ಯೋಗವೆಂದರೆ ವಿಯೋಗ ಎಂದು ಶ್ರೀಕೃಷ್ಣ ಭಗವದ್ಗೀತೆಯಲ್ಲಿ ಹೇಳುತ್ತಾನೆ.
ತಂ ವಿದ್ಯಾತ್ ದುಃಖಸಂಯೋಗವಿಯೋಗಂ ಯೋಗಸಂಜ್ಞಿತಮ್||
ಯೋಗವೆಂದರೆ, ಸರ್ವ ದುಃಖಗಳ ವಿಯೋಗ ಅಂದರೆ, ಎಲ್ಲಾ ದುಃಖಗಳಿಗೂ ಪರಿಹಾರ ಯೋಗದಲ್ಲಿದೆ ಎನ್ನುವ ಭಾವ. ಆದುದರಿಂದಲೇ ಯೋಗವು ಸಕಲ ಜೀವಗಳಿಗೂ ಪ್ರಸ್ತುತ. ಅದಕ್ಕೆ ವರ್ಣಭೇದವಿಲ್ಲ, ಎಲ್ಲರಿಗೂ ಉಪಯುಕ್ತವಾಗುವಂತಹದ್ದು, ದುಃಖ ಯಾರಿಗೆ ಬೇಕು? ದುಃಖ ಪರಿಹಾರ ಯಾರಿಗೆ ಬೇಡ? ಎಲ್ಲರಿಗೂ ಅಗತ್ಯವಲ್ಲವೇ? ಹಾಗಾಗಿಯೇ ಯೋಗ ಪ್ರತಿಯೊಂದು ಜೀವಕ್ಕೂ ಪ್ರಸ್ತುತವಾದದ್ದು.

ಗೀತಾಚಾರ್ಯರ ಇನ್ನೊಂದು ಮಾತಿದೆ.
ಉದ್ಧರೇದಾತ್ಮನಾತ್ಮಾನಂ ನಾತ್ಮಾನಮವಸಾದಯೇತ್ |
ಆತ್ಮೈವ ಹ್ಯಾತ್ಮನೋ ಬಂಧುರಾತ್ಮೈವ ರಿಪುರಾತ್ಮನಃ ||
ಅಂದರೆ ತನ್ನ ಉದ್ಧಾರವನ್ನು ತಾನೇ ಮಾಡಿಕೊಳ್ಳಬೇಕು. ತನ್ನನ್ನು ತಾನು ಹಾಳು ಮಾಡಿಕೊಳ್ಳಬಾರದು. ತಾನೇ ತನ್ನ ಶತ್ರು ತಾನೇ ತನ್ನ ಮಿತ್ರ. ಇದ್ಯಾಕೆ ನೆನಪು ಮಾಡಿಕೊಂಡೆವೆಂದರೆ ನಾವು ಉದ್ಧಾರ ಆಗೋದಕ್ಕೆ ಹೊರಗಿನ ಯಾವ ಸಂಗತಿಗಳೂ ಬೇಕಾಗೋದಿಲ್ಲ. ನಮ್ಮ ದೇಹ, ನಮ್ಮ ಮನಸ್ಸು, ನಮ್ಮ ಮಾತು, ಇದೇ ಸಾಕು. ಬೇರೇನೂ ಬೇಕಾಗೋದಿಲ್ಲ. ಹಾಗಾಗಿ ಯೋಗವೆಂದರೆ, ಬೆಂಡಿಂಗ್ ದಿ ಬಾಡಿ(bending the body)ಅಷ್ಟೇ ಅಲ್ಲ, ಬೆಂಡಿಂಗ್ ದಿ ಮೈಂಡ್ (bending the mind) ಕೂಡಾ. ಯೋಗವೆಂದರೆ ಅದು ಶರೀರ ಮನಸ್ಸುಗಳನ್ನು ಒಂದು ವ್ಯವಸ್ಥೆಗೊಳಪಡಿಸುವಂತಹದ್ದು, ಒಂದು ಸ್ಥಿರತೆಗೊಳಪಡಿಸುವಂತಹದ್ದು. ಇದರ ಮತ್ತೂ ಅದ್ಭುತ ವಿಷಯವೇನೆಂದರೆ ಆತ್ಮ ನಿರ್ಭರತೆ, ಹೊರಪ್ರಪಂಚದ ಇನ್ನೊಂದು ಸಂಗತಿಯನ್ನ, ಶರೀರದ ಹೊರಗಿನ ಒಂದೇ ಒಂದು ಸಂಗತಿಯನ್ನೂ ಬಳಸದೇನೆ ಆತ್ಮೋದ್ಧಾರವನ್ನು ಸಾಧನೆ ಮಾಡುವಂತಹದ್ದು.

