ಸಂದೀಪ ಭಟ್ಟ ರವರು ಬರೆದ “ನಾನು ನಿರೂಪಕನಾದರೆ” ಪುಸ್ತಕದ ಕುರಿತಾಗಿ ವೆಂಕಟೇಶ್.ಪೈ .ಕಾಗಾಲ ಅವರು ಬರೆದ ಮನದಾಳದ ಮಾತುಗಳನ್ನು ಜನತೆಯ ಮುಂದೆ ಯಥಾವತ್ತಾಗಿ ಇಡುತ್ತಿದ್ದೇವೆ.

ಸಾಹಿತ್ಯ ಕ್ಷೇತ್ರದ ಬಾಂದಳದ ತಾರೆಯಾಗಿ, ಚಿಕ್ಕ ಪ್ರಾಯದಲ್ಲಿಯೇ 20 ಕೃತಿಗಳನ್ನು ನಾಡಿಗೆ ನೀಡಿ, ನಾಡಿನ ಸಾಹಿತ್ಯ ಲೋಕದ ಶ್ರೀಮಂತಿಕೆಯನ್ನು ಹೆಚ್ಚಿಸುವ ಧೀಮಂತನಾಗಿ,ವಿಭಿನ್ನ ಕೃತಿಗಳ ಮೂಲಕ ತನ್ನದೇ ಛಾಪು ಮೂಡಿಸಿ ಈ ದಿನ ‘ನಾನು ನಿರೂಪಕ ನಾದರೆ’ ಎಂಬ ಕೃತಿಯನ್ನು ಹೊರತಂದ ಆತ್ಮೀಯ ಸ್ನೇಹಿತ ಸಂದೀಪ್ ಅವರಿಗೆ ಧನ್ಯವಾದಗಳು.

ಈ ಅಮೂಲ್ಯ ಕೃತಿ ಸುಜ್ಞಾನ ದೀವಿಗೆ ಯಂತಿದೆ, ಈಗಾಗಲೇ ನಿರೂಪಣಾ ಕೃಷಿಯಲ್ಲಿ ತೊಡಗಿರುವವರಿಗೆ ಅವರ ಬತ್ತಳಿಕೆಯ ಅಸ್ತ್ರವಾಗಿದೆ. ಅವಸರದ ಇಂದಿನ ಯುಗದಲ್ಲಿ ಅಲ್ಪ ಟಿಪ್ಪಣಿಯೊಂದಿಗೆ, ಈ ಪುಸ್ತಕ ಜೊತೆಗಿಟ್ಟುಕೊಂಡು ರಂಗಕ್ಕೆ ಇಳಿದರೆ ಒಂದು ಉತ್ತಮ ನಿರೂಪಣೆ ಮೂಡಿ ಬರುವುದರಲ್ಲಿ ಸಂಶಯವಿಲ್ಲ .

RELATED ARTICLES  ಭಟ್ಕಳ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಎಂ.ಎಲ್.ಎ ಟಿಕೆಟ್ ಆಕಾಂಕ್ಷಿ ಶ್ರೀಧರ ನಾಯ್ಕ ಕೈಕಿಣಿ

ಹೊಸ ನಿರೂಪಕರಿಗೆ ಭಗವದ್ಗೀತೆ ಯಂತಿರುವ ಈ ಕೃತಿಯಲ್ಲಿರುವ ನುಡಿ ಮುತ್ತುಗಳು, ಸಂದರ್ಭಕ್ಕೆ ತಕ್ಕಂತೆ ಬಳಸಬಹುದಾದ ಸುಭಾಷಿತಗಳು ಭಾವಿ ನಿರೂಪಕರ ಶ್ರಮವನ್ನು ಕಡಿಮೆಗೊಳಿಸಲಿವೆ. ನಿರೂಪಣೆಗೆ ಹಿಂಜರಿಯುವ ನಿರೂಪಣಾ ಆಸಕ್ತರಿಗೆ ನಾನು ನಿರೂಪಕ ನಾದರೆ ಕೃತಿ ಧೈರ್ಯ ನೀಡುವುದರೊಂದಿಗೆ, ಉಪ ಶೀರ್ಷಿಕೆ ‘ಧ್ವನಿಸಲಿ ಕನಸು’ ಉತ್ತೇಜಿಸುವ ಟಾನಿಕ್ ಆಗಿದೆ .

