11 2
     ಜಲವು ಸಂಜೀವಿನಿ ಶಕ್ತಿಯುಳ್ಳದ್ದು, ಜಗತ್ತಿನ ಚರಾಚರ ಜೀವಿಗಳಿಗೂ ಜಲವೇ ಆಧಾರವೆಂದೂ, ಜಲವು ಶ್ರೀಮನ್ನಾರಾಯಣ ಸ್ವರೂಪವೆಂದೂ ನಮ್ಮ ವೇದಗಳಲ್ಲಿ ಹೇಳಲ್ಪಡುತ್ತದೆ. ಅದಕ್ಕಾಗಿ ಜಲತತ್ತ್ವದ ಪೂಜೆ ನಮ್ಮ ಪರಂಪರೆಯಲ್ಲಿ ಪ್ರಾಮುಖ್ಯತೆ ಪಡೆದಿದೆ. ಬಹುತೇಕ ಎಲ್ಲಾ ಪೂಜೆ ಹೋಮ ಹವನಗಳಲ್ಲೂ ಜಲವುಳ್ಳ ಕಲಶವು ಪ್ರಧಾನ ಪಾತ್ರ ವಹಿಸುತ್ತದೆ. “ಕೇ ಲಸತಿ ಇತಿ ಕಲಶಃ” ಅಂದರೆ ಜಲವನ್ನು ತುಂಬಿಕೊಂಡ ಕಲಶವು ಹೊಳೆಯುತ್ತಿದೆಯೆಂದು ಅರ್ಥ. ನೀರನ್ನು ಹಿತ್ತಾಳೆಯ ಅಥವಾ ತಾಮ್ರದ ಪುಟ್ಟ ಕೊಡದಲ್ಲಿ ತುಂಬಿ
 “ಗಂಗೇಚ ಯಮುನೇಚೈವ ಗೋದಾವರಿ ಸರಸ್ವತಿ ನರ್ಮದಾ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಮ್ ಕುರು||”
     ಎಂಬ ಮಂತ್ರದೊಡನೆ ಪವಿತ್ರವಾದ ಸಪ್ತನದಿಗಳ ನೀರು ಇದರಲ್ಲಿ ಪ್ರವೇಶಿಸಲೆಂದು ಪ್ರಾರ್ಥಿಸುತ್ತಾರೆ. ಕೆಲವು ಕಡೆ ಈ ನೀರಿಗೆ ಅಕ್ಕಿಕಾಳು,ಗರಿಕೆ ಹುಲ್ಲು,ನಾಣ್ಯವನ್ನೂ ಹಾಕುತ್ತಾರಂತೆ. ಕೆಲವರು ಕಲಶದ ಮೇಲೆ ಸ್ವಸ್ತಿಕದ ಚಿಹ್ನೆಯನ್ನೂ ಬಿಡಿಸಿರುತ್ತಾರೆ. ಸ್ವಸ್ತಿಕವು ಶುಭಚಿಹ್ನೆಯಾಗಿದ್ದು, ಇದರಿಂದ ಸಾತ್ತ್ವಿಕ ವಾತಾವರಣ ಸೃಷ್ಠಿಯಾಗುತ್ತದೆಯೆಂಬ ನಂಬಿಕೆಯಿದೆ. ನಂತರ ಕಲಶದ ಮೇಲೆ ಮಾವಿನ ಎಲೆ(ಇನ್ನೂ ಕೆಲವೆಡೆ ವೀಳ್ಯದೆಲೆಯನ್ನೂ ಇಡುತ್ತಾರಂತೆ) ಜೋಡಿಸಿ ಅದರ ಮೇಲೆ ತೆಂಗಿನಕಾಯಿಯನ್ನು ಇಟ್ಟು,ಕಲಶ ಕೂರಿಸುವುದು ಸರ್ವೇ ಸಾಮಾನ್ಯ. ನಾರಾಯಣ ಸ್ವರೂಪನಾದ ನೀರನ್ನು ಸಾಕ್ಷಿಯಾಗಿಟ್ಟುಕೊಂಡು ದೇವತಾಕಾರ್ಯವನ್ನು ಮಾಡಲಾಗುತ್ತದೆಯೆಂದು ನಂಬಲಾಗಿದೆಯಂತೆ..
