿಸಬೇಕೆಂದು ಬೇಡಿಕೊಂಡಾಗ “ಆತ ಕೊಟ್ಟ ಉಂಗುರವನ್ನು ತೋರಿಸಿದರೆ ಪುನಃ ಎಲ್ಲವೂ ನೆನಪಾಗುತ್ತದೆ” ಎಂದು ಹೇಳಿ ಹೋಗುತ್ತಾರೆ. ಆ ಬಳಿಕ  ಕಣ್ವರು ಬರುತ್ತಾರೆ. ಅವರಿಗೆ ದುಷ್ಯಂತ ಶಕುಂತಕೆಯರ ಗಾಂಧರ್ವವಿವಾಹದ ಪ್ರಸಂಗ ತಿಳಿಯುತ್ತದೆ.  ಶಕುಂತಲೆಯನ್ನು ದುಷ್ಯಂತನ ಅರಮನೆಗೆ ಕಳಿಸುವುದಕ್ಕಾಗಿ  ಎಲ್ಲ ಸಿದ್ಧತೆಗಳೂ ನಡೆಯುತ್ತಿರುತ್ತವೆ, ಆಗ ಅವಳ ಅಲಂಕಾರಕ್ಕೆಂದು ಒಂದು ಮರ ಒಳ್ಳೆಯ ವಸ್ತ್ರಗಳನ್ನು ಕೊಟ್ಟರೆ ಇನ್ನೊಂದು ಕಾಲಿನ ಅಲತಿಗೆಯನ್ನು ಕೊಟ್ಟಿತು. ಎತ್ತಿದ ಚಿಗುರಿನ ಕೈಗಳಿಂದ ವನದೇವತೆಯರು ಎಲ್ಲ ಮರಗಿಡಗಳಿಂದ ಆಭರಣಗಳನ್ನು ಕೊಟ್ಟರು. ಆಗ ಶಕುಂತಲೆಯನ್ನು ಸಾಕಿದ ತಂದೆಯಾದ ಕಣ್ವಮಹರ್ಷಿಗಳು ಬರುತ್ತಾರೆ. ಅವರಿಗೆ ಮಗಳನ್ನು ಕಳಿಸಬೇಕೆಂಬ ಕಾರಣದಿಂದ ಕಳವಳ- ಅದನ್ನು ಕಾಳಿದಾಸ ಈ ಪದ್ಯದಲ್ಲಿ ಅವರ ಮಾತುಗಳ ಮೂಲಕ ಬಣ್ಣಿಸಿದ್ದಾನೆ.

