7

 

ನಡುಗನ್ನಡದ ಕಾವ್ಯಗಳಲ್ಲಿ ವಿಶಿಷ್ಟವಾಗಿರುವುದು ಜೈಮಿನಿಭಾರತ. ಮಹಾಭಾರತದ ಆಶ್ವಮೇಧಿಕಪರ್ವವನ್ನು ವಿಸ್ತರಿಸಿ ಜೈಮಿನಿಮಹರ್ಷಿಗಳು ಸಂಸ್ಕೃತದಲ್ಲಿ ಬರೆದ ಕೃತಿಯನ್ನು ಆಧರಿಸಿ ಕನ್ನಡದಲ್ಲಿ ಲಕ್ಷ್ಮೀಶಕವಿ ಬರೆದ ಕಾವ್ಯವೇ ಜೈಮಿನಿ ಭಾರತ. ಲಕ್ಷ್ಮೀಶನ ಊರು ದೇವಪುರ. ಕುಮಾರವ್ಯಾಸ “ವೀರನಾರಾಯಣನೆ ಕವಿ ಲಿಪಿಕರ ಕುವರವ್ಯಾಸ” ಎಂದು ಹೇಳಿದಂತೆ ಲಕ್ಷ್ಮೀಶ ಹೇಳುತ್ತಾನೆ-
ಜಾಣರಂ ತಲೆದೂಗಿಸದೆ ನುಡಿದೊಡಾಪದಕ್ಕೂಣೆಯಂ ಬಹುದೆಂದು ಸರಸೋಕ್ತಿಯಿಂದೆ ಗೀ-
ರ್ವಾಣಪುರನಿಲಯ ಲಕ್ಷ್ಮೀವರಂ ತಾನೆ ಸಂಗೀತಸುಕಲಾನಿಪುಣನು
ವೀಣೆಯಿಂ ಗಾನಮಂ ನುಡಿಸುವಂದದೊಳೆನ್ನ ವಾಣಿಯಿಂ ಕವಿತೆಯಂ ಪೇಳಿಸಿದನೆಂದರಿದು
ಕೇಣಮಂ ತೊರೆದು ಪುರುಡಿಸುವರಂ ಜರೆದು ಕಿವಿದೆರೆದು ಕೇಳ್ವುದು ಸುಜನರು ||
ಎಂದು ದೇವಪುರದ ಲಕ್ಷ್ಮೀರಮಣನೇ ತನ್ನ ನುಡಿಯ ಮೂಲಕ ಈ ಕಾವ್ಯವನ್ನು ಹೇಳಿಸಿದ್ದೆಂದು ಹೇಳುತ್ತಾನೆ. ಹಾಗೆಯೇ ತನ್ನ ಬಲ್ಮೆಯನ್ನು ಹೇಳಿಕೊಳ್ಳುತ್ತಾ “ಕವಿಚೂತವನಚೈತ್ರ” ಎಂದು ಹೇಳಿಕೊಳ್ಳುತ್ತಾನೆ. ಕವಿಗಳೆಂಬ ಮಾವಿನ ತೋಟಕ್ಕೆ ಸುಗ್ಗಿಯೇ ತಾನಾಗಿರುವೆ ಎಂಬ ಹೆಮ್ಮೆಯೂ ಆತನಿಗಿದೆ. ಹಾಲನ್ನು ಕಡೆದು ಬೆಣ್ಣೆಯನ್ನು ತೆಗೆದು ಬಾಯಿಗೆ ಸವಿಯನ್ನು ಹೊಂದದೇ ಅದಕ್ಕೆ ಹುಳಿ ಹಿಂಡಿದರೆ ಹಸುವಿಗೆ ಕೊರತೆಯಾಗುವುದೇ! ಹಾಗೆಯೇ ತನ್ನ ಕಾವ್ಯವನ್ನು ತಿಳಿದು ನೋಡದೇ ಹೊಸದಾದ ಕಾವ್ಯ ಎಂದು ಕುಂದಿಟ್ಟು ಜರೆದರೆ ಊನವಾಗುವುದು ಯಾವುದೂ ಇಲ್ಲ! ಜಾಣರಾದವರು ಇದನ್ನು ತಿಳಿದುಕೊಂಡು ಮತ್ಸರವನ್ನು ಬಿಟ್ಟು ಆಲಿಸಬೇಕು! ಎಂದು ಪೀಠಿಕೆಯಲ್ಲಿ ಹೇಳುತ್ತಾನೆ.
