ಯಾವ ಸುಖಕ್ಕೆ ದುಃಖದ ಸ್ಪರ್ಷವಿಲ್ಲವೋ ಅದೇ ಸ್ವರ್ಗ. ಸಂತೋಷದಲ್ಲಿದ್ದಾಗ ದಿನ ಕ್ಷಣವಾಗುತ್ತದೆ. ದುಃಖದಲ್ಲಿದ್ದಾಗ ಕ್ಷಣ ದಿನವಾಗುತ್ತದೆ. ಸಂತೋಷ, ಸುಖ ನಮ್ಮದಾಗಬೇಕೆಂದರೆ ನಾವು ನಮ್ಮ ಮನಸ್ಸನ್ನು ಮಾನಸ ಸರೋವರದಂತೆ ಇಟ್ಟುಕೊಂಡಿರಬೇಕು. ಮಾನಸ ಸರೋವರದಂತೆ ಶುದ್ಧ ಸ್ಪಟಿಕ, ವಿಸ್ತಾರ, ಆಳ, ನಿರ್ಮಲ, ನಿಶ್ಚಲವಾದ ಮನಸ್ಸು ಹೊಂದಿರುವವರ ಸಂಖ್ಯೆ ಹೆಚ್ಚಾದರೆ ರಾಮರಾಜ್ಯದ ಉದಯವಾಗಲು ಸಾಧ್ಯ.
ಬೇಕು ಎನ್ನುವುದರಲ್ಲಿ ದುಃಖವಿದೆ, ಸಾಕು ಎನ್ನುವುದರಲ್ಲಿ ಸುಖವಿದೆ. ಆದರೆ ವಿಪರ್ಯಾಸವೆಂದರೆ ನಮ್ಮ ಜೀವನದಲ್ಲಿ ಬೇಕು ಎನ್ನುವುದು ನಿರಂತರವಾಗಿದೆ. ಸಾಕು ಎನ್ನುವವರೇ ಇಲ್ಲವಾಗಿದೆ. ನಾವು ‘ಬೇಕು’ಗಳ ಬಂಧನದಲ್ಲಿದ್ದು ಒದ್ದಾಡುವುದಕ್ಕಿಂತ ‘ಸಾಕು’ ಎನ್ನುವ ಮೂಲಕ ಸ್ವತಂತ್ರರಾಗುವುದು ಒಳ್ಳೆಯದು. ಜೀವನದಲ್ಲಿ ಬಂದದ್ದನ್ನು ಬಂದಹಾಗೇ ಸಮಾಧಾನದಿಂದ ಸ್ವೀಕರಿಸಿ, ಉದ್ವೇಗಬೇಡ, ಭಾವದಲ್ಲಿ ಅಭಾವ ಬೇಡ, ಕಾಡಿಗೆ ತೆರಳುವಾಗ ಶ್ರೀರಾಮನಲ್ಲಿದ್ದ ಭಾವ ನಿಜಕ್ಕೂ ಕಷ್ಟ ಬಂದಾಗ ನಮ್ಮೆಲ್ಲರಿಗೆ ಮಾರ್ಗದರ್ಶಿ. ಶ್ರೀರಾಮ ಆ ಸಂದರ್ಭದಲ್ಲಿ ಹೇಳಿದ ಮಾತನ್ನೇ ಗಮನಿಸಿ “ಆತ್ಮದುನ್ನತಿಯ ಅರಸಿ ಅಡವಿಗೆ ಹೋಗುತಿಹೆನು ಜಗದೊಳಿತು ಸಾಧಿಸಲು ವಿಧಿ ಒಯ್ಯುತಿಹನು. ಗುರುವಿನಪ್ಪಣೆ ಪೂರ್ಣಗೊಳಿಸಲು ತೆರಳುವೆನು ಕಷ್ಟವನ್ನು ಇಷ್ಟಪಟ್ಟ ರಾಮ, ಕಷ್ಟ ಬರುತ್ತಿರುವುದು ಅದು ಒಳಿತಿಗಾಗಿ ಎಂಬ ಭಾವ ಅವನದಾಗಿತ್ತು. ಹಾಗೆಯೇ ಮುಂದಿನ ಒಳಿತಿನ ನಿರೀಕ್ಷೆಯೊಂದಿಗೆ ಇಂದಿನ ಕೆಡುಕನ್ನು ಎದುರಿಸೋಣ ಜೀವನದಲ್ಲಿ ನೆಮ್ಮದಿಯನ್ನು ಕಾಣೋಣ.