ಒಮ್ಮೆ ಬದುಕೆಂಬ ಹೊತ್ತಿಗೆಯ ಪುಟಗಳನ್ನು ತಿರುಚಿ ನೋಡಿದಾಗ ಹಳೆಯ ನೆನಪುಗಳೇ ಮುದ ನೀಡುವವು ಹೊರತು ಇಂದಿನ ಆಪಲ್ ಫೋನ್ ಗಳಲ್ಲ,ಇಂದಿನ ಬೆಂಜ್ ಇತ್ಯಾದಿ ಯಾವುದೇ ದುಬಾರಿ ಕಾರುಗಳಲ್ಲ, ಇಂದಿನ ಪೀಟರ್ ಇಂಗ್ಲೇಂಡ್ ಯಾ ಅಂತಹುದೇ ಇನ್ನಾವುದೇ ಬ್ರಾಂಡೆಡ್ ಕಂಪೆನಿಯ ದುಬಾರಿ ಬಟ್ಟೆಗಳಲ್ಲ,ಇಂದಿನ ಪ್ಯೂಮಾ ಅಥವಾ ಇನ್ನಾವುದೇ ಅಂತಹುದೇ ಬ್ರಾಂಡೆಡ್ ಕಂಪೆನಿಯ ಚಪ್ಪಲಿಗಳಲ್ಲ, ಸುವಾಸನೆಯಿಂದ ಕೂಡಿದ ಡಿಯೋಡ್ರೆಂಟ್ ಅಲ್ಲ,ದುಬಾರಿ ವಾಚ್, ಕನ್ನಡಕ ಅಲ್ಲ, ವೀಕೆಂಡ್ ಶಾಪಿಂಗ್ ಅಲ್ಲ,ದೊಡ್ಡ ದೊಡ್ಡ ಬಂಗಲೆಯಲ್ಲ,ಕೋಟಿ ಕೋಟಿ ಹಣದ ರಾಶಿಯಲ್ಲ, ಕೇಜಿಗಟ್ಟಲೆ ಬಂಗಾರವಲ್ಲ,ಏಕಾಂಗಿಯಾಗಿ ದೊಡ್ಡ ಸ್ಮಾರ್ಟ್ ಟೀವಿಯಲ್ಲಿ ನೋಡುವ ಕ್ರಿಕೆಟ್ ಅಲ್ಲ,ಬೆರಳೆಣಿಕೆ ದಿನದ ನೆಮ್ಮದಿಯನ್ನರಸಿ ಹೋಗುವ ಪಿಕ್ ನಿಕ್, ಟ್ರೆಕ್ಕಿಂಗ್ ಅಲ್ಲ ಅಥವಾ ಈ ತರಹದ ಇನ್ನಾವುದೇ ಐಷಾರಾಮಿ ಬದುಕಲ್ಲ.
ಹೌದು, ಇದಾವುದೂ ಇಲ್ಲದ, ಇದಾವುದಕ್ಕೂ ಹಪಹಪಿಸದ,ಇದಾವುದನ್ನೂ ಪಡೆಯಲಾಗಿ ದುರಾಸೆಗೊಳಗಾಗದ ಬದುಕೊಂದಿತ್ತು.ಒಮ್ಮೆ ಯೋಚಿಸಿ ಆಗ ಆನಂದದಿಂದ ಬದುಕುತ್ತಿರಲಿಲ್ಲವೇ!? ನೆಮ್ಮದಿಯಿಂದ ಇರಲಿಲ್ಲವೇ!? ವಿನೋದಕ್ಕಾಗಿ ಯಾರೋ ಹೇಳಿದ ವಾಕ್ಯ ನೆನಪಿಗೆ ಬರುತ್ತದೆ “ತನ್ನದಲ್ಲದ ಊರಿನಲ್ಲಿ ತನ್ನದಲ್ಲದ ಆಫೀಸಿನಲ್ಲಿ ಕೂತು ಮಂಡೆಬಿಸಿ ಮಾಡುವುದಕ್ಕಿಂತ ತನ್ನದೇ ಮನೆಯ ಒಲೆಯ ಹಂಡೆ ಬಿಸಿ ಮಾಡುವುದು ಲೇಸು” ಮೇಲ್ನೋಟಕ್ಕೆ ಹಾಸ್ಯವೆಂದೆನಿಸಿದರೂ ಅದೆಷ್ಟು ಸತ್ಯ ಅಡಕವಾಗಿದೆ ನೋಡಿ?
