ಲೇಖಕರು :- ಶುಭಾ ಗಿರಣಿಮನೆ.
ನಾವು ಅಂದುಕೊಳ್ಳುತ್ತೇವೆ ಹೀಗೆ ಆಗಬೇಕು ಎಂದು. ಆದರೆ ನಾವು ಅಂದುಕೊಳ್ಳುವಂತೆ ನಮ್ಮ ಜೀವನ ಸಾಗುವುದಿಲ್ಲ. ಎಷ್ಟೋ ಅಡೆತಡೆಯ ಗೋಡೆಗಳು ನಮ್ಮ ಮುಂದೆ ತಿಳಿಯದಂತೆ ದುತ್ತನೇ ಎದ್ದು ನಿಲ್ಲುತ್ತವೆ. ಕೆಲವು ಬಾರಿ ಆ ಗೋಡೆ ಸರಿಸಿ ಮುಂದೆ ಹೋಗುವಾಗ ಹೈರಾಣವಾಗುವುದು ಉಂಟು. ಆದರೂ ಛಲಬಿಡದೇ ಮುನ್ನುಗ್ಗಿ ಕಂಡ ಕನಸು ನನಸಾಗಿಸಿಕೊಳ್ಳುವವರಿದ್ದಾರೆ ಅಂತಹ ಮಂದಿ ಕೇವಲ ಬೆರಳಣಿಕೆಯಷ್ಟು. ಅರ್ಧ ಚಲಿಸಿ ಸೋತು ಕೈ ಚಲ್ಲಿ ಹೋಗುವವರು ಬಹುಪಾಲು. ಕಷ್ಟವೂ ಬೇಡ ದುಡಿಮೆಯೂ ಬೇಡ ಹೋಗಲಿ ಭಿಕ್ಷೆಯೂ ಬೇಡ ಸಿಕ್ಕಿದ್ದು ತಿಂದುಂಡು ಭೂಮಿಗೆ ಭಾರವೆನಿಸಿ ಬದುಕು ಕಳೆಯುವ ಆಳಸಿಗಳಿಗೆ ಹೀಗೆ ಬದುಕಬೇಕು ಎನ್ನುವ ನಿರ್ಧಾರ ಮಾಡುವುದಿರಲಿ ಜೀವನ ಎಂದರೇನು ಅನ್ನುವುದು ಕೂಡ ತಿಳಿದಿರಲಿಕ್ಕಿಲ್ಲ.
ಈ ಮೂರನೇ ವರ್ಗಕ್ಕೆ ಹೆಣ್ಣು ಮಕ್ಕಳು ಸೇರುವುದಿಲ್ಲ. ತಿಂದುಂಡು ಮಲಗಲು ಅವರಿಂದ ಸಾಧ್ಯವಾಗದು. ಇಲ್ಲವೇ ಇಲ್ಲ ಅಂತವರು ಎಂದಲ್ಲ. ಯಾಕೆ ಸಾಧ್ಯವಾಗದು ಎಂದು ಕೇಳುತ್ತಿರ! ಮನೆಯ ಜವಬ್ದಾರಿ ಎನ್ನುವುದು ಅವರ ಹೆಗಲ ಮೇಲೆ ಸದಾ ಕೂತಿರುತ್ತದೆ. ವೈವಾಹಿಕ ಜೀವನಕ್ಕೆ ಕಾಲಿರಿಸುವ ತನಕ ಚಿಕ್ಕವಳು ಎಂದು ತಿರುಗಾಡಿಕೊಂಡಿದ್ದರೂ ಮದುವೆ ಎನ್ನುವ ಬ್ರಹ್ಮ ಗಂಟು ಬಿದ್ದ ಮೇಲೆ ಬೇಡವೆಂದರೂ ಸಂಸಾರದ ನೊಗ ಹೋರಲೇ ಬೇಕು.
