ಲೇಖಕರು :- ಪ್ರಭಾ ಮತ್ತು ವೆಂಕಟರಮಣ ಭಟ್ಟ, ಪುಣೆ

 

 

ಪರಮಹಂಸ ಪರಿವ್ರಾಜಕಾಚಾರ್ಯ ಸದ್ಗುರು ಭಗವಾನ ಶ್ರೀ ಶ್ರೀಧರ ಸ್ವಾಮಿಗಳ ಚರಿತ್ರೆಯನ್ನು  ಗುರುಭಕ್ತರು ತಮ್ಮ ಜೀವನ ಘಟ್ಟದಲ್ಲಿ ಒಮ್ಮೆಯಾದರೂ ಓದಿದ್ದಾರೆ …. ಆ ವೈಭವದ ಸವಿ ಸವಿದಿದ್ದಾರೆ!

ಹೀಗಾಗಿ ಶ್ರೀಧರಗುರುಚರಿತ್ರೆಯೇನೂ ಭಕ್ತರಿಗೆ ಹೊಸದಲ್ಲ!

ಆದರೆ ಹೊಸಕಾಲದ ಹೊಸ ವೇದಿಕೆಯಲ್ಲಿ ಕಾಲಕ್ಕನುಗುಣವಾಗಿ ಬರೆದು ಪ್ರಕಟಿಸುವ ಅಭಿಲಾಷೆ ನಮ್ಮಲ್ಲಿ ಚಿಗುರಿ ಬಲಗೊಂಡಿತು …. ಅದರಂತೆ ಅಂತರ್ಜಾಲದ ಮುಖಹೊತ್ತಿಗೆಯನ್ನೇ ಈ ಕಾರ್ಯಕ್ಕೆ ಉಪಯೋಗಿಸಬಹುದೆಂಬ ವಿಚಾರ ಬಂದು ದೃಢಗೊಂಡಿತು … ಆ ವಿಚಾರವನ್ನೇ ಶ್ರೋತ್ರಗಣಗಳ ಮುಂದೆ ಇಟ್ಟಾಗ ಉತ್ಸಾಹದ ಅನುಮೋದನೆಯೂ ಸಿಕ್ಕಿತು. ಅದರಂತೆ ಕಳೆದ ಸುಮಾರು ಎರಡು ವರ್ಷಗಳಿಂದ ಚರಿತ್ರೆಯ ಉತ್ತರಾರ್ಧದಿಂದ ಪ್ರಾರಂಭಿಸಿ ನಂತರ ಪೂರ್ವಾರ್ಧವನ್ನೂ ದಿನವೊಂದು ಬರಹದಂತೆ ಬರೆದು ಹಾಕಿದ್ದಾಯಿತು …. ಓದುಗರ ಆಗ್ರಹದಿಂದ ಚರಿತ್ರೆಯನ್ನು ಪುನಃ ಮುಖಪುಸ್ತಕದಲ್ಲಿ ಹಾಕುವದೂ ಮುಂದುವರಿಸಿಯೂ ಆಯಿತು ….

ತನ್ಮಧ್ಯೆ ಕೆಲ ಓದುಗರು ಇದು ಪುಸ್ತಕರೂಪದಲ್ಲಿ ಎಲ್ಲಿ ಸಿಗಬಹುದೆಂದೂ ಕೇಳಿದರು ….. ಇದರಿಂದಾಗಿ ಆ ಬರಹಗಳನ್ನೇ ಪುಸ್ತಕರೂಪದಲ್ಲಿ ಬರೆಯುವ ವಿಚಾರ ಉದ್ಭವಿಸಿತು ….. ಈ ವಿಚಾರಕ್ಕೆ ಶ್ರೀ ಶ್ರೀಧರ ಸೇವಾಮಂಡಲ ವರದಪುರದ ಕಾರ್ಯದರ್ಶಿ ಶ್ರೀ ಶ್ರೀಧರ ಹೆಗಡೆ ಕಾನ್ಲೆಯವರ ಬಿಚ್ಚುಮನದ ಪ್ರೋತ್ಸಾಹ – ಅನುಮೋದನೆಯೂ ದೊರೆಯಿತು!