ಜೈಮಿನಿಭಾರತದ ಪದ್ಯಗಳ ಸ್ವಾರಸ್ಯಗಳಲ್ಲಿ ಕೆಲವನ್ನು ನೋಡಿದರೆ ಲಕ್ಷ್ಮೀಶನ ಪದ್ಯಗಳ ಮಾರ್ಗ ಯಾವ ಕಡೆಗೆ ಸಾಗುತ್ತದೆ ಎಂದು ತಿಳಿಯುತ್ತದೆ. ಕವಿಯ ಸ್ವಭಾವವನ್ನು ಅರಿತುಕೊಂಡ ಬಳಿಕ ಆತನ ಕವಿತೆಗಳು ನಮಗೆ ಬೇಗ ಆಪ್ತವಾಗುತ್ತ ಹೋಗುತ್ತವೆ. ಲಕ್ಷ್ಮೀಶನ ಕವಿತೆ ಅರ್ಥವಾಗುವುದು ಸ್ವಲ್ಪ ಮಟ್ಟಿಗೆ ಕಷ್ಟವೇ ಹೌದು! ಆದರೆ ಹಲವಾರು ಸ್ವಾರಸ್ಯಗಳನ್ನು ಒಳಗೊಂಡಿರುವುದಂತೂ ದಿಟ!
ಲಕ್ಷ್ಮೀಶನ ಕಾವ್ಯದಲ್ಲಿ ಶ್ಲೇಷಮೂಲದ ಅಲಂಕಾರಗಳನ್ನು ಬಹಳ ಬಳಸುತ್ತಾನೆ. ಶ್ಲೇಷವೆಂದರೆ ಎರಡೆರಡು ಅರ್ಥಗಳನ್ನು ಹೊಂದುವಂತೆ ಮಾಡುವುದು. ಶ್ಲೇಷವನ್ನು ಆಧರಿಸಿಯೇ ಪರಿಸಂಖ್ಯಾ, ವಿರೋಧಾಭಾಸವೇ ಮೊದಲಾದ ಅಲಂಕಾರಗಳು ಹುಟ್ಟಿಕೊಳ್ಳುತ್ತವೆ. ಇದರಲ್ಲಿ ಸಭಂಗಶ್ಲೇಷ ಹಾಗೂ ಅಭಂಗಶ್ಲೇಷ ಎಂದು ಎರಡು ವಿಧ. ಸಭಂಗವೆಂದರೆ ಒಂದು ಶಬ್ದವನ್ನು ಒಡೆದು ಎರಡು ಅರ್ಥವನ್ನು ಹುಟ್ಟಿಸುವುದು. ಇದಕ್ಕೆ ಉದಾಹರಣೆಯೆಂದರೆ-(ನನ್ನ ಅವಧಾನವೊಂದರಲ್ಲಿ ಹೇಳಿದ ಪದ್ಯದಲ್ಲಿ ಬಳಸಿದ್ದು) ದ್ರೌಪದಿಯ ಮಾನಭಂಗಕ್ಕೆ ಪ್ರಯತ್ನಿಸಿದ್ದು ಅವಳಿಗೆ ಪರಮತಾಪದವಾಯ್ತು. ಇಲ್ಲಿ “ಪರಮತಾಪದ” ಎಂಬ ಶಬ್ದಕ್ಕೆ ಎರಡು ಅರ್ಥಗಳು ಹೊಮ್ಮುತ್ತದೆ. “ಪರಮ+ತಾಪದ” ಎಂದರೆ ಅತಿಯಾದ ತಾಪವನ್ನು ಕೊಡುವುದು, “ಪರಮತಾ+ಪದ” ಪರಮಪದವನ್ನು ತೋರಿಸುವಂತಾಯ್ತು! ಹೀಗೆ ಶಬ್ದವನ್ನು ವಿಭಜಿಸುವುದರಿಂದ ಎರಡು ಅರ್ಥಗಳನ್ನು ಹೊರಡಿಸುವುದು ಸಭಂಗಶ್ಲೇಷವಾಗುತ್ತದೆ. ಅಭಂಗ ಶ್ಲೇಷವೆಂದರೆ ಶಬ್ದವನ್ನು ಒಡೆಯದೇ ಎರಡು ಅರ್ಥಗಳನ್ನು ಹೊಮ್ಮಿಸುವುದು. ಅದಕ್ಕೆ ಉದಾಹರಣೆಯೆಂದರೆ- ಕಾಡಿಗೆ ಹೋಗುವುದಿಲ್ಲ- ಅರಣ್ಯಕ್ಕೆ ಹೋಗುವುದಿಲ್ಲ ಎಂಬ ಅರ್ಥವೂ ಆಗುತ್ತದೆ, ಹಾಗೆಯೇ ಕಣ್ಣಿಗೆ ಹಚ್ಚಿಕೊಂಡ ಕಾಡಿಗೆ ಅಳಿಸಿ ಹೋಗುವುದಿಲ್ಲ ಎಂಬ ಅರ್ಥವೂ ಆಗುತ್ತದೆ. ಇಂತಹ ಎರಡು ಅರ್ಥಗಳು ಹುಟ್ಟುವ ವಾಕ್ಯಗಳಿಂದಲೇ ಬೇರೆ ಬೇರೆಯ ಚಮತ್ಕಾರಗಳನ್ನು ಮಾಡುವುದು ಲಕ್ಷ್ಮೀಶನ ವೈಶಿಷ್ಟ್ಯ. ಇದರಲ್ಲಿ ಶ್ಲೇಷದ ಅರ್ಥವನ್ನಿಟ್ಟುಕೊಂಡು ಎರಡು ಬೇರೆ ಬೇರೆ ವಸ್ತುಗಳನ್ನು ಹೋಲಿಸುವುದು ಪರಿಸಂಖ್ಯಾಲಂಕಾರವಾಗುತ್ತದೆ, ಹಾಗೆಯೇ ವಾಕ್ಯದಲ್ಲಿ ವಿರೋಧಾರ್ಥ ಹೊಮ್ಮುವಂತೆ ಅನಿಸಿದರೆ ವಿರೋಧಾಭಾಸವಾಗುತ್ತದೆ.
