Home Article ಕನ್ನಡ ಉಳಿಯ ಬೇಕಾದರೆ ಕನ್ನಡೇತರರು ಕನ್ನಡ ಮಾತಾಡಬೇಕೆ ಅಥವಾ ಕನ್ನಡಿಗರು ಕನ್ನಡ ಮಾತಾಡಬೇಕೆ ?

ಕನ್ನಡ ಉಳಿಯ ಬೇಕಾದರೆ ಕನ್ನಡೇತರರು ಕನ್ನಡ ಮಾತಾಡಬೇಕೆ ಅಥವಾ ಕನ್ನಡಿಗರು ಕನ್ನಡ ಮಾತಾಡಬೇಕೆ ?

ನಮ್ಮ ಸುತ್ತಲು ಅನ್ಯ ರಾಜ್ಯದಿಂದ ಬಂದ ವ್ಯಾಪಾರಿಗಳ, ಕೂಲಿ ಕಾರ್ಮಿಕರ ಹಾವಳಿ ಹೆಚ್ಚುತ್ತಿದೆ ಇದರಿಂದ ಕನ್ನಡಕ್ಕೆ ಅಪಾಯ ಎದುರಾಗುತ್ತಿದೆ ಆದ್ದರಿಂದ ಅವರೆಲ್ಲ ಕಡ್ಡಾಯ ಕನ್ನಡಮಾತಾಡಲೇಬೇಕು ಇಲ್ಲವೇ ಅವರನ್ನು ಓಡಿಸಬೇಕು
ಇಂತದೊಂದು ಆಕ್ರೋಶಭರಿತ ವಾದ ಇತ್ತೀಚಿಗೆ ಕೇಳಿಬರುತ್ತಿದೆ.ಒಕ್ಕೂಟ ವ್ಯವಸ್ಥೆಯ ಪ್ರಜಾಪ್ರಭತ್ವದ ರಾಷ್ಟ್ರದಲ್ಲಿ ಇದು ಎಷ್ಟು ಸಮಂಜಸ ಎಂಬುದು ಅರ್ಥವಾಗುತ್ತಿಲ್ಲ ! ರಾಜಸ್ಥಾನಿಗಳು ಮಾರವಾಡಿಗಳು ಹೆಚ್ಚುತ್ತಿದ್ದಾರೆ ಇವರಿಂದ ಕನ್ನಡ ಹಾಳಾಗುತ್ತಿದೆ ಎಂಬುದು ಅವರ ವಾದ ಹಾಗೆ ನೋಡಿದರೆ ಇಂದು ಸ್ಥಳೀಯ ವರ್ತಕರಿಂದ ಖರೀದಿಸುವ ಬದಲು ಆನ್ ಲೈನ್ ಖರೀದಿಯೇ ಹೆಚ್ಚಾಗಿದೆ ಇದರ ವಿರುದ್ಧವೂ ಹೋರಾಟ ಆಗಬೇಕು ಎಂದು ಹೊಸವಾದ ಹುಟ್ಟಿಕೊಂಡರೂ ಅಚ್ಚರಿಯಿಲ್ಲ !

