ಮನುಷ್ಯ ಸಂಕುಲಕ್ಕೆ ಮಾತೊಂದು ದಿವ್ಯ ಕೊಡುಗೆ.
ಮಾತು ಬರದಿದ್ದರೆ ಮಾನವನ ಪರಿಸ್ಥಿತಿ ಉಳಿದ ಪಶುಗಳಿಗಿಂತ ಭಿನ್ನವಿರುತ್ತಿರಲಿಲ್ಲ.
ತನ್ನ ಈ ಶಕ್ತಿಯನ್ನ ಮನುಜ ಚನ್ನಾಗಿಯೇ ಬಳಸಿಕೊಳ್ಳುತ್ತಾನೆ. ಕೆಲವರಿಗಂತೂ ಮಾತೆ ಸರ್ವಸ್ವ. ಮಾತಿನಲ್ಲೆ ಮನೆ ಕಟ್ಟುವವರಿದ್ದಾರೆ, ಮಾತಿನಲ್ಲೇ ಮನೆ ಬೀಳಿಸುವವರೂ ಇದ್ದಾರೆ. ಇತ್ತೀಚಿನ ದಿನಗಳಲ್ಲಂತೂ ಮಾತು ಬಲ್ಲವರು ಏನನ್ನೂ ಮಾಡಿಯಾರೆಂಬುದಕ್ಕೆ ಹಲವು ನಿದರ್ಶನಗಳು ದೊರೆಯುತ್ತವೆ.
ಮಾತು ಬರುತ್ತದೆಯೆಂದು ಹೇಗಾದರೂ ಮಾತಾಡಿದರಾಯಿತೇ? ಅದನ್ನೇ ಹಿರಿಯರು ಹೇಳುತ್ತಾರೆ “ಮಾತು ಬಲ್ಲವನಿಗೆ ಜಗಳವಿಲ್ಲ” ಎಂದು. ಇಲ್ಲಿ ಮಾತು ಬಲ್ಲವನು ಎಂದರೆ ಮಾತಾಡಬಲ್ಲವನು ಎಂದಲ್ಲ. ವಿವೇಚನಾ ಸಹಿತ ಮಾತು ಬಲ್ಲವನೆಂದು.
ಮಾತಿನಲ್ಲಿ ನಾವು ಎಲ್ಲರನ್ನೂ ಸಂತಸ ಗೊಳಿಸಬಹುದು..
‘ಪ್ರಿಯವಾಕ್ಯ ಪ್ರದಾನೇನ ಸರ್ವೇ ತುಷ್ಯಂತಿ ಜಂತವಃ.
ತಸ್ಮಾತ್ ತದೇವ ವಕ್ತವ್ಯಂ ವಚನೇ ಕಾ ದರಿದ್ರತಾ’ ಎಂದಿದ್ದಾರೆ ತಿಳಿದವರು.
ಮಾತು ಮುತ್ತೂ ಆಗುತ್ತದೆ ಮತ್ತಿನಲ್ಲಿ ಮಾತಾಡಿದರೆ ಅದು ಪ್ರಾಣಕ್ಕೇ ಕುತ್ತೂ ಆಗುತ್ತದೆ. ಆದ್ದರಿಂದ ನಾವೆಲ್ಲ ಸರ್ವ ಜಂತುಗಳೂ ಖುಷಿ ಹೊಂದುವ ಸರ್ವರಿಗೂ ಪ್ರಿಯವಾಗುವ ಸುಂದರವಾದ, ವಿವೇಚನಾ ಸಹಿತವಾದ ಮಾತುಗಾರರಾಗೋಣ. ಮಾತಿನಲ್ಲಿ ಮನೆ,ಮನಗಳನ್ನು ಕಟ್ಟುವವರಾಗೋಣ.
“ಮಾತು ಮಾತಿಗೆ ತಕ್ಕ ಕೋಟಿ ಮಾತುಗಳುಂಟು ಮಾತಿನಲಿ ಮನವಿಟ್ಟಿ ಮಾತಲ್ಲಿ ಸೋತವನೇ ಜಾಣ”
ನಾವು ಜಾಣರಾಗೋಣ.