ಕಥೆಯನ್ನು ಪ್ರಾರಂಭಿಸುತ್ತಾ ಯುಧಿಷ್ಠಿರನು ಆಶ್ವಮೇಧವನ್ನು ಮಾಡಬೇಕೆಂದು ವ್ಯಾಸರ ಅಭಿಮತದಂತೆ ಕುದುರೆಯನ್ನು ಹುಡುಕಲು ಭೀಮನನ್ನು ಕಳುಹಿಸುತ್ತಾನೆ. ಆ ಸಂದರ್ಭದಲ್ಲಿ ಯುಧಿಷ್ಠಿರನ ರಾಜ್ಯವನ್ನು ವರ್ಣಿಸುತ್ತಾ ಈ ಕೆಲವು ಪದ್ಯಗಳನ್ನು ಹೇಳುತ್ತಾನೆ.
ಕೊಡೆಯೆಂಬರಾತಪತ್ರವನುದರದೇಶಮಂ
ಪೊಡೆಯೆಂಬರೊಲಿದು ಮಂಥನವನೆಸಗೆಂಬುದಂ
ಕಡೆಯೆಂಬರಾರಡಿಯನಳಿಯೆಂಬರುದಕಪ್ರವಾಹಮಂ ತೊರೆಯೆಂಬರು
ಮಡಿಯೆಂಬರಂಬರದ ಧೌತಮಂ ಕಬರಿಯಂ
ಮುಡಿಯೆಂಬರೆಡೆವಿಡದೆ ಮುಸುಕಿರ್ದ ಮೇಘಮಂ
ಜಡಿಯೆಂಬರುರುಶಿಲೆಯನರೆಯೆಂಬರಲ್ಲದಿವ ನುಡಿಯರವನಾಳ್ವಿಳೆಯೊಳು|| (೨-೯)
ಅವನು ಆಳುವ ಇಳೆಯಲ್ಲಿ ಆತಪತ್ರವನ್ನು “ಕೊಡೆ” ಎಂಬರು- ಛತ್ರಿಗೆ ಮಾತ್ರ “ಕೊಡೆ ” ಎಂದು ಹೇಳುತ್ತಿದ್ದರು. ಕೊಡುವುದಿಲ್ಲ ಎಂಬ ಅರ್ಥದಲ್ಲಿ “ಕೊಡೆ” ಎಂದು ಬಳಸುತ್ತಿರಲಿಲ್ಲ. ಹೊಟ್ಟೆಯನ್ನು “ಪೊಡೆ” ಎನ್ನುತ್ತಿದ್ದರು. ಹೊಡೆಯುವುದು ಎನ್ನುವ ಅರ್ಥದಲ್ಲಿ “ಪೊಡೆ” ಎಂದು ಹೇಳುತ್ತಿರಲಿಲ್ಲ. ಮಂಥನವನ್ನು ಮಾಡು ಎಂಬರ್ಥದಲ್ಲಿ “ಕಡೆ” ಎಂಬ ಶಬ್ದವನ್ನು ಬಳಸುತ್ತಿದ್ದರೇ ಹೊರತು “ಬೀಳು” ಎಂಬರ್ಥದಲ್ಲಿ ಅಲ್ಲ. ದುಂಬಿಗಳಿಗೆ “ಅಳಿ” ಎನ್ನುತ್ತಿದ್ದರೇ ಹೊರತು “ಸಾಯಿ” ಎಂಬರ್ಥದಲ್ಲಿ ಹೇಳುತ್ತಿರಲಿಲ್ಲ. ನೀರಿನ ಹರಿವನ್ನು “ತೊರೆ” ಎನ್ನುತ್ತಿದ್ದರೇ ಹೊರತು “ಬಿಟ್ಟು ಹೋಗು” ಎಂಬರ್ಥದಲ್ಲಿ ಅಲ್ಲ. “ಮಡಿ” ಎಂಬುದನ್ನು ಕೂಡ “ಸಾಯುವುದು” ಎಂಬರ್ಥದಲ್ಲಿ ಅಲ್ಲದೇ “ತೊಳೆದ ವಸ್ತ್ರ” ಎಂಬರ್ಥದಲ್ಲಿ ಕೂದಲನ್ನು ಮಾತ್ರ “ಮುಡಿ” ಎನ್ನುತ್ತಿದ್ದರೇ ಹೊರತು “ಸಾಯು/ಕೊನೆಯಾಗು” ಎಂಬರ್ಥದಲ್ಲಲ್ಲ. ಹಾಗೆಯೇ ಮೋಡಮುಸುಕಿದ್ದರೆ “ಜಡಿ” ಎನ್ನುತ್ತಿದ್ದರೇ ಹೊರತು “ಹೊಡೆಯುವುದು” ಎಂಬರ್ಥದಲ್ಲಿ ಅಲ್ಲ. “ಅರೆ” ಎಂದು ಕಲ್ಲಿಗೆ ಹೇಳುತ್ತಿದ್ದರೇ ಹೊರತು ಪುಡಿ ಮಾಡು ಎಂಬರ್ಥದಲ್ಲಿ ಅಲ್ಲ. ಎಂದು ಹೇಳುತ್ತಾನೆ. ಅಂದರೆ ಈ ಶಬ್ದಗಳ ಒಳ್ಳೆಯ ಅರ್ಥಗಳನ್ನು ಮಾತ್ರ ಬಳಸುತ್ತಿದ್ದರೇ ಹೊರತು ಕೆಟ್ಟ ಪರಿಣಾಮವನ್ನು ಬೀರುವ ಅರ್ಥಗಳನ್ನು ಬಳಸುತ್ತಿರಲಿಲ್ಲ ಎಂಬುದು ಈ ಪದ್ಯದ ತಾತ್ಪರ್ಯ. ಆದರೆ ಧರ್ಮರಾಜನ ರಾಜ್ಯದಲ್ಲಿ ಯಾಕೆ ಕನ್ನಡವನ್ನು ಮಾತನಾಡುತ್ತಿದ್ದರೆಂದು ಯಾರಾದರೂ ಆಕ್ಷೇಪಿಸಬಹುದು! ಇಲ್ಲಿ ಚಮತ್ಕಾರಯುತವಾಗಿ ಕವಿ ಈ ಶಬ್ದಗಳನ್ನು ಬಳಸುತ್ತಿರುವುದುನ್ನು ನೋಡಬಹುದೇ ಹೊರತು ಪಾಂಡವರ ಕಾಲದಲ್ಲಿ ಕನ್ನಡವಿತ್ತೇ ಅವರ ಆಡುನುಡಿ ಆಗಿತ್ತೇ ಇತ್ಯಾದಿ ಚರ್ಚೆಯನ್ನು ಮಾಡುವುದಲ್ಲ!
ಇಂತಹದೇ ಇನ್ನೊಂದು ಶ್ಲೇಷಾತ್ಮಕವಾದ ಪದ್ಯ-
ಹರಿಯಂತೆ ಬಲಯುತಂ ಶಿವನಂತೆ ರಾಜಶೇ-
ಖರನಬ್ಜಭವನಂತೆ ಚತುರಾನನಂ ಸರಿ-
ದ್ವರನಂತೆ ರತ್ನಾಕರಂ ದಿವಾಕರನಂತೆ ನಿರ್ದೋಷನಿಂದ್ರನಂತೆ
ಪರಿಚಿತಸುರಭಿರಮ್ಯನಮೃತಾರ್ಚಿಯಂತೆ ವಿ-
ಸ್ತರಿತಕುವಲಯನೆಂದು ಧರ್ಮಜನ ಧರೆ ಪೊಗಳು
ತಿರೆ ಬಳಿಕ ಹಸ್ತಿನಾವತಿಗೆ ವೇದವ್ಯಾಸ ಮುನಿಯೊಂದಿನಂ ಬಂದನು|| (೨-೧೩)
ಧರ್ಮಜ ಹರಿಯಂತೆ ಬಲಯುತವಾಗಿದ್ದ. ಹರಿ ಶ್ರೀಕೃಷ್ಣ- ಬಲರಾಮನಿಂದ ಕೂಡಿರುತ್ತಾನೆ. ಧರ್ಮಜನಿಗೆ ಸೈನ್ಯದ ಬಲ ಇರುತ್ತದೆ- ಹೀಗೆ “ಬಲಯುತಂ” ಎಂಬ ಶ್ಲೇಷಾತ್ಮಕ ಶಬ್ದದಿಂದ ಹರಿಗೂ ಧರ್ಮಜನಿಗೂ ಸಾಮ್ಯ. ಶಿವನಂತೆ ರಾಜಶೇಖರ (ಶಿವ- ರಾಜ ಎಂದರೆ ಚಂದ್ರನನ್ನು ತಲೆಯಲ್ಲಿ ಶೇಖರಿಸಿಕೊಂಡವನು, ಧರ್ಮಜ- ಹಲವು ಸಾಮಂತ ರಾಜರಿಂದ ಕೂಡಿರುವುದು) ಬ್ರಹ್ಮನಂತೆ ಚತುರಾನನ(ನಾಲ್ಕು ಮುಖವುಳ್ಳವನು, ಚತುರತೆಯ ಮುಖವುಳ್ಳವನು) ಸಮುದ್ರದಂತೆ ರತ್ನಾಕರ (ರತ್ನಗಳಿಂದ ಕೂಡಿರುವುದು) ಸೂರ್ಯನಂತೆ ನಿರ್ದೋಷ(ರಾತ್ರಿಯಿಲ್ಲದ, ದೋಷವಿಲ್ಲದವನು) ಇಂದ್ರನಂತೆ ಪರಿಚಿತಸುರಭಿರಮ್ಯ(ಸುರಭಿ ಎಂಬ ಗೋವು ಪರಿಚಿತವಾಗಿ ರಮ್ಯವಾಗಿರುವುದು, ಪರಿಚಿತವಾದ ಸುರಭಿಯಿಂದ ಕೂಡಿ ರಮ್ಯವಾಗಿರುವುದು)ಚಂದ್ರನಂತೆ ವಿಸ್ತರಿತಕುವಲಯ (ಕುಮುದಗಳನ್ನು ಅರಳಿಸಿದ್ದು, ಕುವಲಯ-ಭೂವಲಯವನ್ನು ವಿಸ್ತರಿಸಿದ್ದು) ಹೀಗೆ ಧರ್ಮಜನಿದ್ದಾನೆ ಎಂದು ಜನರೆಲ್ಲ ಹೊಗಳುತ್ತಿದ್ದಾಗ ಮುನಿ ವೇದವ್ಯಾಸನು ಅಲ್ಲಿಗೆ ಬಂದನು.