ಯಾಸ್ಯತ್ಯದ್ಯ ಶಕುಂತಲೇತಿ ಹೃದಯಂ ಸಂಸ್ಪೃಷ್ಟಮುತ್ಕಂಠಯಾ

ಕಂಠಃ ಸ್ತಂಭಿತಬಾಷ್ಪವೃತ್ತಿಕಲುಷಶ್ಚಿಂತಾಜಡಂ ದರ್ಶನಂ

ವೈಕ್ಲವ್ಯಂ ಮಮ ತಾವದೀದೃಶಮಿದಂ ಸ್ನೇಹಾದರಾಣ್ಯೌಕಸಃ

ಪೀಡ್ಯಂತೇ ಗೃಹಿಣಃ ಕಥಂ ನ ತನಯಾವಿಶ್ಲೇಷದುಃಖೈರ್ನವೈಃ||೬||

ಅದನ್ನು ಬಸವಪ್ಪಶಾಸ್ತ್ರಿಗಳು ಅನುವಾದಿಸಿದ್ದು ಹೀಗೆ-

ಕಳವಳವಾಂತುದೆನ್ನೆರ್ದೆ ಶಕುಂತಳೆ ಪೋದಪಳೆಂದು ಕಂಠಮು-

ಮ್ಮಳಿಸುವುದೊತ್ತುವಶ್ರುಭರದಿಂ ಜಡಮಾದುದು ದೃಷ್ಟಿ ಚಿಂತೆಯಿಂ-

ದಳಲಿನಿತಾಗೆ ಕಾಡ ಮನುಜಂಗೆನಗಂ ಕಡುನೇಹದಿಂದಮಿ-

ನ್ನುಳಿದ ಗೃಹಸ್ಥರಾತ್ಮಭವೆಯಂ ಕಳುಪುತ್ತಕಟೆಂತಳಲ್ವರೋ! ||೬||

(ನನ್ನ ಹೃದಯದಲ್ಲಿ ಕಳವಳವಾಗುತ್ತಿದೆ. ಶಕುಂತಳೆ ಹೋಗುತ್ತಿದ್ದಾಳೆ ಎಂದು ಗಂಟಲು ಕಟ್ಟುತ್ತಿದೆ ಉಮ್ಮಳಿಸುತ್ತಿದೆ. ಒತ್ತಿ ಬರುತ್ತಿರುವ ಕಣ್ಣೀರಿನಿಂದ, ಚಿಂತೆಯಿಂದ ದೃಷ್ಟಿ ಜಡವಾಗಿದೆ. ಈ ಗಾಢವಾದ ಸ್ನೇಹದಿಂದ ಕಾಡಿನ ಮನುಜನಾದ ನನಗೇ ಇಷ್ಟು  ಅಳಲುಂಟಾಗುತ್ತಿದೆಯೆಂದಾದರೆ ಅಯ್ಯೋ! ಗೃಹಸ್ಥರಾದವರು ಮಗಳನ್ನು ಗಂಡನ ಮನೆಗೆ ಕಳುಹಿಸುವಾಗ ಇನ್ನೆಷ್ಟು ಅಳುತ್ತಾರೋ!)

ಮದುವೆ ಮಾಡಿಕೊಟ್ಟು ಮಗಳನ್ನು ಗಂಡನ ಮನೆಗೆ ಕಳುಹಿಸುವುದು ಹೆಣ್ಣು ಹೆತ್ತವರ ಪ್ರತಿಯೊಬ್ಬರ ಅನುಭವ. ಅದನ್ನು ಸರಳವಾಗಿ ಮಾತಿನಲ್ಲಿ ಹೀಗೆ ಕಟ್ಟಿಕೊಡುತ್ತಾನೆ ಕಾಳಿದಾಸ. ಅದನ್ನು ಕನ್ನಡದ್ದೇ ಪದ್ಯವೆಂಬಂತೆ ಸೊಗಸಾಗಿ ಬಸವಪ್ಪಶಾಸ್ತ್ರಿಗಳೂ ಅನುವಾದ ಮಾಡಿದ್ದಾರೆ. ಅಲ್ಲಿ “ಅಕಟ”(ಅಯ್ಯೋ) ಎಂಬ ಶಬ್ದವೊಂದನ್ನು ಇವರೇ ಸೇರಿಸಿರುವುದೂ ಆ ಪ್ರಸಂಗಕ್ಕೆ ಇನ್ನಷ್ಟು ಪುಷ್ಟಿಯನ್ನು ಕೊಡುವಂತಹದ್ದಾಗಿದೆ. ಕಣ್ವರು ತಪಸ್ವಿಯಾದ ತನಗೇ ಇಷ್ಟು ದುಃಖವಾಗುತ್ತಿದೆಯೆಂದಾದರೆ  ಇನ್ನುಳಿದ ಸಾಮಾನ್ಯರಿಗೆ ಅದೆಷ್ಟು ಸಂಕಟ ಎಂದು ಹೇಳುವುದೂ ಕೂಡ ಕರುಣಾರಸಘಟ್ಟಿಯೇ ಆಗಿದೆ.

 ಆ ಬಳಿಕ ಅವಳನ್ನು ಕಳುಹಿಸುತ್ತಾ ಕಣ್ವರು ವನದೇವತೆಗಳಿಗೆ ಮರಗಿಡಗಳಿಗೆ ಹೀಗೆ ಹೇಳುತ್ತಾರೆ.

