‘ನೀನು ನಂಬುವ ಸಿದ್ದಾಂತವನ್ನು ನನ್ನ ಜೀವ ಇರುವವರೆಗೂ ನಾನು ಒಪ್ಪಲು ಸಾಧ್ಯವಿಲ್ಲ. ಆದರೆ ಆ ಸಿದ್ದಾಂತವನ್ನು ಪ್ರಚಾರ ಮಾಡಲು ನಿನಗಿರುವ ಹಕ್ಕಿಗಾಗಿ ನನ್ನ ರಕ್ತದ ಕೊನೆ ಉಸಿರಿರುವವರೆಗೂ ಹೋರಾಡುವೆ..’ ಇದು ಪ್ರಜಾಪ್ರಭುತ್ವದ ಕುರಿತಾಗಿ ಇದುವರೆಗೂ ಬಂದಿರುವ ಅತ್ಯಂತ ಶ್ರೇಷ್ಠ ಹೇಳಿಕೆಗಳಲ್ಲಿ ಒಂದು. ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಇಂದು ನಾಗ್ಪುರ್ ದ ಆರ್ ಎಸ್ ಎಸ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಈ ಹೇಳಿಕೆಗೆ ಮತ್ತಷ್ಟು ಗೌರವ ತಂದು ಕೊಟ್ಟಿದ್ದಾರೆ.
ನಾಗ್ಪುರದಲ್ಲಿರುವ ಆರ್ ಎಸ್ ಎಸ್ ಕೇಂದ್ರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಭಾಗವಹಿಸಿದ್ದರು. ಜೀವಮಾನವೀಡಿ ಆರ್ ಎಸ್ ಎಸ್ ವಿರೋಧಿ ರಾಜಕಾರಣ ಮಾಡಿದ ಪ್ರಣಬ್, ಇಂದು ಅದರ ಸಭೆಯಲ್ಲಿ ಭಾಗವಹಿಸಿದ್ದರ ಕುರಿತು ಪರ ವಿರೋಧದ ಚರ್ಚೆ ನಡೆಯುತ್ತಲೇ ಇದೆ. ಇದರ ಮಧ್ಯೆಯೇ ಪ್ರಣಬ್ ಮುಖರ್ಜಿ ಆರ್ ಎಸ್ ಎಸ್ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ್ದಾರೆ.
“ಭಾರತದ ವಿಷಯದಲ್ಲಿ ರಾಷ್ಟ್ರ, ರಾಷ್ಟ್ರೀಯತೆ ಮತ್ತು ದೇಶಭಕ್ತಿಯ ಪರಿಕಲ್ಪನೆ ಮತ್ತು ನಿಮ್ಮೊಂದಿಗೆ ನನ್ನ ತಿಳುವಳಿಕೆಯನ್ನು ಹಂಚಿಕೊಳ್ಳಲು ನಾನು ಇಲ್ಲಿದ್ದೇನೆ,” ಎಂದು ಮುಖರ್ಜಿ ಭಾಷಣ ಆರಂಭಿಸಿದರು.
ಒಂದು ರೀತಿಯಲ್ಲಿ ಪ್ರಣಬ್ ಮಾತು ಆರ್.ಎಸ್.ಎಸ್ ನ ಕುಡಿ ಮೀಸೆಯ ಯುವಕರಿಗೆ ಪಾಠದಂತಿತ್ತು. “ತತ್ವಗಳು ಮತ್ತು ಗುರುತು ಅಥವಾ ಧರ್ಮ, ಪ್ರದೇಶ, ದ್ವೇಷ ಮತ್ತು ಅಸಹಿಷ್ಣುತೆಗಳ ವಿಷಯದಲ್ಲಿ ನಮ್ಮ ರಾಷ್ಟ್ರತ್ವವನ್ನು ವಿವರಿಸುವ ಯಾವುದೇ ಪ್ರಯತ್ನ ನಮ್ಮ ಗುರುತನ್ನು ದುರ್ಬಲಗೊಳಿಸುತ್ತದೆ,” ಎಂದು ಅವರು ಇದೇ ಸಂದರ್ಭದಲ್ಲಿ ಕಿವಿಮಾತು ಹೇಳಿದರು.
“ಸಂಘರ್ಷ ಮತ್ತು ಸಮೀಕರಣದ ದೀರ್ಘಕಾಲದ ಪ್ರಕ್ರಿಯೆಯ ನಂತರ ನಮ್ಮ ರಾಷ್ಟ್ರೀಯ ಗುರುತು ಹೊರಹೊಮ್ಮಿದೆ. ಅನೇಕ ಸಂಸ್ಕೃತಿಗಳು ಮತ್ತು ನಂಬಿಕೆಗಳು ನಮಗೆ ವಿಶೇಷವಾಗಿಸಿವೆ ಮತ್ತು ಸಹಿಷ್ಣುಗಳನ್ನಾಗಿಸಿದೆ,” ಎಂದು ಅವರು ವಿವರಿಸಿದರು.