123 copy
 

ಹೌದು ನಾನು ಅಹಂಕಾರದಿಂದಲೇ ಬರೆಯಲು ಕುಳಿತಿದ್ದು. ಅಹಂಕಾರ ಎನ್ನುವುದ ಮನುಷ್ಯನ ಸಹಜ ಗುಣದಲ್ಲಿ ಒಂದು. ಕೆಲವು ಬಾರಿ ಅಹಂಕಾರ ಹೀಗೆ ಬಂದು ಹಾಗೆ ಹೋಗುತ್ತದೆ. ನನಗೆ ಭಾರತದಂತಹ ಪುಣ್ಯ ಭೂಮಿಯಲ್ಲಿ ಹುಟ್ಟಿದ್ದೇನೆ ಎನ್ನುವ ಅಹಂಕಾರ ಖಂಡಿತ ಇದೆ. ಇಥಹ ಸಂಸ್ಕøತ ನಾಡು ವೈಶಿಷ್ಠವಾದ ನಾಡು ಪ್ರಪಂಚದಲ್ಲಿ ಎಲ್ಲಿಯೂ ಸಿಗಲಿಕ್ಕಿಲ್ಲ. ಭಾರತದಲ್ಲಿ ಅತೀ ಶ್ರೀಮಂತರಿಂದ ಕಡು ಬಡವರಿದ್ದಾರೆ. ಇಲ್ಲಿಯ ಬದುಕು ಎಷ್ಟು ಸರಳವೋ ಅಷ್ಟೇ ಕಠಿಣ.
ಯಾಕೆ ಹೀಗೆ ಹೇಳಿದೆ ಎಂದುಕೊಂಡಿರಿ. ಈಗೊಂದು ಹದಿನೈದು ದಿನದ ಹಿಂದೆ ಒಂದು ಸಮಾರಂಭಕ್ಕೆ ಹೋಗಿದ್ದೆ. ಸಮಾರಂಭ ಮಗಳ ಮದುವೆಯ ಮಾರನೆದಿನದ ಬಂಧು ಇಷ್ಟರಿಗೆ ಊಟ ಹಾಕುವುದು. ಅದ್ಧೂರಿಯಾಗಿಯೇ ಇತ್ತು. ಸಮಾರಂಭವನ್ನು ಏರ್ಪಡಿಸಿದ ವ್ಯಕ್ತಿ ಸರಳಸಜ್ಜನಿಕೆಯವರು. ಅವರಿಗೆ ಎಲ್ಲರೂ ಬಂಧುಗಳು ಆತ್ಮೀಯರು. ಹಾಗಾಗಿ ಸುಮಾರು ಐದುನೂರಕ್ಕೂ ಹೆಚ್ಚಿಗೆ ಜನರು ಆ ದಿನದಂದು ಸೇರಿದ್ದರು.
ಊಟದ ಸಮಯ ಆಯ್ತು. ಪಕ್ತಿ ಸಹಭೋಜನವಾಗಿದ್ದರಿಂದ ಅಕ್ಕ ಪಕ್ಕದಲ್ಲಿ ಕೂತು ಊಟ ಮಾಡುವುದು ಸಹಜ. ಹಾಗೆ ನಾನು ಕುಳಿತ ಎದುರಿನ ಸಾಲಿನಲ್ಲಿ ಒಬ್ಬಳು ಹೆಂಗಸು ಬಾಳೆ ಎಲೆಯನ್ನು ಹಾಕುವ ಹುಡುಗನನ್ನು ಕರೆದು, ‘ಏ ತಮ್ಮ ನನಗೆ ಇಲ್ಲಿ ಕೂರಲು ಸಾಧ್ಯವಿಲ್ಲ. ನನ್ನ ಪಕ್ಕ ಕೂತಿರುವ ಮುದುಕ ಕಪ್ಪಗೆ ನೋಡಲು ಅಸಹ್ಯವಾಗಿದ್ದಾನೆ. ಇನ್ನು ಊಟ ಮಾಡುವಾಗ ಹೇಗೆ ಊಟ ಮಾಡುತ್ತಾನೋ? ಅವನು ನನ್ನ ಬಾಳೆ ಎಲೆಗೆ ಎಂಜಲು ಸಿರಿಸಿದರೆ ಏನು ಮಾಡಲಿ ಹಾಗಾಗಿ ನನಗೆ ಬೇರೆ ಕಡೆ ವ್ಯವಸ್ಥೆ ಮಾಡು. ಇಲ್ಲವಾದಲ್ಲಿ ವೈದಿಕರಿಗೆ ಅಂತ ಒಂದು ಸಾಲು ಮಾಡಿದ್ದಿರಲ್ಲ ಅಲ್ಲಿ ಜಾಗ ಇದೆಯೋ ನೋಡು ಅಂದಳು’ ಆ ಹುಡುಗ ‘ಸರಿ ನೋಡಿ ಬರುತ್ತೇನೆ ಅಮ್ಮ’ ಎಂದು ಹೇಳಿ ಒಂದು ರೌಂಡ್ ಊಟದ ಚಪ್ಪರ ನೋಡಿ ಬಂದು ಆ ಹೆಂಗಸಲ್ಲಿ ‘ಎಲ್ಲಿಯೂ ಜಾಗವಿಲ್ಲ’ ಎಂದ. ಅದಕ್ಕೆ ಆ ಹೆಂಗಸು ಜೋರಾಗಿಯೇ ನನಗೆ ಇಂಥವರ ಪಕ್ಕ ಕೂತು ಊಟ ಮಾಡಲು ಸಾಧ್ಯವಿಲ್ಲ. ಬೇರೆ ಜಾಗ ಬೇಕೆ ಬೇಕು ಎಂದು ಹಠ ಹಿಡಿದಳು. ಆದರೆ ಆ ಹುಡುಗ ಸಮಾಧಾನವಾಗಿ ನೀವು ಈ ಬಾರಿ ಊಟ ಮುಗಿದ ಮೇಲೆ ಎರಡನೇ ಬಾರಿ ಮತ್ತೆ ಪಂಕ್ತಿ ಮಾಡುತ್ತೇವೆ ಆಗ ಕುಳಿತುಕೊಳ್ಳುವಿರಂತೆ’ ಎಂದ. ಅದಕ್ಕೂ ಒಪ್ಪದ ಹೆಂಗಸು. ನನಗೆ ಮನೆಗೆ ಹೋಗಲು ತಡವಾಗುತ್ತದೆ. ಎಲ್ಲಿ ಈ ಮನೆಯ ಯಜಮಾನ ಅವನನ್ನು ಕರೆ, ನಡಿ ಎಂದಳು. ಆ ಹುಡುಗ ಸುತ್ತಲೂ ನೋಡಿದ. ಅಲ್ಲಿ ಊಟಕ್ಕೆ ಕುಳಿತ ಜನರೆಲ್ಲರೂ ಇವಳ ಮಾತನ್ನೆ ಕೇಳುತ್ತಿದ್ದರು.
ಆ ಹುಡುಗ ಮತ್ತೆ ವೈದಿಕರ ಸಾಲಿನತ್ತ ಹೋಗಿ ಅಲ್ಲಿ ಜಾಗವಿದೆಯೇ ಎಂದು ನೋಡಿಕೊಂಡು ಬಂದ. ಆಗ ಆ ಹೆಂಗಸು ‘ಜಾಗ ಸಿಕ್ಕಿತೇ ನಾನು ಅಲ್ಲಿಗೆ ಬರಬಹುದೆ? ಎಂದು ಕೇಳಿದಳು. ಆದರೆ ಆ ಹುಡುಗ ನಗುತ್ತ ‘ಆಂಟಿ, ನಿಮಗೆ ಇಂಥ ಜನರ ಪಕ್ಕ ಕುಳಿತು ಊಟಮಾಡಲು ತೊಂದರೆ ಅಸಹ್ಯ ಎಂದಿರೇ ಹೊರತು. ಈ ಜಾಗ ತನಗೆ ಸರಿ ಹೊಂದುವುದಿಲ್ಲ ಎಂದು ಹೇಳಲಿಲ್ಲವಲ್ಲ. ಹಾಗಾಗಿ ನೀವು ಇಲ್ಲಿ ಕುಳಿತು ಊಟ ಮಾಡಿ ನಾನು ಇವರನ್ನು ವೈದಿಕರ ಪಂಕ್ತಿಯಲ್ಲಿ ಒಂದು ಜಾಗವಿದೆ ಅಲ್ಲಿ ಕೂರಿಸುತ್ತೇನೆ’ ಎಂದು ಹೇಳಿದವನೇ ಆ ಮುದುಕನನ್ನು ಕೈ ಹಿಡಿದು ಕರೆದುಕೊಂಡು ನಡೆದುಬಿಟ್ಟ.
ಆ ಹುಡುಗನ ಜಾಣ್ಮೆಗೆ ಅಲ್ಲಿರುವವರೆಲ್ಲರೂ ತಲೆದೂಗಿದರು. ಎಂಥಹ ಸಮಯ ಪ್ರಜ್ಞೇ ಮೆರೆದನು ಅನ್ನಿಸಿತು. ಇದು ಸಂಸ್ಕಾರದಿಂದ ಹುಟ್ಟುವುದೇ ಹೊರತು ಅಹಂಕಾರದಿಂದ ಅಲ್ಲ. ಯಾವುದು ಸರಿ ಯಾವುದು ತಪ್ಪು ಎನ್ನುವುದು ಅರಿಕೆಗೆ ತೆಗೆದುಕೊಂಡು ಬಂದ ಸಮಸ್ಯೆಯನ್ನು ಎದುರಿಸುವ ಜಾಣ್ಮೆ ಖಂಡಿತ ಕಲಿಯಬೇಕು. ಈಗ ನಾನು ಅಹಂಕಾರಿ ಯಾಕೆ ಗೊತ್ತಾಯಿತಲ್ಲ. ಇಂತಹ ಹುಡುಗ ನನಗೆ ಒಬ್ಬ ತಮ್ಮ ಎಂದು ಹೇಳಿಕೊಳ್ಳಲು ಯಾವ ಬಿಗುಮಾನವೂ ಇಲ್ಲ ಅಹಂಕಾರದಿಂದಲೇ ಹೇಳಿಕೊಳ್ಳುತ್ತೇನೆ.
ಚಿಕ್ಕ ಸಂಗತಿ ಎನ್ನಿಸಿದರೂ ಮತ್ತೊಬ್ಬರ ಭಾವನೆಗಳಿಗೆ ಧಕ್ಕೆ ತರುವಂತಹ ಇಂಥಹ ಅಹಂಕಾರಗಳು ನಮ್ಮ ನಡುವೆ ಸಾಕಷ್ಟು ನಡೆಯುತ್ತದೆ. ಇಂತ ಅಹಂಕಾರಕ್ಕೆ ಕಾಲವೇ ಉತ್ತರಿಸುತ್ತದೆ. ನಾವು ಅಹಂಕಾರದಿಂದ ಬುದ್ದಿ ಕಲಿಸುತ್ತೇವೆ ಎನ್ನುವುದ ಕೂಡ ಒಂದು ಅಹಂಕಾರವೇ ಹೊರತು ಪ್ರಪಂಚ ನಮಗೆ ಇನ್ನೊಂದು ರೀತಿಯಲ್ಲಿ ಬುದ್ಧಿ ಕಲಿಸಲು ಸಿದ್ದವಾಗಿರುತ್ತದೆ ಎನ್ನುವುದು ನೆನಪಲ್ಲಿ ಇಟ್ಟುಕೊಂಡು ವಿನಯದಿಂದ ನಡೆದುಕೊಳ್ಳುವುದು ಕಲಿಯಬೇಕು ಅಲ್ಲವೇ!

RELATED ARTICLES  ಕಾವ್ಯಗಳನ್ನು ಏಕೆ ಓದಬೇಕು!