ಸರಾಗವಾಗಿ ಹೆಣ್ಣುಮಕ್ಕಳಿಗೆ ಹೇಳಿ ಬಿಡುವ ಮಾತು ಮನೆಲಿ ನಿಮಗೇನು ಕೆಲಸ ಎಂದು. ನಿಜ ಹೆಂಗಸರು ಮಾಡುವ ಕೆಲಸಗಳು ಕಣ್ಣಿಗೆ ಕಾಣಿಸುವಂಥದ್ದಲ್ಲ. ಇದು ಹೇಗೆಂದರೆ ತಲೆ ನೋವು, ಹಲ್ಲು ನೋವು ಇಂಥಹವು ಬಂದಾಗ ಕಣ್ಣಿಗೆ ಕಾಣಿಸುವುದಿಲ್ಲ ಆದರೆ ವಿಪರೀತ ನೋವಿನ ಬಾಧೆ ತಾಳಲೂ ಸಾಧ್ಯವಾಗುವುದಿಲ್ಲ. ಹಾಗೆಯೇ ಮನೆಯ ಕೆಲಸಗಳು ಮುಗಿಯುವುದೂ ಇಲ್ಲ. ಬಾಯಿ ಬಿಟ್ಟು ಇಂಥಾದ್ದೇ ಕೆಲಸ ಮಾಡಿದೆ ಎಂದು ಸಾರಲು ಆಗುವುದಿಲ್ಲ. ಅಡುಗೆ ಮಾಡಿದೆ ಎನ್ನಬಹುದೇ ಹೊರತು ಅಲ್ಲಿ ಎಷ್ಟು ಕೆಲಸಗಳು ನಡೆದವು ಎಂದು ಸವಿವರವಾಗಿ ಹೇಳುತ್ತ ಇರಲು ಸಾಧ್ಯವಿಲ್ಲ. ಅದೇ ಒಂದು ಆಫೀಸಲ್ಲಾದರೆ ಕಣ್ಣಿಗೆ ಕಾಣುವಂತೆ ಕೆಲಸವೂ ನಡೆಯುತ್ತದೆ ಅದಕ್ಕೆ ಶ್ರಮವಾಗಿ ಹಣವೂ ಜಮವಾಗುತ್ತದೆ. ಹೆಂಗಸರ ಮನೆ ಕೆಲಸಗಳು ಒಂದು ಬಿಡಿಬಿಡಿ ಹೂಗಳು ಇದ್ದಂತೆ ಅದೆಲ್ಲವನ್ನು ಒಪ್ಪವಾಗಿ ಜೋಡಿಸಿ ಮಾಲೆ ಮಾಡಿದರೆ ಆ ಮನೆಯು ಅಂದ ಚೆಂದವಾಗುವುದು.
ಅಡುಗೆ ಮಾಡುವಾಗ ಒಂದು ಸಣ್ಣ ತಪ್ಪು ಕೂಡ ಊಟದಲ್ಲಿ ಕುಳಿತಾಗ ನಾಲ್ಕು ಜನರೆದುರು ಸರಾಗವಾಗಿ ಪ್ರಸ್ಥಾಪವಾಗುತ್ತದೆ. ಆ ರೀತಿ ಪ್ರಸ್ಥಾಪವಾದಾಗ ಒಂದು ಕಿರುನಗೆಯಲ್ಲಿ ಆದ ಮುಜುಗರವನ್ನು ತಡೆದುಕೊಳ್ಳುವ ಆ ಹೆಣ್ಣಿನ ಸಹನೆ ಒಂದು ರೀತಿಯ ಪರಿಕ್ಷೇಯೇ ಸರಿ. ಹೆಂಗಸರಿಗೆ ನಿತ್ಯವೂ ಒಂದೇ ತರನಾದ ಕೆಲಸ. ಬೇಸರ ಬಂತು ಎಂದು ಒಂದು ದಿನ ಬಿಡುವಂತಿಲ್ಲ. ಮಾಡುವ ಕೆಲಸದಲ್ಲಿ ಸ್ವಲ್ಪ ಬದಲಾವಣೆ ಮಾಡಬಹುದೇ ಹೊರತು ಕೆಲಸದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.
ಹೆಂಗಸರಿಗೆ ತಾಳ್ಮೆ ಪ್ರಬುದ್ಧತೆ ಹೆಚ್ಚು ಎಂದು ಹೇಳುವ ಮಾತಿದೆ. ಅಂದರೆ ಅಮ್ಮ ಸಾಂಬಾರು ಮಾಡುತ್ತಿದ್ದರೆ ಅದಕ್ಕೆ ಉಪ್ಪು ಹಾಕುವುದನ್ನು ಮರೆತುಬಿಡುತ್ತಾರೆ. ಅಲ್ಲೆ ನಿಂತಿದ್ದ ಹದಿನಾರು ವರುಷದ ಮಗಳು ಅಮ್ಮನ ಅಡುಗೆಯನ್ನು ತಾಳ್ಮೆಯಿಂದ ಗಮನಿಸಿ ನಂತರ ಅಮ್ಮ ನೀನು ಉಪ್ಪು ಹಾಕಿಲ್ಲ ಎಂದು ತಿಳಿಸುತ್ತಾಳೆ ಅಂದರೆ ಅಡುಗೆ ಆ ಮಗಳು ಮಾಡಿದವಳಲ್ಲ. ಹೆಚ್ಚಾಗಿ ಕಲಿತವಳೂ ಅಲ್ಲ ಅಡುಗೆ ಮಾಡುವ ಜವಾಬ್ದಾರಿ ಅವಳ ಹೆಗಲಿಗೆ ಏರಿಲ್ಲ. ಆದರೂ ಸೂಕ್ಷ್ಮವಾಗಿ ಗಮನಿಸುತ್ತಾಳೆ ಅಲ್ಲಿ ತನ್ನ ಪ್ರಬುದ್ಧತೆಯನ್ನು ತೋರಿಸುತ್ತಾಳೆ.