ಹೀಗೆ ಮುಖಪುಸ್ತಕದಲ್ಲಿ ಬರೆದ ಆ ಬರಹಗಳನ್ನೇ ಪುಸ್ತಕರೂಪದಲ್ಲಿ …. ವರ್ಷವಿಡೀ ದಿನವೊಂದರಂತೆ ಓದಲು ಅನುಕೂಲವಾಗುವಂತೆ ೩೬೫ ಭಾಗಗಳಲ್ಲಿ ಕ್ರಮವಾಗಿ ವಿಂಗಡಿಸಿ …. ಪ್ರತಿ ಪ್ರಸಂಗಕ್ಕನುಗುಣವಾಗಿ ಆ ಕ್ಷಣದಲ್ಲಿ ಹೊಳೆದ ಷಟ್ಪದಿ – ಹಾಡು – ಕವನಗಳನ್ನು ಸೇರಿಸಿ ….. ನಿಮ್ಮ ಮುಂದಿಟ್ಟಿದ್ದೇವೆ! …..  ಪುಸ್ತಕದ ಕೊನೆಯಲ್ಲಿ ಈಗ ಅಲಭ್ಯವಾಗಿರುವ ಕೆಲ ಹಾಡು – ಭಾಮಿನಿ ಷಟ್ಪದಿಯಲ್ಲಿ ಬರೆದ ಸ್ವಾಮಿಗಳ ಜೀವನ ಚರಿತ್ರೆಯ ಭಾಗಗಳನ್ನು ಸಂಗ್ರಹಿಸಿ ಸೇರಿಸಿ ….. ಓದುಗರ ಸುಲಭ ಪರಾಮರ್ಶಕ್ಕಾಗಿ – ಅನುಕೂಲ್ಕಾಗಿ ಪ್ರಸಂಗದ ಸ್ಥಳ ಮತ್ತು ಪರಿಚ್ಛೇದ ಕ್ರಮಾಂಕಗಳ ಸೂಚಿಕೆಯನ್ನೂ ಕೊನೆಯಲ್ಲಿ ಸೇರಿಸಿ ….  ಒಟ್ಟಿನಮೇಲೆ ಬರಹಗಳನ್ನು ಸಂಸ್ಕರಿಸಿ ….. ಪುಸ್ತಕರೂಪದಲ್ಲೀಗ ಗುರುಚರಿತ್ರೆ ನಿಮ್ಮ ಮುಂದಿದೆ!

ಗುರುವೈಭವದ ಈ ಚರಿತ್ರೆಯಲ್ಲಿಯ ಪ್ರತಿ ಪ್ರಸಂಗವೂ ಆಧ್ಯಾತ್ಮ ಮಾರ್ಗದ ವಿವಿಧ ಪಾರ್ಶ್ವಗಳ ಧರ್ಮಸೂಕ್ಷ್ಮವನ್ನು ಬಿಡಿಸಿ ತಿಳಿಸುವ ಸುಪ್ತಶಕ್ತಿಯನ್ನು ಧರಿಸಿದ ಅನುಭವ ಶುದ್ಧ ಬುದ್ಧಿಯ ಓದುಗರಿಗೆ ಆದರೆ ಆಶ್ಚರ್ಯವೇನಿಲ್ಲ ….. ಅದು ಗುರುಚರಿತ್ರೆಯ ವೈಭವ ….. ಗುರುಚರಿತ್ರೆಯ ಪಠಣದ ಪ್ರಭಾವ! …. ಅಷ್ಟೇ ಏಕೆ ಶ್ರದ್ಧೆಯಿಂದ ಓದಿದಾಗ ಗುರುಚರಿತ್ರೆ ಇಹ-ಪರಗಳ ಇಷ್ಟಾರ್ಥ ಸಿದ್ಧಿ ಕೊಡುವ ಕಾಮಧೇನು – ಕಲ್ಪವೃಕ್ಷವೆಂದು ಬಲ್ಲವರು – ಅಧಿಕಾರೀ ಪುರುಷರು ಹೇಳಿದ್ದಾರೆ!

ಶ್ರೀ ಶ್ರೀಧರ ಸ್ವಾಮಿಗಳದು ಪ್ರಕಟ ನಾಟಕ ….