ಇಂತಹ ಪದ್ಯಗಳಲ್ಲದೇ ಶಬ್ದಚಮತ್ಕಾರದ ಪದ್ಯಗಳನ್ನೂ ಅಸಂಖ್ಯವಾಗಿ ಬರೆಯುತ್ತಾನೆ ಲಕ್ಷ್ಮೀಶ. ಅಂತಹ ಪದ್ಯಕ್ಕೊಂದು ಉದಾಹರಣೆ ಅದೇ ಸಂಧಿಯಿಂದ-
ನಾಗೇಂದ್ರನಂ ಬಿಡದೆ ತಲೆವಾಗಿಸಿತ್ತಮರ-
ನಾಗೇಂದ್ರನಂ ಬುದ್ಧಿದೊರೆಸಿತ್ತು ಪುರಮರ್ದ-
ನಾಗೇಂದ್ರನಂ ನಿಂದು ಬೆರಗಾಗಿಸಿತ್ತಮಲ ಧರ್ಮಜನ ಕೀರ್ತಿ ಬಳಿಕ
ನಾಗೇಂದ್ರಶಯನಾಲಯವ ಜಡಧಿಯೆನಿಸಿ ನುತ
ನಾಗೇಂದ್ರವರದಾಯುಧವ ಪೊಳ್ಳುಗಳೆದು ಮಥ-
ನಾಗೇಂದ್ರಧರನ ಜಾತೆಯ ನಿಲುವುಗೆಡಿಸಿ ರಾಜಿಸಿತು ಮೂಜಗದೊಳು|| (೩-೧೨)
ಧರ್ಮರಾಜನ ಅಮಲವಾದ ಕೀರ್ತಿ ನಾಗೇಂದ್ರನನ್ನು ತಲೆಬಾಗಿಸಿತ್ತು (ಆದಿಶೇಷ ಎಂಬ ಸರ್ಪರಾಜ ಸಂಪೂರ್ಣವಾಗಿ ಬಿಳಿಯ ಬಣ್ಣದಲ್ಲಿರುತ್ತಾನೆ. ಕೀರ್ತಿ ಬೆಳ್ಳಗಿದೆ ಎಂಬುದು ಕವಿ ಸಮಯ. ಹಾಗಾಗಿ ಧರ್ಮರಾಜನ ಕೀರ್ತಿ ಆ ನಾಗೇಂದ್ರನನ್ನೂ ತಲೆಬಾಗಿಸಿತ್ತು.) ಐರಾವತವೂ(ಅಮರನಾಗೇಂದ್ರ-ಅಮರ- ದೇವತೆಗಳ, ನಾಗ- ಆನೆಗಳ ಇಂದ್ರ- ಒಡೆಯ) ಕೂಡ ಬೆಳ್ಳಗಿರುತ್ತದೆ. ಧರ್ಮಜನ ಕೀರ್ತಿ ಅದನ್ನೂ ಕಡಿಮೆ ಮಾಡಿತ್ತು. ಶಿವನನ್ನೂ ಬೆರಗಾಗುವಂತೆ ಮಾಡಿತ್ತು (ಪುರಮರ್ದನ+ಅಗೇಂದ್ರ ಎಂದರೆ ತ್ರಿಪುರವನ್ನು ಸುಟ್ಟ ಸ್ಥಾಣುಗಳ ಒಡೆಯನಾದ ಕಾರಣ ಶಿವ) ನಾಗೇಂದ್ರಶಯನ-ವಿಷ್ಣು, ಅವನ ಆಲಯ- ಸಮುದ್ರ. ಧರ್ಮರಾಜನ ಕೀರ್ತಿ ಅದನ್ನು ಜಡಧಿಯೆನಿಸಿತ್ತು (ಜಡಧಿ ಎಂದರೆ ಸಮುದ್ರ ಎಂಬ ಅರ್ಥದ ಜೊತೆ ಜಡವಾದವುಗಳ ನಿಧಿ ಎಂಬ ಅರ್ಥವೂ ಇದೆ.) ಸುದರ್ಶನವನ್ನೂ (ನಾಗೇಂದ್ರವರದಾಯುಧ- ನಾಗೇಂದ್ರ-ಗಜೇಂದ್ರನಿಗೆ ವರವನ್ನು ಕೊಟ್ಟವನು ವಿಷ್ಣು, ಅವನ ಆಯುಧ-ಸುದರ್ಶನ) ಪೊಳ್ಳಾಗಿಸಿತ್ತು. ಹಾಗೆಯೇ ಮಥನಾಗೇಂದ್ರಧರನ ಜಾತೆಯ (ಮಥನ- ಸಮುದ್ರಮಥನದಲ್ಲಿ ಅಗೇಂದ್ರ- ಪರ್ವತ-ಮಂದರಪರ್ವತವನ್ನು ಧರನ-ಹಿಡಿದಿದ್ದ ಸಮುದ್ರದ ಜಾತೆ- ಪುತ್ರಿ ಎಂದರೆ ಲಕ್ಷ್ಮಿ) ನಿಲುವನ್ನೂ ಕೆಡಿಸಿತ್ತು. ಇಲ್ಲಿ ನಾಗೇಂದ್ರ ಎಂದು ಪ್ರತಿ ಪಾದದ ಆದಿಯಲ್ಲೂ ಬಂದಿದೆ. ಇದನ್ನು ಯಮಕಾಲಂಕಾರವೆನ್ನುತ್ತಾರೆ.
ಅಂತಹದೇ ಇನ್ನೊಂದು ಉದಾಹರಣೆ-ಇಲ್ಲಿ ಪ್ರತಿಪಾದದ ಆದಿಯಲ್ಲಿ “ಕಾಯದು” ಎಂಬ ಶಬ್ದವನ್ನು ಗಮನಿಸಬಹುದು-
ಕಾಯದುಪಭೋಗ ಸಿರಿಯಂ ಬಯಸಿ ಸುಗತಿಯ
ಕಾಯದುರುತರ ವೈರದಿಂದಖಿಳಬಾಂಧವ ನಿ-
ಕಾಯದುಪಹತಿಯನೆಸಗಿದ ಪಾತಕದ್ರುಮಂ ವಿಷಮಾಗಿ ತನಗೆ ಮುಂದೆ
ಕಾಯದುಳಿಯದು ಮಹಿಯನಿನ್ನಾಳ್ದೊಡಂ ಜಸಂ
ಕಾಯದುರೆ ಮಾಣದದರಿಂದರಸುತನವೆ ಸಾ
ಕಾ ಯದುಕುಲೇಂದ್ರನಂ ಭಜಿಸುವೆಂ ಚಿತ್ತಶುದ್ಧಿಯೊಳರಣ್ಯದೊಳೆಂದನು|| (೨-೧೯)
ದೇಹದ(ಕಾಯ) ಉಪಭೋಗದ ಸಂಪತ್ತನ್ನು ಬಯಸಿ ಸುಗತಿಯನ್ನು ಕಾಯದ(ಉಳಿಸಿಕೊಳ್ಳದ) ದೊಡ್ಡ ವೈರದಿಂದ ಎಲ್ಲ ಬಾಂಧವರ ಸಮೂಹವನ್ನು (ನಿಕಾಯ) ನಾಶಪಡಿಸಿದ ಪಾತಕದ ಮರ ವಿಷವಾಗಿ ತನಗೆ ಮುಂದೆ ಕಾಯದೇ ಉಳಿಯದು (ಕಾಯುತ್ತ ಇರದೇ ಹೋಗುವುದಿಲ್ಲ) ಈ ಭೂಮಿಯನ್ನು ಇನ್ನು ಆಳಿದರೆ ಯಶಸ್ಸೂ ಕಾಯುವುದಿಲ್ಲ. ಅದರಿಂದ ಇದೆಲ್ಲ ಸಾಕು ಆ ಯದುಕುಲೇಂದ್ರನನ್ನು ನೆನೆಯುತ್ತ ಚಿತ್ತಶುದ್ಧಿಯಿಂದ ತಪಸ್ಸನ್ನು ಮಾಡುವೆ ಎಂದು ಧರ್ಮರಾಜ ಹೇಳುತ್ತಾನೆ.