ಸಾಮಾವ್ಯವಾಗಿ ಕನ್ನಡಿಗರ ಸ್ವಭಾವವೇ ಅಂತದ್ಧು ಎಲ್ಲರಿಗೂ ಹೊಂದಿಕೊಳ್ಳುವಂತದ್ದು ಎದುರಿಗಿದ್ದವರಿಗೆ ಕಷ್ಟಕೊಡಬಾರದು ಎಂದು ನಾವು ಅವರಿಗೆ ಅನುಕೂಲ ಮಾಡಲು ಹೋಗಿ ನಾವೇ ಅವರೊಂದಿಗೆ ಅವರಭಾಷೆ ಮಾತನಾಡಲು ಮುಂದಾಗುತ್ತೇವೆಯೇ ಹೊರತು ಇದರಲ್ಲಿ ಅವರ ತಪ್ಪೇನಿದೆ? ಕುಮಟಾದ ಬಹುತೇಕ ಮಾರವಾಡಿಗಳು ಕನ್ನಡವನ್ನು ಸೊಗಸಾಗಿಮಾತನಾಡುತ್ತಾರೆ
ಹಾಗು ಹೆಚ್ಚಿನವರು ಪ್ರಾಥಮಿಕ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲೇ ಪೂರೈಸಿದವರೂ ಇದ್ದಾರೆ ಅವರನ್ನೇಕೆ ಓಡಿಸಬೇಕು? ಹಾಗೆ ನೋಡಿದರೆ ಇಂದಿಗೂ ನಮ್ಮನಡುವೆಯೇ ಬದುಕುತ್ತಿರುವ ಒಂದು ಮತದವರಲ್ಲಿ ಅತೀ ಹೆಚ್ಚು ಮಂದಿ ಕನ್ನಡವನ್ನು ಸ್ಪಷ್ಟವಾಗಿ ಮಾತನಾಡಲಾರರು ಬರೆಯಲಾರರು ಹೋರಾಟಗಾರರು ಅವರನ್ನು ಓಡಿಸುವರೇ ?ಇದು ಸಾಧ್ಯವಾದಮಾತೆ ?ಅಥವಾ ಅವರುಗಳು ಕಡ್ಡಾಯ ಕನ್ನಡ ಮಾತನಾಡುವಂತೆ ಮಾಡಬಲ್ಲ ಸಾಧ್ಯತೆಗಳಿವೆಯೆ? ಕನ್ನಡವನ್ನು ಹೊರಗಿನಿಂದ ಬಂದವರಿಂದ ಬಚಾವ್ ಮಾಡುವುದು ಸಂಗತಿಯಲ್ಲ ಅಚ್ಚ ಕನ್ನಡದ ಸಂಸ್ಕೃತಿಯವರು ನಾವೆಷ್ಟು ಕನ್ನಡ ಉಳಿಸಿಕೊಂಡಿದ್ದೇವೆ ?
ನಮ್ಮ ಮಕ್ಕಳಿಗೆ ಮನೆಯ ಸಂಬಂಧಗಳಾದ ಅಪ್ಪ ಅಮ್ಮ ಅಜ್ಜ ಅಜ್ಜಿ ಚಿಕ್ಕಪ್ಪ ಚಿಕ್ಕಮ್ಮ ದೊಡ್ಡಪ್ಪ ದೊಡ್ಡಮ್ಮ ಅತ್ತೆ ಮಾವ ಅಳಿಯ ನೆಂಟ ಸಡ್ಕ ಅಕ್ಕ ಭಾವ ಮೊದಲಾದ ಸಂಬಂಧಗಳನ್ನು ದಿನನಿತ್ಯ ವ್ಯವಹಾರದ ಅನೇಕ ಪದಗಳನ್ನು ಕಲಿಸಿದ್ದೇವಾ ? ನಮ್ಮ ಮಕ್ಕಳಿಗೆ ಅಪ್ಪನ ತಮ್ಮನೂ ಅಂಕಲ್ ಪೇಪರ್ ಹಾಕುವವನೂ ಅಂಕಲ್ ಅಮ್ಮನ ತಂಗಿಯೂ ಆಂಟಿ ಹಾಲು ಮಾರುವವಳೂ ಆಂಟಿ ಆಗಿರುವಾಗ ಕನ್ನಡ ಹಾಳುಮಾಡಿದ್ದು ಯಾರು ? ಕನ್ನಡ ಉಳಿಸಬೇಕು ಎಂದು ಕೂಗಾಡುವ ನನ್ನಂಥವರು ನಮ್ಮ ಮಕ್ಕಳನ್ನು ಯಾವ ಮಾಧ್ಯಮದ ಶಾಲೆಗಳಿಗೆ ಕಳುಹಿಸುತ್ತಿದ್ದೇವೆ ?