ಪಾತುಂ ನ ಪ್ರಥಮಂ ವ್ಯವಸ್ಯತಿ ಜಲಂ ಯುಷ್ಮಾಸ್ವಪೀತೇಷು ಯಾ

ನಾದತ್ತೇ ಪ್ರಿಯಮಂಡನಾಪಿ ಭವತಾಂ ಸ್ನೇಹೇನ ಯಾ ಪಲ್ಲವಂ

ಆದ್ಯೇ ವಃ ಕುಸುಮಪ್ರಸೂತಿ ಸಮಯೇ ಯಸ್ಯಾ ಭವತ್ಯುತ್ಸವಃ

ಸೇಯಂ ಯಾತಿ ಶಕುಂತಲಾ ಪತಿಗೃಹಂ ಸರ್ವೈರನುಜ್ಞಾಯತಾಂ||೯||

ಅನುವಾದ-

ಜಲವನದಾವಳೀಂಟಳೆರೆದಲ್ಲದೆ ನಿಮ್ಮಯ ಪಾತೆಗಂಬುವಂ

ತಳಿರ್ಗಳ ಕೊಯ್ಯಳಾವಳೊಲವಿಂ ಮಿಗೆ ಸಿಂಗರದಾಸೆಯುಳ್ಳೊಡಂ

ಅಲರ್ಗಳ ತಾಳೆ ನೀವು ಮೊದಲುತ್ಸವವಾಂತಪಳಾವಳಾ ಶಕುಂ-

ತಳೆ ಪತಿಸದ್ಮಕೈದಿದಪಳಾಕೆಗನುಜ್ಞೆಯನೀವುದೆಲ್ಲರುಂ||೯||

(ನೀವುಗಳು ನಿಮ್ಮ ಪಾತಿಗೆರೆದ ನೀರನ್ನು ಕುಡಿಯುವ ತನಕ ಯಾರು ತಾನು ನೀರು ಕುಡಿಯುತ್ತಿರಲಿಲ್ಲವೋ, ಯಾರು ತನೆಗೆ ಸಿಂಗರಿಸಿಕೊಳ್ಳುವ ಆಸೆಯಿದ್ದರೂ ಕೂಡ ನಿಮ್ಮ ಸ್ನೇಹದ ಕಾರಣ ಚಿಗುರುಗಳನ್ನು ಕೊಯ್ಯಿತ್ತಿರಲಿಲ್ಲವೋ, ಯಾರು ನಿಮಗೆ ಹೊಸ ಚಿಗುರು ಬಂದಾಗ ನಿಮಗಿಂತ ಮೊದಲು ಉತ್ಸವವನ್ನು ಹೊಂದುತ್ತಿದ್ದಳೋ ಆ ಶಕುಂತಳೆ ಈಗ ಗಂಡನ ಮನೆಗೆ ಹೋಗುತ್ತಿದ್ದಾಳೆ. ನೀವೆಲ್ಲರೂ ಅವಳಿಗೆ ಅನುಜ್ಞೆಯನ್ನು ಕೊಡಿ) ಗಂಡನ ಮನೆಗೆ ಹೊರಟ ಹೆಣ್ಣು ಮಗಳು ಮನೆಯಲ್ಲಿ ಮಾಡುತ್ತಿದ್ದ ಎಲ್ಲ ಬಾಲ್ಯದ ಆಟಗಳನ್ನೂ ಮನೆಯವರು ನೆನೆಸಿಕೊಳ್ಳುವುದಿಲ್ಲವೇ!

RELATED ARTICLES  ಕಳೆದುಹೋದ ಎಳೆಯ ದಿನಗಳು ಭಾಗ ೨೧

ಆಶ್ರಮವಾಸಿ ಶಕುಂತಲೆಗೆ ಹೂಬಳ್ಳಿಗಳಲ್ಲಿ ಮರಗಿಡಗಳಲ್ಲಿ ಎಷ್ಟು ಸ್ನೇಹವಿತ್ತೆಂಬುಬದನ್ನು ಕವಿ ಚಿತ್ರಿಸುತ್ತಾನೆ. ಒಂದು ಬಳ್ಳಿಗೆ “ವನಜ್ಯೋತ್ಸ್ನೆ” ಎಂಬ ಹೆಸರನ್ನು ಇಟ್ಟಿದ್ದಳು. ಹೋಗುವಾಗ ಸಖಿಯರಿಗೆ “ಸಖಿಯರೇ! ಈ ವನಜ್ಯೋತ್ಸ್ನೆಯನ್ನು ನಿಮ್ಮ ಕೈಗೊಪ್ಪಿಸುತ್ತಿರುವೆ” ಎಂದು ಹೇಳುತ್ತಾಳೆ. ಆಗ ಸಖಿಯರು “ಇದನ್ನೇನೋ ನಮ್ಮ ಕೈಗೆ ಕೊಟ್ಟೆ! ನಮ್ಮನ್ನು ಯಾರ ಕೈಗೆ ಒಪ್ಪಿಸುವೆ” ಎಂದು ಕಣ್ಣೀರುಗರೆಯುವ ಮಾತುಗಳೂ ಇವೆ.