ಊರಿನಲ್ಲಿದ್ದ ಎಲ್ಲಾ ಮಕ್ಕಳ ಪರಿಚಯವಿದ್ದ ಎಲ್ಲರೊಂದಿಗೆ ಸೇರಿ ಅಕ್ಕ-ತಮ್ಮ ಅಣ್ಣ-ತಂಗಿಯೇ ಇರಬಹುದೇನೋ ಎಂದೆಣಿಸುವಷ್ಟು ಪ್ರೀತಿವಿಶ್ವಾಸದಿಂದ ಆಡಿ ನಕ್ಕುನಲಿದು ಸಂಭ್ರಮಿಸುತ್ತಿದ್ದಾಗಿನ ಸಂತೋಷ,ಖುಷಿ,ನೆಮ್ಮದಿ 32 ಇಂಚಿನ ಟೀವಿಯಲ್ಲಿ ಮೃದುವಾಗಿರುವ ಕುಷನ್ ಸೋಫಾದಲ್ಲಿ ಕುಳಿತು ಡಬ್ಲ್ಯೂ ಡಬ್ಲ್ಯೂ ಎಫ್ ನೋ, ಕಾರ್ಟೂನನ್ನೋ ನೋಡುವುದರಲ್ಲಿ ಖಂಡಿತವಾಗಿಯೂ ಇಲ್ಲ,ಅಜ್ಜನೋ ಅಜ್ಜಿಯೋ ಹೇಳಿಕೊಡುತ್ತಿದ್ದ ಸಂವತ್ಸರಾದಿ ಬಾಯಿಪಾಠಗಳ ಮುಂದೆ ಈ ಟ್ಯೂಷನ್ನೂ,ಎಕ್ಷ್ಟ್ರಾ ಸ್ಟಡೀಸ್ ಎಲ್ಲಾ ಟುಸ್ಸೇ. ಆ ಗಲ್ಲಿ ಕ್ರಿಕೆಟ್, ಆ ಲಗೋರಿ, ಆ ಚಿನ್ನಿ ದಾಂಡು, ಆ ಜೂಟಾಟ, ಆ ಕಣ್ಣಾ ಮುಚ್ಚಾಲೆಗಳಿತ್ಯಾದಿ ಆಟಗಳಿಗೆ ಜಾತಿಮತಗಳ ಸೋಗಿನ ಪರಿವೇ ಇಲ್ಲದೆಯೇ, ಲಿಂಗ ತಾರತಮ್ಯಗಳ ಅರಿವಿಲ್ಲದೆಯೇ ಆಡಿ ನಲಿಯುತ್ತಿದ್ದ ಕಾಲವೆಲ್ಲಿ? ಕೇವಲ ಹೊರಗೆ ಹೋಗಿ ಬಂದರೇ ಡೆಟಾಲ್‍ನಿಂದ ಕೈ ತೊಳೆಸುವ ಕಾಲವೆಲ್ಲಿ? ಒಂದೊಮ್ಮೆ ಯೋಚಿಸಿದಾಗ ಖುಷಿ ದುಃಖ ಎರಡೂ ಸಮಾಗಮವಾಗಿ ಬಂದು ಕಣ್ಣಂಚನ್ನು ತೇವಗೊಳಿಸುತ್ತವೆ. ಬಿದ್ದು ಗಾಯವಾದಾಗ ಮಣ್ಣೇ ಪರಮೌಷಧವೇನೋ ಎಂಬಂತೆ ಗಾಯದ ಮೇಲೆ ಹಾಕಿ ಉಫ್ ಮಾಡಿಕೊಂಡ ನೆನಪು ಮಾಸಿಯೇ ಇಲ್ಲ ಅಷ್ಟರೊಳಗೆ ಅದೇ ಮಣ್ಣನ್ನು ಮುಟ್ಟಿದ ಮಕ್ಕಳ ಕೈತೊಳೆಸಲು ಯಾವುದೋ ರಾಸಾಯನಿಕವನ್ನು ಬಳಸಿ ಅದೇ ಮಣ್ಣಿಗೆ ಸೇರಿಸಿರುತ್ತೇವೆ. ಮನೆಯೇ ಒಂದು ಪುಟ್ಟ ಆಯುರ್ವೇದ ಆರೋಗ್ಯ ಕೇಂದ್ರದಂತಿತ್ತು ಸಣ್ಣಪುಟ್ಟ ಖಾಯಿಲೆಗಳಿಗೆ ಎಂದಾದರೂ ಆಸ್ಪತ್ರೆಗಳ ಮುಖ ನೋಡಿದ್ದುಂಟೇ? ಕಷಾಯ, ನೋವಿನ ಎಣ್ಣೆಗಳು, ಗಿಡಮೂಲಿಕೆಗಳಿಂದಲೇ ಕೆಲವೊಮ್ಮೆ ಎಂತೆಂತಹ ಘಟಾನುಘಟಿ ಖಾಯಿಲೆಗಳನ್ನೂ ವಾಸಿ ಮಾಡಿದ ನಿದರ್ಶನಗಳಿವೆ ಈಗಿನ ಪರಿಸ್ಥಿತಿ ಭಿನ್ನವಾಗಿದೆ ಲಕ್ಷಗಟ್ಟಲೆ ಹಣ ವ್ಯಯಿಸಿ ಆಪರೇಶನ್ನನ್ನೇ ಮಾಡಿಸಿದರೂ ವಾಸಿಯಾಗದ ಖಾಯಿಗಳೆಷ್ಟೋ ಹಾಗಾದರೆ ಆ ಔಷಧಿಯ ಗುಣಮಟ್ಟವೆಂತೂ ಎಂದು ಸಂದೇಹಿಸಬೇದ್ದು ಸಹಜವೇ ಸರಿ