ಸ್ವಾತಂತ್ರಪೂರ್ವ ಮತ್ತು ತದನಂತರದ ರಾಜಕೀಯ ಸಾಮಾಜಿಕ ಜೀವನ ಪದ್ಧತಿಯ ರೀತಿ ನೀತಿಗಳ ಬದಲಾವಣೆಗಳಿಂದ ಸನಾತನ ಹಿಂದೂ ಧರ್ಮದಲ್ಲಿ ನಂಬುಗೆಯಿಟ್ಟು ವಂಶಪಾರಂಪರ್ಯವಾಗಿ ಸದಾಚಾರದಿಂದ ಬದುಕುತ್ತಿದ್ದ ಪಾಪಭೀರು ಸಾಮಾನ್ಯ ಜನರಲ್ಲಿ ಒಂದು ರೀತಿಯ ತಲ್ಲಣ – ಆತಂಕ ಪಸರಿಸಹತ್ತಿತ್ತು ….. ಸನ್ನೀತಿ – ಕುಲಧರ್ಮ ಪಾಲನೆ ಮೂಡತೆಯೋ ಅಂಧಶ್ರದ್ಧೆಯೋ ಎಂಬಂತೆ ಬಿಂಬಿಸುವ ಕಾರ್ಯದಿಂದಲೂ ಜನಮನ ನೊಂದಿತ್ತು – ಗೊಂದಲಕ್ಕೊಳಗಾಗಿತ್ತು …. ಶತಮಾನಗಳ ಸುಸಂಘಟಿತ ಸಮಾಜ ವ್ಯವಸ್ಥೆ ಮುರಿದು ಬೀಳುವಂತ್ತಿತ್ತು …. ಮುಂದೇನೋ …  ಎಂದು ಜನಮನ ತಳಮಳಿಸುತ್ತಿತ್ತು! …. ಹೊರ ಪ್ರಭಾವದಿಂದ ಸಾಮಾನ್ಯವಾಗಿ ಹೊರತಾಗಿರುವ ಕರ್ನಾಟಕದ ಕರಾವಳಿ – ಘಟ್ಟ ಮತ್ತು ಮಲೆನಾಡ ಪ್ರದೇಶವೂ ಹೊಸ ಸಮಾಜ ವ್ಯವಸ್ಥೆಯಿಂದ …. ಆರ್ಥಿಕ ಇಳಿತದಿಂದ … ಮಾನಸಿಕ ಆಘಾತದಿಂದ ತತ್ತರಿಸುತ್ತಿತ್ತು! …..

ಆಗ …..

ಭಗವಂತ ಗೀತೆಯಲ್ಲಿ ಘೋಷಿಸಿದ ಆ ಅತಿಪರಿಚಿತ ವಾಕ್ಯ ‘….. ಪರಿತ್ರಾಣಾಯ ಸಾಧೂನಾಂ ವಿನಾಶಯಚ ದುಷ್ಕೃತಾಂ ….. ಸಂಭವಾಮಿ ಯುಗೇ ಯುಗೇ’ …. ಎಂಬಂತೆ ಭೂಮಿಯ ಮೇಲೆ ಶ್ರೀ ಶ್ರೀಧರ ಸ್ವಾಮಿಗಳ ಅವತರಣವಾಯಿತು! …..

ಧರ್ಮಸ್ಥಾಪನೆಗೆ ಭಾರತವರ್ಷದಲ್ಲಿ ಆ ಭಗವಂತ ಯೋಗ್ಯ ಸಮಯದಲ್ಲಿ ಅಲ್ಲಲ್ಲಿ ಅವತರಿಸುವನೆಂಬ ಜನಮಾನಸದ ಭಾವನೆಯ ಪುಷ್ಟೀಕರಣ ಭಾರತದ ಸಮಗ್ರ ಪುರಾಣೇತಿಹಾಸ ನೋಡಿದಾಗ ಸ್ಪಷ್ಟವಾಗಿ ಕಂಡುಬರುತ್ತದೆ!

ಅದರಂತೆ ಈ ಘೋರ ಕಲಿಯುಗದಲ್ಲಿ … ೨೦ನೇ ಶತಮಾನದ ಪ್ರಾರಂಭ ಕಾಲದಲ್ಲಿ … ಸನಾತನ ಮತಕ್ಕನುಗುಣವಾಗಿಯೇ ತಮ್ಮ ಆಚಾರ ವಿಚಾರ ನಡೆನುಡಿಗಳನ್ನು ಅನುಸರಿಸಿ …. ಕೇವಲ ತಪೋಶಕ್ತಿಯಿಂದಲೇ ‘ನರನು ನಾರಾಯಣ’ ಆಗಬಲ್ಲನೆಂಬುದನ್ನು ಭಗವಾನ ಸದ್ಗುರು ಶ್ರೀ ಶ್ರೀಧರ ಸ್ವಾಮಿಗಳು ತಮ್ಮ ಲೀಲಾಜೀವನದಲ್ಲಿ ಜಗತ್ತಿಗೆ ತೋರಿಸಿದರು! ….

RELATED ARTICLES  ಅರಿವು…..