ನಮ್ಮಲ್ಲಿ ಹತ್ತು ಜನರ ಮಧ್ಯ ಹೊಸತಾಗಿ ಏನಾದರೂ ಮಾಡಿದರೆ ಮಾತ್ರ ಸಾಧನೆ. ಅಥವಾ ದೊಡ್ಡ ದೊಡ್ಡ ಉದ್ಯೋಗಸ್ಥರಾದರೆ ಅದು ಬೃಹತ್ ಸಾಧನೆ. ಚಿಕ್ಕ ಪುಟ್ಟ ಕೆಲಸ ಎಂದುಕೊಳ್ಳುವ ಹಲವು ಕೆಲಸಗಳು ಸಣ್ಣಸಣ್ಣದಾಗಿ ಹಾಗೆ ಉಳಿದುಬಿಡುತ್ತವೆ. ಯಾಕೆ ಹಾಗೆ. ಹೆಂಗಸರು ಮಾಡುವ ಈ ಕೆಲಸಗಳಿಗೆ ಯಾಕೆ ಹೆಚ್ಚಿನ ಮನ್ನಣೆ ಸಿಗುವುದಿಲ್ಲ ಎನ್ನುವುದು ಎಲ್ಲ ಮಹಿಳೆಯರಲ್ಲೂ ಒಂದಿಲ್ಲ ಒಂದು ದಿನ ಪ್ರಶ್ನೆ ಹುಟ್ಟೇ ಹುಟ್ಟಿರುತ್ತದೆ. ಹೌದು ತೋಟಕ್ಕೆ ಒಂದು ದಿನ ಗೊಬ್ಬರ ಹಾಕಲು ಮುಂದುಡಿದರೆ ಏನೂ ಆಗುವುದಿಲ್ಲ. ಅದೇ ಅಡುಗೆ ಮಾಡಲು ಒಂದು ಗಂಟೆ ತಡವಾದರೆ ಆ ಮನೆಯಲ್ಲಿ ತಕಧಿಮಿತ ಮಾತುಗಳು ಪ್ರಾರಂಭವಾಗಿಬಿಡುತ್ತವೆ. ಅಲ್ಲೆ ಶುರು ನೋಡಿ ಇನ್ನು ಅಡುಗೆಯಾಗಿಲ್ಲ. ಏನು ಮಾಡ್ತಿರಾ ಹೆಂಗಸರು ಅಂತ.
ತರಕಾರಿ ಹೆಚ್ಚಲು ಕುಳಿತರೆ ಕಸ ಕಡ್ಡಿ ಜೊತೆಗೆ ಅಲ್ಲಿ ಇರುವ ಹುಳಗಳನ್ನು ಆರಿಸಿ ತೆಗೆದು ಹೆಚ್ಚುವಷ್ಟರಲ್ಲಿ ಮತ್ತೊಂದು ಯಾವುದೋ ಕೆಲಸ ಅಲ್ಲಿ ಕರೆಯುತ್ತಿರುತ್ತದೆ. ಮಕ್ಕಳೊಂದಿಗೆ ಒಂದಿಷ್ಟು ಸಮಯ ಕಳಿಯಲೇ ಬೇಕು. ಅದರಲ್ಲೂ ಚಿಕ್ಕ ಮಕ್ಕಳಿದ್ದರೆ ಅವರ ಆಗು ಹೋಗುಗಳನ್ನು ಅರಿತು ತಿಳಿದುಕೊಂಡು ಪಾಲಿಸಬೇಕು. ದೊಡ್ಡ ಮಕ್ಕಳಾದರೆ ಹೋಮ್‍ವರ್ಕ್ ಎಂದು ಕೂರಬೇಕು. ಇದೆಲ್ಲರ ಜೊತೆ ಅಚ್ಚುಕಟ್ಟಾಗಿ ಆರ್ಥಿಕವಾಗಿ ಕೂಡ ಖರ್ಚುವೆಚ್ಚವನ್ನು ನಡೆಸುವವಳು ಹೆಣ್ಣು. ಎಲ್ಲಿಯೂ ಪೋಲಾಗದಂತೆ ಚೌಕಾಸಿ ವ್ಯವಹಾರ ನಡೆಸುವವರು ಹೆಂಗಸರು ಎಂದು ಹೆಸರು ಪಡೆದರೂ ಬೇಸರಿಸದೆ ಇದ್ದ ಬಜೆಟ್‍ನಲ್ಲಿ ತಿಂಗಳು ತಿಂಗಳು ಕಳೆದುಬಿಡುತ್ತಾರೆ.