ಆ ಬಳಿಕ ಕಣ್ವರು ದುಷ್ಯಂತರಾಜನಿಗೆ ಕಳಿಸುವ ಸಂದೇಶ-

ಅಸ್ಮಾನ್ ಸಾಧು ವಿಚಿನ್ತ್ಯ ಸಂಯಮಧನಾನುಚ್ಚೈಃ ಕುಲಂ ಚಾತ್ಮನ-

ಸ್ತ್ವಯ್ಯಸ್ಯಾಃ ಕಥಮಪ್ಯುಬಾನ್ಧವಕೃತಾಂ ಸ್ನೇಹಪ್ರವೃತ್ತಿಂ ಚ ತಾಮ್

ಸಾಮಾನ್ಯ ಪ್ರತಿಪತ್ತಿಪೂರ್ವಕಮಿಯಂ ದಾರೇಷು ದೃಶ್ಯಾ ತ್ವಯಾ

ಭಾಗ್ಯಾಯತ್ತಮತಃ ಪರಂ ನ ಖಲು ತದ್ವಾಚ್ಯಂ ವಧೂಬಂಧುಭಿಃ||೧೭||

ಅನುವಾದ-

ಪಿರಿದುಂ ಚಿಂತಿಸಿ ಸಂಯಮಾರ್ಥರೆನಿಪೆಮ್ಮಂ ಮೇಣ್ ಭವದ್ವಂಶದೆ-

ಳ್ತರಮಂ ನಿನ್ನೊಳಗೀಕೆ ತಾನೆಯೊಲವೆತ್ತಾ ಪಾಂಗುಮಂ ಪೆಂಡಿರೊಳ್

ಸರಿಗಂಡೀಕೆಯ ನೀಂ ಬರ್ದುಂಕಿಪುದು ಭಾಗ್ಯಾಧೀನಮಿನ್ನಂತರಿಂ

ಪೆರತೆಲ್ಲಂ ಬಗೆಯಲ್ಕದಂ ನುಡಿವುದಲ್ಲಂ ದಲ್ ವಧೂಬಂಧುಗಳ್||೧೭||

(ಸರಿಯಾದದನ್ನು ಚಿಂತಿಸಿ ಸಂಯಮಾರ್ಥರಾದ ನಮ್ಮನ್ನು ಹಾಗೂ ನಿನ್ನ ವಂಶದ ಔನ್ನತ್ಯವನ್ನು ಗಮನಿಸಿಕೊಂಡು ನಿನ್ನಲ್ಲಿ ಈಕೆ ತಾನಾಗಿಯೇ ಒಲವನ್ನು ಹೊಂದಿರುವ ರೀತಿಯನ್ನೂ ಕಂಡು ನಿನ್ನ ಹೆಂಡತಿಯರಲ್ಲಿ ಈಕೆಯನ್ನು ಸರಿಗಂಡಂತೆ ನೀನು ಬದುಕಿಸಬೇಕು. ಇದಕ್ಕಿಂತ ಹೆಚ್ಚಾಗಿ ಉಳಿದುದ್ದೆಲ್ಲ ಭಾಗ್ಯಾಧೀನವಾದದ್ದು. ಉಳಿದದ್ದನ್ನು ವಧುವಿನ ಬಂಧುಗಳು ನುಡಿಯುವುದೂ ಸರಿಯಲ್ಲ!)

ಯೋಗ್ಯವಾದದ್ದನ್ನು ಯೋಚಿಸಿ ವಿಚಾರಿಸಿಕೊಂಡು ನೀನು ಇವಳನ್ನು ನೋಡಿಕೊಳ್ಳುವುದು! ಉಳಿದದ್ದೆಲ್ಲ ಅವಳ ಅದೃಷ್ಟದಲ್ಲಿ ಇರುವಂತೆ ಆಗುತ್ತದೆ. ಇನ್ನುಳಿದದ್ದೇನನ್ನೂ ವಧುವಿನ ಬಂಧುಗಳು ನುಡಿಯಬಾರದು ಎಂದು ಹೇಳುವ ಮೂಲಕ ಅವರ ಮಿತಿಯನ್ನೂ ರಾಜನ ಕರ್ತವ್ಯವನ್ನೂ ಸೂಚಿಸುವ ಮಾತುಗಳು!

