ಲೇಖಕರು :- ಪ್ರಭಾ ಮತ್ತು ವೆಂಕಟರಮಣ ಭಟ್ಟ, ಪುಣೆ
ಸದ್ಗುರು ಭಗವಾನ ಶ್ರೀ ಶ್ರೀಧರ ಸ್ವಾಮಿಗಳು ವೈಭವದಿಂದ ಭೂಮಿಯ ಮೇಲೆ ದೇಹಧಾರಿಯಾಗಿ ಸಂಚರಿಸುತ್ತಿದ್ದ ಕಾಲದಲ್ಲಿ ತಮ್ಮ ಶಿಷ್ಯರ, ಭಕ್ತರ ಅನೇಕ ಪತ್ರಗಳಿಗೆ ಉತ್ತರರೂಪ ಪತ್ರಗಳನ್ನು ಕಾಲಕಾಲಕ್ಕೆ ಕಳುಹಿಸಿ ಮಾರ್ಗದರ್ಶನ ಮಾಡುತ್ತಿದ್ದರು. ಅಂತಹ ನೂರು ಪತ್ರಗಳ ಸಂಗ್ರಹ ಇಸವಿ ಸನ ೧೯೮೫ರಲ್ಲಿ ಶ್ರೀ ಶ್ರೀಧರ ಕುಟಿ, ಸಜ್ಜನಗಡದಿಂದ ಮರಾಠಿ ಭಾಷೆಯಲ್ಲಿ ಪ್ರಕಾಶಿತವಾಯಿತು.
ಆ ಪತ್ರ ಸಂಕಲನದಲ್ಲಿ ಸ್ವಾಮಿಗಳು ಸಾಂಸಾರಿಕ ಮತ್ತು ಸಾಧಕ ಎರಡೂ ತರದ ಜನರಿಗೆ ಮಾರ್ಗದರ್ಶನ ನೀಡಿದ್ದಾರೆ. ಅವರ ತಪ್ಪುಗಳನ್ನು, ತಪ್ಪು ಕಲ್ಪನೆಗಳನ್ನು ತೋರಿಸಿ, ತಿದ್ದಿ ಸನ್ಮಾರ್ಗದಲ್ಲಿ ಕೊಂಡೊಯ್ದಿದ್ದಾರೆ. ಪ್ರಾಪಂಚಿಕ ಭಕ್ತಜನರಿಗೆ ಬರೆದ ಪತ್ರಗಳು ಸಂಸಾರದ, ವ್ಯವಹಾರದಲ್ಲಿಯ ಸಮಸ್ಯೆ- ಅಡಚಣಿಗಳ ಹಿಂದಿನ ಆಧ್ಯಾತ್ಮ ಸೂಕ್ಷದ ವಿಚಾರ ತಿಳಿಸಿ ಹೇಳಿ ಪಾರಮಾರ್ಥಿಕ ದೃಷ್ಟಿ ಜಾಗೃತಗೊಳಿಸುವ ವಿಚಾರಗಳನೊ್ನಳಗೊಂಡಿದ್ದರೆ, ಸಾಧಕ ಶಿಷ್ಯರಿಗೆ ಬರೆದ ಪತ್ರಗಳು ಸಾಧನೆಯ ಫಲ, ಆತ್ಮಜ್ಞಾನಪಥದಲ್ಲಿ ಆತ್ಮವಿಶ್ವಾಸ ದೃಢೀಕರಿಸುವ ವಿಚಾರಗಳನ್ನು ಒಳಗೊಂಡಿದ್ದದ್ದನ್ನು ನಾವು ಈ ಪತ್ರಗಳಲ್ಲಿ ಕಾಣಬಹುದು.
ಒಟ್ಟಿನ ಮೇಲೆ ಎಲ್ಲ ಪತ್ರಗಳೂ ಪಾರಮಾರ್ರ್ಥಿಕ ಲಕ್ಷವನ್ನೇ ನಿಖರ ದೃಷ್ಟಿಯಲ್ಲಿಟ್ಟು, ಅಂತರಂಗದಲ್ಲಿ ಆತ್ಮಬೋಧ ಮೂಡಿಸುವ ನಿಟ್ಟಿನಲ್ಲಿಯೇ ಕಾರ್ಯಮಾಡುವ ಬರಹಗಳೇ ಆಗಿವೆ.