RELATED ARTICLES  ಕನ್ನಡ ಉಳಿಯ ಬೇಕಾದರೆ ಕನ್ನಡೇತರರು ಕನ್ನಡ ಮಾತಾಡಬೇಕೆ ಅಥವಾ ಕನ್ನಡಿಗರು ಕನ್ನಡ ಮಾತಾಡಬೇಕೆ ?

ಕೇವಲ ಆತ್ಮೋದ್ಧಾರ, ಲೋಕೋದ್ಧಾರ ಮಾತ್ರ ಅಲ್ಲ. ಸಣ್ಣ ಸಣ್ಣ ಪ್ರಯೋಜನಗಳೂ ಕೂಡ ಇದೆ. ಅದು ಆರೋಗ್ಯ ಇರಬಹುದು, ಏಕಾಗ್ರತೆ ಇರಬಹುದು, ಶರೀರದ ಲಘುತ್ವ ಇರಬಹುದು, ಆಯುಷ್ಯದ ವೃದ್ಧಿ ಇರಬಹುದು, ಮನಸ್ಸಿನ ಸಮಾಧಾನ ಇರಬಹುದು, ಇಂತಹ ಚಿತ್ರ ವಿಚಿತ್ರವಾಗಿರತಕ್ಕಂತಹ ಪ್ರಯೋಜನಗಳು ಕೂಡಾ ಯೋಗದಿಂದ ಆಗುತ್ತವೆ. ಶರೀರದ ಒಂದೊಂದು ಅವಯವಗಳು, ಇಂದ್ರಿಯಗಳೂ ಕೂಡಾ ಪಟುವಾಗಿ ಕೆಲಸಮಾಡುವಂತಾಗುತ್ತದೆ. ಆದರೆ ಪರಿಪೂರ್ಣ ಆನಂದ, ಶಾಶ್ವತ ಶಾಂತಿ ಅದುವೇ ಯೋಗದ ಮುಖ್ಯ ಉದ್ದೇಶ. ಉಳಿದವು ಅದರ ಜೊತೆಗೆ ಪೂರಕವಾಗಿ ಬರುವಂತಹ ಪ್ರಯೋಜನಗಳು. ಹಸುವನ್ನು ಕೊಂಡರೆ, ಹಗ್ಗವೂ ಜತೆಯಲ್ಲಿ ಬರುವ ಹಾಗೆ, ಯೋಗ ಸಾಧನೆ ಮಾಡುವಾಗ ಪರಮಸುಖದ ಜತೆಗೆ ಸಣ್ಣ ಸಣ್ಣ ಸುಖಗಳೂ ಅನೇಕವು ಪೂರಕವಾಗಿ ನಮಗೆ ಕೂಡಿ ಬರುತ್ತವೆ. ಒದಗಿ ಬರುತ್ತವೆ. ಎಂದಿಗೂ ನಾವು ಸಣ್ಣ ಸಣ್ಣದರ ಮೇಲೆ ಕಣ್ಣು ಇಡಬಾರದು. ದೊಡ್ಡದರ ಮೇಲೆ ಕಣ್ಣು ಇಡಬೇಕು. ಆಗ ಜೊತೆಯಲ್ಲಿಯೇ ಸಣ್ಣ ಸಣ್ಣ ಸಂಗತಿಗಳು ಕೂಡಾ ಸಾಧನೆಯಾಗಿಬಿಡುತ್ತದೆ.