      ಹಿಂದೆ ಪುರಾಣದಲ್ಲಿ ನಡೆದ ಸಮುದ್ರ ಮಂಥನದಲ್ಲಿ ದೇವಾಸುರರು ಸಮುದ್ರವನ್ನು ಕಡೆದಾಗ ‘ಅಮೃತ’ವನ್ನೊಳಗೊಂಡ ಕುಂಭವನ್ನು ಹೊತ್ತ ಪರಮಾತ್ಮನು ಪ್ರಕಟವಾಗುತ್ತಾನೆ. ಈ ಅಮೃತವೆಂದರೆ ಅಮರತ್ವವನ್ನೀಯಬಲ್ಲ ಸೋಮರಸವಾಗಿರುತ್ತದೆ. ಇದೇ ಕಾರಣಕ್ಕೆ ಕಲಶದೊಳಗಿನ ನೀರನ್ನು ಅಮೃತವೆಂದು ಪರಿಗಣಿಸಿ ಇದರ ತೀರ್ಥ ಸೇವನೆಯನ್ನು ಮಾಡುತ್ತಾರೆಂಬ ನಂಬಿಕೆಯೂ ಇದೆಯಂತೆ. ತಾಮ್ರದ ಕಲಶಕ್ಕೆ ಜಗದಲ್ಲಿನ ಸಾತ್ತ್ವಿಕ ಲಹರಿಗಳನ್ನು ಆಕರ್ಷಿಸುವ ಶಕ್ತಿಯಿರುತ್ತದೆ. ಮಾವಿನ ಎಲೆಗಳಿಗೆ ದುಷ್ಟಶಕ್ತಿಗಳನ್ನು ದೂರಗೊಳಿಸುವ ಶಕ್ತಿಯಿದ್ದರೆ, ವೀಳ್ಯದೆಲೆಯಲ್ಲಿ ಸರ್ವದೇವತೆಗಳೂ ವಾಸಿಸುತ್ತಾರೆಂದು ನಂಬಲಾಗಿದೆ. ಇನ್ನು  ತೆಂಗಿನಮರವು ಕಲ್ಪವೃಕ್ಷವೆಂದು ಪೂಜಿಸಲ್ಪಡುತ್ತದೆ.ಹಾಗಾಗಿ ಕಲಶದ ಮೇಲಿರುವ ತೆಂಗಿನಕಾಯಿಯು ಜ್ಯೋತಿ ಸ್ವರೂಪವಾದ ಪರಮಾತ್ಮನನ್ನು ಪ್ರತಿನಿಧಿಸುತ್ತದೆಯೆಂದೂ ನಂಬಲಾಗಿದೆ. ಸ್ಥಾಪನೆಯಾದ ಕಲಶದ ನೀರನ್ನು, ವೀಳ್ಯದೆಲೆ, ಮಾವಿನೆಲೆಗಳನ್ನೂ ಮಂಗಳವಾರ ಮತ್ತು ಶುಕ್ರವಾರ ವಿಸರ್ಜಿಸಿದರೆ ಮನೆಯಿಂದ ಮಹಾಲಕ್ಷ್ಮೀ ಹೊರಟು ಹೋಗುತ್ತಾಳೆಂಬ ನಂಬಿಕೆಯೂ ಇದೆಯಂತೆ.
ವೈಚಾರಿಕವಾಗಿ ಹೇಳುವುದಾದರೆ : ಉತ್ತಮವಾದ ಲೋಹಗಳಲ್ಲೊಂದಾದ ತಾಮ್ರದ ಕಲಶದೊಳಗಿರುವ ನೀರು ಆರೋಗ್ಯಕಾರಿಯಾದುದು,ಅದರಲ್ಲೂ ಚರ್ಮವ್ಯಾಧಿಗೆ ಹೇಳಿ ಮಾಡಿಸಿದ ಔಷದಿಯಂತೆ. ಅದರ ಜೊತೆ ಗರಿಕೆ,ನಾಣ್ಯ,ಅಕ್ಕಿಕಾಳು ಹಾಕಿದ ನೀರೆಲ್ಲಾ ಸೇರಿದರೆ ಇನ್ನೂ ಆರೋಗ್ಯಕರವಾದ ತೀರ್ಥವೆನ್ನುತ್ತಾರೆ ಹಿರಿಯರು. ಕಲಶದ ಮೇಲಿರುವ ಮಾವಿನೆಲೆಗೆ ಆಮ್ಲಜನಕವನ್ನು ಶುದ್ಧಿಕರಿಸುವ ಶಕ್ತಿಯಿರುವುದರಿಂದ,ಕಲಶದಲ್ಲಿರುವ ಮಾವಿನೆಲೆಯೂ ಅಲ್ಲಿರುವ ಪರಿಸರವನ್ನು ಶುದ್ಧಗೊಳಿಸಿ ಉಸಿರಾಟದ ತೊಂದರೆಯನ್ನು ಹೋಗಲಾಡಿಸುತ್ತದೆಯಂತೆ.
RELATED ARTICLES  ಜೀವನ - ಜೀವಿಕೆ