ಇಂತಹ ಶಬ್ದಚಮತ್ಕಾರಗಳು ಶ್ಲೇಷಗಳೆಲ್ಲ ಅಗಣಿತವಾಗಿ ಬರುತ್ತವೆ ಎಮದ ಮಾತ್ರಕ್ಕೆ ಲಕ್ಷ್ಮೀಶನ ಕಾವ್ಯ ಕೇವಲ ಇಂತಹ ಚಮತ್ಕಾರಗಳಿಗಷ್ಟೇ ಮೀಸಲಾಗಿದೆಯೆಂದೂ ಭಾವಿಸಬೇಕಿಲ್ಲ. ಅಲ್ಲಿ ಕಥೆಗೆ ತಕ್ಕಂತೆ ಸೊಗಸಾದ ವರ್ಣನೆಗಳೂ ಬರುತ್ತವೆ ಭಾವಪೂರಿತವಾದ ಸಾಕಷ್ಟು ಪದ್ಯಗಳೂ ಇವೆ. ಸೀತಾಪರಿತ್ಯಾಗದ ಕಥೆ, ಚಂದ್ರಹಾಸನ ಕಥೆ, ಬಭ್ರುವಾಹನನ ಕಥೆ ಇವೆಲ್ಲ ತುಂಬ ರಸಾರ್ದ್ರವಾಗಿವೆ. ಚಂದ್ರಹಾಸನ ಕಥೆಯ ದುಷ್ಟಬುದ್ಧಿ ಪತ್ರವನ್ನು ಕಳಿಸುವ ಪದ್ಯವಂತೂ ಯಕ್ಷಗಾನಾದಿಗಳಲ್ಲಿ ಯಥಾವತ್ತಾಗಿ ಬಳಸಿಕೊಳ್ಳುತ್ತಾರೆ. “ಶ್ರೀಮತ್ಸಚಿವಶಿರೋಮಣಿ ದುಷ್ಟಬುದ್ಧಿ” ಎಂದು ಹೇಳಿದರೆ ಸಾಕು ಅದು ಯಕ್ಷಗಾನದಲ್ಲಿ ಕೇಳಿದ್ದೇ ನೆನಪಾಗುತ್ತದೆ! ಇವುಗಳಲ್ಲದೇ ಎಷ್ಟೋ ಭಾವಪೂರ್ಣವಾದ ಕಲ್ಪನನಾವೀನ್ಯವಿರುವ ಪದ್ಯಗಳೂ ಇವೆ. ಅಂತಹ ಒಂದು ಚಾಮತ್ಕಾರಿಕ ಕಲ್ಪನೆಯ ಪದ್ಯವನ್ನು ಗಮನಿಸಬಹುದು-
ಕುಸಿದು ಪಾತಾಳದೊಳಗಿರ್ದು ಪಲಕಾಲಮಂ
ದ್ವಿಸಹಸ್ರನಯನಂಗಳಿಂದ ನೋಡಿದೊಡೆ ಕಾ
ಣಿಸಿಕೊಳ್ಳದೀ ಪುರದಗಳ ಘಾತಮಿದನಜಂ ಬಲ್ಲನೋ ಕೇಳ್ವೆನೆಂದು
ಬಿಸಜಸಂಭವನ ಪೊರೆಗೆಂದಿಳೆಯನುಗಿದುಚ್ಚ-
ಳಿಸಿ ಬಳೆದ ಫಣಿಪತಿಯ ಮಣಿವೆಡೆಯ ಸಾಲಿವೆನ-
ಲೆಸೆವುವಾಗಸದೊಳೀ ಪೊಳಲ ಕೋಟೆಯ ರನ್ನದೆನೆಗಳೆಲ್ಲಾ ದೆಸೆಯೊಳು ||(೩-೧೯)
ಹಲವು ಕಾಲದಿಂದ ಪಾತಾಳದೊಳಗೆ ಕುಸಿದು ಕುಳಿತಿದ್ದ ತನಗೆ ಎರಡು ಸಾವಿರ ಕಣ್ಣುಗಳಿಂದ ನೋಡಿದರೂ ಈ ಪಟ್ಟಣದ ಉದ್ದ ಅಗಲ ಕಾಣಿಸಿಕೊಳ್ಳುತ್ತಿಲ್ಲ! ಇದನ್ನು ಬ್ರಹ್ಮನೇನಾದರೂ ಬಲ್ಲನೋ ಕೇಳಿ ನೋಡುತ್ತೇನೆ ಎಂದುಕೊಂಡು ಬಿಸಜಸಂಭವನಾದ ಬ್ರಹ್ಮನನ್ನು ಕಾಣಲೆಂದು ನೆಲದೊಳಗಿನಿಂದ ಉಚ್ಚಳಿಸಿ ಬೆಳೆದ ಸರ್ಪರಾಜನ ಹೆಡೆಯ ಮೇಲಿನ ಮಣಿಗಳ ಸಾಲಿನಂತೆ ಆಗಸದಲ್ಲಿ ಈ ನಗರದ ಕೋಟೆಯ ರತ್ನದ ಮಣಿಗಳು ಎಲ್ಲಾ ದಿಕ್ಕಿನಲ್ಲೂ ಹೊಳೆಯುತ್ತಿದ್ದವು.