ಕೃತಿಯ ಆರಂಭದಲ್ಲಿ ಮೂಡಿ ಬಂದ ‘ನನ್ನಂತರಂಗ’ ನಿಜಕ್ಕೂ ಸಮಾಜದ ಹಲವು ಮಜಲುಗಳಲ್ಲಿ ಪಾತ್ರ ನಿರ್ವಹಿಸುತ್ತಾ, ಅಲ್ಲಿಯ ಅನುಭವಗಳನ್ನು ಪಡೆದು ಮುನ್ನುಗ್ಗುತ್ತಿರುವ ಸಂದೀಪ್ ರು ಈ ಕ್ಷಣಗಳಲ್ಲಿ ಉಂಟಾದ ಸಿಹಿ- ಕಹಿ ಕ್ಷಣಗಳನ್ನು ಹಂಚಿಕೊಂಡಿರುವುದು ನನಗೆ ತುಂಬಾ ಇಷ್ಟವಾಗಿದೆ .ಇದು ನನ್ನಂಥ ಅನೇಕ ಚಿಕ್ಕ ಪುಟ್ಟ ನಿರೂಪಕರ ಜೀವನಾನುಭವವೂ ಹೌದು. ಈ ನನ್ನಂತರಂಗ ನಿರೂಪಕರಿಗೆ ಎಚ್ಚರಿಕೆಯ ಗಂಟೆಯೂ ಹೌದು .ಮಾತೃ ಭಾಷೆಯ ಜೊತೆ ಜೊತೆಗೆ ಆಂಗ್ಲ ಭಾಷೆಯ ನುಡಿಗಳನ್ನು ನಿರೂಪಕ ಬಳಸುವಲ್ಲಿ ಅಥವಾ ಆಂಗ್ಲ ಭಾಷೆಯ ನಿರೂಪಣೆ ಮಾಡಲು ಧೈರ್ಯವನ್ನು ನೀಡುವಲ್ಲಿ ಈ ಕೃತಿ ಬೆನ್ನೆಲುಬು .

RELATED ARTICLES  ಶ್ರೀರಾಮನ ಸಮದೃಷ್ಟಿಯ ಬಗ್ಗೆ ಶ್ರೀಧರ ಸ್ವಾಮಿಗಳು ಹೇಳಿದ್ದ ಮಾತುಗಳು.

ಒಟ್ಟಿನಲ್ಲಿ ಸಂಗ್ರಹ ಯೋಗ್ಯವಾದ, ಭಾಷೆ ಭಾವಗಳನ್ನು ಜೊತೆಯಾಗಿಸಿಕೊಂಡು, ಯೋಜನಾ ಬದ್ಧವಾಗಿ ನಿರೂಪಿತವಾದ ಈ ಕೃತಿ ಕನ್ನಡಿಗರ ಮನೆ ಮನಗಳನ್ನು ಬೆಳಗುತ್ತದೆ ಎಂಬ ಆಶಯ ನನ್ನದು. ಇಲ್ಲಿ ಪುಸ್ತಕ ಖರೀದಿ ಮುಖ್ಯವಲ್ಲ .ಅದರ ಯಥಾಯೋಗ್ಯ ಬಳಕೆ ಮೂಡಿದಾಗ ಮಾತ್ರ ಕೃತಿಕಾರನ ಶ್ರಮ ಸಫಲವಾಗುತ್ತದೆ ಎಂಬ ಅನಿಸಿಕೆ ವ್ಯಕ್ತಪಡಿಸುತ್ತಾ, ಕೃತಿಕಾರರಿಂದ ಭವಿಷ್ಯತ್ ನಲ್ಲಿ ಇಂತಹ ಅನೇಕ ಕೃತಿಗಳು ಮೂಡಿಬರಲಿ , ಅದನ್ನು ಓದುವ ಭಾಗ್ಯ ನನ್ನದಾಗಲಿ ಎಂದು ಆ ಅಗೋಚರ ಶಕ್ತಿಯಲ್ಲಿ ನನ್ನ ಪ್ರಾರ್ಥನೆ .

-ಶ್ರೀ ವೆಂಕಟೇಶ್.ಪೈ .ಕಾಗಾಲ ಸ.ಹಿ.ಪ್ರಾ .ಶಾಲೆ ಸಾಂತಗಲ್
ಕುಮಟಾ (ಉ.ಕ)