ಓದುಗರು ಈ ಎಲ್ಲ ಪತ್ರಗಳನ್ನು ಓದಿ ನಂತರ ಅದನ್ನು ಚಿಂತನ ಮಾಡುವದೂ ಯೋಗ್ಯವೆಂದು ನಮಗನಿಸುತ್ತದೆ. ಸಿದ್ಧಪುರುಷರು ಮಾನವೀ ಜೀವಿಗಳ ಸಮಸ್ಯೆಗಳ ಸಮಾಧಾನಕ್ಕೆ ಅತಿಸೂಕ್ಷ್ಮ ದೃಷ್ಟಿಯಿಂದ ಬರೆದ ಸುಬೋಧಯುಕ್ತ ವಚನಗಳು ಅವರ ಸ್ವಾನುಭವಯುಕ್ತವಾಗಿರುವದರಿಂದ ಓದುಗರ ಜೀವನ ಪರಿವರ್ತನೆಯ ಶಕ್ತಿಯನ್ನು ಹೊಂದಿರುವದರಲ್ಲಿ ಅನುಮಾನವಿಲ್ಲ.
( ಈ ಮೇಲಿನ ಬರಹ ಪ|ಪ|ಭಗವಾನ ಶ್ರೀಧರ ಸ್ವಾಮಿ ಮಹಾರಾಜ ಲಿಖಿತ ‘ಶತಪತ್ರೆ’ಯ ಪ್ರಕಾಶಕರ ನಿವೇದನೆಯಿಂದ ಆಯ್ದ ಕೆಲ ಮಾತುಗಳು.)
ಸೌ|ರಾಧಾ ಪೈಯವರಿಗೆ ಬರೆದ ಪತ್ರಗಳು
ಈ ಪತ್ರಗಳಲ್ಲಿ, ಪಾರಮಾರ್ಥಿಕದೆಡೆ ಒಲವು ತಮ್ಮ ಕಿಶೋರಾವಸ್ಥೆಯಲ್ಲೇ ತೋರಿದ ಸೌ. ರಾಧಾ ಪೈಯವರಿಗೆ ಅವರ ಕಿಶೋರಾವಸ್ಥೆಯಿಂದ, ನಂತರ ಲಗ್ನವಾಗಿ ಸಂಸಾರ ಬಂಧನದಲ್ಲಿ ಬಿದ್ದ ಮೇಲಿನವರೆಗೂ ಬರೆದ ಸ್ವಾಮಿಗಳ ಪತ್ರಸರಣಿಗಳಲ್ಲಿ, ಪ್ರತಿಯೊಬ್ಬ ಸಾಮಾನ್ಯ ಮನುಷ್ಯನ ಜೀವನ ಯಾತ್ರೆಯಲ್ಲಿನ ವಿರೋಧಾಭಾಸಗಳ, ಮನಸ್ಸು- ದೇಹ – ವಿಧಿಲಿಖಿತಗಳ ಜೀವನನಾಟಕದ ರೂಪಕವನ್ನೇ ನೋಡುವಂತಿದೆ.
೧. ‘ಇದರಲ್ಲಿ ನಿನ್ನ ಬಹಳಿಷ್ಟು ಪ್ರಶ್ನೆಗಳಿಗೆ ಉತ್ತರ ಸಿಗಬಹುದು!’
(ಇಸವಿ ಸನ ೧೯೪೩-೪೪ರ ಸುಮಾರಿಗೆ ಕು. ರಾಧಾಳು ತನ್ನ ಕಿಶೋರಾವಸ್ಥೆಯಲ್ಲಿ ಸ್ವಾಮಿಗಳಿಗೆ ಬರೆದ ಪತ್ರಕ್ಕೆ ಸ್ವಾಮಿಗಳ ಉತ್ತರದ ಮೊದಲ ಭಾಗ)
ಕಾಸರಗೋಡ
ಚಿ. ರಾಧೆಗೆ ಆಶೀರ್ವಾದ
ಶ್ರೀರಾಮನವಮಿ ಇಲ್ಲೇ ಆಯಿತು. ಭಕ್ತಿಮಾರ್ಗದ ಮೇಲೆ ಮೂರು ದಿನ ವ್ಯಾಖ್ಯಾನವಾಗಿ, ಶ್ರೀರಾಮನವಮಿಯ ದಿನ ‘ರಾಮಾವತಾರದ ವೈಶಿಷ್ಟ್ಯ’ ಎಂಬ ವಿಷಯದ ಮೇಲೆ ವ್ಯಾಖ್ಯಾನವಾಯಿತು. ೧.ಶ್ರೀ ಸಮರ್ಥರ ಅವತಾರ ಕಾರ್ಯ ೨. ಆರ್ಯ ೩. ನಾನು ಯಾರು ಅಥವಾ ನಾನು ಅಂದರೆ ಏನು? ೪.ಮಾರುತಿಯ ಮಹತ್ವ ೫. ತರುಣರ ಕರ್ತವ್ಯ – ಈ ರೀತಿ ವ್ಯಾಖ್ಯಾನಗಳು ನಿಶ್ಚಿತವಾಗಿದ್ದರಿಂದ ಸೋಮವಾರದವರೆಗೆ ಎಲ್ಲೂ ಹೋಗಲಿಕ್ಕೆ ಆಗುವಂತಿಲ್ಲ. ನಂತರ ರಾಮೇಶ್ವರಕ್ಕೆ ಹೋಗಿಬರಬೇಕೆಂದಿದೆ. ಅಲ್ಲಿ ಹತ್ತು-ಹದಿನೈದು ದಿನಗಳಾದರೂ ಕಳೆಯಬೇಕಾಗುತ್ತದೆ.