ಪಾತಕಿಗಳೊಡಲೊಳಿಹ ಪರಮಾತ್ಮನಂತೆ ಯಮದೂತರೆಳೆತಂದಜಾಮಿಳನಂತೆ ಎಂದೆಲ್ಲ ಹಲವು ಬಗೆಯಲ್ಲಿ ದೃಷ್ಟಾಂತಗಳನ್ನು ಕೊಡುವಂತಹದರ ಜೊತೆಯಲ್ಲಿ ಸಣ್ಣ ಸಣ್ಣದಾದ ವರ್ಣನೆಗಳನ್ನು ಮಾಡುವುದರಲ್ಲಿಯೂ ಈತ ನಿಪುಣ, ಅಚ್ಚಗನ್ನಡದಲ್ಲಿ ಪದ್ಯವನ್ನು ರಚಿಸಬಲ್ಲ, ಸಂಸ್ಕೃತಭೂಯಿಷ್ಠವಾಗಿ ಕೂಡ ಬರೆಯಬಲ್ಲ. ಹದವಾಗಿ ಸಂಸ್ಕೃತಕನ್ನಡಗಳ ಮಿಶ್ರಣದಲ್ಲಿ ಕೂಡ ಬರೆಯಬಲ್ಲ. ವಿಷಯೆಯ ಚಂದ್ರಹಾಸನ ಕಥೆಯಲ್ಲಿ ಶೃಂಗಾರ, ಸೀತಾಪರಿತ್ಯಾಗದಂತಹ ಕಥೆಗಳಲ್ಲಿ ಕರುಣಾ, ಬಭ್ರುವಾಹನನ ಕಥೆಯಲ್ಲಿ ವೀರ ಉತ್ಪಾತಗಳನ್ನು ವರ್ಣಿಸುವಲ್ಲಿ ಭಯಾನಕ, ಬ್ರಹ್ಮರಾಕ್ಷಸರ ಕಥೆಯಲ್ಲಿ ಹಾಸ್ಯಬೀಭತ್ಸಗಳು, ಸುಧನ್ವನ ಕಥೆಯಲ್ಲಿ, ಪ್ರಮೀಳೆಯ ಕತೆಯಲ್ಲಿ ಅದ್ಭುತ, ಮಯೂರಧ್ವಜನ ಕಥೆಯಲ್ಲಿ ರೌದ್ರ, ಬಕದಾಲ್ಭ್ಯನ ಕಥೆಯಲ್ಲಿ ಶಾಂತ- ಹೀಗೆ ನವರಸಗಳೂ ಕೂಡ ಈ ಜೈಮಿನಿಭಾರತದಲ್ಲಿ ಬಂದಿವೆಯೆಂದು ತೋರಿಸಬಹುದು. ಇದಷ್ಟೇ ಅಲ್ಲದೇ ಇನ್ನೂ ಅನೇಕ ಸಂದರ್ಭಗಳಲ್ಲಿ ಬೇರೆ ಬೇರೆ ರಸಪೋಷಕವಾದ ಕಥೆಯಿದೆ ಚಿತ್ರಣವಿದೆ.. ಅಲ್ಲದೇ ಮುಂದಿನ ಹಲವಾರು ಕವಿಗಳಿಗೆ ಸ್ಪೂರ್ತಿಯನ್ನು ಕೊಡುವ ಕಾವ್ಯವೂ ಆಗಿದೆಯೆಂಬುದು ಅತಿಶಯವಲ್ಲ. ಇಂತಹ ಕಾವ್ಯವನ್ನು ಗಮಕಿಗಳು ಹಾಡಿ ಅರ್ಥಯಿಸಿ ಹೇಳಿ ಉಳಿಸಿಕೊಂಡರು, ಸಾಮಾನ್ಯರು ತಮ್ಮ ತಮ್ಮಲ್ಲೇ ಓದಿ ವಿಶ್ಲೇಷಿಸಿ ಚರ್ಚಿಸಿಕೊಂಡು ಉಳಿಸಿಕೊಂಡು ಬಂದರು! ಹಿಂದಿನ ತಲೆಮಾರಿನಲ್ಲಿ ಜೈಮಿನಿಗೆ ಅರ್ಥವನ್ನು ಹೇಳಲು ಬರುತ್ತದೆಯೆಂದಾದರೆ ಸಾಕಷ್ಟು ವಿದ್ಯಾವಂತನಾಗಿದ್ದಾನೆ ಎಂದು ಪ್ರಚಲಿತವಿತ್ತು. ವರಪರೀಕ್ಷೆಯ ಸಂದರ್ಭದಲ್ಲಿ ಜೈಮಿನಿಯ ಪದ್ಯಗಳಿಗೆ ಅರ್ಥವನ್ನು ಹೇಳುವ ಪ್ರಸಂಗಗಳೂ ಇತ್ತಂತೆ! ಇದನ್ನೆಲ್ಲ ಗಮನಿಸಿದರೆ ಕವಿಯೊಬ್ಬನ ಕಾವ್ಯ ಹೇಗೆ ಜನಮಾನಸವನ್ನು ತಲುಪುತ್ತದೆ ಎಂದು ವೇದ್ಯವಾಗುತ್ತದೆ! ಏನೇ ಇರಲಿ ಇಂತಹ ಕಾವ್ಯಗಳು ನಿತ್ಯವೂ ಆಸ್ವಾದನೀಯ ಎಂಬುದಂತೂ ದಿಟ!

RELATED ARTICLES  ಕಳೆದುಹೋದ ಎಳೆಯ ದಿನಗಳು ( ಭಾಗ ೯)