ಶ್ರೀ ಶ್ರೀಧರ ಸ್ವಾಮಿಗಳ ಅವತಾರದ ಉಲ್ಲೇಖ ೧೪ನೇ ಶತಮಾನದಲ್ಲಿ ಶ್ರೀ ಶ್ರೀಪಾದ ಶ್ರೀ ವಲ್ಲಭರೇ ಮಾಡಿದರೆಂಬುದು ‘ಶ್ರೀಪಾದ ಶ್ರೀವಲ್ಲಭ ಚರಿತಾಮೃತ’ದಲ್ಲಿ ಬಂದಿದೆ …ಸದ್ಗುರು ಭಗವಾನ ಶ್ರೀಧರ ಸ್ವಾಮಿಗಳು ಜೀವನದ ಯಾತ್ರೆಯ ಹಲವು ಘಟನೆಗಳಲ್ಲಿ ಸ್ವಾಮಿಗಳು ಭಗವಂತನ ಅವತಾರವೆಂಬುದನ್ನು ನಾವು ಕಾಣಬಹುದು!

ಸ್ವಾಮಿಗಳು ಸಜ್ಜನಗಡದಲ್ಲಿ ತಪೋಸಾಧನೆ ಮಾಡುತ್ತಿದ್ದ ಕಾಲದಲ್ಲಿ …. ತಮ್ಮ ಇಪ್ಪತ್ತೆರಡನೇ ವರ್ಷದಲ್ಲಿಯೇ …. ಗುರು ಸಮರ್ಥ ರಾಮದಾಸರಿಂದ ದೃಷ್ಟಾಂತರೂಪದಲ್ಲಿ ‘ಭಗವಾನ’ ಎಂದು ಸಂಬೋಧಿಸಲ್ಪಟ್ಟರು! 

ಶ್ರೀ ಶ್ರೀಧರ ಸ್ವಾಮಿಗಳ ಚಿಕ್ಕಮಗಳೂರಿನ ವಾಸ್ತವ್ಯ ಕಾಲದಲ್ಲಿ ಶ್ರೀ ರಾಮನು ಪ್ರತ್ಯಕ್ಷನಾಗಿ ಸ್ವಾಮಿಗಳ ಭೂಮಿಯ ಮೇಲಿನ ಅವತಾರ ಕಾರ್ಯವನ್ನು ಈ ಶಬ್ಧಗಳಲ್ಲಿ ಹೇಳಿದನು …. ‘ಸಭ್ಯಜನರುದ್ಧಾರಕಾಗಿಯೆ ನೀ ಶಾಂತ ಬಂದಿಹೆ ಜಗದಿ …. ನನ್ನದೇ ಕಾರ್ಯವಿದು ….. ಶುಭಗಳಿಗೆ ಬರಲಿದೆ ….. ಮತ್ತೆ ಬರುವೆನು’ ….

ಶ್ರೀ ಶ್ರೀಧರ ಸ್ವಾಮಿಗಳ ತಮಿಳುನಾಡಿನ ಸಂಚಾರಕಾಲದಲ್ಲಿ ಜಗದ್ಗುರು ಶ್ರೀ ಕಾಂಚಿ ಕಾಮಕೋಟಿ ಶ್ರೀ ಶ್ರೀ ಚಂದ್ರಶೇಖರೇಂದ್ರ ಸರಸ್ವತೀ ಸ್ವಾಮಿಗಳು ‘ನರನು ನಾರಾಯಣನಾಗಬಲ್ಲ! … ಇದಕ್ಕೆ ಶ್ರೀ ಶ್ರೀಧರ ಸ್ವಾಮಿಗಳೇ ಸಾಕ್ಷಿ’ ಎಂದು ಉದ್ಗಾರ ತೆಗೆದರು!

ಸ್ವಾಮಿಗಳೇ ತಮ್ಮ ದೇಹ ಪ್ರಾದುರ್ಭಾವದ ಬಗ್ಗೆ ಹೇಳಿದ ಮಾತಿನ ಸೂಕ್ಷ್ಮ ಶ್ರೀ ಶ್ರೀಧರ ಸ್ವಾಮಿಗಳು ಅವತಾರೀ ಪುರುಷರೆಂಬುದನ್ನು ಸ್ಪಷ್ಟಗೊಳಿಸುತ್ತದೆ … ಈ ಘಟನೆ ಹೊನ್ನಾವರದ ಹತ್ತಿರ ಕರ್ಕಿಯ ಒಂದು ಪ್ರವಚನ ಸಭೆಯಲ್ಲಿ ನಡೆಯಿತು …. ಪಂಡಿತ ಶಾಸ್ತ್ರಿಗಳ ಶಬ್ಧ ಪಾಂಡಿತ್ಯದ ವ್ಯಾಖ್ಯಾನದಲ್ಲಿನ …. ‘ಬಹುಜನ್ಮದ ಪುಣ್ಯ ಪರಿಪಾಕದಿಂದ  ಸ್ವಾಮಿಗಳು ವೈರಾಗ್ಯಮೂರ್ತಿಯಾಗಿದ್ದಾರೆ ….’ ಎಂಬ ಮಾತಿಗೆ ಶ್ರೀ ಶ್ರೀಧರ ಸ್ವಾಮಿಗಳು ಹೇಳಿದರು …. ‘ಈ ಬ್ರಹ್ಮಸೃಷ್ಟಿಯಲ್ಲಿ ಅನೇಕ ಪುಣ್ಯಪುರುಷರು ಜನ್ಮ- ಜನ್ಮಾಂತರದ ಪರಿಶ್ರಮದಿಂದ ಉತ್ತಮೋತ್ತಮ ಜನ್ಮ ತಾಳುತ್ತಾರೆ ಎಂಬ ಮಾತು ನಿಜ …. ಅದು ಸರ್ವ ಸಾಮಾನ್ಯವಾಗಿ ಅನ್ವಯಿಸುವ ಮಾತು  … ಆದರೆ ಅದು ನಿತ್ಯ ನಿವೃತ್ತಿ ಪ್ರಧಾನರಾದ ಸನಕ-ಸನಂದಾದಿಗಳಿಗೆ ಹೇಗೆ ಅನ್ವಯಿಸುವದಿಲ್ಲವೋ … ಹಾಗೆಯೇ ಈ ದೇಹದ ಪ್ರಾದುರ್ಭಾವಕ್ಕೂ ಅಂದುಕೊಳ್ಳಬಹುದು!’

ಶ್ರೀ ಶ್ರೀಧರ ಸ್ವಾಮಿಗಳ ಭುವಿಯ ಮೇಲಿನ ವೈಭವದ ಪಯಣದ ಭವಿಷ್ಯ ಅವರ ಎಳೆ ವಯಸ್ಸಿನಲ್ಲಿಯೇ ಅವರ ಅಚಲ ರಾಮನಾಮದ ಮೇಲಿನ ಭಕ್ತಿ – ಸನಾತನ ಆಚಾರ-ವಿಚಾರಗಳಲ್ಲಿಯ ಶ್ರದ್ಧೆಯಿಂದ ನಿಚ್ಚಳವಾಗಿ ತೋರುತ್ತಿತ್ತು ….

ಕುಂಡಲಿ ಮತ್ತು ಹಸ್ತರೇಷೆಗಳೂ ಶ್ರೀ ಶ್ರೀಧರರು ಯತಿಸಾರ್ವಭೌಮರಾಗಿ ಧರ್ಮಸ್ಥಾಪನೆಯ ಮಹಾಕಾರ್ಯಕ್ಕಾಗಿ ಸಂಪೂರ್ಣ ಭಾರತವರ್ಷದಲ್ಲಿ ಸಂಚರಿಸುವರೆಂಬುದನ್ನು ಸ್ವಾಮಿಗಳ ಎಳೆ ವಯಸ್ಸಿನಲ್ಲಿಯೇ ತೋರಿಸುತ್ತಿತ್ತು ….

ಅಗಸ್ತ್ಯ ನಾಡಿಯ ತಾಳೆಗರಿಯಲ್ಲಿ ಸ್ವಾಮಿಗಳ ಬಗ್ಗೆ ಬರೆದಿರುವ ಈ ಶಬ್ಧಗಳು ಸ್ವಾಮಿಗಳ ಸ್ವರೂಪ ದರ್ಶಕವೆನ್ನಬಹುದು!

‘ಶ್ರೀಧರಂ ಪರಮಾನಂದಂ ಲೋಕಾನುಗ್ರಹಕಾರಕಮ್

ಭಕ್ತ ಹೃತ್ಪದ್ಮಖಮಣಿಂ ಗುರುರಾಜಂ ನಮಾಮ್ಯಹಂ

ವಂದಾರುಜನಮಂದಾರಂ ಯತಿವೃಂದ ಶಿಖಾಮಣಿಮ್

ಬ್ರಹ್ಮವಿಷ್ಣು ಶಿವಾಭಿನ್ನಂ ಗುರುರಾಜಂ ನಮಾಮ್ಯಹಂ’

ಶ್ರೀ ಶ್ರೀಧರ ಸ್ವಾಮಿಗಳು ಭಾರತವರ್ಷದ ಉದ್ದಗಲ ತಿರುಗಿ ತಮ್ಮ ಸಾನಿಧ್ಯ – ಹಿತವಚನ – ತೀರ್ಥ – ಮಂತ್ರಾಕ್ಷತೆಗಳಿಂದ ಜನಮನದಲ್ಲಿ ಸ್ಥೈರ್ಯ್ಯ ತುಂಬಿದರು! …. ಭಕ್ತರಿಗೆ ಆ ಕತ್ತಲೆಯ ದಿನಗಳಲ್ಲಿ ಬೆಳಕಿಡಿದು ದಾರಿ ತೋರಿದರು! ….. ಆಗ ಅನೇಕ ಭಕ್ತರು – ಶಿಷ್ಯರು ಆ ಶ್ರೀಧರಾಮೃತ ಪಾವನ ಮಾಡಿ ಜೀವ ಸಾಫಲ್ಯ ಮಾಡಿಕೊಂಡು ಧನ್ಯರಾದರು! ….. ಮಲಯ ಪರ್ವತದ ಶೀತಗಾಳಿ ಬೀಸುತ್ತಿರುವಾಗ ಮನದೇಹದ ತಾಪ ತಣಿಯುವಂತೆ ಸ್ವಾಮಿಗಳ ಸನ್ನಿಧಿಗೆ ಬಂದ ಸಾಮಾನ್ಯ ಜನರ ಇಹಪರದ ತಾಪಗಳು  ಶಮನವಾದವು! … ಸಾಧಕರ ಸಾಧನೆ ಫಲಪ್ರದವಾಯಿತು!

ವೈಭವದ ತಮ್ಮ ಭುವಿಯ ಮೇಲಿನ ಪಯಣದಲ್ಲಿ ಭಗವಾನ ಸದ್ಗುರು ಶ್ರೀ ಶ್ರೀಧರ ಸ್ವಾಮಿಗಳು ರಮ್ಯ ವನ್ಯಪ್ರದೇಶ ವರದಪುರದಲ್ಲಿ ಗುರುಪಾದುಕೆ – ಧರ್ಮಧ್ವಜ ಸ್ಥಾಪಿಸಿ – ತೀರ್ಥಾಂಬು ಹರಿಸಿ – ತನ್ನದೇ ಕ್ಷೇತ್ರವೆಂದು ಘೋಷಿಸಿ ಎಲ್ಲರಿಗೂ ಅಭಯ ನೀಡಿದರು! …..

ಶ್ರೀ ಕ್ಷೇತ್ರ ವರದಪುರದಲ್ಲಿ ಈಗಲೂ ಭವದ ಬವಣೆಯಿಂದ ನೊಂದ ಬೆಂದ ಜೀವಿಗಳಿಗೆ ಸ್ವಾಮಿಗಳು ಅಭಯದಾನ ಕೊಡುತ್ತ ರಾರಾಜಿಸುತ್ತಿದ್ದಾರೆ ….. ಭಕ್ತಿಯಿಂದ ಬಂದ ಜನರು ಗುರುಸಾನಿಧ್ಯದ ಅನುಭೂತಿಯನ್ನು ಹೊಂದುತ್ತಿದ್ದಾರೆ!

RELATED ARTICLES  ಬುದ್ಧನಾಗಿಸಿದೆಯಲ್ಲೋ! (ರೇಷ್ಮಾ ಉಮೇಶರವರ ಕವನ)

ಭಗವಾನ ಸದ್ಗುರು ಶ್ರೀ ಶ್ರೀಧರ ಸ್ವಾಮಿಗಳ ವೈಭವದ ಚರಿತ್ರೆ ಭಕ್ತರಿಗೆ ಬೋಧದಾಯಕ …. ಮಹಾವಿಭೂತಿಗಳ ಚರಿತ್ರೆಯ ವಿಷಯದಲ್ಲಿ ಶ್ರೀ ಶ್ರೀಧರ ಸ್ವಾಮಿಗಳು ಶ್ರೀ ದಿನಕರಬುವಾ ರಾಮದಾಸಿಗೆ ಸನ್ ೧೯೪೯ನೇ ಜುಲೈ ತಿಂಗಳಲ್ಲಿ ಬರೆದ ಪತ್ರದಲ್ಲಿ ಮಹಾತ್ಮರ ಚರಿತ್ರೆಯಿಂದ ಏನು ಪ್ರಯೋಜನ ಎಂಬ ವಿಷಯದ ಬಗ್ಗೆ ಸೂಚ್ಯವಾಗಿ ಹೇಳಿದ್ದಾರೆ…. ಆ ಪತ್ರದ ಕೆಲ ಅಂಶಗಳು ಸ್ವಾಮಿಗಳ ಶಬ್ಧದಲ್ಲಿ ಹೀಗಿದೆ ….. ಸ್ವಾಮಿಗಳೆನ್ನುತ್ತಾರೆ …..

‘ಕಾಲವನ್ನು ಮೀರಿ ನಿಂತ ಮಹಾವಿಭೂತಿಗಳ ಲೋಕೋತ್ತರ ಪರೋಪಕಾರದ ಅಸಾಮಾನ್ಯ ಮಹತ್ಕಾರ್ಯಗಳು ವಿಶ್ವಕ್ಕೇ ಹೇಗೆ ಹಿತಕಾರಿಯಾಗಿದೆ ಎಂಬುದನ್ನು ತೋರಿಸುವದಕ್ಕಾಗಿ ಮತ್ತು ಉಳಿದವರಿಗೂ ಅವರ ಅಮೂಲ್ಯ ಸದ್ಗುಣಗಳ ಉತ್ಕೃಷ್ಟ ಅನುಕರಣೆ ಮಾಡಲು ಅನುಕೂಲವಾಗಲೆಂದು ಅಂತಹ ಮಹಾಪುರುಷರ ಚರಿತ್ರೆ ಬರೆಯಬೇಕಾದದ್ದಿರುತ್ತದೆ …. ಲೋಕಹಿತದ ಬಗ್ಗೆ ಅಂತಃಕರಣದ ಕಳಕಳಿಯಿಂದ ತೊಡಗಿದ ಅಂಥ ಆ ಮಹಾತ್ಮರ ದೀರ್ಘ ಅವಿಶ್ರಾಂತ ಪ್ರಯಾಸಗಳ ಪವಿತ್ರ ಜೀವನ ಬೇರೆಯವರಿಗೂ ಆದರ್ಶವಾಗುತ್ತದೆ …. ಅವರು ನಡೆದ ದಾರಿ ಶ್ರುತಿ ಸ್ಮೃತಿ ಪುರಾಣಗಳಿಂದ ಮೂಡಿಬಂದ ವಿಶ್ವಮಾನ್ಯ ಸುಂದರ ಜೀವನ ಚರಿತ್ರವೇ ಆಗಿರುತ್ತದೆ ….   ಇತರರನ್ನು ಈ ಭವಸಾಗರದಿಂದ ದಾಟಿಸುವ ದೋಣಿಯೇ ಆ ಚರಿತ್ರೆಯಾಗಿರುತ್ತದೆ ….

ಮಹಾಜನೋ ಯೇನ ಗತಃ ಸ ಪಂಥಾಃ

ಎಂಬ ವಾಕ್ಯದಂತೆ ಅಂತವರ ಜೀವನ ಚರಿತ್ರೆ ಅಂದರೆ ಧರ್ಮರಹಸ್ಯದ ಕ್ಲಿಷ್ಟ ಪ್ರಶ್ನೆಗಳನ್ನು ಬಿಡಿಸಿ ತೋರಿಸುವ ಒಂದು ಧರ್ಮಗ್ರಂಥವೇ ಆಗಿರುತ್ತದೆ …. ಅಂಥ ಮಹಾತ್ಮರ ನಡೆಯನ್ನು ಬಿಂಬಿಸುವ ಚರಿತ್ರೆ … ಓದುಗರ ಜೀವನದಲ್ಲಿ …. ಅಡಿಗಡಿಗೆ …. ಪರಮಾತ್ಮ ಪದದ  ಕಡೆಗೆ ಹೋಗುವ ಸುಲಭ ಮತ್ತು ಪವಿತ್ರವಾದ ಹತ್ತಿರದ ನೇರದಾರಿಯನ್ನೇ ತೋರಿಸುತ್ತದೆ!’

ಸ್ವಾಮಿಗಳ ಈ ಮಾತುಗಳು ಚರಿತ್ರೆಯೋದುವ ಭಕ್ತರಿಗೆ ಸಮಯೋಚಿತವಾಗಿ ಇರುವದರಿಂದ ಇಲ್ಲಿ  ಟಿಪ್ಪಣಿಸಿದ್ದೇವೆ ….

ಕಲಿಕಾಲದ ಅಸುರೀ ಶಕ್ತಿಗಳ ಆಟವು ಇನ್ನೂ ಮುಂದುವರಿಯುತ್ತಲೇ ಇದೆ … ಸಜ್ಜನರು ಈಗಲೂ ದ್ವಿವಿಧ ಮನಸ್ಸಿನಲ್ಲಿ ತೊಳಲಾಡುತ್ತಿದ್ದಾರೆ …. ತೊಡಕಿನಲ್ಲಿದ್ದಾರೆ ….. ಅನೇಕ ವೇಳೆ ಯಾವುದು ಸರಿ ಯಾವುದು ತಪ್ಪು ಎಂದು ಅರಿಯದ ಸ್ಥಿತಿ ಅನುಭವಿಸುತ್ತಿದ್ದಾರೆ …. ಅಂಥವರಿಗೂ ಸ್ವಾಮಿಗಳ ಚರಿತ್ರಪಠಣ ಸನ್ಮಾರ್ಗ ತೋರಿಸುವ ಒಂದು ದಾರಿದೀಪ – ಆಶಾಕಿರಣವೆಂದೇ ನಮ್ಮ ಭಾವನೆ!