ಇಂದು ವಿಶ್ವ ಯೋಗ ದಿನ. ಹಾಗೆ ನೋಡಿದರೆ, ಪ್ರತಿ ದಿನವೂ ಕೂಡಾ ಯೋಗ ದಿನವೇ. ಪ್ರತಿ ದಿನವೂ ಯೋಗ ದಿನ ಆಗ್ಲಿ, ಆಗ್ಬೇಕು ಅಂತ ನೆನಪು ಮಾಡೋದಿಕ್ಕೆ ಒಂದು ದಿನ ಬೇಕಲ್ವಾ, ಅದು ಈ ವಿಶ್ವಯೋಗ ದಿನ. ವಿಶ್ವಕ್ಕೆ ಭಾರತದ ಒಂದು ಸರ್ವೋತ್ಕೃಷ್ಟ ಕೊಡುಗೆ, ಅತ್ಯದ್ಬುತವಾದ ಕೊಡುಗೆ ಯೋಗ. ಕಾಲ ಇವತ್ತು ಹೇಗೆ ಬಂದಿದೆ ಎಂದರೆ ಪ್ರಪಂಚವೆಲ್ಲವೂ ಯೋಗವನ್ನು ಒಪ್ಪಿಕೊಂಡಿದೆ. ಇದಕ್ಕೆ ಭಾರತೀಯರು ಹೆಮ್ಮೆ ಪಡಬೇಕು. ಸ್ವಲ್ಪ ನಾಚಿಕೆ ಕೂಡಾ ಪಟ್ಟುಕೋಬೇಕಾಗುತ್ತೆ. ಯಾಕೆಂದರೆ, ಯೋಗವನ್ನು ಪ್ರಪಂಚವೆಲ್ಲಾ ಒಪ್ಪಿಕೊಂಡಿದೆ, ಮುಸ್ಲಿಂ ರಾಷ್ಟ್ರಗಳು ಕೂಡಾ ಒಪ್ಪಿಕೊಂಡಿದಾವೆ, ಆದರೆ ನಾವೇ ಯೋಗವನ್ನು ಅಧ್ಯಯನ ಮಾಡುತ್ತಿಲ್ಲ ಮತ್ತು ಸರಿಯಾಗಿ ಯೋಗಾಭ್ಯಾಸವನ್ನು ಮಾಡ್ತಾ ಇಲ್ಲ. ಇದೊಂದು ತುಂಬಾ ಚಿಂತೆಯ ಸಂಗತಿ. ಇನ್ನೊಂದು ಸಂಗತಿ ಎಂದರೆ ಯೋಗದ ಹೆಸರಲ್ಲಿ ಏನೇನೋ ಬರ್ತಾ ಇರುವಂತಹದ್ದು, ಯೋಗ ಒಂದು ಮಾರ್ಕೆಟ್ ವಸ್ತು ಯಾವಾಗ ಆಯಿತೋ, ನಂತರ ಪರಿಶುದ್ಧ ಮೂಲ ಯೋಗದ ಬದಲಿಗೆ, ನಾನಾ ರೀತಿಯ ವಿಕಾರಗಳು ಆ ಹೆಸರಲ್ಲಿ ಬರ್ತಾ ಇದ್ದಾವೆ. ಅದೊಂದು ದಂಧೆ ತರಹ ಆಗಿಬಿಟ್ಟಿದೆ. ಹಾಗೆ ಆಗಬಾರದು. ಮೂಲ ಯೋಗ, ಪರಿಶುದ್ಧ ಭಾರತೀಯ ಯೋಗ ಉಳಿದು, ಬೆಳೆದು ವಿಶ್ವವೆಲ್ಲವನ್ನು ವ್ಯಾಪಿಸಿ, ವಿಶ್ವಕ್ಕೆ ಆರೋಗ್ಯವನ್ನೂ ಮತ್ತು ಪರಿಪೂರ್ಣ ಸುಖವನ್ನೂ, ಪರಿಪೂರ್ಣ ಶಾಂತಿಯನ್ನು ಕೊಡುವಂತಾಗಲಿ ಎನ್ನುವುದೇ ವಿಶ್ವ ಯೋಗ ದಿನದ ಆಶಂಸೆ.

RELATED ARTICLES  ಬದುಕಿಗೆ ಬಣ್ಣ ತುಂಬಿದವರು