ಪ್ರತಿವರ್ಷ ನೂರಾರು ಕನ್ನಡ ಶಾಲೆಗಳ ಕದ ಶಾಶ್ವತವಾಗಿ ಮುಚ್ಚಲಾಗುತ್ತಿದೆ ಇದನ್ನು ನಿಲ್ಲಿಸುವಲ್ಲಿ ಕನ್ನಡದವರ ಪಾತ್ರ ಏನು ? ಇದಕ್ಕೆ ಕಾರಣ ಹೊರರಾಜ್ಯದವರೇ ? ಗೋವಿಂದೇಗೌಡರ ಕೃಪಾಶೀರ್ವಾದದ ಫಲವಾಗಿ ಸಾವಿರ ಸಾವಿರ ಕನ್ನಡದ ಕಟ್ಟಾಳುಗಳು ಸಿದ್ಧರಾದರು ಅವರ ಬಡತನ ನೀಗಿತು ಆದರೆ ಅವರಿಂದ ಕನ್ನಡ ಶ್ರೀಮಂತವಾಯಿತೆ ? ಕಗ್ಗೊಲೆಯಾಯಿತೆ ? ಅವರ ವಾರಸುದಾರರು ಎಷ್ಟು ಮಂದಿ ಕನ್ನಡ ಶಾಲೆಗಳನ್ನು ಬದುಕಿಸಿದರು ?
ಇಂದು ಹೊರರಾಜ್ಯದ ಕೂಲಿಕಾರ್ಮಿಕರ ಹಾವಳಿ ಹೆಚ್ಚಲು ಯಾರು ಕಾರಣ ?ಕನಿಷ್ಟ ಪಿಯುಸಿ ಸಲೀಸು ಪಾಸಾಗುವ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ನಮ್ಮಮಕ್ಕಳು ಕೈಯಲ್ಲಿ ಸಾವಿರ ಸಾವಿರದ ಬೆಲೆಬಾಳುವ ಮೊಬೈಲ್ ಹಿಡಿದು ಕಟ್ಟೆಯ ಮೇಲೆ ಕುಳಿತುಕೊಂಡು ಕಾಲೇಜು ಕಲಿತ ನಾನು ಕೂಲಿ ಹೇಗೆ ಮಾಡಲಿ? ಮಾಡಿದರೂ ಮೂರು ತಾಸೇ ! ಅದಕ್ಕೆ ಸಾವಿರ ಕೊಡಿ ಎಂದರೆ ಉದ್ಯಮಿಗಳು ಇವರನ್ನು ನಂಬಿ ಬದುಕಲಾದಿತೆ ? ಮೊದಲು ನಾವು ನಮ್ಮ ಮನೆ ಸುಧಾರಿಸಬೇಕಾಗಿದೆ. ಹವ್ಯಕರು ಹವಿಗನ್ನಡ,ನಾಡವರು ಅವರ ಕನ್ನಡ ಹೀಗೆ ಅವರವರು ಅವರ ಸಮುದಾಯದ ಕನ್ನಡವನ್ನು ಉಳಿಸುವಾ ಅದನ್ನು ಬಿಟ್ಟು ಆಗತ್ತೆ, ಆಗಲ್ಲಾ, ಮಗಾ ಮಚ್ಚಾ ಅಂತೆಲ್ಲ ಧಾರಾವಾಹಿಯ ಶುಷ್ಕ ಕನ್ನಡವನ್ನಲ್ಲ…..ಹೊರಗಿನವರೇ ಇರಲಿ ಒಳಗಿನವರೇ ಇರಲಿ ಎಲ್ಲರೂ ಕನ್ನಡದ ಮನಸ್ಥಿತಿಯನ್ನು ಹೊಂದುವ ಕನ್ನಡ ಕಟ್ಟುವಾ ಕನ್ನಡ ಉಳಿಸುವ.

ನಮಸ್ಕಾರ…

ಕಾಗಾಲ ಚಿದಾನಂದ ಭಂಡಾರಿ