ನಾನಿಲ್ಲಿಗೆ ಬಂದ ಸ್ಮರಣೆ ಯಾವಾಗಲೂ ಇರಬೇಕೆಂದು ಒಬ್ಬನು ೧೦೦೫ ರೂಪಾಯಿ ಪ್ರತಿವರ್ಷ ಶ್ರೀರಾಮನವಮಿಯ ಉತ್ಸವ ನಡೆಸಲಿಕ್ಕೆ ಕೊಟ್ಟನು. ಆ ಹಣದ ಬಡ್ಡಿಯಿಂದ ಕಾಸರಗೋಡಿನ ವೆಂಕಟರಮಣ ದೇವಸ್ಥಾನ ಸಮಿತಿಯವರು ಪ್ರತಿವರ್ಷ ಉತ್ಸವ ನಡೆಸುವರೆಂದು ನಿರ್ಣಯಿಸಲಾಗಿದೆ. ಕಡಿಮೆ ಬಿದ್ದ ಹಣವನ್ನು ವರ್ಗಣಿಯ ಮೂಲಕ ಪೂರ್ಣಗೊಳಿಸಿ ನಿಮ್ಮ ನೆನಪಿಗೆಂದು ನಾವೆಲ್ಲ ಕೂಡಿ ಪ್ರತಿವರ್ಷ ಈ ಉತ್ಸವ ದೊಡ್ಡ ಉತ್ಸಾಹದಿಂದ ಮಾಡುತ್ತೇವೆ, ಎಂದು ಸಮಿತಿಯವರು ಆಶ್ವಾಸನಕೊಟ್ಟಿದ್ದಾರೆ. ಹನುಮಂತ ಜಯಂತಿಯೂ ಬಹಳಿಷ್ಟು ವರ್ಷಗಳಿಂದ ನಡೆಯುತ್ತಿಲ್ಲ. ಅದನ್ನು ಈ ಸುಸಂದರ್ಭದಲ್ಲೇ ಪುನಃ ಪ್ರಾರಂಭಿಸಬೇಕೆಂದು ನನ್ನನ್ನು ಸಮಿತಿಯವರು ಆಗ್ರಹದಿಂದ ಇಲ್ಲೇ ಉಳಿಸಿಕೊಂಡಿದ್ದಾರೆ.
ನಿನ್ನ ಪತ್ರ ನನಗೆ ಮಂಗಳೂರಲ್ಲೇ ಸಿಕ್ಕಿತ್ತು. ವೇಳೆ ಮಾಡಿಕೊಂಡು ಸಾವಕಾಶ ಓದಿ ಉತ್ತರ ಬರೆಯಬೇಕೆಂದಿದ್ದೆ. ಆದರೆ ಆ ಪತ್ರ ಕಾಸರಗೋಡಿಗೆ ತರಲು ಮರೆತುಬಿಟ್ಟೆ. ನಿನಗೆ ಪತ್ರ ಬರೆಯಬೇಕೆಂದು ಇಂದು ಚಿ.ವಿಠ್ಠಲನು ಆಗ್ರಹ ಮಾಡಿದನು. ನಿನ್ನ ಪ್ರಶ್ನೆಯೇನಿತ್ತು ಎಂದು ಆತನಿಗೆ ಸರಿಯಾಗಿ ಹೇಳಲಿಕ್ಕೆ ಆಗಲಿಲ್ಲ. ಆದರೂ ಒಟ್ಟಿನ ಮೇಲೆ ನಿನಗೆ ಸಮಾಧಾನವಾಗುವಂತೆ ಕೆಲ ವಿಷಯಗಳನ್ನು ಬರೆಯುತ್ತೇನೆ. ಇದರಲ್ಲಿ ನಿನ್ನ ಬಹಳಿಷ್ಟು ಪ್ರಶ್ನೆಗಳ ಉತ್ತರ ಸಿಕ್ಕೇ ಸಿಗುತ್ತವೆ!
ಮುಂದುವರಿಯುವದು……..