ಬಡತನವಿದ್ದರೂ ಸುಖ ಸಂತೋಷ ಸದಾ ಶ್ರೀಮಂತಿಕೆಯಿಂದ ವಿರಾಜಮಾನರಾಗಿ ವಿಜೃಂಭಿಸುತ್ತಿದ್ದ ಕಾಲವದು, ಊರಿನಲ್ಲಿ ಜಾತ್ರೆಯೆಂದರೆ ನಮ್ಮ ಸ್ವಂತ ಮನೆಯದೇ ಕಾರ್ಯಕ್ರಮವೇನೋ ಎಂದು ಅನುಮಾನಿಸುವಷ್ಟರ ಮಟ್ಟಿಗೆ ಸಂಭ್ರಮಿಸುತ್ತಿದ್ದೆವು ದೀಪಾವಳಿ, ಯುಗಾದಿಗೆ ಹಳೇ ಬಟ್ಟೆಯನ್ನೇ ಒಗೆದು ಹಾಕಿಕೊಂಡಿದ್ದರೂ ಹೊಸ ಬಟ್ಟೆಯ ತಾರತಮ್ಯ ಗೋಚರಿಸುತ್ತಿರಲಿಲ್ಲ ಆದರೆ ಈಗ ಎಷ್ಟೇ ದುಬಾರಿಯಾದ ಬಟ್ಟೆ ಕೊಂಡು ಧರಿಸಿದರೂ ಆ ಸಂತೋಷದ ಸನಿಹಕ್ಕೂ ಹೋಗಲಾರದ ಸ್ಥಿತಿ. ಮಾನವೀಯ ಮೌಲ್ಯಗಳು ಎಲ್ಲೆಂದರಲ್ಲಿ ತಾಂಡವಾಡುತ್ತಿದ್ದ, ಎತ್ತ ನೋಡಿದರತ್ತ ಸಹಾಯಹಸ್ತ ಚಾಚುವವರಿದ್ದ, ಮೇಲ್ನೋಟಕ್ಕೆ ಕೆಲವು ಸಂದರ್ಭಕ್ಕೆ ಒರಟಂತೆ ಕಂಡರೂ ಹೂವಿಗಿಂತ ಮೃದುವೇನೋ ಮನಸ್ಸು ಎಂದು ಭಾವಿಸುವ ಹಾಗೆ ವ್ಯವಹರಿಸುತ್ತಿದ್ದ ಕಾಲವೆಲ್ಲೀ? ರಕ್ತ ಸಂಬಂಧಿಗಳನ್ನೇ ಕಂಡರೂ ಮೂಗು ಮುರಿದು ಮುಂದೆ ನಡೆಯುತ್ತಿರುವ ಈ ಕಾಲವೆಲ್ಲಿ? ಮನುಷ್ಯನ ಮನಸ್ಸುಗಳು ವಿಕಸನವಾಗುತ್ತಾ ಹೋದಂತೆ ಮನುಷ್ಯತ್ವವೇ ಮಾಯವಾದಂತೆ ಮಾನಸಿಕ ಪರಿಸ್ಥಿತಿ ಹೇಗೆ ಭಿನ್ನವಾಗುತ್ತಾ ಹೋಗುತ್ತದೆ ಎಂಬುದಕ್ಕೆ ಸ್ಪಷ್ಟ ಉದಾಹರಣೆಗಳಿವುಗಳು.
ಇಂದು ಕಳೆಗಟ್ಟುತ್ತಿರುವ ಹಿಂದೆ ರಾರಾಜಿಸುತ್ತಿದ್ದ ಮಲೆನಾಡ ಭಾಗಗಳಲ್ಲಿನ ಅಡಿಕೆ ಕೊಯ್ಲು ಎಂಬ ಸಂಭ್ರಮಕ್ಕೆ ಸೇರುತ್ತಿದ್ದ ಜನರ ಸಂಖ್ಯೆಯೆಷ್ಟೂ? ಎಂತಹ ವಿಚಾರ ವಿನಿಮಯ ಆಗುತ್ತಿತ್ತೂ? ಕೇವಲ ಒಂದು ಅಡಿಕೆ ಕೊಯ್ಲು ಎಂತಹ ಬಾಂದವ್ಯ ಬೆಸೆಯುತ್ತಿತ್ತು? ಒಳಗಾಳು ರಾಜ್ಯಭಾರ ಹೇಗೆ ವಿಜೃಂಭಿಸುತ್ತಿತ್ತೂ? ತಾರತಮ್ಯವಿರಲಿಲ್ಲ,ಅಸೂಯೆಯಿರಲಿಲ್ಲ, ಜ್ಞಾನವು ಹಂಚಿಕೆಯಾಗುತ್ತಿತ್ತು,ಸದ್ಭಾವನೆ,
ಸದ್ವಿಚಾರ,ಸದಾಚಾರ ಎಲ್ಲೆಂದರಲ್ಲಿ ರಾರಾಜಿಸುತ್ತಿತ್ತು. ಇದು ಕೇವಲ ಉದಾಹರಣೆಯಷ್ಟೇ ಇದಕ್ಕೆ ಪುಷ್ಠಿ ನೀಡಬೇಕೆಂದರೆ ಇನ್ನು ಹಲವಾರನ್ನು ಉದಾಹರಣೆಯನ್ನಾಗಿಸಬಹುದು,ಗದ್ದೆ ಕೊಯ್ಲು,ಅದರ ಹೊರೆ,ಅದರದ್ದೇ ಒಕ್ಕಲಾಟ,ಇತ್ಯಾದಿಗಳು. ಕೆಲಸಕ್ಕಾಗಿ ಉಳ್ಳವರನ್ನು ಆಶ್ರಯಿಸಿದ್ದವರಿಗೆ ಸಂಬಳ ಸ್ವಲ್ಪ ಕಡಿಮೆ ಎನಿಸಿದ್ದರೂ ಸಿಗುತ್ತಿದ್ದ ಸುಖ ನೆಮ್ಮದಿಗಳು ಆ ಕೊರತೆಯನ್ನು ನೀಗಿಸುವಲ್ಲಿ ಯಶಸ್ವಿಯಾಗುತ್ತಿದ್ದವು. ಈ ಚಟುವಟಿಕೆಗಳ ಮಧ್ಯೆ ಜಾನಪದ ಕಲೆಗಳು ಕಂಗೊಳಿಸುತ್ತಿದ್ದವು, ಸರ್ವೇ ಸಾಮಾನ್ಯವಾಗಿ ಪ್ರತಿಯೊಂದು ಮನೆಯಲ್ಲಿ ಎಂದು ಭಾವಿಸಿದರೆ ತಪ್ಪಾಗಲಾರದು ಒಬ್ಬೊಬ್ಬ ಕಲಾವಿದರು ಇದ್ದೇ ಇರುತ್ತಿದ್ದರು, ಊರಿನ ದೇವಸ್ಥಾನದಲ್ಲಿ ಸೇರಿ ಮಾಡುತ್ತಿದ್ದ ಭಜನೆ, ತಾಳಮದ್ದಳೆ, ಯಕ್ಷಗಾನ, ಬಯಲಾಟ,ನಾಟಕ,ಕಂಬಳ,ವೀರಗಾಸೆ,ಹಾಡು, ಹಾಸ್ಯ, ಇವೆಲ್ಲವೂ ಜಾತ್ರೆ,ಉತ್ಸವ, ಮುಂತಾದ ಸಮಾರಂಭಗಳ ಮೂಲಕ ಅಡಗಿ ಕುಳಿತಿರುತ್ತಿದ್ದ ಪ್ರತಿಭೆಗಳು ಹೊರಬೀಳುತ್ತಿತ್ತು, ಸಾಮಾನ್ಯವಾಗಿ ಈ ಜಾತ್ರೆ ಉತ್ಸವಗಳೆಲ್ಲಾ ತಮ್ಮದೇ ಕಾರ್ಯಕ್ರಮವೇನೋ ಎಂದೆಣಿಸುವಷ್ಟರ ಮಟ್ಟಿಗೆ ಭಾಗವಹಿಸುವಿಕೆ ಕಾಣಸಿಗುತ್ತಿತ್ತು ಅಂತೆಯೇ ಅದನ್ನು ಪೋಷಿಸುವವರಿಗೇ, ಪ್ರೋತ್ಸಾಹಿಸುವವರಿಗೇನೂ ಕೊರತೆಯಿರಲಿಲ್ಲ ಆದರೆ ಪರಿಸ್ಥಿತಿ ಎಷ್ಟರ ಮಟ್ಟಿಗೆ ಬದಲಾಗಿದೆಯೆಂದರೆ ಕಲಾವಿದರಿದ್ದರೂ ಆ ಕಲೆಯನ್ನು ಪೋಷಿಸುವ, ಪ್ರೋತ್ಸಹಿಸುವ ಮಾತು ಬದಿಗಿರಲಿ ಅಸೂಯೆಯಿಂದ ಆ ವ್ಯಕ್ತಿಯ ಕಲೆಯನ್ನು ತುಳಿಯಲೆತ್ನಿಸದಿದ್ದರೆ ಪುಣ್ಯವೇ ಸರಿ. ಈ ಎಲ್ಲಾ ಕಲೆಗಳಿಗೆ ಅದರಿಂದ ಸಿಗುತ್ತಿದ್ದ ಸಂತೋಷಕ್ಕೆ ಸಡ್ಡು ಹೊಡೆಯಲೆತ್ನಿಸಿ ನಗೆಪಾಟಲಿಗೀಡಾಗುತ್ತಿರುವವೆಂದರೆ ಮಲ್ಟೀಪ್ಲಕ್ಸ್‍ಗಳು, ಥಿಯೇಟರ್‍ಗಳು, ಸ್ಪೋಟ್ರ್ಸ ಕ್ಲಬ್‍ಗಳು, ಹಿಂದೆ ವಂಶಪಾರಂಪರಿಕವಾಗಿ ತನ್ನಷ್ಟಕ್ಕೆ ತಾನಾಗಿಯೇ ಹೆಚ್ಚು ಅಭ್ಯಸಿಸದಯೇ ಮೈಗೂಡುತ್ತಿದ್ದ ಕಲೆಗಳನ್ನು ಕಲಿಸಲು ಕಲಿಸುವುದಕ್ಕಾಗಿ ಹುಟ್ಟಿಕೊಂಡಿರುವ ಕೆಲವೇ ಕೆಲವು ಸಂಸ್ಥೆಗಳು, ಇವೆಲ್ಲವನ್ನೂ ಒಮ್ಮೆ ಕೇವಲ ದೃಷ್ಠಿಸಿ ಹಿಂದಿನ ನೆನಪನ್ನು ಮೆಲುಕು ಹಾಕಿದರೆ ಇಂದಿನ ಪರಿಸ್ಥಿತಗೆ ಗಹಿಗಹಿಸಿ ನಗಬೇಕೆಂದೆನಿಸುತ್ತದೆ.
ಕೇವಲ ವೃತ್ತಿಗಾಗಿ ನಗರವನ್ನು ಅವಲಂಬಿಸಿ ವಲಸೆ ಬರುವುದಕ್ಕೆ ಪ್ರಾರಂಭವಾದ ಸ್ಥಾನಪಲ್ಲಟನಾ ಕ್ರಿಯೆ ಇಂದು ಎಷ್ಟರ ಮಟ್ಟಿಗೆ ನಗರವನ್ನೇ ಅವಲಂಬಿಸಿದ್ದೇವೆಂದರೆ ನಿಜವಾದ ಬದುಕು ಯಾವುದು ಎಂದು ಗುರುತಿಸಲಾರದಷ್ಟರ ಮಟ್ಟಿಗೆ, ಕೆಲವರನ್ನು ನೋಡಿರಂತೂ ಇವರು ಮನುಷ್ಯರೋ ಯಂತ್ರವೋ ಎಂದು ಅನುಮಾನ ನಿಸ್ಸಂಶಯವಾಗಿ ಬಂದೇ ಬರುತ್ತದೆ ಬೆಳಿಗ್ಗೆ ಸರಿಯಾಗಿ 7 ಘಂಟೆಗೆ ಮನೆಯಿಂದ ಹೊರಹೋದರೆ ತಿರುಗಿ ಮನೆಯ ಕರಘಂಟೆ ಬಾರಿಸುವುದು ಹೆಚ್ಚೂ ಕಡಿಮೆ ರಾತ್ರಿ 9 ಕ್ಕೆಯೇ ಮುಂದುವೆರೆದರೆ ವಾರದ ರಜೆ ಭಾನುವಾರ ವಾರವಿಡೀ ಯಂತ್ರದ ಹಾಗೆ ದುಡಿದು ಹೈರಣವಾದ ಜೀವ ವಿಶ್ರಾಂತಿ ಬೇಡುವುದಿಲ್ಲವೇ? ಹಾಗಾದರೆ ಅವರ ಕುಟುಂದ ಕಥೆಯೇನು? ಮಕ್ಕಳಿಗೆ ತಂದೆ/ತಾಯಿಯ ಅಪ್ಪುಗೆಯೆಲ್ಲಿ? ಅವರ ತೋಳತೆಕ್ಕೆಯಲ್ಲಿ ವಿರಮಿಸುವ ಆಸೆಯನ್ನು ಪೂರೈಸುವವರ್ಯಾರು? ಎಂಬಿತ್ಯಾದಿ ಪ್ರಶ್ನೆಗಳು ಮೂಡುವುದರಲ್ಲಿ ನಿಸ್ಸಂಶಯ. ಇನ್ನೂ ಕೊಂಚ ಮುಂದುವರೆದರೇ ಇವೆಲ್ಲವೂ ದೈನಂದಿನ ದಿನಚರಿಯಾದರೇ ಊರಿನಿಂದ ತಂದೆಯೋ/ತಾಯಿಯೋ/ಸಹೋದರಿಯೋ/ಸಹೋದರನೋ/ಅಥವಾ ತೀರ ಸನಿಹದ ಬಳಗದವರು ಬಂದರೆ ದಿನಚರಿಯಲ್ಲಿ ಕೊಂಚ ಬದಲಾವಣೆ ಮಾಡಿಕೊಳ್ಳಲೆತ್ನಿಸುತ್ತಾರೆ ಶನಿವಾರವೋ ಸೋಮವಾರವೋ ಒಂದು ರಜೆ ಹಾಕಿ ಒಂದು ರೌಂಡ್ ಯಾವುದಾದರು ಮಾಲ್‍ನ್ನು ಸುತ್ತಿಸಿ ಮಲ್ಟೀಪ್ಲಕ್ಸ್‍ನಲ್ಲಿ ಒಂದು ಫಿಲಂ ತೋರಿಸಿ ಒಂದು ಜೊತೆ ಕೊಡಿಸಿ ಯಾವುದಾದರೂ ಐದು ನಕ್ಷತ್ರದ ಹೋಟೆಲ್‍ನಲ್ಲಿ ಊಟ ಕೊಡಿಸಿ ಬಿಟ್ಟರೆ ಇದೇ ನಮ್ಮ ಮೇಲಿದ್ದ ಗುರುತರ ಜವಬ್ಬಾರಿಯೇನೋ ಎಂದು ಅಚ್ಚುಕಟ್ಟಾಗಿ ಮುಗಿಸಿಬಿಡುತ್ತಾರೆ ನಿಜವಾಗಿಯೂ ಅವರುಗಳು ಬಂದದ್ದು ಬಟ್ಟೆಯ ಕೊರತೆಯಿಂದಾಗಿಯೇ? ಮಾಲ್ ಸುತ್ತುವುದಕ್ಕಾಗಿಯೇ? ಅಥವಾ ಇನ್ನಾವುದೇ ತರಹೇವಾರಿ ಐಷಾರಾಮಿ ಜೀವನವನ್ನು ಅನುಭವಿಸಲಾಗಿಯೇ ಎನ್ನುವುದು ಯಕ್ಷಪ್ರಶ್ನೆ? ಇನ್ನು ಮಂಗಳವಾರ ಎದ್ದು ಶುರುವಾಗುವ ಯಂತ್ರ ಇಬ್ಬರೂ ಎದ್ದು ಆಫೀಸ್‍ನತ್ತ ಹೊರಟು ಮಗುವನ್ನು ಪ್ರೀನರ್ಸರಿಗೋ, ಬೋರ್ಡಿಂಗ್ ಸ್ಕೂಲ್‍ಗೋ ಡ್ರಾಪ್ ಮಾಡಿ ಚಾಲನೆಯಾದವರು ಮತ್ತೆ ಸ್ಥಗಿತಗೊಳ್ಳುವುದು ರಾತ್ರಿ 9 ಕ್ಕಾದರೆ ಮನೆಯಲ್ಲಿದ್ದವರ ಪರಿಸ್ಥಿತಿ ದೇವರಿಗೇ ಪ್ರೀತಿ, ಹೆಚ್ಚೂ ಕಡಿಮೆ ಈ ಯಂತ್ರಗಳ ಭರಾಟೆಯಲ್ಲಿ ಶನಿವಾರ ಅಥವಾ ಭಾನುವಾರ ಬರುತ್ತಿದ್ದದ್ದನ್ನೇ ಬಕಪಕ್ಷಿಯಂತೆ ಕಾದುಕೂತಿದ್ದವರ ಹಾಗೆ ಬಸ್ ಸ್ಟಾಂಡಿಗೋ ರೈಲ್ವೇ ಸ್ಟೇಷನ್‍ಗೋ ಡ್ರಾಪ್ ಮಾಡಲು ಹೇಳಿದರೆ ಆಶ್ಚರ್ಯ ಪಡಬೇಕಾದ್ದೇನಿಲ್ಲ,
ಒಂದು ಪ್ರಶ್ನೆ ಈ ಯಾಂತ್ರಿಕ ಬದುಕು ಯಾರಿಗಾಗಿ?ಯಾತಕ್ಕಾಗಿ? ಭಾಗಶಃ 80 ವರ್ಷದ ಬದುಕಿನಲ್ಲಿ ಮೊದಲು 15 ವರ್ಷ ಬೋರ್ಡಿಂಗ್/ಹಾಸ್ಟೆಲ್ ವಿದ್ಯಾಭ್ಯಾಸವನ್ನು ಅನುಭವಿಸದೇ ಇದ್ದವರೇ ಪುಣ್ಯವಂತರು, ಕಾರಣವಿಷ್ಟೇ ಈ ವಿದ್ಯಾಭ್ಯಾಸವನ್ನು ತಂದೆತಾಯಿಯ ಪ್ರೀತಿ ವಾತ್ಸಲ್ಯದೊಂದಿಗೆ ಪೂರೈಸಿದರೆ ಮುಗಿಯಿತು ನಂತರ ಇಡೀ ಜೀವನದಲ್ಲಿ ಪುನಃ ಆ 15 ವರ್ಷ(5475 ದಿನಗಳನ್ನು) ಅವರೊಂದಿಗೆ ಕಳೆಯುವುದು ಪ್ರಾಯಶಃ ಮರೀಚೀಕೆಯೇ ಎಂದೆನಿಸುತ್ತದೆ. ನಂತರ ಉನ್ನತ ವ್ಯಾಸಂಗಕ್ಕಾಗಿ ಮನೆಯಿಂದ ಹೊರ ಹೊರಟರಂತೂ ಮುಗಿಯಿತು ಅಲ್ಲಿಂದ ಪ್ರಾರಂಭವಾಗುವ ಯಾಂತ್ರಿಕ ಬದುಕು ಮಾಂತ್ರಿಕವಾಗಿ ಮಾಯಾಜಾಲದಂತೆ ಕ್ಷಣ ಕ್ಷಣಕ್ಕೂ ನಮ್ಮದಲ್ಲದ ಬದುಕಿಗೆ ನೂಕುತ್ತದೆ. ಸರಿ ಇಷ್ಟೆಲ್ಲಾ ಆದರೂ ತಂದೆ ತಾಯಿ,ಸಹೋದರ ಸಹೋದರಿಯರಿಗೆ ಕೊಡದ ಸಮಯ ಹೆಂಡತಿ ಮಕ್ಕಳಿಗಾದರೂ ನೀಡುತ್ತಾರೆಯೇ? ಉತ್ತರ ಇಲ್ಲ, ನೀಡುತಿರುವುದು ಆಫೀಸ್ ಟ್ರಾಫಿಕ್ ಹಾಗು ಕ್ಷಣಿಕ ಸುಖ ನೀಡುವಂತಹ ಶಾಪಿಂಗ್, ವೀಕೆಂಡ್ ಪಿಕ್‍ನಿಕ್, ಟೆಕ್ಕಿಂಗ್, ಲಾಂಗ್‍ಡ್ರೈವ್ ಇಂತಹುದಕ್ಕೇ ಹೊರತು ನಮ್ಮ ಕುಟುಂಬದ ಖಾಸಗಿತನಕ್ಕಲ್ಲ. ಇದು ಹೀಗೇ ಒಂದು 50 ವರ್ಷದ ಹಂತದವರೆಗೆ ನಡೆದರೆ 50 ವರ್ಷದ ನಂತರ ಹುಟ್ಟಿದ ಊರಿನಲ್ಲಿ ಒಂದು ದೊಡ್ಡ ಮನೆಯನ್ನೂ ಸ್ವಲ್ಪ ಕೃಷಿಗೆ ಜಾಗವನ್ನೂ ಖರೀದಿಸಿ ನೆಮ್ಮದಿಯನ್ನರಸಿ ಸ್ಥಾನಪಲ್ಲಟಗೊಂಡರೆ ನಗರ ಜೀವನದ ಆಹಾರ ಕ್ರಮ,ಮಾಲಿನ್ಯ ಪೂರಿತ ಗಾಳಿ ಸೇವನೆಯಿಂದ, ವಿಶ್ರಾಂತಿಯಿಲ್ಲದೇ ಕೇವಲ ಹಣ ಸಂಪಾದನೆ ದೃಷ್ಠಿಯಿಂದಲೋ ದುಡಿದುದರ ಫಲವಾಗಿ ಬಳುವಳಿಯಾಗಿ ಬಂದಂತಹ ಬೆಂಬಿಡದ ರೋಗಾದಿ ಖಾಯಿಲೆಗಳು. ಇವಿಷ್ಟು ದೇಶದಲ್ಲೇ ಸ್ಥಾನಪಲ್ಲಟಗೊಂಡ ಯಂತ್ರಗಳ ಸ್ಥಿತಿಯಾದರೆ, ಹೊರದೇಶಕ್ಕೆ ಹಾರಿದ ಯಂತ್ರಗಳ ಸ್ಥಿತಿಯಂತೂ ಆಜನ್ಮ ವೈರಿಗೂ ಬೇಡ ಎನಿಸುತ್ತದೆ, ತಕ್ಷಣದ ತುರ್ತು ಅನಿವಾರ್ಯತೆಯೆಂದು ಕರೆ ನೀಡಿದರೇ ಆಗಮನಕ್ಕೆ ಕನಿಷ್ಠವೆಂದರೂ 12 ತಾಸು ಬೇಕಾಗಿಯೇ ಆಗುತ್ತದೆ ಅಷ್ಟು ಸಾಹಸಗೈದು ಬಂದರೂ ವಾಪಾಸು ಹೊರಡಲನುವಾಗು ಅನಿವಾರ್ಯತೆ ತಲೆದೂರಿರುತ್ತದೆ.
ಇಂತಹ ಯಾಂತ್ರಿಕ ಬದುಕು ಯಾತಕ್ಕಾಗಿ? ಯಾವ ಸಾರ್ಥಕತೆಗಾಗಿ? ಇದರಿಂದ ನೆಮ್ಮದಿಯ ಮಾತು ಬದಿಗಿರಲಿ ಕೆಲವೊಮ್ಮೆ ಕ್ಷಣಿಕ ಸುಖವೂ ಮರೀಚಿಕೆಯೇ, ಇದನ್ನೆಲ್ಲಾ ನೋಡಿದ ಮೇಲೆ ನಮ್ಮಲ್ಲಿ ಸಹಜವಾಗಿ ಮೂಡುವ ಪ್ರಶ್ನೆ ಈ ಜಂಜಾಟ, ತೊಳಲಾಟ, ಸದಾಕಾಲ ನೆಮ್ಮದಿಗಾಗಿ ಹಪಹಪಿಸುವ ಯಾಂತ್ರಿಕ ಬದುಕಿಗೆ ಸದಾಕಾಲ ಮನಃಶಾಂತಿಯನ್ನುಣಿಸುವ ಮಾರ್ಗೋಪಾಯಗಳಿಲ್ಲವೇ? ಖಂಡಿತವಾಗಿಯೂ ಇದೆ ನಾವು ಬದಲಾಗಬೇಕು ಅಷ್ಟೇ, ನಮ್ಮ ಮನಸ್ಥಿತಿಯನ್ನು ಕೊಂಚ ಬದಲಾಯಿಸಬೇಕು,ಇದರಿಂದ ನಮ್ಮ ನೆಮ್ಮದಿ ಸದಾಕಾಲ ಹಸಿರಾಗಿರುತ್ತದೆ ತನ್ಮೂಲಕ ಕಳೆಗುಂದುತ್ತಿರುವ ಕೆಲವು ಅಪರೂಪದ ಕಲೆ, ಸಂಸ್ಕøತಿ, ಸದಾಚಾರಗಳಿತ್ಯಾದಿಗಳನ್ನು ಮುಂದಿನ ಪೀಳಿಗೆ ಹಸ್ತಾಂತರಿಸುವಲ್ಲಿ ಪ್ರತಿಯೊಬ್ಬರದೂ ಗಣನೀಯ ಪಾತ್ರವಾಗುತ್ತದೆ. ಸಾಧ್ಯವಾದಷ್ಟೂ ನಮ್ಮ ಅನುಕೂಲತೆಗಳನ್ನು ನಿಭಾಯಿಸಲು ಬೇಕಾಗುವ ಹಣದ ಅಗತ್ಯತೆಯನ್ನು ಪೂರೈಸುವ, ನಮ್ಮ ಖಾಸಗೀತನಕ್ಕೂ ಬೆಲೆ ಕೊಡುವ ಸಂಸ್ಥೆಗಳನ್ನು ಕೇವಲ ಹಣದ ಮುಖವನ್ನಷ್ಟೇ ನೋಡದೇ ಉದ್ಯೋಗವನ್ನು ಆಶ್ರಯಿಸುವುದರಿಂದ, ಬೇರೆ ಸ್ಥಳಗಳಲ್ಲಿ ಉದ್ಯೋಗನಿಮಿತ್ತವಾಗಿ ವಲಸೆ ಇದ್ದರೂ ಸಾಧ್ಯವಾದ ಮಟ್ಟಿಗೆ ನಮ್ಮ ಸಂಸ್ಕøತಿ, ಆಚಾರ-ವಿಚಾರಗಳನ್ನು ನೆನಪಿಸುವಂತಹ ಸಂಘಸಂಸ್ಥೆಗಳೊಂದಿಗೆ ಭಾಗಿಯಾಗಬೇಕು, ಮಕ್ಕಳಿಗೂ ಅದರ ಸದಾಭಿರುಚಿಯುಣಿಸುವದೂ, ಮನೆಯಲ್ಲಿ ಬಾಯಿಪಾಠ, ಭಜನೆಗಳಂತಹ ಮನೆಪಾಠಗಳನ್ನು ಹೇಳಿಕೊಡುವುದು ತನ್ಮೂಲಕ ಅನಗತ್ಯ ಹೆಚ್ಚುವರಿ ಟ್ಯೂಷನ್‍ಗಳಿತ್ಯಾದಿಗಳಿಂದ ದೂರವಿಡುವುದು, ಸಣ್ಣಪುಟ್ಟ ಖಾಯಿಲೆಗಳಿಗೆ ಆಯುರ್ವೇದ ನಿಖರವಾದ ಮನೆಮದ್ದುಗಳಿಂದಲೇ ಗುಣಪಡಿಸಲೆತ್ನಿಸುವದು, ಹೆಚ್ಚು ಹೆಚ್ಚು ಸನ್ಮಿತ್ರರೂ ಆತ್ಮೀಯ ಬಂದುಬಾಂಧವರೊಂದಿಗೆ ಬೆರಯುವುದು ಮಕ್ಕಳನ್ನೂ ಬೆರಯುವಂತೆ ರೂಢಿಸುವುದು, ಹೆಚ್ಚು ಹೆಚ್ಚು ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡುವುದು, ಹಿರಿಯರಿಗೆ ಗೌರವ ಕೊಡುವುದೂ, ಅನ್ಯಸ್ಥಳದಲ್ಲಿ ವಲಸೆ ಇದ್ದರೆ ಸ್ವಂತ ಊರಿನಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಸಾಧ್ಯವಾದಷ್ಟರ ಮಟ್ಟಿಗೆ ಭಾಗಿಯಾಗುವು, ತಿಂಗಳಿಗೆ ಎರಡು ಬಾರಿಯಾದರೂ ಊರಿಗೆ ಹೋಗುವ ಪ್ಲಾನ್ ಮಾಡುವುದು(ವೀಕೆಂಡ್ ಪಿಕ್‍ನಿಕ್ ಹೋಗುವ ಬದಲು) ಸಾಧ್ಯವಾದಷ್ಟರ ಮಟ್ಟಿಗೆ ಅವಕಾಶವಿದ್ದಲ್ಲೆಲ್ಲಾ ಸೂಕ್ತವೆನಿಸಿದ ಕಡೆಯಲ್ಲೆಲ್ಲಾ ಸಕುಟುಂಬ ಸಮೇತರಾಗಿಯೇ ಭಾಗವಹಿಸುವುದು, ಸಾಮಾನ್ಯವಾಗಿ ಈ ಎಲ್ಲಾ ಆಚರಣೆಗಳೂ ಹಿರಿಯರನ್ನು ಗೌರವಿಸಿ ಅವರ ಮಾತಿಗೆ ಬೆಲೆ ಕೊಡುವುದರಿಂದ ಖಂಡಿತವಾಗಿಯೂ ತನ್ನಷ್ಟಕ್ಕೆ ತಾನಾಗಿಯೇ ನೆರವೇರುತ್ತದೆ ಕಾರಣವಾದರೂ ಇಷ್ಟೇ ಅನುಭವಕ್ಕಿಂತ ದೊಡ್ಡ ಪಾಠ ಮತ್ತೆಲ್ಲೂ ಪ್ರಾಯಶಃ ಕಾಣಸಿಗದು, ತತ್ಸಂಬಂಧ ಗುರುಹಿರಿಯರ ತಂದೆತಾಯಿಯರ ಋಣಕ್ಕೆ ಸಮಾನಾಗಿ ಏನು ತಾನೆ ಕೊಡಲು ಸಾಧ್ಯ? ಎಂದಿಗೂ ಅವರನ್ನು ಕೇವಲ ನಮ್ಮ ಖಾಸಗೀತನಕ್ಕಾಗಿ ನಮ್ಮಿಂದ ಬೇರ್ಪಡಿಸದಿದ ಹೃದಯಸ್ಪರ್ಶಿ ಪ್ರೀತಿಯೊಂದನ್ನು ಬಿಟ್ಟು, ಲೋಕಕ್ಕೆ ಸಾಮ್ರಾಟನಾಗಿದ್ದರೂ ತಂದೆ ತಾಯಿಗೆ ಮಗನೇ ಅಗಿರಬೇಕಾದ್ದು ಕರ್ತವ್ಯವಲ್ಲವೇ? ತನ್ಮೂಲಕ ಮಾಂತ್ರಿಕವಾಗಿ ಯಾಂತ್ರಿಕತೆಗೆ ಒಗ್ಗಿಕೊಂಡ ಬದುಕನ್ನು ವಾಸ್ತವದ ಹಾದಿಯೆಡೆಗೆ ತರಬೇಕಾದುದು ಅತೀ ಅವಶ್ಯವಲ್ಲವೇ?