 ಆ ಬಳಿಕ ಶಕುಂತಲೆಗೆ ಗಂಡನ ಮನೆಯಲ್ಲಿ ಹೇಗಿರಬೇಕೆಂಬ ಉಪದೇಶ-

ಶುಶ್ರೂಷಸ್ವ ಗುರೂನ್ ಕುರು ಪ್ರಿಯಸಖೀವೃತ್ತಂ ಸಪತ್ನೀಜನೇ

ಭರ್ತುರ್ವಿಪ್ರಕೃತಾಪಿ ರೋಷಣತಯಾ ಮಾಸ್ಮ ಪ್ರತೀಪಂ ಗಮಃ

ಭೂಯಿಷ್ಠಂ ಭವ ದಕ್ಷಿಣಾ ಪರಿಜನೇ ಭಾಗ್ಯೇಷ್ವನುತ್ಸೇಕಿನೀ

ಯಾನ್ತ್ಯೇವಂ ಗೃಹಿಣೀಪದಂ ಯುವತಯೋ ವಾಮಾಃ ಕುಲಸ್ಯಾಧಯಃ||೧೮||

ಅನುವಾದ-

ಪಿರಿಯರ ಸೇವೆಗೈ ಸವತಿಯರ್ಕಳೊಳಿಷ್ಟವಯಸ್ಯೆಯಂದದಿಂ-

ದಿರು ಪತಿಯೊರ್ಮೆ ಹೇವಗೊಳಿಸಲ್ ಮುಳಿಸಿಂ ಪ್ರತಿಕೂಲೆಯಾಗದಿರ್

ಪರಿಜನವಂ ಕರಂ ಸಲಹು ಭಾಗ್ಯದೆ ಬಾಗಿರು ಪೆಣ್ಗಳಿಂತಿರಲ್

ಗರತಿಯರಪ್ಪರಿಂತಿರದರನ್ವಯಕಾಧಿಯನುಂಟುಮಾಳ್ಪರೌ||

(ಗಂಡನ ಮನೆಯಲ್ಲಿ ಹಿರಿಯರ ಸೇವೆಯನ್ನು ಮಾಡು, ಸವತಿಯರಲ್ಲಿ ಒಳ್ಳೆಯ ಸ್ನೇಹಿತೆಯಾಗಿರು. ಗಂಡನಲ್ಲಿ ವೈಮನಸ್ಯವುಂಟಾದರೆ ಕೋಪಗೊಂಡು ಅವನಿಗೆ ಪ್ರತಿಕೂಲೆಯಾಗದಿರು(ಹೊಂದಿಕೊಂಡು ಹೋಗು). ಸೇವಕರನ್ನು ಪರಿಜನರನ್ನು ಸಲಹು. ಭಾಗ್ಯದಲ್ಲಿ ಬಾಗಿರು, ಸ್ತ್ರೀಯರು ಹೀಗಿದ್ದರೆ ಗೃಹಿಣಿಯಾಗುತ್ತಾರೆ. ಇಲ್ಲದಿದ್ದರೆ ಕುಲಕ್ಕೇ ಹಾನಿಯಾಗುತ್ತಾರೆ, ಶಾಪವಾಗುತ್ತಾರೆ.)

ಗಂಡನ ಮನೆಗೆ ಹೊರಟ ಹೆಣ್ಣು ಮಕ್ಕಳಿಗೆ ಇಂತಹ ಮಾತುಗಳನ್ನು ಹೇಳುವುದು ತುಂಬಾ ಸಹಜವಾದದ್ದು, ಇದು ಪ್ರತಿಯೊಂದು ಮನೆಯ ಕಥಾನಕವೇ ಆಗಿದೆ. ನಮ್ಮ ಮನಸ್ಸಿನಲ್ಲಿ ಕೂಡ ಇಂತಹ ಭಾವನೆ ಹುಟ್ಟುತ್ತದೆಯಾದರೂ ಅದು ಮಾತುಗಳಲ್ಲಿ ಹೊಮ್ಮಿರುವುದಿಲ್ಲ. ಕವಿಗಳು ಮಾತನ್ನು ವಶಪಡಿಸಿಕೊಂಡವರು. ಭಾವನೆಯನ್ನು ಸೂಕ್ತಪದಗಳ ಮೂಲಕ ಸೆರೆಹಿಡಿದಿಡಬಲ್ಲವರು. ಹಾಗಾಗಿ ಇಂತಹ ಸಂದರ್ಭದ ಸೂಕ್ಷ್ಮಗಳನ್ನು ಯಥಾವತ್ತಾಗಿ ತೋರಿಸುತ್ತಾರೆ. ಕಾವ್ಯಗಳೆಂದರೆ ನಮ್ಮ ಬದುಕನ್ನೇ ಕನ್ನಡಿ ಹಿಡಿದು ತೋರಿಸುವುದೇ ಅಲ್ಲವೇ! ಇಂತಹ ಕಾವ್ಯವನ್ನು ರಚಿಸುವವನೇ ಮಹಾಕವಿಯಲ್ಲವೇ! ಇಂತಹ ಅಮೂಲ್ಯವಾದ ಕೃತಿಯನ್ನು ಕೊಟ್ಟ ಕಾಳಿದಾಸನೂ ಅದನ್ನು ಕನ್ನಡಕ್ಕೆ ತಂದ ಬಸವಪ್ಪ ಶಾಸ್ತ್ರಿಗಳೂ ಭುವನದ ಭಾಗ್ಯದಿಂದಲೇ  ಉದಯಿಸಿದವರಲ್ಲವೇ!