ಆ ಬ್ರಹ್ಮಸ್ವರೂಪದ ಭೂಮಿಯ ಮೇಲಿನ ಅಲೌಕಿಕ ಪಯಣವನ್ನು ಲೌಕಿಕದ – ಪರಿಮಿತಿಯ ಮನಸ್ಸು ಬುದ್ಧಿಯಿಂದ ಅರ್ಥ ಮಾಡಿಕೊಳ್ಳುವದು ಅಶಕ್ಯ …. ಆ ವೈಭವವನ್ನು ಶಬ್ಧಗಳಲ್ಲಿ  ಬರೆಯುವದೂ ಅಪೂರ್ಣ … ಆದರೂ ಬರೆಯಬೇಕೆಂಬ ಅದಮ್ಯ ಅಭಿಲಾಷೆಯ ಫಲವೇ ಈ ಕೃತಿ! ….. ಇದು ಆ ಬ್ರಹ್ಮಸ್ವರೂಪದ ಮುಂದೆ ನಮ್ಮದೊಂದು ಕೇವಲ ಅಲ್ಪ ಕಾಣಿಕೆ! ….

ಶ್ರೋತ್ರಗಳಿಗೂ ಗೊತ್ತು – ಸೂರ್ಯನಿಗೆ ದೀಪ ಹಿಡಿಯುವದೆಷ್ಟು ಬೆಪ್ಪು …. ಮತ್ತು ಅದನ್ನೇ ನಾವು ಮಾಡಹೊರಟಿದ್ದೇವೆ ಎಂದು …..

ಆದಾಗ್ಯೂ ನೀವು – ಓದುಗರು – ಸಹೃದಯಿಗಳು ಎಂದೂ ನಮಗೆ ಗೊತ್ತು! …. ನಮ್ಮ ಬರಹದಲ್ಲಿ ನುಸುಳಿದ ನ್ಯೂನತೆಗಳನ್ನು ನೋಡದೆ ಸ್ವಾಮಿಗಳ ವೈಭವವನ್ನು ಮಾತ್ರ ನೋಡಿ ಸಂತೋಷಪಡಬೇಕೆಂದು ನಮ್ಮ ಪ್ರಾರ್ಥನೆ!

ಆ ಅಲೌಕಿಕ ಶ್ರೀಧರವೈಭವವನ್ನು ಕೆಳಗಿನ ನಾಲ್ಕು ಸಾಲುಗಳಲ್ಲಿ ಹೇಳಲು ಪ್ರಯತ್ನಿಸುತ್ತಿದ್ದೇನೆ!

 

ಆದೌ ಶ್ರೀಧರ ದತ್ತ ಪ್ರಸಾದೇನ ಜನನಮ್| ಮಾತೃ ಕಮಲಯಾ ಭ್ರಾತೃ ತ್ರ್ಯಂಬಕೇನ ಪೋಷಿತಮ್|

ಸಮರ್ಥ ದರ್ಶನಮ್| ದಕ್ಷಿಣ ದಿಶಿ ಗಮನಮ್| ಶಿವಯತಿ ಕ್ಷೇತ್ರೇ ಸನ್ಯಾಸ ದೀಕ್ಷಾಗ್ರಹಣಮ್|

ಧರ್ಮಸ್ಥಾಪನ ಹೇತವೇ ಭಾರತವರ್ಷ ಭ್ರಮಣಮ್| ದೀನೋದ್ಧಾರಣಮ್|

ಪಶ್ಚಾತ್ ವರದಪುರೇ ತೀರ್ಥಾಂಬು ಧರ್ಮಧ್ವಜ ಪಾದುಕಾದಿ ಸ್ಥಾಪನಂ|

ಏತದ್ದಿ ಶ್ರೀಧರಾಯಣಮ್|

 

ಪರಮಹಂಸ ಪರಿವ್ರಾಜಕಾಚಾರ್ಯ ಸದ್ಗುರು ಭಗವಾನ ಶ್ರೀ ಶ್ರೀಧರ ಸ್ವಾಮಿಗಳಿಗೆ

ಜಯ ಜಯ ಜಯ